ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನಿ ಸಾಧನೆಗಿಂತ ಸಾಮರ್ಥ್ಯಕ್ಕೆ ಮಣೆ

Last Updated 12 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಷೇರುಪೇಟೆಯ ಸಂವೇದಿ ಸೂಚ್ಯಂಕವು ಗುರುವಾರ ಮೊದಲ ಬಾರಿಗೆ 38 ಸಾವಿರದ ಗಡಿ ದಾಟಿ 38,076 ರಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. 2018ರ ಜನವರಿಯಿಂದ ಸುಮಾರು ಎರಡು ಸಾವಿರ ಅಂಶಗಳ ಏರಿಕೆ ಕಂಡರೂ ಆಗಿನ ದಾಖಲೆಯ ₹156.56 ಲಕ್ಷ ಕೋಟಿಯ ಬಂಡವಾಳ ಮೌಲ್ಯವನ್ನು ಮಾತ್ರ ತಲುಪಲಾಗಿಲ್ಲ. ಇದು ವಿಸ್ಮಯಕಾರಿ ಸಂಗತಿಯಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಪೇಟೆಯು ಕಂಪನಿಯ ಸಾಧನೆಗಿಂತ ಸಾಮರ್ಥ್ಯ ಮತ್ತು ಘನತೆಗೆ ಹೆಚ್ಚು ಮಣೆಹಾಕುತ್ತಿದೆ. ಬಾಂಬೆ ಡೈಯಿಂಗ್ ಕಂಪನಿ ಫಲಿತಾಂಶ ಉತ್ತಮವಾಗಿಲ್ಲವೆಂಬ ಕಾರಣಕ್ಕಾಗಿ ಶುಕ್ರವಾರ ಷೇರಿನ ಬೆಲೆ ₹242 ರ ಸಮೀಪಕ್ಕೆ ಕುಸಿಯಿತಾದರೂ ನಂತರದಲ್ಲಿ ಜಿಗಿತ ಕಂಡು ₹267 ರ ದಿನದ ಗರಿಷ್ಠ ಮಿತಿ ತಲುಪಿತು. ಈ ಷೇರು ‘ಟಿ’ ವಿಭಾಗದಲ್ಲಿದ್ದು ದೈನಂದಿನ ವಹಿವಾಟಿಗೆ ಅವಕಾಶವಿಲ್ಲದಿದ್ದರೂ ಈ ರೀತಿಯ ಚೇತರಿಕೆ ಪ್ರದರ್ಶಿಸುವುದು ಪೇಟೆಯ ಗುಣ.

ಕಂಪನಿಗಳು ತಮ್ಮ ಫಲಿತಾಂಶ ಪ್ರಕಟಿಸಿದ ಮೇಲೆಫಲಿತಾಂಶವು ಏನೇ ಇರಲಿ ಷೇರಿನ ಬೆಲೆ ಕುಸಿತ ಕಂಡು ನಂತರ ಪುಟಿದೇಳುವ ಸಂಪ್ರದಾಯ ಹೊಸದಾಗಿ ಸ್ಥಾಪಿತವಾದಂತಿದೆ.

ಈ ವಾರ ತಮ್ಮ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಿದ ಮದರ್ ಸನ್ ಸುಮಿ, ಟಿವಿಎಸ್ ಮೋಟರ್ಸ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಸ್ಟ್ರೈಡ್ಸ್ ಶಾಸೂನ್ ಕಂಪನಿಗಳ ಷೇರಿನ ರಭಸದ ಏರಿಳಿತಗಳು ಇದಕ್ಕೆ ಉತ್ತಮ ಉದಾಹರಣೆಯಾಗಿವೆ.

ಮ್ಯೂಚುವಲ್ ಫಂಡ್ ಮೌಲ್ಯವರ್ಧನೆ: ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್‌ನ ಷೇರುಗಳು ಸೋಮವಾರ ವಹಿವಾಟಿಗೆ ಬಿಡುಗಡೆಯಾಗಿದ್ದು ಅಂದು ಷೇರಿನ ಬೆಲೆ ₹1,842 ರ ಗರಿಷ್ಠದ ದಾಖಲೆ ಮಾಡಿದ ಕಾರಣ ಅನೇಕ ಮ್ಯೂಚುವಲ್ ಫಂಡ್‌ಗಳ ಎನ್‌ಎವಿ ಏರಿಕೆ ಕಂಡಿದೆ. ಕಾರಣ ಈ ಕಂಪನಿ ವಿತರಿಸಿದ ಬೆಲೆ ₹1,100 ರ ವಿರುದ್ಧ ಪೇಟೆ ಅಗಾಧ ಪ್ರಮಾಣದ ಲಾಭವನ್ನು ಗಳಿಸಿಕೊಟ್ಟು ಆ್ಯಂಕರ್‌ ಇನ್ವೆಸ್ಟರ್ ಕೋಟಾದಲ್ಲಿ ಷೇರುಗಳನ್ನು ಪಡೆದುಕೊಂಡ ಯೋಜನೆಗಳಿಗೆ ವರದಾನವಾದಂತಾಗಿದೆ.

ಈ ಆ್ಯಂಕರ್‌ ಇನ್ವೆಸ್ಟರ್ ಕೋಟಾದಲ್ಲಿ ಐಸಿಐಸಿಐ ಪ್ರುಡೆನ್ಶಿಯಲ್‌ನ ಹದಿನೈದು ವಿವಿಧ ಯೋಜನೆಗಳು ಭಾಗವಹಿಸಿ ಲಾಭ ಪಡೆದುಕೊಂಡಿವೆ. ರಿಲಯನ್ಸ್ ಬ್ಯಾಂಕಿಂಗ್ ಫಂಡ್, ಬಿರ್ಲಾ ಸನ್ ಲೈಫ್‌ನ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಶಿಯಲ್‌ ಸರ್ವಿಸಸ್ ಫಂಡ್ ಮುಂತಾದವುಗಳು ಆ್ಯಂಕರ್‌ ಇನ್ವೆಸ್ಟರ್ ಕೋಟಾದಲ್ಲಿ ಈ ಕಂಪನಿ ಷೇರುಗಳನ್ನು ಪಡೆದುಕೊಂಡಿವೆ.

ಬೋನಸ್‌ ಷೇರು: ಇಗರ್ಷಿ ಮೋಟರ್ಸ್ ಇಂಡಿಯಾ ಲಿಮಿಟೆಡ್ ಪ್ರತಿ 202 ಷೇರುಗಳಿಗೆ 25 ಷೇರುಗಳಂತೆ ಬೋನಸ್ ಷೇರು ಪ್ರಕಟಿಸಿದೆ.

ಮುಖಬೆಲೆ ಸೀಳಿಕೆ: ಬ್ರಿಟಾನಿಯಾ ಇಂಡಸ್ಟ್ರೀಸ್ ಕಂಪನಿ 23 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ. ಝೆನ್ಸಾರ್ ಟೆಕ್ನಾಲಜಿಸ್ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಸೆಪ್ಟೆಂಬರ್ 10 ನಿಗದಿತ ದಿನ.
ಇಂಡಿಯನ್ ಎನರ್ಜಿ ಎಕ್ಸ್‌ಚೇಂಜ್ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲಿದೆ.

ಡಿಎಂಎಫ್ ಫುಡ್ಸ್ ಲಿಮಿಟೆಡ್ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ. ಜೆಎಂಸಿ ಪ್ರಾಜೆಕ್ಟ್ಸ್ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ.

ಟಿಸಿಎಸ್ ಷೇರು ಮರುಖರೀದಿಮಾಡಲು ಈ ತಿಂಗಳ 18 ನಿಗದಿತ ದಿನವಾಗಿದೆ. 14 ರಿಂದಲೇ ಎಕ್ಸ್ ಆಧಾರದ ವಹಿವಾಟು ಆರಂಭವಾಗಲಿದೆ.

ವಾರದ ಮುನ್ನೋಟ
ಹಣದುಬ್ಬರದ ಅಂಕಿ–ಅಂಶ, ತ್ರೈಮಾಸಿಕ ಫಲಿತಾಂಶ ಮತ್ತು ಜಾಗತಿಕ ವಿದ್ಯಮಾನಗಳು ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ. ಕಚ್ಚಾ ತೈಲ ದರ, ರೂಪಾಯಿ ಮೌಲ್ಯದಲ್ಲಿನ ವ್ಯತ್ಯಯ ಮತ್ತು ಮುಂಗಾರು ಸಹ ಸೂಚ್ಯಂಕದ ಏರಿಳಿತವನ್ನು ನಿರ್ಧರಿಸಲಿವೆ. ಸ್ವಾತಂತ್ರ್ಯದಿನಾಚರಣೆ ಪ್ರಯುಕ್ತಬುಧವಾರ ವಹಿವಾಟಿಗೆ ರಜೆ. ಹೀಗಾಗಿ ಕೇವಲ ನಾಲ್ಕು ದಿನಗಳ ವಹಿವಾಟು ನಡೆಯಲಿವೆ.

(ಮೊ: 9886313380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT