7

ತೈಲ, ಔಷಧ ಷೇರುಗಳ ಉತ್ತಮ ಗಳಿಕೆ

Published:
Updated:

ಷೇರುಪೇಟೆಯ ಮುಖವಾಡದಂತಿರುವ ಸಂವೇದಿ ಸೂಚ್ಯಂಕದಲ್ಲಿ ಈ ವಾರ ಬಜಾಜ್ ಆಟೊ, ಮಾರುತಿ ಸುಜುಕಿ, ಹಿಂದುಸ್ತಾನ್‌ ಯುನಿಲಿವರ್ ಉತ್ತಮ ಏರಿಕೆ ಕಂಡಿವೆ. 

ಮಾರುತಿ ಸುಜುಕಿ ಒಂದೇ ವಾರದಲ್ಲಿ ₹ 8,760 ರಿಂದ ಶುಕ್ರವಾರ ಗರಿಷ್ಠ ₹ 9,407 ರವರೆಗೂ ಏರಿಕೆ ಕಂಡು ಅಂದೇ ₹9,304 ರಲ್ಲಿ ಕೊನೆಗೊಂಡಿತು. ಶುಕ್ರವಾರದ ಕನಿಷ್ಠ ಬೆಲೆ ₹9,261 ಆಗಿದ್ದು ಒಂದೇ ದಿನ ಶೇ 10 ಕ್ಕೂ ಹೆಚ್ಚಿನ ಏರಿಳಿತ ಪ್ರದರ್ಶಿಸಿ ಕೇವಲ ಕೆಲವೇ ವಹಿವಾಟುದಾರರಿಗೆ ಅವಕಾಶ ಕಲ್ಪಿಸಿದಂತಾಗಿದೆ.

ಸಾಮಾನ್ಯವಾಗಿ ಒಂದು ಕಂಪನಿಯ ಷೇರು ಬೆಲೆ ಲಾಭಾಂಶ ವಿತರಣೆಯ ನಿಗದಿತ ದಿನಾಂಕದ ನಂತರ ಇಳಿಕೆ ಕಾಣುವುದು ಸಹಜ ಕ್ರಿಯೆ ಎಂಬುದಕ್ಕೆ ಟಾಟಾ ಸ್ಟೀಲ್ ಕಂಪನಿ ಉತ್ತಮ ಉದಾಹರಣೆ. ಈ ಕಂಪನಿ ವಿತರಿಸಲಿರುವ ₹10ರ ಲಾಭಾಂಶ ನಂತರದ ವಹಿವಾಟು 5 ರಿಂದ ಆರಂಭವಾಯಿತು.

ಈ ಹತ್ತು ರೂಪಾಯಿಯ ಲಾಭಾಂಶದ ಕಾರಣ ಷೇರಿನ ಬೆಲೆ ಸೋಮವಾರ ₹586ರ ಗರಿಷ್ಠ ತಲುಪಿತ್ತು. ಲಾಭಾಂಶ ವಿತರಣೆಯ ನಂತರ ₹547 ರ ಸಮೀಪಕ್ಕೆ ಕುಸಿದು ನಂತರ ₹554 ರ ಸಮೀಪ ವಾರಾಂತ್ಯ ಕಂಡಿತು. ಈ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯು ಈ ತಿಂಗಳ 20 ರಂದು ನಡೆಯಲಿದೆ. ಆ ಸಮಯಕ್ಕೆ ಮತ್ತೊಮ್ಮೆ ಷೇರಿನ ಬೆಲೆ ಚಿಗುರಿಕೊಂಡರೂ ಅಚ್ಚರಿಯಲ್ಲ. 

ಇದು ಒಂದು ರೀತಿಯ ಚಟುವಟಿಕೆಯಾದರೆ, ಪರ್ಯಾಯ ವಿಧದಲ್ಲಿ ಬಜಾಜ್ ಆಟೋ ಷೇರು ಬೆಲೆ ಏರಿಕೆ ಪ್ರದರ್ಶಿಸಿದೆ. ಈ ಕಂಪನಿ ಪ್ರತಿ ಷೇರಿಗೆ ಅರವತ್ತು ರೂಪಾಯಿಗಳ ಲಾಭಾಂಶ ವಿತರಿಸಲಿದ್ದು, ದಿನಾಂಕ 5 ರಿಂದ ಲಾಭಾಂಶ ರಹಿತ ವಹಿವಾಟು ಆರಂಭವಾಗಿದೆ.

ಈ ಕಂಪನಿ ಷೇರಿನ ಬೆಲೆಯು ಲಾಭಾಂಶಕ್ಕಿಂತ ಮೊದಲು ₹2,811 ರ ಸಮೀಪವಿದ್ದು  ನಿಗದಿತ ದಿನದ ನಂತರ  ಏರಿಕೆ ಕಂಡು  ₹3,076 ರ ಗರಿಷ್ಠವನ್ನು ಶುಕ್ರವಾರ ತಲುಪಿ ₹3,023 ರಲ್ಲಿ ವಾರಾಂತ್ಯ ಕಂಡಿತು.  ಅಂದರೆ ಲಾಭಾಂಶ ವಿತರಣೆ ನಂತರ ಇದೇ  ರೀತಿಯ ಚಲನೆಯನ್ನು ಕಾಣಬಹುದೆಂದು ಮುಂಚಿತವಾಗಿ ನಿರ್ಧರಿಸುವುದು ಸರಿಯಲ್ಲ.

ಸೋಮವಾರ ಔಷಧಿ ವಲಯದ ಕಂಪನಿಗಳು ವಿಜೃಂಭಿಸಿದವು. ವಲಯದ ಪ್ರಮುಖ ಕಂಪನಿಗಳಾದ ಅಲೆಂಬಿಕ್ ಫಾರ್ಮಾ ₹17 ರಷ್ಟು, ಸಿಪ್ಲಾ ಮತ್ತು ಅರವಿಂದೊ ಫಾರ್ಮಾಗಳು ₹24 ರಷ್ಟು ಏರಿಕೆ ಪಡೆದುಕೊಂಡರೆ,  ದಿವೀಸ್ ಲ್ಯಾಬ್ ₹40ರಷ್ಟು ಏರಿಕೆ ಕಂಡಿತು. ಈ ಏರಿಕೆಯ ಪ್ರವೃತ್ತಿಯು ಮಂಗಳವಾರವೂ ಮುಂದುವರಿಯಿತು. 

ವಿಶೇಷವೆಂದರೆ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಂಡರೂ, ಇದುವರೆಗೂ ಸತತವಾಗಿ ಒತ್ತಡದಲ್ಲಿದ್ದ ತೈಲ ಮಾರಾಟ ಕಂಪನಿಗಳು ಚುರುಕಾದ ಏರಿಕೆ ಪಡೆದುಕೊಂಡವು. ಅಬಾನ್ ಆಪ್‌ಷೋರ್ ಕಂಪನಿಗೆ ಒಎನ್‌ಜಿಸಿಯಿಂದ 2 ವರ್ಷ ಅವಧಿಗೆ ಕಾಂಟ್ರಾಕ್ಟ್ ಪಡೆದುಕೊಂಡಿದೆ ಎಂಬ ಸುದ್ದಿಯಿಂದ ಶೇ 6 ರಷ್ಟು ಏರಿಕೆ ಪಡೆದುಕೊಂಡಿತು.

ಇತ್ತೀಚಿಗೆ ಸತತವಾಗಿ ಕುಸಿತದತ್ತ ತಿರುಗಿದ್ದ ಕ್ಯಾಸ್ಟ್ರಾಲ್ ಇಂಡಿಯಾ ಕಳೆದ ಒಂದು ತಿಂಗಳಿನಿಂದಲೂ ₹183 ರ ಗರಿಷ್ಠದಿಂದ ಜಾರಿ  ಬುಧವಾರ  ₹155 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ಶುಕ್ರವಾರ ₹163 ರ ಸಮೀಪಕ್ಕೆ ಚೇತರಿಕೆ ಕಂಡಿತು.

ಈ ಮಧ್ಯೆ ರೂಪಾಯಿ ಬೆಲೆ ಕುಸಿತದಲ್ಲಿರುವ ಕಾರಣ ಮಾಹಿತಿ ತಂತ್ರಜ್ಞಾನ ವಲಯದ ಅಗ್ರಮಾನ್ಯ ಕಂಪನಿಗಳಾದ ಇನ್ಫೊಸಿಸ್‌ ಮತ್ತು ಟಿಸಿಎಸ್‌ಗಳು ರಭಸದ ಚಟುವಟಿಕೆಯಿಂದ ಏರಿಕೆ ಕಂಡವು. ಮಂಗಳವಾರ ಇನ್ಫೊಸಿಸ್‌ ಕಂಪನಿ ಷೇರಿನ ಬೆಲೆ ₹1,358 ರ ವಾರ್ಷಿಕ ಗರಿಷ್ಠ ತಲುಪಿತು. ನಂತರ ಇಳಿಕೆಯಿಂದ ₹1,269 ರವರೆಗೂ ಜಾರಿ ₹1,284 ರಲ್ಲಿ ವಾರಾಂತ್ಯ ಕಂಡಿತು. ಶುಕ್ರವಾರ ಟಿಸಿಎಸ್ ₹1,930 ರ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದೆ.

ಇನ್ನು, ಮಧ್ಯಮ ಶ್ರೇಣಿ ಕಂಪನಿಗಳಲ್ಲಿ ಚಟುವಟಿಕೆ ಎಷ್ಟು ಹರಿತವಾಗಿರುತ್ತದೆ ಎಂಬುದಕ್ಕೆ ‘8ಕೆ ಮೈಲ್ಸ್ ಸಾಫ್ಟ್‌ವೇರ್ ಸರ್ವಿಸಸ್’ ಕಂಪನಿಯ ಷೇರಿನಲ್ಲಿ ಉಂಟಾದ ಏರುಪೇರು ಉತ್ತಮ ಉದಾಹರಣೆಯಾಗಬಹುದು.  ಈ ಕಂಪನಿ ಷೇರಿನ ಬೆಲೆ  ₹567 ರ ಸಮೀಪದಿಂದ ನಿರಂತರವಾದ ಇಳಿಕೆ ಕಂಡಿದೆ.  ಬುಧವಾರ ₹302ರ ವಾರ್ಷಿಕ ಕನಿಷ್ಠ ಕಂಡ ಮೇಲೆ ಎರಡೇ ದಿನಗಳಲ್ಲಿ ಅಂದರೆ ಶುಕ್ರವಾರ ₹389 ರವರೆಗೂ ಏರಿಕೆ ಕಂಡು ₹377 ರ ಸಮೀಪ ವಾರಾಂತ್ಯ ಕಂಡಿತು. 

ಇದು ತಿಂಗಳ ಕಥೆಯಾದರೆ,  ಮನ್ ಪಸಂದ್ ಬೆವರೇಜಸ್ ಕಂಪನಿಯದು ಸ್ವಲ್ಪ ಭಿನ್ನವಾಗಿದೆ. ಒಂದೇ ವಾರದಲ್ಲಿ ₹155 ರ ಸಮೀಪದಿಂದ ₹181 ರವರೆಗೂ  ಗರಿಷ್ಠ ಆವರಣ ಮಿತಿಯಲ್ಲಿ ಸಾಗಿ ಗುರುವಾರ ₹181 ರ ಗರಿಷ್ಠ ಅವರಣ ಮಿತಿಯಿಂದ ಒಂದೇ ಕುಸಿತದಲ್ಲಿ ₹163.95 ಕ್ಕೆ ಕುಸಿದು ಅಂದೇ ಕೊಳ್ಳುವವರಿಲ್ಲದಂತೆ ಮಾಡಿತು. ನಂತರದ ದಿನವೂ ಕನಿಷ್ಠ ಮಟ್ಟದಲ್ಲಿತ್ತು.

ಬೋನಸ್ ಷೇರು: 

* ಚೇವಿಯಟ್  ಲಿಮಿಟೆಡ್ ಕಂಪನಿ 10 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ. 

* ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್ ವಿತರಿಸಲಿರುವ 1:10 ರ ಬೋನಸ್ ಷೇರಿಗೆ ಈ ತಿಂಗಳ 11 ನಿಗದಿತ ದಿನ.

ಹೊಸ ಷೇರು: ಇತ್ತೀಚಿಗೆ ಪ್ರತಿ ಷೇರಿಗೆ ₹967 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ವಾರೊಕ್ ಎಂಜಿನಿಯರಿಂಗ್ ಲಿಮಿಟೆಡ್ ಕಂಪನಿಯ ಷೇರುಗಳು ಶುಕ್ರವಾರ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.

ವಹಿವಾಟಿನಿಂದ ಹೊರಕ್ಕೆ: ಪೇಟೆಯ ಚಲನೆಯ ವೇಗಕ್ಕೆ, ಬದಲಾದ ವಾತಾವರಣವನ್ನು ಎದುರಿಸಲಾಗದೆ ತೊಂದರೆಗೊಳಗಾಗಿ ವಿಫಲವಾದ ಕಂಪನಿಗಳನ್ನು ಷೇರು ವಿನಿಮಯ ಕೇಂದ್ರದ ವಹಿವಾಟಿನಿಂದ ಹೊರಹಾಕಲಾಗಿದೆ. 

ಇವುಗಳಲ್ಲಿ ಒಂದು ಕಾಲದಲ್ಲಿ ಉತ್ತಮ ವಹಿವಾಟಿನಿಂದ ಮಿಂಚಿದ್ದ ಕಂಪನಿಗಳು ಇವೆ. ಆಫ್ ಟೆಕ್ ಲಿ, ಅರವಿಂದ್ ರೆಮಿಡೀಸ್‌, ಅಸ್ಸಾಮ್ ಬ್ರೂಕ್‌, ಔರಂಗಾಬಾದ್ ಪೇಪರ್ ಮಿಲ್ಸ್,  ಭಗೀರಥ ಎಂಜಿನಿಯರಿಂಗ್‌,  ಬಿರ್ಲಾ ಶ್ಲೋಕ,  ಚೊಖಾನಿ ಇಂಟರ್‌ನ್ಯಾಷನಲ್‌,  ಜಿಎಸ್‌ಎಲ್‌ ಲಿಮಿಟೆಡ್‌, ಹಿಂದುಸ್ತಾನ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್,  ಕೆಎಸ್ ಆಯಿಲ್, ಎನ್‌ಇಪಿಸಿ ಇಂಡಿಯಾ, ಪಾರೇಖ್ ಅಲ್ಯೂಮಿನಿಯಂ, ಶ್ರೀ ಗಣೇಶ್ ಜುವೆಲ್ಲರಿ ಹೌಸ್,  ಸೂಪರ್ ಫೋರ್ಜಿಂಗ್ಸ್‌,  ಟೆಕ್ಪ್ರೊ ಸಿಸ್ಟಮ್ಸ್,  ಏಷಿಯನ್ ಎಲೆಕ್ಟ್ರಾನಿಕ್ಸ್, ಬಿರ್ಲಾ ಪವರ್ ಸೊಲ್ಯೂಷನ್ಸ್,  ಕ್ಲಾಸಿಕ್ ಡೈಮಂಡ್  ಮುಂತಾದ 216 ಕಂಪನಿಗಳು ಈ ಪಟ್ಟಿಯಲ್ಲಿವೆ.

ತಾತ್ಕಾಲಿಕ ಪರಿಣಾಮ: ಗುರುವಾರ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಆ ಕಾರಣ ಅಂದು ದಿನದ ಆರಂಭದಲ್ಲಿ ಷೇರಿನ ಬೆಲೆ ಒಂದು ಸಾವಿರ ರೂಪಾಯಿಗಳ ಸಮೀಪದಿಂದ ₹1,008 ರವರೆಗೂ  ಏರಿಕೆ ಕಂಡಿತು.

ಸಭೆಯಲ್ಲಿ ಪ್ರಕಟಿಸಿದ ಯೋಜನೆಗಳ ಪ್ರಭಾವವು ತಾತ್ಕಾಲಿಕವಾಗಿದ್ದು, ಅಂದೇ ಷೇರಿನ ಬೆಲೆ ₹960 ಕ್ಕೆ ಕುಸಿದು ₹965 ರ ಸಮೀಪ ಕೊನೆಗೊಂಡಿತು. ₹976 ರ ಸಮೀಪ ವಾರಾಂತ್ಯ ಕಂಡಿತು. ಲಭ್ಯವಿರುವ ಲಾಭಗಳಿಕೆಯ ಅವಕಾಶಗಳನ್ನು ಪೇಟೆ ತ್ವರಿತವಾಗಿ ಉಪಯೋಗಿಸಿಕೊಳ್ಳುತ್ತದೆ ಎಂಬುದಕ್ಕೆ ಇದು ಉತ್ತಮ ನಿದರ್ಶನ.

(ಮೊ :9886313380, ಸಂಜೆ 4.30 ರನಂತರ)

**

ವಾರದ ಮುನ್ನೋಟ

ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ), ಹಣದುಬ್ಬರ ಮತ್ತು ಮಳೆ – ಬಿತ್ತನೆ ಕುರಿತ ಅಂಕಿ ಅಂಶಗಳು ಹಾಗೂ ವಾಣಿಜ್ಯ ಸಮರಕ್ಕೆ ಸಂಬಂಧಿಸಿದ ವಿದ್ಯಮಾನಗಳು ಈ ವಾರದ ವಹಿವಾಟಿನ ಗತಿ ನಿರ್ಧರಿಸಲಿವೆ.

ಷೇರುಪೇಟೆಯಲ್ಲಿ ಸದ್ಯಕ್ಕೆ ಯಾವುದೇ ಪ್ರಭಾವಿ ಬೆಳವಣಿಗೆಯಾದರೂ ತಾತ್ಕಾಲಿಕವಾಗಿರಲಿದೆ.  ಕಚ್ಚಾ ತೈಲ ಬೆಲೆ ಏರಿಳಿತದ ಕಾರಣ ಜಾಗತಿಕ ಷೇರುಪೇಟೆಗಳು ತೂಗುಯ್ಯಾಲೆಯಲ್ಲಿ ಜೀಕುತ್ತಾ ಅನಿಶ್ಚಿತತೆಯಲ್ಲಿವೆ.  ಈ ಸಂದರ್ಭದಲ್ಲಿ ಉತ್ತಮ ಕಂಪನಿಗಳು, ಆಕರ್ಷಕ ಲಾಭಾಂಶ ವಿತರಿಸುವ ಅಗ್ರಮಾನ್ಯ ಕಂಪನಿಗಳನ್ನು ದೀರ್ಘಕಾಲಿಕ ಹೂಡಿಕೆಯಾಗಿ ಆಯ್ಕೆ ಮಾಡಿಕೊಳ್ಳಲು ಸದವಕಾಶ ಇದೆ.

ಪೇಟೆಯ ಮನಸ್ಥಿತಿಯನ್ನರಿತು, ಷೇರಿನ ಬೆಲೆ ಇಳಿಕೆಯಲ್ಲಿದ್ದಾಗ ಖರೀದಿ ಮಾಡಿದಲ್ಲಿ ಹೆಚ್ಚು ಲಾಭದಾಯಕವಾಗಬಹುದು. ಹೂಡಿಕೆಯನ್ನು ಹಂತ-ಹಂತವಾಗಿ ಮಾಡಿ. ಮುಂದಿನ ದಿನಗಳಲ್ಲಿ ಅನೇಕ ಕಂಪನಿಗಳು ತ್ರೈಮಾಸಿಕ ಫಲಿತಾಂಶ, ಕಾರ್ಪೊರೇಟ್ ಸಾಧನೆಗಳನ್ನು ಘೋಷಿಸುವ ಕಾರಣ ಪೇಟೆಯಲ್ಲಿ ಏರಿಳಿತಗಳು ಹೆಚ್ಚಾಗಿಯೇ ಇರುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !