ಮಂಗಳವಾರ, ಅಕ್ಟೋಬರ್ 15, 2019
26 °C

ಮಾತಿನಂತೆ ಫಲ

ಗುರುರಾಜ ಕರಜಗಿ
Published:
Updated:
Prajavani

ಬಹಳ ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿರುವಾಗ ಬೋಧಿಸತ್ವ ಒಬ್ಬ ಶ್ರೀಮಂತ ಶ್ರೇಷ್ಠಿಯ ಮಗನಾಗಿ ಹುಟ್ಟಿದ್ದ. ಅವನು ತುಂಬ ಸುಸಂಸ್ಕೃತನಾಗಿ ಬೆಳೆದಿದ್ದ.

ಒಂದು ದಿನ ಬೋಧಿಸತ್ವ ತನ್ನ ಇಬ್ಬರು ಸ್ನೇಹಿತರಾದ ಶ್ರೇಷ್ಠಿಪುತ್ರರೊಡನೆ ಹರಟೆ ಹೊಡೆಯತ್ತಾ ಮರದ ಕೆಳಗೆ ಕುಳಿತಿದ್ದ. ಆಗ ರಸ್ತೆಯ ಮೇಲೆ ಒಂದು ಬಂಡಿ ಹೋಗುತ್ತಿರುವುದು ಕಂಡಿತು. ಒಬ್ಬ ಬೇಟೆಗಾರ ಕಾಡಿನಿಂದ ತಾನು ಕೊಂದು ತಂದ ಮಾಂಸವನ್ನು ಆ ಬಂಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದ. ಆಗ ಶ್ರೇಷ್ಠಿಪುತ್ರರಲ್ಲಿ ಒಬ್ಬ, ‘ನಾನು ಹೋಗಿ ಬೇಡನಿಂದ ಒಂದಿಷ್ಟು ಮಾಂಸ ತೆಗೆದುಕೊಂಡು ಬರುತ್ತೇನೆ ನೋಡುತ್ತಿರಿ’ ಎಂದು ಎದ್ದು ಹೊರಟ. ಬೇಟೆಗಾರನ ಹತ್ತಿರ ಹೋಗಿ ದರ್ಪದಿಂದ, ‘ಲೇ ಬೇಡ, ಒಂದಷ್ಟು ಮಾಂಸ ಕೊಡಲೇ’ ಎಂದ. ಆಗ ಬೇಟೆಗಾರ ಇವನನ್ನು ನೋಡಿ, ‘ಆಯ್ತಪ್ಪ, ನಿನ್ನ ಮಾತಿನಂತೇ ಮಾಂಸ ತೆಗೆದುಕೊ’ ಎಂದು ಬಿರುಸಾದ, ನೀರಸವಾದ ಮಾಂಸದ ತುಂಡನ್ನುಕೊಟ್ಟ. ನಂತರ ಎರಡನೆಯ ಶ್ರೇಷ್ಠಿ ಪುತ್ರಎದ್ದ, ‘ನಾನೂ ಹೋಗಿ ಒಂದು ಮಾಂಸದ ತುಂಡನ್ನು ತರುತ್ತೇನೆ’ ಎಂದು ಹೊರಟ. ನೇರವಾಗಿ ಬೇಟೆಗಾರನ ಮುಂದೆ ನಿಂತು, ‘ಅಣ್ಣಯ್ಯ, ನೀನು ಯಾವಾಗಲೂ ಒಳ್ಳೆಯ ಮಾಂಸವನ್ನೇ ತರುತ್ತೀ ಎಂಬುದು ನನಗೆ ಗೊತ್ತು. ದಯವಿಟ್ಟು ಒಂದಿಷ್ಟು ಮಾಂಸ ಕೊಡುತ್ತೀಯಾ?’ ಎಂದು ಕೇಳಿದ. ಆಗ ಬೇಟೆಗಾರ ಮುಗುಳ್ನಕ್ಕು, ‘ಆಯ್ತಪ್ಪ, ನೀನೂ ಮಾಂಸವನ್ನು ತೆಗೆದುಕೊ’ ಎಂದು ಮೃದುವಾದ ಮಾಂಸವನ್ನು ಕೊಟ್ಟ.

ಇದಾದ ನಂತರ ಮೂರನೆಯಾತನಾದ ಬೋಧಿಸತ್ವ ಬೇಡನ ಬಳಿಗೆ ಬಂದು, ‘ತಂದೆ, ನೀನು ಕರುಣಾಳು. ನಿನಗೆ ಇಷ್ಟವಾದ ಹಾಗೂ ಇಷ್ಟವಾದಷ್ಟು ಮಾಂಸವನ್ನು ನನಗೆ ನೀಡಿದರೆ ನಾನು ತುಂಬ ಕೃತಜ್ಞನಾಗಿರುತ್ತೇನೆ’ ಎಂದ. ಆಗ ಬೇಡ ತುಂಬಾ ಸಂತೋಷದಿಂದ, ‘ಮಿತ್ರ, ನಿನ್ನ ಮಾತು ಎಷ್ಟು ಮೃದುವಾಗಿದೆ! ನಿನಗೆ ನಾನು ಒಂದು ತುಂಡು ಮಾಂಸ ಕೊಡುವುದಿಲ್ಲ. ಬದಲಾಗಿ ಈ ಮಾಂಸದ ಬಂಡಿಯನ್ನೇ ನಿನ್ನ ಮನೆಗೆ ಹೊಡೆದುಕೊಂಡು ಬರುತ್ತೇನೆ’ ಎಂದು ಬಂಡಿಯನ್ನು ಬೋಧಿಸತ್ವನ ಮನೆಗೆ ಹೊಡೆದೇ ಬಿಟ್ಟ.

ಉಳಿದಿಬ್ಬರಿಗೆ ಆಶ್ಚರ್ಯವಾಯಿತು. ತಾವು ಎಲ್ಲರೂ ಕೇಳಿದ್ದು ಮಾಂಸದ ತುಂಡು. ಆದರೆ  ಪ್ರತಿಯೊಬ್ಬರಿಗೂ ಬೇಡ ನೀಡಿದ್ದು ಬೇರೆ ಬೇರೆ. ಇದು ಯಾಕೆ ಹೀಗಾಯಿತು ಎಂದು ಬೇಡನನ್ನು ಕಂಡು ಕೇಳಿದರು. ಆತ ಹೇಳಿದ, ‘ಅಯ್ಯಾ, ಮಾತಿಗೆ ತಕ್ಕ ಪ್ರತಿಫಲ ದೊರಕುತ್ತದೆ. ಮೊದಲನೆಯವನು. ಅಹಂಕಾರದ ಠೇಂಕಾರದೊಂದಿಗೆ ಮಾತನಾಡಿದಾಗ ಅವನ ಮಾತಿನಷ್ಟೇ ಒರಟಾದ ಮಾಂಸ ದೊರಕಿತು. ಎರಡನೆಯವನು ವಿನಯದಿಂದ ಮಾತನಾಡಿಸಿದ. ಆದ್ದರಿಂದ ಅವನಿಗೆ ಮೃದುವಾದ ಮಾಂಸವನ್ನು ಕೊಟ್ಟೆ. ಕೊನೆಯವನಂತೂ ಅತ್ಯಂತ ಗೌರವದಿಂದ ಕೇಳಿದ. ಆದ್ದರಿಂದ ಆತನಿಗೆ ಗೌರವಪೂರ್ವಕವಾಗಿ ಎಲ್ಲ ಮಾಂಸವನ್ನು ಕೊಟ್ಟುಬಿಟ್ಟೆ’.

ಪ್ರಪಂಚ ಪ್ರತಿಧ್ವನಿ ಅಥವಾ ಪ್ರತಿಬಿಂಬವಿದ್ದಂತೆ. ಅದು ನಿಮ್ಮ ಕೂಗನ್ನೇ, ಧ್ವನಿಯನ್ನೇ ಮರಳಿಸುತ್ತದೆ ಮತ್ತು ನಿಮ್ಮ ರೂಪವನ್ನೇ ನಿಮಗೆ ಮರಳಿ ತೋರಿಸುತ್ತದೆ. ನೀವು ಯಾವ ಮುಖವನ್ನು ಪ್ರಪಂಚಕ್ಕೆ ತೋರುತ್ತೀರೋ ಅಂಥದೇ ಮುಖವನ್ನು ನಿಮ್ಮ ಮುಂದೆ ಹಿಡಿಯುತ್ತದೆ. ಪ್ರಪಂಚವನ್ನು ದೂರುವ ಮೊದಲು ನಮ್ಮ ನಡೆಯನ್ನು ಸರಿಪಡಿಸಿಕೊಂಡರೆ ಸಾಕು. 

Post Comments (+)