ಭಾನುವಾರ, ಜುಲೈ 3, 2022
27 °C
ಸ್ಪಂದನ

ಗ್ರಾಮ ಸ್ವರಾಜ್ಯವೂ ಹಳ್ಳಿಗಳೆಂಬ ಅನಾಥ ಶಿಶುಗಳೂ

ರೇಣುಕಾ ನಿಡಗುಂದಿ Updated:

ಅಕ್ಷರ ಗಾತ್ರ : | |

Deccan Herald

ಮಹಾತ್ಮ ಗಾಂಧಿ ಅವರ ನೂರೈವತ್ತನೇ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ವರ್ಷವಿಡೀ ಆಚರಿಸುವ ರೂಪುರೇಷೆಗಳು ಸಿದ್ಧವಾಗಿವೆ. ಅಂತರಂಗದಲ್ಲಿಯೂ ಗಾಂಧಿಯವರ ತತ್ವಾದರ್ಶಗಳನ್ನು ಗೌರ ವಿಸದ, ‘ಅವರೊಬ್ಬರು ಕಪಟಿ, ಮುಸ್ಲಿಮರ ಏಜೆಂಟ್’ ಎಂದು ದ್ವೇಷಿಸಿಕೊಂಡೇ ಬಂದ ಹಿಂದುತ್ವವಾದಿಗಳಿಗೆ ಗಾಂಧಿ- ಅಂಬೇಡ್ಕರ್, ಹಿಂದುಳಿದ ವರ್ಗಗಳು ಮುಂಬರುವ ಚುನಾವಣಾ ರಾಜಕೀಯದ ಪ್ರಮುಖ ಅಸ್ತ್ರಗಳು. ಗಾಂಧಿ ಸಂಸ್ಮರಣೆಯೊಂದು ಬಂಡವಾಳ. ಮತದಾರರನ್ನು ಖರೀದಿಸುವ ತಂತ್ರ!

ಹೆಚ್ಚುತ್ತಿರುವ ಅಸಹಿಷ್ಣುತೆ, ಗುಂಪುದಾಳಿ ಹಿಂಸಾಚಾರವನ್ನು ಬಹಿರಂಗವಾಗಿ ಒಮ್ಮೆಯೂ ವಿರೋಧಿಸದ ಪ್ರಬಲ ಪ್ರಭುತ್ವದ ನಾಯಕರು ಗಾಂಧಿ ಎಂಬ ‘ಐಕಾನ್’ ಬಳಸಿ ಗಾಂಧಿತ್ವದ ರಾಜಕಾರಣಕ್ಕೆ ಸನ್ನದ್ಧರಾಗಿದ್ದಾರೆ. 2019ರ ಅಕ್ಟೋಬರ್ 2ಕ್ಕೆ ನೂರೈವತ್ತು ತುಂಬುವ ರಾಷ್ಟ್ರಪಿತನ ಜನ್ಮಸಂಸ್ಮರಣೆಗೆ ಹೊರ ರಾಷ್ಟ್ರಗಳ ನೈರ್ಮಲ್ಯ ಸಚಿವರನ್ನು ಆಹ್ವಾನಿಸಲಾಗುತ್ತಿದೆ. ವಿತ್ತ ಮಂತ್ರಿ ಬಜೆಟ್ಟಿನಲ್ಲಿ, ನೂರೈವತ್ತು ಕೋಟಿ ರೂಪಾಯಿಗಳ ಮೊತ್ತವನ್ನು ಜಯಂತ್ಯುತ್ಸವಕ್ಕೆಂದೇ ಮೀಸಲಿಟ್ಟಿದ್ದಾರೆ.

ಮಹಾತ್ಮನ ಹೆಜ್ಜೆಗಳನ್ನೇ ಅನುಸರಿಸುತ್ತೇವೆಂದು ಸ್ವಚ್ಚ ಭಾರತ ಅಭಿಯಾನವನ್ನು ಸರ್ಕಾರ ಆರಂಭಿಸಿ ನಾಲ್ಕು ವರ್ಷಗಳೇ ಕಳೆದವು. ಸ್ವತಃ ಮೋದಿ ಅವರು ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛಗೊಳಿಸಿ ಸ್ವಚ್ಛ ಭಾರತದ ಅಭಿಯಾನಕ್ಕೆ ಚಾಲನೆ ನೀಡಿದ್ದರು. ತಾವು ಚುನಾವಣೆಗೆ ನಿಂತು ಗೆದ್ದು ಬಂದ ಕಾಶಿಯ ‘ಅಸ್ಸಿ ಘಾಟಿನಲ್ಲಿ’ ತಾವೇ ಕೈಯಲ್ಲಿ ಸನಿಕೆ, ಗುದ್ದಲಿ, ಹಾರೆ ಹಿಡಿದು ಗಂಗೆಯ ಹೂಳನ್ನು ತೆಗೆದು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಈಗಿಲ್ಲಿ ಉತ್ತರ ಪ್ರದೇಶದ ಜನರು, ಅತ್ತ ಮೋದಿ ಇತ್ತ ಯೋಗಿ ಅನ್ನುತ್ತ ಕಾಲ ದೂಡುತ್ತಿದೆ. ಕಳೆದ ವಾರವಷ್ಟೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಗೋರಖ್‍ನಾಥ ಮಠದ ಮಹಂತರೂ ಆಗಿರುವ ಯೋಗಿ ಆದಿತ್ಯನಾಥರು ತಮ್ಮ ಸರ್ಕಾರದ ಬೊಕ್ಕಸದಿಂದ ಆರೂ ಕಾಲು ಕೋಟಿ ರೂಪಾಯಿಗಳನ್ನು ಮಠದ ಸೌಂದರ್ಯೀಕರಣಕ್ಕಾಗಿ ವ್ಯಯಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಮಠದ ಆವರಣದಲ್ಲಿರುವ, ನೀರಿನಿಂದ ತುಂಬಿದ ಕೊಳದಲ್ಲಿ ವಿದ್ಯುತ್ತಿನ ಸಂಗೀತಮಯ ಕಾರಂಜಿಯನ್ನು ಅಳವಡಿಸುವುದಕ್ಕಾಗಿ ದೇಶ ವಿದೇಶದಿಂದ ದೊಡ್ದ ದೊಡ್ದ ಮ್ಯೂಸಿಕ್ ಸಿಸ್ಟಮ್‍ಗಳನ್ನು ಆಮದು ಮಾಡಿಕೊಂಡ ಬಗ್ಗೆ ಟಿ.ವಿ. ವಾಹಿನಿಯೊಂದು ವರದಿ ಮಾಡಿತು. ಆ ಯೋಜನೆಯ ಅಧಿಕಾರಿ ಹಿಂದೂ ಧರ್ಮ– ಸಂಸ್ಕೃತಿಗಳನ್ನು ಕಾಪಿಟ್ಟುಕೊಳ್ಳಬೇಕಾದ ಅಗತ್ಯತೆಯನ್ನು ಸಾರುತ್ತಾ, ಗೋರಖನಾಥ ಮಠದ ಸೌಂದರ್ಯೀಕರಣದಿಂದ ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುವಂತಾಗುತ್ತದೆಂದು ವಿವರಿಸಿದರು.

ದೆಹಲಿಗೆ ಅಂಟಿಕೊಂಡಿರುವ ನೊಯಿಡಾದಿಂದ ಪಶ್ಚಿಮ ಉತ್ತರ ಪ್ರದೇಶದ ದುಸ್ಥಿತಿಯಲ್ಲಿರುವ ಹಳ್ಳಿಗಳನ್ನು ಕಣ್ತುಂಬಿಕೊಳ್ಳುತ್ತ ಮಾಡುವ ನನ್ನ ಪ್ರಯಾಣಕ್ಕೆ ಮೋದಿ ಸರ್ಕಾರದಷ್ಟೇ ವಯಸ್ಸಾಗಿದೆ! ಕುಲೇಶರಾ, ಸುಥಿಯಾನಾ, ಹಬೀಬ್ ಪುರ್ ಇತ್ಯಾದಿ ಹಳ್ಳಿಗಳನ್ನು ದಾಟಿದರೆ ವಿಶಾಲವಾದ ರಸ್ತೆಗಳಾಚೆ ಒಂದು ಕಾಲಕ್ಕೆ ವಿಜೃಂಭಿಸಿದ್ದ  ‘ದೇವೂ ಮೋಟರ್ಸ್’ನ ಹಾಳುಬಿದ್ದ ಫ್ಯಾಕ್ಟರಿ ಕಾಣುತ್ತದೆ. ಅಕ್ಕಪಕ್ಕ ಇನ್ನೂ ಬೇರೆ ಬೇರೆ ಕಂಪನಿಗಳಿವೆ, ಕಾರ್ಖಾನೆಗಳಿವೆ. ‘ಯಮಹ’ ಕಾರ್ಖಾನೆಯ ಮೇಲ್ಚಾವಣಿಯ ಟರ್ಬೋ ವೆಂಟಿಲೇಟರ್ಸ್ ಬಿಸಿಲಿಗೆ ಮಿರುಗುವುದನ್ನೂ ಕಾಣಬಹುದು. ಅದರಾಚೆಗೆ ಸೂರಜ್ ಪುರ್ ಅನ್ನುವ ಚೆಂದದ ಹೆಸರಿನ ಊರು ಆರಂಭವಾಗುತ್ತದೆ.  ಸೂರಜ್‍ಪುರ್‌ಗೆ ಗಲೀಜ್‍ಪುರ್ ಅನ್ನಬೇಕು ಹಾಗಿದೆ ಸ್ಥಿತಿ. ಗಲ್ಲಿಗಳಲ್ಲಿ ಬಸ್ಸು ನುಗ್ಗುತ್ತಲೂ ಗಬ್ಬುನಾತ ಮೂಗಿಗೆ ಬಡಿಯುತ್ತದೆ. ಕುಲೆಶರಾ ಗ್ರಾಮದಿಂದ ದಾದ್ರಿವರೆಗಿನ ಈ ಮಾರ್ಗವನ್ನು ‘ದಾದ್ರಿ ಮೇನ್ ರೋಡ್’ ಅಂತಲೇ ಕರೆಯುತ್ತಾರೆ.

ಸೂರಜ್‌ಪುರ್ ರಸ್ತೆಯ ಇಕ್ಕೆಲದ ಅಂಗಡಿಗಳು ರಸ್ತೆಯ ತುದಿಯವರೆಗೂ ಜಾಗ ಆಕ್ರಮಿಸಿಕೊಂಡು, ಎಲ್ಲೆಂದರಲ್ಲಿ ಜನ ಯದ್ವಾತದ್ವಾ ವಾಹನಗಳನ್ನು ನಿಲ್ಲಿಸಿ ಟ್ರಾಫಿಕ್ ಜಾಮ್ ಸೃಷ್ಟಿಸುತ್ತಾರೆ. ರಸ್ತೆಗಳ ನಡುವೆ ಹೂಗಿಡಗಳನ್ನು ಬೆಳೆಸಿ ಚೆಂದಗಾಣಿಸಬಹುದೆಂದು ಒಂದು ಮೀಟರ್ ಅಗಲದ ಡಿವೈಡರ್ ಇದೆ. ಅದರಲ್ಲಿ ಎರಡೂ ಕಡೆಯ ಅಂಗಡಿಯವರು, ಹಣ್ಣು- ತರಕಾರಿ ಮಾರುವವರು, ಸಮೋಸ, ಬ್ರೆಡ್ ಪಕೋಡಾ ಮಾರುವ ಹಲವಾಯಿಗಳು ಕಸವನ್ನೆಲ್ಲ ಈ ಡಿವೈಡರುಗಳ ಮೇಲೆ ಸುರಿದು ‘ತಿಪ್ಪೆ’ಯಾಗಿಸಿದ್ದಾರೆ. 

ಆ ತಿಪ್ಪೆಯಲ್ಲಿ ಆಹಾರ ಸಿಕ್ಕಬಹುದೇನೋ ಎಂದು ಹುಡುಕುವ ನಾಯಿಗಳು ತಿಪ್ಪೆಯನ್ನು ಕೆದರಿ ಕೆದರಿ ರಸ್ತೆಗೆ ತಳ್ಳುತ್ತವೆ. ತಾವೂ ಏನು ಕಮ್ಮಿ ಎಂದು ಅಡ್ನಾಡಿ ದನಕರುಗಳು ಬಾಯಿ ಹಾಕುತ್ತವೆ. ‘ಏಯ್…ನಿಮ್ಮನ್ನೆಲ್ಲ ಒದ್ದು ಓಡಿಸ್ತೀನಿ ನೋಡಿ’ ಅಂತ ಗುಟುರು ಹಾಕುವ ಗೂಳಿಯೂ ಬಂದು ನಿಲ್ಲುತ್ತದೆ. ವಾಹನಗಳು ದಾಟಲಿ ಬಿಡಲಿ ಗೂಳೆಪ್ಪನಂತೂ ಒಂದಿಂಚೂ ಅಲ್ಲಾಡದೇ ನಿಂತಿರುತ್ತಾನೆ. ಬಿಸಿಲಿನ ಝಳಕ್ಕೆ ನಾಯಿಗಳೂ ಇಲ್ಲಿಯೇ ತಣ್ಣಗಿದೆ ಎಂದು ಒಂದು ನಿದ್ದೆ ತೆಗಿಬಹುದು ಎಂದು ಅಲ್ಲೇ ಕಣ್ಮುಚ್ಚಿ ಮಲಗಿರುತ್ತವೆ.

ಸೂರಜ್‌ಪುರ್ ದಾಟಿ ಇಂಡಸ್ಟ್ರಿಯಲ್ ಏರಿಯಾದತ್ತ ಹೊರಟರೆ ಇಕ್ಕೆಲದಲ್ಲೂ ವನವಿಭಾಗದ ಹಸಿರು ಕಣ್ತುಂಬುತ್ತದೆ. ಆದರೆ ಅಲ್ಲಿನ ದೊಡ್ದ ದೊಡ್ದ ಹೊಂಡಗಳು ರಿಪೇರಿಯಾಗದೇ ವರ್ಷಾನುಗಟ್ಟಲೆ ಹಾಗೇ ಬಿದ್ದಿವೆ. ಬೇಸತ್ತ ಜನ ಇಟ್ಟಿಗೆ ಚೂರು, ಮಲಬಾ ತುಂಬಿ ಸರಿ ಮಾಡಿರುತ್ತಾರೆ. ಆದರೂ ಮತ್ತದೇ ಸ್ಥಿತಿ!. ದಿನಾ ಆಟೊದಲ್ಲಿ ಪ್ರಯಾಣಿಸುತ್ತಾ ಹೊಟ್ಟೆಯಲ್ಲಿನ ಕರುಳು ತೊಡರಿಕೊಂಡಂತೆ, ಹೊಂಡದಲ್ಲಿ ಬಿದ್ದೇಳುತ್ತ ಎತ್ತಿ ಎತ್ತಿ ಕುಕ್ಕರಿಸುವ ಆಟೊ ಸವಾರಿ ಮಾಡುವವರ ಮೂಳೆಗಳೂ ಗಟ್ಟಿಯಾಗಿರಬೇಕಷ್ಟೇ. ಈ ವರ್ಷದ ಒಳ್ಳೆಯ ಮಳೆ ಸಣ್ಣ ಪುಟ್ಟ ಹೊಂಡಗಳನ್ನೂ ದೊಡ್ದ ದೊಡ್ದ ಕೊಳಗಳನ್ನಾಗಿಸಿದೆ. ಸ್ಥಳೀಯ ಜನಪ್ರತಿನಿಧಿಗಳಿಗೆ ವ್ಯವಧಾನವಿಲ್ಲ, ಇನ್ನು ಸಂಬಂಧಪಟ್ಟ ಇಲಾಖೆಗಳು ಹೊಟ್ಟೆಬಿರಿಯ ತಿಂದು ಮಲಗಿಬಿಟ್ಟಿವೆ.

ಕೇಂದ್ರದ ಗ್ರಾಮ ಸ್ವರಾಜ್ ಯೋಜನೆಗಳು ದಾಪುಗಾಲಿಟ್ಟು ನಡೆಯುತ್ತಿರುವ ಹೊತ್ತಿನಲ್ಲಿ ದೇಶದ ಬಹಳಷ್ಟು ಹಳ್ಳಿಗಳು ಅನಾಥ ಶಿಶುಗಳಂತಾಗಿವೆ! ವಿದ್ಯುತ್ ಬಂದರೂ ಒಳಚರಂಡಿ ವ್ಯವಸ್ಥೆಯಿಲ್ಲ, ಕುಡಿಯುವ ಶುದ್ಧ ನೀರಿನ ವ್ಯವಸ್ಥೆಯಿಲ್ಲ. ಶೌಚಾಲಯಗಳಿಗೆ ಹಣ ಪಡೆದು ಕಟ್ಟಿದವರೆಷ್ಟೋ! ಕಟ್ಟದೆ ಹಣ ನುಂಗಿದವರೆಷ್ಟೋ! ಉಜ್ವಲಾ ಯೋಜನೆಯಲ್ಲಿ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ ಹಳ್ಳಿಗಳನ್ನು ತಲುಪಿದ್ದೇನೋ ಸರಿ, ಗೇಣುಹೊಟ್ಟೆಯ ಕೂಳಿಗೆ ದುಡಿದದ್ದು ಸಾಲದೆ ಹೆಣಗಾಡುವ ಬಡವರಿಗೆ ಸಿಲಿಂಡರ್ ತುಂಬಿಸಿಕೊಳ್ಳಲು ಹಣವೆಲ್ಲಿದೆ? ಈಗಲೂ ಸೌದೆ ಒಲೆಯಲ್ಲಿಯೇ ಅಡುಗೆ ಮಾಡುವ ಮಹಿಳೆಯರಿದ್ದಾರೆ ಹಳ್ಳಿಗಳಲ್ಲಿ. ತಮ್ಮ ಜನಧನ್ ಖಾತೆಗೆ ಸಬ್ಸಿಡಿ ಹಣ ಪಾವತಿಯಾದವರು ಸುಮ್ಮನಿದ್ದಾರೆ, ಬಾರದವರು ಕಮಂಗಿಗಳಾಗಿದ್ದಾರೆ.

ಮೊನ್ನೆ ಆಟೊದಲ್ಲೊಬ್ಬ, ‘ಈ ಜನ್ಮ ಕಳೆದರೂ ರಸ್ತೆಗಳು ಸರಿಯಾಗುವುದಿಲ್ಲ’ ಎಂದು ಗೊಣಗುತ್ತಿದ್ದ. ಅದಕ್ಕೆ ನಾನು ‘ಗೋರಖನಾಥ ಮಠಕ್ಕಾಗಿ ಯೋಗೀಜಿ ಕೋಟಿಗಟ್ಟಲೆ ಖರ್ಚು ಮಾಡ್ತಾ ಇದ್ದಾರಲ್ಲ, ಈ ಹಳ್ಳಿಗಳತ್ತ ಕೆಲವೇ ಕೆಲ ಕೋಟಿಗಳನ್ನು ಸುರಿದಿದ್ದರೂ ಎಲ್ಲ ಹಳ್ಳಿಗಳೂ ಉದ್ಧಾರವಾಗುತ್ತಿದ್ದವು’ ಎಂದೆ. ತಕ್ಷಣ ಆತ ಕೆರಳಿ, ‘ಅದೆಲ್ಲ ಸ್ಥಳಿಯ ಎಮ್ಮೆಲ್ಲೆಗಳು, ವಿಧಾಯ ಕರು ಮಾಡಬೇಕಷ್ಟೇ, ಎಲ್ಲವನ್ನೂ ಯೋಗಿಯೇ ಎದ್ದುಬಂದು ನೋಡೊಕ್ಕಾಗುತ್ತದೆಯೇ?’ ಎಂದ. ಇದೊಂದು ಸಣ್ಣ ಝಲಕು ಅಷ್ಟೇ.

ಉತ್ತರ ಪ್ರದೇಶದ ಬಹುತೇಕ ಊರುಕೇರಿಗಳ ಪಾಡು ಹೀಗೇ. ಎಲ್ಲೆಲ್ಲೂ ಗಲೀಜು, ಕಸದ ರಾಶಿ, ಕೊಳಕು ನಾಲಾಗಳ ಗಬ್ಬುನಾತ, ರಸ್ತೆಗೆ ಹರಿಯುವ ಚರಂಡಿ ನೀರಿನ ಜೊತೆ ಗೂಂಡಾಗಿರಿ, ಭ್ರಷ್ಟಾಚಾರ, ಹಿಂಸಾಚಾರ ತಾಂಡವವಾಡುತ್ತಿದೆ.

ಭಾರತವು ಗ್ರಾಮಗಳ ದೇಶ. ಗ್ರಾಮೀಣ ಜನರು ಮತ್ತು ಕೃಷಿಕರೇ ದೇಶದ ಬೆನ್ನೆಲುಬು ಎಂದು ನಂಬಿದವರು ಬಾಪೂ. ಸತ್ಯ, ಅಹಿಂಸೆ ಗಳಂತೆಯೇ ಸ್ವಚ್ಛತೆ, ನೈರ್ಮಲ್ಯ ಅವರ ಕಳಕಳಿಯಾಗಿತ್ತು. ಅವರನ್ನು ಗೌರವಿಸುತ್ತಿದ್ದ, ಮೌಲ್ಯಗಳನ್ನು ಅಕ್ಷರಶಃ ಪಾಲಿಸುತ್ತಿದ್ದ, ಅಪಾರ ವಾಗಿ ಅವರನ್ನು ಪ್ರೀತಿಸುತ್ತಿದ್ದ  ಸ್ವಾತಂತ್ರ್ಯಪೂರ್ವದ ಭಾರತೀಯ ಮನಸ್ಸುಗಳೇ ಬೇರೆ. ಈಗಿನ ಮನಸ್ಸುಗಳೇ ಬೇರೆ ಎನಿಸುತ್ತದೆ. ಸೈದ್ಧಾಂತಿಕ ವಿರೋಧಗಳೇನೇ ಇರಲಿ ಬಾಪೂ ನಮ್ಮೊಳಗಿನ ವಿಶ್ವ ಪ್ರಜ್ಞೆಯಾಗಿ ಸರ್ವ ಕಾಲಕ್ಕೂ ಸಲ್ಲುತ್ತಾರೆ.

ದ್ವೇಷವನ್ನೇ ಬಿತ್ತುತ್ತ, ದ್ವೇಷವನ್ನೇ ಬೆಳೆಯುತ್ತ, ಅಸತ್ಯವನ್ನೇ ಸತ್ಯವೆಂದು ಬಿಂಬಿಸುವ ಇಂದಿನ ನಾಯಕತ್ವವು ಗಾಂಧೀಜಿ ಸ್ಮರಣಾರ್ಥ ಎಷ್ಟೇ ಹಣ ಸುರಿದು ಏನೇ ಆಚರಣೆಗಳನ್ನು ಮಾಡಿದರೂ ಅರ್ಥಹೀನ ಅನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು