ಶುಕ್ರವಾರ, ಡಿಸೆಂಬರ್ 6, 2019
18 °C

ಅರಿತು ಹೂಡಿಕೆ ಮಾಡಿ, ಅನುಸರಿಸಬೇಡಿ

ಕೆ. ಜಿ. ಕೃಪಾಲ್
Published:
Updated:
ಅರಿತು ಹೂಡಿಕೆ ಮಾಡಿ, ಅನುಸರಿಸಬೇಡಿ

ಷೇರುಪೇಟೆಯಲ್ಲಿ ಕಂಡುಬಂದ ಅಸಹಜ ರೀತಿಯ ಏರಿಳಿತಗಳನ್ನು ಕಂಡಾಗ, ಚಟುವಟಿಕೆ ನಡೆಸುವಾಗ ಅರಿತು ಹೂಡಿಕೆಮಾಡಿ ಅನುಸರಿಸಬೇಡಿ ಎಂಬುದನ್ನು ಪೇಟೆಯ ನಿಯಂತ್ರಕರು ಎಚ್ಚರಿಕೆ ನೀಡುತ್ತಿರುವುದರ ಉದ್ದೇಶದ ಅರಿವಾಗುತ್ತದೆ.

ಪೇಟೆಯಲ್ಲಿ ಷೇರುಗಳ ಬೆಲೆಗಳು ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿರುವಾಗ ಲಾಭದ ನಗದೀಕರಣಕ್ಕೆ ಕಾರಣವನ್ನು ಕೇಂದ್ರೀಯ ಬಜೆಟ್  ಒದಗಿಸಿದೆ. ಪೇಟೆಯಲ್ಲಿ ಒದಗಿ ಬರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಲಾಭದ ನಗದೀಕರಣ ಮಾಡಿಕೊಳ್ಳದಿದ್ದಲ್ಲಿ ಆಗಬಹುದಾದ ಅವಸ್ಥೆಗೆ ಶುಕ್ರವಾರದ ಪೇಟೆ ಉತ್ತಮ ನಿದರ್ಶನ. ಏರಿಳಿತಗಳಿಗೆ ಕಾರಣಗಳು ಕಂಪನಿಗಳ ಆಂತರಿಕ ಅಂಶಗಳಿಂದಾಗಿರದೆ ಕೇವಲ ಬಾಹ್ಯ ಕಾರಣಗಳು ಪ್ರೇರಕವಾಗಿರುವ ಕಾರಣ ರಭಸದ ಏರಿಳಿತಗಳು ಉಂಟಾಗುತ್ತವೆ. ಪೇಟೆಯು ಗರಿಷ್ಠದಲ್ಲಿರುವಾಗ ನಿರೀಕ್ಷಿತ ಲಾಭದ ಮಟ್ಟ ಸೀಮಿತವಾಗಿರಬೇಕು, ಹಣ ಕೈಯಲ್ಲಿದೆ ಎಂದು ದುಡುಕಿ ನಿರ್ಧರಿಸದೆ ಅವಕಾಶಕ್ಕೆ ಕಾಯಬೇಕು.

ಹಿಂದಿನ ವಾರವಷ್ಟೇ ಸಂವೇದಿ ಸೂಚ್ಯಂಕ 36 ಸಾವಿರದ ಗಡಿ ದಾಟಿದಾಗ ಕೇವಲ ನಾಲ್ಕು ದಿನಗಳಲ್ಲಿ ಒಂದು ಸಾವಿರ ಅಂಶ ಗಳ ಏರಿಕೆ ಕಂಡಿದೆ ಎಂಬ ಪ್ರಚಾರ ದೊರೆಯಿತು.  ಈವಾರ ಅದೇ ವೇಗದಲ್ಲಿ ಒಂದು ಸಾವಿರ ಅಂಶಗಳ ಇಳಿಕೆಗೊಳಗಾಗಿದೆ. 

ವಿಸ್ಮಯಕಾರಿ ಅಂಶವೆಂದರೆ ಡಿಸೆಂಬರ್ 29  ರಂದು ಕೊನೆಗೊಂಡ ವಾರ ಸಂವೇದಿ ಸೂಚ್ಯಂಕವು 34,056 ರಲ್ಲಿತ್ತು. ಅಂದು ಪೇಟೆಯ ಬಂಡವಾಳ ಮೌಲ್ಯವು ₹151.73 ಲಕ್ಷ ಕೋಟಿಯಷ್ಟಿತ್ತು, ಫೆಬ್ರುವರಿ 2 ರಂದು ಸಂವೇದಿ ಸೂಚ್ಯಂಕ 35,056 ರಲ್ಲಿರುವಾಗ ಅಂದರೆ ಒಂದು ಸಾವಿರ ಅಂಶಗಳ ಏರಿಕೆಯಲ್ಲಿದ್ದರೂ ಪೇಟೆಯ ಬಂಡವಾಳ ಮೌಲ್ಯವು ₹148.54 ಲಕ್ಷ ಕೋಟಿಯಲ್ಲಿದೆ.

ಅಂದರೆ ಅಗ್ರಮಾನ್ಯ ಕಂಪನಿಗಳ ಚಟುವಟಿಕೆ ಏರಿಕೆ ಕಂಡು ಸಂವೇದಿ ಸೂಚ್ಯಂಕ ಏರಿಕೆ ಕಂಡಿದೆ. ಆದರೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕದ ಕಂಪನಿಗಳು ಮಾರಾಟದ ಒತ್ತಡಕ್ಕೊಳಗಾಗಿರುವುದೇ ಕಾರಣವೆನ್ನಬಹುದು. ಶುಕ್ರವಾರದ ಪೇಟೆಯ ಕುಸಿತಕ್ಕೆ ಸುಮಾರು ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳ ಮೌಲ್ಯವು ಕರಗಿದೆ.

ಟಾಟಾ ಸ್ಟೀಲ್ ಕಂಪನಿ ಷೇರಿನ ಬೆಲೆಯು ಪೇಟೆಯ ಕುಸಿತದೊಂದಿಗೆ ₹669 ರವರೆಗೂ ಕುಸಿಯಿತು. ಪೇಟೆಯ ಮಾರಾಟದ ಭರದಲ್ಲಿ ಕಂಪನಿಗಳು ಪ್ರಕಟಿಸಿದ ಸಾಧನೆಯ ಅಂಕಿ ಅಂಶಗಳು ಪ್ರಭಾವಿಯಾಗದೆ ಲಾರ್ಸನ್ ಆ್ಯಂಡ್ ಟೋಬ್ರೊ,  ರಿಲಯನ್ಸ್ ಇಂಡಸ್ಟ್ರೀಸ್ , ಬಜಾಜ್ ಆಟೋ, ಮಾರುತಿ ಸುಜುಕಿ ಭಾರಿ ಕುಸಿತಕ್ಕೊಳಗಾದವು.

ಪೇಟೆಯಲ್ಲಿ ಏರಿಕೆಯೊಂದಿಗೆ ಬಂಡವಾಳ ಕರಗುವ ವೇಗವು ಇದೆ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ಪ್ರದರ್ಶಿಸಿದ ಬಾಂಬೆ ರೇಯಾನ್ ಫ್ಯಾಷನ್ಸ್ ಲಿಮಿಟೆಡ್ ಕಂಪನಿಯು ಸತತವಾದ ಇಳಿಕೆಯೊಂದಿಗೆ ₹65 ರ ಸಮೀಪಕ್ಕೆ ಕೊನೆಗೊಂಡಿದೆ. ಈ ಷೇರು ಡಿಸೆಂಬರ್ ಮಧ್ಯಂತರದಲ್ಲಿ ₹255 ರ ಸಮೀಪ ಇತ್ತು.  ಈ ವಾರದಲ್ಲಿ, ಡಿಸೆಂಬರ್ ತಿಂಗಳಲ್ಲಿ ಬೋನಸ್ ಷೇರು ವಿತರಿಸಿದ ವಕ್ರಾಂಗಿ ಲಿಮಿಟೆಡ್ ಕಂಪನಿಯ ಷೇರಿನ ಬೆಲೆ ಜನವರಿ 24 ರಂದು ₹515 ರ ಗರಿಷ್ಟದಲ್ಲಿತ್ತು. ಅಲ್ಲಿಂದ ಕುಸಿಯುತ್ತಾ ಬಂದು ಫೆಬ್ರವರಿ 2ರಂದು ₹263 ರ ಸಮೀಪದಲ್ಲಿದೆ.

ಮಾರಾಟದ ಒತ್ತಡ ಕೆಲವು ಷೇರುಗಳ ಮೇಲೆ ಎಂತಹ ದುಷ್ಪರಿಣಾಮ ಬೀರಿದೆ ಎಂಬುದಕ್ಕೆ ಶುಕ್ರವಾರ ಪಿಸಿ ಜ್ಯೂವೆಲರ್‌ ಕಂಪನಿ ಷೇರಿನ ಬೆಲೆ ಏರಿಳಿತ ಉತ್ತಮ ನಿದರ್ಶನವಾಗಿದೆ. ಅಂದು ದಿನದ ಆರಂಭದಲ್ಲಿ ₹474 ರಲ್ಲಿದ್ದ ಷೇರಿನ ಬೆಲೆಯು ಸುಮಾರು ಒಂದು ಗಂಟೆಯ ವಹಿವಾಟಿನ ನಂತರ ₹195 ರ ಸಮೀಪಕ್ಕೆ ಕುಸಿದು ನಂತರ ಪುಟಿದೆದ್ದು  ₹425 ರ ಸಮೀಪಕ್ಕೆ ಬಂದು ₹365 ರ ಸಮೀಪ ಕೊನೆಗೊಂಡಿದೆ. ಈ ಷೇರಿನ ಬೆಲೆಯು ಜನವರಿ 16 ರಂದು ₹600 ರ ಸಮೀಪವಿತ್ತು.  ಪ್ರತಿ ಷೇರಿಗೆ ₹3 ರ ಲಾಭಾಂಶ ಪ್ರಕಟಿಸಿದ ಎಂಆರ್‌ಎಫ್‌ ಷೇರಿನ ಬೆಲೆಯು ಪ್ರತಿ ಷೇರಿಗೆ ಸುಮಾರು ₹2,654 ರಷ್ಟು ಕುಸಿದಿದೆ. ಅದೇ ಪ್ರತಿ ಷೇರಿಗೆ ₹5 ರ ಲಾಭಾಂಶ ಪ್ರಕಟಿಸಿದ ಗ್ರಾಫೈಟ್ ಇಂಡಿಯಾ ₹36 ರಷ್ಟು ಇಳಿಕೆ ಕಂಡಿತು.

ಕಳೆದ ಒಂದು ತಿಂಗಳಲ್ಲಿ ಎ ಗುಂಪಿನ ಷೇರುಗಳಾದ ರಿಲಯನ್ಸ್ ಕ್ಯಾಪಿಟಲ್ ಸುಮಾರು ಶೇ 26,  ಹಿಂದುಸ್ಥಾನ್ ಕಾಪರ್ ಶೇ 24, ರೆಲಿಗೇರ್‌ ಎಂಟರ್‌ ಪ್ರೈಸಸ್  ಶೇ 42, ಬಾಂಬೆ ಡೈಯಿಂಗ್  ಶೇ 31, ರೇನ್ ಇಂಡಸ್ಟ್ರೀಸ್ ಶೇ 23 , ರಿಲಯನ್ಸ್ ಇನ್ಫ್ರಾ ಶೇ 21,  ಭಾರತಿ ಏರ್‌ಟೆಲ್ ಶೇ 20, ರಷ್ಟು  ಕಳೆದ ಒಂದೇ ವಾರದಲ್ಲಿ ವಕ್ರಾಂಗಿ ಶೇ 48 ರಷ್ಟು, ಪಿ ಸಿ ಜ್ಯುವೆಲ್ಲರ್ ಶೇ35 ರಷ್ಟು  ಕುಸಿತ ಕಂಡಿವೆ. ಆದರೆ ಕನ್ಸಾಯಿ ನೆರೊಲ್ಯಾಕ್ ಷೇರು ಕಳೆದ ಒಂದು ವಾರದಲ್ಲಿ ₹465 ರ ಸಮೀಪದಿಂದ ₹515 ರವರೆಗೂ ಏರಿಕೆ ಕಂಡು ₹499 ರ ಸಮೀಪವಿದೆ.

ಐಟಿಸಿ ಕಂಪನಿ ಷೇರಿನ ಬೆಲೆ ₹267 ರ ಸಮೀಪದಿಂದ ₹290 ರವರೆಗೂ ಏರಿಕೆ ಪಡೆದು ₹275 ರ ಸಮೀಪ ಕೊನೆಗೊಂಡಿದೆ. ಇವುಗಳಲ್ಲದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗಮನಾರ್ಹ ಏರಿಕೆ ಕಂಡಿದೆ. ಅಂದರೆ ಪೇಟೆಯನ್ನು ಹೂಡಿಕೆಯ ದೃಷ್ಟಿಯಿಂದ  ನೋಡುವ ಬದಲು ವ್ಯಾವಹಾರಿಕ ದೃಷ್ಟಿಯಿಂದ ನೋಡಿದಲ್ಲಿ ಉತ್ತಮ ಅವಕಾಶಗಳು ಮಧ್ಯಂತರದಲ್ಲಿಯೂ ಸಹ ಒದಗಿಬರುತ್ತವೆ.

ಬೋನಸ್ ಷೇರು: ಸರ್ಕಾರಿ ವಲಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಲಾ  ಒಪಲಾ ಆರ್ ಜಿ ಲಿಮಿಟೆಡ್  ಕಂಪನಿ ಈ ತಿಂಗಳ 5 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಹೊಸ ಷೇರು ಅಹಮದಾಬಾದ್‌ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಕಂಪನಿ ಎಸ್ಆರ್‌ಯು ಸ್ಟೀಲ್ಸ್ ಲಿಮಿಟೆಡ್ ಕಂಪನಿ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ವಹಿವಾಟಿಗೆ 2ರಿಂದ ಬಿಡುಗಡೆಯಾಗಿದೆ.

(ಮೊ: 9886313380, ಸಂಜೆ 4.30 ರನಂತರ)

**

ವಾರದ ಮುನ್ನೋಟ

ಕೇಂದ್ರ ಬಜೆಟ್‌ನಲ್ಲಿ ದೀರ್ಘಾವಧಿಯ ಬಂಡವಾಳ ಗಳಿಕೆ ಮೇಲೆ ಶೇ 10 ರಷ್ಟು ತೆರಿಗೆ ವಿಧಿಸಿದ್ದರಿಂದ ಮಾರಾಟ ಒತ್ತಡ ಉಂಟಾಗಿ, ಇತ್ತೀಚಿಗೆ ಹೆಚ್ಚು ಏರಿಕೆ ಕಂಡಿದ್ದಂತಹ ಷೇರುಗಳು ಭಾರಿ ಇಳಿಕೆ ಕಂಡವು. ಈ ವಾತಾವರಣದಲ್ಲಿ ಕೆಲವು ಕಂಪನಿಗಳು ವಿನಾಕಾರಣ ಭಾರಿ ಕುಸಿತಕ್ಕೊಳಗಾಗಿ ಗಾಬರಿ ಮೂಡಿಸಿ ನಂತರ ಪುಟಿದೇಳುವ ಸಾಧ್ಯತೆ ಇರುತ್ತದೆ ಎಂಬುದನ್ನು ಶುಕ್ರವಾರದ ಪಿ ಸಿ ಜ್ಯುವೆಲ್ಲರ್ ಷೇರಿನ ಬೆಲೆಯಲ್ಲುಂಟಾದ ಉಬ್ಬರವಿಳಿತಗಳೇ ಸಾಕ್ಷಿ.

ಇದುವರೆಗೂ ಅಲ್ಪಾವಧಿಯ ಗಳಿಕೆ ತೆರಿಗೆ ಶೇ 15 ಮತ್ತು ದೀರ್ಘಾವಧಿಯ ಬಂಡವಾಳ ಗಳಿಕೆ ತೆರಿಗೆಯಿಂದ ವಿನಾಯ್ತಿ ಇದ್ದು ಈಗ ಶೇ10 ರಷ್ಟು ತೆರಿಗೆ ವಿಧಿಸಿರುವುದು, ಇಂದಿನ ಗರಿಷ್ಠ ಹಂತದಲ್ಲಿರುವ ಪೇಟೆಗೆ ಹೆಚ್ಚು ಪ್ರಭಾವಿಯಾಗಿರದು. ಬದಲಾಗಿ ಹೆಚ್ಚಿನ ಏರಿಳಿತಗಳನ್ನು ನೋಡಬಹುದಾಗಿದೆ. ಕಾರಣ ವ್ಯತ್ಯಾಸ ಕೇವಲ ಶೇ 5 ಮಾತ್ರ. ಒಂದೊಂದು ದಿನ ಕೆಲವು ಕಂಪನಿಗಳ ಷೇರುಗಳು ಶೇ 20-30 ರಷ್ಟು ಏರಿಳಿತ ಪ್ರದರ್ಶಿಸುವ ಈ ಪೇಟೆಗೆ ಶೇ 5 ಪ್ರಭಾವಿಯಾಗಲಾರದು.

ಒಎನ್‌ಜಿಸಿ, ಆಯಿಲ್ ಇಂಡಿಯಾ, ಎಸ್‌ಬಿಐ, ಟಾಟಾ ಸ್ಟೀಲ್‌,  ಟಾಟಾ ಮೋಟರ್ಸ್,  ಕ್ಯಾಸ್ಟ್ರಾಲ್ ಇಂಡಿಯಾ, ಅಪೋಲೋ ಟೈರ್,  ಲುಪಿನ್, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್,  ಅರವಿಂದೋ ಫಾರ್ಮಾ, ಎಸಿಸಿ, ಬಿಎಚ್‌ಇಎಲ್‌, ಬಾಂಬೆ ಡೈಯಿಂಗ್‌, ಕ್ಯಾಂಡಿಲ್ಲ,  ಗ್ಲೇನ್ ಮಾರ್ಕ್ ಫಾರ್ಮಾ, ರಿಲಯನ್ಸ್ ಕ್ಯಾಪಿಟಲ್ ಮುಂತಾದವು ಪ್ರಕಟಿಸಬಹುದಾದ ತಮ್ಮ ಸಾಧನೆಯ ಅಂಶಗಳು ಸಹ ಪೇಟೆಯ ದಿಸೆಯನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಮತ್ತಷ್ಟು ಏರಿಳಿತ ಕಂಡು ಬರುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)