ಸೋಮವಾರ, ನವೆಂಬರ್ 18, 2019
20 °C

ಮುಖಕಾಂತಿಯ ಕಾರಣ

ಗುರುರಾಜ ಕರಜಗಿ
Published:
Updated:

ಒಂದಾನೊಂದು ಕಾಲದಲ್ಲಿ ಬೋಧಿಸತ್ವ ವಾರಾಣಸಿ ರಾಜನಾಗಿದ್ದ. ಅವನ ಅನೇಕ ಮಂತ್ರಿಗಳಲ್ಲಿ ಒಬ್ಬ ದುಷ್ಟ ಮಂತ್ರಿಯೂ ಇದ್ದ. ಆತ ರಾಜನಿಗೆ ತಿಳಿಯದಂತೆ ಅನೇಕ ಅಪಚಾರಗಳನ್ನು ಮಾಡುತ್ತಿದ್ದ. ಒಂದು ಸಲವಂತೂ ಅನೈತಿಕ ಕೆಲಸ ಮಾಡಿ ಅಂತ:ಪುರವನ್ನು ದೂಷಿತಗೊಳಿಸಿಬಿಟ್ಟ. ರಾಜನೇ ಅದನ್ನು ಪ್ರತ್ಯಕ್ಷವಾಗಿ ಕಂಡು ಅವನನ್ನು ರಾಷ್ಟ್ರದಿಂದ ಹೊರಗೆ ಹಾಕಿಬಿಟ್ಟ.

ತಪ್ಪನ್ನು ತಾನೇ ಮಾಡಿದ್ದರೂ ರಾಜ ಹೊರಗೆ ಹಾಕಿದ್ದಕ್ಕೆ ಈ ಮಂತ್ರಿ ಕೋಪದಿಂದ ಕುದಿಯುತ್ತಿದ್ದ. ನೇರವಾಗಿ ಕೋಸಲದೇಶಕ್ಕೆ ಅಲ್ಲಿಯ ರಾಜ ದಬ್ಬಸೇನ ಬಳಿ ಹೋದ. ಅಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ ನಿಧಾನವಾಗಿ ರಾಜನ ವಿಶ್ವಾಸವನ್ನು ಸಂಪಾದಿಸಿದ. ಸ್ವಲ್ಪ ಸಲುಗೆ ಬಂದಾಗ ರಾಜನಿಗೆ ಹೇಳಿದ, “ಪ್ರಭೂ, ವಾರಾಣಸಿ ಒಂದು ಜೇನುತುಪ್ಪ ತುಂಬಿದ ಕೊಡವಿದ್ದಂತೆ. ಅದನ್ನು ರಕ್ಷಿಸುವವರು ಯಾರೂ ಇಲ್ಲ. ತಾವು ಮನಸ್ಸು ಮಾಡಿದರೆ ಅದನ್ನು ಗೆದ್ದುಬಿಡಬಹುದು”. ರಾಜ ದಬ್ಬಸೇನ ಕೇಳಿದ, “ನನಗೆ ತಿಳಿದಂತೆ ವಾರಾಣಸಿಯ ರಾಜ ಮಹಾನ್ ಪರಾಕ್ರಮಿ. ಅವನ ಸೈನ್ಯ ತುಂಬ ದೊಡ್ಡದು ಮತ್ತು ಅವನಲ್ಲಿ ಅಪಾರವಾದ ಶಸ್ತ್ರಾಸ್ತ್ರಗಳಿವೆ. ಅವನನ್ನು ಗೆಲ್ಲುವುದು ಸುಲಭವಲ್ಲ. ನನ್ನ ಅಂದಾಜಿನಂತೆ ನಾವು ವಾರಣಾಸಿಯನ್ನು ಗೆಲ್ಲಲಾರೆವು”. ಕುಮಂತ್ರಿ ಹೇಳಿದ, “ನೀವು ಹೇಳಿದ್ದು ಸರಿ ಸ್ವಾಮಿ. ಆದರೆ ರಾಜ ಎಂದೂ ಯುದ್ಧ ಮಾಡುವವನಲ್ಲ. ಅವನಿಗೆ ಯಾರ ಮೇಲೂ ಕೋಪವಿಲ್ಲ, ದ್ವೇಷವಿಲ್ಲ, ನೀವು ದಂಡೆತ್ತಿ ಹೋದರೆ ಬಹುಶ: ರಾಜ್ಯವನ್ನೇ ನಿಮಗೆ ಒಪ್ಪಿಸಿಬಿಡಬಹುದು”.

ದಬ್ಬಸೇನ ತನ್ನ ಬೃಹತ್ ಸೈನ್ಯವನ್ನು ತೆಗೆದುಕೊಂಡು ವಾರಾಣಸಿ ಮೇಲೆ ದಾಳಿ ಮಾಡಿದ. ಬೋಧಿಸತ್ವನ ಸೇನಾಧಿಪತಿ ತಕ್ಷಣವೇ ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡಿದ. ಆದರೆ ರಾಜ ಬೋಧಿಸತ್ವ, “ಬೇಡ ಅವರೊಡನೆ ಯುದ್ದ, ಅವನಿಗೆ ರಾಜ್ಯದ ಬಗ್ಗೆ ಅಷ್ಟೊಂದು ಮೋಹವಿದ್ದರೆ ರಾಜ್ಯವನ್ನು ಅವನೇ ತೆಗೆದುಕೊಳ್ಳಲಿ. ಯಾಕೆ ಸುಮ್ಮನೆ ಪ್ರಾಣಹಾನಿ, ವಸ್ತುಹಾನಿಯಾಗಬೇಕು?” ಎಂದು ತಾನೇ ನೇರವಾಗಿ ಕೋಟೆಯ ಹೊರಗೆ ಬಂದು ನಿಂತುಬಿಟ್ಟ. ದಬ್ಬಸೇನನ ಸೈನಿಕರು ಬೋಧಿಸತ್ವನನ್ನು ಹಿಡಿದುಕೊಂಡು ರಾಜನ ಬಳಿಗೆ ಹೋದರು. ದಬ್ಬಸೇನ ಬೋಧಿಸತ್ವನನ್ನು ಒಂದು ಬಲೆಯಲ್ಲಿ ಕಟ್ಟಿ ತಲೆ ಕೆಳಗಾಗಿ ನೇತಾಡುವಂತೆ ತೂಗುಹಾಕಿಸಿದ. ತಾನು ದರ್ಪದಿಂದ ಅವನನ್ನು ಕಾಣಲು ಹೊರಟ. ಆಗ ತನಗೆ ಸಿದ್ಧಿಸಿದ ಯೋಗದಿಂದ ಧ್ಯಾನಮಾಡಿದಾಗ ಬಲೆ ಕತ್ತರಿಸಿ ಬೋಧಿಸತ್ವ ಆಕಾಶದಲ್ಲಿ ಮಿನುಗುತ್ತ ನಿಂತ.

ದಬ್ಬಸೇನ ಅವನನ್ನು ನೋಡಲು ಎದುರು ಬಂದಾಗ ಬೋಧಿಸತ್ವನ ಕಾಂತಿ ಅವನ ಕಣ್ಣು ಕುಕ್ಕಿತು. ಅದೇ ಕ್ಷಣದಲ್ಲಿ ಅವನ ಮೈಯಲ್ಲಿ ಉರಿ ಉಂಟಾಯಿತು. ಅದು ಯಾವ ಪರಿಯಾಗಿ ಉರಿಯತೊಡಗಿತೆಂದರೆ ಆತ ನೆಲಕ್ಕೆ ಬಿದ್ದ ಹೊರಳಾಡತೊಡಗಿದ, ಬೋಧಿಸತ್ವನನ್ನು ಹೀಗೆ ಬಂಧಿಸಿದ್ದಕ್ಕೆ ಈ ಉರಿ ಉಂಟಾಗಿರಬೇಕೆಂದು ಅವನ ಕ್ಷಮೆ ಕೇಳಿದ. ಬೋಧಿಸತ್ವ ಮೆಲುನಗೆ ನಕ್ಕ. ಇವನ ಉರಿ ಶಾಂತವಾಯಿತು. ದಬ್ಬಸೇನ ಕೇಳಿದ. “ಅಯ್ಯಾ, ನಿನ್ನನ್ನು ಕಟ್ಟಿ ಹಾಕಿ ತೂಗಿಸಿದರೂ ನಿನ್ನ ಮುಖದ ಮೇಲೆ ಈ ಕಾಂತಿ ಇದೆಯಲ್ಲ, ಅದು ಹೇಗೆ ಬಂದಿತು? ನಿನ್ನ ಸೌಂದರ್ಯದ ಗುಟ್ಟೇನು?” ಎಂದು ಕೇಳಿದ. ಆಗ ಬೋಧಿಸತ್ವ ಹೇಳಿದ, “ಸ್ನೇಹಿತ ಮುಖಕಾಂತಿಗೆ ರಾಜ ಸಿಂಹಾಸನ, ದರ್ಪ, ಅಧಿಕಾರ ಇವು ಯಾವವೂ ಕಾರಣವಲ್ಲ. ಯಾರಲ್ಲೂ ದ್ವೇಷವನ್ನು ಸಾಧಿಸದೆ, ಸದಾಕಾಲ ಎಲ್ಲರ ಒಳಿತಿಗೆ ಪ್ರಾರ್ಥಿಸುವ ಪ್ರತಿಯೊಂದು ಜೀವಕ್ಕೆ ಭಗವಂತ ಕರುಣಿಸುವ ಆಶೀರ್ವಾದ ಇದು”.

ದಬ್ಬಸೇನ ವಾರಾಣಸಿಯನ್ನು ಬೋಧಿಸತ್ವನಿಗೇ ಕೊಟ್ಟುಬಿಟ್ಟು ಮರಳಿ ತನ್ನ ರಾಜ್ಯಕ್ಕೆ ಹೋದರೂ ಬದುಕಿರುವವರೆಗೆ ಅವನ ಶಿಷ್ಯನಾಗಿಯೇ ಉಳಿದ.

ಮುಖದ ಕಾಂತಿಗೆ, ಸೌಂದರ್ಯಕ್ಕೆ ಬಾಹ್ಯ ಸಾಧನಗಳಿಗಿಂತ ಅಂತರಂಗದ ನಿರ್ಮಲತೆ ಮುಖ್ಯ ಕಾರಣ.

ಪ್ರತಿಕ್ರಿಯಿಸಿ (+)