ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ತಿರುಳು

Last Updated 16 ಸೆಪ್ಟೆಂಬರ್ 2019, 20:20 IST
ಅಕ್ಷರ ಗಾತ್ರ

ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆ? |
ಮಧುರಭಾವ ಪ್ರೇಮ ದಯೆಯೆಲ್ಲ ಬರಿದೆ ||
ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ |
ಬದುಕಿನಲಿ ತಿರುಳೇನು ? – ಮಂಕುತಿಮ್ಮ || 185 ||

ಪದ-ಅರ್ಥ: ಹೃದಯಜೀವನಕಿನಿತು=ಹೃದಯಜೀವನಕೆ+ಇನಿತು(ಇಷ್ಟು), ವಿಧಿಯಂಗಡಿಯೊಳದನು=ವಿಧಿಯ+ಅಂಗಡಿಯೊಳು+ಅದನು, ತಿರುಳು=ಸತ್ವ

ವಾಚ್ಯಾರ್ಥ: ಹೃದಯದ ಜೀವನಕ್ಕೆ ಸ್ವಲ್ಪವೂ ಬೆಲೆಯಿಲ್ಲವೇ? ಅದಕ್ಕೇನೂ ಫಲವಿಲ್ಲವೇ? ಪ್ರೇಮ, ದಯೆ, ಮಧುರಭಾವಗಳೆಲ್ಲ ಬರಿದಾದವುಗಳೆ? ವಿಧಿಯ ಅಂಗಡಿಯಲ್ಲಿ ಅವನ್ನೆಲ್ಲ ಕಸ ಎಂದು ತಳ್ಳುವುದಾದರೆ ಈ ಬದುಕಿನ ಸತ್ವವೇನು?

ವಿವರಣೆ: ಭಾವ ಮತ್ತು ಬುದ್ಧಿಗಳು ಮನುಷ್ಯ ಜೀವನದ ಎರಡು ಪ್ರಮುಖ ಅಂಶಗಳು. ಪ್ರತಿಯೊಬ್ಬ ಮನುಷ್ಯನಲ್ಲಿ ಇವೆರಡೂ ಇವೆ ಮತ್ತು ಅವನು ಬದುಕುವ ರೀತಿಯನ್ನು ನಿರ್ದೇಶಿಸುತ್ತವೆ. ಬದುಕು ಭಾವ ಪ್ರಧಾನವಾದರೆ ವ್ಯಕ್ತಿ ಪ್ರೇಮ, ದಯೆ, ನಿಸರ್ಗ ಪ್ರೇಮ ಮುಂತಾದ ಮಧುರಭಾವಗಳನ್ನು ವೃದ್ಧಿಸಿಕೊಳ್ಳುತ್ತ ಬೆಳೆಯುತ್ತಾನೆ. ಆದರೆ ಬುದ್ಧಿಪ್ರಧಾನವಾದರೆ ಈ ಅಂಶಗಳು ಗೌಣವಾಗುತ್ತ, ಹಣಗಳಿಕೆ, ಅಧಿಕಾರ, ನಿಯಂತ್ರಣ, ಸ್ವಾರ್ಥಗಳು ಪ್ರಬಲವಾಗುವ ಸಾಧ್ಯತೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಮಧುರಭಾವಗಳು ಕಡಿಮೆಯಾಗುತ್ತಿವೆ ಎಂಬ ಭಾವನೆ ದಟ್ಟವಾಗುತ್ತಿದೆ.

ಜಗತ್ತನ್ನೇ ಗೆಲ್ಲಬೇಕೆಂದು ಹೊರಟ ಒಬ್ಬ ವ್ಯಕ್ತಿಯ ಅಧಿಕಾರಲಾಲಸೆಗೆ ಅದೆಷ್ಟು ಲಕ್ಷ ಜೀವಗಳು ವಿಷಗಾಳಿಯ ಕೋಣೆಗಳಲ್ಲಿ, ಯಾತನಾಶಿಬಿರಗಳಲ್ಲಿ ಕೊರಗುತ್ತ, ನರಳುತ್ತ ಉಸಿರುಗಳನ್ನು ಕಳೆದುಕೊಂಡವೊ! ಅಲ್ಲಿ ದಯೆಗೆ ಏನಾದರೂ ಬೆಲೆ ಇತ್ತೇ? ತನ್ನ ಧೀರೋದ್ಯಮದಿಂದ ಸಾಮ್ರಾಜ್ಯವನ್ನು ಬೆಳೆಸುತ್ತ ನಡೆದ ಮನುಷ್ಯ ವ್ಯವಹಾರಕ್ಕಾಗಿ ಮಾಡಿದ ಸಾಲಕ್ಕಿಂತ ಅವನ ಆಸ್ತಿಯ ಬೆಲೆ ನಾಲ್ಕು ಪಟ್ಟು ಇದ್ದರೂ ಯಾಕೆ ತನ್ನನ್ನು ಸಾವಿನಂಗಡಿಗೆ ತಳ್ಳಿಕೊಂಡ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಬುದ್ಧಿಯ, ಹಣದ ಕೊರತೆ ಕಾಣುವುದಿಲ್ಲ, ಬದಲಾಗಿ ಆ ಕ್ಷಣಕ್ಕೆ ಅವನಿಗೆ ದೊರೆಯಬಹುದಾಗಿದ್ದ ದಯೆಯ, ಪ್ರೇಮದ, ಅಭಯದ ಕೊರತೆಯಾಯಿತೇನೋ ಎನ್ನಿಸುತ್ತದೆ.

ತನ್ನ ಹತ್ತು ನಿಮಿಷದ ಕಾಮದಾತುರಕ್ಕೆ ಒಂದು ಹೆಣ್ಣು ಜೀವದ ಇಡೀ ಬದುಕನ್ನೇ ನರಕವಾಗಿಸುವ, ಪ್ರಾಣಹೀರುವ ರಾಕ್ಷಸೀ ಕೃತ್ಯದಲ್ಲಿ ದಯೆಗೆ, ಪ್ರೇಮಕ್ಕೆ ಸ್ಥಾನವಿದೆಯೇ? ಪ್ರವಾಹದಲ್ಲಿ ಮನೆಕೊಚ್ಚಿ ಹೋದಾಗ ನಿಂತನೆಲೆಯಲ್ಲಿ ಮನೆಯನ್ನು ತೊರೆದು ಜೀವ ಉಳಿಸಿಕೊಳ್ಳಲು ಜೀವಗಳು ಪರದಾಡುತ್ತಿರುವಾಗ, ಅವರ ಬಿದ್ದ ಮನೆಯ ಮೇಲೆ ದಾಳಿ ಮಾಡಿ, ಇದ್ದ ಬಿದ್ದ ಕೊಂಚ ಚಿನ್ನವನ್ನೋ, ವಸ್ತುಗಳನ್ನು ಕಳುವು ಮಾಡುವ ನಿಷ್ಕರುಣಿಗಳಿಗೆ ಹೃದಯಜೀವನದ ಬೆಲೆ ಇದೆಯೇ? ವಂಶೋದ್ಧಾರಕನಿಗಾಗಿ ತಹತಹಿಸುತ್ತ ಕಾಯುವಾಗ ತಾಯಗರ್ಭದಲ್ಲಿದ್ದದ್ದು ವಂಶೋದ್ಧಾರಕಿಯಾಗಬಹುದೆಂಬುದನ್ನು ಮರೆತು ಹೊರಜಗತ್ತಿಗೆ ಬರುವ ಮೊದಲೇ ಅದರ ಉಸಿರು ನಿಲ್ಲಿಸುವ ತಂದೆ-ತಾಯಿಯರಿಗಾದರೂ ದಯೆಯ ಸುಳಿವು ದೊರೆಯುವುದುಂಟೇ?

ಅದನ್ನು ಕಗ್ಗ ಕೇಳುತ್ತದೆ. ದಯೆ, ಮಾರ್ದವತೆ, ಅಂತ:ಕರಣ, ಸಂಬಂಧಗಳು ಇಂಥವನ್ನೆಲ್ಲ ವಿಧಿ ತನ್ನ ಅಂಗಡಿಯೊಳಗೆ ಕಸ ಎಂದು ಹೊರಗೆಸೆಯುವುದಾದರೆ ಮನುಷ್ಯ ಜೀವನದ ಸಾರವೇನು? ಕ್ರೌರ್ಯ, ಅಧಿಕಾರಲಾಲಸೆ, ಹಣಗಳಿಕೆ, ಕಾಮಗಳೇ ವಿಜ್ರಂಭಿಸಿ ಮಾನವತೆ ಮರೆಯಾಗುವುದೇ ಬದುಕಿನ ಗುರಿಯೇ? ಕಗ್ಗ ನಿರಾಸೆಯ ನಿಟ್ಟುಸಿರು ಬಿಡುತ್ತಿಲ್ಲ. ಬದಲಾಗಿ ಆಗುತ್ತಿರುವುದಕ್ಕೆ ಎಚ್ಚರಿಕೆಯನ್ನು ನೀಡುತ್ತಿದೆ. ಈಗ ಆಗುತ್ತಿರುವ ಅ-ಸಹ್ಯವಾದ ನಡವಳಿಕೆ ಪ್ರಪಂಚಕ್ಕೆ ಒಳ್ಳೆಯದನ್ನು ಮಾಡಲಾರದು. ಅದು ಬದುಕಿನ ಉದ್ದೇಶವೂ ಅಲ್ಲ. ಆದ್ದರಿಂದ ಮತ್ತೆ ದಯೆ, ಪ್ರೇಮ, ಮಧುರಭಾವನೆಗಳನ್ನು ನಿಮ್ಮ ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಾಪಿಸಿಕೊಳ್ಳಿ ಎಂದು ಪ್ರಚೋದಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT