ಸೋಮವಾರ, ಆಗಸ್ಟ್ 15, 2022
25 °C
ಪ್ರಪಾತದಂಚಿನ ಪೃಥ್ವಿಯನ್ನು ನೋಡಲೆಂದು ಹೊಸ ರಿವೆಂಜ್‌ ಟೂರಿಸಂ ಆರಂಭವಾಗಿದೆ

ನಾಗೇಶ ಹೆಗಡೆ ಲೇಖನ: ನಿಸರ್ಗವೇ ಘೋಷಿಸುವ ಲಾಕ್‌ಡೌನ್‌

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಅನ್‌ಲಾಕ್‌ ಘೋಷಣೆಯಾಗಿದ್ದೇ ತಡ, ಪುತಪುತನೆ ಜನರೆಲ್ಲ ರಸ್ತೆಗೆ ನುಗ್ಗುತ್ತಿದ್ದಾರೆ. ನಮ್ಮಲ್ಲೇನೊ ಜನರು ತಂತಮ್ಮ ಸಮೀಪದ ಮಾರುಕಟ್ಟೆ, ಮಾಲ್‌, ಹೊಟೆಲ್‌ ಗಳಲ್ಲೇ ಜಮಾಯಿಸುತ್ತಿದ್ದಾರೆ. ಉತ್ತರ ಭಾರತದ ಜನರು ಪ್ರವಾಸೀಧಾಮಗಳ ಕಡೆಗೆ ನುಗ್ಗುತ್ತಿರುವ ಪರಿ ನೋಡಬೇಕು! ಶಿಮ್ಲಾ, ಮನಾಲಿ, ನೈನಿತಾಲ್‌, ಧರ್ಮಶಾಲಾ ಮುಂತಾದ ತಂಪುಹವೆಯ ತಾಣಗಳಲ್ಲಿ ಅದೆಷ್ಟು ರಷ್‌ ಆಗುತ್ತಿದೆ ಎಂದರೆ ಹೊಟೆಲ್‌ಗಳಲ್ಲಿ ರೂಮ್‌ ಸಿಗದೇ ಕಾರಿನಲ್ಲೇ ಮಲಗುತ್ತಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಆಸ್ಪತ್ರೆಗಳಲ್ಲಿ ಜಾಗ ಸಿಗದೇ ಆಂಬುಲೆನ್ಸ್‌ಗಳಲ್ಲೇ ಏದುಸಿರು ಬಿಡುತ್ತಿದ್ದ ಸಮಾಜ ಈಗ ಹಠಾತ್‌ ಪುಟಿದೆದ್ದಿದೆ.

ನಮ್ಮ ದೇಶದಲ್ಲಷ್ಟೇ ಅಲ್ಲ, ಜಗತ್ತಿನ ಎಲ್ಲ ಕಡೆ ಅನುಕೂಲಸ್ಥರು ಪ್ರವಾಸೀಧಾಮಗಳ ಕಡೆಗೆ ಗುಳೆ ಹೊರಟಿದ್ದಾರೆ. ಇಂಥ ಪುಟಿನೆಗೆತಕ್ಕೆ ‘ರಿವೆಂಜ್‌ ಟೂರಿಸಂ’ (ಪ್ರತೀಕಾರ ಪ್ರವಾಸೋದ್ಯಮ) ಎಂಬ ಹೊಸ ಹೆಸರೂ ಬಂದಿದೆ. ಹಿಂದಿನ ಟೆಂಪಲ್‌ ಟೂರಿಸಂ, ನೇಚರ್‌ ಟೂರಿಸಂ ಜೊತೆಗೆ ಹೊಸದಾಗಿ ಕ್ರೀಡಾ ಟೂರಿಸಂ, ಕೃಷಿ ಟೂರಿಸಂ, ಹಿಮ ಟೂರಿಸಂ, ಮೆಡಿಕಲ್‌ ಟೂರಿಸಂ ಬಂತು. ಆಮೇಲೆ ಚೆರ್ನೊಬಿಲ್‌ನಂಥ ಕರಾಳ ಪ್ರದೇಶಗಳನ್ನು ತೋರಿಸುವ ‘ಡಾರ್ಕ್‌ ಟೂರಿಸಂ’ ಕೂಡ ಬಂತು. ಇನ್ನೇನು ಸ್ಪೇಸ್‌ ಟೂರಿಸಂ ಬರಲಿದೆ. ಈಗ ಈ ಪಟ್ಟಿಗೆ ‘ರಿವೆಂಜ್‌ ಟೂರಿಸಂ’ ಸೇರಿದೆ. ಇಲ್ಲಿ ಸೇಡು ಯಾವುದರ ವಿರುದ್ಧ? ಕೊರೊನಾ ವಿರುದ್ಧವಂತೆ. ಇಷ್ಟು ದಿನ ಈ ಕೋವಿಡ್‌ ಪೀಡೆ ತಮ್ಮನ್ನು ಕೈಕಾಲು ಕಟ್ಟಿ ಕೂರಿಸಿದ್ದಕ್ಕೆ ಸಿಡಿದೆದ್ದು ಅನುಕೂಲಸ್ಥರು ಕಾರು, ವಿಮಾನವೇರಿ ಹಿಂದಿಗಿಂತ ಗಡದ್ದಾಗಿ ಮಜಾ ಉಡಾಯಿಸಬಯಸಿದ್ದಾರೆ.

ಮಹಾಸಾಂಕ್ರಾಮಿಕದಿಂದಾಗಿ ಪೂರ್ತಿ ನೆಲಕಚ್ಚಿದ್ದ ಪ್ರವಾಸೋದ್ಯಮ ಮತ್ತೆ ಗೆಲುವಾಗುತ್ತಿದ್ದರೆ- ಅದು ಸಂತಸದ ಸಂಗತಿಯೇ ಹೌದಾದರೂ ಜಾಗತಿಕ ದೃಷ್ಟಿ ಯಲ್ಲಿ ಆತಂಕ ತರುವಂತಿದೆ. ಕೊರೊನಾ ದಾಳಿಯಿಂದಾಗಿ ಮನುಷ್ಯನ ದಾಹಕ್ಕೆ ತುಸು ಬ್ರೇಕ್‌ ಬಿದ್ದಂತಾಗಿ ಪೃಥ್ವಿಯ ಒಟ್ಟಾರೆ ವ್ಯವಸ್ಥೆ ಚೇತರಿಸಿಕೊಂಡೀತೇನೊ ಎಂದು ಇಕೋತ್ತಮರು ಆಶಿಸಿದ್ದರು. ಮೊದಲ ಲಾಕ್‌ಡೌನ್‌ ಅವಧಿ ಯಲ್ಲಿ ಅಂಥ ಲಕ್ಷಣಗಳು ಕಂಡಿದ್ದವು. ವಾಯುಮಂಡಲ ಸ್ವಚ್ಛವಾಗಿತ್ತು; ಕೊಳಕು ನದಿಗಳು ಹಾಗೂ ಕಡಲಂಚುಗಳು ಚೊಕ್ಕಟಗೊಂಡಿದ್ದವು. ವನ್ಯಜೀವಿಗಳು ರಸ್ತೆಗಳಲ್ಲಿ ಓಡಾಡುತ್ತಿದ್ದವು. ಹೊಂಜಿನಲ್ಲಿ ಮುಳುಗಿದ್ದ ಚೀನಾದ ನಗರಗಳನ್ನು ಬಾಹ್ಯಾಕಾಶದಿಂದ ನಿಚ್ಚಳವಾಗಿ ನೋಡಬಹುದಿತ್ತು. ಆದರೆ ಅಂಥ ಚೇತರಿಕೆ ಕ್ಷಣಿಕವಾಗಿತ್ತು. ಈ ಬಾರಿಯಂತೂ ಲಾಕ್‌ಡೌನ್‌ ವಿಧಾನವೇ ಜಾಳುಜಾಳಾಗಿದ್ದರಿಂದ ಜೀವಮಂಡಲದ ಚೇತರಿಕೆಯ ಅಷ್ಟಿಷ್ಟು ಲಕ್ಷಣಗಳೂ ದಾಖಲಾಗಲಿಲ್ಲ.

 ಪೃಥ್ವಿಯ ಇಡೀ ಜೀವಗೋಲ ಒಂದೇ ಜೀವಿಯಂತೆ, ಒಂದು ಜೈವಿಕಯಂತ್ರದಂತೆ ವರ್ತಿಸುತ್ತದೆಂದು ಅನೇಕ ವಿಜ್ಞಾನಿಗಳು ವಾದಿಸುತ್ತಾರೆ. ಇದಕ್ಕೆ ಗೇಯಾ ಸಿದ್ಧಾಂತ ಎನ್ನುತ್ತಾರೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಆರಂಭದ ವಾಕ್ಯಗಳಲ್ಲಿ ಕುವೆಂಪು ಹೇಳಿದಂತೆ, ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ; ಯಾವುದೂ ವ್ಯರ್ಥವಲ್ಲ’. ಯಾವುದೋ ಒಂದು ಜೀವಿ ತಾನೇ ಅತಿಮುಖ್ಯ ಅಂದು ಕೊಂಡು ತೀರ ಅತಿರೇಕದಿಂದ ವರ್ತಿಸತೊಡಗಿದರೆ ಅಂಥ ಜೀವಿಯನ್ನು ನಿಯಂತ್ರಿಸುವ ನಾನಾ ಸೂತ್ರಗಳು ನಿಸರ್ಗದಲ್ಲಿವೆ ಎಂಬುದಕ್ಕೆ ನೂರಾರು ಸಾಕ್ಷ್ಯಗಳಿದ್ದವು. ಆ ಸೂತ್ರಗಳ ಪ್ರಕಾರವೇ ಮನುಷ್ಯರ ಸಂಖ್ಯೆಯೂ ನಿಯಂತ್ರಣದಲ್ಲಿತ್ತು. ಆದರೆ ಇವನಿಗೆ ಫಾಸಿಲ್‌ ಶಕ್ತಿ ಮೂಲಗಳು ಲಭಿಸಿದ್ದೇ ತಡ, ದೂರದೂರದಲ್ಲಿದ್ದ ಚುರುಕು ಮಿದುಳುಗಳು ಒಂದಕ್ಕೊಂದು ಬೆಸುಗೆಯಾಗುತ್ತ ಮನುಷ್ಯನ ಸೂಪರ್‌ ಮಿದುಳು ರೂಪುಗೊಂಡಿತು. ಕೇವಲ ನೂರೈವತ್ತು ವರ್ಷಗಳಲ್ಲಿ ವೈದ್ಯಕೀಯ ಕ್ರಾಂತಿ, ಕೃಷಿ ಕ್ರಾಂತಿ, ಸಂಪರ್ಕ ಕ್ರಾಂತಿ, ಡಿಜಿಟಲ್‌ ಕ್ರಾಂತಿಗಳ ಕೊಡೆ ಬಿಚ್ಚುತ್ತ ಹೋದಂತೆ ಪ್ರಕೃತಿಯ ಎಲ್ಲ ಸೂತ್ರಗಳೂ ಶಿಥಿಲವಾಗುತ್ತ ತುಂಡಾಗುತ್ತ ಹೋದವು.

ವಿಜ್ಞಾನವನ್ನು ಬದಿಗಿಟ್ಟು, ಸಹಜ ಚಿಂತನೆಯೆಂಬಂತೆ ನೋಡಿದವರಿಗೂ ಗೇಯಾಶಕ್ತಿ ಈಗ ಮನುಷ್ಯನ ವಿರುದ್ಧ ಪ್ರತೀಕಾರಕ್ಕೆ ಹೊರಟಂತೆ ಕಾಣುತ್ತದೆ. ಈ ಫಾಸಿಲ್‌ ಶಕ್ತಿಗಳಿಂದಾಗಿಯೇ ಭೂತಾಪಮಾನ ಹೆಚ್ಚುತ್ತ ಋತುಮಾನಗಳೆಲ್ಲ ಎರ‍್ರಾಬಿರ‍್ರಿಯಾಗುತ್ತಿವೆ; ಅದು ಸಾಲದಂತೆ ಯಃಕಶ್ಚಿತ ವೈರಾಣುವೊಂದು ಮನುಷ್ಯರಿಗೂ ಕಾರ್ಖಾನೆಗಳಿಗೂ ದೇಗುಲಗಳಿಗೂ ದಿಗ್ಬಂಧನ ಹಾಕಿ ಕೂರಿಸಿತು. ನಾವು ಇದರಿಂದ ಪಾಠ ಕಲಿಯುವ ಬದಲು, ಈಗ ಕೊಂಚ ಬಿಡುಗಡೆ ಸಿಕ್ಕಿದ್ದೇ ತಡ, ಪ್ರಕೃತಿಗೇ ಸಡ್ಡು ಹೊಡೆದಂತೆ ಸೇಡಿನ ಪ್ರವಾಸೋದ್ಯಮಕ್ಕೆ ಹೊರಟೆವಲ್ಲ!

ನಮ್ಮ ದೇಶದ ವಿಲಾಸಿಗಳು ಗಿರಿಧಾಮಗಳಿಗೆ ಧಾವಿಸುತ್ತಿದ್ದರೆ ಯುರೋಪ್‌ನಲ್ಲಿ ಜನರು ಬಿಸಿಲನ್ನು ಹುಡುಕಿಕೊಂಡು ಕಡಲತೀರಕ್ಕೆ ಧಾವಿಸುತ್ತಿದ್ದಾರೆ. ಅಲ್ಲಿ ಬಿಡಿ, ಎಲ್ಲರಿಗೂ ಲಸಿಕೆ ಸಿಕ್ಕಿದೆ. ನಮ್ಮಲ್ಲಿ ಶೇ 95ರಷ್ಟು ಜನರಿಗೆ ಲಸಿಕೆ ಈಗಲೂ ಮರೀಚಿಕೆ ಆಗಿರುವಾಗ ಈ ಪ್ರವಾಸಿಗರು ಮೂರನೇ ಅಲೆಗೆ ರಣವೀಳ್ಯ ಕೊಡಲೆಂದೇ ಹೊರಟಂತೆ ಕಾಣುತ್ತದೆ. ಸುಸ್ಥಿರ ಬದುಕಿನ ಸೂತ್ರಗಳನ್ನು (ಪ್ರಯಾಣ ಕಮ್ಮಿ ಮಾಡಿ; ಸಂಚಾರಕ್ಕೆ ಸಾಧ್ಯವಿದ್ದಷ್ಟೂ ಸಾಮೂಹಿಕ ಸಾರಿಗೆಯನ್ನೇ ಬಳಸಿ; ಸ್ಥಳೀಯ ವಸ್ತುಗಳನ್ನೇ ಖರೀದಿಸಿ, ಮಾಂಸ ಭಕ್ಷಣೆ ಕಮ್ಮಿ ಮಾಡಿ, ಸೈಕ್ಲಿಂಗ್‌ ಮಾಡಿ, ರೀಸೈಕ್ಲಿಂಗ್‌ ಮಾಡಿ- ಇಂಥ ಕೆಲವನ್ನು) ಹೀಗೆ ಧಿಕ್ಕರಿಸಿ ಹೊರಟರೆ ಪ್ರಕೃತಿ ಬೇರೆ ಬಗೆಯ ಲಾಕ್‌ಡೌನ್‌ ಹೇರಬಹುದಲ್ಲವೆ?

ಬೇರೆಬಗೆಯ ಲಾಕ್‌ಡೌನ್‌ ಹೇಗಿರುತ್ತದೆ ನೋಡಲು ಉತ್ತರ ಅಮೆರಿಕಕ್ಕೆ ಬನ್ನಿ. ಕೆನಡಾದಲ್ಲಿ ಕಳೆದೆರಡು ವಾರಗಳ ಉಗ್ರ ಬೇಸಿಗೆಯಿಂದಾಗಿ ಈಗಾಗಲೇ 800ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಅಮೆರಿಕದ ವಾಯವ್ಯದ ಏಳು ರಾಜ್ಯಗಳಲ್ಲಿ ಶಾಖಮಾರುತ ತೀವ್ರವಾಗಿದ್ದು ಬೇರೆ ಬೇರೆ ಊರುಗಳಲ್ಲಿ ಇದುವರೆಗೆ ಮೂರೂವರೆ ಕೋಟಿ ತುರ್ತು ಅಲರ್ಟ್‌ಗಳ ಘೋಷಣೆಯಾಗಿದೆ.

ಕೆನಡಾದ ಬಿಸಿಝಳದ ವಿಪರ್ಯಾಸ ಏನೆಂದರೆ, ಜಗತ್ತಿನ ಅತಿ ವಿಶಾಲ ಹಿಮ ಸರೋವರಗಳೂ ಹಿಮದ್ವೀಪಗಳೂ ಹಿಮಟೂರಿಸಂ ಕೇಂದ್ರಗಳೂ ಅಲ್ಲಿವೆ. ಹಿಮವನ್ನೇ ಹಾಸು ಹೊದ್ದ ದೇಶಕ್ಕೆ ಈಗ 47 ಡಿಗ್ರಿ ಸೆ. ಸೆಕೆಯ ಬಿಸಿಗಂಬಳಿ ಸುತ್ತಿಕೊಂಡಿದೆ. ಶಾಲೆ-ಕಾಲೇಜುಗಳು ಬಂದ್‌ ಆಗಿವೆ. ಕೆನಡಾದ ವ್ಯಾಂಕೊವರ್‌, ಅಮೆರಿಕದ ಪೋರ್ಟ್‌ಲ್ಯಾಂಡ್‌ ಮತ್ತು ಸಿಯಾಟ್ಲ್‌ ನಗರಗಳು ಸದ್ಯಕ್ಕೆ ಜಗತ್ತಿನ ಅತಿತಾಪದ ನಗರಗಳೆನಿಸಿವೆ.

ಅಲ್ಲಿನ ಈ ವಿಲಕ್ಷಣ ಉರಿವಲಯಕ್ಕೆ ‘ಶಾಖ ಗೋಪುರ’ (ಹೀಟ್‌ ಡೋಮ್‌) ಕಾರಣ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಈ ವಿಶಾಲ ಗೋಪುರ ದೊಳಕ್ಕೆ ಮೋಡವಂತೂ ನುಗ್ಗಲಾರದು; ಕಡಲತೀರದ ತಂಪುಗಾಳಿಯೂ ಅದನ್ನು ಸುತ್ತುಬಳಸಿಕೊಂಡು ಹೋಗುತ್ತದೆ. ಅಲ್ಲಿ ಬದುಕಬೇಕೆಂದರೆ ಮತ್ತಷ್ಟು ಫಾಸಿಲ್‌ ಇಂಧನಗಳನ್ನು ಉರಿಸಬೇಕಾಗುತ್ತದೆ. ಎರಡು ವರ್ಷಗಳ ಹಿಂದೆ ಕತಾರ್‌ ದೇಶದಲ್ಲಿ ಇಂಥದೇ ಉರಿವಲಯ ಸೃಷ್ಟಿಯಾದಾಗ ಅಲ್ಲಿನ ರಾಜಧಾನಿ ದೋಹಾದಲ್ಲಿ ಮತ್ತಷ್ಟು ಪೆಟ್ರೋಲ್‌ ಉರಿಸಿ ಫುಟ್‌ಪಾತ್‌, ಕ್ರೀಡಾಂಗಣ ಸೇರಿದಂತೆ ನಗರದ ಬಹುಭಾಗಕ್ಕೆ ಏರ್‌ಕಂಡೀಶನಿಂಗ್‌ ಮಾಡಲಾಗಿತ್ತು. ಶ್ರೀಮಂತ ಸಮಾಜದ ಇಂಥ ಹೆಜ್ಜೆಗಳೇ ಭೂಮಿಯನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತವೆ ಎಂಬುದಕ್ಕೆ ಉದಾಹರಣೆ ಸಿಕ್ಕಿತ್ತು.

ಶಾಖಗೋಪುರದ ಮಾದರಿಯಲ್ಲೇ ಪ್ರಕೃತಿ ಸುಂಟರಗಾಳಿ, ನೆರೆಹಾವಳಿಯನ್ನೂ ಸೃಷ್ಟಿಸಿ ಲಾಕ್‌ಡೌನ್‌ ಘೋಷಣೆ ಮಾಡುತ್ತದೆ. ಅದಕ್ಕೆ ಬಲಿಯಾಗುವವರು ಮಾತ್ರ ಹೆಚ್ಚಾಗಿ ದುರ್ಬಲ ಜೀವಿಗಳೇ. ಹತ್ತಾರು ದಿನಗಳ ಕಾಲ ದಟ್ಟ ನಿಶ್ಚಲ ಹೊಂಜು ಮುಸುಕಿದ್ದರಿಂದ ಐದು ವರ್ಷಗಳ ಹಿಂದೆ ದಿಲ್ಲಿ ನಗರವೇ ಬಹುತೇಕ ಲಾಕ್‌ಡೌನ್‌ ಆಗಿತ್ತು. ಮನೆಯಲ್ಲಿದ್ದವರೂ ಮುಖವಾಡ ಧರಿಸಬೇಕಾದ ಸ್ಥಿತಿ ಬಂದಿತ್ತು. ದಿಲ್ಲಿಯ ಒಂದೆರಡು ಬಡಾವಣೆಗಳ ಹೊಗೆಯನ್ನೆಲ್ಲ ಹೀರಿ ತೆಗೆಯಲೆಂದು ಈಗ ಕುತುಬ್‌ ಮಿನಾರ್‌ ಮಾದರಿಯ 25 ಮೀಟರ್‌ ಎತ್ತರದ ಎರಡು ಗೋಪುರಗಳು ಅಲ್ಲಿ ತಲೆ ಎತ್ತಿವೆ. ಭಾರೀ ಗಾತ್ರದ ಫ್ಯಾನ್‌ಗಳು ಹೊಗೆಯನ್ನು ಒಳಕ್ಕೆಳೆದು ಸೋಸಿ ಬಿಡುತ್ತ ಉಲ್ಟಾ ಶ್ವಾಸಕೋಶಗಳಂತಿರುತ್ತವೆ. ಎಲ್ಲ ಸರಿಹೋದರೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂದು ಅವು ಕೆಲಸ ಆರಂಭಿಸುತ್ತವಂತೆ.

ಶ್ವಾಸಕೋಶಕ್ಕೆ ಯಂತ್ರಗಳ ಮೂಲಕ ಆಮ್ಲಜನಕವನ್ನು ತುಂಬಿದ ನಾವು, ಈಗ ಇಡೀ ನಗರಕ್ಕೆ ಕೃತಕ ಶ್ವಾಸಕೋಶಗಳನ್ನು ಜೋಡಿಸುವ ಹೊಸಯುಗಕ್ಕೆ ಪದಾರ್ಪಣೆ ಮಾಡಲಿದ್ದೇವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು