1984: ರಕ್ತದ ಕಲೆಗಳು ಕಾಂಗ್ರೆಸ್ಸಿನ ಕೈಮೇಲೆ ಇವೆ

7

1984: ರಕ್ತದ ಕಲೆಗಳು ಕಾಂಗ್ರೆಸ್ಸಿನ ಕೈಮೇಲೆ ಇವೆ

ಎ. ಸೂರ್ಯ ಪ್ರಕಾಶ್
Published:
Updated:

ಇಂದಿರಾ ಗಾಂಧಿ ಅವರ ಹತ್ಯೆಯ ನಂತರ 1984ರಲ್ಲಿ ಸಿಖ್‌ ಸಮುದಾಯದ ಮೇಲೆ ನಡೆದ ಬರ್ಬರ ದಾಳಿಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಇರಲಿಲ್ಲ ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿರುವುದು, ಈ ಹಿಂಸಾಚಾರದ ಕುರಿತು ವಿಚಾರಣೆ ನಡೆಸಿದ ಹಲವು ಆಯೋಗಗಳು, ಸಮಿತಿಗಳ ಎದುರು ಇರಿಸಿದ ಟ್ರಕ್ಕುಗಟ್ಟಲೆ ಸಾಕ್ಷ್ಯಗಳನ್ನು ಪ್ರಶ್ನಿಸಿದಂತೆ ಇದೆ. ಉದ್ರಿಕ್ತ ಗುಂಪುಗಳನ್ನು ಕಾಂಗ್ರೆಸ್ಸಿನ ರಾಜಕಾರಣಿಗಳು ಪ್ರಚೋದಿಸುತ್ತಿದ್ದರು ಎಂಬುದನ್ನು ಮಾತ್ರವೇ ಅಲ್ಲ, ದೇಶದ ರಾಜಧಾನಿ ಹಾಗೂ ಉತ್ತರ ಭಾರತದ ಇತರ ಹಲವು ನಗರಗಳಲ್ಲಿ ಆಡಳಿತದಲ್ಲಿದ್ದವರು ಮತ್ತು ಪೊಲೀಸರು ಅಕ್ಷಮ್ಯ ನಿಷ್ಕ್ರಿಯತೆ ತೋರಿದ್ದರು ಎಂಬುದನ್ನು ಸಾವಿರಾರು ಜನ ನೀಡಿರುವ ಹೇಳಿಕೆಗಳು ಸಾಬೀತು ಮಾಡುತ್ತವೆ.

ಹಂತಕರು ಹಾರಿಸಿದ ಗುಂಡಿಗೆ ಇಂದಿರಾ ಗಾಂಧಿ ಅವರು ಬಲಿಯಾದರು ಎಂದು ಸರ್ಕಾರ 1984ರ ಅಕ್ಟೋಬರ್ 31ರಂದು ಘೋಷಣೆ ಮಾಡಿದ ತಕ್ಷಣವೇ ಸಿಖ್‌ ಜನಾಂಗೀಯ ಹತ್ಯಾಕಾಂಡ ಆರಂಭವಾಯಿತು. ಇಂದಿರಾ ಹತ್ಯೆಯ ಸುದ್ದಿ ಹರಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ರಣೋತ್ಸಾಹಿಗಳಾದರು. ‘ಖೂನ್‌ ಕಾ ಬದ್ಲಾ ಖೂನ್‌ ಸೆ ಲೇಂಗೆ’ (ರಕ್ತಕ್ಕೆ ರಕ್ತದಿಂದಲೇ ಪ್ರತೀಕಾರ) ಎಂಬ ಘೋಷಣೆ ಕೂಗಿದರು. ದೇಶದ ರಾಜಧಾನಿ ಮತ್ತು ಉತ್ತರ ಭಾರತದ ನಗರಗಳಲ್ಲಿ ಸಿಖ್‌ ಪೂಜಾಸ್ಥಳಗಳಿಗೆ, ಸಿಖ್ಖರ ಆಸ್ತಿಗಳಿಗೆ, ಅವರ ಕಟ್ಟಡಗಳಿಗೆ ಬೆಂಕಿ ಇಟ್ಟರು. ಇಂದಿರಾ ಹತ್ಯೆಯ ನಂತರ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಾಗಾಗಿ, ತಾಂತ್ರಿಕವಾಗಿ ಒಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂತಾದರೂ ವಾಸ್ತವದಲ್ಲಿ ಸರ್ಕಾರ ಇರಲಿಲ್ಲ. ಪ್ರಭುತ್ವ ಎಂಬುದು ಕುಸಿದುಹೋಗಿತ್ತು. ಆಗ ನಡೆದ ಗಲಭೆಗಳಲ್ಲಿ ಒಟ್ಟು 2,732 ಸಿಖ್ಖರನ್ನು ಕೊಲ್ಲಲಾಯಿತು. ದೆಹಲಿಯಲ್ಲಿ ಒಟ್ಟು 2,146 ಸಿಖ್ಖರು ಮತ್ತು ಉತ್ತರ ಭಾಗದ ಇತರೆಡೆ ಒಟ್ಟು 586 ಸಿಖ್ಖರು. ಅಲ್ಲದೆ, ಸಿಖ್ಖರು ಹಿಂದೆಂದೂ ಕಾಣದಂತಹ ಪ್ರಮಾಣದಲ್ಲಿ ಮನೆ, ಆಸ್ತಿ ಕಳೆದುಕೊಂಡರು.

ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಪಾತ್ರ ಇದ್ದ ಕುರಿತು ಆಘಾತಕಾರಿ ಸಾಕ್ಷ್ಯಗಳನ್ನು ಈ ಗಲಭೆ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾನಾವತಿ ಆಯೋಗ ಕಂಡುಕೊಂಡಿತು. ಹಿಂಸಾಚಾರವು ರಾಷ್ಟ್ರ ರಾಜಧಾನಿಯ ಎಲ್ಲೆಡೆ ಹಬ್ಬಿತ್ತಾದರೂ ಪೊಲೀಸರು 587 ಪ್ರಥಮ ವರ್ತಮಾನ ವರದಿಗಳನ್ನು (ಎಫ್‌ಐಆರ್‌) ಮಾತ್ರ ದಾಖಲಿಸಿದ್ದರು. ಇವುಗಳ ಪೈಕಿ 241 ಎಫ್‌ಐಆರ್‌ಗಳಲ್ಲಿ ಆರೋಪಿಗಳು ಪತ್ತೆಯಾಗಲಿಲ್ಲ. 253 ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾದರು. 11 ಎಫ್‌ಐಆರ್‌ಗಳು ರದ್ದುಗೊಂಡವು. ಇನ್ನೂ 11 ಎಫ್‌ಐಆರ್‌ಗಳಲ್ಲಿ ಆರೋಪಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡರು.

ತನ್ನ ಮುಂದೆ ಬಂದ ಸಾಕ್ಷ್ಯಗಳನ್ನು ತುಲನೆ ಮಾಡಿದ ಆಯೋಗವು, ಈ ಕೆಳಗಿನ ತೀರ್ಮಾನಕ್ಕೆ ಬಂದಿತು: ಉದ್ರಿಕ್ತ ಗುಂಪು ‘ಕೂನ್‌ ಕಾ ಬದ್ಲಾ ಖೂನ್‌ ಸೆ ಲೇಂಗೆ’ ಎನ್ನುವ ಘೋಷಣೆ ಕೂಗಿತ್ತು. ಸಿಖ್ಖರ ವಿರುದ್ಧ ಜನರನ್ನು ಎತ್ತಿಕಟ್ಟುವ, ಜನ ಅವರ ಮೇಲೆ ಹಗೆ ತೀರಿಸಿಕೊಳ್ಳುವಂತೆ ಮಾಡಬಲ್ಲ ಸುಳ್ಳುಸುದ್ದಿಗಳನ್ನು ಹರಡಲಾಯಿತು. ಆಯುಧಗಳು ಮತ್ತು ಸೀಮೆಎಣ್ಣೆ, ಪೆಟ್ರೋಲ್‌ನಂತಹ ದಹನಕಾರಿ ವಸ್ತುಗಳನ್ನು ಹೊಂದಿದ್ದ ಉದ್ರಿಕ್ತರನ್ನು ದೆಹಲಿ ಸಾರಿಗೆ ನಿಗಮದ (ಡಿಟಿಸಿ) ಬಸ್ಸುಗಳಲ್ಲಿ ಸಾಗಿಸಲಾಯಿತು ಅಥವಾ ‘ಅವರನ್ನು ಸಿಖ್ಖರ ಮೇಲೆ ಆಕ್ರಮಣ ನಡೆಸಬೇಕಿದ್ದ ಸ್ಥಳಗಳಿಗೆ ಕರೆದೊಯ್ದ ತಕ್ಷಣ ಅಂತಹ ವಸ್ತುಗಳನ್ನು ಪೂರೈಸಲಾಯಿತು’. ‘ಆಕ್ರಮಣಗಳನ್ನು ಸಂಘಟಿಸಬಲ್ಲ ವ್ಯಕ್ತಿಗಳನ್ನು ಸಂಪರ್ಕಿಸಲಾಯಿತು, ಸಿಖ್ಖರನ್ನು ಕೊಲ್ಲುವಂತೆ, ಅವರ ಮನೆ ಮತ್ತು ಅಂಗಡಿಗಳನ್ನು ಲೂಟಿ ಮಾಡುವಂತೆ ಈ ವ್ಯಕ್ತಿಗಳಿಗೆ ಸೂಚನೆ ನೀಡಲಾಯಿತು. ಇಂತಹ ಕೃತ್ಯಗಳನ್ನು ಎಸಗುವಾಗ ಮತ್ತು ನಂತರ ಕೂಡ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ದಂಗೆಕೋರರಿಗೆ ನೀಡಲಾಯಿತು’ ಎನ್ನಲು ಸಾಕ್ಷ್ಯಗಳಿವೆ. ಸಿಖ್‌ ಸಮುದಾಯದ ಪುರುಷರನ್ನು ಮನೆಗಳಿಂದ ಹೊರಗೆ ತಂದು ಬಡಿಯಲಾಯಿತು, ಜೀವಂತ ಸುಟ್ಟುಹಾಕಲಾಯಿತು. ಅವರ ಕುತ್ತಿಗೆಗೆ ಟೈರ್‌ ಹಾಕಿ, ಅವರ ಮೇಲೆ ಸೀಮೆಎಣ್ಣೆ ಅಥವಾ ಪೆಟ್ರೋಲ್‌ ಸುರಿದು ಬೆಂಕಿ ಇಡಲಾಯಿತು.

ಕಾಂಗ್ರೆಸ್ಸಿನ ಗೂಂಡಾಗಳು ನಡೆಸಿದ ಕ್ರೌರ್ಯದ ಚಿತ್ರಣವನ್ನು ಆಯೋಗ ಗುರುತು ಮಾಡಿಕೊಂಡಿದ್ದು, ಅದರಲ್ಲಿ ಇದೊಂದು ಸಂಕ್ಷಿಪ್ತ ಭಾಗ ಮಾತ್ರ. ಕೊಲೆಗಡುಕ ಹಾಗೂ ಉನ್ಮತ್ತ ಗುಂಪುಗಳ ಬಗ್ಗೆ ಆಯೋಗ ಹೀಗೆ ಹೇಳಿದೆ: ಉದ್ರಿಕ್ತರ ಗುಂಪು ಸಿಖ್ಖರ ಮೇಲೆ ದಾಳಿ ನಡೆಸುವಲ್ಲಿ ಸ್ಥಳೀಯ ಕಾಂಗ್ರೆಸ್(ಐ) ನಾಯಕರು ಮತ್ತು ಕಾರ್ಯಕರ್ತರು ಪ್ರಚೋದನೆ ನೀಡಿದ್ದರು ಅಥವಾ ಸಹಾಯ ಮಾಡಿದ್ದರು ಎಂಬುದನ್ನು ಹಲವಾರು ಪ್ರಮಾಣಪತ್ರಗಳು ಹೇಳುತ್ತಿವೆ. ಪ್ರಭಾವಿ ಮತ್ತು ಸಂಪನ್ಮೂಲ ಹೊಂದಿರುವ ವ್ಯಕ್ತಿಗಳ ಬೆಂಬಲ ಇಲ್ಲದಿರುತ್ತಿದ್ದರೆ ಸಿಖ್ಖರನ್ನು ಅಷ್ಟು ವೇಗವಾಗಿ, ಅಷ್ಟು ದೊಡ್ಡ ಸಂಖ್ಯೆಯಲ್ಲಿ ಹತ್ಯೆ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಹಲವು ಸ್ಥಳಗಳಲ್ಲಿ ದಂಗೆ ನಡೆಸಿದ ಗುಂಪಿನಲ್ಲಿ ಹೊರಗಿನವರು ಕೂಡ ಇದ್ದರು. ಹೊರಗಿನಿಂದ ಜನರನ್ನು ಕರೆಸಲು ಸಂಘಟಿತ ಯತ್ನ ಬೇಕು. ಹೊರಗಿನವರಿಗೆ ಸಿಖ್ಖರ ಮನೆಗಳನ್ನು ತೋರಿಸಿಕೊಡಲಾಯಿತು ಎನ್ನುವುದಕ್ಕೆ ಸಾಕ್ಷ್ಯ ಇದೆ. ಸಿಖ್ಖರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಗುರುದ್ವಾರವೊಂದರ ಬಳಿ ಸೇರಿದಾಗ, ‘ನಿಮಗೆ ರಕ್ಷಣೆ ನೀಡಲಾಗುವುದು’ ಎಂದು ಹೇಳಿ ಅವರಿಗೆ ಮನೆಗೆ ತೆರಳುವಂತೆ ಪೊಲೀಸರು ಮನವೊಲಿಸಿದರು. ಇದಾದ ನಂತರ ಉದ್ರಿಕ್ತರ ಗುಂಪು ಪರಿಸ್ಥಿತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಪೊಲೀಸರು ನಿಂತು ನೋಡುತ್ತಿದ್ದರು.

ದಂಗೆಯ ಹಿಂದೆ ಇದ್ದವರು ಕಾಂಗ್ರೆಸ್ಸಿನ ನಾಯಕರು ಮತ್ತು ಅದರ ಕಾರ್ಯಕರ್ತರು ಎಂಬುದನ್ನು ತನ್ನಲ್ಲಿ ಸಲ್ಲಿಕೆಯಾದ ಪ್ರಮಾಣಪತ್ರಗಳು ಹೇಳುತ್ತವೆ ಎಂದು ಆಯೋಗ ಹೇಳಿತು. ‘ಈ ಘಟನೆಗಳಲ್ಲಿ ಬೇರೆ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಭಾಗಿಯಾದ ಆರೋಪ ಇಲ್ಲ’ ಎಂದು ಆಯೋಗ ಹೇಳಿತು. ಉದ್ರಿಕ್ತ ಗುಂಪಿನಲ್ಲಿ ಇದ್ದ ಕೆಲವರು ಕಾಂಗ್ರೆಸ್ ಕಾರ್ಯಕರ್ತರು ಅಥವಾ ಅದರ ಪರ ಸಹಾನುಭೂತಿ ಹೊಂದಿರುವವರು ಎಂಬುದನ್ನು ದಂಗೆಯ ವೇಳೆ ಕೇಳಿಬಂದ ಘೋಷಣೆಗಳು ಸೂಚಿಸುತ್ತವೆ. ‘ಸಿಖ್ಖರಿಗೆ ಪಾಠ ಕಲಿಸಬೇಕು’ ಎಂದು ರಾಜೀವ್ ಗಾಂಧಿ ತಮ್ಮ ಒಬ್ಬ ಅಧಿಕಾರಿಯ ಬಳಿ ಹೇಳಿದ್ದರು ಎಂಬ ಮಾಹಿತಿಯನ್ನು ಆಯೋಗದ ಎದುರು ಇರಿಸಲಾಯಿತು. ಆದರೆ, ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ತೀರಾ ಜಾಳುಜಾಳಾಗಿದ್ದ ಕಾರಣ ಆ ವಿಚಾರವಾಗಿ ಆಯೋಗ ಮುಂದಡಿ ಇರಿಸಲಿಲ್ಲ. ಆದರೆ, ದಂಗೆಕೋರರ ಜೊತೆ ಪೊಲೀಸರು ಮತ್ತು ಆಡಳಿತ ಶಾಮೀಲಾಗಿತ್ತು, ಸೇನೆಯನ್ನು ಕರೆಸುವಲ್ಲಿ ಅನಗತ್ಯ ವಿಳಂಬ ಮಾಡಲಾಯಿತು ಎಂಬ ವಿಚಾರವಾಗಿ ಆಯೋಗವು ಸರ್ಕಾರದ ಮೇಲೆ ದೋಷಾರೋಪ ಹೊರಿಸಿತು.

ಇಂದಿರಾ ಗಾಂಧಿ ಹತ್ಯೆಯ ಬಳಿಕ ಭಾರತದ ಪ್ರಭುತ್ವಕ್ಕೆ ಪಾರ್ಶ್ವವಾಯು ಬಡಿದಂತೆ ಆಗಿತ್ತು. ರಕ್ಷಣೆ ಕೊಡಿ ಎಂದು ಸಿಖ್ಖರು ಮಾಡಿದ ಮನವಿಗೆ ಅಂದಿನ ರಾಷ್ಟ್ರಪತಿ ಜೈಲ್ ಸಿಂಗ್ ಅವರು ತೋರಿದ ಆಘಾತಕಾರಿ ಮೌನ ಈ ಮಾತನ್ನು ವಿವರಿಸುತ್ತದೆ. ನವೆಂಬರ್ 1ರ ಬೆಳಿಗ್ಗೆ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ಹಿರಿಯ ನಾಗರಿಕರ ತಂಡದಲ್ಲಿ ಖ್ಯಾತ ಲೇಖಕ ಪಟ್ವಂತ್ ಸಿಂಗ್ ಅವರೂ ಇದ್ದರು. ಅವರು ಆ ಭೇಟಿ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಹಿಂಸೆಯನ್ನು ಕೊನೆಗಾಣಿಸುವ ನೈತಿಕ ಹಾಗೂ ಸಾಂವಿಧಾನಿಕ ಹೊಣೆಗಾರಿಕೆ ರಾಷ್ಟ್ರಪತಿಯವರ ಮೇಲೆ ಇದೆ ಎಂದು ನಿಯೋಗ ಭೇಟಿಯ ವೇಳೆ ಹೇಳಿತು. ಅದಕ್ಕೆ ಪ್ರತಿಕ್ರಿಯೆಯಾಗಿ ರಾಷ್ಟ್ರಪತಿ, ‘ನನಗೆ ಮಧ್ಯಪ್ರವೇಶ ಮಾಡುವ ಅಧಿಕಾರ ಇಲ್ಲ’ ಎಂದು ಉತ್ತರಿಸಿದರು. ಅರಾಜಕತೆ ಮತ್ತು ರಕ್ತಪಾತ ತಡೆಯುವ ಅಧಿಕಾರ ಇಲ್ಲವೆಂದು ತಾವು ಹೇಳುತ್ತಿರುವಿರಾ ಎಂದು ನಿಯೋಗ ಜೈಲ್ ಸಿಂಗ್ ಅವರನ್ನು ಪ್ರಶ್ನಿಸಿತು. ‘ಆಗ ರಾಷ್ಟ್ರಪತಿ ಮೌನವಾಗಿದ್ದರು’. ಆದರೆ ನಿಯೋಗ ಪಟ್ಟುಹಿಡಿಯಿತು. ಪ್ರಧಾನಿ ಜೊತೆ ಮಾತುಕತೆ ನಡೆಸುವಂತೆ ಒತ್ತಾಯಿಸಿತು. ‘ನಾನು ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಮಾತನಾಡುವೆ’ ಎಂದು ಜೈಲ್ ಸಿಂಗ್ ಹೇಳಿದರು. ಸಿಖ್ಖರ ಸಾಮೂಹಿಕ ಹತ್ಯೆ ನಡೆದಿದ್ದು ಆ ಮೂರರಿಂದ ನಾಲ್ಕು ದಿನಗಳ ಅವಧಿಯಲ್ಲಿ.

ಎರಡು ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ದೋಷಾರೋಪ ಹೊರಿಸಲು ಸಾಕಷ್ಟು ಸಾಕ್ಷ್ಯಗಳಿವೆ. ಒಂದು, ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವೊಂದರ ಮೇಲೆ ಅತ್ಯಂತ ಹೇಯ ರೂಪದ ಕ್ರೌರ್ಯವೊಂದು ನಡೆಯಲು ಬಿಟ್ಟಿದ್ದು. ಇನ್ನೊಂದು, ಹಿಂಸೆ ನಡೆಸಿದವರ ಜೊತೆ ಸರ್ಕಾರ ಶಾಮೀಲಾಗಿದ್ದು. ತಮ್ಮ ಪಕ್ಷ ಇದರಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳುವ ಮೂಲಕ ರಾಹುಲ್ ಅವರು ಈಗ ಸಿಖ್ಖರ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡುತ್ತಿದ್ದಾರೆ. ನಾನಾವತಿ ಆಯೋಗದ ವರದಿ ಹಾಗೂ ಆ ಆಯೋಗದ ಮುಂದೆ ಸಲ್ಲಿಕೆಯಾದ ಪ್ರಮಾಣಪತ್ರಗಳನ್ನು ರಾಹುಲ್ ಅವರು ಓದಬೇಕು.

(ಲೇಖಕ ‍ಪ್ರಸಾರ ಭಾರತಿ ಅಧ್ಯಕ್ಷ)

Tags: 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 1

  Sad
 • 0

  Frustrated
 • 7

  Angry

Comments:

0 comments

Write the first review for this !