ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು

7

ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು

Published:
Updated:
Deccan Herald

ಷೇರುಪೇಟೆಗಳು ಸಂವೇದಿ ಸೂಚ್ಯಂಕ ಮತ್ತು ನಿಫ್ಟಿಗಳ ಮುಂದಾಳತ್ವದಲ್ಲಿ ಸಾರ್ವಕಾಲಿಕ ಗರಿಷ್ಠ ದಾಖಲೆಯನ್ನು ನಿರ್ಮಿಸಿವೆ. ಆದರೆ, ಅನೇಕ ಕಂಪನಿಗಳು ಈ ಸೂಚ್ಯಂಕ ಮತ್ತು ಉಪ ಸೂಚ್ಯಂಕಗಳ ಭಾಗವಾಗಿದ್ದರೂ ಹಿನ್ನಡೆಯಲ್ಲಿವೆ.

ಈಗಿನ ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ, ಲಾರ್ಸನ್, ಎಚ್‌ಡಿಎಫ್‌ಸಿ, ಐಟಿಸಿ, ಟಿಸಿಎಸ್, ಇನ್ಫೊಸಿಸ್‌, ಕೋಟಕ್‌ಗಳನ್ನು ಬಿಟ್ಟರೆ ಉಳಿದ ಕಂಪನಿಗಳು ಹೆಚ್ಚಿನ ಏರಿಕೆ ಕಾಣುತ್ತಿಲ್ಲ. 

ಭಾರ್ತಿ ಏರ್‌ಟೆಲ್‌, ಒಎನ್‌ಜಿಸಿ, ಟಾಟಾ ಮೋಟರ್ಸ್, ವಿಪ್ರೊ, ಎಚ್‌ಸಿಎಲ್‌ ಟೆಕ್, ಹಿಂಡಾಲ್ಕೊ, ಎಚ್‌ಪಿಸಿಎಲ್‌, ಬಿಪಿಸಿಎಲ್‌, ಎನ್‌ಟಿಪಿಸಿ, ವೇದಾಂತ, ರಿಲಯನ್ಸ್ ಇನ್ಫ್ರಾ ಸ್ಟ್ರಕ್ಚರ್ಸ್‌ನಂತಹ ಕಂಪನಿಗಳು ತಮ್ಮ ಆಕರ್ಷಣೆ ಕಳೆದುಕೊಂಡಿವೆ.

ಇವುಗಳ ಷೇರು ಬೆಲೆ ವಾರಾಂತ್ಯದ ದಿನ ಸ್ವಲ್ಪ ಚೇತರಿಸಿಕೊಂಡರೂ ಅದು ಗಮನಾರ್ಹ ಸಂಗತಿ ಎನಿಸುವುದಿಲ್ಲ. 

ಟಾಟಾ ಮೋಟರ್ಸ್ ಷೇರಿನ ಬೆಲೆ ನಿರಂತರವಾಗಿ ಇಳಿಯುತ್ತಿದೆ. ಮಾರುತಿ ಕಾರುಗಳ ಬೆಲೆ ಹೆಚ್ಚಿಸಲಾಗಿದೆ ಎಂಬ ಪ್ರಕಟಣೆಯಿಂದ ಪ್ರೇರಿತವಾಗಿ ಶುಕ್ರವಾರ ಷೇರಿನ ಬೆಲೆ ಆರಂಭದ ಕ್ಷಣಗಳಲ್ಲಿ ಏರಿಕೆ ಕಂಡರೂ ನಂತರ ಇಳಿಕೆಗೊಳಪಟ್ಟು ₹62ರಂತೆ ಕುಸಿತದಿಂದ ದಿನದ ಅಂತ್ಯ ಕಂಡಿತು.

ಉತ್ತಮ ಫಲಿತಾಂಶದ ಕಾರಣ ಸನ್ ಫಾರ್ಮಾ ಷೇರಿನ ಬೆಲೆ ₹70ರಷ್ಟು ಏರಿಕೆಯನ್ನು ಒಂದೇ ವಾರದಲ್ಲಿ ಕಂಡಿದೆ. 

ಫಾರ್ಮಾ ವಲಯದ ಷೇರುಗಳು ಚುರುಕಾದ ಕಾರಣ ಅಲೆಂಬಿಕ್ ಫಾರ್ಮಾ, ಲುಪಿನ್, ಸ್ಟ್ರೈಡ್ಸ್ ಶಾಸೂನ್, ಡಾಕ್ಟರ್ ರೆಡ್ಡಿಸ್ ಲ್ಯಾಬ್ ನಂತಹ ಕಂಪನಿಗಳು ಚುರುಕಾದ ಏರಿಕೆ ಕಂಡುಕೊಂಡವು.

ರೂಪಾಯಿಯ ಬೆಲೆ ಅಮೆರಿಕದ ಡಾಲರ್ ವಿರುದ್ಧ ಕುಸಿತಕ್ಕೊಳಗಾದ ಕಾರಣ ಇನ್ಫೊಸಿಸ್, ಟಿಸಿಎಸ್, ಮೈಂಡ್ ಟ್ರೀ ನಂತಹ ಕಂಪನಿಗಳು ಹೆಚ್ಚು ಬೇಡಿಕೆಯಿಂದ ಏರಿಕೆ ಕಂಡುಕೊಂಡವು.

ತೈಲ ಮಾರಾಟ ಕಂಪನಿಗಳು ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಕಂಡರೂ ಸಹ ರೂಪಾಯಿಯ ಕುಸಿತವು ಕಂಪನಿಗಳ ಆಮದು ವೆಚ್ಚಗಳು ಹೆಚ್ಚಾಗುವುದೆಂಬ ಕಾರಣಕ್ಕೆ ಗಮನ ಸೆಳೆಯಲಿಲ್ಲ.

ವಿಸ್ಮಯಕಾರಿ ಅಂಶ: ಮಂಗಳವಾರ ಗೋವಾ ಕಾರ್ಬನ್ ಷೇರಿನ ಬೆಲೆ ₹836 ರ ಗರಿಷ್ಠ ಅವರಣಮಿತಿಯಲ್ಲಿದ್ದು, ಮಧ್ಯಾಹ್ನದಲ್ಲಿ ಅವರಣಮಿತಿಯಿಂದ ಹೊರಬಂದು ₹757 ರ ಸಮೀಪ ಕನಿಷ್ಠ ಅವರಣಮಿತಿಗೆ ಕುಸಿಯಿತು. ನಂತರ ಗುರುವಾರವೂ ಕನಿಷ್ಠ ಅವರಣಮಿತಿಯಲ್ಲಿದ್ದು ಶುಕ್ರವಾರ  ₹755 ರ ಸಮೀಪ ಕೊನೆಗೊಂಡಿದೆ. ಇದಕ್ಕೆ ವಿವಿಧ ಕಾರಣಗಳು ಇರಬಹುದಾದರೂ ಅನೇಕರು  ಅವಕಾಶ ವಂಚಿತರಾಗುವುದಂತೂ ಖಚಿತ.

ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿ, ಪ್ರತಿ ಷೇರಿಗೆ ₹18.50 ರಂತೆ ಲಾಭಾಂಶ ರಹಿತ ವಹಿವಾಟಿನಲ್ಲಿ ಈ ಕಂಪನಿ ಷೇರು ₹18.50 ರ ಬದಲಿಗೆ ₹40ರಂತೆ ಕುಸಿತ ಕಂಡಿದೆ. ಈ ಸಂದರ್ಭದಲ್ಲಿ ಲಾಭಾಂಶಕ್ಕೆ ನಿಗದಿತ ದಿನ ಪ್ರಕಟಿಸುವ ಮುನ್ನ ಷೇರಿನ ಬೆಲೆಯು ₹270 ರ ಸಮೀಪವಿದ್ದು, ಸೋಮವಾರ ಲಾಭಾಂಶಕ್ಕೆ ಕೊನೆ ದಿನ, ಅಂದು ₹344 ರವರೆಗೂ ಜಿಗಿತ ಕಂಡಿದ್ದು ಶುಕ್ರವಾರ  ₹304 ರ ಸಮೀಪ ವಾರಾಂತ್ಯಕಂಡಿದೆ.

ಒಂದು ತಿಂಗಳಲ್ಲಿ ರಭಸದ ಏರಿಕೆ

* ಸ್ಟ್ರೈಡ್ಸ್ ಶಾಸೂನ್ ₹342 ರ ಸಮೀಪದಿಂದ ₹449 ರವರೆಗೆ

* ದಿಲೀಪ್ ಬಿಲ್ಡ್‌ಕಾನ್ ₹663 ರ ಸಮೀಪದಿಂದ ₹853 ರವರೆಗೆ

* ಅದಾನಿ ಎಂಟರ್ ಪ್ರೈಸಸ್ ₹150 ರ ಸಮೀಪದಿಂದ ₹202 ರವರೆಗೆ

* ಗುಜರಾತ್ ಅಲ್ಕಲೀಸ್ ಆ್ಯಂಡ್ ಕೆಮಿಕಲ್ಸ್ ₹434 ರ ಸಮೀಪದಿಂದ ₹558 ರವರೆಗೆ

* ಡಿಎಲ್‌ಎಫ್‌ ₹ 170 ರ ಸಮೀಪದಿಂದ ₹ 210 ರವರೆಗೆ

* ಎಸಿಸಿ ₹ 1,274 ರ ಸಮೀಪದಿಂದ ₹ 1,592 ರವರೆಗೂ ಏರಿಕೆ ಪ್ರದರ್ಶಿಸಿವೆ.

ಒಂದು ತಿಂಗಳಲ್ಲಿ ಹೆಚ್ಚಿನ ಕುಸಿತ

* ಬಜಾಜ್ ಆಟೊ  ₹3,110 ರ ಸಮೀಪದಿಂದ ₹2,660 ರವರೆಗೆ,

* ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ₹398  ರ ಸಮೀಪದಿಂದ ₹377 ಕ್ಕೆ  ಕುಸಿದಿದೆ.

* ಅಪೋಲೊ ಟೈರ್ ₹ 299 ರ ಸಮೀಪದಿಂದ ₹ 266 ರ ಸಮೀಪಕ್ಕೆ ಕುಸಿದಿದೆ.

* ಉಜ್ಜೀವನ್ ಫೈನಾನ್ಸ್ ₹406 ರಿಂದ ₹351 ರ ಸಮೀಪವಿದೆ.

* ಬೊರೊಸಿಲ್ ಗ್ಲಾಸ್ ₹397 ರ ಸಮೀಪದಿಂದ ₹309 ಕ್ಕೆ ಕುಸಿದಿದೆ.

ದೀರ್ಘಕಾಲೀನ ಹೂಡಿಕೆಗೆ ಉತ್ತಮ

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಪವರ್ ಫೈನಾನ್ಸ್ ಕಾರ್ಪೊರೇಷನ್, ಬಿಎಚ್‌ಇಎಲ್‌, ಎಂಜಿನಿಯರ್ಸ್‌ ಇಂಡಿಯಾ, ಅಪೋಲೊ ಟೈರ್,  ಪಂಜಾಬ್ ನ್ಯಾಷನಲ್ ಬ್ಯಾಂಕ್, ಕ್ಯಾಸ್ಟ್ರಾಲ್ ಇಂಡಿಯಾ, ಆರ್‌ಇಸಿ.

ಮುಖಬೆಲೆ ಸೀಳಿಕೆ

ಜೆನ್ಸಾರ್ ಟೆಕ್ನಾಲಜಿಸ್ ಕಂಪನಿ ಷೇರಿನ ಮುಖಬೆಲೆಯನ್ನು  ₹10 ರಿಂದ ₹2  ಕ್ಕೆ ಸೀಳಲು ಸೆಪ್ಟೆಂಬರ್ 10 ನಿಗದಿತ ದಿನ. ಕೆಐಸಿ ಮೆಟಲ್ಸ್  ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ.

ಕಂಪನಿಗಳ ಅಮಾನತು

ಎರಡು ತ್ರೈಮಾಸಿಕದಿಂದಲೂ ಷೇರು ವಿನಿಮಯ ಕೇಂದ್ರದ ಲಿಸ್ಟಿಂಗ್ ನಿಯಮಗಳನ್ನು ಪಾಲಿಸದೆ ಇರುವ ಕಾರಣಕ್ಕೆ ಸೆಪ್ಟೆಂಬರ್ 10 ರಿಂದ ಈ ಕೆಳಗಿನ ಕಂಪನಿಗಳನ್ನು ವಹಿವಾಟಿನಿಂದ ಅಮಾನತುಗೊಳಿಸಲಾಗಿದೆ.

ಇಸಾನ್ ರಿರೋಲ್ ಲಿ, ಗೀತಾಂಜಲಿ ಜೆಮ್ಸ್ ಲಿ, ಹರಿಯಾಣ ಫೈನಾನ್ಷಿಯಲ್ ಕಾರ್ಪೊರೇಷನ್‌, ನೋಬಲ್ ಪಾಲಿಮರ್ಸ್‌, ಪನೋರಮಿಕ್ ಯುನಿವರ್ಸಲ್  ಲಿ, ತಂಬಿ ಮಾಡರ್ನ್ ಸ್ಪಿನ್ನಿಂಗ್ ಮಿಲ್ಸ್ ಲಿ, ಅಂಟೆಕ್ ಆಟೋ ಲಿ,.  ಆದರೆ, ಸಮೃದ್ಧಿ ರಿಯಾಲ್ಟಿ ಲಿ, ಕಂಪನಿ ನಿಯಮ ಪಾಲನೆ ಮಾಡಿದ್ದರೂ ಅದರ ಶುಲ್ಕ ಪಾವತಿ ಮಾಡಿಲ್ಲದ ಕಾರಣ ಅಮಾನತುಗೊಳಿಸಲಾಗುವುದು.

ವಿಲೀನ: ಎಬಿಸಿ ಬೇರಿಂಗ್ಸ್ ಲಿಮಿಟೆಡ್ ಕಂಪನಿಯನ್ನು ಟಿಂಕೆನ್ ಇಂಡಿಯಾ ಲಿಮಿಟೆಡ್‌ನಲ್ಲಿ ಪ್ರತಿ 8, ಎಬಿಸಿ ಬೇರಿಂಗ್ಸ್ ಲಿಮಿಟೆಡ್ ಷೇರುಗಳಿಗೆ 5 ಟಿಂಕೆನ್ ಇಂಡಿಯಾ ಲಿಮಿಟೆಡ್ ಷೇರು ನೀಡುವ ಮೂಲಕ ವಿಲೀನಗೊಳಿಸಿಕೊಳ್ಳಲು, ಅಲ್ಲದೆ ಎಬಿಸಿ ಬೇರಿಂಗ್ಸ್ ಷೇರುದಾರರಿಗೆ ₹0.625 ರ ಲಾಭಾಂಶ ನೀಡಲು ಸಹ ಈ ತಿಂಗಳ 25 ನಿಗದಿತ ದಿನ. 

ವಾರದ ಮುನ್ನೋಟ

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಫಲಿತಾಂಶದ ಅವಧಿ ಮುಕ್ತಾಯವಾಗಿದೆ. ಹೀಗಾಗಿ ಇನ್ನೇನಿದ್ದರೂ ಜಾಗತಿಕ ವಿದ್ಯಮಾನಗಳ ಪ್ರಭಾವದ ಮೇಲೆ ದೇಶದ ಷೇರುಪೇಟೆ ವಹಿವಾಟು ನಿರ್ಧಾರವಾಗಲಿದೆ.

ಚೀನಾ ಮತ್ತು ಅಮೆರಿಕ ಮಧ್ಯೆ ಇದೇ 22 ಮತ್ತು 23 ರಂದು ವಾಣಿಜ್ಯ ಮಾತುಕತೆ ನಡೆಯಲಿದೆ. ಉಭಯ ದೇಶಗಳ ಮಧ್ಯೆ ಮೂಡಿರುವ ವಾಣಿಜ್ಯ ಬಿಕ್ಕಟ್ಟು ಮಾತುಕತೆಯಲ್ಲಿ ಬಗೆಹರಿಯುವ ನಿರೀಕ್ಷೆ ವ್ಯಕ್ತವಾಗಿದೆ. ಇನ್ನು ಟರ್ಕಿಯ ಕರೆನ್ಸಿ ಲಿರಾ ಮತ್ತು ಭಾರತದ ರೂಪಾಯಿ ಮೌಲ್ಯದಲ್ಲಿನ ಏರಿಳಿತವು ಭಾರತದ ಷೇರುಪೇಟೆ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿವೆ.

ಬುಧವಾರ ಅಮೆರಿಕದ ಫೆಡರಲ್‌ ರಿಸರ್ವ್ ಬಡ್ಡಿದರ ಪಾರಮರ್ಶೆ ನಡೆಸಲಿದೆ. ಇದೂ ಸಹ ಹೂಡಿಕೆ ಚಟುವಟಿಕೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗುವ ಏರಿಳಿತವೂ ಮುಖ್ಯವಾಗಲಿದೆ.

(ಮೊ: 9886313380, ಸಂಜೆ 4.30 ರನಂತರ)

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !