ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

Last Updated 12 ಏಪ್ರಿಲ್ 2022, 17:24 IST
ಅಕ್ಷರ ಗಾತ್ರ

ಬಿ.ಎಸ್. ಗೋಪಾಲ್, ಮೈಸೂರು

l ಪ್ರಶ್ನೆ: ನಾನು ಕೆಪಿಟಿಸಿಎಲ್ ನೌಕರನಾಗಿದ್ದೆ. ಈ ವರ್ಷದ ಜನವರಿಯಲ್ಲಿ ನಿವೃತ್ತಿ ಹೊಂದಿರುತ್ತೇನೆ. ಈ ಅವಧಿಯಲ್ಲಿ ನಾನು ಗಳಿಕೆ ರಜಾವನ್ನು ನಗದೀಕರಿಸಿ ಅದರ ಮೊತ್ತ ಪಡೆದಿದ್ದೇನೆ. ಈ ಮೊತ್ತದಲ್ಲಿ ₹ 3 ಲಕ್ಷ ಹೊರತುಪಡಿಸಿ ಉಳಿದ ಮೊತ್ತಕ್ಕೆ ಶೇಕಡ 30ರಷ್ಟು ತೆರಿಗೆ ಹಾಗೂ ಶೇ 4ರಷ್ಟು ಸೆಸ್ ಸೇರಿಸಿ ತೆರಿಗೆ ಮುರಿದಿರುತ್ತಾರೆ. ರಾಜ್ಯ ಸರ್ಕಾರಿ ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ಗಳಿಕೆ ರಜಾ ನಗದೀಕರಿಸಿದಾಗ ತೆರಿಗೆ ಅನ್ವಯವಾಗುವುದಿಲ್ಲ ಎಂದು ತಿಳಿದಿದ್ದೇನೆ. ನನ್ನದು ವಯೋ ನಿವೃತ್ತಿಯಾಗಿರುವ ಕಾರಣ ಗಳಿಕೆ ರಜಾ ನಗದೀಕರಣಕ್ಕೆ ತೆರಿಗೆ ಕಡಿತ ಮಾಡಿದ್ದು ಸರಿಯೇ? ಇದರಿಂದ ನನಗೆ ಸಾಕಷ್ಟು ತೆರಿಗೆ ಹೊರೆಯಾಗಿದೆ. ಇದರ ಬಗೆಗಿನ ಗೊಂದಲ ನಿವಾರಿಸಿ.

ಉತ್ತರ: ಆದಾಯ ತೆರಿಗೆಯ ನಿಯಮ 10 (10ಎಎ) ಇದರಡಿ ಉಲ್ಲೇಖಿಸಿರುವಂತೆ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನೌಕರರು ನಿವೃತ್ತಿಯಾದ ಸಂದರ್ಭದಲ್ಲಿ ಗಳಿಕೆ ರಜಾ ಮೊತ್ತವನ್ನು ನಗದೀಕರಿಸಿದಾಗ ಯಾವುದೇ ತೆರಿಗೆ ಇರುವುದಿಲ್ಲ. ಆದರೆ ತಾವು ನೀಡಿರುವ ಮಾಹಿತಿಯಂತೆ, ರಾಜ್ಯ ಸರ್ಕಾರದ ಸ್ವಾಮ್ಯತ್ವವಿರುವ ಸಂಸ್ಥೆಯಲ್ಲಿ ಉದ್ಯೋಗ ಮಾಡಿ ನಿವೃತ್ತಿ ಹೊಂದಿದ್ದೀರಿ. ನೀವು ಕೆಲಸ ಮಾಡಿದ ಸಂಸ್ಥೆಯು ಸರ್ಕಾರದ ಮಾಲೀಕತ್ವದ್ದು. ಅದು ಸರ್ಕಾರಿ ಆದೇಶಗಳ ಅನುಸಾರವಾಗಿಯೇ ಕಾರ್ಯ ನಿರ್ವಹಿಸಿದರೂ ಅದು ನೇರವಾಗಿ ರಾಜ್ಯ ಸರ್ಕಾರದ ಅಡಿ ಬರುವ ಇಲಾಖೆ ಆಗಲಾರದು. ಕಾರಣ, ಇಂತಹ ಸರ್ಕಾರಿ ಸಂಸ್ಥೆಗಳು ಪ್ರತ್ಯೇಕ ಕಂಪನಿಯಾಗಿದ್ದು ಅವುಗಳದ್ದೇ ಆದ ಆಡಳಿತ ಮಂಡಳಿ ಹೊಂದಿ ಕಾರ್ಯನಿರ್ವಹಿಸುತ್ತವೆ. ಅಲ್ಲಿನ ಬಹುತೇಕ ಸವಲತ್ತುಗಳು ಸರ್ಕಾರಿ ದರ್ಜೆಯದ್ದೇ ಇರುತ್ತವೆಯಾದರೂ ಅದು ತೆರಿಗೆ ವಿಚಾರಕ್ಕೆ ಅನ್ವಯಿಸದು ಹಾಗೂ ಗಳಿಕೆ ರಜಾ ನಗದೀಕರಣಕ್ಕೂ ನೀವು ಉಲ್ಲೇಖಿಸಿರುವಂತೆ ತೆರಿಗೆ ಅನ್ವಯ ಆಗುತ್ತದೆ.

ವಿಜಯ್, ಊರುಬೇಡ

l ಪ್ರಶ್ನೆ: ನಾನು ಪಿಎಫ್ ಖಾತೆಯಲ್ಲೂ ಪಿಪಿಎಫ್ ಖಾತೆಯಲ್ಲೂ ಉಳಿತಾಯ‌ ಮಾಡುತ್ತಿದ್ದೇನೆ. ಪಿಎಫ್‌ನಲ್ಲಿ ಸುಮಾರು ₹ 8 ಲಕ್ಷ ಇದೆ. ಪಿಪಿಎಫ್‌ನಲ್ಲಿ ಅಂದಾಜು ₹ 4 ಲಕ್ಷ ಇದೆ. ಪಿಎಫ್ ಇರುವಾಗ ಪಿಪಿಎಫ್ ಏಕೆ ಮಾಡಿದೆ ಎಂದು ಬಲ್ಲವರು ಕೆಲವರು ಕೇಳುತ್ತಿದ್ದಾರೆ. ಪಿಪಿಎಫ್ ಯೋಜನೆಯಲ್ಲಿ ಬಡ್ಡಿ ಕಡಿಮೆ. ನನಗೆ ಕೂಡ, ನಾನು ತಪ್ಪು ಮಾಡಿದೆ ಎಂದು ಈಗ ಅನ್ನಿಸುತ್ತದೆ. ಪಿಪಿಎಫ್ ಹಣವನ್ನು ಪಿಎಫ್ ಖಾತೆಗೆ ವರ್ಗಾವಣೆ ಮಾಡಲು ದಾರಿ ಇದೆಯೇ? ಮುಂದೆ ಏನು‌ ಮಾಡಬೇಕು? ಪಿಪಿಎಫ್ ನಿಲ್ಲಿಸಲೇ?

ಉತ್ತರ: ಪಿಪಿಎಫ್ ಹಾಗೂ ಪಿಎಫ್ ಎರಡು ಪ್ರತ್ಯೇಕ ಹೂಡಿಕೆಗಳಾಗಿದ್ದು ಇವು ಅವುಗಳದ್ದೇ ಆದ ಭಿನ್ನತೆ ಹೊಂದಿದೆ. ಪಿಪಿಎಫ್ ಖಾತೆಯನ್ನು ಅಂಚೆ ಕಚೇರಿ, ಬ್ಯಾಂಕ್ ಮೂಲಕ ತೆರೆಯಲಾಗುತ್ತದೆ ಹಾಗೂ ಎಲ್ಲ ನಾಗರಿಕರಿಗೆ ತಮ್ಮ ಉಳಿತಾಯದ ಹಣವನ್ನು ವಾರ್ಷಿಕವಾಗಿ ₹ 1.50 ಲಕ್ಷದ ತನಕ ಇದರಲ್ಲಿ ಜಮಾ ಮಾಡುವ ಅವಕಾಶವಿದೆ.

ಆದರೆ, ಎಲ್ಲರಿಗೂ ತಿಳಿದಂತೆ ಪಿಎಫ್ ಖಾತೆಯನ್ನು ಉದ್ಯೋಗದಾತರು ತಮ್ಮ ನೌಕರರ ಹೆಸರನ್ನು ಪಿ.ಎಫ್ ಇಲಾಖೆಯಲ್ಲಿ ನೋಂದಣಿ ಮಾಡಿ ವೇತನದಲ್ಲಿ ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಕಡಿತಗೊಳಿಸಿ ಜಮಾ ಮಾಡುವ ಸಲುವಾಗಿ ತೆರೆದಿರುತ್ತಾರೆ. ಅದಕ್ಕೆ ಸಮನಾದ ಮೊತ್ತವನ್ನು ತಮ್ಮ (ನೌಕರಿ ನೀಡಿದ ಕಂಪನಿ) ಕಡೆಯಿಂದಲೂ ಭರಿಸಿ ‍ಪಿಎಫ್‌ ಖಾತೆಗೆ ಜಮಾ ಮಾಡುವ ಶಾಸನ ಬದ್ಧವಾಗಿ ಹೂಡಿಕೆ ಇದು. ಇದಲ್ಲದೆ, ಈ ಖಾತೆಯಲ್ಲಿ ಹೆಚ್ಚಿನ ಉಳಿತಾಯಕ್ಕಾಗಿ ಹೆಚ್ಚುವರಿ ಹಣ ಜಮಾ ಮಾಡುವ ಅವಕಾಶವನ್ನು ನೌಕರರಿಗೆ ನೀಡಲಾಗಿದೆ. ಆದರೆ ಇಂತಹ ಐಚ್ಛಿಕ ಹೂಡಿಕೆಯನ್ನು ಪ್ರತಿ ತಿಂಗಳು ಮನಬಂದಂತೆ ಬದಲಾಯಿಸುವಂತಿಲ್ಲ ಹಾಗೂ ಅದು ಉದ್ಯೋಗ ಮಾಡುವ ಕಂಪನಿಯ ಮೂಲಕವೇ ತಮ್ಮ ವೇತನದಿಂದ ಕಡಿತಗೊಳಿಸಿ ಪಾವತಿಯಾಗಬೇಕು.

ಮಾತ್ರವಲ್ಲ, ಪಿಪಿಎಫ್ ಖಾತೆಯಲ್ಲಿ ಜಮಾ ಮಾಡಲಾದ ಮೊತ್ತವನ್ನು ಬ್ಯಾಂಕ್ ಖಾತೆಯ ಮೊತ್ತದಂತೆ ಬೇಕಾದಾಗ ಹಿಂಪಡೆಯಲಾಗುವುದಿಲ್ಲ. ಇದು 15 ವರ್ಷ ಅವಧಿಯ ಖಾತೆ. ಕೆಲವು ನಿರ್ದಿಷ್ಟ ಸಂದರ್ಭಗಳನ್ನು ಹೊರತುಪಡಿಸಿ ಮೊದಲ ಐದು ವರ್ಷಗಳ ತರುವಾಯವಷ್ಟೇ ಹಣ ಹಿಂಪಡೆಯುವ ಅವಕಾಶವಿದೆ. ಇದರಂತೆ ನಿಮ್ಮ ಯೋಜನೆ ರೂಪಿಸಬಹುದು. ಆದರೆ ಈ ಮೊತ್ತವನ್ನು ಪಿ.ಎಫ್. ಖಾತೆಗೆ ಜಮಾ ಮಾಡುವುದು ಅಸಾಧ್ಯ. ಹೀಗಾಗಿ ನೀವು ಮೇಲಿನ ಅವಕಾಶವನ್ನು ಉಪಯೋಗಿಸಿ ಪಿಎಫ್‌ನಲ್ಲಿ ಹೂಡಿಕೆಯನ್ನು ಕ್ರಮೇಣ ಹೆಚ್ಚಿಸಬಹುದು.

ಮಾತ್ರವಲ್ಲ, ಪಿಪಿಎಫ್ ಖಾತೆಯಿಂದ ಹಣ ವಾಪಸಾತಿ ಬಗ್ಗೆ ಹೆಚ್ಚಿನ ಮಾಹಿತಿಗೆ ಸ್ಥಳೀಯ ಅಂಚೆ ಇಲಾಖೆಯನ್ನು ಸಂಪರ್ಕಿಸಿ ಹಾಗೂ ಐಚ್ಛಿಕ ಹೂಡಿಕೆಯ ಬಗ್ಗೆ ನಿಮ್ಮ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಲ್ಲೂ ಚರ್ಚಿಸಿ. ಕೇವಲ ಒಂದೆರಡು ಶೇಕಡ ಬಡ್ಡಿಗಾಗಿ ಆತುರದ ನಿರ್ಧಾರ ಕೈಗೊಳ್ಳದೆ, ನಿಮಗೆ ದೀರ್ಘಾವಧಿಯಲ್ಲಿ ಉತ್ತಮ ಲಾಭ ನೀಡುವ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಯೋಜನೆಯನ್ನೂ ರೂಪಿಸಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT