ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಭದ್ರ ಹೂಡಿಕೆ-ಚಿನ್ನಕ್ಕೆ ಸ್ಥಾನ ನಷ್ಟ ಭೀತಿ

Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೇವಲ ನಾಲ್ಕು ದಿನಗಳ ವಹಿವಾಟಿನಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು ಭರ್ಜರಿ 773 ಅಂಶಗಳಷ್ಟು ಏರಿಕೆ ದಾಖಲಿಸಿ 19 ಸಾವಿರದ ಗಡಿ ದಾಟಿ ಗುರುವಾರದಂದು 19,016ರಲ್ಲಿ ಅಂತ್ಯಗೊಂಡಿತು.  ಸಗಟು ಬೆಲೆ ಸೂಚ್ಯಂಕ ಶೇ 5.96ಕ್ಕೆ ಇಳಿದಿರುವದು ಈ ರೀತಿಯ ಚುರುಕು ಮೂಡಿಸುವಲ್ಲಿ ಕಳೆದ ವಾರ ಮಹತ್ತರ ಪಾತ್ರ ವಹಿಸಿದೆ. ಹಣದುಬ್ಬರ ಕಳೆದ 40 ತಿಂಗಳಲ್ಲಿ ದಾಖಲಾಗಿರುವ ಕನಿಷ್ಠ ಮಟ್ಟವಾಗಿದೆ ಎಂಬ ಅಂಶವು ಪೇಟೆಯಲ್ಲಿ ಆಶಾಜನಕವನ್ನು ಮೂಡಿಸಿದೆ.

ಮುಂದಿನ ಮೇ 3ರಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸುವ ಹಣಕಾಸು ನೀತಿಯಲ್ಲಿ ಬಡ್ಡಿದರ ಕಡಿತದ ನಿರೀಕ್ಷೆಗೆ ಈ ಏರಿಕೆ ಪೂರಕ ಅಂಶವಾಗಿದೆ. ಇದರೊಂದಿಗೆ ವಿಶ್ವ ಮಟ್ಟದಲ್ಲಿ ಉಂಟಾಗಿರುವ ಚಿನ್ನ-ಬೆಳ್ಳಿಗಳ ಕುಸಿತವೂ ಮಹತ್ತರಪಾತ್ರ ವಹಿಸಿದೆ. ಇಂತಹ ಕುಸಿತಕ್ಕೆ ವಹಿವಾಟುದಾರರ, ಊಹಿಕೆ ವ್ಯಾಪಾರದ ಚಟುವಟಿಕೆಯೇ ಕಾರಣವೆಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ.

ಆದರೂ ಸುಭದ್ರ ಹೂಡಿಕೆ ಎಂಬ ಪಟ್ಟದಿಂದ ಚಿನ್ನ-ಬೆಳ್ಳಿಗಳೂ ಹೊರಬಂದಿವೆ. ಮತ್ತಷ್ಟು ಕುಸಿತದ ಭಯದಿಂದ ಗೋಲ್ಡ್ ಫಂಡ್‌ನಿಂದ ಹಣ ಹಿಂತೆಗೆದುಕೊಳ್ಳಲು ಒತ್ತಡ ನಿರ್ಮಾಣವಾಗಿ ಮತ್ತಷ್ಟು ಕುಸಿತಕ್ಕೆ ಕಾರಣವಾಗುತ್ತಿದೆ. ಎರಡು ವರ್ಷಗಳಲ್ಲಿ ಇಂತಹ ಕುಸಿತ ಕಂಡಿರುವುದು ಸಣ್ಣ ಹೂಡಿಕೆದಾರರು  ಮತ್ತು ಗ್ರಾಹಕರಿಗೆ ಕೊಳ್ಳುವ ಕಾತುರತೆ ಸಹಜವಾಗಿದೆ. ಮತ್ತಷ್ಟು ಕುಸಿತದ ಸಾಧ್ಯತೆ ಕಡಿಮೆ ಇದ್ದು, ಸ್ಥಿರತೆ ಕಾಣಬಹುದಾಗಿದೆ.

ಕಳೆದ ವಾರ ಪ್ರಕಟವಾದ ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ಗಳ ಫಲಿತಾಂಶವು ಉತ್ತಮವಾಗಿದ್ದರೂ ಏರಿಕೆ ಕಾಣದಾಗಿದೆ. ಹೆಚ್‌ಸಿಎಲ್ ಟೆಕ್ನಾಲಜೀಸ್ ರೂ800ನ್ನು ದಾಟಿ ನಂತರ ಕುಸಿತವನ್ನು ಕಂಡು ರೂ735ರ ಸಮೀಪ ಅಂತ್ಯ ಕಂಡಿದೆ. ಅಂದರೆ ಕಂಪೆನಿಗಳು ಪ್ರಕಟಿಸುವ ಫಲಿತಾಂಶ ನಗಣ್ಯ.

ಅದು ಸಾಂಪ್ರದಾಯಿಕ ಕ್ರಿಯೆಯಾಗಿದ್ದು ವಹಿವಾಟುದಾರರ ಚಟುವಟಿಕೆಯ ರೀತಿಯೇ ಪೇಟೆಗೆ ದಾರಿದೀಪವಾಗಿದೆ. ಬ್ಯಾಂಕಿಂಗ್ ವಲಯದ ಪ್ರಮುಖ ಕಂಪೆನಿಗಳು ಉತ್ತಮ ಏರಿಕೆ ಕಂಡವು. ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್, ಕೆನರಾ ಬ್ಯಾಂಕ್, ಎಸ್‌ಬಿಐಗಳು ಉತ್ತಮ ಏರಿಕೆ ಕಂಡು ಮಿಂಚಿದವು.

ಸಂವೇದಿ ಸೂಚ್ಯಂಕವು 773 ಅಂಶಗಳಷ್ಟು ಏರಿಕೆಗೆ ಬೆಂಬಲವಾಗಿ ಮಧ್ಯಮ ಶ್ರೇಣಿ ಸೂಚ್ಯಂಕವು 118 ಅಂಶಗಳಷ್ಟು, ಕೆಳಮಧ್ಯಮ ಶ್ರೇಣಿಯ ಸೂಚ್ಯಂಕವು 103 ಅಂಶಗಳಷ್ಟು ಏರಿಕೆ ಕಂಡವು. ಇಂತಹ ಪವಾಡದ ಹಿಂದೆ ಎಂದಿನಂತೆ ವಿದೇಶಿ ವಿತ್ತೀಯ ಸಂಸ್ಥೆಗಳ ವ್ಯವಹಾರಿಕ ದಿಶೆಯೂ ಕಾರಣವಾಗಿ ಒಟ್ಟು ರೂ1,300 ಕೋಟಿಗೂ ಹೆಚ್ಚಿನ ಖರೀದಿ ಮಾಡಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ573 ಕೋಟಿ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ರೂ63.08 ಲಕ್ಷ ಕೋಟಿಯಿಂದ ರೂ64.98 ಲಕ್ಷ ಕೋಟಿಗೆ ಏರಿಕೆ ಕಂಡಿದೆ

ಲಾಭಾಂಶ ವಿಚಾರ
ಕ್ರಿಸಿಲ್ ಶೇ 300 (ಮು.ಬೆ. ರೂ.1), ಇಂಡಸ್ ಇಂಡ್ ಬ್ಯಾಂಕ್ ಶೇ 30, ಹೆಚ್.ಸಿ.ಎಲ್. ಟೆಕ್ನಾಲಜೀಸ್ ಶೇ 100 (ಮು.ಬೆ.ರೂ. 2), ಸಿ.ಎಂ.ಸಿ. ಶೇ 175 ಜಯಭಾರತ್ ಮಾರುತಿ ಶೇ 30 (ಮು.ಬೆ. ರೂ5), ಲಿಬರ್ಟಿ ಫಾಸ್ಪೇಟ್ಸ್ ಶೇ 30, ಪೂರ್ವಾಂಕರ ಪ್ರಾಜೆಕ್ಟ್ಸ್ ಶೇ 50 (ಮು.ಬೆ. ರೂ5). ರಿಲೈಯನ್ಸ್ ಇಂಡಸ್ಟ್ರೀಸ್ ಶೇ 90 (ನಿಗದಿತ ದಿನ: 14.5.13), ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಶೇ 1,300 (ಮು.ಬೆ. ರೂ1), ವಿಎಸ್‌ಟಿ ಇಂಡಸ್ಟ್ರೀಸ್ ಶೇ 625, ಯೆಸ್ ಬ್ಯಾಂಕ್ ಶೇ 60.

ಬೋನಸ್ ಷೇರಿನ ವಿಚಾರ
ಮಿಡ್‌ಲ್ಯಾಂಡ್ ಪೊಲಿಮರ್ಸ್ ಲಿ. ಕಂಪೆನಿಯು ಟಿ. ಗುಂಪಿನಲ್ಲಿದ್ದ 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಈ ಕಂಪೆನಿಯನ್ನು ಸುಲಭವಾಗಿ ಮಾರಾಟ ಮಾಡಲಾಗಲಿ, ಕೊಳ್ಳುವುದಾಗಲಿ ಸಾಧ್ಯವಿಲ್ಲ ಇದನ್ನು ಕಾಲ್ ಆಕ್ಷನ್ ಪದ್ದತಿಯಲ್ಲಿ ವ್ಯವಹರಿಸಬಹುದು.

ಹೊಸ ಷೇರಿನ ವಿಚಾರ
- ಸ್ಕಾಟ್ಸ್ ಗಾರ್ಮೆಂಟ್ಸ್ ಲಿ. ಕಂಪೆನಿಯು ಪ್ರತಿ ಷೇರಿಗೆ ರೂ130 ರಿಂದ 132 ರೂಪಾಯಿಗಳ ಅಂತರದಲ್ಲಿ ಏಪ್ರಿಲ್ 25 ರಿಂದ ಏಪ್ರಿಲ್ 29 ರವರೆಗೆ ಸಾರ್ವಜನಿಕ ವಿತರಣೆ ಮಾಡಲಿದೆ. ಕನಿಷ್ಠ 100 ಷೇರುಗಳು ಮತ್ತು ಅದರ ಗುಣಕಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಸಣ್ಣ ಹೂಡಿಕೆದಾರರಿಗೆ  ರೂ2 ಲಕ್ಷದವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಷೇರುಗಳು ಎನ್‌ಎಸ್‌ಇ ಮತ್ತು ಬಿಎಸ್‌ಇ ಎರಡರಲ್ಲೂ ಲೀಸ್ಟಿಂಗ್ ಆಗಲಿದೆ. ಕೇರ್ ರೇಟಿಂಗ್ ಸಂಸ್ಥೆಯು 3/5ರ ದರ್ಜೆ ನೀಡಿದೆ.

-ಡೆಲ್ಟಾ ಲೀಸಿಂಗ್ ಅಂಡ್ ಫೈನಾ  ನ್ಸ್ ಲಿ. ಕಂಪೆನಿಯು ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿದ್ದು 18 ರಿಂದ ಬಾಂಬೆ ಷೇರು ವಿನಿಮಯ ಕೇಂದ್ರದ `ಟಿ' ಗುಂಪಿನಲ್ಲಿ ವಹಿವಾಟು ಆರಂಭಿಸಿದೆ.

ಮುಖ ಬೆಲೆ ಸೀಳಿಕೆ ವಿಚಾರ
-ಮಿಡ್‌ಲ್ಯಾಂಡ್ ಪೊಲಿಮರ್ಸ್ ಕಂಪೆನಿಯು ಷೇರಿನ ಮುಖ ಬೆಲೆಯನ್ನು ರೂ10 ರಿಂದ ರೂ1ಕ್ಕೆ ಸೀಳಲಿದೆ.

-ಶ್ರೇಯ್ ಕೆಮಿಕಲ್ಸ್ ಲಿ. ಕಂಪೆನಿ ಷೇರಿನ ಮುಖ ಬೆಲೆಯನ್ನು ರೂ10 ರಿಂದ ರೂ. 5ಕ್ಕೆ ಸೀಳಲಿದ್ದು 29ನೇ ಏಪ್ರಿಲ್ ನಿಗದಿತ ದಿನವಾಗಿದೆ.

-ಆರೋ ಸೆಕ್ಯುರಿಟೀಸ್ ಲಿ ಕಂಪೆನಿಯು ಷೇರಿನ ಮುಖ ಬೆಲೆಯನ್ನು ರೂ10 ರಿಂದ ರೂ5ಕ್ಕೆ ಸೀಳಲು ಏಪ್ರಿಲ್ 25 ನಿಗದಿತ ದಿನವಾಗಿದೆ.

-ಕಂಪೆನಿಗಳಾದ ಲಿಂಕ್ಸ್ ಆನ್ ಇಂಟರ್ ನ್ಯಾಶನಲ್ ಮತ್ತು ಸಫಲ್ ಸೆಕ್ಯುರಿಟೀಸ್ ಲಿ. `ಟಿ' ಗುಂಪಿನಲ್ಲಿದ್ದು ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ5ಕ್ಕೆ ಸೀಳಲಿವೆ.

-ಅಪ್‌ಕೊ ಟೆಕ್ಸ್ ಲಿ. ಕಂಪೆನಿ ಷೇರಿನ ಮುಖ ಬೆಲೆಯ ಸೀಳುವಿಕೆಯನ್ನು 25 ರಂದು ಪರಿಶೀಲಿಸಲಿದೆ.

ಸಮೂಹ ಕಂಪೆನಿಗಳ ವಿಲೀನ
ಗ್ರೈಂಡ್‌ವೆಲ್ ನಾರ್ಟನ್ ಲಿ. ಕಂಪೆನಿಯೊಂದಿಗೆ ಸೆಂಟ್ ಗೋಬಿನ ಸೆಕ್ರ್ಯೂಟ್ ಇಂಡಿಯಾ ಲಿ. ವಿಲೀನಗೊಳ್ಳಲಿದ್ದು ಪ್ರತಿ 17 ಸೆಂಟ್ ಗೋಬಿನ್ ಷೇರಿಗೆ ರೂ5ರ ಮುಖ ಬೆಲೆಯ ಒಂದು ಷೇರನ್ನು ನೀಡಲಾಗುವುದು. ಇದರೊಂದಿಗೆ ಲೀಸ್ಟಿಂಗ್ ಆಗದೆ ಇರುವ ಎಸ್‌ಇಪಿಆರ್ ರಿಫ್ರಾಕಟರೀಸ್ ಮತ್ತು ಸೆಂಟ್‌ಗೋಬಿನ್ ಕ್ರಿಸ್ಟಲ್ಸ್ ಅಂಡ್ ಡಿಟೆಕ್ಟರ್ಸ ಲಿ. ಸಹ ಗ್ರೈಂಡ್‌ವೆಲ್ ನಾರ್ಟನ್‌ನಲ್ಲಿ ವಿಲೀನಗೊಳ್ಳಲಿದೆ.

ವಾರದ ವಿಶೇಷ

ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳು ಹಣ ಲೇವಾದೇವಿ ಮಾಡಿವೆ ಎನ್ನುವ ಆರೋಪ ಸುಳ್ಳು ಮತ್ತು ತನಿಖೆಯಿಂದ ಅದು ಕೇವಲ `ಕೆವೈಸಿ' ನಿಯಮದಲ್ಲಿ ಲೋಪವೆಂದು ಆರ್‌ಬಿಐ. ತಿಳಿಸಿದರೂ ಷೇರಿನ ಬೆಲೆ ಏರಿಕೆ ಕಾಣುತ್ತಿದೆ ಏಕೆ. ದಯವಿಟ್ಟ ವಿವರಿಸಿರಿ.

ಉತ್ತರ:
ಷೇರು ಪೇಟೆ ಕಳೆದ ವಾರದಲ್ಲಿ ಆಕರ್ಷಕ ಏರಿಕೆ ಪ್ರದರ್ಶಿಸಿದೆ. ಇದರಲ್ಲಿ ಎಲ್ಲಾ ವಲಯದ ಕಂಪೆನಿಗಳೂ ಚೇತರಿಕೆ ಕಂಡಿವೆ. ಇದರಂತೆ ಖಾಸಗಿ ವಲಯದ ಬ್ಯಾಂಕ್‌ಗಳೂ ಸಹ ಚೇತರಿಕೆ ಕಂಡಿವೆ. ಕಪ್ಪು ಹಣ ಪರಿವರ್ತನೆ ಆರೋಪ ಸುಳ್ಳು ಎಂದು ಮತ್ತು `ನಿಮ್ಮ ಗ್ರಾಹಕರನ್ನು ತಿಳಿ' ನಿಯಮದ ಪಾಲನೆಯಲ್ಲಿ ಲೋಪವಾಗಿದೆ ಎಂದು `ಆರ್‌ಬಿಐ' ತಿಳಿಸಿದೆ.

ಈ ಬ್ಯಾಂಕ್‌ಗಳಲ್ಲಿ ಹೆಚ್ಚಾಗಿ ಯುವ ಪೀಳಿಗೆಯ ಸಿಬ್ಬಂದಿಯನ್ನು ಅವರ ಶಿಕ್ಷಣ ಮಟ್ಟವನ್ನಾಧರಿಸಿ ಕೆಲಸಕ್ಕೆ ನೇಮಿಸಿಕೊಳ್ಳುವರು. ಅನುಭವೀ ಸಿಬ್ಬಂದಿ ಕೊರತೆ ಇದ್ದು ಯುವ ಸಿಬ್ಬಂದಿ ತಾವು ಪಡೆದ ಶೈಕ್ಷಣಿಕ ಜ್ಞಾನದ ಮೂಲಕ ಕಾರ್ಯನಿರ್ವಹಿಸುವರು. ಶಿಕ್ಷಣ ಮಟ್ಟದಲ್ಲೂ ಆರ್ಥಿಕ ರಂಗದ ಆಳವಾದ ಅಭ್ಯಾಸಕ್ಕೆ ಅವಕಾಶವಿರುವುದಿಲ್ಲ.

ಹಾಗಾಗಿ ತೋರಿಕೆಯ ಕಾರ್ಯವೇ ಹೆಚ್ಚು. ಈ ದಿಶೆಯಲ್ಲಿ ವಿಷಯ ತಜ್ಞರ ಮಾರ್ಗದರ್ಶನ ಒದಗಿಸಿದಲ್ಲಿ ಮಾತ್ರ ನಿಪುಣತೆಗೆ ಅವಕಾಶವಿರುತ್ತದೆ. ಇದನ್ನು ಸರಿಪಡಿಸಬಹುದಾದ ಲೋಪವೆಂದು ಪೇಟೆಯು ಕಡೆಗಣಿಸಿರಬಹುದು. ಮತ್ತೊಂದು ಪ್ರಮುಖ ಬಲವಾದ ಕಾರಣವೆಂದರೆ ಬ್ಯಾಂಕಿಂಗ್ ವಲಯವು, ಸಗಟು ಬೆಲೆ ಸೂಚ್ಯಂಕ ಗಮನಾರ್ಹವಾಗಿ ಇಳಿದಿರುವ ಕಾರಣ ಆರ್.ಬಿ.ಐ. ಬಡ್ಡಿ ದರ ಇಳಿಕೆಗೆ ಮುಂದಾಗಬಹುಎಂಬ ನಿರೀಕ್ಷೆಯಲ್ಲಿದೆ.

ಇದು ಬ್ಯಾಂಕಿಂಗ್ ವಲಯದ ಷೇರುಗಳ ಏರಿಕೆಗೆ ಕಾರಣವಾಗಿದೆ. ಇತರೆ ಖಾಸಗಿ ವಲಯದ ಇಂಡಸ್ ಇಂಡ್ ಬ್ಯಾಂಕ್, ಯೆಸ್ ಬ್ಯಾಂಕ್, ಕರ್ನಾಟಕ ಬ್ಯಾಂಕ್‌ಗಳೂ ಸಹ ಏರಿಕೆ ಕಂಡಿವೆ. ಇಲ್ಲಿ ಹೆಚ್ಚಾಗಿ ವಲಯಾಧಾರಿತ ಏರಿಕೆ ಕಾರಣವಾಗಿದೆ. ಮುಂದಿನ 25ನೇ ಗುರುವಾರವು ಮೂಲಾಧಾರಿತ ಪೇಟೆಯ ಚುಕ್ತಾ ದಿನವಾಗಿದ್ದು, 24 ರಂದು ಮಹಾವೀರ ಜಯಂತಿಯ ಕಾರಣ ವಹಿವಾಟು ಇರುವುದಿಲ್ಲ.

ಹಾಗಾಗಿ ವಹಿವಾಟುದಾರರು ತಮ್ಮ ಅವಶ್ಯಕತೆಯನ್ನು ಸರಿಪಡಿಸಿ ಕೊಳ್ಳುವುದಕ್ಕೆ ಮುಂದಾಗುವುದೂ ಈ ಏರಿಕೆಗೆ ಕಾರಣವಾಗಿದೆ. ಏರಿಕೆಯ ಮಟ್ಟವಾಗಲಿ ಅಥವಾ ಇಳಿಕೆಯ ಮಟ್ಟವಾಗಲಿ ಅವು ಅಲ್ಪಾಯು, ಬೇಗ ದಿಶೆ ಬದಲಿಸುವ ಕಾರಣ, ಅವಕಾಶಗಳನ್ನು ಕಲ್ಪಿಸಿ ಕೊಡುತ್ತಿರುತ್ತವೆ ಎಂಬುದು ವಹಿವಾಟಿಗೆ ಮುಂಚೆ ನೆನಪಿನಲ್ಲಿಡಬೇಕಾದುದು ಅತ್ಯವಶ್ಯಕ.

- 98863-13380
(ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT