ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಯಂತಿಕವಾದ ದಾನ

Last Updated 3 ಅಕ್ಟೋಬರ್ 2019, 19:47 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಮೊಲವಾಗಿ ಹುಟ್ಟಿ ಕಾಡಿನಲ್ಲಿ ಇದ್ದ. ಅದೊಂದು ಸುಂದರವಾದ ನದಿ ತೀರದ ಪ್ರದೇಶ. ಈ ಮೊಲಕ್ಕೆ ಮೂರು ಜನ ಸ್ನೇಹಿತರು. ಅವು ನೀರುಬೆಕ್ಕು, ನರಿ ಮತ್ತು ಒಂದು ಕೋತಿ. ಅವುಗಳು ಸದಾ ಮೊಲವನ್ನೇ ಗುರುವನ್ನಾಗಿ ಮಾಡಿಕೊಂಡು ಅದು ಹೇಳಿದಂತೆ ಕೇಳಿ ಧರ್ಮದಲ್ಲೇ ಬದುಕಿದ್ದವು. ದಿನವೂ ಸಾಯಂಕಾಲ ಒಂದೆಡೆಗೆ ಕುಳಿತು ಧರ್ಮಚಿಂತನೆ ಮಾಡುತ್ತಿದ್ದವು.

ಒಂದು ದಿನ ಮೊಲ ಸಾಯಂಕಾಲ ಆಕಾಶದಲ್ಲಿ ಚಂದ್ರನನ್ನು ನೋಡಿ, ಮರುದಿನ ವ್ರತ‌ದ ದಿನ. ಆದ್ದರಿಂದ ತಾವು ನಾಲ್ಕೂ ಪ್ರಾಣಿಗಳು ಉಪೋಸಥ ವ್ರತವನ್ನು ನಿಷ್ಠೆಯಿಂದ ಮಾಡಬೇಕು. ಹೀಗೆ ಚಿಂತಿಸಿ ಉಳಿದ ಪ್ರಾಣಿಗಳಿಗೆ ಹೇಳಿತು, “ನಾಳೆ ಮುಖ್ಯವಾದ ಉಪೋಸಥವ್ರತ. ನಾವೆಲ್ಲ ಉಪವಾಸದಿಂದ ಇರಬೇಕು. ಸ್ವಲ್ಪ ಆಹಾರವನ್ನು ಯಾರಿಗೂ ತೊಂದರೆ ಮಾಡದೇ ಸಂಗ್ರಹಿಸಿ, ಯಾರಾದರೂ ಯಾಚಕರು ಬಂದರೆ ಅವರಿಗೆ ದಾನವಾಗಿ ಕೊಟ್ಟು ವ್ರತವನ್ನು ಆಚರಿಸಬೇಕು”. ಬೆಕ್ಕು, ನರಿ, ಕೋತಿಗಳು ಮೊಲದ ಮಾತು ಒಪ್ಪಿ ನಡೆದವು.

ಮರುದಿನ ನೀರಬೆಕ್ಕು ಆಹಾರ ಹುಡುಕುತ್ತ ನದಿ ತೀರಕ್ಕೆ ಹೋಯಿತು. ಅಲ್ಲಿ ಒಬ್ಬ ಮೀನುಗಾರ ಬಲೆ ಹಾಕಿ ಏಳು ಸುಂದರವಾದ ಕೆಂಪು ಮೀನುಗಳನ್ನು ಹಿಡಿದಿದ್ದ. ಅವುಗಳನ್ನು ಒಂದು ಚೀಲದಲ್ಲಿ ಕಟ್ಟಿಟ್ಟು ಮತ್ತಷ್ಟು ಮೀನು ಹಿಡಿಯಲು ದೂರಕ್ಕೆ ಹೋದ. ನೀರುಬೆಕ್ಕು ಚೀಲದ ಹತ್ತಿರ ಹೋಗಿ ಸ್ವಲ್ಪ ಕಾಯ್ದು, ಯಾರೂ ಬರದಿದ್ದಾಗ ಚೀಲವನ್ನು ಬಾಯಿಯಲ್ಲಿ ಹಿಡಿದುಕೊಂಡು ಮನೆಗೆ ತಂದು ಯಾರಾದರೂ ಯಾಚಕರು ಬಂದರೆ ಇರಲಿ ಎಂದುಕೊಂಡು ಉಪವಾಸದಲ್ಲಿ ಕುಳಿತಿತು.

ಅದರಂತೆಯೇ ನರಿ ಆಹಾರ ಹುಡುಕಿಕೊಂಡು ಒಬ್ಬ ರೈತನ ಮನೆಯಲ್ಲಿದ್ದ ಎರಡು ಉಡಗಳು, ಒಂದು ಮೊಸರಿನ ಗಡಿಗೆಯನ್ನು ಹೊತ್ತುಕೊಂಡು ತನ್ನ ಗವಿಗೆ ತಂದು ಇಟ್ಟಿತು. ಆದರೆ ತಾನು ತಿನ್ನದೆ ಅತಿಥಿಗಳು ಬಂದರೆ ದಾನಮಾಡಬೇಕೆಂದು ಅದೂ ಉಪವಾಸದಲ್ಲಿ ಕಾದು ಕುಳಿತಿತ್ತು.

ಕೋತಿ ಮರದಿಂದ ಮರಕ್ಕೆ ಹಾರುತ್ತ ಅತ್ಯಂತ ಶ್ರೇಷ್ಠ ತಳಿಯ ಮಾವಿನ ಮರವನ್ನು ಆರಿಸಿ ಅಲ್ಲಿ ಪಕ್ವವಾಗಿದ್ದ ಮಾವಿನಹಣ್ಣಿನ ದೊಡ್ಡ ಗೊಂಚಲುಗಳನ್ನು ತೆಗೆದುಕೊಂಡು ಶೇಖರಿಸಿ ಇಟ್ಟಿತು. ತನ್ನ ಸ್ನೇಹಿತರಂತೆ ತಾನು ಉಪವಾಸ ಮಾಡುತ್ತ ಅತಿಥಿಗಳಿಗಾಗಿ ಕಾಯುತ್ತ ಉಳಿಯಿತು.

ಮೊಲಕ್ಕೆ ಸ್ವಲ್ಪ ಕಷ್ಟವಾಯಿತು. ಅದು ಸಮೃದ್ಧವಾದ ಎಳೆಯ ಹುಲ್ಲಿನ ನಡುವೆಯೇ ಬದುಕಿದೆ. ಆದರೆ ಮನುಷ್ಯರು ಯಾರಾದರೂ ಅತಿಥಿಯಾಗಿ ಬಂದರೆ ಹುಲ್ಲನ್ನು ಕೊಡಲಾಗುತ್ತದೆಯೇ? ಮೊಲ ಯೋಚಿಸಿ ಒಂದು ತೀರ್ಮಾನಕ್ಕೆ ಬಂದಿತು. ಅತಿಥಿ ಬಂದು ಬೇಡಿದರೆ ತನ್ನ ಮಾಂಸವನ್ನೇ ಕೊಟ್ಟು ವ್ರತವನ್ನು ನಡೆಸುತ್ತೇನೆ ಎಂದುಕೊಂಡಿತು.

ಈ ವಿಷಯ ಶಕ್ರನಿಗೆ ಹೊಳೆಯಿತು. ಆತ ದೇವಲೋಕವನ್ನು ಬಿಟ್ಟು ಈ ಪ್ರಾಣಿಗಳ ನಿಷ್ಠೆಯನ್ನು ಪರೀಕ್ಷಿಸಲು ಕಾಡಿಗೆ ಬಂದು ಬೆಕ್ಕಿನ ಮನೆಯ ಹತ್ತಿರ ಹೋಗಿ ಆಹಾರ ಬೇಡಿದ. ಬೆಕ್ಕು ಮೀನುಗಳನ್ನು ತಂದು ಮುಂದಿಟ್ಟಿತು. ಆಮೇಲೆ ಬರುವೆನೆಂದು ಅಲ್ಲಿಂದ ಹೊರಟ ಶಕ್ರ, ನರಿ ಹಾಗೂ ಕೋತಿಯ ಬಳಿಗೆ ಬಂದ. ಅವೂ ಕೂಡ ಶ್ರದ್ಧೆಯಿಂದ ತಮ್ಮಲ್ಲಿದ್ದ ವಸ್ತುಗಳನ್ನು ನೀಡಿಬಿಟ್ಟವು. ಅವುಗಳಿಗೂ ನಂತರ ಬರುವೆನೆಂದು ಹೇಳಿ ಮೊಲದ ಬಳಿಗೆ ಬಂದ. ಆಗ ಮೊಲ ಹೇಳಿತು, “ಅತಿಥಿ, ನನ್ನ ಬಳಿ ನೀನು ತಿನ್ನಬಹುದಾದ ವಸ್ತುವಿಲ್ಲ. ನೀನು ಹಿಂಸೆ ಮಾಡುವುದು ಬೇಡ. ಬರೀ ಬೆಂಕಿ ಮಾಡು. ನಾನು ಸ್ವ ಇಚ್ಛೆಯಿಂದ ಅದರಲ್ಲಿ ಹಾರುತ್ತೇನೆ ನನ್ನ ಮೃದುವಾದ ಬೆಂದ ಮಾಂಸವನ್ನು ನೀನು ತಿನ್ನು”. ಶಕ್ರ ಬೆಂಕಿ ಮಾಡಿದ. ಮೈಮೇಲಿನ ಪುಟ್ಟ ಹುಳಗಳಿಗೆ ತೊಂದರೆಯಾಗದಂತೆ ಮೈಕೊಡವಿಕೊಂಡು ಮೊಲ ಬೆಂಕಿಯಲ್ಲಿ ಹಾರಿತು. ಆದರೆ ಅದರ ಮೈಸುಡುವ ಬದಲು ಹಿತವಾಗಿ ತಂಪಾಯಿತು. ಶಕ್ರ ಪ್ರತ್ಯಕ್ಷ ರೂಪವನ್ನು ತೋರಿ ಪ್ರಾಣಿಗಳ ವ್ರತವನ್ನು ಮೆಚ್ಚಿದ. ಮೊಲದ ಅತ್ಯಂತ ತ್ಯಾಗದ ಸ್ಮರಣೆಗೆ ಹತ್ತಿರದ ಪರ್ವತವನ್ನು ಹಿಂಡಿ ಅದರ ರಸವನ್ನು ಚಂದ್ರನ ಮೇಲೆ ಮೊಲದ ಆಕಾರದಲ್ಲಿ ಲೇಪಿಸಿದ. ಲೋಕಕ್ಕೆ ದಾನದ ಮಹತ್ವವನ್ನು ಸಾರಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT