ಗುರುವಾರ , ಡಿಸೆಂಬರ್ 1, 2022
21 °C
ಪೃಥ್ವೀರಕ್ಷಣೆಯ ಈ ಸಭೆಯಲ್ಲೂ ಮಾತಿನ ಅತಿವೃಷ್ಟಿ, ಕೆಲಸದ ಕಡುಬರ

ವಿಜ್ಞಾನ ವಿಶೇಷ | ಕುದಿಕೊಪ್ಪರಿಗೆಯ ಕಡೆ ದೌಡು

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಬಿಸಿ ಪ್ರಳಯದಿಂದ ಬಚಾವಾಗುವುದು ಹೇಗೆಂಬ ಬಗ್ಗೆ ಈಜಿಪ್ಟಿನ ಶರ್ಮ್‌-ಎಲ್‌-ಶೇಖ್‌ ನಗರದಲ್ಲಿ ಇದೀಗ 27ನೇ ಜಾಗತಿಕ ಸಭೆ ನಡೆಯುತ್ತಿದೆ. ‘ಕುದಿಕೊಪ್ಪರಿಗೆಯ ಕಡೆ ಇಡೀ ಜಗತ್ತು ಧಾವಿಸುತ್ತಿದೆ: ಕೈಕೈ ಹಿಡಿದುಕೊಂಡು ಬಚಾವಾಗಬೇಕು ಇಲ್ಲವೆ ಕಮರಿಗೆ ಒಟ್ಟಾಗಿ ಧುಮುಕಿ ಕರಕಲಾಗಬೇಕು’ ಎಂಬರ್ಥದ ಉಗ್ರ ಮಾತುಗಳೊಂದಿಗೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಆರಂಭದ ಬ್ಯಾಟಿಂಗ್‌ ಮಾಡಿದ್ದಾರೆ.

ಕಳೆದ ವರ್ಷ ಇಂಗ್ಲೆಂಡಿನ ಗ್ಲಾಸ್ಗೊ ನಗರದಲ್ಲಿ ನಡೆದ ಕಾಪ್‌ 26ರ ಸಭೆಗೆಂದು ವಿಶ್ವಸಂಸ್ಥೆಯೇ ಸಿನಿಮೀಯ ದೃಶ್ಯಗಳನ್ನು ಸಿದ್ಧಪಡಿಸಿತ್ತು. ದೈತ್ಯ ಡೈನೊಸಾರ್‌ ಪ್ರಾಣಿಯೊಂದು ಸಭೆಗೆ ನುಗ್ಗಿ, ವಿಶ್ವ ನಾಯಕರಿಗೆ ಬದುಕುಳಿಯುವ ಪಾಠ ಹೇಳಿತ್ತು. ‘ಬಾಹ್ಯಾಕಾಶದಿಂದ ಉಲ್ಕಾಶಿಲೆಗಳು ಬಿದ್ದಿದ್ದರಿಂದ ನಾವಂತೂ ನಾಮಾವಶೇಷ ಆದೆವು; ಬುದ್ಧಿವಂತ ಜೀವಿ ಎನ್ನಿಸಿಕೊಂಡ ನಿಮಗೇನಾಗಿದೆ ಧಾಡಿ? ಈಗಲಾದರೂ ಎದ್ದು ಬಚಾವು ಮಾಡಿಕೊಳ್ಳಿ’ ಎಂದು ಹೂಂಕರಿಸಿ ಹೊರಟು ಹೋಗಿತ್ತು.

ಈ ಬಾರಿ ಅಂಥ ಸಿನಿಮೀಯ ದೃಶ್ಯ ಇರಲಿಲ್ಲ. ಆದರೆ ವ್ಯಂಗ್ಯ, ವಾಗ್ವಾದಗಳಿಗೆ ಬರವಿಲ್ಲ. ಮೊದಲ ವ್ಯಂಗ್ಯ ಏನೆಂದರೆ, ಎರಡು ವಾರಗಳ ಇಡೀ ಅಧಿವೇಶನದ ಪ್ರಾಯೋಜಕತ್ವವನ್ನು ಕೊಕಾಕೋಲಾ ಕಂಪನಿಯೇ ವಹಿಸಿಕೊಂಡಿದೆ. ತಂಪು ಪೇಯದ ಬಾಟಲಿಗಳಿಗೆಂದೇ ವರ್ಷಕ್ಕೆ 32 ಲಕ್ಷ ಟನ್‌ ಪ್ಲಾಸ್ಟಿಕ್‌ ದ್ರವ್ಯವನ್ನು ಬಳಸುವ ಈ ಕಂಪನಿ ‘ಜಗತ್ತಿನ ಅತಿ ದೊಡ್ಡ ಪ್ಲಾಸ್ಟಿಕ್‌ ಕೊಳಕು ಗಾರ’ ಎಂಬ ಕುಖ್ಯಾತಿಯನ್ನು ಕಳೆದ ವರ್ಷವಷ್ಟೇ ಮುಡಿಗೇರಿಸಿಕೊಂಡಿತ್ತು. ಗ್ರೀನ್‌ ಪೀಸ್‌ ಸಂಘಟನೆಯ ದಾಖಲೆ ಪ್ರಕಾರ, ಈ ಕಂಪನಿಯಿಂದಾಗಿ ಪ್ರತಿವರ್ಷ 120 ಶತಕೋಟಿ ಪ್ಲಾಸ್ಟಿಕ್‌ ಬಾಟಲಿಗಳು ಪರಿಸರಕ್ಕೆ ಸೇರುತ್ತಿವೆ.

ತಾನು ಬದಲಾಗಲಿದ್ದೇನೆಂದು ಕೊಕಾಕೋಲಾ ಕಂಪನಿ ಹೇಳುತ್ತಿದೆ. ಸಸ್ಯಮೂಲಗಳಿಂದಲೇ ಅದು ಹೊಸ ಬಗೆಯ ಪ್ಲಾಸ್ಟಿಕ್‌ ದ್ರವ್ಯವನ್ನು, ಪೇಯದ ಬಾಟಲಿಗಳನ್ನು ಸಿದ್ಧಪಡಿಸುತ್ತಿದೆಯಂತೆ. ಈಗಾಗಲೇ 900 (ಕೋಟಿ ಅಲ್ಲ, ಬರೀ 900) ಪೆಟ್‌ ಬಾಟಲಿಗಳನ್ನು ತಯಾರಿಸಿದೆಯಂತೆ. ಇನ್ನು ಮೂರು ವರ್ಷಗಳೊಳಗೆ ತಾನು 30 ಲಕ್ಷ ಟನ್‌ ಕಮ್ಮಿ ಪ್ಲಾಸ್ಟಿಕ್‌ ಬಳಸುವುದಾಗಿ ಹೇಳಿಕೊಂಡಿದೆ. ಮಾರುಕಟ್ಟೆಗೆ ಬಿಡುವ ಪ್ರತೀ ಬಾಟಲಿಯನ್ನೂ ಹಿಂದಕ್ಕೆ ಪಡೆದು ಅದನ್ನೇ ಮರುಬಳಕೆ ಮಾಡುವುದಾಗಿ ತನ್ನ ಜಾಲತಾಣದಲ್ಲಿ ಹೇಳಿದೆ.

ಸಸ್ಯಮೂಲಗಳಿಂದಲೇ ಪರಿಸರಸ್ನೇಹಿ ಪ್ಲಾಸ್ಟಿಕ್‌ ವಸ್ತುಗಳನ್ನು ತಯಾರಿಸುವ ತಂತ್ರಜ್ಞಾನ ಈಗಲ್ಲ, 1992ರಲ್ಲಿ ಬ್ರೆಝಿಲ್‌ನ ರಿಯೊ ನಗರದಲ್ಲಿ ನಡೆದ ಮೊದಲ ಶೃಂಗಸಭೆಯಲ್ಲೇ ಪ್ರದರ್ಶನಕ್ಕೆ ಬಂದಿತ್ತು. ಆದರೆ ಪೆಟ್ರೊತೈಲದಿಂದ ಪ್ಲಾಸ್ಟಿಕ್‌ ತಯಾರಿಸುವ ವಿಧಾನ ತೀರಾ ಅಗ್ಗದ್ದಾಗಿರುವುದರಿಂದ ಪೇಯ ತಯಾರಿಸುವ ಯಾವ ಕಂಪನಿಗೂ ಅದನ್ನು ಕೈಬಿಡಲು ಮನಸ್ಸಿಲ್ಲ. ಕೊಕಾಕೋಲಾವನ್ನು ಯಾರೂ ನಂಬಲು ತಯಾರಿಲ್ಲ. ಅದರದ್ದು ಜನರ ಕಣ್ಣಿಗೆ ‘ಹಸಿರು’ ಮಣ್ಣೆರಚುವ, ಹುಸಿ ಮಾತಿನ ಭರವಸೆಗಳೇ ಆಗಿವೆ ಎಂದು ಪರಿಸರ ಸಂಸ್ಥೆಗಳು ವಾದಿಸುತ್ತಿವೆ. ಈ ಬಹುರಾಷ್ಟ್ರೀಯ ಕಂಪನಿ ಕಾಲಿಟ್ಟ ಬಹಳಷ್ಟು ದೇಶಗಳಲ್ಲಿ ಪರಿಸರಕ್ಕೆ ಹಾನಿ, ಆರೋಗ್ಯಕ್ಕೆ ಹಾನಿ, ಪ್ರಾಣಿಪರೀಕ್ಷೆಯ ಅನೈತಿಕ ಸಂಶೋಧನೆ ಮತ್ತು ಹಣಕಾಸು ಅವ್ಯವಹಾರಗಳ ಖಟ್ಲೆಗಳನ್ನು ಎದುರಿಸುತ್ತಿದೆ.

ಭಾರತದಲ್ಲಿ ಅದು ಅಂತರ್ಜಲವನ್ನು ಕೊಳಕು ಮಾಡಿದ್ದು, ಕೊಳಕು ನೀರನ್ನು ಪೇಯದಲ್ಲಿ ಸೇರಿಸಿದ್ದರ ಬಗ್ಗೆ ಭಾರೀ ರಾದ್ಧಾಂತ ಆಗಿತ್ತು. ಕೇರಳದ ಪ್ಲಾಚಿಮಾಡಾ ಎಂಬಲ್ಲಿ ಆದಿವಾಸಿಗಳ ಭತ್ತದ ಗದ್ದೆಯ ಪರಿಸರದಲ್ಲಿ ಅದು ಫ್ಯಾಕ್ಟರಿ ಆರಂಭಿಸಿ ಒಂದೆರಡೇ ವರ್ಷಗಳಲ್ಲಿ ಅಂತರ್ಜಲವನ್ನು ಖಾಲಿ ಮಾಡಿ, ಕೊಳಕು ಮಾಡಿ ಜನರ ಪ್ರತಿರೋಧವನ್ನು ಎದುರಿಸಿತ್ತು. ತನ್ನ ತ್ಯಾಜ್ಯವನ್ನೇ ಸಾವಯವ ಗೊಬ್ಬರವೆಂದು ಗ್ರಾಮೀಣ ಜನರಿಗೆ ಮಾರುತ್ತಿತ್ತು. ಬಿಬಿಸಿ ವರದಿಗಾರ ಆ ಗೊಬ್ಬರದ ಸ್ಯಾಂಪಲ್ಲನ್ನು ಬ್ರಿಟನ್ನಿನ ಎಕ್ಸೆಟರ್‌ ವಿ.ವಿ.ಯ ಲ್ಯಾಬಿಗೆ ಒಯ್ದು ಪರೀಕ್ಷೆ ಮಾಡಿದಾಗ ಅದರಲ್ಲಿ ಆರೋಗ್ಯಕ್ಕೆ ಮಾರಕವಾದ ಸೀಸ ಮತ್ತು ಕ್ಯಾಡ್ಮಿಯಂ ವಿಷ ಇರುವುದು ಕಂಡುಬಂತು. ಆಮೇಲೆ ಅಂಥದೇ ಪರೀಕ್ಷೆಯನ್ನು ಕೇರಳ ಮಾಲಿನ್ಯ ನಿಯಂತ್ರಣ ಮಂಡಳಿಯೂ ನಡೆಸಿ, ಕಂಪನಿಗೆ 216 ಕೋಟಿ ರೂಪಾಯಿ ದಂಡ ಹಾಕಿ, ಎತ್ತಂಗಡಿ ಮಾಡಲಾಗಿತ್ತು.

ದಂಡ, ಪರಿಹಾರ ಮೊತ್ತ ವಸೂಲಾಯಿತೆ? ಆ ಮಾತನ್ನು ಕೇಳಬೇಡಿ. ಇಲ್ಲಷ್ಟೇ ಅಲ್ಲ, ಇಡೀ ದೇಶ ದಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕೊಕಾ ಕೋಲಾಕ್ಕೆ ವಿಧಿಸಿದ ಯಾವ ದಂಡವೂ ಇದುವರೆಗೆ ವಸೂಲಿ ಆಗಿಲ್ಲ. ಕತೆ ಅಷ್ಟಕ್ಕೇ ಮುಗಿದಿಲ್ಲ. ದಿಲ್ಲಿಯ ‘ಡೌನ್‌ ಟು ಅರ್ಥ್‌’ ಪತ್ರಿಕೆ ಈಚೆಗೆ ಹೊರಗೆಳೆದ ಮಾಹಿತಿಯ ಪ್ರಕಾರ, ಕೊಕಾಕೋಲಾ, ಪೆಪ್ಸಿಕೋಲಾ, ರಿಲಯನ್ಸ್‌, ಅದಾನಿ ಗ್ರೂಪ್‌ ಇತ್ಯಾದಿಗಳ ಮೇಲೆ 1990ರೀಚೆ ನ್ಯಾಯಾಲಯಗಳು ವಿಧಿಸಿದ ಯಾವ ದಂಡವೂ ವಸೂಲಾಗಿಲ್ಲ! ಪ್ಲಾಸ್ಟಿಕ್‌ ಕಚಡಾಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಕ್ಕೆ ಕೊಕಾಕೋಲಾ ಕಂಪನಿಗೆ ₹ 51.6 ಕೋಟಿ, ಪೆಪ್ಸಿಕೋ ಕಂಪನಿಗೆ ಅದೇ ಕಾರಣಕ್ಕೆ ₹ 8.9 ಕೋಟಿ, ಕಲ್ಲಿದ್ದಲ ಗಣಿಯ ಸುತ್ತ ರಾಡಿ ಎಬ್ಬಿಸಿದ್ದಕ್ಕೆ ರಿಲಯನ್ಸ್‌ ಮತ್ತು ಸಹಭಾಗಿ ಕಂಪನಿಗಳಿಗೆ ₹ 79 ಕೋಟಿ, ಉಡುಪಿಯಲ್ಲಿ ಉಷ್ಣ ವಿದ್ಯುತ್‌ ಸ್ಥಾವರದ ಸುತ್ತ ಮಾಲಿನ್ಯ ಹಬ್ಬಿಸುತ್ತಿರುವುದಕ್ಕೆ ಅದಾನಿ ಕಂಪನಿಗೆ ಐದು ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಯಾವುದೂ ವಸೂಲಾಗಿಲ್ಲ. ವಕೀಲರಿಗೆ ಹಣ, ನ್ಯಾಯಾಲಯಗಳಲ್ಲಿ ಬರೀ ಕಾಲಹರಣ.

ಈಜಿಪ್ಟಿನ ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಸಚಿವ ಭೂಪೇಂದ್ರ ಯಾದವ್‌ ಕಳಕಳಿಯ ಮಾತಾಡಿದರು. ನೈಸರ್ಗಿಕ ವಿಕೋಪಗಳ ಸಂಖ್ಯೆ ಹಿಂದಿಗಿಂತ ಐದು ಪಟ್ಟು ಹೆಚ್ಚಾಗಿದೆಯೆಂದೂ ಅಂಥ ವಿಪತ್ತುಗಳ ಮುನ್ಸೂಚನೆ ಬಹಳಷ್ಟು ಮೊದಲೇ ಸಿಗುವಂತೆ ಸೂಕ್ತ ತಂತ್ರಜ್ಞಾನ ಆದಷ್ಟು ಬೇಗ ರೂಪುಗೊಳ್ಳಬೇಕು ಎಂದೂ ಕರೆ ನೀಡಿದರು. ಅಲ್ಲೊಂದು ವ್ಯಂಗ್ಯವಿತ್ತು. ಎರಡು ವಾರಗಳ ಹಿಂದಷ್ಟೇ ಇದೇ ಭೂಪೇಂದ್ರರ ಅರಣ್ಯ ಮತ್ತು ಪರಿಸರ ಇಲಾಖೆ ಅಂಡಮಾನ್‌ ನಿಕೊಬಾರ್‌ನಲ್ಲಿ ಅರಣ್ಯನಾಶದ ಭಾರೀ ಯೋಜನೆಗೆ ಅಸ್ತು ಎಂದಿದೆ. ಗ್ರೇಟ್‌ ನಿಕೊಬಾರ್‌ ದ್ವೀಪದ ದಟ್ಟ ಅರಣ್ಯದಲ್ಲಿ ಎಂಟೂವರೆ ಲಕ್ಷ ಮರಗಳನ್ನು ಕಡಿದು ಅಭಿವೃದ್ಧಿಯ ರತ್ನಗಂಬಳಿಯನ್ನು ಹಾಸಲು ಹಸಿರು ನಿಶಾನೆಯನ್ನು ತೋರಿಸಿದೆ. ಇಲಾಖೆ ಯದೇ ದಾಖಲೆಗಳ ಪ್ರಕಾರ, ಭಾರತದ ಈ ಭೂಭಾಗ ಪ್ರಪಂಚದ ಅತ್ಯಂತ ಸಂರಕ್ಷಿತ ಅರಣ್ಯ ಕ್ಷೇತ್ರವಾಗಿದ್ದು ಇಲ್ಲಿ 350 ಬಗೆಯ ವಿಶಿಷ್ಟ ಪ್ರಾಣಿಪಕ್ಷಿಗಳೂ 650 ಬಗೆಯ ಸಸ್ಯಗಳೂ ಇವೆ. ಬೇರೆಲ್ಲೂ ಕಾಣಲಾಗದ, ನಿಕೊಬಾರ್‌ನಲ್ಲೇ ವಿಕಾಸಗೊಂಡ ತುರಾಯಿ ಹದ್ದು, ಉದ್ದಬಾಲದ ಲಂಗೂರ, ಭೀಮಪಾದದ ಕೋಳಿ, ಶ್ರೂ ಮುಂತಾದ ಜೀವಿಗಳ ನೆಲೆವೀಡಾಗಿದೆ. ಆ ಅರಣ್ಯವನ್ನು ಚೊಕ್ಕ ಮಾಡಿದ ಜಾಗದಲ್ಲಿ ಒಂದು ವಿಮಾನ ನಿಲ್ದಾಣ, ಅತ್ಯಾಧುನಿಕ ಬಂದರು, (ಕಲ್ಲಿದ್ದಲ) ಶಕ್ತಿಸ್ಥಾವರ ಮತ್ತು ಹೊಸ ನಗರವನ್ನು ಸೃಷ್ಟಿಸಲಾಗುತ್ತದಂತೆ.

ವ್ಯಂಗ್ಯ ಇಷ್ಟಕ್ಕೇ ಮುಗಿದಿಲ್ಲ. ಅಂಡಮಾನ್‌ ಇಕಾಲಜಿ ಕುರಿತ ಅನೇಕ ಗ್ರಂಥಗಳನ್ನು ಬರೆದಿರುವ ಐಐಟಿ ವಿಜ್ಞಾನಿ ಪ್ರೊ. ಪಂಕಜ್‌ ಸೇಖ್‌ಸಾರಿಯಾ ನಿನ್ನೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ನಿಕೊಬಾರ್‌ ಅರಣ್ಯನಾಶಕ್ಕೆ ಪ್ರತಿಯಾಗಿ 970 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹರಿಯಾಣದಲ್ಲಿ ಬದಲೀ ಅರಣ್ಯ ಬೆಳೆಸಬೇಕೆಂದು ಆದೇಶ ನೀಡಲಾಗಿದೆ. ಹರಿಯಾಣ ರಾಜ್ಯದಲ್ಲಿ 2014ರಿಂದೀಚೆ ವಿವಿಧ ಅಭಿ ವೃದ್ಧಿ ಯೋಜನೆಗಳಿಗೆಂದು ಇದ್ದಬದ್ದ 80 ಚ.ಕಿ.ಮೀ ಅರಣ್ಯವನ್ನು ಸ್ವಾಹಾ ಮಾಡಿದ್ದು, ಅದಕ್ಕೆ ಪರಿಹಾರ ರೂಪಿ ಅರಣ್ಯದ ಹೇಳಹೆಸರಿಲ್ಲ. ಈಗ ನಿಕೊಬಾರ್‌ನ ದಟ್ಟ ಮಳೆಕಾಡಿಗೆ ಬದಲಿಯಾಗಿ ಅಲ್ಲಿ ಅಲ್ಲಲ್ಲಿ ತುಂಡು ತುಂಡು ಜಾಗದಲ್ಲಿ ಅರಣ್ಯ ಬೆಳೆಸಲಾಗುತ್ತದಂತೆ.

ಕಳೆದ ವರ್ಷ ಗ್ಲಾಸ್ಗೊದಲ್ಲಿ ನರೇಂದ್ರ ಮೋದಿಯವರ ಭಾಷಣ ಮೋಹಕವಾಗಿತ್ತು. 2015ರ ಪ್ಯಾರಿಸ್‌ ಸಮ್ಮೇ ಳನದ ತಮ್ಮದೇ ಭಾಷಣವನ್ನು ನೆನಪಿಸಿಕೊಂಡ ಅವರು, ವೇದಕಾಲೀನ ಶ್ಲೋಕವೊಂದನ್ನು ಉದ್ಧರಿಸುತ್ತ ‘ನಾವೆಲ್ಲ ಸಂಘಟಿತರಾಗಿ, ಏಕೋಭಾವದಿಂದ ಶ್ರಮಿಸಿದರೆ ಪೃಥ್ವಿ ಯನ್ನು ಈ ಸಂಕಟದಿಂದ ಪಾರುಮಾಡಲು ಸಾಧ್ಯ’ ಎಂದು ಹೇಳಿದ್ದರು. ಈ ವರ್ಷದ ಸಮ್ಮೇಳನದಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು