ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಂತ್ರ ಸರ್ಕಾರದ ಹೆಜ್ಜೆಗಳು

Last Updated 17 ಮೇ 2018, 19:30 IST
ಅಕ್ಷರ ಗಾತ್ರ

‘ಮತದಾನ ನಮ್ಮ ಮನೆಯ ಹೆಣ್ಣುಮಕ್ಕಳಷ್ಟೇ ಶ್ರೇಷ್ಠ. ಯಾರೂ ಮಾರಿಕೊಳ್ಳಬಾರದು’. ಈ ಮಾತನ್ನು, ಆಗತಾನೆ ಮತದಾನದ ಪಾಠ ಕಲಿಯುತ್ತಿದ್ದ ಈ ದೇಶದ ಪ್ರಜೆಗಳಿಗೆ ಅಂಬೇಡ್ಕರ್ ಹೇಳಿದರು. ರಾಜ್ಯದ ಈಗಿನ ತೀರ್ಪು ಅತಂತ್ರವಾಗಿದೆ. ಅದು ಕುದುರೆ ವ್ಯಾಪಾರಕ್ಕೆ ದಾರಿ ಮಾಡುತ್ತಿದೆ. ಪ್ರಜಾಪ್ರಭುತ್ವಾನುಸಾರ ಒಂದಾಗಿ ವೈರತ್ವ ದೂರ ನೂಕಿ ಆಳುತ್ತೇವೆಂದು ಹೊರಟಿರುವ ಪಕ್ಷಗಳೆರಡನ್ನು ಕುರಿತು ದೇಶದ ಪ್ರಧಾನಿಯು ‘ಏನೇ ಆಗಲಿ ಇದಕ್ಕೆ ಬಿಡುವುದಿಲ್ಲ’ ಎನ್ನುತ್ತಿದ್ದಾರೆ. ಯಥಾರೀತಿ ಪ್ರತಿಪಕ್ಷ ಕಾಂಗ್ರೆಸ್‌ಮುಕ್ತ ಮಾಡಲು ಹೊರಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಮುಕ್ತ ಮಾಡುವುದು ಸರ್ವಾಧಿಕಾರಿ ನೀತಿ ಎಂದು ಬೇರೆ ಹೇಳಬೇಕಾಗಿಲ್ಲ.

ಮತ ನೀಡುವ ಪ್ರಜೆಗಳ ಹೃದಯದೊಳಗೆ ನೀತಿ ಎಂಬ ಹಕ್ಕಿ ಗೂಡುಗಳಿವೆ. ಮತ ಕೇಳುವ ನಾಯಕರ ಎದೆಯೊಳಗೆ ಈ ಯಾವುದಕ್ಕೂ ಸ್ಥಳವಿಲ್ಲ. ಹಾಗಾಗಿ ಯಾವ ರಾಜಕೀಯ ಪಕ್ಷದ ಮೇಲೂ ಜನರಿಗೆ ನಂಬಿಕೆಯಿಲ್ಲ. ಈ ನಡುವೆ ಜಾತಿಯ ಲೆಕ್ಕಾಚಾರ ದೇಶದ ಮನು ಪಂಚಾಂಗವನ್ನು ಬಿಚ್ಚಿ ನೋಡುತ್ತಾ ಕೂಡಿ, ಕಳೆದು, ಗುಣಿಸಿ, ಭಾಗಿಸಿ ಚುನಾವಣಾ ತೀರ್ಪು ನೀಡಿಯಾಗಿದೆ. ಈ ಲೆಕ್ಕದ ಮೊತ್ತವು ಭ್ರಷ್ಟಾಚಾರದ ಗಂಟಿನಲ್ಲಿ ತೆಕ್ಕೆ ಹಾಕಿಕೊಂಡಿದೆ. ಗೆದ್ದ ಮೇಲೆ ರಾಜಕಾರಣಿಗಳದೆಲ್ಲ ಒಂದೇ ಜಾತಿ. ಅಧಿಕಾರ ಮತ್ತು ಹಣ ಹುಡುಕಾಟದ ಜಾತಿ. ಇದು ಪ್ರಜಾಪ್ರಭುತ್ವ ನೀತಿಗೆ ಎಚ್ಚರಿಕೆಯ ಗಂಟೆ. ಇದು, ಗಳಿಸಿಕೊಂಡಿರುವ ಸ್ವಾತಂತ್ರ್ಯವನ್ನು ಪುನಃ ಆಧುನಿಕ ಅರಸರಿಗೆ ಒಪ್ಪಿಸಿ ಆಳಾಗುವ ಪರಿ. ‘ಪ್ರಜಾಪ್ರಭುತ್ವ ಉಳಿದರೆ ನಾವೆಲ್ಲ ಖಂಡಿತವಾಗಿ ಅದರ ಪ್ರಯೋಜನವನ್ನು ಪಡೆಯುತ್ತೇವೆ. ಅದು ಸತ್ತರೆ ನಮ್ಮೆಲ್ಲರ ಸರ್ವನಾಶ ಖಂಡಿತ’ ಎಂದು ಅಂಬೇಡ್ಕರ್ ಎಚ್ಚರಿಕೆ ನೀಡಿದ್ದಾರೆ.

ಮೊನ್ನೆ ಹಾಸನ ಕಡೆ ಹೋಗಿದ್ದೆ. ಕೆಂಪೇಗೌಡರ ಬೆಂಗಳೂರು ಸೀಮೆಯ ಅಬ್ಬರ, ಉಬ್ಬರ, ಇಳಿತಗಳೆಲ್ಲ ಅಲ್ಲಿಯೂ ಪ್ರತಿನಿಧಿಸುತ್ತಿದ್ದವು. ಇಡೀ ರಾಜ್ಯವೆಲ್ಲಾ ಹೀಗೇ ಇದೆ ಎಂದು ಜನರು ಅನ್ನುತ್ತಿದ್ದರು. ಹೌದು ಇಡೀ ದೇಶ ಸಾಗುತ್ತಿರುವ ಪರಿ ಇದು. ‘ಪ್ರಜಾತಂತ್ರದಲ್ಲಿ ಅತಿ ದುರ್ಬಲನಿಗೂ ಅತ್ಯಂತ ಬಲಶಾಲಿಗೂ ಇರುವಷ್ಟೇ ಅವಕಾಶ ಇರಬೇಕು’ ಎಂಬುದು ಗಾಂಧೀಜಿ ಆಲೋಚನೆ. ಇಂದು ಧನಬಲವಿಲ್ಲದ ದುರ್ಬಲನಿಗೆ ರಾಜಕೀಯ ಒಂದು ಕನಸು. ಇದೇ ಹಾಸನ ಭಾಗದಲ್ಲಿ ಆಗೊಮ್ಮೆ ಸತ್ಯವಂತರೂ, ದುರ್ಬಲರೂ, ಅಲ್ಪಸಂಖ್ಯಾತರೂ, ಶೆಟ್ಟರು, ಜೈನರು, ರೈತರು ಧನಿಕರಿಗೆದುರಾಗಿ ನಿಂತು ಶಾಸನಸಭೆಯಲ್ಲಿ ಗುಟುರು ಹಾಕುತ್ತಿದ್ದ ಕಾಲವಿತ್ತು. ದೇಶದಲ್ಲಿ ರಾಜಕೀಯ ನೀತಿ ಇಷ್ಟು ಹದಗೆಟ್ಟಿರಲಿಲ್ಲ. ಮತಪೆಟ್ಟಿಗೆಯೊಳಗಿನ ಮತಗಳು ಇವರನ್ನು ಈಗ ಅಣಕಿಸುತ್ತಿವೆ. ಈ ಮಾತು ರಾಜ್ಯಕ್ಕೂ ದೇಶಕ್ಕೂ ಅನ್ವಯಿಸುತ್ತಿದೆ. ಮಲೆನಾಡಿನ ಕಾಗೋಡು ತಿಮ್ಮಪ್ಪನವರ ಸೋಲು ಇದಕ್ಕೆ ಇತ್ತೀಚಿನ ಉದಾಹರಣೆ.

ಬೆಂಗಳೂರು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್ ಕುಳಗಳು, ಗಣಿಗುಣಿ ರಕ್ಕಸರು, ಕ್ರಿಮಿನಲ್ ವೀರಾಧಿವೀರರು, ಸಿರಿಗರ ಹೊಡೆದವರು, ಭ್ರಷ್ಟಾಚಾರದ ಥೈಲಿ ಹೊತ್ತು ಎಲ್ಲೆಲ್ಲೂ ಹರಿದಾಡಿದ್ದಾರೆ. ಶಾಸನಸಭೆಯಲ್ಲಿ ಬಾಚಿ ಬಳಿಯುವ ಅರ್ಥಶಾಸ್ತ್ರ ವಿದ್ಯಾರ್ಥಿಗಳಾಗಲು ಈಗ ನೂಕುನುಗ್ಗಲು. ಮತದಾರರು ಆಡಲಾರರು, ಅನುಭವಿಸಲಾರರು. ಮತದಾರರ ಎದೆಗೂಡೊಳಗೆ ಏನೋ ಒಂದು ರೀತಿಯ ಚಡಪಡಿಕೆ. ‘ಹಾಳಾಗಿ ಹೋಗಲಿ ಬಿಡಿ’ ಎನ್ನುತ್ತಾರೆ. ಈ ಶಾಪ ದೇಶಕ್ಕೆ ಒಳ್ಳೆಯದಲ್ಲ. ಒಬ್ಬರು ಬಸವಣ್ಣನ ಹೆಸರು ಹೇಳುತ್ತಲೇ ಜಾತಿಯ ಹಂಗಿನಲ್ಲಿ ಕುಳಿತ ಕುರ್ಚಿಯಿಂದ ಏಳಲಾರದವರಾಗಿ, ಪ್ರಧಾನಿ ಕೈ ಹಿಡಿದು ಏಳುವಷ್ಟು ಸೋತರೂ ಜನಸೇವೆಗೆಂದು ಪುನಃ ಅಧಿಕಾರಕ್ಕೆ ಹಾತೊರೆಯುತ್ತಾರೆ. ಇನ್ನೊಬ್ಬರು ಗರ್ವದ ಸಮಾಜವಾದ ಹೇಳುತ್ತಲೇ ಪುತ್ರನ ಸಮೇತ ತುಸು ಗೆದ್ದು ಬಂದು ಅಧಿಕಾರ ಹಿಡಿಯಲಾರದೆ ಕೈಕಟ್ಟಿ ಜನರ ಮುಂದೆ ನಿಂತಿದ್ದಾರೆ. ಮಗದೊಬ್ಬರು ಜಾತಿಯನ್ನು ಅಪ್ಪಿಕೊಂಡು ಜನರಿಂದ ಹೃದಯ ಕಸಿ ಮಾಡಿಸಿಕೊಂಡು ಆ ಇಬ್ಬರ ಜಗಳದಲ್ಲಿ ಗದ್ದುಗೆ ಹಿಡಿಯಲು ಹೊರಟಿದ್ದಾರೆ. ಈ ಎಲ್ಲವೂ ಭಾರತ ರಾಜಕಾರಣಕ್ಕೆ ಶುಭಸೂಚನೆಗಳೇನಲ್ಲ. ಇದು ಪ್ರಜೆಗಳಿಗೆ ಶಾಶ್ವತ ಪರಿಹಾರವಲ್ಲ.

ಪ್ರಜಾಪ್ರಭುತ್ವವೆಂದರೆ ದುರ್ಬಲರ, ದೀನದಲಿತರ ದನಿಯಾಗಬೇಕು. ಧರ್ಮ, ಜಾತಿ ಮೀರಿದ ಮತಚೀಟಿಯಾಗಬೇಕು. ಆ ಚೀಟಿಯೊಳಗೆ ವಿಶ್ವವನ್ನು ಅಲುಗಿಸುವ ಭವಿಷ್ಯ ಬರೆದಿರಬೇಕು. ದೇಶವು ಸ್ವಾತಂತ್ರ್ಯ ಪಡೆವಾಗ ಇದೆಲ್ಲದರ ಹಂಬಲವಿತ್ತು. ಚಾಣಕ್ಯ, ಮನು, ಶಂಕರಾದಿಗಳನ್ನು ಪರಿಷ್ಕರಿಸಿಕೊಳ್ಳುವ ವಿಶ್ವಾಸವಿತ್ತು. ವರ್ತಮಾನದಲ್ಲಿ ಇದಾಗುವುದಿಲ್ಲ ಎಂದು ಸಿನಿಕರಾಗಬೇಕಾಗಿಲ್ಲ. ನಾಲ್ಕು ವರ್ಷದ ಕೆಳಗೆ ದಿಲ್ಲಿಯಲ್ಲಿ ಇಂತಹ ಚಂಡಮಾರುತ ಬೀಸಿದ ಉದಾಹರಣೆ ನಮ್ಮ ಮುಂದಿದೆ. ಭಾರತದ ನೆಲಕ್ಕೆ ಎಂತಹ ಭ್ರಷ್ಟ ಹಾಗೂ ರೌದ್ರ ಪ್ರಸಂಗಗಳನ್ನು ಅರಗಿಸಿಕೊಳ್ಳುವ ಶಕ್ತಿ ಇದೆ.

ಈಗಂತೂ ರಾಜಕಾರಣಕ್ಕೆ ಪಕ್ಷ ಒಂದು ನೆಪವಾಗಿದೆ. ಅದರ ಮೇಲೆ ಬಾಜಿ ಕಟ್ಟುವ ಪಣದಾಟ. ಪಕ್ಷ ಕುರಿತ ಹೊಗಳಿಕೆ, ತೆಗಳಿಕೆ... ಪ್ರಧಾನಿಯಿಂದ ಸಾಮಾನ್ಯ ಕಾರ್ಯಕರ್ತನವರೆಗೆ ಬರೀ ಕೂಗಾಟ. ಅದರಲ್ಲಿ ಪ್ರಜಾಪ್ರಭುತ್ವವಿಲ್ಲ. ಅದು ಶಕುನಿ ಆಡಿಸುವ ದಾಳ. ವರ್ತಮಾನದಲ್ಲಿ ಚುನಾವಣೆಗಳು ಜಾತಿ– ಧರ್ಮಗಳ ಕೆಸರಲ್ಲಿ ಕರ್ಣನ ರಥದಂತೆ ಹೂತು ಹೋಗಿವೆ. ಈಗ ಆಧುನಿಕ ಅನೇಕ ಈಸ್ಟ್ ಇಂಡಿಯಾ ಕಂಪನಿಗಳಿಗೆ ದೇಶ ಅಡವಾಗುತ್ತಿದೆ. ವಿದೇಶಿಯರನ್ನು ಹೊಡೆದಟ್ಟಿದಂತೆ ಈ ದೇಶೀಯರನ್ನು ಎಲ್ಲಿಗೆ ಅಟ್ಟುವುದು? ಇದು ದೇಹದೊಳಗಿನ ಅರ್ಬುದ ರೋಗ. ಮನುಷ್ಯ ಸದಾಕಾಲ ಕೆಸರಲ್ಲಿ ಹೂತುಹೋಗುವುದಿಲ್ಲ ನಿಜ. ಸತ್ಯವಂತರು ಅರಿವು ನೀಡಿದರೆ ತಾವರೆ ಎಲೆ ಮೇಲಿನ ನೀರಿನಂತೆ ತೇಲಿ ಬರುವ ಶಕ್ತಿ ದುರ್ಬಲರಿಗೆ ಇದೆ. ತಾವರೆ ಹೂವಿನಡಿಯಲ್ಲಿ ಎಳೆದಷ್ಟೂ ಸತ್ವಯುತ ಬೇರುಂಟು, ದಂಟುಂಟು. ತಾವರೆಗೂ ಕಮಲಕ್ಕೂ ದಿಲ್ಲಿ– ಹಳ್ಳಿಯಷ್ಟು ಅಂತರವುಂಟು. ಅಂದಾಗ ಮುಂದಿನ ವರ್ಷವೇ ಲೋಕಸಭಾ ಚುನಾವಣೆ ಬರುತ್ತಿದೆ. ಮತದಾರರು ಎಚ್ಚರದಿಂದಿರಬೇಕೆಂದು ಇಂದಿನ ಚುನಾವಣೆ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT