ವಾಜಪೇಯಿ: ಭಾರತದ ಬಲಪಂಥೀಯ, ಉದಾರವಾದಿ

7

ವಾಜಪೇಯಿ: ಭಾರತದ ಬಲಪಂಥೀಯ, ಉದಾರವಾದಿ

ಎ. ಸೂರ್ಯ ಪ್ರಕಾಶ್
Published:
Updated:

ಅಟಲ್ ಬಿಹಾರಿ ವಾಜಪೇಯಿ ನಿಧನದ ನಂತರ ರಾಷ್ಟ್ರದಾದ್ಯಂತ, ರಾಜಕೀಯದ ಗಡಿಗಳನ್ನು ಮೀರಿ ವ್ಯಕ್ತವಾದ ಸಂತಾಪವು ವಾಜಪೇಯಿ ಅವರು ಸುದೀರ್ಘ ಅವಧಿಯ ರಾಜಕೀಯ ಜೀವನದಲ್ಲಿ ಸಂಪಾದಿಸಿದ ಜನರ ಪ್ರೀತಿ ಮತ್ತು ಅವರ ಅಜಾತಶತ್ರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ವಾಜಪೇಯಿ ಅವರಿಗೆ ಸ್ನೇಹಿತರಿದ್ದರು. ಆದರೆ, ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜಕೀಯ ಸ್ನೇಹಿತರು ಇರಲಿಲ್ಲ. ಹೀಗಿದ್ದರೂ, ನಂತರದ ದಿನಗಳಲ್ಲಿ ಸ್ನೇಹಿತರನ್ನು ಸಂಪಾದಿಸಿಕೊಂಡು, ಕಾಂಗ್ರೆಸ್ಸನ್ನು ಅಧಿಕಾರದ ಪೀಠದಿಂದ ಕೆಳಗಿಳಿಸಲು ಬಿಜೆಪಿಗೆ ಸಾಧ್ಯವಾಗಿದ್ದು ವಾಜಪೇಯಿ ಅವರ ಆಕರ್ಷಕ ವ್ಯಕ್ತಿತ್ವದ ಕಾರಣದಿಂದ. ಒಕ್ಕೂಟ ವ್ಯವಸ್ಥೆಯ ಆಡಳಿತವು ತುಸು ಎಡಪಂಥೀಯ ಒಲವಿನಿಂದ ತುಸು ಬಲಪಂಥೀಯ ಒಲವಿನ ಕಡೆಗೆ ಸುಗಮವಾಗಿ ಹೊರಳಿಕೊಳ್ಳುವಲ್ಲಿ ವಾಜಪೇಯಿ ಅವರ ಪಾತ್ರ ಅತ್ಯಂತ ಮಹತ್ವದ್ದು. 1996ರಲ್ಲಿ ನಡೆದ ಲೋಕಸಭಾ ಚುನಾವಣೆಯ ನಂತರ ವಾಜಪೇಯಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಮಾಧ್ಯಮಗಳು ಅವರನ್ನು ಭಾರತದ ಮೊದಲ ‘ಬಲಪಂಥೀಯ’ ಪ್ರಧಾನಿಯಾಗಿ ಕಂಡವು.

ವಾಜಪೇಯಿ ಅವರು ಲೋಕಸಭೆಯ ಅತ್ಯಂತ ದೊಡ್ಡ ಪಕ್ಷದ ನಾಯಕ ಆಗಿದ್ದರೂ, ಅವರಿಗೆ ಸದನದಲ್ಲಿ ಬಹುಮತ ಇರಲಿಲ್ಲ. ಅವರ ಆ ಸರ್ಕಾರದ ಆಯಸ್ಸು 13 ದಿನ ಮಾತ್ರ ಆಗಿತ್ತು. ಆದರೆ, ಇದು ಆರಂಭಿಕ ಹಂತ ಮಾತ್ರ - ಒಂದು ರೀತಿಯಲ್ಲಿ ಅಭ್ಯಾಸದ ಹಂತ - ಎಂಬುದು ವಾಜಪೇಯಿ ಅವರಿಗೆ ಗೊತ್ತಿತ್ತು. ಬಿಜೆಪಿಯು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಇತರ ರಾಜಕೀಯ ಪಕ್ಷಗಳು ಅದನ್ನು ‘ಅಸ್ಪೃಶ್ಯ’ ಎಂದು ಪರಿಗಣಿಸಿದ್ದವು. ಹಾಗಾಗಿ, ಸ್ಥಿರ ಸರ್ಕಾರ ಕೊಡುವ ಮೈತ್ರಿಕೂಟ ಕಟ್ಟಲು ಬಿಜೆಪಿಗೆ ಕಷ್ಟವಾಯಿತು. ಈ ಸೋಲಿನಿಂದ ಪಕ್ಷ ಪಾಠ ಕಲಿಯದೆ ಇರಲಿಲ್ಲ.

ಸಂಯುಕ್ತ ರಂಗದ ಸರ್ಕಾರ ಕುಸಿದುಬಿದ್ದು 1998ರ ಮಾರ್ಚ್‌ನಲ್ಲಿ ಲೋಕಸಭೆಗೆ ಚುನಾವಣೆ ಘೋಷಣೆಯಾದಾಗ, 1996ರ ಲೋಪಗಳನ್ನು ಸರಿಪಡಿಸಿಕೊಳ್ಳಲು ತೆರೆಯ ಹಿಂದೆ ಸಾಕಷ್ಟು ಕೆಲಸ ಮಾಡಲಾಯಿತು. ಬೇರೆ ಬೇರೆ ದಿಕ್ಕುಗಳಿಗೆ ತಮ್ಮ ದೂತರನ್ನು ರವಾನಿಸಿದ ವಾಜಪೇಯಿ, ಪಕ್ಷಕ್ಕೆ ಅಂಟಿಕೊಂಡಿದ್ದ ‘ಅಸ್ಪೃಶ್ಯತೆ’ಯ ಕಳಂಕ ತೊಳೆಯುವಲ್ಲಿ ಯಶಸ್ಸು ಕಂಡರು. ಭಿನ್ನ ಹಿನ್ನೆಲೆಗಳ ಅನೇಕ ರಾಜಕೀಯ ಪಕ್ಷಗಳ ಮುಖಂಡರು ವಾಜಪೇಯಿ ಅವರನ್ನು ಬೆಂಬಲಿಸಿದರು, ಅತಿರೇಕಗಳಿಲ್ಲದ ಒಬ್ಬ ನಾಯಕನನ್ನು ವಾಜಪೇಯಿ ಅವರಲ್ಲಿ ಕಂಡುಕೊಂಡರು. ‘ಬಲಪಂಥೀಯ’ ಪಕ್ಷದ ಜೊತೆ ಗುರುತಿಸಿಕೊಳ್ಳುವುದರ ಬಗ್ಗೆ ಮೈತ್ರಿಕೂಟದ ಪಾಲುದಾರ ಪಕ್ಷಗಳ ಮನಸ್ಸಿನಲ್ಲಿದ್ದ ಭಯವನ್ನು ವಾಜಪೇಯಿ ಅಲ್ಪಾವಧಿಯಲ್ಲೇ ಹೋಗಲಾಡಿಸಿದರು. ಭಾರತೀಯ ರಾಜಕೀಯದ ‘ಅಸ್ಪೃಶ್ಯ’ ಪಕ್ಷವನ್ನು ವಾಜಪೇಯಿ ‘ಎಲ್ಲರೂ ಜೊತೆಯಾಗಬಲ್ಲ’ ಪಕ್ಷವನ್ನಾಗಿಸಿದರು. ಶತ್ರುಗಳ ದಂಡನ್ನೇ ಕಟ್ಟಿಕೊಂಡಿದ್ದ ಬಿಜೆಪಿ 23 ಜೊತೆಗಾರರನ್ನು (ರಾಜಕೀಯ ಪಕ್ಷಗಳು) ಸಂಪಾದಿಸಿತು!

ವಾಜಪೇಯಿ ಅವರಿಗೆ ಪ್ರಾದೇಶಿಕ ಪಕ್ಷಗಳ ಬಗ್ಗೆ ನಿಜವಾದ ಗೌರವ ಇದ್ದ ಕಾರಣ ಇದು ಸಾಧ್ಯವಾಯಿತು. ವಾಜಪೇಯಿ ಅವರು ಕರುಣಾನಿಧಿ, ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್ ಮತ್ತು ಇತರ ಅನೇಕ ಪ್ರಾದೇಶಿಕ ನಾಯಕರ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡರು. ಜಾರ್ಖಂಡ್‌, ಛತ್ತೀಸಗಡ ಮತ್ತು ಉತ್ತರಾಖಂಡದ ಜನ ಪ್ರಾದೇಶಿಕ ಆಸೆ, ಆಕಾಂಕ್ಷೆಗಳನ್ನು ಹೊಂದಿರುವುದರಲ್ಲಿ ಹುರುಳಿದೆ ಎಂಬುದನ್ನು ಗುರುತಿಸಿದ ವಾಜಪೇಯಿ, ಹೊಸ ಹಾಗೂ ಸಣ್ಣ ರಾಜ್ಯಗಳ ಉದಯಕ್ಕೆ ಅನುವು ಮಾಡಿಕೊಟ್ಟರು. ಆದರೆ, ರಾಜ್ಯಗಳ ರಚನೆಯ ಹೆಸರಿನಲ್ಲಿ ರಕ್ತಪಾತಕ್ಕೆ, ಹಿಂಸಾಚಾರಕ್ಕೆ ಅವಕಾಶ ಕೊಡಲಿಲ್ಲ. ದೊಡ್ಡ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ವಿಭಜನೆ ಸುಲಲಿತವಾಗಿ ಸಾಧ್ಯವಾಗಿದ್ದು ವಾಜಪೇಯಿ ಅವರ ಮುತ್ಸದ್ದಿತನದ ಕಾರಣದಿಂದಾಗಿ. ಆಂಧ್ರಪ್ರದೇಶ ರಾಜ್ಯವನ್ನು ವಿಭಜಿಸಿ, ತೆಲಂಗಾಣ ರಾಜ್ಯ ರಚನೆ ಮಾಡುವ ಪ್ರಕ್ರಿಯೆಯನ್ನು ಕಾಂಗ್ರೆಸ್ ಮತ್ತು ಸಂಯುಕ್ತ ಪ್ರಗತಿಪರ ಮೈತ್ರಿಕೂಟ ನಿಭಾಯಿಸಿದ ರೀತಿಗೂ, ಅಲ್ಲಿ ನಂತರ ನಡೆದ ಹಿಂಸಾಚಾರಕ್ಕೂ ವಾಜಪೇಯಿ ಅವಧಿಯಲ್ಲಿ ನಡೆದ ರಾಜ್ಯಗಳ ರಚನೆಗೂ ಬಹಳ ವ್ಯತ್ಯಾಸ ಇದೆ.

ವಾಜಪೇಯಿ ಅವರು ಜವಾಹರಲಾಲ್ ನೆಹರೂ ಅವರ ಬಹುದೊಡ್ಡ ಅಭಿಮಾನಿ ಆಗಿದ್ದರು. ವಾಜಪೇಯಿ ಅವರು ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದಾಗಲೇ ನೆಹರೂ ಅವರು, ವಾಜಪೇಯಿ ಅವರ ಸಾಮರ್ಥ್ಯವನ್ನು ಗುರುತಿಸಿದ್ದರು, ವಾಜಪೇಯಿ ಅವರನ್ನು ವಿದೇಶಿ ಅತಿಥಿಯೊಬ್ಬರಿಗೆ ‘ಭಾರತದ ಮುಂದಿನ ನಾಯಕ’ ಎಂದು ಪರಿಚಯಿಸಿದ್ದರು ಎಂಬ ಮಾತುಗಳು ಇವೆ. ನೆಹರೂ ಪ್ರಭಾವ ವಾಜಪೇಯಿ ವ್ಯಕ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿತು. ವಾಜಪೇಯಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದಿದ್ದವರಾದರೂ, ರಾಜಕೀಯದ ಇನ್ನೊಂದು ತುದಿಯಲ್ಲಿದ್ದ ಪಕ್ಷಗಳಿಗೂ ಅವರು ಒಪ್ಪಿತರಾಗುವ ವ್ಯಕ್ತಿತ್ವ ಬೆಳೆಸಿಕೊಂಡರು. ಹಾಗಾಗಿ, ವಾಜಪೇಯಿ ಅವರನ್ನು ಹಲವರು ‘ಬಲಪಂಥೀಯ ನೆಹರೂ’ ಎಂಬಂತೆ ಕಂಡರು. ವಾಜಪೇಯಿ ಅವರು ‘ಕದಂ ಮಿಲಾಕರ್ ಚಲ್ನಾ ಹೋಗಾ’ (ಜೊತೆಯಾಗಿ ಹೆಜ್ಜೆ ಹಾಕಬೇಕು) ಎನ್ನುವ ಕವಿತೆಯನ್ನು ಬರೆದಾಗ, ಅದರಲ್ಲಿನ ಸಾಲುಗಳು ಸುಮ್ಮನೆ ಕುಳಿತಿದ್ದ ಕವಿಯೊಬ್ಬನ ಹಗಲುಗನಸು ಆಗಿರಲಿಲ್ಲ; ನೈಜ ಪ್ರಜಾತಂತ್ರವಾದಿಯ ಆಂತರ್ಯದ ಉದಾರವಾದಿ ಧ್ವನಿಯನ್ನು ಆ ಸಾಲುಗಳು ಬಿಂಬಿಸಿದವು.

ರಾಜಕೀಯದಲ್ಲಿ ಉದಾರವಾದಿ ಧೋರಣೆಯನ್ನು ಉಳಿಸಿಕೊಂಡ ವಾಜಪೇಯಿ, ರಾಷ್ಟ್ರದ ಹಿತಾಸಕ್ತಿಗಳ ವಿಚಾರ ಬಂದಾಗ ಮಾತ್ರ ಒಂಚೂರೂ ರಾಜಿಯಾಗುತ್ತಿರಲಿಲ್ಲ. ಈ ನಿಲುವಿನ ಕಾರಣಕ್ಕಾಗಿಯೇ ಅವರು ಭಾರತವನ್ನು ಅಣ್ವಸ್ತ್ರಶಕ್ತ ರಾಷ್ಟ್ರವನ್ನಾಗಿಸಲು ಅಷ್ಟೊಂದು ಆಸ್ಥೆ ತೋರಿದ್ದು. ಈ ಬಗ್ಗೆ ಅವರು ತಮ್ಮ 13 ದಿನಗಳ ಸರ್ಕಾರದ ಅವಧಿಯಲ್ಲಿ ಕೂಡ ಅಣು ವಿಜ್ಞಾನಿಗಳ ಜೊತೆ ಮಾತುಕತೆ ನಡೆಸಿದ್ದರು ಎನ್ನುವ ಮಾತುಗಳು ಇವೆ. 1991ರಿಂದ 1996ರ ನಡುವಣ ಅವಧಿಯಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಇರಾದೆ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಲ್ಲೂ ಇತ್ತು. ಆದರೆ, ಈ ವಿಚಾರ ಅಮೆರಿಕದವರಿಗೆ ಹೇಗೋ ಗೊತ್ತಾಗಿತ್ತು.

ಅಮೆರಿಕದವರ ಕೋಪಕ್ಕೆ ತುತ್ತಾಗಲು ರಾವ್ ಸಿದ್ಧರಿರಲಿಲ್ಲ. ರಾವ್ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ದೇಶದ ಅರ್ಥ ವ್ಯವಸ್ಥೆ ಸುಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ, ಭಾರತದ ಅರ್ಥ ವ್ಯವಸ್ಥೆಯನ್ನು ಉದಾರೀಕರಣ ಪ್ರಕ್ರಿಯೆಗೆ ತೆರೆದುಕೊಳ್ಳುವ ಸಂದರ್ಭದಲ್ಲಿ ರಾವ್ ಅವರಿಗೆ ಅಮೆರಿಕನ್ನರ ನೆರವು ಬೇಕಿತ್ತು. ವಾಜಪೇಯಿ ಅವರನ್ನು ತಾವು ಗುರುವಿಗೆ ಸಮಾನವಾಗಿ ಕಾಣುವುದಾಗಿ ರಾವ್ ಹೇಳಿದ್ದರು. ಅಲ್ಲದೆ, ಭಾರತದ ಅಣು ವಿಜ್ಞಾನಿಗಳು ಎಷ್ಟರಮಟ್ಟಿಗೆ ಸಿದ್ಧತೆ ನಡೆಸಿದ್ದಾರೆ ಎಂಬ ಬಗ್ಗೆ ರಾವ್ ಅವರು ವಾಜಪೇಯಿ ಅವರಿಗೆ ವಿವರಿಸಿದ್ದರು. ಹಾಗಾಗಿ, ಬೇರೆ ಬೇರೆ ಹಿನ್ನೆಲೆಗಳ ಪಕ್ಷಗಳನ್ನು ಕಟ್ಟಿಕೊಂಡು ಅಧಿಕಾರಕ್ಕೆ ಮರಳಿದ ವಾಜಪೇಯಿ, 1998ರ ಮೇ ತಿಂಗಳಲ್ಲಿ ಅಣ್ವಸ್ತ್ರ ಪರೀಕ್ಷೆಗೆ ಮುಂದಾಗಿದ್ದರಲ್ಲಿ ಅಶ್ಚರ್ಯದ ಸಂಗತಿ ಏನೇನೂ ಇಲ್ಲ.

ಅಣ್ವಸ್ತ್ರ ಪರೀಕ್ಷೆಗಳು ಭಾರತವನ್ನು ಪ್ರಮುಖ ಅಣ್ವಸ್ತ್ರ ಸಜ್ಜಿತ ರಾಷ್ಟ್ರ ಎನ್ನುವ ಸ್ಥಾನಕ್ಕೆ ಒಯ್ದವು. ಆದರೆ, ಅಮೆರಿಕದವರಿಗೆ ಇದು ರುಚಿಸಲಿಲ್ಲ. ಅವರು ಭಾರತದ ಮೇಲೆ ದಿಗ್ಬಂಧನ ವಿಧಿಸಿದರು. ಭಾರತವು ಅಣ್ವಸ್ತ್ರ ಸ್ಪರ್ಧೆಗೆ ತುಪ್ಪ ಸುರಿಯುತ್ತಿದೆ ಎಂದು ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಕೋಪದಿಂದ ಬೊಟ್ಟು ಮಾಡುತ್ತಿದ್ದರು. ಆದರೆ, ವಾಜಪೇಯಿ ತಮ್ಮ ನಿಲುವಿಗೆ ಬದ್ಧರಾಗಿ ಉಳಿದರು. ಭಾರತ ಎನ್ನುವುದು ಬಹಳ ದೊಡ್ಡ ಮಾರುಕಟ್ಟೆ ಎಂಬುದನ್ನು ಅಮೆರಿಕದವರು ಬಹುಬೇಗ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ವಾಜಪೇಯಿ ಅವರಿಗೆ ಗೊತ್ತಿತ್ತು. ಅಮೆರಿಕದವರ ಜೊತೆ ಮಾತುಕತೆ ನಡೆಸಲು ವಾಜಪೇಯಿ ಅವರು ಸಚಿವ ಜಸ್ವಂತ್ ಸಿಂಗ್ ಅವರನ್ನು ಕಳುಹಿಸಿದರು. ನಂತರದ ದಿನಗಳಲ್ಲಿ ಭಾರತ – ಅಮೆರಿಕ ಸಂಬಂಧ ಸುಧಾರಿಸುವಲ್ಲಿ ಯಶಸ್ಸು ಕಂಡರು.

ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ಬಹುತೇಕ ವಾಜಪೇಯಿ ಅವರ ಹಾದಿಯಲ್ಲೇ ನಡೆದಿದ್ದಾರೆ. ತುಸು ಎಡಪಂಥದ ಕಡೆ ವಾಲಿಕೊಂಡಿರುವ ಆಡಳಿತ ವ್ಯವಸ್ಥೆ ನೀಡುತ್ತಿದ್ದ ಅಸ್ಪಷ್ಟ ಪ್ರತಿಕ್ರಿಯೆಗಳಿಗೆ ಬದಲಾಗಿ ಮೋದಿ ಅವರು, ಬಲಿಷ್ಠ ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ನೀತಿಯ ಪರಿಣಾಮವಾಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಕ್ಕೆ ಸೂಕ್ತವಾದ ಸ್ಥಾನ ಸಿಗುತ್ತಿದೆ.

ತನಗೆ ಸಿಕ್ಕಿದ ಜವಾಬ್ದಾರಿಯನ್ನು ಸೂಕ್ಷ್ಮವಾಗಿ, ದೃಢವಾಗಿ ನಿಭಾಯಿಸಿದ ನಾಯಕ ವಾಜಪೇಯಿ. ಹೀಗಾಗಿಯೇ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಲು ಭಾರತಕ್ಕೆ ಸಾಧ್ಯವಾಯಿತು. ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಯನ್ನು ವಾಜಪೇಯಿ ದೊಡ್ಡ ಮಟ್ಟದಲ್ಲಿ ಹೆಚ್ಚಿಸಿದರು. ಟೆಲಿಕಾಂ ಮತ್ತು ಸಾರಿಗೆ ವಲಯಗಳನ್ನು ಮುಕ್ತವಾಗಿಸಿದರು. ಸುವರ್ಣ ಚತುಷ್ಪಥ ಯೋಜನೆಯ ಮೂಲಕ ಹೆದ್ದಾರಿಗಳ ಅಭಿವೃದ್ಧಿಗೆ ನಾಂದಿ ಹಾಡಿದರು. ದೇಶದ ಗಮನ ಈಶಾನ್ಯ ರಾಜ್ಯಗಳ ಮೇಲೆ ತಿರುಗುವಂತೆಯೂ ಮಾಡಿದರು.

ನೆಹರೂ ಮತ್ತು ಇಂದಿರಾ ಗಾಂಧಿ ಅನುಸರಿಸಿದ್ದ ‘ಎಡಪಂಥೀಯ ಒಲವಿನ ವ್ಯವಸ್ಥೆ’ ಯಿಂದ ಭಾರತವನ್ನು ‘ಬಲಪಂಥೀಯ ಒಲವಿನ ವ್ಯವಸ್ಥೆ’ಯ ಕಡೆಗೆ ಕೊಂಡೊಯ್ಯಲು ಸೂಕ್ತವಾಗಿದ್ದ ಸೇತುವೆ ವಾಜಪೇಯಿ ಅವರ ಮುತ್ಸದ್ದಿತನ ಎಂದು ಹೇಳಬಹುದು. ಅವರ ಮುತ್ಸದ್ದಿತನದ ಕಾರಣದಿಂದಾಗಿ, ಪರಿವರ್ತನೆಯು ಕಠಿಣ ಎನಿಸಲಿಲ್ಲ. ಹಾಗಾಗಿಯೇ ವಾಜಪೇಯಿ ಅವರು ರಾಜಕೀಯದ ಎಲ್ಲೆಗಳನ್ನು ಮೀರಿ ದೇಶದ ಎಲ್ಲ ಪಕ್ಷಗಳಿಂದ ಅಭಿಮಾನಕ್ಕೆ, ಪ್ರೀತಿಗೆ ಪಾತ್ರರಾದರು.

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !