ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ- ಮ್ಯಾನ್ಮಾರ್: ನಮ್ಮದು ದ್ವಂದ್ವ ನಿಲುವೇ?

ಇಲ್ಲಿ ಚೀನಾಕ್ಕೆ ಪ್ರಜಾ ಸರ್ಕಾರದ ಬಯಕೆ, ಭಾರತಕ್ಕೆ ಮಿಲಿಟರಿ ಜೊತೆ ನಂಟು!
Last Updated 2 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಮ್ಯಾನ್ಮಾರ್‌ನಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ ಇದೀಗ ತೀವ್ರಗೊಂಡಿದೆ. 2020ರ ಸಾರ್ವತ್ರಿಕ ಚುನಾವಣೆಯಲ್ಲಿ ಆಂಗ್ ಸಾನ್ ಸೂ ಕಿ ನೇತೃತ್ವದ ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿ ಪಕ್ಷ ಬಹುಮತ ಪಡೆದುಕೊಂಡಿತ್ತು. ಆದರೆ ಈ ಚುನಾವಣೆಯಲ್ಲಿಅಕ್ರಮ ನಡೆದಿದೆ ಎಂದು ಆರೋಪಿಸಿರುವ ಮ್ಯಾನ್ಮಾರ್ ಸೇನೆಯು ಫೆಬ್ರುವರಿ 1ರಂದು ಸೂ ಕಿ ಮತ್ತು ಇತರ ನಾಯಕರನ್ನು ಗೃಹಬಂಧನದಲ್ಲಿ ಇರಿಸಿ, ತುರ್ತುಪರಿಸ್ಥಿತಿ ಘೋಷಿಸಿ, ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಸುಧೀಂದ್ರ ಬುಧ್ಯ
ಸುಧೀಂದ್ರ ಬುಧ್ಯ

ಒಂದು ಕಾಲದಲ್ಲಿ ಬರ್ಮಾ ಎಂದು ಕರೆಸಿಕೊಳ್ಳುತ್ತಿದ್ದ, ನಂತರ ಮ್ಯಾನ್ಮಾರ್ ಆಗಿ ಬದಲಾದ ಆಗ್ನೇಯ ಏಷ್ಯಾದ ಈ ಆಯಕಟ್ಟಿನ ದೇಶವು ನೈಸರ್ಗಿಕ ಸಂಪನ್ಮೂಲ ಮತ್ತು ವಾಣಿಜ್ಯಿಕ ವ್ಯವಹಾರದ ದೃಷ್ಟಿಯಿಂದ ಪ್ರಾಂತೀಯ ಹಾಗೂ ಜಾಗತಿಕ ಮಹತ್ವವನ್ನು ಪಡೆದಿದೆ. ಅದೇ ಕಾರಣದಿಂದ, ಇತ್ತೀಚಿನ ಮ್ಯಾನ್ಮಾರ್ ಬೆಳವಣಿಗೆಯ ಕುರಿತು ಹಲವು ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.

ಹಾಗೆ ನೋಡಿದರೆ, ಮ್ಯಾನ್ಮಾರ್ ಸೇನೆ ತನ್ನ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹಲವು ಸಂದರ್ಭಗಳಲ್ಲಿ ಪ್ರಕಟಿಸಿದೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಆಡಳಿತಾತ್ಮಕವಾಗಿ ಬರ್ಮಾವನ್ನು ವಸಾಹತುಶಾಹಿ ಭಾರತದ ಪ್ರಾಂತ್ಯವಾಗಿ ಬ್ರಿಟಿಷರು ಪರಿಗಣಿಸಿದ್ದರು. ಈ ವ್ಯವಸ್ಥೆ 1937ರವರೆಗೆ ಮುಂದುವರಿದಿತ್ತು. ನಂತರ ಬ್ರಿಟಿಷ್ ಭಾರತದಿಂದ ಅದನ್ನು ಪ್ರತ್ಯೇಕ ವಸಾಹತು ಎಂದು ಗುರುತಿಸಲಾಯಿತು. 1948ರಲ್ಲಿ ಬರ್ಮಾ ಸ್ವತಂತ್ರಗೊಂಡಿತು. 1962ರಲ್ಲಿ ಮ್ಯಾನ್ಮಾರ್ ಸೇನೆ ಆಡಳಿತದ ಚುಕ್ಕಾಣಿ ಹಿಡಿಯಿತು. 1974ರಲ್ಲಿ ದೇಶದ ಹೆಸರಿಗೆ ತಿದ್ದುಪಡಿ ತಂದು ‘ಸೋಷಿಯಲಿಸ್ಟ್ ರಿಪಬ್ಲಿಕ್ ಆಫ್ ದಿ ಯೂನಿಯನ್ ಆಫ್ ಬರ್ಮಾ’ ಎಂದು ಕರೆಯಿತು. 1988ರಲ್ಲಿ ಮ್ಯಾನ್ಮಾರ್ ಮತ್ತೊಮ್ಮೆ ಸೇನೆಯ ಆಡಳಿತಕ್ಕೆ ಒಳಪಟ್ಟಿತು. ಆಗ ದೇಶದ ಹೆಸರನ್ನು ‘ಯೂನಿಯನ್ ಆಫ್ ಬರ್ಮಾ’ ಎಂದು ಬದಲಿಸಿತು. ಒಂದು ವರ್ಷದ ಬಳಿಕ ದೇಶದ ಹೆಸರನ್ನು ‘ಯೂನಿಯನ್ ಆಫ್ ಮ್ಯಾನ್ಮಾರ್’ ಎಂದು ಕರೆಯಿತು. ಹೀಗೆ ಹೆಸರು ಬದಲಿಸುವಾಗ ‘ವಸಾಹತುವಾಗಿ ಪಡೆದ ಹೆಸರನ್ನು ತ್ಯಜಿಸಿ, ಕೇವಲ ಒಂದು ಜನಾಂಗವನ್ನು ಪ್ರತಿನಿಧಿಸುವ ಹೆಸರನ್ನು ಬಿಟ್ಟು, 135 ವಿವಿಧ ಜನಾಂಗಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಒಂದು ಹೆಸರನ್ನು ರಾಷ್ಟ್ರಕ್ಕೆ ಇಡಲಾಗಿದೆ’ ಎಂಬ ಕಾರಣ ನೀಡಿತು.

90ರ ದಶಕದಲ್ಲಿ ಪ್ರಜಾಪ್ರಭುತ್ವದ ಪರ ಚಳವಳಿ ಅಲ್ಲಿ ತೀವ್ರಗೊಂಡಿತು. ಸೂ ಕಿ ನೊಬೆಲ್ ಪ್ರಶಸ್ತಿ ಪಡೆದರು. 15 ವರ್ಷಗಳ ಕಾಲ ಗೃಹಬಂಧನದಲ್ಲಿ ಇದ್ದರು. ಕೊನೆಗೂ 2010ರಲ್ಲಿ ಮಿಲಿಟರಿ ಆಡಳಿತ ತನ್ನ ಪ್ರಭಾವವನ್ನು ಹಾಗೆಯೇ ಉಳಿಸಿಕೊಂಡು, ಆಡಳಿತವನ್ನು ಪ್ರಜಾತಂತ್ರ ಸರ್ಕಾರಕ್ಕೆ ಬಿಟ್ಟುಕೊಡಲು ಮುಂದಾಯಿತು. ರಾಜಕೀಯ ವಿರೋಧಿಗಳನ್ನು ಬಿಡುಗಡೆಗೊಳಿಸಿತು. ಹತ್ತು ವರ್ಷಗಳ ಕಾಲ ಪ್ರಜಾಸರ್ಕಾರ ಕಾರ್ಯನಿರ್ವಹಿಸಿತು. ಹಾಗಾಗಿ ಇತ್ತೀಚಿನ ಸೇನಾ ದಂಗೆ ಮ್ಯಾನ್ಮಾರ್‌ಗೆ ಹೊಸದೇನಲ್ಲ.

ಇಲ್ಲಿ ಮುಖ್ಯವಾಗಿ ಇರುವ ಪ್ರಶ್ನೆ ಎಂದರೆ, ಮ್ಯಾನ್ಮಾರ್ ಸೇನಾ ದಂಗೆ ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ ಎನ್ನುವುದು. ಈ ಪ್ರಶ್ನೆಯನ್ನು ಅವಲೋಕಿಸುವಾಗ ಚೀನಾವನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಮ್ಯಾನ್ಮಾರ್ ಜೊತೆಗೆ ಭಾರತ ಗಡಿಯನ್ನು ಹಂಚಿಕೊಂಡಿದೆ. ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉಭಯ ದೇಶಗಳು ಬೆಸೆದುಕೊಂಡಿವೆ. ವ್ಯಾಪಾರ, ಹೂಡಿಕೆ, ಇಂಧನ ಮತ್ತು ಆರೋಗ್ಯ
ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ಹೊಂದಿವೆ. 1962ರಲ್ಲಿ ಮೊದಲ ಬಾರಿಗೆ ಸೇನಾ ದಂಗೆ ನಡೆದಾಗ ಭಾರತ ಕಳವಳಗೊಂಡಿತ್ತು. ಆದರೆ ಗಡಿಯಾಚೆಗಿನ ಸಂಘರ್ಷ, ಚೀನಾದ ಪ್ರಭಾವ, ವಾಣಿಜ್ಯ ಸಂಬಂಧ ಮತ್ತು ತನ್ನ ವಲಸಿಗರ ಸುರಕ್ಷತೆ ಸೇರಿದಂತೆ ಭಾರತ ತನ್ನ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮ್ಯಾನ್ಮಾರ್ ಮಿಲಿಟರಿ ಆಡಳಿತದೊಂದಿಗೆ ಸೌಹಾರ್ದಯುತ ಸಂಬಂಧ ಕಾಯ್ದುಕೊಂಡಿತು. ತಮ್ಮ ಸ್ನೇಹಿತ ಯೂನು ಅವರ ಬಂಧನ ಮತ್ತು ಪ್ರಜಾಪ್ರಭುತ್ವದ ಅಂತ್ಯದ ಕುರಿತು ಪ್ರಧಾನಿ ಜವಾಹರಲಾಲ್‌ ನೆಹರೂ ವೈಯಕ್ತಿಕವಾಗಿ ಬೇಸರಗೊಂಡಿದ್ದರೂ ಚೀನಾಕ್ಕಿಂತ ಮುಂಚೆ ಬರ್ಮಾದ ಮಿಲಿಟರಿ ಆಡಳಿತವನ್ನು ಅನುಮೋದಿಸುವ ಕೆಲಸಕ್ಕೆ ಮುಂದಾದರು. ಭಾರತ ಈ ವಿಷಯದಲ್ಲಿ ಜಾಣ್ಮೆ
ಪ್ರದರ್ಶಿಸಿತ್ತು.

1990ರ ದಶಕದ ಉತ್ತರಾರ್ಧದಲ್ಲಿ ಪ್ರಜಾಪ್ರಭುತ್ವದ ಸುಧಾರಣೆಗಳಿಗೆ ತೆರೆದುಕೊಳ್ಳುವಂತೆ ಸೇನಾ ನಾಯಕರ ಮೇಲೆ ಒತ್ತಡ ಹೇರುವ ಕೆಲಸವನ್ನು ಭಾರತವು ದ್ವಿಪಕ್ಷೀಯ ಸಂಬಂಧಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಮಾಡಿತು. ಮ್ಯಾನ್ಮಾರ್ ಮೇಲೆ ಹೇರಲಾಗಿದ್ದ ದಿಗ್ಬಂಧನ ಮತ್ತು ಮಿಲಿಟರಿ ದಂಗೆಯ ಕುರಿತಾದ ಖಂಡನಾ ನಿರ್ಣಯವನ್ನು ಬೆಂಬಲಿಸದ ಕಾರಣ ವಿಶ್ವಸಂಸ್ಥೆಯಲ್ಲಿ ಭಾರತ ಟೀಕೆಗೆ ಒಳಗಾಯಿತು. 2010ರಲ್ಲಿ ಭಾರತೀಯ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್‌ ಒಬಾಮ, ಮ್ಯಾನ್ಮಾರ್ ವಿಷಯದಲ್ಲಿ ಭಾರತ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದಿದ್ದರು. ಎಲ್ಲ ಟೀಕೆಗಳ ಹೊರತಾಗಿಯೂ ಭಾರತ ಅನುಸರಿಸಿದ ಎಚ್ಚರಿಕೆಯ ನಡೆಯಿಂದಾಗಿ, ಮ್ಯಾನ್ಮಾರಿನಲ್ಲಿ ಮಿಲಿಟರಿ ಆಡಳಿತವಿರಲಿ ಪ್ರಜಾ ಸರ್ಕಾರವಿರಲಿ ಭಾರತ ತನ್ನ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದು ಸಾಧ್ಯವಾಯಿತು. ‘ಆ್ಯಕ್ಟ್ ಈಸ್ಟ್’ ಮತ್ತು ‘ನೆರೆಯ ರಾಷ್ಟ್ರಗಳಿಗೆ ಆದ್ಯತೆ’ ನೀತಿಯ ಅಡಿಯಲ್ಲಿ ಭಾರತವು ಮ್ಯಾನ್ಮಾರ್‌ನೊಂದಿಗೆ ರಾಜಕೀಯ, ಮಿಲಿಟರಿ, ಭದ್ರತೆ, ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿತು. 1990ರ ದಶಕದ ಉತ್ತರಾರ್ಧದಿಂದ ಮ್ಯಾನ್ಮಾರ್ ಸೇನೆಗೆ ಭಾರತವು ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಮ್ಯಾನ್ಮಾರ್ ಕಾಡುಗಳಲ್ಲಿದ್ದ ಬಂಡುಕೋರರನ್ನು ಸೆರೆಹಿಡಿಯುವ ಕೆಲಸವನ್ನು ಉಭಯ ದೇಶಗಳು ಮಾಡಿವೆ.

ಅತ್ತ ಬರ್ಮಾ ಮತ್ತು ಚೀನಾ ನಡುವೆ ರಾಜತಾಂತ್ರಿಕ ಸಂಬಂಧ 1950ರಲ್ಲಿ ಏರ್ಪಟ್ಟಿತಾದರೂ 1960ರ ದಶಕದಲ್ಲಿ ಅದು ಏರಿಳಿತ ಕಂಡಿತು. ಬರ್ಮಾದ ಮಿಲಿಟರಿ ಸರ್ಕಾರವನ್ನು ಭಾರತ ಅನುಮೋದಿಸಿದ ಬೆನ್ನಲ್ಲೇ ಚೀನಾ ಕೂಡ ಮಿಲಿಟರಿ ಆಡಳಿತಕ್ಕೆ ಮಾನ್ಯತೆ ನೀಡಿತ್ತು. ಆದರೆ ಆಡಳಿತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಬರ್ಮಾ ಕಮ್ಯುನಿಸ್ಟ್ ಪಕ್ಷಕ್ಕೆ ಚೀನಾ ಹಣಕಾಸು ನೆರವನ್ನು ನೀಡುತ್ತಿತ್ತು. ಇದರಿಂದಾಗಿ ಬರ್ಮಾ ಆಡಳಿತವು ಚೀನಾವನ್ನು ದೂರವೇ ಇಟ್ಟಿತು. ವಲಸಿಗ ಚೀನೀಯರು ಸ್ಥಳೀಯವಾಗಿ ಪಾರಮ್ಯ ಮೆರೆಯುತ್ತಿದ್ದಾರೆ ಮತ್ತು ಅದಕ್ಕೆ ಚೀನಾ ಬೆಂಬಲವಿದೆ ಎಂಬುದು ಕಾರಣವಾಗಿ, 1967ರಲ್ಲಿ ವ್ಯಾಪಕವಾದ ಚೀನಾ ವಿರೋಧಿ ಗಲಭೆಗಳು ಬರ್ಮಾದಲ್ಲಿ ನಡೆದವು. ಹೀಗಾಗಿ ಬರ್ಮಾದ ಸೇನಾ ಆಡಳಿತ ಚೀನಾದ ಬಗ್ಗೆ ಆಸಕ್ತಿ ಕಳೆದುಕೊಂಡಿತು ಮತ್ತು ಭಾರತಕ್ಕೆ ಹೆಚ್ಚು ಹತ್ತಿರವಾಯಿತು. ಆದರೆ ಪ್ರಜಾ
ಪ್ರಭುತ್ವವಾದಿ ಸೂ ಕಿ ಆಡಳಿತದಲ್ಲಿ ಚೀನಾ- ಮ್ಯಾನ್ಮಾರ್ ಸಂಬಂಧ ಗಟ್ಟಿಗೊಂಡಿತು. ಮ್ಯಾನ್ಮಾರ್ ಸೇನೆ ನಡೆಸಿದ ರೋಹಿಂಗ್ಯಾ ಸಮುದಾಯದ ಮೇಲಿನ ದಾಳಿ ಮತ್ತು ಜನಾಂಗೀಯ ಹತ್ಯೆಯನ್ನು ಸೂ ಕಿ ಖಂಡಿಸಲಿಲ್ಲ ಎಂದು ಜಾಗತಿಕ ಸಮುದಾಯ ಆರೋಪಿಸಿದ ನಂತರ
‘ಬೆಲ್ಟ್ ಆ್ಯಂಡ್ ರೋಡ್ ಯೋಜನೆ’ಯ ಚೀನಾ ಪ್ರಸ್ತಾಪಕ್ಕೆ
ಸೂ ಕಿ ಒಪ್ಪಿಗೆ ಸೂಚಿಸಿದರು. ಸೇನಾ ಆಡಳಿತ ಬದಿಗೆ ಇಟ್ಟಿದ್ದ ಚೀನಾದ ರೈಲ್ವೆ ಯೋಜನೆಗೂ ಅಂಕಿತ ಹಾಕಿದರು. ನಂತರ ಚೀನಾಕ್ಕೂ ಹಲವು ಬಾರಿ ಭೇಟಿಯಿತ್ತರು. ಹಾಗಾಗಿ ಕಮ್ಯುನಿಸ್ಟ್ ಚೀನಾ ಮ್ಯಾನ್ಮಾರಿನಲ್ಲಿ ಪ್ರಜಾ
ಸರ್ಕಾರವನ್ನು ಬಯಸುತ್ತದೆ!

ಒಟ್ಟಿನಲ್ಲಿ, ಪ್ರಜಾಪ್ರಭುತ್ವವನ್ನು ಆದರ್ಶವಾಗಿಸಿ
ಕೊಂಡಿರುವ ಭಾರತ, ರಾಜಕೀಯ ಸ್ಥಿರತೆ, ಆಂತರಿಕ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಮ್ಯಾನ್ಮಾರ್
ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗಬೇಕು ಎಂದು
ಪ್ರತಿಪಾದಿಸುತ್ತದೆಯಾದರೂ, ಅಲ್ಲಿನ ಸೇನೆಯೊಂದಿಗೂ ಉತ್ತಮ ಸಂಬಂಧ ಹೊಂದಿದೆ. ಹಾಗಾಗಿ ಮ್ಯಾನ್ಮಾರ್ ಸೇನಾ ದಂಗೆಯಿಂದಾಗಿ ದ್ವಿಪಕ್ಷೀಯ ಸಂಬಂಧದಲ್ಲಿ ಹೆಚ್ಚು ವ್ಯತ್ಯಾಸವಾಗಲಾರದು. ಮ್ಯಾನ್ಮಾರ್ ಕುರಿತ ಭಾರತದ ನಿಲುವನ್ನು ಆದರ್ಶ ಮತ್ತು ಹಿತಾಸಕ್ತಿಯ ನಡುವೆ ಸಮತೋಲನ ಸಾಧಿಸುವ ಪ್ರಾಯೋಗಿಕ ಧೋರಣೆ ಎನ್ನಬಹುದು. ಅದನ್ನು ಜಗತ್ತು ದ್ವಂದ್ವ ನಿಲುವು ಎಂದರೆ ನಾವು ತಲೆಕೆಡಿಸಿಕೊಳ್ಳಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT