ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ರಾಜಕೀಯದ ವಿವಿಧ ಮಜಲು

ಆಹಾರದ ವಿಚಾರದಲ್ಲಿ ಸುಳ್ಳಿನ ಕಂತೆಗಳನ್ನು ಹಬ್ಬಿಸುವ ಕೆಲಸ ನಡೆದಿದೆ
Last Updated 1 ಏಪ್ರಿಲ್ 2019, 20:41 IST
ಅಕ್ಷರ ಗಾತ್ರ

ಜನರು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ಬಗ್ಗೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚರ್ಚೆ ನಡೆದಿದೆ. ಜನರ ಆಹಾರ ಸಂಸ್ಕೃತಿಯ ಮೇಲೆ ದಾಳಿಗಳು ನಡೆಯುತ್ತಿವೆ. ಒಂದು ಸಮುದಾಯದ ಆಹಾರ ಪದ್ಧತಿಯನ್ನು ಮತ್ತೊಬ್ಬರ ಮೇಲೆ ಹೇರುವ ಸತತ ಪ್ರಯತ್ನ ನಡೆಯುತ್ತಿದೆ.

ಕರ್ನಾಟಕದಲ್ಲಿ ಪಡಿತರದಲ್ಲಿ ಗೋಧಿ ಬೇಡ, ಬದಲಿಗೆ ಇಲ್ಲಿನ ಆಹಾರ ಧಾನ್ಯಗಳಾದ ಜೋಳ ಮತ್ತು ರಾಗಿಯನ್ನು ಕೊಡಬೇಕು ಎಂದು ರಾಜ್ಯದುದ್ದಕ್ಕೂ ಜನರು ಬೇಡಿಕೆಯನ್ನಿಟ್ಟಿದ್ದರು. ಗೋಧಿಯನ್ನೇನೋ ನಿಲ್ಲಿಸಿತು ಸರ್ಕಾರ. ಆದರೆ ರಾಗಿಯಾಗಲೀ, ಜೋಳವಾಗಲೀ ಅದರ ಜಾಗವನ್ನು ತುಂಬಲೇ ಇಲ್ಲ. ಒಂದು ವರ್ಷದಿಂದಲೂ ಬರೀ ಅಕ್ಕಿಯನ್ನು ಕೊಡಲಾಗುತ್ತಿದೆ. ಅನ್ಯಮಾರ್ಗವಿಲ್ಲದೆ ಜನರು ಅದನ್ನೇ ಹೊತ್ತೊಯ್ಯುತ್ತಿದ್ದಾರೆ.

ಶಾಲೆ ಮತ್ತು ಅಂಗನವಾಡಿಗಳಲ್ಲಿಯೂ ಪೂರಕ ಆಹಾರ, ಮಧ್ಯಾಹ್ನದ ಬಿಸಿಯೂಟ ಕೊಡುತ್ತಿದೆ ಸರ್ಕಾರ. ಆಹಾರವನ್ನು ಗುತ್ತಿಗೆದಾರರ ಮೂಲಕ ಪೂರೈಸುವ ಬದಲು ಸ್ಥಳೀಯ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಪೂರೈಕೆ ಮಾಡಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಆದರೆ ಬೇರೆ ಬೇರೆ ಮಠಗಳು, ಪ್ರಭಾವಿ ಸಂಸ್ಥೆಗಳು ಈಗಾಗಲೇ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಪೂರೈಸುತ್ತಿವೆ. ಈ ಸಂಬಂಧ ಸರ್ಕಾರದೊಂದಿಗೆ ಒಪ್ಪಂದ ಕುದುರಿಸಿಕೊಂಡಿವೆ. ಆಹಾರ ರಾಜಕೀಯದ ಇನ್ನೊಂದು ಮಜಲು ಇರುವುದು ಇಲ್ಲಿಯೇ. ಶಾಲಾ ಮಕ್ಕಳಿಗೆ, ಅಂಗನವಾಡಿ ಮಕ್ಕಳಿಗೆ ಕೊಡುವ ಆಹಾರದಲ್ಲಿ ಮೊಟ್ಟೆ ಇರಬೇಕು ಎನ್ನುವುದು ಬಹುಜನರ ಬಹುದಿನಗಳ ಬೇಡಿಕೆ. ಶೇಕಡ 95ರಷ್ಟು ಮಕ್ಕಳಿಗೆ ಹಾಗೂ ಅವರ ತಂದೆ–ತಾಯಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ಬೇಕು. ಆದರೆ ಈ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಇನ್ನೂವರೆಗೆ ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲೇ ಬಿಬಿಎಂಪಿಯ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಸರಬರಾಜು ಮಾಡುವ ‘ಇಸ್ಕಾನ್’ ಸಂಸ್ಥೆಯು ಮೊಟ್ಟೆಯಲ್ಲ; ಬೆಳ್ಳುಳ್ಳಿ, ಉಳ್ಳಾಗಡ್ಡೆ (ಈರುಳ್ಳಿ) ಕೂಡ ತಾಮಸ ಆಹಾರ, ತಾನು ಮಕ್ಕಳಿಗೆ ಅಂಥವನ್ನು ಕೊಡುವುದಿಲ್ಲವೆಂದು ಪಟ್ಟು ಹಿಡಿದಿದೆ.

ಬಹುಜನರು ಏನನ್ನು ತಿನ್ನಬೇಕು, ಅಲ್ಪಸಂಖ್ಯಾತರು ಏನನ್ನು ತಿನ್ನಬಾರದು ಎಂದು ಕೆಲವರು ನಿರ್ಧರಿಸುವುದೇ ಈ ರಾಜಕೀಯ. ಇದನ್ನು ವಿರೋಧಿಸಲೋಸುಗವೇ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ, ದೆಹಲಿಯ ಜೆಎನ್‌ಯುದಲ್ಲಿ ವಿದ್ಯಾರ್ಥಿಗಳು ದನದ ಮಾಂಸದ ಅಡುಗೆ ಮಾಡುವ ಹಬ್ಬ ಆಚರಿಸಿದ್ದಾರೆ. ಅದನ್ನು ಬಲಪಂಥೀಯ ವಿದ್ಯಾರ್ಥಿ ಸಮುದಾಯ ವಿರೋಧಿಸಿದೆ.ಜ್ಞಾನದ ಹೆಬ್ಬಾಗಿಲುಗಳಾಗಬೇಕಾಗಿದ್ದ ವಿಶ್ವವಿದ್ಯಾಲಯಗಳು ಜಾತಿ– ಅಂತಸ್ತು– ವರ್ಗ ಭೇದದ ಕನ್ನಡಿಗಳೇ ಆಗಿ ಉಳಿದವು. ಅವುಗಳಲ್ಲಿ ದಲಿತರು, ಆದಿವಾಸಿಗಳಿಗೆ ಪ್ರವೇಶ ದೊರಕುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ. ಮುಖ್ಯ ಸ್ಥಾನಗಳಲ್ಲಿ ಯಾವಾಗಲೂ ಮೇಲ್ವರ್ಗದ ಜನರೇ ಇದ್ದರು. ಕೆಳವರ್ಗದವರು ನೇಮಕವಾದರೆ ಅವರೂ ಮೇಲ್ವರ್ಗದ ಚಿಂತನೆಯ ಬಿಂಬಗಳೇ. ಸಮಾಜದಲ್ಲಿನ ಮೂಢನಂಬಿಕೆಗಳು, ತಾರತಮ್ಯಗಳು ಇಲ್ಲಿ ದಟ್ಟವಾಗಿಪ್ರತಿಫಲಿಸುತ್ತಿವೆ.

ಹಾಗಾದರೆ ಬಲಪಂಥೀಯರಲ್ಲಿ ಮಾಂಸದ ಅಡುಗೆ ತಿನ್ನುವವರು ಇಲ್ಲವೇ? ಅದನ್ನೇಕೆ ಕೀಳು, ಹೊಲಸು ಎಂದು ಭಾವಿಸಲಾಗುತ್ತಿದೆ? ಸಸ್ಯಾಹಾರಿಗಳಷ್ಟೇ ಏಕೆ; ಮಾಂಸದ ಅಡುಗೆ ತಿನ್ನುವ ಅನೇಕರಲ್ಲಿ ಅದು ಅಪವಿತ್ರ, ಅದು ಮೈಲಿಗೆ ಎಂಬ ಭಾವನೆ ಇಂದಿಗೂ ಸ್ಥಿರವಾಗಿದೆ. ಹಾಗಾಗಿಯೇ ಹಬ್ಬದ ಮೊದಲ ದಿನ ಮಾಂಸದ ಅಡುಗೆ ಮಾಡುವುದಿಲ್ಲ. ಮರುದಿನ ‘ಕರಿ’ ಎಂದು ಪ್ರತ್ಯೇಕವಾಗಿ ಮಾಡುತ್ತಾರೆ. ಮಾಂಸದ ಅಡುಗೆಗೆ ಪ್ರತ್ಯೇಕ ಪಾತ್ರೆಗಳು. ಆ ಪಾತ್ರೆಗಳನ್ನು ಮೂಲೆಯಲ್ಲಿಡುತ್ತಾರೆ. ಯಾವ ದಿನ ಪವಿತ್ರ ಎಂದುಕೊಳ್ಳುತ್ತಾರೋ ಅಂದು ಆ ಅಡುಗೆ ಮಾಡುವುದಿಲ್ಲ. ಸಸ್ಯಾಹಾರ ಶ್ರೇಷ್ಠ, ಸಸ್ಯಾಹಾರಿಗಳು ಶ್ರೇಷ್ಠ, ಪವಿತ್ರ ಎನ್ನುವ ಭಾವನೆ ಆ ಮಟ್ಟಿಗೆ ಬೇರೂರಿದೆ.

‘ವಿದೇಶಗಳಲ್ಲಿಯೂ ಸಸ್ಯಾಹಾರದತ್ತ ಒಲವು ಹೆಚ್ಚಾಗುತ್ತಿದೆ. ಸಸ್ಯಾಹಾರವೇ ಪ್ರಮುಖವಾಗಿರುವ ಭಾರತದ ಬಗ್ಗೆ ವಿಶೇಷ ಗೌರವವಿದೆ’ ಎಂಬಂಥ ಸುಳ್ಳಿನ ಕಂತೆಗಳನ್ನು ಹಬ್ಬಿಸುವ ಕೆಲಸ ನಡೆದಿದೆ. ಗೋಮಾಂಸ ನಿಷೇಧದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಮಾಂಸಾಹಾರ ಸೇವಿಸುವ ಪ್ರಗತಿಪರರಲ್ಲಿ ಹಲವರು ತಾವು ಗೋಮಾಂಸ ತಿನ್ನುವುದಿಲ್ಲವೆಂದೇ ಭಾಷಣ ಆರಂಭಿಸುತ್ತಿದ್ದರು. ಇದು, ಪ್ರಗತಿಪರರಲ್ಲಿಯೂ ಕೀಳರಿಮೆ, ಭಯ ಅದೆಷ್ಟು ಆಳವಾಗಿ ಬೇರೂರಿದೆ ಎನ್ನುವುದರ ಪ್ರತೀಕ.

ಮಾಂಸಾಹಾರ ಅಪವಿತ್ರ ಎನ್ನುವ ವಿಚಾರದಲ್ಲಿಯೇ ಅದನ್ನು ತಿನ್ನುವವರು ಅಪವಿತ್ರರು, ಕೀಳು ಎನ್ನುವ ಭಾವನೆಯೂ ಸೇರಿದೆ. ಹಾಗಾಗಿ, ಬಹುಜನರು ತಮ್ಮ ಆಹಾರಾಭ್ಯಾಸವನ್ನು ಬಿಡಲಾರರೆಂದು ಗೊತ್ತಿದ್ದರೂ ಅದನ್ನು ಸಾರ್ವಜನಿಕವಾಗಿ ಹೀಗಳೆಯುವುದು ನಡೆದೇ ಇದೆ. ಹಂದಿ ಮಾಂಸದಲ್ಲಿ ಪೌಷ್ಟಿಕಾಂಶ ಇಲ್ಲವೆಂದೂ ದನದ ಮಾಂಸ ಸೋಂಕು ರೋಗಗಳಿಗೆ ಮೂಲವೆಂದೂ ನಡೆದಿದ್ದ ಪ್ರಚಾರ ಇದರಲ್ಲೊಂದು. ಇದರ ಸತ್ಯಾಸತ್ಯಗಳನ್ನು ಅರಿಯುವುದಕ್ಕಾಗಿ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗೋಮಾಂಸದಲ್ಲಿರುವ ಪೌಷ್ಟಿಕಾಂಶಗಳ ವೈಜ್ಞಾನಿಕ ವಿವರಣೆಯನ್ನು ಹೈದರಾಬಾದಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂಟ್ರಿಷನ್‌ದಿಂದ ಕೇಳಿದ್ದರು. ಸಂಸ್ಥೆಯ ಉಪನಿರ್ದೇಶಕಿಯಾಗಿದ್ದ ವೀಣಾ ಶತ್ರುಘ್ನ ಅವರು ಆ ವಿಚಾರವನ್ನು ಅಲ್ಲಗಳೆದು, ಅದು ಕೆಲವರ ಸಂಚು ಅಷ್ಟೇ ಎಂದು ವಾದಿಸಿದರು. ಬಡವರ ಪೌಷ್ಟಿಕಾಂಶದ ಕೊರತೆಯನ್ನು ಜನರಿಗೆ ಕೈಗೆಟಕುವ ಮಾಂಸಾಹಾರದ ಮೂಲಕ ನೀಗಿಸಬಹುದು ಎಂಬ ವಿಚಾರ ತಮ್ಮಸಂಸ್ಥೆಯ ನೀತಿಗಳಲ್ಲೂ ಪ್ರಸ್ತಾಪವಾಗಿಲ್ಲ ಎನ್ನುತ್ತಾರೆ ಅವರು. ಸಸ್ಯಾಹಾರಿಗಳ ಮನ ನೋಯಿಸಬಾರದು ಎಂಬ ಧೋರಣೆಯೇ ಎಲ್ಲಾ ಕಡೆ ಪ್ರಧಾನವಾಗಿ ಬೇರೂರಿದೆ. ಅದು, ಎಲ್ಲಾ ನೀತಿಗಳಲ್ಲೂ ಹಾದು ಬಂದಿದೆ. ಅಷ್ಟೇ ಅಲ್ಲ; ಅದನ್ನೇ ಪಾಲಿಸಬೇಕೆಂಬ ಅಲಿಖಿತ ನಿಯಮ ಇದೆ. ಅದಕ್ಕೆ ಸಂಸ್ಕೃತಿಯ ಮುಖವಾಡ. ಮಾಂಸಾಹಾರ ತಿನ್ನುವವರು ಕ್ರೂರಿಗಳಾಗಿರುತ್ತಾರೆ, ಅದು ರಾಜಸ ಗುಣ, ಸಸ್ಯಾಹಾರ ತಿನ್ನುವವರು ಬಹಳ ಮೃದು ಸ್ವಭಾವದವರಾಗಿರುತ್ತಾರೆ, ಸಸ್ಯಾಹಾರವು ಸಾತ್ವಿಕ ಗುಣವನ್ನು ಪ್ರಚೋದಿಸುತ್ತದೆ, ಅದಕ್ಕೆ ವೈಜ್ಞಾನಿಕ ದಾಖಲೆಗಳಿವೆ ಎನ್ನುವ ಸುಳ್ಳು ವಾದಗಳು ಬೇರೆ. ಘಾಟು ವಾಸನೆ, ಪರಿಮಳಗಳುಳ್ಳ ಬೆಳ್ಳುಳ್ಳಿ, ಉಳ್ಳಾಗಡ್ಡೆಗಳನ್ನು ಕೂಡ ತಾಮಸ ಆಹಾರವೆಂದು ಹಣೆಪಟ್ಟಿ ಕಟ್ಟಿ ಅವನ್ನು ಸಹ ಮಕ್ಕಳಿಗೆ ಆಹಾರದಲ್ಲಿ ನಿರಾಕರಿಸುತ್ತಿರುವುದು ಅನ್ಯಾಯ.

ಇಸ್ಕಾನ್ ಸಂಸ್ಥೆಯು ಬೆಳ್ಳುಳ್ಳಿ, ಉಳ್ಳಾಗಡ್ಡೆಗಳನ್ನು ಬಳಸದೆಯೇ ತೀರಾ ‘ಸಾತ್ವಿಕ’ ಆಹಾರವನ್ನು ಮಕ್ಕಳಿಗೆ ಉಣಬಡಿಸುತ್ತಿರುವುದನ್ನು ಪ್ರಶ್ನಿಸಿ ಹಲವು ಸಂಘಟನೆಗಳು, ರಾಜ್ಯ ಆಹಾರ ಆಯೋಗಕ್ಕೆ ಪತ್ರ ಬರೆದವು. ಊಟ ರುಚಿ ಇಲ್ಲದಿದ್ದರೆ ಮಕ್ಕಳು ಚೆಲ್ಲುತ್ತಾರೆ, ಹೊಟ್ಟೆತುಂಬ ಉಣ್ಣುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರವು ಇಸ್ಕಾನ್ ಸಂಸ್ಥೆಗೆ ಪ್ರತಿನಿತ್ಯ ತರಕಾರಿ, ಈರುಳ್ಳಿ, ಬೆಳ್ಳುಳ್ಳಿಗಳನ್ನು ಹಾಕಿ ಬೇಯಿಸಿದ ಗುಣಮಟ್ಟದ (ಮೆನು ಪ್ರಕಾರ) ಬಿಸಿಯೂಟ ಮಾಡಿಕೊಡಬೇಕು ಎಂದು ಖಡಾಖಡಿ
ಯಾಗಿ ಹೇಳಿತು. ಆದರೆ ಪರಿಣಾಮ ಶೂನ್ಯ. ಇಸ್ಕಾನ್‌ ಇಂದು ಬೆಂಗಳೂರಿನಲ್ಲಿ ಅಂದಾಜು 16 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡುತ್ತಿದೆ. 2020ರ ವೇಳೆಗೆ ದೇಶದಾದ್ಯಂತ 50 ಕೋಟಿ ಮಕ್ಕಳಿಗೆ ಬಿಸಿಯೂಟ ಕೊಡುವ ಗುರಿ ಹೊಂದಿದೆ.

ಇದೇನೇ ಇರಲಿ, ದನದ ಮಾಂಸ ಸಲ್ಲದು, ಸಸ್ಯಾಹಾರಿಗಳಿಗೆ ತತ್ತಿ ವರ್ಜ್ಯ, ಇನ್ನೊಂದು ವರ್ಗಕ್ಕೆ ಬೆಳ್ಳುಳ್ಳಿ, ಉಳ್ಳಾಗಡ್ಡೆ ಆಗುವುದಿಲ್ಲ ಎಂಬ ಕಾರಣಗಳಿಗೆ ಮಕ್ಕಳಿಗೆ ಬಿಸಿಯೂಟದಲ್ಲೂ ಪೌಷ್ಟಿಕ ಆಹಾರ ನಿರಾಕರಣೆ ಆಗುತ್ತಿರುವುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT