ಬುಧವಾರ, ಡಿಸೆಂಬರ್ 8, 2021
21 °C

Repeated ವಿದ್ವಾಂಸರ ವಿವೇಕ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ನಾಪ್ರಾಪ್ಯಮಭಿವಾಂಛಂತಿ ನಷ್ಟಂ ನೇಚ್ಛಂತಿ ಶೋಚಿತುಮ್‌ ।

ಆಪತ್ಸು ಚ ನ ಮುಹ್ಯಂತಿ ನರಾಃ ಪಂಡಿತಬುದ್ಧಯಃ ।।

ಇದರ ತಾತ್ಪರ್ಯ ಹೀಗೆ:

‘ವಿವೇಕಿಗಳಾದ ವಿದ್ವಾಂಸರು ಅಲಭ್ಯವಾದುದನ್ನು ಬಯಸುವುದಿಲ್ಲ. ನಷ್ಟವಾದುದಕ್ಕೆ ವ್ಯಥೆಯನ್ನೂ ಪಡುವುದಿಲ್ಲ. ಆಪತ್ಕಾಲದಲ್ಲಿ ಮೋಹಕ್ಕೆ ವಶರಾಗುವುದೂ ಇಲ್ಲ.’

ಜೀವನದಲ್ಲಿ ನಾವು ಯಾವುದನ್ನು ಬಯಸಬೇಕು, ಯಾವುದನ್ನು ಬಯಸಬಾರದು; ಯಾವುದಕ್ಕೆ ವ್ಯಥೆಯನ್ನು ಪಡಬೇಕು, ಯಾವುದಕ್ಕೆ ಪಡಬಾರದು; ಯಾವುದಕ್ಕೆ ವಶರಾಗಬೇಕು, ಯಾವುದಕ್ಕೆ ವಶರಾಗಬಾರದು – ಎಂಬ ಅರಿವು ಇರಬೇಕು. ಇದನ್ನೇ ಸುಭಾಷಿತ ಹೇಳುತ್ತಿರುವುದು. ಇಂಥ ಅರಿವನ್ನು ಪಡೆದವರೇ ವಿವೇಕಿಗಳು, ಜ್ಞಾನಿಗಳು ಎಂದೂ ಅದು ಹೇಳುತ್ತಿದೆ.

ಯಾವುದನ್ನು ಪಡೆಯಲು ಆದೀತೋ ಅದನ್ನು ಪಡೆಯಲು ನಾವು ಬಯಸಬೇಕು; ಅದು ದಕ್ಕುವುದಕ್ಕೆ ಏನೆಲ್ಲ ಶ್ರಮವನ್ನು ಪಡಬೇಕೋ ಅದನ್ನು ಪಡಬೇಕು. ಹೀಗಲ್ಲದೆ ಯಾವುದನ್ನು ಪಡೆಯುವುದಕ್ಕೆ ಸಾಧ್ಯವೇ ಇಲ್ಲವೋ ಅಂಥದನ್ನು ಬಯಸಬಾರದು. ಹಿಮಾಲಯವನ್ನು ಕೊಂಡುಕೊಳ್ಳಲು ಯಾವಾಗಲೂ ಸಾಧ್ಯವಿಲ್ಲ; ಆದರೆ ಐಸ್‌ ಕ್ರೀಮನ್ನು ಕೊಳ್ಳಬಹುದು. ಇಂಥ ವಾಸ್ತವದ ಅರಿವು ಜೀವನದಲ್ಲಿ ಮುಖ್ಯ. ವಿವೇಕಿಗಳಾದ ವಿದ್ವಾಂಸರಿಗೆ ಈ ತಿಳಿವಳಿಕೆ ಇರುತ್ತದೆ.

ನಮಗೆ ಬೇಕಿರುವುದು ನಮ್ಮಿಂದ ನಷ್ಟವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಮ್ಮ ಕೈ ಮೀರಿ ನಷ್ಟವಾದರೆ ಮಾತ್ರ, ಆಗ ನಾವು ಅದಕ್ಕಾಗಿ ವ್ಯಥೆ ಪಡಬಾರದು. ಹೀಗೆಯೇ ಆಪತ್ಕಾಲ, ಎಂದರೆ ಅಪಾಯದ ಕಾಲದಲ್ಲಿ, ನಾವು ಮೋಹಗೊಳ್ಳಬಾರದು. ಎಂದರೆ ಬುದ್ಧಿಯನ್ನು, ವಿವೇಕವನ್ನು ಕಳೆದುಕೊಳ್ಳಬಾರದು. ನಮಗೆ ಎದುರಾಗಿರುವ ಅಪಾಯದಿಂದ ಪಾರಾಗಲು ಆಗ ವಿವೇಕದಿಂದ ಕ್ರಿಯಾಶೀಲರಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.