ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖವಾಡದ ಹಿಂದೆ ಭಯದ ವೈರಸ್ಸು

ಭಾರತೀಯರಲ್ಲಿ ರೋಗನಿರೋಧಕ ಶಕ್ತಿ ಪ್ರಬಲವಾಗಿದೆ; ಸುದ್ದಿನಿರೋಧಕ ಶಕ್ತಿ...?
Last Updated 11 ಮಾರ್ಚ್ 2020, 19:40 IST
ಅಕ್ಷರ ಗಾತ್ರ

ಹದಿನೇಳು ವರ್ಷಗಳ ಹಿಂದೆ, 2003ರಲ್ಲಿ ಇದೇ ಕೊರೊನಾ ವೈರಸ್, ಇದೇ ಚೀನಾದ ಗ್ವಾಂಗ್ಡೊಂಗ್ ಎಂಬಲ್ಲಿ, ಇದೇ ರೀತಿ ಕಾಡುಪ್ರಾಣಿಗಳ ಮಾಂಸದ ಸಂತೆಯಲ್ಲಿ ಉದಯಿಸಿ ಬೀಜಿಂಗ್ ನಗರದಲ್ಲಿ ಪ್ರಳಯಾಂತಕ ರೂಪ ತಾಳಿತ್ತು. ಆಗಲೂ ಹೀಗೇ ಅದು ಅಲ್ಲಿಂದ 26 ದೇಶಗಳಿಗೆ ಹಬ್ಬಿ, ವಾಣಿಜ್ಯ ರಂಗದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿ ತಣ್ಣಗಾಗಿತ್ತು. ಆಗ ಅದನ್ನು ‘ಸಾರ್ಸ್’ ಎಂದು ಹೆಸರಿಸಿದ್ದರು. ‘ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್’ ಅರ್ಥಾತ್ ಉಸಿರಾಟಕ್ಕೆ ಸಂಬಂಧಿಸಿದ ಸಖತ್ ಉಗ್ರ ಲಕ್ಷಣವುಳ್ಳ ಕಾಯಿಲೆ ಎಂದು ಅದು ಪ್ರಸಿದ್ಧಿ ಪಡೆದು 774 ಜನರನ್ನು ಬಲಿ ಪಡೆದಿತ್ತು.

ಆಗ ಅದಕ್ಕೆ ಔಷಧ ಅಥವಾ ಲಸಿಕೆಯನ್ನು ತಯಾರಿಸಿರಬೇಕಲ್ಲ? ಅದನ್ನೇಕೆ ಈಗ ಬಳಸಬಾರದು ಎಂದು ಅನೇಕರು ಕೇಳುತ್ತಿದ್ದಾರೆ. ಕೊರೊನಾ ಎಂಬುದು ನೆಗಡಿ ಉಂಟು ಮಾಡುವ ಪ್ರಭೇದಕ್ಕೆ ಸೇರಿದ ಅರೆಜೀವಿ. (‘ಕೊರೊನಾ’ ಅಂದರೆ ಕಿರೀಟ ಅಥವಾ ಮುಕುಟ. ಈ ವೈರಸ್ಸಿನ ಮೈಮೇಲಿನ ಮುಳ್ಳುಗಳು ರಾಜರಾಣಿಯರ ಕಿರೀಟದ ಮೇಲಿನ ಗುಬುಟುಗಳ ಹಾಗೆ ಕಾಣುತ್ತವೆ). ಅದು ತಾನು ಬದುಕುಳಿಯಲೆಂದು ಆಗಾಗ ತನ್ನ ಹೊರಕವಚದ ಸ್ವರೂಪವನ್ನು ಬದಲಿಸುತ್ತಿರುತ್ತದೆ.

ಯಾವುದೇ ವೈರಸ್ಸನ್ನು ಪ್ರತಿಬಂಧಿಸಬಲ್ಲ ಔಷಧವನ್ನು ಸೃಷ್ಟಿಸಲು ತಜ್ಞರಿಗೆ ಕನಿಷ್ಠ ಎರಡು ತಿಂಗಳಾದರೂ ಬೇಕು. ಅದನ್ನು ಒಂದೈವತ್ತು ಜನರ ಮೇಲೆ ಪ್ರಯೋಗಿಸಿ, ಅದು ಪರಿಣಾಮಕಾರಿ ಎಂದು ಖಾತರಿಯಾದ ನಂತರ, ಎರಡನೆಯ ಹಂತದಲ್ಲಿ ಒಂದೆರಡು ಸಾವಿರ ರೋಗಿಗಳಿಗೆ ಅದನ್ನು ಕೊಟ್ಟು ನೋಡಬೇಕು. ಅದಕ್ಕೆ ಒಂದೆರಡು ವರ್ಷಗಳೇ ಬೇಕು. ಆನಂತರವೇ ಲಸಿಕೆಯ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಆರಂಭವಾಗಬೇಕು.

ಸಾರ್ಸ್ ಸಂದರ್ಭದಲ್ಲಿ ಲಸಿಕೆ ಬರುವ ಮೊದಲೇ ವೈರಾಣು ಪ್ರಭಾವ ಎಲ್ಲೆಡೆ ತಾನಾಗಿ ಕಡಿಮೆಯಾಗಿತ್ತು. ಆ ಔಷಧವನ್ನು ಈಗ ಪ್ರಯೋಗಿಸಲು ಸಾಧ್ಯವಿಲ್ಲ- ಏಕೆಂದರೆ ಈಗ ವೈರಸ್ಸಿನ ವೇಷ ಬದಲಾಗಿದೆ. ‘ಕೊರೊನಾ–2’ ಎಂಬ ಹೊಸ ಹೆಸರೂ ಬಂದಿದೆ. ಅದಕ್ಕೆ ಬೇರೆ ಔಷಧವನ್ನೇ ಸೃಷ್ಟಿಸಬೇಕು. ಯತ್ನಗಳೇನೊ ನಡೆದಿವೆ. ಆದರೆ ಹೊಸ ಔಷಧ ನಮಗೆ ಲಭ್ಯವಾಗುವ ಮೊದಲೇ ವೈರಸ್ಸೇ ಕಣ್ಮರೆಯಾಗಬಹುದು ಅಥವಾ ಹೊಸ ರೂಪದಲ್ಲಿ ಮತ್ತೆಂದೋ ತಲೆಯೆತ್ತಬಹುದು.

ಇಷ್ಟಕ್ಕೂ ‘ಕೊರೊನಾಕ್ಕೆ ಔಷಧ ಯಾಕಿಲ್ಲ’ ಎಂಬ ಪ್ರಶ್ನೆಯೇ ಅಸಂಗತ. ಅಮೆರಿಕದಲ್ಲಿ ಫ್ಲೂ ಜ್ವರಕ್ಕೆ (ಇನ್‍ಫ್ಲುಯೆಂಝಾ) ಲಸಿಕೆ ಇದ್ದರೂ ಕಳೆದ ವರ್ಷ ಅಲ್ಲಿ 18 ಸಾವಿರ ಜನರು ಫ್ಲೂದಿಂದಾಗಿ ಸತ್ತಿದ್ದಾರೆ (ಭಾರತದಲ್ಲಿ ಆ ಜ್ವರಕ್ಕೆ ವರ್ಷಕ್ಕೆ ಬರೀ 1,103 ಜನ ಸಾಯುತ್ತಾರೆ; ನಾವು ಗಟ್ಟಿ ಜನ). ಅಲ್ಲಿ ಕೋವಿಡ್‌ಗೆ ಜೀವ ತೆತ್ತವರ ಸಂಖ್ಯೆ ಈಗಿನ್ನೂ 20 ಕೂಡ ತಲುಪಿಲ್ಲ. ನಮ್ಮ ದೇಶದಲ್ಲಿ ಔಷಧವೇ ಬೇಕಿಲ್ಲದ, ಶುಶ್ರೂಷೆಯಿಂದಲೇ ವಾಸಿ ಮಾಡಬಹುದಾದ ಅತಿಸಾರಕ್ಕೆ (ಡಯರಿಯಾ) ಪ್ರತಿದಿನವೂ ಅಂದಾಜು 250 ಎಳೆ ಮಕ್ಕಳು ಸಾಯುತ್ತವೆ. ಔಷಧವಿದ್ದರೆ ಸಾಕೆ? ಹುಚ್ಚುನಾಯಿಯ ಕಡಿತದಿಂದ ಬರುವ ರೇಬೀಸ್ ರೋಗಕ್ಕೆ ಖಚಿತ ಔಷಧವಿದೆ. ನೂರಕ್ಕೆ ನೂರು ವಾಸಿಯಾಗಬಹುದಾದ ಲಸಿಕೆ ಅದು. ಆದರೂ ನಮ್ಮ ದೇಶದಲ್ಲಿ ಪ್ರತಿವರ್ಷ ಅಂದಾಜು 20 ಸಾವಿರ ಜನರು ರೇಬೀಸ್‍ನಿಂದಾಗಿ ಸಾಯುತ್ತಾರೆ.

ಕ್ಷಯರೋಗವನ್ನು ವಾಸಿ ಮಾಡಬಲ್ಲ ಔಷಧ ಸಂಯುಕ್ತಗಳಿವೆ. ಆದರೂ ಪ್ರತಿವರ್ಷ ಅಂದಾಜು ನಾಲ್ಕೂವರೆ ಲಕ್ಷ ಜನರು (ಅಂದರೆ ದಿನವೊಂದಕ್ಕೆ ಸರಾಸರಿ 1,200 ಜನರು!) ಸಾಯುತ್ತಿದ್ದಾರೆ. ಇಂತಹ ನಿತ್ಯದುರಂತಗಳಿಗೆ, ಅದರಿಂದಾಗುವ ರಾಷ್ಟ್ರೀಯ ಅಪಮಾನಕ್ಕೆ ಎಂದೂ ತಲೆಕೆಡಿಸಿಕೊಳ್ಳದ ನಮ್ಮ ಸಮಾಜ ಯಃಕಶ್ಚಿತ್‌ ಕೊರೊನಾ ವೈರಸ್‍ಗೆ ಇಷ್ಟೇಕೆ ಥಕಥೈ ಮಾಡುತ್ತದೊ?

ಹಾಗೆ ನೋಡಿದರೆ ಕೊರೊನಾ ತೀರ ದುರ್ಬಲ ವೈರಸ್. ಅದು ಗಾಳಿಯಲ್ಲಿ ತಾನಾಗಿ ಹರಡಲಾರದು. ಮಕ್ಕಳಿಗೆ, ಯುವಜನರಿಗೆ ಅದು ಪ್ರಾಣಾಂತಿಕವಲ್ಲ. ಆರೋಗ್ಯವಂತ ಹಿರಿಯರನ್ನೂ ಅದು ಬಲಿ ತೆಗೆದುಕೊಳ್ಳುವುದಿಲ್ಲ. ಶ್ವಸನಾಂಗಗಳಿಗಷ್ಟೇ ಅದರ ಪ್ರಭಾವ ಸೀಮಿತವಾಗಿದೆ. ಎಬೊಲಾ, ಝೀಕಾ, ನಿಪಾಃ, ಪೋಲಿಯೊ, ಮಂಗನ ಜ್ವರ, ಮಿದುಳುಜ್ವರದಂಥ ಕಾಯಿಲೆಗಳಷ್ಟು ತೊಂದರೆ ಕೊಡುವುದಿಲ್ಲ. ಆದರೂ ಇಂಥ ವೈರಾಣುಗಳ ವ್ಯಂಗ್ಯ ಏನು ಗೊತ್ತೆ? ಅತ್ಯಂತ ಉಗ್ರ ವೈರಾಣುವಿಗಿಂತ ತುಸು ಪೆದ್ದ ವೈರಾಣುವೇ ಹೆಚ್ಚು ಅಪಾಯಕಾರಿ ಆಗಬಹುದು. ಏಕೆಂದರೆ ಉಗ್ರ ವೈರಾಣುವು ತಾನು ಹೊಕ್ಕ ದೇಹವನ್ನು ಕೊಂದು ತಾನೂ ನಶಿಸುತ್ತದೆ. ಆದರೆ ಪೆದ್ದ ವೈರಾಣು ತುಂಬ ದಿನ ದೇಹದಲ್ಲಿದ್ದು ಜಾಸ್ತಿ ಜನರಿಗೆ ಕಾಯಿಲೆಯನ್ನು ಹಬ್ಬಿಸುತ್ತದೆ. ಕೊರೊನಾವನ್ನು ಪೆದ್ದ ಎಂದು ನಿರ್ಲಕ್ಷಿಸುವ ಹಾಗಿಲ್ಲ. ಹಾಗೆಂದು ಅದರೊಂದಿಗೆ ಜಿದ್ದಿಗೆ ಬಿದ್ದು ನಾವೂ ಪೆದ್ದರಾಗಬೇಕಿಲ್ಲ.

ಭಾರತದಲ್ಲಿ ಕೊರೊನಾ ವೈರಸ್‍ಗಿಂತ ಮುಖವಾಡಗಳ ಹುಚ್ಚೇ ಜೋರಾಗಿ ಹಬ್ಬುತ್ತಿದೆ. ವಾಸ್ತವ ಏನೆಂದರೆ, ಜ್ವರಪೀಡಿತ ವ್ಯಕ್ತಿಯೊಬ್ಬ ನಿಮ್ಮ ಮುಖದ ಬಳಿ ಬಂದು ಚುಂಬಿಸಿದರೆ ಅಥವಾ ಸೀನಿದರೆ ಮಾತ್ರ ಆ ಎಂಜಲಿನ ಮೂಲಕ ವೈರಸ್ ನಿಮಗೆ ಬಂದೀತು. ಸುಖಾಸುಮ್ಮನೆ ಅದು ಗಾಳಿಯಲ್ಲಿ ಹಾರುತ್ತಿರುವುದಿಲ್ಲ. ರೋಗಿಯೊಬ್ಬ ನೇರವಾಗಿ ಸೀನಿದರೆ ನೀವು ಮುಖವಾಡ ತೊಟ್ಟಿದ್ದರೂ ಅಷ್ಟೇನೂ ಪ್ರಯೋಜನವಿಲ್ಲ. ಏಕೆಂದರೆ ಕಣ್ಣುರೆಪ್ಪೆ, ಹಣೆ, ಕೆನ್ನೆ, ಕಿವಿಯ ಮೇಲೆ ವೈರಾಣು ಕೂತಿರಬಹುದು. ನೀವು ಮುಖ ಒರೆಸಿಕೊಂಡು ಬಸ್ ಹತ್ತುವಾಗ ನಿಮ್ಮ ಕೈಮೇಲಿದ್ದ ಅದು ಇನ್ನೊಬ್ಬರಿಗೆ ದಾಟಬಹುದು.

ಸ್ವತಃ ನೀವು ರೋಗಿಯಾಗಿದ್ದರೆ ಅಥವಾ ಆಸ್ಪತ್ರೆಯ ಸಿಬ್ಬಂದಿಯಾಗಿದ್ದರೆ ಮುಖವಾಡವನ್ನು ಖಂಡಿತ ತೊಡಿ. ಹೊಗೆ-ದೂಳಿಗೂ ಅದು ಒಳ್ಳೆಯದೇ. ನಿಮಗೆ ಜ್ವರದ ಸೋಂಕು ಇಲ್ಲವಾಗಿದ್ದರೆ ಭಯದ ಮುಖವಾಡವನ್ನು ಬದಿಗಿಟ್ಟು ನಿಮ್ಮ ಕೈ ಬಾಯಿ ಶುದ್ಧ ಇಟ್ಟುಕೊಳ್ಳಿ (ಅದಂತೂ ಎಲ್ಲ ಅರ್ಥದಲ್ಲೂ ಎಲ್ಲ ಕಾಲದಲ್ಲೂ ಒಳ್ಳೆಯದು); ಸಾಮಾನ್ಯ ನೆಗಡಿ-ಜ್ವರ ಬಂದರೆ ಆಗಮಾತ್ರ ಕಡೆಗಣಿಸಬೇಡಿ; ಇಮ್ಮಡಿ ಹುಷಾರಾಗಿರಿ. ಕೊರೊನಾ ಬಗ್ಗೆ ವಿಶ್ವಸನೀಯ ಮಾಹಿತಿ ಬೇಕೆಂದರೆ ವಿಶ್ವ ಸ್ವಾಸ್ಥ್ಯ ಸಂಸ್ಥೆಯ (ವಿಸ್ವಾಸಂ W.H.O.) ಅಧಿಕೃತ ಜಾಲತಾಣಕ್ಕೆ ಹೋಗಿ. ಹೆಮ್ಮಾರಿಯಂತೆ ಈ ಹಬ್ಬುತ್ತಿರುವ ಭಯದ ವೈರಸ್ಸನ್ನು- ಅದು ಎಪಿಡೆಮಿಕ್ ಅಲ್ಲ, ‘ಇನ್ಫೋಡೆಮಿಕ್’ (ಸುದ್ದಿಮಾರಿ) ಎಂದು ಹೆಸರಿಸಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಹಬ್ಬುತ್ತಿರುವ ಭಯದ ವೈರಸ್ಸನ್ನು ನಿಯಂತ್ರಿಸಲು ಯೂಟ್ಯೂಬ್, ಟ್ವಿಟರ್, ಫೇಸ್‍ಬುಕ್ ಮುಂತಾದ ಜಾಲಕಟ್ಟೆಗಳು ಅಹೋರಾತ್ರಿ ಹೆಣಗುತ್ತಿವೆ. ಬುರುಡೆ ಸುದ್ದಿಗಳನ್ನೂ ಸಾರಾಯಿ ಚಿಕಿತ್ಸೆ, ಸೆಗಣಿಚಿಕಿತ್ಸೆಯಂಥ ತರಲೆಗಳನ್ನೂ ಅವು ಕಿತ್ತು ಹಾಕುತ್ತಿವೆ. ಸುದ್ದಿಯೊಂದು ವೈರಲ್ ಆಗುವಂತೆ ತಾವೇ ಸೃಷ್ಟಿಸಿಕೊಂಡಿರುವ ಅಲ್ಗೊರಿದಮ್ ವಿರುದ್ಧ ಅವು ಸೆಣಸುತ್ತಿವೆ. ಆದರೂ ತರಲೆಸುದ್ದಿ, ಡೋಂಗಿ ಚಿತ್ರಗಳಿಗೆ ಗಿರಾಕಿ ಜಾಸ್ತಿ ಇರುವುದರಿಂದ ಅವೇ ರಕ್ತ ಬೀಜಾಸುರ ಆಗುತ್ತಿವೆ. ಇತ್ತ ಸಂಭಾವಿತ ಪತ್ರಕರ್ತರು ಅತಿರಂಜನೆಗೂ ಹೋಗದಂತೆ, ಸಾಚಾಸುದ್ದಿಯನ್ನು ಮರೆಮಾಚದಂತೆ ಹಗ್ಗದ ಮೇಲಿನ ನಡಿಗೆಯಲ್ಲಿದ್ದಾರೆ. ಚೀನೀಯರಿಗಿಂತ, ಕಕೇಶಿಯನ್ (ಬಿಳಿಯ) ಜನಾಂಗಕ್ಕಿಂತ ನಮ್ಮ ಭಾರತೀಯರಲ್ಲಿ ರೋಗನಿರೋಧಕ ಶಕ್ತಿ ಪ್ರಬಲವಾಗಿದೆ. ಆದರೆ ಸುಳ್ಳುಸುದ್ದಿಯ ನಿರೋಧಕ ಶಕ್ತಿಯನ್ನು ನಾವಿನ್ನೂ ಬೆಳೆಸಿಕೊಳ್ಳಬೇಕಾಗಿದೆ.

ಹದಿನೇಳು ವರ್ಷಗಳ ಹಿಂದೆ, ಸಾರ್ಸ್ ಸಂದರ್ಭದಲ್ಲಿ ಇದೇ ಅಂಕಣದಲ್ಲಿ ಕೊರೊನಾ ವೈರಸ್ ಬಗ್ಗೆ ಬರೆದಿದ್ದ ಮಾತುಗಳು ಈಗಲೂ ಇಲ್ಲಿ ಪ್ರಸ್ತುತವೆನ್ನಿಸಬಹುದು: ಮಂಗನಕಾಯಿಲೆ ಬಂತೆಂದು ಅಥವಾ ಕ್ಷಯ ಇದೆಯೆಂದು ಯಾರೂ ಮುಖವಾಡವನ್ನು ಧರಿಸುವುದಿಲ್ಲ. ಹಾಗಾಗಿ ಅವುಗಳ ಬಗ್ಗೆ ನಮಗೆ ಚಿಂತೆಯಿಲ್ಲ. ಈ ಕಾಯಿಲೆ ನಮ್ಮ ಜನರಿಗೆ ತೊಡಿಸುತ್ತಿರುವ ಮುಖವಾಡವೇ ನಮ್ಮಲ್ಲಿ ಭಯವನ್ನು ಹಬ್ಬಿಸುತ್ತಿದೆ.

ಕೈಯ ಮಹತ್ವವನ್ನು ಕಡೆಗಣಿಸಿದರೆ ಮುಖವಾಡದಿಂದಲೇ ಅಪಾಯ ಬಂದೀತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT