ಕಾಳಜಿ ಹೆಚ್ಚು ವಿದೇಶಿಯರ ಬಗ್ಗೆ !

7

ಕಾಳಜಿ ಹೆಚ್ಚು ವಿದೇಶಿಯರ ಬಗ್ಗೆ !

ಎ. ಸೂರ್ಯ ಪ್ರಕಾಶ್
Published:
Updated:

ಅಸ್ಸಾಂ ರಾಜ್ಯದ ನಿವಾಸಿಗಳ ಪೈಕಿ ಅಂದಾಜು 40 ಲಕ್ಷ ಜನ ಅಕ್ರಮ ವಲಸಿಗರಾಗಿರಬಹುದು ಎಂಬ ಸೂಚನೆಯನ್ನು ನೀಡುವ ‘ರಾಷ್ಟ್ರೀಯ ಪೌರತ್ವ ನೋಂದಣಿ’ಯ (ಎನ್‌ಆರ್‌ಸಿ) ಅಂತಿಮ ಕರಡು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಿಂದ ಭಾರಿ ಪ್ರತಿಭಟನೆಗೆ ಕಾರಣವಾಗಿದೆ.

ಅಲ್ಲದೆ, ಪಕ್ಷದ ಅಸ್ಸಾಂ ರಾಜ್ಯದ ನಾಯಕರು ಅಳೆದು ತೂಗಿದ ನಂತರವೂ ಗೊಂದಲಗಳಿಂದ ಕೂಡಿದ ಪ್ರತಿಕ್ರಿಯೆ ನೀಡಿದ್ದಾರೆ. ಎನ್‌ಆರ್‌ಸಿಯ ಅಂತಿಮ ಕರಡು ಈ ಕಾಲಘಟ್ಟದಲ್ಲಿ ಹೊರಬರಲಿದೆ ಎಂಬುದು ಕಾಂಗ್ರೆಸ್ಸಿಗೆ ಗೊತ್ತಿತ್ತು. ಹೀಗಿದ್ದರೂ, ವಿದೇಶಿಗರನ್ನು ಪತ್ತೆ ಮಾಡಿ, ಅವರನ್ನು ದೇಶದಿಂದ ಹೊರಕ್ಕೆ ಕಳಿಸಲಾಗುವುದು ಎಂದು ತಾನು ಈ ಹಿಂದೆ ನೀಡಿದ್ದ ಭರವಸೆಗಳನ್ನು ಒಪ್ಪಿಕೊಳ್ಳಲು ವಿಫಲವಾಗುವ ಮೂಲಕ ಕಾಂಗ್ರೆಸ್ ಪಕ್ಷ ಆರಂಭಿಕ ಅನುಕೂಲವನ್ನು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಬಿಟ್ಟುಕೊಟ್ಟಂತೆ ಕಾಣುತ್ತಿದೆ.

ಅಸ್ಸಾಂನ ವಾಸ್ತವಗಳು ಏನು ಎಂಬುದನ್ನು ತಿಳಿದಿರದ, ಜಾತಿ ಆಧಾರಿತವೂ ಕಾಂಗ್ರೆಸ್ಸಿನ ಜೊತೆ ಆಗಾಗ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಥಿತಿಯವೂ ಆಗಿರುವ ಪ್ರಾದೇಶಿಕ ಪಕ್ಷಗಳು ತಮ್ಮ ಪ್ರದೇಶದ ಮುಸ್ಲಿಮರ ಜೊತೆ ತಾವಿದ್ದೇವೆ ಎಂಬುದನ್ನು ತೋರಿಸಿಕೊಳ್ಳುವ ಆಸೆಯೊಂದಿಗೆ ಎನ್‌ಆರ್‌ಸಿ ವಿರುದ್ಧ ಧ್ವನಿ ಎತ್ತಬಹುದು. ಆದರೆ, ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ ಅವರನ್ನು ದೇಶದಿಂದ ಹೊರಗೆ ಕಳಿಹಿಸಲಾಗುವುದು ಎಂಬ ಭರವಸೆಯನ್ನು ಮತ್ತೆ ಮತ್ತೆ ನೀಡಿರುವ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್, ಎನ್‌ಆರ್‌ಸಿ ವಿಚಾರದಲ್ಲಿ ಹಾಗೆ ಹುಡುಗಾಟ ಮಾಡಲು ಸಾಧ್ಯವಿಲ್ಲ.

ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ, ಅವರನ್ನು ದೇಶದಿಂದ ಹೊರಹಾಕುವ ಭರವಸೆಯನ್ನು ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 1971ರಲ್ಲಿ ಮೊದಲ ಬಾರಿಗೆ ನೀಡಿದ್ದರು. ನಂತರ, ಇದನ್ನು ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 1985ರಲ್ಲಿ ದೃಢವಾಗಿ ಪುನರುಚ್ಚರಿಸಿದ್ದರು. ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ (ಎಎಎಸ್‌ಯು) ಮತ್ತು ಅಖಿಲ ಅಸ್ಸಾಂ ಗಣ ಸಂಗ್ರಾಮ ಪರಿಷದ್ (ಎಎಜಿಎಸ್‌ಪಿ) ಜೊತೆ ಇಂದಿರಾ ಗಾಂಧಿ ಮಾತುಕತೆ ಆರಂಭಿಸಿದ್ದರು. ಈ ಮಾತುಕತೆಗಳ ಪರಿಣಾಮವಾಗಿ 1985ರಲ್ಲಿ ಅಸ್ಸಾಂ ಒಪ್ಪಂದ ಸಾಧ್ಯವಾಯಿತು.

ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನೀತಿಯಲ್ಲಿ ಆಗುತ್ತಿರುವ ಬದಲಾವಣೆ ಗಮನಿಸಿದರೆ, 1998ರ ಮೇ ತಿಂಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಅಣು ಬಾಂಬ್ ಪರೀಕ್ಷೆ (ಪೋಖ್ರಾನ್ –2) ನಡೆಸಿದಾಗ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಆಕ್ರೋಶದ ಪ್ರತಿಭಟನೆಗಳು ಹಾಗೂ ನಂತರದ ದಿನಗಳಲ್ಲಿ ಇದೇ ಪಕ್ಷದ ನಿಲುವಲ್ಲಿ ಆದ ಪರಿವರ್ತನೆಗಳು ನೆನಪಾಗುತ್ತವೆ.

ಅಣ್ವಸ್ತ್ರ ಪರೀಕ್ಷೆಗಳು ಬಿಜೆಪಿ ಸರ್ಕಾರಕ್ಕೆ ದೊಡ್ಡಮಟ್ಟದಲ್ಲಿ ರಾಜಕೀಯ ಬಲವನ್ನು ಕೊಟ್ಟಿವೆ ಎಂಬುದು ಗೊತ್ತಾದ ನಂತರ, ಕಾಂಗ್ರೆಸ್ಸಿನ ನಾಯಕರು ಮುಜುಗರಕ್ಕೆ ಒಳಗಾಗಿ, ನಾಚಿಕೆಯಿಂದ, ‘1974ರ ಮೇ ತಿಂಗಳಲ್ಲಿ ಪೋಖ್ರಾನ್‌ನಲ್ಲಿ ಅಣು ಬಾಂಬ್‌ ಪರೀಕ್ಷೆ ನಡೆಸುವ ಮೂಲಕ ಭಾರತವನ್ನು ಅಣ್ವಸ್ತ್ರ ರಾಷ್ಟ್ರವನ್ನಾಗಿ ಮಾಡಿದ್ದು ಇಂದಿರಾ ಗಾಂಧಿ’ ಎಂದು ಹೇಳಲು ಆರಂಭಿಸಿದರು. ಆದರೆ, ಕಾಂಗ್ರೆಸ್ಸಿಗರಿಗೆ ವಾಸ್ತವ ಗೊತ್ತಾಗುವಾಗ ತಡವಾಗಿತ್ತು. ಬಹುಮಾನವನ್ನು ಬಿಜೆಪಿ ಪಡೆದುಕೊಂಡು ಆಗಿತ್ತು.

ಎನ್‌ಆರ್‌ಸಿ ವಿಚಾರದಲ್ಲಿ ಕೂಡ ಕಾಂಗ್ರೆಸ್ ಪಕ್ಷ ಗೊಂದಲಮಯ ನಿಲುವು ತಾಳಿರುವುದನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಇಂದಿರಾ ಗಾಂಧಿ ಅವರು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದು ಮಾತ್ರವಲ್ಲದೆ, 1985ರ ಆಗಸ್ಟ್‌ 15ರಂದು ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಎಎಎಸ್‌ಯು ಮತ್ತು ಎಎಜಿಎಸ್‌ಪಿ ನಡುವೆ ಆದ ಅಸ್ಸಾಂ ಒಪ್ಪಂದವು ರಾಜ್ಯದ ಜನರಿಗೆ ಕೆಲವು ನಿರ್ದಿಷ್ಟ ಭರವಸೆಗಳನ್ನು ನೀಡಿದೆ.

ನುಸುಳುವಿಕೆಯಿಂದ ರಾಜ್ಯದ ಮೇಲೆ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಎಎಎಸ್‌ಯು ಸಂಘಟನೆ ತನ್ನ ಆತಂಕಗಳನ್ನು 1980ರ ಫೆಬ್ರುವರಿಯಲ್ಲಿ ತಿಳಿಸಿದೆ. ಇಂದಿರಾ ಗಾಂಧಿ ಅವರಿಗೆ ‘ಅಸ್ಸಾಂ ರಾಜ್ಯದ ಜನರ ನೈಜ ಕಳವಳಗಳ ವಿಚಾರ ತಿಳಿದಿದೆ’. ಹಾಗಾಗಿ, ಅವರು ಎಎಎಸ್‌ಯು ಮತ್ತು ಎಎಜಿಎಸ್‌ಪಿ ಜೊತೆ ಮಾತುಕತೆ ಆರಂಭಿಸಿದರು. ಇದು 1985ರ ಒಪ್ಪಂದಕ್ಕೆ ಮೂಲವಾಯಿತು ಎಂದು ಒಪ್ಪಂದದಲ್ಲಿ ಹೇಳಲಾಗಿದೆ.

ಒಪ್ಪಂದದ ಪ್ರಮುಖ ಅಂಶಗಳು ಹೀಗಿವೆ: 1971ರ ಮಾರ್ಚ್‌ 25ರ ನಂತರ ಅಸ್ಸಾಂಗೆ ಬಂದ ವಿದೇಶಿಯರನ್ನು ಪತ್ತೆ ಮಾಡುವ ಕೆಲಸ ಮುಂದುವರಿಯುತ್ತದೆ, ಅಂತಹ ವಿದೇಶಿಯರನ್ನು ಹೊರಹಾಕಲು ವಾಸ್ತವಿಕ ಕ್ರಮಗಳನ್ನು ಕೈಗೊಳ್ಳಲಾಗುವುದು.

1966ರ ಜನವರಿ 1ರ ನಂತರ ಹಾಗೂ 1971ರ ಮಾರ್ಚ್‌ 24ರವರೆಗೆ ಅಸ್ಸಾಂಗೆ ಬಂದ ವಿದೇಶಿ ವ್ಯಕ್ತಿಗಳನ್ನು ವಿದೇಶಿ ಪ್ರಜೆಗಳ ಕಾಯ್ದೆ– 1946 ಮತ್ತು ವಿದೇಶಿ ಪ್ರಜೆಗಳ (ನ್ಯಾಯಮಂಡಳಿ) ಆದೇಶ– 1964ರ ಅನ್ವಯ ಪತ್ತೆ ಮಾಡಲಾಗುವುದು.

ಹಾಗೆ ಪತ್ತೆ ಮಾಡಲಾಗುವ ವಿದೇಶಿ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುವುದು, ಪತ್ತೆ ಮಾಡಿದ ಹತ್ತು ವರ್ಷಗಳ ನಂತರ ಮತದಾರರ ಪಟ್ಟಿಯಿಂದ ತೆಗೆಯಲಾದ ಹೆಸರುಗಳನ್ನು ಪುನಃ ಸೇರಿಸಲಾಗುವುದು. ರಾಜ್ಯದಿಂದ ಹೊರಹಾಕಿದ ನಂತರ, ‍ಪುನಃ ರಾಜ್ಯದೊಳಕ್ಕೆ ಬಂದವರನ್ನು ಹೊರಹಾಕಲಾಗುವುದು.

ಅಕ್ರಮ ವಲಸಿಗರ (ಪತ್ತೆ) ನ್ಯಾಯಮಂಡಳಿ ಕಾಯ್ದೆಯನ್ನು (ಐಎಂಡಿಟಿ ಕಾಯ್ದೆ) ಉತ್ಸಾಹದಿಂದ ಜಾರಿಗೆ ತರಲಾಯಿತಾದರೂ, ಅದು ತನ್ನ ಉದ್ದೇಶ ಸಾಧಿಸುವಲ್ಲಿ ವಿಫಲವಾಯಿತು. ವಿದೇಶಿಯರನ್ನು ಪತ್ತೆ ಮಾಡಿ ಅವರನ್ನು ಹೊರಗೆ ಕಳುಹಿಸುವಲ್ಲಿ ಈ ಕಾಯ್ದೆ ವಿಫಲವಾಗಿರುವ ಬಗ್ಗೆ ಸರ್ಬಾನಂದ ಸೊನೊವಾಲ್‌ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠ ಕಟು ನುಡಿಗಳನ್ನು ಆಡಿತು. ಆ ಪ್ರಕರಣದ ಅರ್ಜಿದಾರ ಈಗ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ.

ಐಎಂಡಿಟಿ ಕಾಯ್ದೆಯು ಸಂವಿಧಾನ ಕೊಟ್ಟಿರುವ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ಸುಪ್ರೀಂ ಕೋರ್ಟ್‌ 2005ರ ಜುಲೈ 12ರಂದು ನೀಡಿದ ತೀರ್ಪಿನಲ್ಲಿ ಹೇಳಿತು.

ಶೇಕಡ 85ರಷ್ಟು ವಿಚಾರಣೆಗಳು ತಿರಸ್ಕೃತಗೊಂಡವು, ಯಾವ ಪ್ರಕರಣವನ್ನೂ ನ್ಯಾಯಮಂಡಳಿಗೆ ವರ್ಗಾಯಿಸಲಿಲ್ಲ ಎಂಬುದನ್ನು ಸರ್ಕಾರ ಆರಂಭಿಕ ಹಂತದಲ್ಲಿ ಸಲ್ಲಿಸಿದ ಪ್ರಮಾಣಪತ್ರ ತೋರಿಸಿದೆ ಎಂಬುದನ್ನು ತೀರ್ಪಿನಲ್ಲಿ ಹೇಳಲಾಗಿದೆ.

ಭಾರತದ ಪ್ರಜೆಯೊಬ್ಬ ಅಸ್ಸಾಂನಲ್ಲಿ ಅಕ್ರಮ ವಲಸಿಗನೊಬ್ಬ ಇದ್ದಾನೆ ಎಂಬುದನ್ನು ತೋರಿಸುವುದಕ್ಕೆ ಇರುವ ನಿರ್ಬಂಧಗಳು ‘ಯಾವುದೇ ಅರ್ಥ ಇಲ್ಲದ್ದು’ ಎಂದೂ ಕೋರ್ಟ್‌ ಹೇಳಿತು. ‘1971ರ ಮಾರ್ಚ್‌ 25ರಂದು ಅಥವಾ ಅದರ ನಂತರ ಬಾಂಗ್ಲಾದೇಶದಿಂದ ಅಸ್ಸಾಂಗೆ ಅಕ್ರಮವಾಗಿ ವಲಸೆ ಬಂದವರನ್ನು ಪತ್ತೆ ಮಾಡಿ ಹೊರಗೆ ಕಳುಹಿಸುವ ಬದಲು, ಅವರಿಗೆ ಆಶ್ರಯ ಕೊಡುವ ಉದ್ದೇಶದಿಂದಲೇ ಐಎಂಡಿಟಿ ಕಾಯ್ದೆ ಹಾಗೂ ಅದರ ಅಡಿಯಲ್ಲಿನ ನಿಯಮಗಳನ್ನು ಮಾಡಲಾಗಿದೆ ಎಂಬುದು ಆಳವಾದ ವಿಶ್ಲೇಷಣೆಯಿಂದ ಗೊತ್ತಾಗುತ್ತದೆ’ ಎಂದು ಕೋರ್ಟ್‌ ತೀರ್ಮಾನಿಸಿತು.

ಇದಾದ ನಂತರ, ಅಸ್ಸಾಂ ಸನ್ಮಿಲಿತ ಮಹಾಸಭಾ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಕೂಡ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡಿತು. ಈ ಪ್ರಕರಣದಲ್ಲಿ, ಹಲವು ನಿರ್ದೇಶನಗಳನ್ನು ನೀಡಿದ ಸುಪ್ರೀಂ ಕೋರ್ಟ್‌, ಭಾರತ – ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಅಸ್ಸಾಂನಲ್ಲಿ ಎನ್‌ಆರ್‌ಸಿಯ ಪರಿಷ್ಕರಣೆಯ ಕೆಲಸಕ್ಕೆ ಗಡುವು ವಿಧಿಸಿದ ಕೋರ್ಟ್‌, ಪರಿಷ್ಕರಣೆ ಹಾಗೂ ಅದರ ಪ್ರಕಟಣೆಯ ಕೆಲಸ 2016ರ ಜನವರಿಯ ಅಂತ್ಯದೊಳಗೆ ಆಗಬೇಕು ಎಂದು ಹೇಳಿತು.

ಇದನ್ನೇ ಬೇರೆ ಮಾತುಗಳಲ್ಲಿ ಹೇಳಬೇಕು ಎಂದಾದರೆ, ಕರಡು ಎನ್‌ಆರ್‌ಸಿಯನ್ನು ಸಿದ್ಧಪಡಿಸಿರುವುದರ ಹಿಂದೆ ಇರುವುದು ಅಸ್ಸಾಂನಲ್ಲಿನ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ, ಹೊರಗೆ ಕಳುಹಿಸಲಾಗುವುದು ಎಂದು ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ನೀಡಿರುವ ದೃಢವಾದ ಭರವಸೆಗಳು. ಅಲ್ಲದೆ, ಇಡೀ ಪ್ರಕರಣವು ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳ ವ್ಯಾಪ್ತಿಯಲ್ಲಿ ಇದೆ.

ಕೋರ್ಟ್‌ ಇಡೀ ‍ಪ್ರಕ್ರಿಯೆಯ ಮೇಲೆ ಸೂಕ್ಷ್ಮ ನಿಗಾ ಇರಿಸಿದೆ. ಇಡೀ ಪ್ರಕ್ರಿಯೆ ದೇಶದ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ ಎಂಬ ಸಂಗತಿಯನ್ನು ಕಾಂಗ್ರೆಸ್ ಒಪ್ಪಿಕೊಳ್ಳುವ ಕೆಲಸವನ್ನೂ ಮಾಡುತ್ತಿಲ್ಲ.

ಎನ್‌ಆರ್‌ಸಿ ಎಂಬುದು ಬಿಜೆಪಿಯ ವಿಭಜನಕಾರಿ ರಾಜಕೀಯದ ಭಾಗ ಎಂದು ಕಾಂಗ್ರೆಸ್ ಪಕ್ಷ ಜನರಿಗೆ ಹೇಳುವ ಯತ್ನ ಮಾಡುತ್ತಿದೆ. ಈ ವಿಚಾರದಲ್ಲಿ ತಾನೇನೂ ಮಾಡಿಲ್ಲ ಎಂಬ ಸೋಗನ್ನು ಕಾಂಗ್ರೆಸ್ ಪ್ರದರ್ಶಿಸುತ್ತಿದೆ. ‘ಮುಸ್ಲಿಂ ಮತ ಬ್ಯಾಂಕ್’ ಎಂದು ಕರೆಸಿಕೊಂಡಿರುವ ಮತಗಳ ಬುಟ್ಟಿಯಲ್ಲಿ ತನ್ನ ಪಾಲನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂಬ ನಿರೀಕ್ಷೆ ಕೂಡ ಈ ಪಕ್ಷಕ್ಕೆ ಇದೆ.

ಲಕ್ಷಾಂತರ ಜನ ಅಕ್ರಮ ವಲಸಿಗರು ದೇಶದೊಳಕ್ಕೆ ನುಸುಳಿ, ಕೆಲವು ರಾಜಕೀಯ ಪಕ್ಷಗಳ ಬೆಂಬಲದ ಕಾರಣದಿಂದಾಗಿ ಅವರು ದೇಶದ ವಿವಿಧೆಡೆ ಹಂಚಿಹೋಗಿ, ಸಾಮಾಜಿಕ ಬಿಗುವಿನ ಪರಿಸ್ಥಿತಿಗಳಿಗೆ, ಭದ್ರತಾ ಸಮಸ್ಯೆಗಳಿಗೆ ಕೂಡ ಅವರು ಕಾರಣರಾಗುತ್ತಿರುವುದು ದೇಶದ ನೈಜ ಪ್ರಜೆಗಳ ಮನಸ್ಸಿನಲ್ಲಿ ಕೊರೆಯುತ್ತಿದೆ. ದೇಶದ ಪ್ರಜೆಗಳ ಹಕ್ಕುಗಳ ಪರವಾಗಿ ನಿಲ್ಲುವ ಕೆಲಸ ಮಾಡದೆ ಕಾಂಗ್ರೆಸ್ ಪಕ್ಷವು 2019ರ ಲೋಕಸಭಾ ಚುನಾವಣೆ ಎದುರಿಗಿರುವ ಹೊತ್ತಿನಲ್ಲಿ ಪೋಖ್ರಾನ್‌– 2 ಪರೀಕ್ಷೆಯ ವೇಳೆ ಮಾಡಿದ್ದಂತೆ ಬಿಜೆಪಿಗೆ ಇನ್ನಷ್ಟು ರಾಜಕೀಯ ಬಲ ನೀಡುವ ಕೆಲಸ ಮಾಡುತ್ತಿರಬಹುದು.

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !