‘ಸ್ಪರ್ಧಾ ಜಗತ್ತಿಗೆ ತೆರೆದುಕೊಂಡಿರುವೆ’

ಮಂಗಳವಾರ, ಮಾರ್ಚ್ 26, 2019
22 °C
ಕೌನ್‌ಬನೇಗಾ ವಿದ್ಯಾಪತಿ ಪ್ರೇಮಾ ಪಾಟೀಲ ಮನದಾಳ

‘ಸ್ಪರ್ಧಾ ಜಗತ್ತಿಗೆ ತೆರೆದುಕೊಂಡಿರುವೆ’

Published:
Updated:
Prajavani

ನಿಡಗುಂದಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಲು, ಬಸವನಬಾಗೇವಾಡಿ ತಾಲ್ಲೂಕಿನಾದ್ಯಂತ ಸದ್ದು ಮಾಡುತ್ತಿರುವುದು ಕೌನ್‌ಬನೇಗಾ ವಿದ್ಯಾಪತಿ (ಕೆಬಿವಿಪಿ). ಬಿಇಓ ಎಂ.ಎ.ಗುಳೇದಗುಡ್ಡ ಕಲ್ಪನೆಯ ಸ್ಪರ್ಧೆಯಾಗಿರುವ ಕೆಬಿವಿಪಿಯ ಹಾಟ್‌ ಸೀಟ್‌ಗೆ ಆಯ್ಕೆಯಾಗಬೇಕೆಂಬುದು ಪ್ರತಿ ವಿದ್ಯಾರ್ಥಿಯ ಕನಸು.

ಖಾಸಗಿ ಟಿವಿ ವಾಹಿನಿಗಳ ರಿಯಾಲಿಟಿ ಶೋಗಿಂತಲೂ ಕಡಿಮೆಯಿಲ್ಲದಂತೆ ನಡೆಯುವ ಕೆಬಿವಿಪಿ ಸ್ಪರ್ಧೆಯಲ್ಲಿ ಈ ಬಾರಿ ವಿಜೇತಳಾದ ಅಪ್ಪಟ ಕನ್ನಡ, ಗ್ರಾಮೀಣ ಭಾಗದ ವಿದ್ಯಾರ್ಥಿನಿ ಪ್ರೇಮಾ ಗುರುನಗೌಡ ಪಾಟೀಲ ಸ್ಪರ್ಧೆ ಕುರಿತಂತೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

ತಮ್ಮ ಎಸ್ಸೆಸ್ಸೆಲ್ಸಿ ಸಿದ್ಧತೆಯ ಬಗ್ಗೆ ಹೇಳಿಕೊಳ್ಳುವ ಜತೆ, ಸಹಪಾಠಿಗಳಿಗೆ ಸಲಹೆಯನ್ನು ನೀಡಿದ್ದಾರೆ.

* ಸಿದ್ಧತೆ ಹೇಗಿತ್ತು ?

ಕೆಬಿವಿಪಿಯ ಹಾಟ್‌್ ಸೀಟ್‌ನಲ್ಲಿ ಕೂರಬೇಕೆಂಬ ಕನಸಿತ್ತು. 8ನೇ ತರಗತಿಯಲ್ಲಿದ್ದಾಗಲೇ ಆಸಕ್ತಿ ಮೊಳಕೆಯೊಡೆದಿತ್ತು. ಹಾದಿ ಸುಗಮವಾಗಿರಲಿಲ್ಲ. ಇದಕ್ಕಾಗಿಯೇ ವಿಶೇಷ ತಯಾರಿ ನಡೆಸಿದೆ. ಶಾಲಾ ಮಟ್ಟದ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದೆ. ನಾನೇಕೆ ದ್ವಿತೀಯ ಸ್ಥಾನ ಪಡೆದೆ ? ಎಂಬುದೇ ಚಿಂತೆಯಾಗಿ, ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದೆ. ದ್ವಿತೀಯ ಹಂತದ ಪರೀಕ್ಷೆಗೆ ಸಿದ್ಧಗೊಂಡೆ. 75 ವಿದ್ಯಾರ್ಥಿಗಳಲ್ಲಿ ನಾನು ಆಯ್ಕೆಯಾದೆ. ನಂತರ ಮೂರನೇ ಹಂತದ ಪರೀಕ್ಷೆಯಲ್ಲಿ ಅಂತಿಮ ಹಾಟ್‌ಸೀಟ್‌ಗೆ ಆಯ್ಕೆಯಾದ 10ರಲ್ಲಿ ಸ್ಥಾನ ಪಡೆದೆ.

ಆಗ ನನ್ನ ಓದುವ ರೀತಿ ಬದಲಾಯಿತು. ಶಾಲಾ ಅವಧಿ ಹೊರತುಪಡಿಸಿ ನಿತ್ಯ 8ರಿಂದ 10 ಗಂಟೆ ಸತತ ಅಧ್ಯಯನ ನಡೆಸಿದೆ. ಪ್ರತಿ ವಿಷಯದ, ಪ್ರತಿ ಪಾಠದ, ಪ್ರತಿ ವಾಕ್ಯವನ್ನು ಗಮನವಿಟ್ಟು ಓದಿದೆ. ಓದಿದನ್ನು ಬರೆದೆ. ಎಲ್ಲ ವಿಷಯಕ್ಕೂ ಸಮಾನ ಆದ್ಯತೆ ನೀಡಿದೆ. ಅದೇ ಯಶಸ್ವಿಗೆ ರಹದಾರಿಯಾಯಿತು.

* ಶಿಕ್ಷಕರ ಸಹಕಾರ ?

ಕೆಬಿವಿಪಿಗೆ ಆಯ್ಕೆಯಾದಾಗಿನಿಂದ ನಿತ್ಯವೂ ಶಾಲೆಯ ಎಲ್ಲ ಶಿಕ್ಷಕರ ಜತೆ, ಅಕ್ಕಪಕ್ಕದ ಶಾಲೆಯ ಶಿಕ್ಷಕರು ಅಗತ್ಯ ಮಾಹಿತಿ, ತಮ್ಮಲ್ಲಿರುವ ನೋಟ್ಸ್ ನೀಡಿ, ಅಧ್ಯಯನಕ್ಕೆ ಸಹಕರಿಸಿದರು. ನಿತ್ಯವೂ ವಿಷಯವಾರು ಪರಿಶೀಲನೆ ನಡೆಸುತ್ತಿದ್ದರು. ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ದೈಹಿಕ ಶಿಕ್ಷಣ ಶಿಕ್ಷಕರು ಹೇಳಿಕೊಟ್ಟ ಪ್ರಾಣಾಯಾಮ ನೆರವಾಯಿತು.

* ಎಸ್ಸೆಸ್ಸೆಲ್ಸಿ ತಯಾರಿ ಹೇಗಿದೆ ?

ಕೆಬಿವಿಪಿಯಲ್ಲಿ ಮೊದಲಿಗಳಾದ ಬಳಿಕ ಜವಾಬ್ದಾರಿ ಹೆಚ್ಚಿದೆ. ಉತ್ತಮ ಅಂಕ ಪಡೆಯುವ ಆಶಯ ಹೊಂದಿರುವೆ. ಕಠಿಣ ಎನಿಸುವ ಗಣಿತ, ಸಮಾಜವಿಜ್ಞಾನ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ.

* ಸಹಪಾಠಿಗಳಿಗೆ ನಿಮ್ಮ ಸಲಹೆ ?

ಸುಮ್ಮನೆ ಓದಬೇಡಿ. ಇದರಿಂದ ಓದಿದ್ದು ನೆನಪಲ್ಲಿ ಉಳಿಯಲ್ಲ. ಓದಿದ ಪಾಠದ ಮುಖ್ಯಾಂಶಗಳನ್ನು ಪುಸ್ತಕ ನೋಡದೆ ಬರೆಯುವುದನ್ನು ರೂಢಿ ಮಾಡಿ. ನಿತ್ಯವೂ ಒಂದೊಂದು ವಿಷಯದ ಪ್ರಶ್ನೆ ಪತ್ರಿಕೆ ಬಿಡಿಸಿ, ಮೊಬೈಲ್ ಹಾಗೂ ಟಿವಿಯಿಂದ ದೂರವಿರಿ.

* ಕೆಬಿವಿಪಿಯಿಂದ ಸಿಕ್ಕ ಲಾಭವೇನು ?

ಆತ್ಮವಿಶ್ವಾಸದ ಹೆಚ್ಚಳ. ಸ್ಪರ್ಧಾ ಜಗತ್ತಿಗೆ ತೆರೆದುಕೊಂಡೆ. ಆಳ ಅಧ್ಯಯನದ ಸಾಮರ್ಥ್ಯ ಸಿಕ್ಕಿದೆ. ಪ್ರತಿ ವಿಷಯದ ಪರಿಣಿತಿ ಹೆಚ್ಚಿದೆ. ಎಸ್ಸೆಸ್ಸೆಲ್ಸಿಯ ಓದು ಸ್ಥಿರಗೊಂಡಿದೆ. ಹೊರಗಿನ ಪ್ರಪಂಚದ ಅರಿವು ಸಿಕ್ಕಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !