ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು: ಈಗ ತೀವ್ರ ಪೈಪೋಟಿ ಕಣ

ಪಕ್ಷೇತರರ ‘ಪ್ರಬಲ’ ಕಣವಾಗುವ ಸೂಚನೆ; ಯಾರು ಯಾರ ಕಾಲೆಳೆಯುವರ ಎಂಬ ಕುತೂಹಲ
Last Updated 25 ಏಪ್ರಿಲ್ 2018, 12:59 IST
ಅಕ್ಷರ ಗಾತ್ರ

ತಿಪಟೂರು: ಈ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ಎಂದೆಂದೂ ಕಾಣದಷ್ಟು ಪಕ್ಷೇತರರ ಸ್ಪರ್ಧೆ ಕಂಡು ಬರುತ್ತಿದ್ದು, ಅವರೆಷ್ಟು ಮತ ಗಳಿಸುತ್ತಾರೆ ಅಥವಾ ಯಾವ ಅಧಿಕೃತ ಅಭ್ಯರ್ಥಿಗಳ ಕಾಲೆಳೆಯುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ಆರಂಭದಲ್ಲಿ ಕಾಂಗ್ರೆಸ್ ಬಿ ಫಾರಂ ಸಿಗದೆ ಪರದಾಡಿದ್ದ ಹಾಲಿ ಶಾಸಕ ಕೆ.ಷಡಕ್ಷರಿ ಅಂತಿಮವಾಗಿ ಟಿಕೆಟ್ ಗಿಟ್ಟಿಸಿ ಭಾರಿ ಸ್ಪರ್ಧೆ ನೀಡುವ ಹುಮ್ಮಸ್ಸಿನಲ್ಲಿದ್ದಾರೆ. ಮಾಜಿ ಶಾಸಕ, ಬಿಜೆಪಿಯ ಬಿ.ಸಿ.ನಾಗೇಶ್‌ ಮತ್ತು ಜೆಡಿಎಸ್‍ನ ಲೋಕೇಶ್ವರ ಅವರು ಪ್ರಬಲ ಪೈಪೋಟಿ ನೀಡುವ ಉತ್ಸಾಹದಲ್ಲಿದ್ದಾರೆ.

ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ 25 ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದ ಲೋಕೇಶ್ವರ ಅವರು ಈಗ ಜೆಡಿಎಸ್ ಪಕ್ಷದ ಬಲವನ್ನೂ ನೆಚ್ಚಿಕೊಂಡಿದ್ದಾರೆ.

ಮೊದಲು ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿ ನಂತರ ಕೈ ತಪ್ಪಿದ ಬಿ.ನಂಜಾಮರಿ ಪಕ್ಷೇತರರಾಗಿ ಸ್ಪರ್ಧಿಸಲು ಮಂಗಳವಾರ ಅಪಾರ ಬೆಂಬಲಿಗರೊಂದಿಗೆ ನಾಮ ಪತ್ರ ಸಲ್ಲಿಸಿದ್ದಾರೆ. ‌

ಜಿ.ನಾರಾಯಣ ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಗೆದ್ದ ಹೊಸದರಲ್ಲಿ ‘ಷಡಕ್ಷರಿ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡುವುದು ತಮ್ಮ ಗುರಿ’ ಎಂದು ಹೇಳಿಕೊಂಡಿದ್ದರು. ಆದರೆ ಅವರ ವಿರುದ್ಧ ಪೊಲೀಸ್ ಪ್ರಕರಣವೊಂದು ದಾಖಲಾದ ನಂತರ ಷಡಕ್ಷರಿ ಅವರಿಗೆ ತಿರುಗಿ ಬಿದ್ದಿದ್ದರು. ಅವರು ಕೂಡ ಈಗ ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಪಕ್ಷೇತರ ಸದಸ್ಯರಾದ ಎಂ.ಮೈಲಾರಿ ಕೂಡ ಕಣಕ್ಕೆ ಧುಮುಕಿದ್ದಾರೆ. ಜೆಡಿಎಸ್ ಸಂಘಟಿಸುವ ನೆಪದಲ್ಲಿ ಕಳೆದ ಚುನಾವಣೆ ಪೂರ್ವದಲ್ಲಿ ಬೆಂಗಳೂರಿನಿಂದ ಕ್ಷೇತ್ರಕ್ಕೆ ಬಂದು ಜನಪ್ರಿಯತೆ ಗಳಿಸಿದ್ದ ಇವರು ಕಡೆ ಕ್ಷಣದಲ್ಲಿ ಚುನಾವಣೆಯಿಂದ ಹಿಂದೆ ಸರಿದು ನಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು.

ಹಿಂದುಳಿದ ಜಾತಿಗೆ ಸೇರಿದ ನಾರಾಯಣ್ ಮತ್ತು ಮೈಲಾರಿ ಯಾರ ಮತ ಬುಟ್ಟಿಗೆ ಕೈ ಹಾಕುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಇವರೆಲ್ಲರ ಮಧ್ಯ ಇದೇ ತಾಲ್ಲೂಕು ಕೊನೇಹಳ್ಳಿಯ ಶಾಂತಕುಮಾರ್ ಕೂಡ ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿ ತಮ್ಮದೇ ಹವಾ ಸೃಷ್ಟಿಸಿದ್ದಾರೆ.

ಆರಂಭದಲ್ಲಿ ಇವರು ಕೂಡ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರಕ್ಕೆ ಬಂದು ಜನಕ್ಕೆ ಹತ್ತಿರವಾಗುವ ಪ್ರಯತ್ನ ಮಾಡಿದ್ದರು. ಜೆಡಿಎಸ್ ಟಿಕೆಟ್ ಕಷ್ಟ ಎಂಬುದು ಅರಿವಾದ ನಂತರ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದ ಇವರು ತಮ್ಮ ಸಮಾಜ ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ.

ಬಿಜೆಪಿಯ ಸೋಗಲಾಡಿತನದ ವಿರುದ್ಧದ ಹೋರಾಡಲು ಕಣಕ್ಕೆ ಇಳಿಯುವುದಾಗಿ ಹೇಳಿದ್ದ ಸಂತೋಷ್ ಭೈರಾಟೆ ಶಿವಸೇನೆಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯನ್ನು ಸೋಲಿಸುವುದೇ ತಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ.

ಇವೆಲ್ಲದ ಮಧ್ಯೆ ಭಾರತೀಯ ಜನಗಳ ಕಲ್ಯಾಣ ಪಕ್ಷದ ಹೆಸರಲ್ಲಿ ಶಂಕರಮೂರ್ತಿ ಎನ್ನುವವರು ನಾಮಪತ್ರ ಸಲ್ಲಿಸಿದ್ದಾರೆ. ಹೊಸ ಪಕ್ಷ ಆಲ್ ಇಂಡಿಯಾ ಎಂಪವರಮೆಂಟ್ ಪಾರ್ಟಿಯಿಂದ ಎಂ.ರಮೇಶ್ ಎನ್ನುವವರು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಶಿವನಾಗ್ ಮತ್ತು ರಾಜಶೇಖರ್ ಎನ್ನುವವರೂ ನಾಮಪತ್ರ ಸಲ್ಲಿಸಿದ್ದಾರೆ.

ಒಟ್ಟು 11 ಜನರ ನಾಮಪತ್ರ ಸಲ್ಲಿಕೆಯಾಗಿದ್ದು, ನಾಮಪತ್ರ ಹಿಂಪಡೆಯುವ ದಿನ ಕಣದಲ್ಲಿ ಯಾರು ಉಳಿಯುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT