ಶುಕ್ರವಾರ, ಅಕ್ಟೋಬರ್ 18, 2019
24 °C
ರಾಹುಲ್‌ ಗಾಂಧಿ ತಮ್ಮ ಕುಟುಂಬದ ಸಂಪ್ರದಾಯವನ್ನು ಪಾಲಿಸಿದ್ದಾರೆ...!

ಭ್ರಷ್ಟಾಚಾರ: ಕೆಲವು ಅಪ್ರಿಯ ಸತ್ಯಗಳು

ಎ. ಸೂರ್ಯ ಪ್ರಕಾಶ್
Published:
Updated:
Prajavani

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುರು ಮಾಡಿರುವ ವಾಗ್ದಾಳಿ, ರಾಹುಲ್ ಅವರು ಮತ್ತೆ ಮತ್ತೆ ಹೇಳುತ್ತಿರುವ ‘ಚೌಕೀದಾರ್ ಚೋರ್‌ ಹೈ’ (ಚೌಕೀದಾರನೇ ಕಳ್ಳ) ಎಂಬ ಮಾತು ದೇಶದ ರಾಜಕೀಯ ಚರ್ಚೆಗಳನ್ನು ಇನ್ನಷ್ಟು ಕೆಳಮಟ್ಟಕ್ಕೆ ತಂದಿವೆ. ಹೀಗೆ ಮಾಡುವ ಮೂಲಕ ರಾಹುಲ್ ಅವರು, ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ನಾಯಕರು ತಮ್ಮ ಕುಟುಂಬಕ್ಕೆ ಸೇರಿರದಿದ್ದರೆ ಅವರನ್ನು ಅಗೌರವದಿಂದ ಕಾಣುವ ತಮ್ಮ ಕುಟುಂಬದ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಂತೆ ಆಗಿದೆ. ರಾಹುಲ್‌ ಅವರ ನಡೆಯು ಭ್ರಷ್ಟಾಚಾರದ ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಆದರೆ, ಅದರ ಬಗ್ಗೆ ಮಾತನಾಡಲು ನೆಹರೂ–ಗಾಂಧಿ ಕುಟುಂಬದ ಯಾರೊಬ್ಬರಿಗೂ ನೈತಿಕ ಅಧಿಕಾರ ಇಲ್ಲ. ನೆಹರೂ–ಗಾಂಧಿಗಳು ತಮ್ಮ ರಾಜಕೀಯಕ್ಕೆ ಹೇಗೆ ಹಣ ಹೊಂದಿಸಿದರು ಎಂಬುದರ ಮೇಲೆ ಒಂದು ನೋಟ ಇಲ್ಲಿದೆ.

ನೆಹರೂ ಯುಗದಲ್ಲಿ ಕಾಂಗ್ರೆಸ್ ಪಕ್ಷವು ಭಾರತೀಯ ವಾಣಿಜ್ಯೋದ್ಯಮಿಗಳಿಂದ ದೇಣಿಗೆ ಸಂಗ್ರಹಿಸಿತು. ಕೆಲವು ಸಂದರ್ಭಗಳಲ್ಲಿ ಇದರಿಂದಾಗಿ ಪಕ್ಷ ಹಾಗೂ ಸರ್ಕಾರ ತೊಂದರೆಗೆ ಸಿಲುಕಿದ್ದೂ ಇದೆ. ಹಲವು ಕಂಪನಿಗಳ ಮಾಲೀಕರಾಗಿದ್ದ ಮುಂದ್ರಾ ಅವರು 1950ರ ದಶಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದ್ದರು. ಅವರು ನಂತರ ಹಣಕಾಸಿನ ತೊಂದರೆಗೆ ಸಿಲುಕಿದಾಗ, ತಾವು ಕೊಟ್ಟ ನೆರವು ಮರಳಿ ಸಿಗಬೇಕು ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದರು. ಆ ಸೂಚನೆ ಮನ್ನಿಸಿದ ನೆಹರೂ ನೇತೃತ್ವದ ಸರ್ಕಾರವು ಮುಂದ್ರಾ ಅವರ ಕಂಪನಿಯ ಷೇರುಗಳನ್ನು ಹೆಚ್ಚಿನ ಬೆಲೆ ಕೊಟ್ಟು ಖರೀದಿ ಮಾಡುವಂತೆ ಭಾರತೀಯ ಜೀವವಿಮಾ ನಿಗಮಕ್ಕೆ ಸೂಚಿಸಿತು. ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ ಅವರು ಸತ್ಯ ಹೊರಬಂದ ನಂತರ ತಮ್ಮ ಕೆಲಸ ಕಳೆದುಕೊಂಡರು. ಇದು ಎಲ್‌ಐಸಿ–ಮುಂದ್ರಾ ಹಗರಣ ಎಂದೇ ಹೆಸರಾಗಿದೆ.

ಇಂದಿರಾ ಗಾಂಧಿ ಅವರು 1969ರಲ್ಲಿ ಪಕ್ಷ ವಿಭಜಿಸಿದ ನಂತರ ಪರಿಸ್ಥಿತಿ ಬದಲಾಯಿತು. ವಿಭಜನೆಯ ನಂತರ ಇಂದಿರಾ ಅವರು ಕಮ್ಯುನಿಸ್ಟರ ಮೇಲೆ ಹೆಚ್ಚೆಚ್ಚು ಅವಲಂಬಿತರಾದರು. ಹಾಗಾಗಿ, ಸೋವಿಯತ್‌ನವರು ಸಹಜವಾಗಿ ಇಂದಿರಾ ಅವರ ನೆರವಿಗೆ ಬಂದರು. ಸೋವಿಯತ್ ಒಕ್ಕೂಟದ ಗೂಢಚರ ಸಂಸ್ಥೆ ಕೆಜಿಬಿಯ ಕಡತಗಳನ್ನು ನೋಡಿಕೊಳ್ಳುತ್ತಿದ್ದ ವಾಸಿಲಿ ಮಿಟ್ರೊಖಿನ್ ಅವರು ಕೆಜಿಬಿಯು ವಿಶ್ವದಾದ್ಯಂತ ನಡೆಸಿದ್ದ ಚಟುವಟಿಕೆಗಳ ಬಗ್ಗೆ ಆಘಾತಕಾರಿ ಮಾಹಿತಿ ನೀಡಿದ್ದಾರೆ. 1971ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಜಿಬಿ ಹೇಗೆ ದೇಣಿಗೆ ನೀಡಿತ್ತು, ಇಂದಿರಾ ಸಂಪುಟದಲ್ಲಿ ಕೆಜಿಬಿ ಹೇಗೆ ಏಜೆಂಟರನ್ನು ಹೊಂದಿತ್ತು ಎಂಬುದನ್ನು ಮಿಟ್ರೊಖಿನ್ ಹೇಳಿದ್ದಾರೆ.

ತನ್ನ ಚಟುವಟಿಕೆಗಳು ಹಾಗೂ ಚುನಾವಣಾ ಅಭಿಯಾನಗಳಿಗೆ ಕಾಂಗ್ರೆಸ್ ಪಕ್ಷ ಹೇಗೆ ಸಂಪನ್ಮೂಲ ಸಂಗ್ರಹಿಸುತ್ತಿತ್ತು ಎಂಬುದರ ಬಗ್ಗೆ 1970ರ ನಂತರ ರಾಜಕೀಯ, ಸರ್ಕಾರ, ಅಧಿಕಾರಶಾಹಿ ಮತ್ತು ಉದ್ದಿಮೆಗಳಲ್ಲಿ ಆಯಕಟ್ಟಿನ ಸ್ಥಾನ ಹೊಂದಿದ್ದವರು ಅಮೂಲ್ಯ ಆಧಾರಗಳನ್ನು ನೀಡಿದ್ದಾರೆ. ದೇಣಿಗೆ ಸಂಗ್ರಹಿಸಲು ಕಾಂಗ್ರೆಸ್ ಪಕ್ಷ ಹೊಸ ಮಾರ್ಗವನ್ನು ಕಂಡುಕೊಂಡಿತು –ಅಂತರರಾಷ್ಟ್ರೀಯ ರಕ್ಷಣಾ ಒಪ್ಪಂದಗಳಲ್ಲಿ ಹಾಗೂ ಇತರ ಒಪ್ಪಂದಗಳಲ್ಲಿ ಕಮಿಷನ್ ಸಂಗ್ರಹಿಸುವುದು– ಎಂಬುದನ್ನು ಆ ಕಾಲವನ್ನು ನೋಡಿರುವ ಇವರು ಹೇಳಿದ್ದಾರೆ. 1986ರಿಂದ 1989ರ ನಡುವೆ ಸಂಪುಟ ಕಾರ್ಯದರ್ಶಿ ಆಗಿದ್ದ ಬಿ.ಜಿ. ದೇಶಮುಖ್ ಅವರ ‘ಎ ಕ್ಯಾಬಿನೆಟ್ ಸೆಕ್ರೆಟರಿ ಲುಕ್ಸ್ ಬ್ಯಾಕ್’ ಪುಸ್ತಕ ಹಲವಷ್ಟು ವಿಷಯಗಳನ್ನು ತಿಳಿಸುತ್ತದೆ.

‘ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು ಇಂದಿರಾ ಅವರು ಆರಂಭಿಸಿದ ಹಾಗೂ ಅವರ ಪುತ್ರ ಸಂಜಯ್ ಅವರಿಂದ ಸುಧಾರಣೆ ಕಂಡ ಪದ್ಧತಿಯಲ್ಲಿ ಬೊಫೋರ್ಸ್‌ ಹಗರಣದ ಮೂಲ ಇದೆ. 1960ರ ದಶಕದ ಮಧ್ಯ ಭಾಗದವರೆಗೂ, ಅಂದರೆ ಪಂಡಿತ್ ಜವಾಹರಲಾಲ್ ನೆಹರೂ ಅವಧಿಯಲ್ಲಿ, ಪಕ್ಷಕ್ಕೆ ಹಣ ಸಂಗ್ರಹಿಸುವುದು ಪಾರದರ್ಶಕವಾಗಿ ನಡೆಯುತ್ತಿತ್ತು. ಉದ್ಯಮಿಗಳು ದೇಣಿಗೆಯನ್ನು ಬಹಿರಂಗವಾಗಿ ನೀಡಲು ಅವಕಾಶ ಇತ್ತು’ ಎಂದು ದೇಶಮುಖ್ ಹೇಳುತ್ತಾರೆ

ಚುನಾವಣೆಗಳನ್ನು ಎದುರಿಸಲು ಮತ್ತು ಕಾಂಗ್ರೆಸ್ಸಿನ ಪ್ರಶ್ನಾತೀತ ನಾಯಕಿ ಆಗಲು ಹಣಕಾಸಿನ ಅನಿವಾರ್ಯ ಇಂದಿರಾ ಅವರಿಗೆ ಇತ್ತು. ಇದಕ್ಕಾಗಿ ಅವರು ತಮ್ಮ ನಿಷ್ಠರಾದ ರಜನಿ ಪಟೇಲ್ ಮತ್ತು ವಸಂತರಾವ್ ನಾಯಕ್‌ ಅವರನ್ನು ನೆಚ್ಚಿಕೊಂಡಿದ್ದರು. ಅವರು ಭಾರತದ ರಾಜಕೀಯದಲ್ಲಿ ತಮ್ಮ ಆಧಿಪತ್ಯ ಸ್ಥಾಪಿಸಿದ ನಂತರ, ಪಕ್ಷಕ್ಕೆ ನಿಧಿ ಸಂಗ್ರಹ ಮಾಡುವುದಕ್ಕೆ ಇರುವ ಉತ್ತಮ ಮಾರ್ಗ ವಿದೇಶಿ ಒಪ್ಪಂದಗಳಲ್ಲಿ ಪಾಲು ತೆಗೆದುಕೊಳ್ಳುವುದು ಎಂದು ತೀರ್ಮಾನಿಸಿದರು. ಇದನ್ನು ಸಂಜಯ್ ಗಾಂಧಿ ಅವರು ಕರಗತ ಮಾಡಿಕೊಂಡರು, 1972ರ ನಂತರ ಇದರಲ್ಲಿ ಅವರು ಇನ್ನಷ್ಟು ಸುಧಾರಣೆ ತಂದರು. 1980ರಲ್ಲಿ ಇಂದಿರಾ ಅಧಿಕಾರಕ್ಕೆ ಮರಳಿದಾಗ ಈ ವ್ಯವಸ್ಥೆ ಸಂಪೂರ್ಣವಾಗಿ ಕರಗತವಾಗಿತ್ತು. ನಂಬಿಕಸ್ಥ ಅಧಿಕಾರಿಗಳನ್ನು ಮಹತ್ವದ ಇಲಾಖೆಗಳಿಗೆ ನೇಮಿಸಿ, ಒಪ್ಪಂದಗಳನ್ನು ಅಂತಿಮಗೊಳಿಸುವುದು ಹೇಗೆ ಎಂಬ ಬಗ್ಗೆ ಅವರಿಂದ ಸಲಹೆ ಕೊಡಿಸಲಾಗುತ್ತಿತ್ತು ಎಂದು ದೇಶಮುಖ್ ಹೇಳಿದ್ದಾರೆ.

ಈ ವಿಚಾರಗಳಲ್ಲಿ ಪ್ರಶ್ನಾತೀತರಾದ ಇನ್ನೊಬ್ಬರ ಮಾತೆಂದರೆ, ನಾಗರಿಕ ಸೇವಾ ಅಧಿಕಾರಿ, ರಾಯಭಾರಿ ಹಾಗೂ ರಾಜ್ಯಪಾಲರಾಗಿದ್ದ ಬಿ.ಕೆ. ನೆಹರೂ ಅವರದ್ದು. ಸಂಜಯ್ ಗಾಂಧಿ ಅವರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಬಿ.ಕೆ. ನೆಹರೂ ಅವರು ರಾಜೀವ್ ಗಾಂಧಿ ಅವರಲ್ಲಿ, ‘ಸಂಜಯ್ ಸಂಗ್ರಹಿಸಿದ್ದ ಹಣ ಸುರಕ್ಷಿತವಾಗಿದೆಯೇ’ ಎಂದು ಕೇಳಿದ್ದರಂತೆ. ಇದಕ್ಕೆ ರಾಜೀವ್ ಅವರು, ‘ಕಾಂಗ್ರೆಸ್ ಕಚೇರಿಯಲ್ಲಿನ ಅಲ್ಮೆರಾದಲ್ಲಿ ಸಿಕ್ಕಿದ್ದು ₹ 20 ಲಕ್ಷ ಮಾತ್ರ’ ಎಂದಿದ್ದರು. ಸಂಜಯ್ ಅವರಲ್ಲಿ ಎಷ್ಟಿತ್ತು ಎಂದು ನಂತರ ಬಿ.ಕೆ. ನೆಹರೂ ಕೇಳಿದರು. ಇದಕ್ಕೆ ರಾಜೀವ್ ಅವರು ‘ಕೋಟಿಗಟ್ಟಲೆ’ ಎಂದು ಹೇಳಿದ್ದರು.

ಇನ್ನೂ ಇಬ್ಬರು ಸಾಕ್ಷಿಗಳು ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಮತ್ತು ಉದ್ಯಮಿ ಜೆ.ಆರ್‌.ಡಿ. ಟಾಟಾ. ವೆಂಕಟರಾಮನ್ ಅವರು ಟಾಟಾ ಜೊತೆ ನಡೆಸಿದ ಮಾತುಕತೆಯನ್ನು ತಮ್ಮ ಆತ್ಮಕಥೆಯಲ್ಲಿ ನೆನಪಿಸಿಕೊಂಡಿದ್ದಾರೆ. ರಾಜೀವ್ ಮತ್ತು ಅವರ ಕುಟುಂಬದವರು ಬೊಫೋರ್ಸ್‌ ಒಪ್ಪಂದದಲ್ಲಿ ಕಮಿಷನ್‌ ಪಡೆದಿಲ್ಲದಿರುವ ಸಾಧ್ಯತೆ ಇದೆ. ಆದರೆ, ಕಾಂಗ್ರೆಸ್ ಪಕ್ಷ ಕಮಿಷನ್ ಪಡೆದಿಲ್ಲ ಎಂದು ನಂಬುವುದು ಕಷ್ಟ ಎಂದು ಟಾಟಾ ಹೇಳಿದ್ದರಂತೆ. ಏಕೆಂದರೆ, ‘1980ರ ನಂತರ ಪಕ್ಷವು ದೇಣಿಗೆ ಕೇಳಿ ಉದ್ಯಮಿಗಳ ಬಳಿ ಬಂದಿರಲಿಲ್ಲ ಎಂದು ಟಾಟಾ ಭಾವಿಸಿದ್ದರು. ಹಾಗಾಗಿ, ಪಕ್ಷವು ಒಪ್ಪಂದದಲ್ಲಿ ಕಮಿಷನ್‌ ಪಡೆದಿರಬಹುದು ಎಂಬ ಭಾವನೆ ಉದ್ಯಮಿಗಳಲ್ಲಿ ಇತ್ತು’.

ಆ ಹೊತ್ತಿಗೆ ಇದು ದೇಣಿಗೆ ಸಂಗ್ರಹಿಸುವ ದಾರಿ ಆಗಿತ್ತಾದ್ದರಿಂದ, ಬೊಫೋರ್ಸ್‌ ಹಗರಣ ನಡೆದಿದ್ದರಲ್ಲಿ ವಿಶೇಷವಿಲ್ಲ. ಬೊಫೋರ್ಸ್‌ ಫಿರಂಗಿ ಖರೀದಿ ವೇಳೆ ರಾಜೀವ್ ಮತ್ತು ಇತರರು ಕಮಿಷನ್ ಪಡೆದ ಆರೋಪ ಎದುರಾಯಿತು. ಇದನ್ನು ರಾಜೀವ್ ಅಲ್ಲಗಳೆದರು. ಆದರೆ, ಬೊಫೋರ್ಸ್‌ ಕಂಪನಿಯು ಮಾರಿಯಾ ಮತ್ತು ಒಟ್ಟಾವಿಯೊ ಕ್ವಟ್ರೋಚಿ ಅವರ ಖಾತೆಗೆ ಹಣ ಜಮಾ ಮಾಡಿದ್ದು ಏಕೆ ಎಂಬುದರ ವಿವರಣೆಯನ್ನು ನೀಡಲು ನೆಹರೂ–ಗಾಂಧಿಗಳಿಗೆ ಆಗಿಲ್ಲ. ಕ್ವಟ್ರೋಚಿ ಬಳಿಯ ಹಣ ಕೊನೆಗೂ ಪತ್ತೆಯಾಯಿತು.

ವಾಜಪೇಯಿ ನೇತೃತ್ವದ ಸರ್ಕಾರವು ಕ್ವಟ್ರೋಚಿ ಖಾತೆಯನ್ನು ಬ್ರಿಟನ್ ಸರ್ಕಾರ ಸ್ಥಗಿತಗೊಳಿಸುವಂತೆ ಮಾಡಿತು. ಆದರೆ, ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಖಾತೆ ಸ್ಥಗಿತದ ಆದೇಶವನ್ನು ಹಿಂಪಡೆಯುವಂತೆ ಬ್ರಿಟನ್ ಸರ್ಕಾರವನ್ನು ಆಗ್ರಹಿಸಿತು. ಇದೆಲ್ಲಕ್ಕಿಂತ ಇನ್ನೂ ಹೆಚ್ಚಿನ ವಿವರ ಬೇಕೇ?

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

Post Comments (+)