ರಾಜಕೀಯದ ಅಪರಾಧೀಕರಣ: ನಿವಾರಣೆ ಯಾರಿಂದ?

7

ರಾಜಕೀಯದ ಅಪರಾಧೀಕರಣ: ನಿವಾರಣೆ ಯಾರಿಂದ?

ಎ. ಸೂರ್ಯ ಪ್ರಕಾಶ್
Published:
Updated:

ರಾಜಕೀಯದ ಅಪರಾಧೀಕರಣದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ ತೀರ್ಪು, ಮತದಾರ ಮತ ಚಲಾಯಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳ ಕುರಿತು ಮಾಹಿತಿ ಹೊಂದಿರಬೇಕು ಎಂಬುದರತ್ತ ಒಂದಿಷ್ಟು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದೆ. ಆದರೆ, ಕ್ರಿಮಿನಲ್‌ ಅಪರಾಧ ಹಿನ್ನೆಲೆ ಇರುವವರು ಚುನಾವಣೆಗಳಲ್ಲಿ ಸ್ಪರ್ಧಿಸದಂತಾಗಬೇಕು ಎಂಬ ಬಯಕೆ ಈಡೇರುವ ಸಾಧ್ಯತೆ ಇನ್ನೂ ತುಸು ದೂರದಲ್ಲಿ ಇದೆ.

ಕ್ರಿಮಿನಲ್ ಅಪರಾಧ ಹಿನ್ನೆಲೆ ಹೊಂದಿರುವವರು ಶಾಸನಸಭೆಗಳನ್ನು ಪ್ರವೇಶಿಸುತ್ತಿರುವುದು, ಗೆದ್ದಲು ಹುಳುಗಳು ಪ್ರಜಾತಂತ್ರ ವ್ಯವಸ್ಥೆಯ ಕೋಟೆಯನ್ನು ಹಾಳು ಮಾಡುತ್ತಿರುವುದಕ್ಕೆ ಸಮ ಎಂಬಂತಿದ್ದರೂ, ಅವರು ಶಾಸನಸಭೆ ಪ್ರವೇಶಿಸುವುದನ್ನು ತಡೆಯದಂತೆ ತಾನು ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್‌, ಪರಿಸ್ಥಿತಿಯನ್ನು ಅವಲೋಕಿಸಿ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹಾಗೆ ಕಾನೂನು ಮಾಡುವುದು ಸಂಸತ್ತಿನ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಲಾಗಿದೆ. ಸಂಸತ್ತು ಈ ಕೊಳಕನ್ನು ಮೂಲದಲ್ಲೇ ನಿವಾರಿಸುವ ದೃಢ ನಿರ್ಧಾರವನ್ನು ಇನ್ನಷ್ಟೇ ತೋರಬೇಕಿದೆ.

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವ್ಯಕ್ತಿಗಳ ಪೂರ್ವಾಪರದ ಬಗ್ಗೆ ಮತದಾರರಿಗೆ ಸಾಕಷ್ಟು ಮಾಹಿತಿ ಇರಬೇಕು ಎಂಬ ನಿಟ್ಟಿನಲ್ಲಿ ಈಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ ಹಲವು ಕ್ರಮಗಳನ್ನು ಮುಂಚೂಣಿಯಲ್ಲಿ ನಿಂತು ಕೈಗೊಂಡಿದೆ. ಕೋರ್ಟ್‌ ನಿರ್ದೇಶನಗಳ ಪರಿಣಾಮವಾಗಿ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ತಾವು ಹೊಂದಿರುವ ಆಸ್ತಿ ಮತ್ತು ಋಣಭಾರದ ವಿವರಗಳು ಹಾಗೂ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕಾಗಿದೆ. ಈಚೆಗೆ ನೀಡಿದ ತೀರ್ಪಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಸುಪ್ರೀಂ ಕೋರ್ಟ್‌, ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಅಪರಾಧ ಹಿನ್ನೆಲೆಯ ಬಗ್ಗೆ ಮತದಾರರಿಗೆ ಸ್ಥಳೀಯ ಮಾಧ್ಯಮಗಳ ಮೂಲಕ ಮತ್ತೆ ಮತ್ತೆ ಮಾಹಿತಿ ನೀಡಬೇಕು ಎಂದು ಹೇಳಿದೆ.

ಅಲ್ಲದೆ, ಕ್ರಿಮಿನಲ್ ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳಿಗೆ ಟಿಕೆಟ್ ನೀಡುವ ರಾಜಕೀಯ ಪಕ್ಷಗಳು ಅಂತಹ ಅಭ್ಯರ್ಥಿಗಳ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ತಮ್ಮ ವೆಬ್‌ಸೈಟ್‌ಗಳ ಮೂಲಕ ಪ್ರಕಟಿಸಬೇಕು ಎಂದೂ ಹೇಳಿದೆ. ನಾಮಪತ್ರ ಸಲ್ಲಿಸಿದ ನಂತರ, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ವ್ಯಾಪಕವಾಗಿ ಪ್ರಸರಣ ಹೊಂದಿರುವ ದಿನಪತ್ರಿಕೆಗಳ ಮೂಲಕ ಆ ಅಭ್ಯರ್ಥಿಗಳ ಹಿನ್ನೆಲೆಯ ಬಗ್ಗೆ ಹೇಳಿಕೆ ನೀಡಬೇಕು, ಈ ವಿಷಯದ ಬಗ್ಗೆ ಸ್ಥಳೀಯ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಕೂಡ ಕನಿಷ್ಠ ಮೂರು ಬಾರಿ ‘ವ್ಯಾಪಕ ಪ್ರಚಾರ’ ನೀಡಬೇಕು. ಅಭ್ಯರ್ಥಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ನಾಗರಿಕರನ್ನು ಬೆಳೆಸಲು, ಅವರು ಚುನಾವಣೆಯ ಸಂದರ್ಭದಲ್ಲಿ ಸಂಪೂರ್ಣ ಅರಿವಿನಿಂದ ತೀರ್ಮಾನ ಕೈಗೊಳ್ಳುವಂತೆ ಆಗಲು ಇವೆಲ್ಲ ಬೇಕು.

ಕ್ರಿಮಿನಲ್ ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳು ಶಾಸನಸಭೆಗಳನ್ನು ಪ್ರವೇಶಿಸುತ್ತಿರುವುದು ಹೆಚ್ಚುತ್ತಿರುವ ವಿಚಾರದಲ್ಲಿ ಕೋರ್ಟ್‌ ಕಡುಕೋಪ ವ್ಯಕ್ತಪಡಿಸಿದೆ. ಆದರೆ, ಅಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುವ ಕೆಲಸಕ್ಕೆ ಮುಂದಾಗಿಲ್ಲ. ಗಂಭೀರ ಸ್ವರೂಪದ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ರಾಜಕೀಯದ ಮುಖ್ಯವಾಹಿನಿ ಪ್ರವೇಶಿಸದಂತೆ ಕಾನೂನು ಮಾಡಬೇಕಿರುವ ಸಂದರ್ಭ ಸಂಸತ್ತಿನ ಪಾಲಿಗೆ ಬಂದಿದೆ ಎಂದು ಕೋರ್ಟ್‌ ಹೇಳಿದೆ.

ಗಂಭೀರ ಸ್ವರೂಪದ ಕ್ರಿಮಿನಲ್ ಅಪರಾಧ ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ನಿಗದಿ ಆಗಿದ್ದಿದ್ದರೆ, ಅಂತಹ ವ್ಯಕ್ತಿಯು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಬೇಕು ಎಂದು ಕಾನೂನು ಆಯೋಗ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ ಸ್ಮರಿಸಿದೆ. ರಾಜಕೀಯ ಅಪರಾಧೀಕರಣಗೊಳ್ಳುತ್ತಿರುವ ವಿಚಾರವಾಗಿ ಸಮಾಜದಲ್ಲಿ ಇರುವ ಕಳವಳವನ್ನು ಇವೆಲ್ಲವೂ ಸ್ಫುಟವಾಗಿ ತೋರಿಸುತ್ತವೆ. ಆದರೆ, ಸಂಬಂಧಪಟ್ಟ ಶಾಸನಸಭೆಯು ಇದಕ್ಕೆ ಸಂಬಂಧಿಸಿದಂತೆ ಯಾವ ಕಾನೂನನ್ನೂ ರೂಪಿಸಿಲ್ಲ ಎಂದೂ ಕೋರ್ಟ್‌ ಹೇಳಿದೆ.

ಹೇಯ ಹಾಗೂ ಗಂಭೀರ ಅಪರಾಧ ಪ್ರಕರಣಗಳಲ್ಲಿ ದೋಷಾರೋಪ ನಿಗದಿಯಾದ ವ್ಯಕ್ತಿಗಳಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬಾರದು, ಅವರು ಪಕ್ಷದಲ್ಲಿ ಹೊಂದಿರುವ ಸದಸ್ಯತ್ವವನ್ನು ಕೂಡ ಕಡ್ಡಾಯವಾಗಿ ರದ್ದು ಮಾಡಬೇಕು. ಅಂತಹ ಕಾನೂನನ್ನು ಸಂಸತ್ತು ರೂಪಿಸಬೇಕು ಎಂದು ಕೋರ್ಟ್‌ ಬಯಕೆ ವ್ಯಕ್ತಪಡಿಸಿದೆ. ರಾಜಕೀಯದ ಅಪರಾಧೀಕರಣವನ್ನು ನಿವಾರಿಸುವಲ್ಲಿ ಇದು ಬಹುದೊಡ್ಡ ‍ಪರಿಣಾಮ ಉಂಟುಮಾಡುತ್ತದೆ ಎಂದು ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಜೆಎಂಎಂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಈಗಿನ ತೀರ್ಪು ನೆನಪಿಸಿದೆ. ಇದು 1993ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿಲುವಳಿ ಸೋಲಿಸಲು ಸಂಸದರಿಗೆ ಲಂಚದ ಆಮಿಷ ಒಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದು. ರಾವ್ ಅವರು ಅಲ್ಪಮತದ ಸರ್ಕಾರ ಮುನ್ನಡೆಸುತ್ತಿದ್ದರು, ಲೋಕಸಭೆಯಲ್ಲಿನ ಸಂಖ್ಯಾಬಲ ಅವರ ಸರ್ಕಾರದ ಸ್ಥಿತಿಯನ್ನು ಭದ್ರವಾಗಿಸುವಂತೆ ಇರಲಿಲ್ಲ. ಲೋಕಸಭೆಯಲ್ಲಿ ಮತಯಾಚನೆಯ ವೇಳೆ ಸಂಸದರ ಬೆಂಬಲವನ್ನು ಖರೀದಿ ಮಾಡಿದ ಆರೋಪವನ್ನು ಅವರು ಎದುರಿಸುತ್ತಿದ್ದರು. ಇವರ‌ಲ್ಲಿ ನಾಲ್ಕು ಜನ ಸಂಸದರು ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷಕ್ಕೆ ಸೇರಿದವರು. ಅವರು ನೀಡಿದ್ದ ಬೆಂಬಲಕ್ಕಾಗಿ ಅವರಿಗೆ ಒಟ್ಟು ₹ 2.8 ಕೋಟಿ ನೀಡಲಾಯಿತು. ‘ಮತಕ್ಕಾಗಿ ಲಂಚ’ ಒಪ್ಪಂದವು ರಾವ್ ನೇತೃತ್ವದ ಸರ್ಕಾರಕ್ಕೆ ಅವಿಶ್ವಾಸ ಗೊತ್ತುವಳಿಯನ್ನು ಸೋಲಿಸಲು ಸಾಧ್ಯವಾಗಿಸಿಕೊಟ್ಟಿತು. ಗೊತ್ತುವಳಿ ವಿರುದ್ಧವಾಗಿ 265 ಮತಗಳು, ಗೊತ್ತುವಳಿ ಪರವಾಗಿ 251 ಮತಗಳು ಚಲಾವಣೆಯಾದವು.

ಮತ ಚಲಾವಣೆಯ ಮೊದಲು ಹಾಗೂ ನಂತರ ಸದನದಲ್ಲಿ ನಡೆದಿದ್ದು ಯಾವುದೇ ಹಗರಣಕ್ಕೆ ಕಡಿಮೆ ಆಗಿರಲಿಲ್ಲ. ಕರ್ನಾಟಕ ಮೂಲದ, ಪಕ್ಷದ ನಾಯಕರೊಬ್ಬರು ಲಂಚದ ಹಣವನ್ನು ದೊಡ್ಡ ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡು ದೆಹಲಿಗೆ ಹಾರಿದರು. ಅವರ ದುರದೃಷ್ಟವೆಂದರೆ, ಆ ಸೂಟ್‌ಕೇಸ್‌ ದೆಹಲಿಯ ವಿಮಾನ ನಿಲ್ದಾಣದಲ್ಲಿ ಒಡೆದುಹೋಯಿತು. ಹಣದ ಕಂತೆಗಳು ಅಲ್ಲೆಲ್ಲ ಚೆಲ್ಲಿ ಬಿದ್ದಿದ್ದನ್ನು ಪ್ರಯಾಣಿಕರು ಕಂಡರು. ಲೋಕಸಭೆಯಲ್ಲಿ, ವಿಶ್ವಾಸ ಮತದ ನಂತರ ನಡೆದಿದ್ದು ಇನ್ನಷ್ಟು ನಗು ತರಿಸುವಂತೆ ಇತ್ತು. ಲಂಚದ ಹಣವನ್ನು ಪಡೆದ ಜೆಎಂಎಂ ಸದಸ್ಯರು, ಅದನ್ನು ಗೋಣಿಚೀಲದಲ್ಲಿ ತುಂಬಿಸಿಕೊಂಡು ರಾಷ್ಟ್ರೀಕೃತ ಬ್ಯಾಂಕೊಂದರ ನವದೆಹಲಿ ಶಾಖೆಗೆ ತೆರಳಿದರು. ಹಣವನ್ನು ತಮ್ಮ ಖಾತೆಗಳಿಗೆ ಜಮಾ ಮಾಡುವಂತೆ ಅಲ್ಲಿನ ವ್ಯವಸ್ಥಾಪಕರನ್ನು ಕೇಳಿಕೊಂಡರು. ಆದರೆ, ಮತಕ್ಕಾಗಿ ಲಂಚ ತೆಗೆದುಕೊಂಡಿದ್ದಕ್ಕೆ, ಲಂಚದ ಹಣವನ್ನು ತಮ್ಮ ಖಾತೆಗಳಿಗೆ ಬಹಿರಂಗವಾಗಿ ಜಮಾ ಮಾಡಿಕೊಂಡಿದ್ದಕ್ಕೆ ಯಾವೊಬ್ಬ ಸಂಸದನಿಗೂ ಶಿಕ್ಷೆ ಆಗಲಿಲ್ಲ.

ಸಂವಿಧಾನದ 105ನೇ ವಿಧಿಯ ಅನ್ವಯ ಈ ಸಂಸದರನ್ನು ಶಿಕ್ಷಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದ ಪರಿಣಾಮವಾಗಿ ಇವರು ಶಿಕ್ಷೆಯಿಂದ ತಪ್ಪಿಸಿಕೊಂಡರು. ಸಂಸದರಿಗೆ ಸಂಸತ್ತಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಸಂವಿಧಾನದ 105(1)ನೇ ವಿಧಿ ಹೇಳುತ್ತದೆ. ‘ಸಂಸತ್ತಿನಲ್ಲಿ ಸಂಸದನೊಬ್ಬ ಮತ ಚಲಾಯಿಸಿದ್ದಕ್ಕೆ, ಏನನ್ನಾದರೂ ಹೇಳಿದ್ದಕ್ಕೆ ಅವನ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ದಾಖಲಿಸುವಂತಿಲ್ಲ’ ಎಂದು 105(2)ನೇ ವಿಧಿ ಹೇಳುತ್ತದೆ.

ಈ ಪ್ರಕರಣದಲ್ಲಿ, ಲಂಚ ‍ಪಡೆದ ಸಂಸದರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನ್ವಯ ಕ್ರಮ ಜರುಗಿಸಲಾಯಿತು. ಆದರೆ, ತಾವು ಸಂಸತ್ತಿನಲ್ಲಿ ಆಡಿದ್ದಕ್ಕೆ, ಮಾಡಿದ್ದಕ್ಕೆ ತಮ್ಮ ವಿರುದ್ಧ ಕ್ರಮ ಜರುಗಿಸುವಂತೆ ಇಲ್ಲ ಎಂದು ಈ ಸಂಸದರು ವಾದಿಸಿದರು. ಅವರ ವಾದದಲ್ಲಿ ಹುರುಳಿದೆ ಎಂದು ಕೋರ್ಟ್‌ಗೆ ಅನಿಸಿತು. ‘105(2)ನೇ ವಿಧಿ ನೀಡಿರುವ ರಕ್ಷಣೆಯು ಈ ಸಂಸದರಿಗೆ ಇದೆ’ ಎಂದು ಕೋರ್ಟ್‌ ಹೇಳಿತು. ಲಂಚ ಕೊಟ್ಟವರ ವಿರುದ್ಧ ಕ್ರಮ ಜರುಗಿಸಬೇಕು, ಹಾಗೆಯೇ ಲಂಚ ಪಡೆದು ಮತ ಚಲಾಯಿಸದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರ್ಟ್‌ ಹೇಳಿತು. ಮತ ಚಲಾಯಿಸಿದವರಿಗೆ ಮಾತ್ರ 105(2)ನೇ ವಿಧಿಯ ಅನ್ವಯ ರಕ್ಷಣೆ ಇದೆ ಎಂದು ಕೋರ್ಟ್‌ ಹೇಳಿತು.

ಸಾಂವಿಧಾನಿಕವಾಗಿ ತಾನು ಸರಿಯಾಗಿ ಇರಬೇಕು ಎಂದು ಕೋರ್ಟ್‌ ಭಾವಿಸುವುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಇವೆಲ್ಲದರ ಪರಿಣಾಮಗಳು– ಅದರಲ್ಲೂ ಮುಖ್ಯವಾಗಿ, ಶಾಸನಸಭೆಗಳನ್ನು ಪ್ರವೇಶಿಸುತ್ತಿರುವವರ ಗುಣಮಟ್ಟ ಪಾತಾಳಕ್ಕೆ ಕುಸಿದಿದ್ದು– ಎಲ್ಲರಿಗೂ ಕಾಣಿಸುವಂತೆ ಇವೆ. ಇದು ದುರ್ನಡತೆಗೆ ಸಿಕ್ಕ ಪರವಾನಗಿ ಎಂದೂ ಇತರ ಸಾರ್ವಜನಿಕ ಸೇವಕರು ಬದ್ಧರಾಗಿ ಇರಬೇಕಾದ ನೈತಿಕ ಚೌಕಟ್ಟಿನಿಂದ ತಾವು ಹೊರಗಿದ್ದೇವೆ ಎಂದೂ ಹಲವು ಶಾಸಕರು ಭಾವಿಸಿದ್ದರೆ ಆಶ್ಚರ್ಯವೇನೂ ಇಲ್ಲ.

ಕ್ರಿಮಿನಲ್ ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಹೊರಹಾಕುವಂತಹ ಕಾನೂನನ್ನು ತಾನು ಮಾಡುವುದಿಲ್ಲ ಎಂದು ಕೋರ್ಟ್‌ ಹೇಳಿದೆ. ಆದರೆ, ರಾಜಕೀಯದ ಅಪರಾಧೀಕರಣವನ್ನು ನಿಷ್ಕ್ರಿಯವಾಗಿ ನೋಡಿಕೊಂಡು ಬಂದಿರುವ ಸಂಸತ್ತು ಈಗ ಸುಪ್ರೀಂ ಕೋರ್ಟ್‌ನ ಸಲಹೆಗೆ ಓಗೊಡುತ್ತದೆ ಎಂದು ನಿರೀಕ್ಷಿಸುವುದರಿಂದ ಪ್ರಯೋಜನ ಇಲ್ಲ. ಪಕ್ಷಗಳು ಟಿಕೆಟ್ ನೀಡಲು ಇರುವ ಮಾನದಂಡ ‘ಗೆಲ್ಲುವ ಸಾಮರ್ಥ್ಯ’ ಆಗಿರುವಾಗ, ಕ್ರಿಮಿನಲ್ ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳು ಶಾಸನಸಭೆಗಳನ್ನು ಪ್ರವೇಶಿಸುತ್ತಿರುವುದು ಕಳೆದ ಕೆಲವು ವರ್ಷಗಳಿಂದ ಹೆಚ್ಚುತ್ತ ಇರುವಾಗ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿರುವ ಕಳಕಳಿಯನ್ನು ಸಂಸತ್ತು ಕೂಡ ವ್ಯಕ್ತಪಡಿಸುತ್ತದೆಯೇ? ಕ್ರಿಮಿನಲ್‌ ಅಪರಾಧ ಹಿನ್ನೆಲೆ ಇರುವವರನ್ನು ಹೊರಗಿರಿಸಲು ಕಾನೂನು ರೂಪಿಸುತ್ತದೆಯೇ? ಹೀಗೆ ‍ಪ್ರಶ್ನೆ ಮಾಡಿದ್ದು ತಪ್ಪು ಎಂದು ಭಾರತದ ಸರ್ವೋಚ್ಚ ಶಾಸನಸಭೆ ಸಾಬೀತು ಮಾಡಿ ತೋರಿಸಲಿ!

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !