ರೋಗಿಯ ‘ವ್ಯಕ್ತಿತ್ವ’ ಮರೆಯದಿರೋಣ

7

ರೋಗಿಯ ‘ವ್ಯಕ್ತಿತ್ವ’ ಮರೆಯದಿರೋಣ

ಡಾ.ಸುಶಿ ಕಾಡನಕುಪ್ಪೆ
Published:
Updated:

ಆರೋಗ್ಯದಲ್ಲಿ ಏರುಪೇರಾದರೆ, ಎಂದಿನಂತೆ ಸರಾಗವಾಗಿ ನಡೆಯುತ್ತಿದ್ದ ನಮ್ಮ ಚಟುವಟಿಕೆಗಳು ವಿಚಲಿತಗೊಳ್ಳುತ್ತವೆ. ರೋಗ ತೀವ್ರತರವಾಗಿದ್ದರೆ ರೋಗಿಯ ಜೀವನದ ಕೆಲವು ಚಟುವಟಿಕೆಗಳು ಪೂರ್ತಿ ಏರುಪೇರಾಗುತ್ತವೆ. ಕ್ಲಿಷ್ಟ ಆರೋಗ್ಯ ಸಮಸ್ಯೆಯಿದ್ದರೆ ರೋಗಿಯಷ್ಟೇ ಅಲ್ಲ, ರೋಗಿಯನ್ನು ಆರೈಕೆ ಮಾಡುವ ಕುಟುಂಬದವರಿಗೂ ಜೀವನದ ಹಾದಿ ತಾತ್ಕಾಲಿಕವಾಗಿಯಾದರೂ ಧಡಕ್ಕನೆ ನಿಂತುಬಿಡುತ್ತದೆ. ಆಸ್ಪತ್ರೆ ಖರ್ಚು ಭರಿಸಲು ಅದೆಷ್ಟೋ ಕುಟುಂಬಗಳು ಬಡತನ ರೇಖೆ
ಯಿಂದ ಕೆಳಗಿಳಿದಿವೆ. ‘ಆರೋಗ್ಯವೇ ಭಾಗ್ಯ’ಎಂಬುದು ಅರಿವಾಗುವುದು ಇಂತಹ ಸಂದರ್ಭಗಳಲ್ಲೇ.

ನಮ್ಮ ತಂದೆಗೆ ಥೈಮೋಮ ಎಂಬ ಅಪರೂಪದ ಕ್ಯಾನ್ಸರ್ ಗಡ್ಡೆ ಇದೆ. ಥೈಮೋಮ ನಮ್ಮ ತಂದೆಗೆ ಮಯಾಸ್ತೆನಿಯಾ ಗ್ರೇವಿಸ್ ಎಂಬ ಮತ್ತೊಂದು ಅಪರೂಪದ ಕಾಯಿಲೆಯನ್ನೂ ತಂದುಕೊಟ್ಟಿದೆ. ಇದೊಂದು ಮಾಂಸಖಂಡಗಳ ಚಟುವಟಿಕೆ ಕುಂದಿಸುವ ನರ ಸಂಬಂಧಿ ರೋಗವಾಗಿದೆ. ದೇಹದ ಚಲನವಲನಕ್ಕೆ, ಉಸಿರಾಟಕ್ಕೆ, ಆಹಾರ ಅಗಿದಾದ ಮೇಲೆ ನುಂಗುವ ಕ್ರಿಯೆಗೆ ಬೇಕಾಗುವ ಮಾಂಸಖಂಡಗಳು ತಮ್ಮ ಕೆಲಸಕಾರ್ಯ ನಿಲ್ಲಿಸಿಬಿಡುತ್ತವೆ. ಈ ಮಾಂಸಖಂಡಗಳಿಗೆ ಕೆಲಸ ಮಾಡಲು 
ಸೂಚನೆ ನೀಡುವ ನರಮಂಡಲ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಈ ಸೂಚನೆಗಳನ್ನು ಕೊಂಡೊಯ್ಯುವ ನರಗಳು ಮಾಂಸಖಂಡಗಳಿಗೆ ಸೂಚನೆ ನೀಡುವಲ್ಲಿ ವಿಫಲಗೊಳ್ಳುತ್ತವೆ. ಇದಕ್ಕೆ ಕಾರಣ, ನರಗಳು ತಂದುಕೊಡುವ ಸೂಚನೆಗಳನ್ನು ಸ್ವೀಕರಿಸುವ ಮಾಂಸಖಂಡಗಳ ರಿಸೆಪ್ಟಾರ್‌ಗಳ ಮೇಲೆಯೇ ಥೈಮೋಮ ಗಡ್ಡೆಯಿಂದ ಉತ್ಪತ್ತಿಯಾಗುವ ಅಟೊ ಆಂಟಿಬಾಡಿಗಳು (ರೋಗನಿರೋಧಕ ಪ್ರತಿಕಾಯಗಳು) ಕೂತುಬಿಡುತ್ತವೆ. ಇವು ರಿಸೆಪ್ಟಾರ್‌ಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಮಾಂಸಖಂಡಗಳು ಕ್ರಮೇಣ ತಮ್ಮ ಕೆಲಸವನ್ನು ನಿಲ್ಲಿಸಿಬಿಡುತ್ತವೆ. ದೇಹದ ಇನ್ನಿತರ ಎಲ್ಲಾ ಅಂಗಾಂಗಗಳು ಎಷ್ಟೇ ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ದೇಹದ ಮಾಂಸಖಂಡಗಳು ನಿಷ್ಕ್ರಿಯಗೊಂಡಾಗ ಆಗುವ ಅನಾಹುತಗಳು ತೀವ್ರತರವಾಗಿರುತ್ತವೆ. ಕೈಕಾಲಿನ ಮಾಂಸಖಂಡಗಳು ನಿತ್ರಾಣವಾಗುತ್ತವೆ. ಅಗಿದ ಆಹಾರವನ್ನು ನುಂಗಲು ಗಂಟಲಿನ ಮಾಂಸಖಂಡಗಳು ಸೋಲುತ್ತವೆ. ಮೂಗಿನಿಂದ ಎಳೆದುಕೊಳ್ಳುವ ಉಸಿರನ್ನು ಶ್ವಾಸಕೋಶಗಳು ಎಳೆದುಕೊಳ್ಳಲು ಬೇಕಾಗುವ ಉಸಿರಾಟದ ಮಾಂಸ
ಖಂಡಗಳು ಸೋಲುತ್ತವೆ; ಉಸಿರಾಟ ನಿಲ್ಲುತ್ತದೆ. ಉಸಿರಾಟವೇ ನಿಂತುಹೋದರೆ ದೇಹದಲ್ಲಾಗುವ ಏರುಪೇರುಗಳ ಭೀಕರತೆ ಊಹಿಸಿಕೊಳ್ಳಬಹುದು.

ನಾವು ನಮ್ಮ ತಂದೆಯವರ ಆರೈಕೆಯಲ್ಲಿ ಆಸ್ಪತ್ರೆಯಲ್ಲಿದ್ದಾಗ ಇತರ ರೋಗಿಗಳು ಮತ್ತು ಅವರ ಮನೆಯವರ ಸ್ಥಿತಿಗಳನ್ನು ಗ್ರಹಿಸುವ ಅವಕಾಶ ಇತ್ತು. ಒಬ್ಬ ನಿವೃತ್ತಿಹೊಂದಿದ ವಯಸ್ಸಾದ ವ್ಯಕ್ತಿ ತನ್ನ ಪತ್ನಿಯ ಆರೈಕೆಯಲ್ಲಿ ಎರಡು ತಿಂಗಳು ಕಳೆದರು. ಆಕೆಗೆ ಅತಿಯಾದ ರಕ್ತದೊತ್ತಡದಿಂದ ನರಮಂಡಲದ ಸ್ಟ್ರೋಕ್ ಆಗಿ ದೇಹ ನಿಷ್ಕ್ರಿಯವಾಗಿತ್ತು. ಸ್ವಲ್ಪ ಮಟ್ಟಿಗಿನ ಜ್ಞಾನವಿತ್ತು ಮಕ್ಕಳೆಲ್ಲ ವಿದೇಶದಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಆಕೆಗೆ ಆಸ್ಪತ್ರೆಯಲ್ಲೇ ಹೆಚ್ಚು ದಿನ ಆರೈಕೆ ಮಾಡಬೇಕಾಯಿತು. ನಾವು ಇದ್ದಂತೆಯೇ ಒಂದು ದಿನ ಡಿಸ್ಚಾರ್ಜ್ ಆಗಿ ಮನೆಗೆ ಹೋದರು. ಇನ್ನು ಕೆಲವರು ಇಳಿಯಸ್ಸಿನ ರೋಗಿಗಳು, ಮಧ್ಯವಯಸ್ಕ ರೋಗಿಗಳು, ಮತ್ತೆ ಕೆಲವರು ಅಪಘಾತದಿಂದಲೋ ಅಥವಾ ವೈಯಕ್ತಿಕ ಜಗಳಗಳಿಂದಾಗುವ ಹಲ್ಲೆಗಳಿಂದ ಐಸಿಯುನಲ್ಲಿದ್ದರು. ಎಳೆಮಕ್ಕಳು ಕೂಡ ಹಲವು ಅನಾರೋಗ್ಯದ ಕಾರಣಗಳಿಂದ ಆಸ್ಪತ್ರೆಯಲ್ಲಿ ರೋಗಿಗಳಾಗಿದ್ದರು. ಇವರಂತೆ ಅದೆಷ್ಟೋ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ನಿಜ. ಆದರೆ ಇವರನ್ನು ಕೇವಲ ರೋಗಿಗಳನ್ನಾಗಿ ಮಾತ್ರ ಹೇಗೆ ಗುರುತಿಸುವುದು? ಪ್ರತಿಯೊಂದು ರೋಗಿಗೂ ಅವಳದ್ದೇ ಆದ ಒಂದು ಬದುಕಿನ ಕತೆಯಿದೆ. ಆ ಬದುಕಿನಲ್ಲಿ ಆತನ ಸಾಧನೆಗಳಿವೆ, ವೈಫಲ್ಯಗಳಿವೆ. ನೋವಿದೆ, ನಲಿವಿದೆ. ಆಕೆಯ ಬದುಕಿನಿಂದ ಚಿಗುರೊಡೆದ ನವಿರಾದ ಸಂಬಂಧಗಳಿವೆ. ದೇಹ ಮನಸ್ಸುಗಳ ಸಮ್ಮಿಲನದಿಂದ ಒಡಮೂಡುವ ಪ್ರಜ್ಞೆ, ಆ ಮೂಲಕ ಪ್ರತಿ ವ್ಯಕ್ತಿಗೆ ಒಂದು ಗುರುತನ್ನು ಮೂಡಿಸಿಕೊಳ್ಳುವ ಅವಕಾಶ ತಂದುಕೊಡುತ್ತದೆ. ಪ್ರತಿಯೊಬ್ಬ ಮನುಷ್ಯನ ಜೀವನ ಅನುಭವ ಮತ್ತು ಗ್ರಹಿಕೆಗಳು ಆ ವ್ಯಕ್ತಿಗೆ ಅವನದ್ದೇ ಆದ ವಿಶಿಷ್ಟ ಛಾಪು ಮೂಡಿಸುತ್ತವೆ ಹಾಗಾಗಿಯೇ ಪ್ರತಿಯೊಬ್ಬ ವ್ಯಕ್ತಿಯೂ ತನ್ನ  ಪ್ರಜ್ಞಾವಲಯದೊಳಗೆ ತನ್ನದೇ ಪ್ರಾಮುಖ್ಯ ಹೊಂದಿರುತ್ತಾನೆ. ತಾನು ಬದುಕಿದ ಸಮಾಜದಲ್ಲಿ, ಕುಟುಂಬದಲ್ಲಿ ಮತ್ತು ವೃತ್ತಿಯ ಜೀವನದಲ್ಲಿ ತನ್ನದೇ ಅನನ್ಯ ಗುರುತನ್ನು ಮೂಡಿಸಿರುತ್ತಾನೆ. ಆ ಮೂಲಕ ತನ್ನ ವ್ಯಕ್ತಿತ್ವಕ್ಕೆ ಗೌರವ ಮತ್ತು ಘನತೆಯನ್ನು ಗಳಿಸಿರುತ್ತಾನೆ. ಹಾಗಾಗಿ ಯಾವುದೇ ವ್ಯಕ್ತಿಯು ಅನಾರೋಗ್ಯದ ಕಾರಣ ರೋಗಿಯಾಗಿ ಆಸ್ಪತ್ರೆಗೆ ಸೇರಿದಾಕ್ಷಣ ಆಕೆ ಕೇವಲ ಅನಾರೋಗ್ಯದ ಸಮಸ್ಯೆಯಿರುವ ರೋಗಿಯಷ್ಟೇ ಅಲ್ಲ ಬದಲಿಗೆ ಒಂದು ವ್ಯಕ್ತಿತ್ವ ಎಂಬುದನ್ನು ಪರಿಗಣಿಸಲೇ ಬೇಕಾಗುತ್ತದೆ.

ಆರೈಕೆ ಎಂಬುದು ಕೇವಲ ವೈದ್ಯಕೀಯ ಚಿಕಿತ್ಸೆಯಾಗಿರದೆ ಒಬ್ಬ ವ್ಯಕ್ತಿಯ ಪರಿಪೂರ್ಣ ಘನತೆಯನ್ನು ಎತ್ತಿಹಿಡಿಯುವ ಕ್ರಿಯೆಯಾಗಿರುತ್ತದೆ. ಆರೋಗ್ಯವಿಲ್ಲದೆ ಒಬ್ಬ ವ್ಯಕ್ತಿಯ ಘನತೆ ದಸಕ್ಕನೆ ಕುಸಿಯುತ್ತದೆ. ಆತ ಇನ್ನೊಬ್ಬರ ಮೇಲೆ ಅವಲಂಬಿತ ಸ್ಥಿತಿಯಲ್ಲಿದ್ದಾಗ ನೋಡಿಕೊಳ್ಳುವವರ ದಾಕ್ಷಿಣ್ಯದಲ್ಲಿರಬೇಕಾಗುತ್ತದೆ. ಇಲ್ಲಿಯತನಕ ಆ ವ್ಯಕ್ತಿ ಗಳಿಸಿರುವ ಗೌರವ ಮತ್ತು ಸ್ಥಾನಮಾನಗಳು ರೋಗಿಯಾದಕ್ಷಣ ಇತರರ ಮರ್ಜಿಗೆ ಬೀಳದಂತೆ ತಡೆಯಲು ಸಫಲವಾಗದೆ ಇರಬಹುದು. ಅದೆಷ್ಟೋ ಮನೆಗಳಲ್ಲಿ ವಯಸ್ಸಾದ ತಂದೆತಾಯಿ ಮತ್ತು  ಅತ್ತೆಮಾವಂದಿರನ್ನು ಮಕ್ಕಳು ಗೌರವದಿಂದ ನಡೆಸಿಕೊಳ್ಳದೆ ಇರುವುದು ನಮಗೆ ಕಾಣಿಸುತ್ತದೆ. ಅವರೇನಾದರೂ ಅನಾರೋಗ್ಯಕ್ಕೆ ತುತ್ತಾದರೆ ಅವರ ಘನತೆ ಮತ್ತಷ್ಟು ಇಳಿಯುವ ಸಂಭವವೇ ಹೆಚ್ಚು. ಅನಾರೋಗ್ಯ ಪೀಡಿತರನ್ನು ಆರೈಕೆ ಮಾಡುವುದು ಹೆಚ್ಚು ತಾಳ್ಮೆ, ಪ್ರೀತಿ ಮತ್ತು ದೈಹಿಕ-ಮಾನಸಿಕ ಸ್ಥಿಮಿತವನ್ನು ಬೇಡುತ್ತದೆ. ಅಲ್ಲದೆ ರೋಗಿಯ ಆರೈಕೆಗೆ ಮೈಬೆವರಿಳಿಸುವ ಶ್ರಮದ ಅಗತ್ಯವಿರುತ್ತದೆ. ಜೊತೆಗೆ ರೋಗಿಗೆ ಎಲ್ಲಿಯೂ ಚಿಕಿತ್ಸೆಗೆ ಅಡ್ಡಿಯಾಗದಂತೆ ಆರ್ಥಿಕ ಬಿಕ್ಕಟ್ಟನ್ನು ಸರಿಹೊಂದಿಸುವ ವಿವೇಚನೆ ಮತ್ತು ಸಾಮರ್ಥ್ಯವಿರಬೇಕಾಗುತ್ತದೆ. ಇದು ಇಲ್ಲಿ ಬರೆದಷ್ಟು ಸುಲಭವಲ್ಲ. ಎಷ್ಟು ಮುತುವರ್ಜಿ ವಹಿಸುತ್ತೇವೋ ಅಷ್ಟು ಬೇಗ ರೋಗಿಯನ್ನು ಮತ್ತೆ ಸ್ವಾವಲಂಬಿಯಾಗಿ ಮಾಡಲು ಸಾಧ್ಯವಿರುತ್ತದೆ. ಆದರೆ ಈ ಪುನರ್ ಸ್ಥಾಪಿಸುವ  ಸಮಯದಲ್ಲಿ ರೋಗಿಗೆ ಎಂದಿಗೂ ತಾನು ಇತರರಿಗೆ ಹೊರೆ ಎನ್ನುವ ಭಾವನೆ ಬರದಿರುವ ಹಾಗೆ ನಮ್ಮ ವರ್ತನೆಯಿರಬೇಕಾಗುತ್ತದೆ. ಇದು ರೋಗಿಯ ಕುಟುಂಬ, ಸ್ನೇಹಿತರು ಅಷ್ಟೇ ಅಲ್ಲದೆ ವೈದ್ಯಕೀಯ ಚಿಕಿತ್ಸೆ ನೀಡುವ ಸಿಬ್ಬಂದಿಗಳಲ್ಲೂ ಇರಲೇ ಬೇಕಾದ ಗುಣಗಳು. ಅದರಲ್ಲೂ ದೀರ್ಘಕಾಲದ ರೋಗಿಗಳಿಗೆ ಮತ್ತು ಹಿರಿಯ ರೋಗಿಗಳಿಗೆ ಇದು ಹೆಚ್ಚು ಅನ್ವಯಿಸುತ್ತದೆ.ಈ ಬಗೆಯಲ್ಲಿ ರೋಗಿಯನ್ನು ನೋಡುವಂತಹದ್ದು ಎಲ್ಲಾ ಆರೋಗ್ಯ ಸೇವೆಗಳಲ್ಲೂ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯೆನ್ನದೆ  ಹಲವು ಬಗೆಯ ಅನುಭವಗಳು ಆರೋಗ್ಯ ಸೇವೆಗಳಲ್ಲಿ ಆಗಿವೆ. ರೋಗಿಯನ್ನು ಒಂದು ಕೆಟ್ಟು ನಿಂತ ಯಂತ್ರದಂತೆ ನಡೆಸಿಕೊಳ್ಳುವುದು, ಇನ್ನೂ ಜೀವವಿರುವ ವ್ಯಕ್ತಿ ಎಂದು ಲೆಕ್ಕಿಸದೆ ರೋಗಿಯ ದೇಹವನ್ನು ಒಡ್ಡೊಡ್ಡಾಗಿ ನಡೆಸಿಕೊಳ್ಳುವುದು, ಮಾಡುವ ಚಿಕಿತ್ಸಾ ವಿಧಾನಗಳನ್ನು ಒರಟಾಗಿ ಮಾಡಿ ಅನಾವಶ್ಯಕ ನೋವು ಕೊಡುವುದು, ರೋಗಿಗೆ ಹಾಕುವ ಬಟ್ಟೆ ಮತ್ತು ಉಳಿದಿರುವ ಕೊಠಡಿಯನ್ನು ನಿಯಮಿತವಾಗಿ ಶುಚಿಗೊಳಿಸದೆ ಇರುವುದು, ರೋಗಿಯ ವ್ಯಕ್ತಿತ್ವವನ್ನು ಲೆಕ್ಕಿಸದೆ  ತುಚ್ಛವಾಗಿ ಕಾಣುವುದು, ‘ಪರಿಣತರು ನಾವು ನೀವಲ್ಲ, ನಿಮಗೇನೂ ಅರ್ಥವಾಗುವುದಿಲ್ಲ’ ಎಂದು ರೋಗಿಯನ್ನು ಮತ್ತು ಕುಟುಂಬದವರ ಬುದ್ಧಿಶಕ್ತಿಯನ್ನು ಕಡೆಗಣಿಸುವುದು,  ರೋಗಿಯ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡದಿರುವುದು, ಚಿಕಿತ್ಸೆಯಲ್ಲಿ ಪ್ರೀತಿ ಮತ್ತು ಕಾಳಜಿಯನ್ನು ಬೆರಸದೆ ಇರುವುದು- ಇವೇ ಹೆಚ್ಚಾಗಿ ನಾವು ನಮ್ಮ ಆಸ್ಪತ್ರೆಗಳಲ್ಲಿ ಕಾಣುವುದು ಮಾಮೂಲು. 
ಈ ರೀತಿಯ ಅಮಾನವೀಯ ಚಿಕಿತ್ಸಾ ಪದ್ಧತಿ ರೋಗಿಯನ್ನು ಮಾನಸಿಕವಾಗಿ ಬೇಗ ಆಯಾಸಗೊಳಿಸುತ್ತದೆ. ಆಕೆಯ ಜೀವಿತಾವಧಿ ಕುಂಠಿತಗೊಳ್ಳುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ಚುರುಕಿನ ವೈದ್ಯಕೀಯ ಚಟುವಟಿಕೆ ಇಲ್ಲದೆ ರೋಗಿಯು ಜೀವಕಳೆದುಕೊಳ್ಳುವ ಸಂದರ್ಭವೇ ಹೆಚ್ಚು. ವೈದ್ಯಕೀಯ ಸಿಬ್ಬಂದಿಯ ಕಾಳಜಿಯ ಕೊರತೆ ರೋಗಿಯನ್ನು  ನಿರ್ಲಕ್ಷಿಸುವುದಕ್ಕೆ ಮೂಲ ಕಾರಣ. ರೋಗಿಯೂ ಒಬ್ಬ ವ್ಯಕ್ತಿ ಎಂಬುದನ್ನು ಮರೆಯದಿರೋಣ. ಆಗ ಆತನೂ ನಮ್ಮನಿಮ್ಮಂತೆಯೇ ನೋವು ನಲಿವಿನ ಒಬ್ಬ ಜೀವಿ. ಆಕೆಯನ್ನು ಆದಷ್ಟು ಬೇಗ ಅನಾರೋಗ್ಯದಿಂದ ಪಾರು ಮಾಡೋಣ ಎಂಬ ಕಾಳಜಿ ನಮಗೆ ಬರುತ್ತದೆ. ಇದರಿಂದ ರೋಗಿಯ ವ್ಯಕ್ತಿತ್ವದ ಘನತೆಯ ಜೊತೆಗೆ ವೈದ್ಯಕೀಯ ಕ್ಷೇತ್ರದ ಘನತೆಯನ್ನೂ ಕಾಪಾಡಿದಂತಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 19

  Happy
 • 3

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !