ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ಗೃಹಸ್ಥ ಯಾರು?

Last Updated 6 ಏಪ್ರಿಲ್ 2021, 1:43 IST
ಅಕ್ಷರ ಗಾತ್ರ

ದೂರಾದತಿಥಯೋ ಯಸ್ಯ ಗೃಹಮಾಯಾಂತಿ ನಿರ್ವೃತಾಃ ।

ಗೃಹಸ್ಥಃ ಸ ತು ವಿಜ್ಞೇಯಃ ಶೇಷಾಸ್ತು ಗೃಹರಕ್ಷಿಣಃ ।।

ಇದರ ತಾತ್ಪರ್ಯ ಹೀಗೆ:

‘ಯಾರ ಮನೆಗೆ ದೂರದಿಂದ ಅತಿಥಿಗಳು ಸಂತೋಷದಿಂದ ಬರುತ್ತಾರೆಯೋ ಅವನನ್ನು ಗೃಹಸ್ಥ ಎಂದು ತಿಳಿಯಬೇಕು. ಉಳಿದವರೆಲ್ಲರೂ ಮನೆಯ ಕಾವಲಿನವರು ಅಷ್ಟೆ!’

ಮನೆಯ ಲಕ್ಷಣವನ್ನು ನಿರೂಪಿಸುತ್ತಿದೆ ಸುಭಾಷಿತ.

ಮನೆ ಇರುವವರೆಲ್ಲರೂ ಗೃಹಸ್ಥರೂ ಅಲ್ಲ, ಮದುವೆಯಾದವರೆಲ್ಲರೂ ದಂಪತಿಗಳೂ ಅಲ್ಲ, ಮಕ್ಕಳನ್ನು ಹೆತ್ತವರೆಲ್ಲರೂ ತಂದೆ–ತಾಯಿಗಳೂ ಅಲ್ಲ. ಹಾಗಾದರೆ ನಿಜವಾದ ಗೃಹಸ್ಥರು ಯಾರು? ಸುಭಾಷಿತ ಹೇಳುತ್ತಿದೆ, ಯಾರ ಮನೆಗೆ ದೂರದಿಂದ ಅತಿಥಿಗಳು ಸಂತೋಷದಿಂದ ಬರುತ್ತಾರೋ ಅವನೇ ನಿಜವಾದ ಗೃಹಸ್ಥ.

ನಮ್ಮ ಸಂಸ್ಕೃತಿಯಲ್ಲಿ ಗೃಹಸ್ಥನನ್ನು ತುಂಬ ಆದರದಿಂದ ಕಾಣಲಾಗಿದೆ. ಸಮಾಜದ ಎಲ್ಲ ವರ್ಗಗಳನ್ನೂ ಪೋಷಿಸುವವನು, ಕಾಪಾಡುವವನು ಅವನು. ಹೀಗಾಗಿ ಅವನಿಗೆ ಅಷ್ಟೊಂದು ಗೌರವ. ಸಮಾಜದ ಆರೋಗ್ಯ ನಿಂತಿರುವುದೇ ಗೃಹಸ್ಥಾಶ್ರಮದ ಮೇಲೆ. ಸಮಾಜದಲ್ಲಿ ಯಾರಿಗಾದರೂ ಆಶ್ರಯ ಬೇಕು ಎಂದಾದಲ್ಲಿ ಅದನ್ನು ಒದಗಿಸುವುದು ಗೃಹಸ್ಥನ ಆದ್ಯ ಕರ್ತವ್ಯಗಳಲ್ಲಿ ಒಂದು. ಈ ಕಾರಣದಿಂದಲೇ ಅತಿಥಿಸತ್ಕಾರವೂ ಗೃಹಸ್ಥಾಶ್ರಮದ ಮುಖ್ಯವಾದ ಕರ್ತವ್ಯಗಳಲ್ಲಿ ಒಂದು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು, ದೂರದಿಂದ ಅತಿಥಿಗಳು ಯಾರ ಮನೆಗೆ ಬರುತ್ತಾರೋ ಅದೇ ನಿಜವಾದ ಮನೆ; ಹೀಗೆ ಬಂದ ಅತಿಥಿಗಳನ್ನು ಚೆನ್ನಾಗಿ ಯಾರು ಸತ್ಕಾರಿಸುತ್ತಾರೋ ಅವರೇ ನಿಜವಾದ ಗೃಹಸ್ಥರು ಎಂದು. ಅತಿಥಿಗಳು ಸುಮ್ಮನೆ ಬರುವುದಲ್ಲ, ಸಂತೋಷವಾಗಿ ಬರಬೇಕು. ಇದು ಮುಖ್ಯ. ಒಮ್ಮೆ ಬಂದವರು ಇನ್ನೊಮ್ಮೆ ಸಂತೋಷವಾಗಿ ನಮ್ಮಲ್ಲಿಗೆ ಬರಬೇಕು ಎಂದರೆ ನಾವು ಅವರನ್ನು ಈ ಮೊದಲು ಚೆನ್ನಾಗಿ ಸತ್ಕರಿಸಿರಬೇಕು ಎಂದೇ ಅರ್ಥ ಅಲ್ಲವೆ?

ಗೃಹಸ್ಥಾಶ್ರಮವೇ ಧನ್ಯವಾದುದು – ಎಂದು ಕೊಂಡಾಡಿರುವ ಸಂಸ್ಕೃತಿ ನಮ್ಮದು. ಆದರೆ ಇಂದು ನಮ್ಮ ಜೀವನಶೈಲಿ ಈ ಆದರ್ಶವನ್ನು ಎತ್ತಿಹಿಡಿಯುವಂತೆ ಇದೆಯೇ? ಮನೆಗೆ ಬಂದವರನ್ನು ಆದರಿಸುವುದಿರಲಿ, ಒಂದೇ ಕುಟುಂಬಕ್ಕೆ ಸೇರಿದವರಾದರೂ ಒಗ್ಗಟ್ಟಾಗಿದ್ದಾರೆಯೆ? ಸಂತೋಷವಾಗಿದ್ದಾರೆಯೆ? ನಾವು ಆತ್ಮವಾಲೋಕನ ಮಾಡಿಕೊಳ್ಳಬೇಕು.

ಪ್ರತ್ಯೇಕವಾಗಿರುವುದು, ಒಂಟಿಯಾಗಿರುವುದು ಇದೇ ಸ್ವಾತಂತ್ರ್ಯ, ಸಂತೋಷ ಎಂಬ ಭ್ರಮೆಯಲ್ಲಿ ನಾವು ಇಂದು ಜೀವನದ ಸೌಂದರ್ಯವನ್ನೇ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಸುಖವನ್ನಾಗಲೀ ದುಃಖವನ್ನಾಗಲೀ ನಾಲ್ಕು ಜನರೊಂದಿಗೆ ಹಂಚಿಕೊಳ್ಳುವುದರಲ್ಲಿಯೇ ನಮ್ಮ ಮನುಷ್ಯತ್ವದ ಸೌರಭ ಅಡಗಿದೆ. ಜನರೊಂದಿಗೆ ಬೆರೆಯಬೇಕು; ಜನರಿಗಾಗಿ ಬದುಕಬೇಕು. ಅದೇ ಜೀವನ. ಇದಕ್ಕೆ ಅವಕಾಶವನ್ನು ನೀಡುವುದೇ ಮನೆ. ಇದನ್ನು ನಿಭಾಯಿಸಬಲ್ಲವನೇ ಗೃಹಸ್ಥ. ಹೀಗಲ್ಲದೆ ಅತಿಥಿ–ಅಭ್ಯಾಗತರ ಸದ್ದನ್ನೇ ಕೇಳದ ಮನೆಯ ಯಜಮಾನ ಯಾರಾದರೂ ಇದ್ದರೆ ಅವನು ಆ ಮನೆಯ ಯಜಮಾನ ಇಲ್ಲ, ಅವನು ಕೇವಲ ಆ ಮನೆಯ ಕಾವಲುಗಾರ, ವಾಚ್‌ಮನ್‌ ಅಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT