ಸತ್ಯದ ಚಾವಡಿಯಲ್ಲಿ ರೂಪುಗೊಂಡ ಕನಸು

7
ಸೇನಾನಿಯ ಸ್ವಗತ

ಸತ್ಯದ ಚಾವಡಿಯಲ್ಲಿ ರೂಪುಗೊಂಡ ಕನಸು

ಬ್ರಿಗೇಡಿಯರ್‌ ಐ.ಎನ್‌.ರೈ
Published:
Updated:

ಇಚ್ಲಂಪಾಡಿ ಮನೆ!

ನಾಲ್ಕು ಚೌಕಿಯ ಮನೆಯ ಮುಂಭಾಗದಲ್ಲಿ ಸತ್ಯದ ಚಾವಡಿ. ಚಾವಡಿಯ ಒಂದು ಭಾಗದಲ್ಲಿ ಸೀಮೆಯರಸರ ಸಿಂಹಾಸನ. ಅರಸರಿಗೆ ಇಚ್ಲಂಪಾಡಿಯ ಮನೆಯಲ್ಲಿಯೇ ಪಟ್ಟಾಭಿಷೇಕ ನಡೆಯುವುದು ವಾಡಿಕೆ. ಮನೆಯವರೇ ಆಗಲಿ, ಮನೆಯ ಹೊರಗಿನವರೇ ಆಗಲಿ ಪ್ರವೇಶಿಸುವ ಮುನ್ನ ಚಪ್ಪಲಿ ಕಳಚಿಟ್ಟು, ಕೈ ಮುಗಿದು ಒಳ ಬರಬೇಕು. ಇಷ್ಟು ಶ್ರದ್ಧೆ, ಧರ್ಮಾಚರಣೆ ಇರುವ ಮನೆ ಎದುರು ಧರ್ಮ ತಪ್ಪಿ ನಡೆಯಬಾರದು ಎಂಬುದು ಹೆಜ್ಜೆ ಹೆಜ್ಜೆಗೂ ಅಂತರಂಗ ಹೇಳುತ್ತಿದ್ದ ಎಚ್ಚರ. ಗೌರವ, ಘನತೆ, ದುಡಿಮೆ, ಶ್ರದ್ಧೆ, ಅಭಿಮಾನ-ಇವುಗಳನ್ನೆಲ್ಲವನ್ನೂ ಒಳಗೊಂಡಿತ್ತು ಇಚ್ಲಂಪಾಡಿ ಎಂಬ ಬೃಹತ್ತಾದ ಮನೆ.

ನನ್ನನ್ನೆಲ್ಲರೂ ಆತ್ಮೀಯತೆಯಿಂದ ಕರೆಯುವುದು ಐ ಎನ್ ರೈ ಎಂದು. ಇಚ್ಲಂಪಾಡಿಯಲ್ಲಿ ನಂಜಪ್ಪ ಎಂಬ ಹೆಸರಿನ ಈ ದೇಹಕ್ಕೆ ಹುಟ್ಟು ಕೊಟ್ಟ ದಂಪತಿಗಳು ಇಚ್ಲಂಪಾಡಿ ಸುಮತಿ ರೈ ಮತ್ತು ಬಾಡೂರು ಶಾಂತಾರಾಮ ರೈ. ನನ್ನ ತಾಯಿ ತಂದೆಯರಿಗೆ ನಾಲ್ಕು ಗಂಡು ಮತ್ತು ಒಂದು ಹೆಣ್ಣು ಮಕ್ಕಳು. ಹಿರಿಯವನಾಗಿ ನಾನು ಹುಟ್ಟಿದ್ದು ಕೇವಲ ಏಳು ತಿಂಗಳಿಗೆ!. ಏಳು ತಿಂಗಳಿಗೆ ಹುಟ್ಟಿದ ಮಗು ಉಳಿದರೆ ಅದೃಷ್ಟ ಎಂಬ ಮಾತು, ತಾಯಿ ತಂದೆಯವರಿಗೆ ಎಷ್ಟರ ಮಟ್ಟಿಗೆ ನಿಜವಾಗಿದೆಯೋ ಗೊತ್ತಿಲ್ಲ. ನನಗಂತೂ ಖಂಡಿತಕ್ಕೂ ಹೌದೆನಿಸಿದ್ದು, ನಾನೋರ್ವ ಸೈನಿಕನಾಗಿ ಯೂನಿಫಾರಂ ತೊಟ್ಟಾಗ!.

ಅಳಿಯ ಕಟ್ಟಿನ ಸಂಪ್ರದಾಯದಂತೆ ನಾನು ಹುಟ್ಟಿದ್ದು, ಬೆಳೆದದ್ದು ತಾಯಿ ಮನೆ ಇದ್ದ ಇಚ್ಲಂಪಾಡಿಯಲ್ಲಿ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ, ನನ್ನರಿವಿಗೆ ಬರುವು ಮುನ್ನವೇ ನಮ್ಮ ಕಾಣಿಕೆ ಇತ್ತು. ನಮ್ಮ ಅಜ್ಜನದ್ದು ಕುಂಬ್ಳೆ ಸೀಮೆಯ ಗುರಿಕಾರ ಮನೆತನ. ನಮ್ಮ ಹಿರಿಯರು ಸುಮಾರು 3000 ಸೈನಿಕರಿಗೆ ಆಶ್ರಯ ಒದಗಿಸಿ, ಅವರನ್ನು ದೇಶದ ಯುದ್ಧಕಾಲದಲ್ಲಿ ನೆರವಾಗುವ ನಿಟ್ಟಿನಲ್ಲಿ ಸದಾ ಅಣಿಗೊಳಿಸಿ ನೋಡಿಕೊಳ್ಳಬೇಕಾಗಿತ್ತು!. ಈ ಉನ್ನತ ಮೌಲ್ಯದ ಜವಾಬ್ದಾರಿಯಿಂದ, ನಮ್ಮನೆಯಲ್ಲಿಡೀ ಒಂದು ರೀತಿಯ ಶಿಸ್ತಿನ ವಾತಾವರಣವಿತ್ತು. ಹಾಗಾಗಿ ಬಾಲ್ಯ ಸಹಜವಾದ ತುಂಟಾಟ, ಕಿತಾಪತಿಗಳಿಂದ ಹೊರತಾದ ಬಾಲ್ಯಜೀವನ ನನ್ನದಾಗಿತ್ತು. ‘ನಿಮ್ಮ ಕುಟುಂಬ ಹೇಗೇ ಇದ್ದಿದ್ದರೂ ಅದನ್ನು ಗೌರವಿಸಿ ಮತ್ತು ನೀವು ಅಲ್ಲಿ ಹುಟ್ಟಿದ್ದಕ್ಕೆ, ಅದರಿಂದ ಬದುಕಿನಲ್ಲಿ ಪಡೆದುಕೊಂಡ ಎಲ್ಲದಕ್ಕೂ ಒಂದು ಹೆಮ್ಮೆ ಸದಾ ಇರಲಿ’ ಎಂದು ನಾನು ಆಗಾಗ ಮಕ್ಕಳಿಗೆ ಹೇಳುತ್ತಿರುತ್ತೇನೆ. 

ನಾವೆಲ್ಲರೂ ನಮ್ಮ ಅಜ್ಜನ ಕಾಲವನ್ನೂ ನೋಡಿಯೇ ಬೆಳೆದವರು. ಅದು ಶ್ರೀಮಂತರ ಮನೆತನವಾಗಿತ್ತು. ಮಣೆ ಹಾಕಿ, ನೆಲದಲ್ಲಿ ಕುಳಿತು ಶಿಸ್ತಿನಿಂದ, ಬೇಕಾದಷ್ಟು ಮಾತ್ರ ಹಾಕಿಕೊಂಡು ಊಟ ಮಾಡಬೇಕಿತ್ತು. ನಮ್ಮ ಹಾಸಿಗೆ ನಾವೇ ಹಾಕಿಕೊಳ್ಳಬೇಕು, ಬಟ್ಟೆ ಬರೆ ಅಷ್ಟು ಶುದ್ಧವಾಗಿರಬೇಕು.  ನಾವು ಕುಂಬ್ಳೆ ಸೀಮೆಗೇ ಮಾದರಿ ಆಗಿರಬೇಕಾದ ಕುಟುಂಬ ಎಂಬ ಪ್ರಜ್ಞೆ ಇತ್ತು.  ಹಾಗಾಗಿಯೇ ನಮ್ಮ ಬದುಕಿಗೆ ಬಾಲ್ಯದಿಂದಲೇ ಒಂದು ಜವಾಬ್ದಾರಿಯ ಪರಿಧಿ ಇರುತ್ತಿತ್ತು. ಇದೆಲ್ಲಾ ಕಾರಣದಿಂದಲೇ ನಾವು ಬಾಲ್ಯ ಸಹಜ ತುಂಟಾಟದಿಂದ ಹೊರತಾದ ಬಾಲ್ಯವಾಗಿತ್ತು ಎಂದದ್ದು. ಅಜ್ಜನ ಕಾಲಾನಂತರ ನಮ್ಮ ಮಟ್ಟಿಗೆ ಆದರ್ಶವೆಂಬಂತೆ ಕಂಡುಬಂದದದ್ದು ಮೂವರು ಮಾವಂದಿರು.

ನಮ್ಮ ಮೂವರು ಮಾವಂದಿರದ್ದೂ ಒಂದೊಂದು ಸಾಧನೆ. ಮೊದಲ ಮಾವ ಇಚ್ಲಂಪಾಡಿ ತ್ಯಾಂಪಣ್ಣ ರೈ ಆ ಕಾಲದಲ್ಲಿಯೇ, ಕುಂಬ್ಳೆಯಂತಹ ಪುಟ್ಟ ಊರಿನಿಂದ ಚೆನ್ನೈಗೆ ಹೋಗಿ, ಮದ್ರಾಸ್ ಕಾಲೇಜಿನಲ್ಲಿ ಓದಿ, ಮತ್ತೆ ಲಂಡನ್ ಸ್ಕೂಲ್ ನಲ್ಲಿ ಬ್ಯಾರಿಸ್ಟರ್ ಮದವಿ ಪಡೆದ ಸಾಧಕ. ಮದ್ರಾಸ್ ನಲ್ಲಿ ಓದುತ್ತಿದ್ದಾಗಲೇ ಕಾಲೇಜು ಯೂನಿಯನ್ ಅಧ್ಯಕ್ಷರಾಗಿದ್ದು, ಲಂಡನ್ ಸ್ಕೂಲ್‍ನಲ್ಲಿ ಈಗಿನ ರಾಜಕೀಯ ನಾಯಕ ಪಿ. ಚಿದಂಬರಂ ಅವರಿಗಿಂತ ಒಂದು ವರ್ಷ ಸೀನಿಯರ್ ಆಗಿದ್ದರು. ಲಂಡನ್‍ನಲ್ಲಿ ಇಂಡಿಯನ್ ಸ್ಟೂಡೆಂಟ್ಸ್ ಯೂನಿಯನ್‍ನ ಅಧ್ಯಕ್ಷರಾಗಿದ್ದು, ಅಂದಿಗೆ ಬಹುದೊಡ್ಡ ಸಾಧನೆಯೇ ಸರಿ. ಮುಂದೆ 1970ರ ನಂತರ ಭಾರತಕ್ಕೆ ಬಂದು ನೆಲೆಸಿದರು. ವಕೀಲರಾಗಿ ಕೆಲಸ ಮಾಡುತ್ತಿದ್ದರು.  ಮನೆಗೆ ಬಂದ ಕಕ್ಷಿದಾರರಿಗೆ ಹಣ ತೆಗೆದುಕೊಳ್ಳುವ ಬದಲು, ತಾವೇ ಊಟ ಹಾಕಿ, ಉಚಿತವಾಗಿ ಅವರ ಪರವಾಗಿ ವಾದ ಮಾಡಿದವರು. ಅವರ ಸಾಧನೆಯ ಕಥೆಗಳನ್ನು ಕೇಳುತ್ತಲೇ ಬೆಳೆದವ ನಾನು.

ಇಚ್ಲಂಪಾಡಿ ರಾಮಯ್ಯ ರೈ ನನ್ನ ಮತ್ತೊಬ್ಬರು ಮಾವ. ಅವರನ್ನು ಧರ್ಮರಾಯನೆಂದೇ ಕರೆಯುತ್ತಿದ್ದರು. ಮದ್ರಾಸಿನಲ್ಲಿ ತಮ್ಮ ಶಿಕ್ಷಣದ ನಂತರ, ಮನೆ, ಕುಟುಂಬದವರೆಲ್ಲರ ವಿರೋಧದ ನಡುವೆಯೂ, ತನ್ನ ಊರಿಗೆ ಬಂದು, ಕೃಷಿಯನ್ನು ಆರಂಭಿಸಿದರು!. ಕಾಂಗ್ರೆಸ್ ಪಕ್ಷದಲ್ಲಿ, ಕಾಸರಗೋಡಿನ ಸಂಸದರಾಗಿ ಆಯ್ಕೆಯಾದರು. ಕರುಣಾಕರನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಒಂದು ಕ್ಷೇತ್ರದ ಸಂಸದರಾಗಿಯೂ, ಸಂಪತ್ತು ಮಾಡದೇ ಇದ್ದ ನಾಯಕರಿದ್ದರೆ ಇಚ್ಲಂಪಾಡಿ ರಾಮಯ್ಯ ರೈ ಎಂಬ ಮಾತನ್ನು ಊರಿನಲ್ಲಿ ಆಡಿಕೊಳ್ಳುತ್ತಾರೆ. ಹಣ ಮುಖ್ಯವಲ್ಲ, ಸತ್ಯ ಧರ್ಮ, ನ್ಯಾಯ ಮುಖ್ಯ ಎಂದು ಬದುಕಿದವರು ಅವರೆಲ್ಲ.

ಮತ್ತೊಬ್ಬ ಮಾವ ಚಿಕ್ಕಪ್ಪ ರೈ, ಸಂತ ಅಲೋಶಿಯಸ್ ಕಾಲೇಜಿನ ಸಸ್ಯ ವಿಜ್ಞಾನ  ವಿಭಾಗದ ಮುಖ್ಯಸ್ಥರಾಗಿದ್ದ ಪ್ರತಿಭಾವಂತ. ಅವರನ್ನು ಮಂಗಳೂರು ವಿಶ್ವವಿದ್ಯಾಲಯ ಮುಂದೆ ಆಹ್ವಾನಿಸಿ ರಿಜಿಸ್ಟ್ರಾರ್‌ ಆಗಿಸಿ, ಪರೀಕ್ಷಾ ನಿಯಂತ್ರಕನನ್ನಾಗಿ ನೇಮಿಸಿದಾಗ, ಆ ಕಾಲದಲ್ಲಿಯೇ ಪರೀಕ್ಷೆಗಳನ್ನು ಕಟ್ಟು ನಿಟ್ಟಾಗಿ ನಡೆಸಿದ್ದವರು. ತಮ್ಮ ನೇರ ನಿಷ್ಠುರ ಮತ್ತು ಕಠಿಣ ಕ್ರಮಗಳಿಂದಾಗಿ, ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳು ಮೊದಲೇ ಸಿಗದಿರುವಂತೆ ಕಡಕ್ ಆಗಿ ಕೆಲಸ ಮಾಡಿದ್ದರು. ಅಂದಿನ ವಿದ್ಯಾರ್ಥಿ ಸಮುದಾಯಕ್ಕೆ ವಿಲನ್ ಆಗಿದ್ದರು!. ಚಿಕ್ಕಪ್ಪ ರೈ ಅವರನ್ನು, ಚಿಕನ್ ಫ್ರೈ ಎಂದು ಗೂಂಡಾ ವಿದ್ಯಾರ್ಥಿಗಳು ಬೈದುಕೊಳ್ಳುತ್ತಿದ್ದರು ಎಂಬುದೂ ನನಗೀಗ ಹೆಮ್ಮೆ.

ಆಗಲೇ ಹೇಳಿದಂತೆ ನಮ್ಮ ಮನೆತನ ಮೂರು ಸಾವಿರ ಸೈನಿಕರನ್ನು ಉಳಿಸಿಕೊಂಡಿರುತ್ತಿತ್ತು. ಮಡಿಕೇರಿಯಿಂದ ಆಗಾಗ ವಿಟ್ಲ ಸೀಮೆಯ ಮೇಲೆ ಆಕ್ರಮಣವಾಗುತ್ತಿತ್ತು. ಒಮ್ಮೆ ವಿಟ್ಲ ಸೀಮೆಯ ಅರಸರ ಕೋರಿಕೆಯಂತೆ ನಮ್ಮಲ್ಲಿಂದ ಹೋದ ಸೈನಿಕರು, ಅವರನ್ನು ರಕ್ಷಣೆ ಮಾಡಿದರು. ಈ ಘಟನೆಯಿಂದ  ಖುಷಿಯಾದ ವಿಟ್ಲಸೀಮೆ ಅರಸರು, ಆ ಸೈನಿಕರಿಗೆ ಜಮೀನು ನೀಡಿ ಅಲ್ಲಿಯೇ ಉಳಿಸಿಕೊಂಡರಂತೆ!.

ಈಗಲೂ ಅದೆಷ್ಟೋ ಬಂಟ ಕುಟುಂಬಗಳು ತಮ್ಮ ಮೂಲ ‘ಇಚ್ಲಂಪಾಡಿ’  ಎಂದು ಹೇಳಿಕೊಳ್ಳುವುದನ್ನು ನಾವು ನೋಡಬಹುದು. ನಮ್ಮ ‘ಪಿಜ್ಜ’ ಕೋಟ್ಯನ್ ಆಳ್ವರಿಗೆ ಬ್ರಿಟನ್‍ನ ರಾಣಿಯೇ ಒಂದು ಅಧಿಕಾರ ಕೊಟ್ಟಿದ್ದರಂತೆ. ಅನ್ಯಾಯ ಅಕ್ರಮ ಪ್ರಕರಣಗಳಾದಾಗ,  ಮರಣದಂಡನೆಯನ್ನುಳಿದು ಬೇರಾವ ಶಿಕ್ಷೆಯನ್ನೂ ಅಪರಾಧಿಗೆ ನೀಡಬಹುದಾದ ಅಧಿಕಾರ ಅವರಿಗೆ ಇತ್ತು. ಅವರ ವಿವೇಕ ದೃಷ್ಟಿಯ ಬಗ್ಗೆ ರಾಣಿಗೆ ನಂಬಿಕೆ ಇತ್ತು ಎನ್ನುವುದಕ್ಕೊಂದು ಉದಾಹರಣೆ ಇದು.  ಈ ಎಲ್ಲಾ ಅಭಿಮಾನದ ಕತೆಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿದವು. 

ನನ್ನ ಪ್ರಾಥಮಿಕ ವಿದ್ಯಾಭ್ಯಾಸವೂ ಆಗಿದ್ದು ಕುಂಬ್ಳೆಯ ಕಾನ್ವೆಂಟ್‍ನಲ್ಲಿ. ಮನೆತನ, ಹಿರಿಯರ ಆದರ್ಶದ ಬದುಕುಗಳು ಬೀರಿದಷ್ಟೇ ಪ್ರಭಾವವನ್ನು ಈ ಕಾನ್ವೆಂಟ್‍ಗಳೂ ಬೀರಿದವು. ನಮ್ಮ ಮನೆತನದ ಬಗ್ಗೆ ತಿಳಿದಿದ್ದ ಕಾನ್ವೆಂಟ್ ಶಿಕ್ಷಕಿಯರೂ ನಮಗೆ ತುಂಟಾಟ ಮಾಡುವ ಅವಕಾಶವೇ ಕೊಡುತ್ತಿರಲಿಲ್ಲ. 

‘ಏಯ್ ನಂಜಪ್ಪ, ನಿನ್ನ ಮನೆಯವರೆಲ್ಲಾ ಗೊತ್ತಲ್ಲ.. ಹೇಳಬೇಕಾ?’ ಎಂಬ ಎಚ್ಚರಿಕೆ. ಅಲ್ಲಿ ಓರ್ವ ಸ್ವಿಸ್ ಮದರ್ ಮತ್ತು ಇಬ್ಬರು ಆಸ್ಟ್ರಿಯಾದ ನನ್‍ಗಳಿದ್ದರು. ಮತ್ತೆಲ್ಲರೂ ಭಾರತೀಯರೇ ಆಗಿದ್ದರು.  ನನ್ನ ಅಪ್ಪ ಆ ಕಾಲದಲ್ಲಿ ಮದ್ರಾಸ್  ಸರ್ಕಾರದ  ನೌಕರರಾಗಿದ್ದರು. ಅವರು ನಿವೃತ್ತರಾಗುವಾಗ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾಗಿದ್ದರು. ಮದ್ರಾಸ್ ಸರ್ಕಾರ ಅವರನ್ನು ಅನೇಕ ಕಡೆಗಳಿಗೆ ವರ್ಗಾವಣೆ ಮಾಡಿತ್ತು. ಭಾಷಾವಾರು ಪ್ರಾಂತ್ಯವಾಗಿ ಮೈಸೂರು ರಾಜ್ಯ ರಚನೆ ಆದಾಗ, ಮಂಗಳೂರಿಗೆ ವರ್ಗವಾಯಿತು. ಹಾಗೆ ನನ್ನ ವಿದ್ಯಾಭ್ಯಾಸಕ್ಕೂ ಮಂಗಳೂರಿನ ಮಿಲಾಗ್ರಿಸ್ ಹೈಸ್ಕೂಲ್ ಮತ್ತು ಅಲೋಶಿಯಸ್ ಕಾಲೇಜು ಬಾಗಿಲು ತೆರೆಯಿತು.

ಹಾಗೆಯೇ ಎನ್‌ಸಿಸಿ ಎಂಬ ಶಿಸ್ತಿನ ದಳವೊಂದರ ಪರಿಚಯವೂ ಆಯಿತು. 

(ನಿರೂಪಣೆ: ಅರೆಹೊಳೆ ಸದಾಶಿವರಾವ್‌)

ಮುಂದಿನ ವಾರ: ನನ್ನ ಆಯ್ಕೆ ಸೈನ್ಯವೇ ಆಗಿತ್ತು !

 

ಬರಹ ಇಷ್ಟವಾಯಿತೆ?

 • 6

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !