ಮಹಾ ಶಿವರಾತ್ರಿಗೆ ಶಿವಗಿರಿ ಸಜ್ಜು..!

ಸೋಮವಾರ, ಮಾರ್ಚ್ 25, 2019
28 °C

ಮಹಾ ಶಿವರಾತ್ರಿಗೆ ಶಿವಗಿರಿ ಸಜ್ಜು..!

Published:
Updated:
Prajavani

ವಿಜಯಪುರದ ಹೊರ ವಲಯದಲ್ಲಿರುವ ಶಿವಗಿರಿ ಮಹಾ ಶಿವರಾತ್ರಿಗೆ ಸಜ್ಜುಗೊಂಡಿದೆ. ಈ ಬಾರಿ ಹಬ್ಬ ಸೋಮವಾರ ಬಂದಿರುವುದು ಭಕ್ತ ಸಮೂಹದಲ್ಲಿ ಅಪಾರ ಸಂತಸದ ಜತೆಗೆ ಶ್ರದ್ಧೆಯನ್ನು ಹೆಚ್ಚಿಸಿದೆ.

ಶಿವಗಿರಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ 85 ಅಡಿ ಎತ್ತರದ ಶಿವನ ಮೂರ್ತಿಯ ದರ್ಶನಕ್ಕಾಗಿ ಹಬ್ಬದ ದಿನದಂದು ನಗರ, ಜಿಲ್ಲೆಯ ಜನರು ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳ ಭಕ್ತ ಸಮೂಹ, ದೂರದ ಪ್ರದೇಶಗಳ ಭಕ್ತರು ಇಲ್ಲಿಗೆ ಭೇಟಿ ನೀಡುವುದು ವಿಶೇಷ.

ಶಿವನ ಆರಾಧನೆಗೆ, ಪೂಜೆಗೆ ಶ್ರೇಷ್ಠ ದಿನ ಸೋಮವಾರ ಎಂಬುದು ಅಪಾರ ಸಂಖ್ಯೆಯ ಶಿವ ಭಕ್ತರದ್ದು. ಇದು ಶಿವರಾತ್ರಿ ಆಚರಣೆಯ ಶ್ರದ್ಧೆಯನ್ನು ಹೆಚ್ಚಿಸಿದೆ. ಎಲ್ಲೆಡೆ ಹಬ್ಬದ ಶ್ರದ್ಧಾಭಕ್ತಿ ಮುಗಿಲು ಮುಟ್ಟಿದೆ.

ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಶ್ರದ್ಧಾ ಭಕ್ತಿಯ ಸಂಗಮ ಗೋಚರಿಸುತ್ತಿದೆ. ಎಲ್ಲ ದೇಗುಲಗಳಲ್ಲೂ ವಿಶೇಷ ಪೂಜೆ, ಅಭಿಷೇಕ, ಜಾಗರಣೆಯ ಸಿದ್ಧತೆ ಭರದಿಂದ ನಡೆದಿವೆ.

ನಗರ ಹೊರವಲಯದ ಶಿವಗಿರಿಯಲ್ಲೂ ಮಹಾ ಶಿವರಾತ್ರಿಯ ಆಚರಣೆಗೆ ಸಕಲ ಸಿದ್ಧತೆ ಬಿರುಸುಗೊಂಡಿವೆ. ಶಿವಗಿರಿಯಲ್ಲಿನ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಇದೀಗ 13ರ ಸಂಭ್ರಮ.

ಶಿವಗಿರಿಯ ಉಸ್ತುವಾರಿ ನಿರ್ವಹಿಸುತ್ತಿರುವ ಟಿ.ಕೆ.ಪಾಟೀಲ (ಬೆನಕಟ್ಟಿ) ಚಾರಿಟೆಬಲ್‌ ಟ್ರಸ್ಟ್‌ ಈ ವರ್ಷದ ಉತ್ಸವವನ್ನು ಧಾರ್ಮಿಕ ಶ್ರದ್ಧಾ–ಭಕ್ತಿಯ ಆಚರಣೆ ಜತೆಗೆ, ಸಾಂಸ್ಕೃತಿಕವಾಗಿಯೂ ವಿಜೃಂಭಣೆಯಿಂದ ಆಚರಿಸಲು ಕಾರ್ಯಕ್ರಮ ಆಯೋಜಿಸಿದೆ.

ಚಾಲನೆ ಇಂದು:

ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಶಿವಗಿರಿಯ ಟಿ.ಕೆ.ಪಾಟೀಲ ಚಾರಿಟೆಬಲ್‌ ಟ್ರಸ್ಟ್‌ ಭಾನುವಾರ ರುದ್ರ ಮೃತ್ಯುಂಜಯ ಹೋಮ ನಡೆಸುವ ಮೂಲಕ ಚಾಲನೆ ನೀಡಲಿದೆ.

ಹಬ್ಬದ ದಿನ ಸೋಮವಾರ ನಸುಕಿನ 4.30ಕ್ಕೆ ಕಾಶಿ ವಿಶ್ವನಾಥನಿಗೆ ರುದ್ರಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಪಂಚ ಕಳಸಾರ್ಚನೆ ಬಳಿಕ ಪ್ರತಿ ತಾಸಿಗೊಮ್ಮೆ ಪೂಜೆ ನಡೆಯಲಿದೆ. ಇದು ಅಹೋರಾತ್ರಿ ನೆರವೇರಲಿದೆ.

ಬೆಳಿಗ್ಗೆ 6ಕ್ಕೆ ಮಂಗಳ ವಾದ್ಯಗಳೊಂದಿಗೆ ಶಹನಾಯಿ ಕಾರ್ಯಕ್ರಮ, 7ಕ್ಕೆ ಜಾತ್ರಾ ಉತ್ಸವದ ಧ್ವಜಾರೋಹಣ, 8.30ಕ್ಕೆ ಪೂಜೆ, 10 ಗಂಟೆಯಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ ನಡೆಯಲಿವೆ.

ಕಿರುತೆರೆಯ ವಿವಿಧ ರಿಯಾಲಿಟಿ ಶೋಗಳಲ್ಲಿ ಮಿಂಚಿರುವ ದೊಡ್ಡಪ್ಪ, ಉಮಾ, ಭೂಮಿಕಾ ಗಡದ, ದರ್ಶನ್, ಕಾಮಿಡಿ ಕಿಲಾಡಿಗಳ ತಂಡದ ಅಪ್ಪಣ್ಣ ರಾಮದುರ್ಗ, ವಾಣಿ ಚನ್ನರಾಯಪಟ್ಟಣ, ಮಿಂಚು ಮಂಡ್ಯ, ಸದಾನಂದ ಕಾಳೆ, ಶಿರುಂಡೆ ರಘು, ರಾಯಲ್ ರವಿ ತಮ್ಮ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ ಎಂದು ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಆರ್‌.ಟಿ.ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮಧ್ಯಾಹ್ನ 2ಕ್ಕೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4.30ಕ್ಕೆ ಪಂಚಲೋಹದ ಬಂಗಾರ ಲೇಪಿತ 23 ಅಡಿ ಎತ್ತರದ ರಥದಲ್ಲಿ ಶಿವನ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ, ಒಂದೆಡೆ ವಿಜಯಪುರದ ಮುತ್ತೈದೆಯರು ರಥದ ಹಗ್ಗ ಎಳೆದರೆ, ಇನ್ನೊಂದೆಡೆ ಸೊಸೆಯರು ಹಗ್ಗ ಎಳೆಯಲಿದ್ದಾರೆ. ಇದು ಹಿಂದಿನ ವರ್ಷದಿಂದ ಆರಂಭಗೊಂಡಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !