ಬದುಕನ್ನು ಆಳುವ ಬಗೆ

ಸೋಮವಾರ, ಜೂನ್ 24, 2019
26 °C

ಬದುಕನ್ನು ಆಳುವ ಬಗೆ

ಗುರುರಾಜ ಕರಜಗಿ
Published:
Updated:

ಮೂಲವಸ್ತುವದೊಂದು ಲೀಲೆಗೋಸುಗ ನೂರು |
ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ||
ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯವ ತಾಳಿ |
ಆಳುತಿರು ಜೀವನವ – ಮಂಕುತಿಮ್ಮ || 142 ||

ಪದ-ಅರ್ಥ: ಮೂಲವಸ್ತುವದೊಂದು=ಮೂಲವಸ್ತುವು+ಅದು+ಒಂದು, ಕಾಲದೃಷ್ಟಿಗೆ(ದೇಶ, ಕಾಲಗಳ ದೃಷ್ಟಿ), ಬಹುಳ=ಅನೇಕ, ಕೇವಲದೊಳೇಕ=ಕೇವಲದಲ್ಲಿ(ಶುದ್ಧವಾದ ನೈಜಸ್ಥಿತಿಯಲ್ಲಿ)+ಏಕ, ಸ್ಥೂಲವಿವಿಧದಿ=ಸ್ಥೂಲ(ಕಣ್ಣಿಗೆ ಕಾಣುವ)+ವಿವಿಧದಿ, ಸೂಕ್ಷ್ಮಸಾಮ್ಯವ=ಸೂಕ್ಷ್ಮ(ಕಣ್ಣಿಗೆ ಕಾಣದ)+ಸಾಮ್ಯವ(ಏಕತೆಯನ್ನು)

ವಾಚ್ಯಾರ್ಥ: ಮೂಲವಸ್ತು ಒಂದೇ ಆದರೂ ಲೀಲೆಗಾಗಿ ನೂರು ಆಕಾರಗಳನ್ನು ಪಡೆಯುತ್ತದೆ. ದೇಶ ಕಾಲಗಳ ದೃಷ್ಟಿಯಿಂದ ಅನೇಕವಾಗಿ ಕಾಣುವ ಸತ್ಯ ಶುದ್ಧವಾದ ನೈಜಸ್ಥಿತಿಯಲ್ಲಿ ಒಂದೇ ಆಗಿದೆ. ಆದ್ದರಿಂದ ಸ್ಥೂಲದಲ್ಲಿದ್ದ ವಿವಿಧತೆಯನ್ನು ಗುರುತಿಸುತ್ತ, ಸೂಕ್ಷ್ಮದಲ್ಲಿರುವ ಏಕತೆಯನ್ನು ತಿಳಿಯುತ್ತ ಜೀವನವನ್ನು ಆಳುತ್ತಿರು.

ವಿವರಣೆ: ಭಾರತೀಯ ಆಧ್ಯಾತ್ಮ ಚಿಂತನೆಯಲ್ಲಿ ಪರಬ್ರಹ್ಮ, ಬ್ರಹ್ಮವಸ್ತು, ದೇವರು, ಭಗವಂತ, ಪರಮಾತ್ಮ ಎಂದೆಲ್ಲ ಹೆಸರುಗಳಿಂದ ಕರೆಯಿಸಿಕೊಳ್ಳುವ ಮೂಲಸತ್ವದ ಚಿಂತನೆ ಪ್ರಧಾನವಾದದ್ದು. ಅದು, ಏನು, ಹೇಗೆ ಎನ್ನುವುದರ ಜಿಜ್ಞಾಸೆ ಸದಾಕಾಲ ನಡೆದಿರುವಂಥದ್ದು.

• ಪ್ರಥಮವೇದವಾದ ಋಗ್ವೇದ – ‘ಏಕಂಸತ್, ವಿಪ್ರಾ ಬಹುದಾ ವದಂತಿ’ ಎನ್ನುತ್ತದೆ. ಮೂಲಸತ್ವವದೊಂದೆ ಆದರೆ ಜ್ಞಾನಿಗಳು ಅದನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ.
• ನಾಸದೀಯ ಸೂಕ್ತ ಆ ಶಕ್ತಿ ಪ್ರಕಟ ಹಾಗೂ ಅಪ್ರಕಟಿತ ರೂಪದಲ್ಲಿರುತ್ತದೆ ಎನ್ನುತ್ತದೆ.
• ಯಜುರ್ವೇದದ ರುದ್ರ ಅಧ್ಯಾಯ ಪ್ರಪಂಚದ ಎಲ್ಲವೂ – ಎತ್ತರದಲ್ಲಿರುವ, ಕೆಳಗಿರುವ; ಚಲ ಮತ್ತು ಅಚಲ; ಒಳ್ಳೆಯದು ಮತ್ತು ಕೆಟ್ಟದ್ದು; ಸುಂದರ ಮತ್ತು ಕುರೂಪ; ನಮಗರಿವಿರುವ ಮತ್ತು ಅರಿವು ಇಲ್ಲದಿರುವ - ಪರವಸ್ತುವಿನ ವಿಭಿನ್ನ ರೂಪಗಳು ಎನ್ನುತ್ತದೆ
• ಕೇನೋಪನಿಷತ್ತು ಈ ಸತ್ವ ಸ್ಥೂಲವಾಗಿ ಇಂದ್ರಿಯಗಳಿಗೆ ಮತ್ತು ಸೂಕ್ಷ್ಮವಾಗಿ ಪ್ರಜ್ಞೆಗೆ ಗೋಚರವಾಗುವಂಥದ್ದು ಎನ್ನುತ್ತದೆ.
• ಕಠೋಪನಿಷತ್ತು ಇಡೀ ಪ್ರಪಂಚದ ವೃಕ್ಷಕ್ಕೆ ಬ್ರಹ್ಮಸತ್ವವೇ ಬೇರು ಎಂದು ಹೇಳುತ್ತದೆ.
• ಮುಂಡಕೋಪನಿಷತ್ತು, ಪ್ರತಿಯೊಂದು ವಸ್ತುವೂ ಒಂದು ನದಿಯಂತೆ ಹರಿದು ಬಂದು ಸೇರುವ ಸಮುದ್ರವೇ ಬ್ರಹ್ಮಸತ್ವ ಎಂದು ತಿಳಿಸುತ್ತದೆ.

ಈ ಎಲ್ಲ ದರ್ಶನಗಳ ಹೇಳಿಕೆ ಒಂದೇ. ಪ್ರಪಂಚದಲ್ಲಿ ನಮಗೆ ಕಾಣುವ, ಕಾಣದಿರುವ ಎಲ್ಲ ಅಂಶಗಳೂ ಆ ಭಗವದ್ ಶಕ್ತಿಯ ಅನೇಕ ರೂಪಾಂತರಗಳು. ಒಂದೇ ಆದ ಮೂಲವಸ್ತು ತನ್ನ ಲೀಲೆಗಾಗಿ ಅನೇಕ ರೂಪಗಳನ್ನು ಪಡೆಯುತ್ತದೆ. ದೇಶಕಾಲಗಳಲ್ಲಿ ಅದು ಬೇರೆ ಬೇರೆ ಎನ್ನಿಸಬಹುದು.

ಕ್ರಿಶ್ಚಿಯನ್ನರಿಗೆ ಅದು ಜೀಸಸ್, ಮುಸ್ಲಿಮರಿಗೆ ಅದು ಅಲ್ಲಾಹ್, ಬೌದ್ಧರಿಗೆ ಬುದ್ಧ, ಜೈನರಿಗೆ ಮಹಾವೀರ ಆದಂತೆ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಕಾಲಮಾನಗಳಲ್ಲಿ ಆ ಶಕ್ತಿ ಬೇರೆ ಹೆಸರುಗಳನ್ನು ಪಡೆಯುತ್ತದೆ. ಆದರೆ ನಿತ್ಯ ಶುದ್ಧ ಸ್ಥಿತಿಯಲ್ಲಿ ಅದು ಒಂದೇ ನಿಯಾಮಕವಾದ ಶಕ್ತಿ. ಹಾಗಾದರೆ ನಾವು ಹೇಗೆ ಬದುಕಬೇಕು? ಅದನ್ನೇ ಕಗ್ಗ ಸುಂದರವಾಗಿ ಹೇಳುತ್ತದೆ- ಜಗತ್ತಿನಲ್ಲಿ ಸ್ಥೂಲವಾಗಿ ಕಣ್ಣಿಗೆ ಕಾಣುವ ವಿವಿಧ ರೂಪಗಳಲ್ಲಿ ಆ ಸತ್ವವನ್ನು ಕಾಣು ಮತ್ತು ಸೂಕ್ಷ್ಮದಲ್ಲಿ ಅವೆಲ್ಲ ಒಂದೇ ಸತ್ವ ಎಂಬುದನ್ನು ಪರಿಭಾವಿಸಿ - ನಿನ್ನ ಬದುಕನ್ನು ಆಳು.ಎರಡರಲ್ಲೂ ಮೂಲಸತ್ವ ಗುರುತಿಸಿ ಗೌರವಿಸುವುದು ಬದುಕಿಗೆ ಸೊಗಸು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !