ಗುರುವಾರ , ಆಗಸ್ಟ್ 13, 2020
21 °C

ಷೇರುಪೇಟೆಯಲ್ಲಿ ಅಸ್ಥಿರ ವಾತಾವರಣ

ಕೆ.ಜಿ.ಕೃಪಾಲ್ Updated:

ಅಕ್ಷರ ಗಾತ್ರ : | |

ಷೇರುಪೇಟೆಯಲ್ಲಿ ಅತಿ ಹೆಚ್ಚು ಅಸ್ಥಿರತೆಯನ್ನು ಕಾಣಬಹುದಾಗಿದ್ದರೂ, ಕೆಲವೊಮ್ಮೆ ಅಲ್ಪಾವಧಿ ಲಾಭಗಳಿಕೆಗೆ ಅವಕಾಶಗಳು ಸೃಷ್ಟಿಯಾಗುತ್ತವೆ. ಕಚ್ಚಾ ತೈಲ ದರ ಏರಿಕೆ ಮತ್ತು ರೂಪಾಯಿಯ ಬೆಲೆ ಕುಸಿತಗಳು ಈ ವಾರ ಷೇರಿನ ಬೆಲೆಗಳನ್ನು ಹೆಚ್ಚು ಕುಸಿತ ಕಾಣುವಂತೆ ಮಾಡಿದವು. ಆದರೆ, ವಾರಾಂತ್ಯದಲ್ಲಿ ಕಚ್ಚಾ ತೈಲಬೆಲೆ ಇಳಿಕೆಯಾಗಿ ರೂಪಾಯಿಯ ಬೆಲೆ ಚೇತರಿಕೆ ಕಂಡರೂ ಅದಕ್ಕೆ ಪೇಟೆ ಸೂಕ್ತವಾಗಿ ಸ್ಪಂದಿಸಲಿಲ್ಲ.

ವಹಿವಾಟು ಇಳಿಕೆಯಲ್ಲಿದ್ದಾಗ ಅನೇಕ ರೀತಿಯ ನಕಾರಾತ್ಮಕ ಅಂಶಗಳು ಬೆಳಕಿಗೆ ಬರುತ್ತವೆ. ಅಂತಹದರಲ್ಲಿ ಈಗ ಬಯಲಿಗೆ ಬಂದಿರುವ ವಿಷಯವೆಂದರೆ ಹೌಸಿಂಗ್ ಫೈನಾನ್ಸ್ ಮತ್ತು ಬ್ಯಾಂಕಿಂಗ್‌ಯೇತರ ಕಂಪನಿಗಳು ಆರ್ಥಿಕ ಒತ್ತಡದಲ್ಲಿ ಇರುವುದರ ಜೊತೆಗೆ ಐಎಲ್‌ಆ್ಯಂಡ್‌ಎಫ್‌ಎಸ್‌ ಗೊಂದಲವು ಇತರೆ ಕಂಪನಿಗಳಿಗೆ ಹರಡಿಕೊಂಡಿರುವುದು ವಲಯದಲ್ಲಿ ಮತ್ತಷ್ಟು ಒತ್ತಡವನ್ನು ಹೇರುವುದೆಂಬ ಭಾವನೆ ಮೂಡಿಸಿದೆ.

ಇದು ಹೌಸಿಂಗ್ ಫೈನಾನ್ಸ್ ಮತ್ತು ಬ್ಯಾಂಕಿಂಗ್‌ಯೇತರ ಕಂಪನಿಗಳ ಷೇರುಗಳಲ್ಲಿ ಭಾರಿ ಕುಸಿತ ಕಾಣುವಂತೆ ಮಾಡಿದೆ. ಕಂಪನಿಗಳು ಉತ್ತಮ ಸಾಧನೆ ಪ್ರದರ್ಶಿಸಿದರು ಸಹ ಸ್ಥಿರತೆ ಕಾಣದೆ ಕುಸಿತ ಕಂಡಿರುವುದು ಪೇಟೆಯ ಚಂಚಲತೆಗೆ ಹಿಡಿದ ಕನ್ನಡಿಯಾಗಿದೆ. 

ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪನಿಯು ಉತ್ತಮ ಫಲಿತಾಂಶ ಪ್ರಕಟಿಸಿದ್ದು, ಪ್ರತಿ ಷೇರಿಗೆ ₹10 ರ ಲಾಭಾಂಶ ಪ್ರಕಟಿಸಿದೆ. ಫಲಿತಾಂಶ ಪ್ರಕಟವಾದ ಮೇಲೆ ಷೇರಿನ ಬೆಲೆ ₹950ನ್ನು ದಾಟಿದ್ದರೂ ಕೇವಲ ಎರಡೇ ದಿನಗಳಲ್ಲಿ ₹659 ರ ವಾರ್ಷಿಕ ಕನಿಷ್ಠಕ್ಕೆ ಕುಸಿದಿದೆ. ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್‌ಯೇತರ ಕಂಪನಿಗಳ ಮೀಸಲು ಬಗ್ಗೆ ರಿಯಾಯ್ತಿ ಪ್ರಕಟಿಸಿದರು ಸಹ ಆ ವಲಯದ ಕಂಪನಿಗಳ ಮಾರಾಟದ ಒತ್ತಡ ಹೆಚ್ಚಾಗಿಯೇ ಇತ್ತು. 

ಇತರೆ ಕಂಪನಿಗಳಾದ ಪಿಎನ್‌ಬಿ ಹೌಸಿಂಗ್ ಫೈನಾನ್ಸ್, ರೆಪ್ಕೊ ಹೋಮ್ ಫೈನಾನ್ಸ್, ಗೃಹ ಫೈನಾನ್ಸ್, ಎಡೆಲ್ವಿಸ್ ಫೈನಾನ್ಸ್, ಯೆಸ್‌ ಬ್ಯಾಂಕ್, ಆರ್‌ಬಿಎಲ್‌ ಬ್ಯಾಂಕ್, ಬಂಧನ್‌ ಬ್ಯಾಂಕ್  ಮುಂತಾದವುಗಳು ಹೆಚ್ಚು ಇಳಿಕೆ ಕಂಡಿವೆ. 

ಲೋಹ ವಲಯದ ಕಂಪನಿಗಳಾದ ಟಾಟಾ ಸ್ಟೀಲ್, ವೇದಾಂತ, ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಹೆಚ್ಚಿನ ಕುಸಿತ ಕಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮೈಂಡ್ ಟ್ರೀ ಕಂಪನಿಗಳು ಪ್ರಕಟಿಸಿದ ಫಲಿತಾಂಶ ತೃಪ್ತಿದಾಯಕವಲ್ಲವೆಂಬ ಕಾರಣಕ್ಕಾಗಿ ಭಾರಿ ಮಾರಾಟಕ್ಕೊಳಗಾಗಿ ಹೆಚ್ಚಿನ ಕುಸಿತ ಕಂಡಿವೆ.

ಇಂಟರ್‌ನೆಟ್‌ ಸಾಫ್ಟ್‌ವೇರ್‌, 8ಕೆ ಮೈಲ್ಸ್ ಷೇರಿನ ಬೆಲೆ ಆಗಸ್ಟ್ ತಿಂಗಳಲ್ಲಿದ್ದ ₹ 380ರ ಸಮೀಪದಿಂದ ₹106.45 ರವರೆಗೂ ಶುಕ್ರವಾರ ಕುಸಿದಿದೆ. ಕುಸಿತಕ್ಕೆ ಕಾರಣಗಳು ಬೇರೆ ಬೇರೆಯಾದರೂ, ಹೂಡಿಕೆ ದೃಷ್ಟಿಯಿಂದ ಬಂಡವಾಳ ನಾಶಗೊಳಿಸಿದ ಕಂಪನಿಗಳಾಗಿವೆ.

ಮುಖಬೆಲೆ ಸೀಳಿಕೆ: ದಾಮೋದರ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲು ಈ ತಿಂಗಳ 26 ನಿಗದಿತ ದಿನ.

ವ್ಯವಸ್ಥಿತ ಯೋಜನೆ: ಕಾಕ್ಸ್ ಆ್ಯಂಡ್‌ ಕಿಂಗ್ಸ್ ಲಿಮಿಟೆಡ್ ಕಂಪನಿಯ ವಿದೇಶಿ ವಿನಿಮಯ ವಿಭಾಗವನ್ನು ಬೇರ್ಪಡಿಸಿ ಕಾಕ್ಸ್ ಆ್ಯಂಡ್‌ ಕಿಂಗ್ಸ್ ಫೈನಾನ್ಶಿಯಲ್‌ ಸರ್ವೀಸಸ್‌ ಲಿಮಿಟೆಡ್ ರಚಿಸಿ ಪ್ರತಿ ಮೂರು ಕಾಕ್ಸ್ ಆ್ಯಂಡ್‌ ಕಿಂಗ್ಸ್ ಷೇರಿಗೆ 1 ಕಾಕ್ಸ್ ಅಂಡ್ ಕಿಂಗ್ಸ್ ಫೈನಾನ್ಶಿಯಲ್‌ ಸರ್ವೀಸಸ್‌ ಷೇರು ನೀಡಲು ಈ ತಿಂಗಳ 26 ನಿಗದಿತ ದಿನ.

ವಿಸ್ಮಯಕಾರಿ ಪೇಟೆ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ಸರ್ಕಾರಿ ವಲಯದಲ್ಲಿ ಅತ್ಯಂತ ಹೆಚ್ಚು ಲಾಭಗಳಿಕೆಯಲ್ಲಿರುವ ಪ್ರತಿಷ್ಠಿತ ಕಂಪನಿ.  ಈ ಕಂಪನಿ ನವೆಂಬರ್ 2 ರಂದು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ. ಈ ಕಂಪನಿ ಜೂನ್ ಅಂತ್ಯದಲ್ಲಿ ₹6,831 ಕೋಟಿ ಲಾಭಗಳಿಸಿತ್ತು.

ವಹಿವಾಟಿನ ಗಾತ್ರವು ಹೆಚ್ಚಿತ್ತು.  ಷೇರಿನ ಬೆಲೆ ಜೂನ್ ತಿಂಗಳಲ್ಲಿ ₹175 ರ ಸಮೀಪವಿದ್ದು ನಂತರ ಕ್ರಮೇಣ ಇಳಿಕೆ ಕಂಡು ಕೇಂದ್ರ ಸರ್ಕಾರದ ಈ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ  ₹1 ರಷ್ಟು ಇಳಿಸಿದ ಕಾರಣ ₹10 ರ ಮುಖಬೆಲೆಯ ಈ ಷೇರಿನ ಬೆಲೆ ₹105 ರವರೆಗೂ ಕುಸಿದು ಈಗ ₹133 ರ ಸಮೀಪವಿದೆ.   ಈ ಕಂಪನಿಯ ಬಂಡವಾಳ ಮೌಲ್ಯವು ಜೂನ್ ತಿಂಗಳ ಅಂತ್ಯದಲ್ಲಿ ₹1,73,533 ಕೋಟಿ ಇದ್ದದ್ದು ಈಗ ₹1,29,167 ಕ್ಕೆ ಇಳಿದು ಉತ್ತಮ ವ್ಯಾಲ್ಯೂ ಪಿಕ್ ಆಗಿದೆ. ಪಿರಾಮಲ್ ಎಂಟರ್‌ಪ್ರೈಸಸ್‌ ಷೇರಿನ ಬೆಲೆ  ಈ ವರ್ಷದ ಆಗಸ್ಟ್ 31 ರಂದು ₹3,302 ರ ವಾರ್ಷಿಕ ಗರಿಷ್ಠದಲ್ಲಿದ್ದು ಅಕ್ಟೋಬರ್ 19 ರಂದು ಶುಕ್ರವಾರ ಷೇರಿನ ಬೆಲೆ ₹1,860 ಕ್ಕೆ ಕುಸಿದು ವಾರ್ಷಿಕ ಕನಿಷ್ಠದ ದಾಖಲೆ ಕಂಡಿದೆ. ಕೇವಲ ಒಂದೆರಡು ತಿಂಗಳಲ್ಲೇ ಇಂತಹ ತೊಳಲಾಟ ಪ್ರದರ್ಶಿಸುತ್ತಿರುವುದು ಪೇಟೆಯ ವೈಶಿಷ್ಟ್ಯವಾಗಿದೆ.

ಮಾರುತಿ ಸುಜುಕಿ ಕಂಪನಿ ಷೇರು  ಈ ತಿಂಗಳಲ್ಲಿ ₹6,650ರ ವಾರ್ಷಿಕ ಕನಿಷ್ಠಕ್ಕೆ ಕುಸಿದ ನಂತರ  ಹಿಂದಿನ ವಾರ ₹7,300 ರವರೆಗೂ ಏರಿಕೆ ಕಂಡಿತು.  ಆದರೆ, ಶುಕ್ರವಾರ ₹6,730 ರ ಸಮೀಪಕ್ಕೆ ಕುಸಿದು ₹6,760ರಲ್ಲಿ ಕೊನೆಗೊಂಡಿದೆ. ಇದು ಪೇಟೆಯಲ್ಲಿ ಆಗುತ್ತಿರುವ ಬದಲಾವಣೆಗಳ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ.

ಕೆಳಮಧ್ಯಮ ಶ್ರೇಣಿ ಕಂಪನಿ ಬೊರೋಸಿಲ್‌ ಗ್ಲಾಸ್ ವರ್ಕ್ಸ್ ಲಿಮಿಟೆಡ್ ಷೇರಿನ ಬೆಲೆ ಒಂದೇ ವಾರದಲ್ಲಿ ₹254 ರಿಂದ ₹298 ರವರೆಗೂ ಏರಿಕೆ ಕಂಡು ನಂತರ ₹269 ರಲ್ಲಿ ವಾರಾಂತ್ಯ ಕಂಡಿದೆ.

ವಾರದ ಮುನ್ನೋಟ

ಈ ವಾರದ ವಹಿವಾಟಿನ ಮೇಲೆ ಮುಖ್ಯವಾಗಿ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆಯು ಹೆಚ್ಚು ಪ್ರಭಾವ ಬೀರಲಿದೆ.

ಫಲಿತಾಂಶದ ಆಧಾರದ ಮೇಲೆ ಆಯಾ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಏರಿಳಿತ ಆಗಲಿದ್ದು, ವಹಿವಾಟಿನಲ್ಲಿಯೂ ಏರಿಳಿತ ಸೃಷ್ಟಿಸಲಿವೆ.

ಭಾರ್ತಿ ಏರ್‌ಟೆಲ್‌, ವಿಪ್ರೊ, ಬಜಾಜ್‌ ಆಟೊ, ಬಿಎಚ್‌ಇಎಲ್‌, ಎಚ್‌ಸಿಎಲ್‌ ಟೆಕ್‌ ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಕಂಪನಿಗಳು ತಮ್ಮ ಆರ್ಥಿಕ ಸಾಧನೆ ಪ್ರಕಟಿಸಲಿವೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ವ್ಯತ್ಯಯ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗಲಿರುವ ಏರಿಳಿತವೂ ಸೂಚ್ಯಂಕದ ಚಲನೆಯ ಮೇಲೆ ಪರಿಣಾಮ ಬೀರಲಿವೆ.

ಧನ್ಯವಾದ

ಹದಿಮೂರು ವರ್ಷಗಳಿಂದ ಷೇರುಪೇಟೆಯ ಬಗೆಗಿನ ನನ್ನ ಜಾಗೃತಿ ಮೂಡಿಸುವ ಲೇಖನಗಳನ್ನು ಪ್ರತಿ ವಾರವೂ ಪ್ರಕಟಿಸಿ ಸಾಮಾನ್ಯರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ನೆರವಾದ ‘ಪ್ರಜಾವಾಣಿ’ಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

(ಮೊ: 9886313380, ಸಂಜೆ 4.30 ರನಂತರ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು