ಶನಿವಾರ, ಸೆಪ್ಟೆಂಬರ್ 19, 2020
23 °C
ಚೀನಾದ ವಿಷಯದಲ್ಲಿ ರಾಜತಾಂತ್ರಿಕ ನೈಪುಣ್ಯವನ್ನು ಭಾರತ ಸಮರ್ಥವಾಗಿ ತೋರುತ್ತಿದೆ!

ಮೇಲಷ್ಟೇ ಮಂದಹಾಸ, ಗುಮಾನಿ ಜೀವಂತ

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

Prajavani

ಕೆಲ ದಿನಗಳ ಹಿಂದೆ ಮೋದಿ ಮತ್ತು ಟ್ರಂಪ್ ‘ಹೌಡಿ ಮೋದಿ’ ಸಮಾರಂಭದ ವೇದಿಕೆಯಲ್ಲಿ ಒಟ್ಟಿಗೇ ಕಾಣಿಸಿಕೊಂಡಾಗ, ಅಮೆರಿಕ ಮತ್ತು ಭಾರತದ ಈ ಗಾಢ ಆಲಿಂಗನಕ್ಕೆ ಚೀನಾ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಪ್ರಶ್ನೆ ಮೂಡಿತ್ತು. ಚೀನಾ ತಕ್ಷಣಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಆದರೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತನ್ನ ದೇಶಕ್ಕೆ ಕರೆಸಿಕೊಂಡು ಆತಿಥ್ಯ ನೀಡಿತು. ಚೀನಾ ಅಧ್ಯಕ್ಷರು ‘ಚೀನಾ ತನ್ನ ರಾಜತಾಂತ್ರಿಕ ಕಾರ್ಯಸೂಚಿಯಲ್ಲಿ ಪಾಕಿಸ್ತಾನಕ್ಕೆ ಆದ್ಯತೆ ನೀಡಿದೆ. ಬೀಜಿಂಗ್ ತನ್ನ ಹಿತಾಸಕ್ತಿಗಳಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಲ್ಲಲಿದೆ’ ಎಂದಿದ್ದರು. ಈ ಮಾತನ್ನು ಭಾರತ ಕೇಳಿಸಿಕೊಳ್ಳಬೇಕು ಎಂದು ಅವರು ಬಯಸಿದಂತಿತ್ತು.

ಇದೀಗ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಭಾರತಕ್ಕೆ ಬಂದು, ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಹಾಬಲಿಪುರಂನ ಸಮುದ್ರ ಕಿನಾರೆಯಲ್ಲಿ ಹೆಜ್ಜೆ ಹಾಕಿ, ಐತಿಹಾಸಿಕ ಸ್ಮಾರಕ ಸಂದರ್ಶಿಸಿ, ವ್ಯಾಪಾರ ವಹಿವಾಟು ಕುರಿತು ಅನೌಪಚಾರಿಕ ಮಾತುಕತೆ ನಡೆಸಿ ಹೋಗಿದ್ದಾರೆ. ಸಾಮಾನ್ಯವಾಗಿ ಚೀನಾ ಮತ್ತು ಭಾರತದ ನಡುವಿನ ಯಾವುದೇ ಬೆಳವಣಿಗೆ ಜಗತ್ತಿನ ಗಮನವನ್ನು ಬಹುಬೇಗ ಸೆಳೆಯುತ್ತದೆ. ಅದಕ್ಕೆ ಕಾರಣ ಚೀನಾ ಮತ್ತು ಭಾರತ ಜಾಗತಿಕ ಆರ್ಥಿಕ ಶಕ್ತಿಯಾಗಿ ಕ್ರಮವಾಗಿ ಎರಡು ಮತ್ತು ಆರನೇ ಸ್ಥಾನದಲ್ಲಿವೆ ಎನ್ನುವುದರ ಜೊತೆಗೆ, ಸಾಮರಿಕ ಸಾಮರ್ಥ್ಯ ಮತ್ತು ದಕ್ಷಿಣ ಏಷ್ಯಾದ ರಾಜಕಾರಣವನ್ನು ನಿರ್ದೇಶಿಸುವ ದೃಷ್ಟಿಯಿಂದ ಏಷ್ಯಾದ ಈ ಎರಡು ರಾಷ್ಟ್ರಗಳು ಪ್ರತಿಸ್ಪರ್ಧಿಯಾಗುವ ಹಂತಕ್ಕೆ ಬೆಳೆದು ನಿಂತಿವೆ ಎಂಬುದು ಪ್ರಮುಖ ಕಾರಣ.

ಆದರೆ ಭಾರತ ಮತ್ತು ಚೀನಾ ಎಂದಿಗೂ ನಂಬಿಕೆಯ ತಳಹದಿಯ ಮೇಲೆ ವ್ಯವಹರಿಸಿಯೇ ಇಲ್ಲ. ಬಾಂಧವ್ಯಕ್ಕೆ ಪೂರಕವಾಗಿ ಯಾವುದೇ ಹೆಜ್ಜೆ ಇರಿಸಿದರೂ ಆಂತರ್ಯದಲ್ಲಿ ಗುಮಾನಿಯಂತೂ ಇರುತ್ತದೆ. ಚೀನಾ- ಭಾರತ ನಡುವಿನ ದ್ವಿಪಕ್ಷೀಯ ಸಂಬಂಧದ ತಳಹದಿಯೇ ಅಪನಂಬಿಕೆ ಎಂಬಷ್ಟರ ಮಟ್ಟಿಗಿನ ಬೆಳವಣಿಗೆಗಳು ಇತಿಹಾಸದಲ್ಲಿ ಆಗಿ ಹೋಗಿವೆ. ಸ್ವಾತಂತ್ರ್ಯಾನಂತರ ಭಾರತದ ಪ್ರಧಾನಿ ನೆಹರೂ, ಭಾರತ ಮತ್ತು ಚೀನಾ ಒಂದಾದರೆ ಏಷ್ಯಾದ ಪುನರುತ್ಥಾನ ಸಾಧ್ಯ ಎಂದು ನಂಬಿದ್ದರು. ‘ಪಂಚಶೀಲ’ ತತ್ವಗಳ ಅಡಿಯಲ್ಲಿ ಚೀನಾ-ಭಾರತ ಕೈ ಕೈ ಹಿಡಿದವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಚೀನಾಕ್ಕಿರಲಿ ಎಂದು ಭಾರತ ಒತ್ತಾಯಿಸಿತು. ಬ್ರಿಟಿಷರ ಹಿಡಿತದಲ್ಲಿದ್ದ ಪ್ರದೇಶಗಳಿಂದ ಸೇನೆಯನ್ನು ವಾಪಸು ಕರೆಸಿಕೊಂಡು, ಕನಿಷ್ಠ ಕೊಡು– ಕೊಳ್ಳುವ ಮಾತುಕತೆ ನಡೆಸದಷ್ಟು ನೆಹರೂ ಉದಾರಿಯಾದರು!

ಚೀನಾ ತನ್ನದಲ್ಲದ ಭೂಪ್ರದೇಶದಲ್ಲಿ ರಸ್ತೆ ನಿರ್ಮಿಸಿತು, ಅಂಚೆ ಕಚೇರಿ, ದೂರವಾಣಿ ಕೇಂದ್ರ ಹೀಗೆ ಒಂದೊಂದೇ ಸಂಸ್ಥೆ ತೆರೆಯುತ್ತಾ ಪೂರ್ಣ ಹಿಡಿತ ಸಾಧಿಸಿತು. ‘ಪಂಚಶೀಲ’ದ ಕರಾರಿಗೆ 5 ವರ್ಷ ತುಂಬುವ ಹೊತ್ತಿಗೇ, ಚೀನಾದ ಸೈನಿಕರು ಟಿಬೆಟ್ ಆಕ್ರಮಿಸಿಕೊಂಡಿದ್ದರು. 1962ರಲ್ಲಿ ಚೀನಾ ಗಡಿತಂಟೆಯ ನೆಪದಲ್ಲಿ ಭಾರತದ ಮೇಲೆಯೇ ಎರಗಿಬಂತು. ನಂತರ ತನ್ನ ಪ್ರಾಂತೀಯ ಪಾರಮ್ಯಕ್ಕೆ ಭಾರತ ಪ್ರತಿಸ್ಪರ್ಧಿ ಎಂದು ಭಾವಿಸಿ, ನೇರ ಯುದ್ಧಕ್ಕೆ ಇಳಿಯದೆ ಅರುಣಾಚಲ ಪ್ರದೇಶದ ವಿಷಯದಲ್ಲಿ ಪಾಕಿಸ್ತಾನದ ಉಗ್ರರನ್ನು ಬೆಂಬಲಿಸುವ ಮೂಲಕ ಪರೋಕ್ಷವಾಗಿ ಭಾರತವನ್ನು ಹಣಿಯಬೇಕೆಂಬ ಮಾನಸಿಕತೆಯನ್ನು ಪ್ರದರ್ಶಿಸಿತು. ಚೀನಾ ಮತ್ತು ಭಾರತದ ನಡುವೆ ಅಪನಂಬಿಕೆಯ ಅಡ್ಡಗೋಡೆ ಬೆಳೆಯಿತು. ಹಾಗಾಗಿ ಅದನ್ನು ಸಂಪೂರ್ಣ ಕೆಡವುವುದು ಸುಲಭಕ್ಕೆ ಸಾಧ್ಯವಿಲ್ಲ. ಇದೀಗ ಭಾರತ– ಚೀನಾ ನಡುವೆ ಏರ್ಪಟ್ಟಿರುವ ಅನೌಪಚಾರಿಕ ಸಭೆಗಳೇನಿದ್ದರೂ ಅಪನಂಬಿಕೆಯನ್ನು ಪೇಲವಗೊಳಿಸಿ, ಹೊಂದಾಣಿಕೆಯ ಹೆಜ್ಜೆಯಿಡಲು ಮತ್ತು ಪರಸ್ಪರ ಸಹಕಾರಿಗಳಾಗಿ ಉಳಿಯಲು ನೆರವಾಗುತ್ತವೆಯೇ ನೋಡಬೇಕು.

ಪರಿಸ್ಥಿತಿಯೂ ಇದೀಗ ಭಿನ್ನವಾಗಿಯೇ ಇದೆ. ಉಭಯ ದೇಶಗಳ ಜಾಗತಿಕ ಸ್ಥಾನಮಾನದಲ್ಲಿ ಬದಲಾವಣೆಯಾಗಿದೆ. ಚೀನಾ ತನ್ನ ಹಿತಾಸಕ್ತಿಗೆ ಪೂರಕವಾಗಿ ಪಾಕಿಸ್ತಾನ- ಚೀನಾ ಆರ್ಥಿಕ ಕಾರಿಡಾರ್‌ ಕಾಮಗಾರಿಯನ್ನು ತ್ವರಿತಗೊಳಿಸುವಲ್ಲಿ ಉತ್ಸಾಹ ತೋರುತ್ತಿದ್ದರೆ, ರಷ್ಯಾ ಮತ್ತು ಜಪಾನ್ ಜೊತೆಗೂಡಿ ಪೂರ್ವ ಏಷ್ಯಾಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಭಾರತ ತೊಡಗಿಸಿಕೊಂಡಿದೆ. ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿವೆ. ಅತ್ತ ಅಮೆರಿಕದೊಂದಿಗಿನ ವಾಣಿಜ್ಯ ಸಮರದಿಂದಾಗಿ ಚೀನಾಕ್ಕೆ ಕೊಂಚ ಹಿನ್ನಡೆಯಾಗಿದೆ. ಇತ್ತ ಭಾರತ ಜಾಗತಿಕ ರಾಜಕಾರಣದಲ್ಲಿ ದೊಡ್ಡ ಪಾತ್ರ ನಿರ್ವಹಿಸಲು ಮುಂದಡಿ ಇಟ್ಟಿದೆ. ಈ ಎಲ್ಲದರ ನಡುವೆ ಜಾಗತಿಕ ಆರ್ಥಿಕ ಕುಗ್ಗುವಿಕೆಯನ್ನು ಎದುರಿಸಲು, ಏಷ್ಯಾದ ಈ ಎರಡು ದೊಡ್ಡ ಮಾರುಕಟ್ಟೆಗಳು ಪರಸ್ಪರ ಸಹಕಾರಿಯಾಗಬೇಕಾದ ಅನಿವಾರ್ಯ ಬಂದೊದಗಿದೆ. ಹಾಗಾಗಿಯೇ ಷಿ ತಮ್ಮ ಭೇಟಿಯ ವೇಳೆ ಗಡಿ, ಕಾಶ್ಮೀರ ವಿಷಯವನ್ನು ಬದಿಗೊತ್ತಿ, ವಾಣಿಜ್ಯ ವಿಷಯವನ್ನೇ ಆದ್ಯತೆಯಾಗಿಸಿಕೊಂಡರು.

ಭಾರತ ಈ ಅನೌಪಚಾರಿಕ ಶೃಂಗಸಭೆಯನ್ನು ಮಹಾಬಲಿಪುರಂ ಪಟ್ಟಣದಲ್ಲಿ ಆಯೋಜಿಸಿ, ಭಾರತ ಮತ್ತು ಚೀನಾ ನಡುವಿನ ಶತಮಾನಗಳಷ್ಟು ಹಳೆಯದಾದ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಪರ್ಕ ಸೇತುವನ್ನು ಪುನಶ್ಚೇತನಗೊಳಿಸಲು ತಾನು ಸಿದ್ಧ ಎಂಬ ಸಂದೇಶ ನೀಡಿದೆ. ಶತಮಾನಗಳ ಹಿಂದೆ ಭಾರತವನ್ನು ಪ್ರವೇಶಿಸಲು ಚೀನಾ ಸಮುದ್ರ ಮಾರ್ಗವನ್ನೇ ಆಶ್ರಯಿಸಿತ್ತು. ಉತ್ತರದ ಹಿಮಾಲಯ ಶ್ರೇಣಿಯಿಂದ ಭಾರತದೊಳಗೆ ಇಳಿಯುವುದು ದುರ್ಗಮವಾಗಿತ್ತು. ದಕ್ಷಿಣ ಭಾರತದ ಮೂಲಕವಷ್ಟೇ ಭಾರತದ ಪ್ರವೇಶ ಸಾಧ್ಯವಾಗುತ್ತಿತ್ತು. ಅದು ಭಾರತದೊಂದಿಗಿನ ವ್ಯಾಪಾರ ದ್ವಾರವೂ ಆಗಿತ್ತು. ಬೌದ್ಧಧರ್ಮವಾಗಲೀ, ಬೋಧಿ ಧರ್ಮದ ಮೂಲಕ ಚೀನಾ ಸೇರಿದ ಕುಂಗ್ ಫೂ ಸಮರ ಕಲೆಯಾಗಲೀ ದಕ್ಷಿಣದ ಬಾಗಿಲಿನಿಂದಲೇ ಚೀನಾದತ್ತ ಹೊರಟವು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಬೆಳೆದ ಹತ್ತಿ, ಚೀನಾದ ಸಕ್ಕರೆ ಉಭಯ ದೇಶಗಳ ಮಧ್ಯೆ ವ್ಯಾಪಾರದ ತಂತುಗಳನ್ನು ದಕ್ಷಿಣ ಭಾರತದ ಮೂಲಕ ಹೆಣೆದಿದ್ದವು. ಹಾಗಾಗಿ ಚೀನಾದ ಅಧ್ಯಕ್ಷರನ್ನು ದಕ್ಷಿಣ ಭಾರತದ ಮಹಾಬಲಿಪುರಂನಲ್ಲಿ ಸ್ವಾಗತಿಸಿದ್ದು ಅರ್ಥಪೂರ್ಣವಾಗಿದೆ.

ಈ ಪಟ್ಟಣದ ಆಯ್ಕೆಯ ಹಿಂದೆ ಭಾರತದ ಇನ್ನೊಂದು ಹಿತಾಸಕ್ತಿ ಕೆಲಸ ಮಾಡಿದಂತಿದೆ. ಅದು ಪ್ರವಾಸೋದ್ಯಮ. ಕಳೆದ ವರ್ಷ ಒಂದು ಕೋಟಿ ಮೂವತ್ತು ಲಕ್ಷ ಮಂದಿ ಚೀನಾದ ಪ್ರವಾಸಿಗರು ಜಗತ್ತಿನ ಇತರ ದೇಶಗಳನ್ನು ಸುತ್ತಿ ಬಂದಿದ್ದರೆ, ಕೇವಲ ಎರಡು ಲಕ್ಷದಷ್ಟು ಜನ ಭಾರತಕ್ಕೆ ಭೇಟಿಯಿತ್ತಿದ್ದಾರೆ. ಹಾಗಾಗಿ ಚೀನಾದ ಅಗ್ರ ನಾಯಕನನ್ನು ಮಹಾಬಲಿಪುರಂನ ಐತಿಹಾಸಿಕ ಸ್ಮಾರಕಗಳ ಬಳಿ ಸ್ವಾಗತಿಸಿರುವುದು, ಸಮುದ್ರ ತೀರದಲ್ಲಿ ಹೆಜ್ಜೆಹಾಕುವಂತೆ ಮಾಡಿರುವುದು ಚೀನಾದ ಜನರನ್ನು ಭಾರತದತ್ತ ಆಕರ್ಷಿಸುವ ಮಾರ್ಗವೂ ಆಗಿದೆ.

ಅದೇನೇ ಇರಲಿ, ಗಡಿಯ ಕುರಿತ ವೈಮನಸ್ಯವನ್ನೇ ಹಿರಿದು ಮಾಡಿಕೊಂಡರೆ, ವ್ಯಾಪಾರ-ವಹಿವಾಟು ಕ್ಷೇತ್ರದಲ್ಲಿ ಎರಡು ದೇಶಗಳೂ ಸೊರಗುತ್ತವೆ. ಕೆಲವೊಮ್ಮೆ ಕಾಲಕ್ಕೆ ತಕ್ಕಂತೆ, ರಾಷ್ಟ್ರದ ಹಿತಾಸಕ್ತಿಗೆ ಪೂರಕವಾಗಿ ಹೆಜ್ಜೆಇರಿಸಬೇಕಾಗುತ್ತದೆ. ಭಾರತ– ಚೀನಾ ನಡುವಿನ 62ರ ಯುದ್ಧ ನಡೆದು 58 ವರ್ಷ ಆಗಿಹೋಗಿದೆ. ಭಾರತ ವಿವಿಧ ರಂಗಗಳಲ್ಲಿ ಸಾಕಷ್ಟು ಬೆಳೆದಿದೆ. ತನ್ನ ಸೇನಾ ಸಾಮರ್ಥ್ಯ, ಜಾಗತಿಕ ವರ್ಚಸ್ಸನ್ನು ವೃದ್ಧಿಸಿಕೊಂಡಿದೆ. ಚೀನಾದ ಎದುರು ಸರಿಸಮನಾಗಿ ನಿಲ್ಲುವಷ್ಟು ಆತ್ಮವಿಶ್ವಾಸ ಭಾರತಕ್ಕೆ ಬಂದಿದೆ. ಷಿ ಭೇಟಿಗೆ ವಾರದ ಮೊದಲಷ್ಟೇ ಭಾರತದ ಸೇನೆ, ಚೀನಾವನ್ನು ಎದುರಿಸಲು ತನ್ನ ಸಾಮರ್ಥ್ಯ ಒರೆಗೆಹಚ್ಚುವ ಅಭ್ಯಾಸ ಚಟುವಟಿಕೆ ‘Operation Him Vijay’  ಆರಂಭಿಸಿತ್ತು ಎಂಬುದು ಅದಕ್ಕೆ ಉದಾಹರಣೆ. ಶತ್ರು ರಾಷ್ಟ್ರವಾಗಲಿ ಮಿತ್ರರಾಷ್ಟ್ರವೇ ಆಗಲಿ ಅದನ್ನು ನಿಕಟವಾಗಿಯೇ ಇರಿಸಿಕೊಳ್ಳಬೇಕು ಎಂಬುದು ರಾಜತಾಂತ್ರಿಕತೆಯ ಪಾಠ. ಆಗಷ್ಟೇ, ಬದಲಾಗುವ ಧೋರಣೆ ಹಾಗೂ ರೂಪುಗೊಳ್ಳುವ ಸಂಚನ್ನು ಅರಿಯಲು ಸಾಧ್ಯ. ಚೀನಾದ ವಿಷಯದಲ್ಲಿ ಭಾರತ ಆ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು