ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಕ್ಟರ್‌ಗಳೇ ಡಕಾಯಿತರಾದರೆ?

ವೈದ್ಯರಂಗದ ನೈತಿಕತೆಯನ್ನು ಪ್ರಶ್ನಿಸುವಾಗ ನಮ್ಮದನ್ನೂ ನಾವು ಪ್ರಶ್ನಿಸಬೇಕಲ್ಲ!
Last Updated 29 ನವೆಂಬರ್ 2018, 16:35 IST
ಅಕ್ಷರ ಗಾತ್ರ

ವೈದ್ಯಕೀಯ ರಂಗದ ಪಾಪಪುಣ್ಯಗಳ ಕುರಿತು ಚರ್ಚೆ ಮಾಡಲೆಂದು ಬೆಂಗಳೂರಿನಲ್ಲಿ ಇದೇ ಸೋಮವಾರದಿಂದ ವಿಶ್ವ ಸಮಾವೇಶ ಆರಂಭವಾಗಲಿದೆ. ಈ ಸಮಾಲೋಚನೆಗೆ ಜಗತ್ತಿನ ಖ್ಯಾತ ಡಾಕ್ಟರ್‌ಗಳು, ಮೆಡಿಕಲ್ ಬಿಸಿನೆಸ್ ತಜ್ಞರು, ಔಷಧ ಸಂಶೋಧಕರು, ಸರ್ಕಾರಿ ನೀತಿ ನಿರೂಪಕರು, ಸರ್ಕಾರೇತರ ಆರೋಗ್ಯ ಕಾರ್ಯಕರ್ತರು, ವರದಿಗಾರರು ನಾನಾ ದೇಶಗಳಿಂದ ಬರುತ್ತಿದ್ದಾರೆ.

ಅನುಕೂಲಸ್ಥ ರೋಗಿಗಳನ್ನು ಜಗತ್ತಿನ ಎಲ್ಲೆಡೆಗಳಿಂದ ತನ್ನತ್ತ ಸೆಳೆಯುವ ನಗರವೆಂದು ಬೆಂಗಳೂರು ಖ್ಯಾತಿ ಪಡೆದಿದೆ. ‘ಮೆಡಿಕಲ್ ಟೂರಿಸಂ ಸಿಟಿ’ ಎಂದು ವಿಶ್ವ ನಕಾಶೆಯಲ್ಲಿ ಛಾಪು ಮೂಡಿಸಿಕೊಂಡಿದೆ. ಕಸದ ರಾಶಿ, ಕೆರೆಗಳ ನೊರೆ, ತಿಪ್ಪೆಯ ಬೆಂಕಿಯೇ ಮುಂತಾದ ತನ್ನ ಕುಪ್ರಸಿದ್ಧ ಸಂಗತಿಗಳನ್ನೆಲ್ಲ ಬದಿಗೊತ್ತಿ, ಈಗ ಇದು ಒಂದಿಡೀ ವಾರ ಜಗತ್ತಿನ ವೈದ್ಯಲೋಕದ ಸುದ್ದಿ ಕೇಂದ್ರವಾಗಲಿದೆ.

ಸಮ್ಮೇಳನಕ್ಕೆಂದು ಸೇಂಟ್ ಜಾನ್ಸ್ ಆಸ್ಪತ್ರೆ ಆವರಣಕ್ಕೆ ಹೋಗುವ ಮುನ್ನ ಈ ನೈಜ ಘಟನೆಯನ್ನು ಓದಿ: ನಾಗರಾಜ್ ತಂದೆಗೆ ಲಕ್ವ ಹೊಡೆಯಿತು. 108ಕ್ಕೆ ನಾಗರಾಜ್ ಫೋನ್ ಹಚ್ಚಿದರು. ಸಾಕಷ್ಟು ತುರ್ತಾಗಿಯೇ ಅಂಬುಲೆನ್ಸ್ ಬಂತು. ಮೂರು ಕಿ.ಮೀ. ದೂರದಲ್ಲಿದ್ದ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ರೋಗಿಯನ್ನು ಒಯ್ಯಬೇಕಿತ್ತು. ಆದರೆ ಚಾಲಕ ಬೇಕಂತಲೇ ತಪ್ಪು ರಸ್ತೆ ಹಿಡಿದು ಅಲ್ಲಿ ಇಲ್ಲಿ ಸುತ್ತಿಸಿ, ಅವಸರ ಮಾಡಿ, ತನಗೆ ಗೊತ್ತಿದ್ದ ಹೈಟೆಕ್ ಆಸ್ಪತ್ರೆಗೆ ರೋಗಿಯನ್ನು ಒಯ್ದ. ನಂತರದ ಕತೆಯನ್ನು ನಾವೇ ಊಹಿಸಿಕೊಳ್ಳಬಹುದು.

ಮೆಡಿಕಲ್ ಕಾಲೇಜಿಗೆ ಹೋಗಿದ್ದಿದ್ದರೆ ಹೆಚ್ಚೆಂದರೆ ನಾಲ್ಕಾರು ಸಾವಿರ ರೂಪಾಯಿಗಳಲ್ಲಿ ಮುಗಿಯಬೇಕಿದ್ದ ಚಿಕಿತ್ಸೆಗೆ ಒಂದು ಲಕ್ಷ ತೆರಬೇಕಾಗಿ ಬಂತು. ಅಂಬುಲೆನ್ಸ್ ಚಾಲಕನಿಗೆ 15-20 ಪರ್ಸೆಂಟ್ ಕಮೀಶನ್ ಬಂತು.

108ರ ಇಂಥ ದಂಧೆಯ ಬಗ್ಗೆ ನೂರೆಂಟು ಕತೆಗಳಿವೆ, ತನಿಖಾ ವರದಿಗಳಿವೆ. ದಿಕ್ಕು ತೋಚದ ಸ್ಥಿತಿಯಲ್ಲಿ ಅಂಬುಲೆನ್ಸ್ ಕರೆಸಿದವರನ್ನು ದಿಕ್ಕು ತಪ್ಪಿಸುವ ಹಂತದಿಂದಲೇ ಆರಂಭವಾಗುತ್ತದೆ, ನತದೃಷ್ಟರ ಸಂಕಷ್ಟ ಸರಮಾಲೆ. ದಿಲ್ಲಿಯ ಆದ್ಯಾ ಸಿಂಗ್ ಎಂಬ ಏಳು ವರ್ಷದ ಹುಡುಗಿಯ ಕತೆ ಗೊತ್ತಲ್ಲ? ಡೆಂಗೀ ಜ್ವರಕ್ಕೆ ಸಿಲುಕಿದ ಅವಳನ್ನು 2017ರ ಸೆಪ್ಟೆಂಬರ್‌ನಲ್ಲಿ ಗುರುಗ್ರಾಮದ ಖ್ಯಾತ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಸಾವು ಬದುಕಿನ ನಡುವೆ ಅವಳ ಚಿಕಿತ್ಸೆಯ ಬಿಲ್ ಐದು ಲಕ್ಷ, ಹತ್ತು ಲಕ್ಷ ದಾಟಿ ಎರಡು ವಾರಗಳಲ್ಲಿ 15 ಲಕ್ಷ ತಲುಪುವ ವೇಳೆಗೆ ಆದ್ಯಗೆ ಪ್ರಜ್ಞೆ ತಪ್ಪಿತು. ಬೇರೊಂದು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಹುಡುಗಿ ಶವವಾದಳು. ಅವಳಿಗೆ ತೊಡಿಸಿದ್ದ ಹಸಿರು ಬಟ್ಟೆಯ ಶುಲ್ಕವನ್ನೂ ಸೇರಿಸಿ ಒಟ್ಟೂ ಬಿಲ್ ₹ 15.79 ಲಕ್ಷಕ್ಕೇರಿತ್ತು. ಈ ನಡುವೆ ಅವಳಿಗೆ 660 ಸಿರಿಂಜ್ ಇಂಜೆಕ್ಷನ್ ಕೊಟ್ಟೆವೆಂದೂ ಅವಳ ಚಿಕಿತ್ಸೆಯ ಸಂದರ್ಭದಲ್ಲಿ 1600 ಕೈಗವಸುಗಳು ಖರ್ಚಾದುವೆಂದೂ ಆಸ್ಪತ್ರೆ ಹೇಳಿತು.

ಅಷ್ಟಾಗಿ, ಪ್ರಜ್ಞಾಶೂನ್ಯ ಆದ್ಯಳನ್ನು ಹೊರಕ್ಕೆ ಕಳಿಸುವಾಗ ‘ಲಾಮಾ’ ದಾಖಲೆಗೆ ಅವಳ ಅಪ್ಪನ ಸಹಿ ಪಡೆಯಲಾಗಿತ್ತು. ‘ಲಾಮಾ’ ಅಂದರೆ ಲೀವ್ ಅಗೆನ್ಸ್ಟ್ ಮೆಡಿಕಲ್ ಅಡ್ವೈಸ್- ಅಂದರೆ ವೈದ್ಯರು ಬೇಡವೆಂದರೂ ರೋಗಿಯನ್ನು ಒಯ್ಯಲಾಯಿತು ಎಂಬ ಒಕ್ಕಣೆ. ಆದ್ಯಳ ಸಾವಿಗೆ ಫೋರ್ಟಿಸ್ ಆಸ್ಪತ್ರೆಯನ್ನು ಯಾರೂ ದೂರುವಂತಿಲ್ಲ.

ವೈದ್ಯಕೀಯ ರಂಗದಲ್ಲೇನೊ ಕ್ರಾಂತಿಕಾರಿ ಸುಧಾರಣೆಗಳಾಗಿವೆ. ರೋಗವನ್ನು ಗುರುತಿಸುವ ಡಯಾಗ್ನೋಸ್ಟಿಕ್ ತಂತ್ರಗಳಲ್ಲಿ ಅಪಾರ ಪ್ರಗತಿಯಾಗಿದೆ. ಶಸ್ತ್ರಚಿಕಿತ್ಸೆಯ ವಿಧಾನಗಳು ಮತ್ತು ಸಲಕರಣೆಗಳು ಭಾರಿ ಚುರುಕಾಗಿವೆ. ಮಿದುಳಿನಲ್ಲಿ ಬೆಳೆದ ಸಾಸಿವೆ ಕಾಳಿನಷ್ಟು ಚಿಕ್ಕ ಗಡ್ಡೆಯನ್ನೂ ಹುಷಾರಾಗಿ ತೆಗೆಯಬಲ್ಲ ರೋಬಾಟ್‍ಗಳು ಬಂದಿವೆ.

ಕೆಲಸ ಮಾಡುತ್ತಲೇ ಕಲಿಯುವ ಅಲ್ಗೊರಿದಮ್ ವ್ಯವಸ್ಥೆಯೇ ರೋಬಾಟ್‍ಗಳ ಕೃತಕ ಮಿದುಳಲ್ಲಿದೆ. ಬದಲೀ ಅಂಗಾಂಗಗಳನ್ನು ಮಿಂಚಿನ ವೇಗದಲ್ಲಿ ಸಾಗಿಸಬಹುದಾಗಿದೆ. ಔಷಧಗಳ ಗುಣಮಟ್ಟ ಹೆಚ್ಚಾಗಿದೆ. ಅವೆಲ್ಲವುಗಳ ನಡುವೆ ಚಿಕಿತ್ಸಾ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹತೆ ಹೆಚ್ಚಿದೆಯೆ? ಕೇಳಬೇಡಿ. ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್‌ಗೆ ಬಲಿಯಾಗುವಷ್ಟೇ ಜನರು ಆಸ್ಪತ್ರೆಯಲ್ಲಿ ಘಟಿಸುವ ತಪ್ಪುಗಳಿಂದಲೂ ಸಾಯುತ್ತಾರೆ.

ಇಂಗ್ಲೆಂಡಿನಲ್ಲಿ 2017-18ರಲ್ಲಿ ರೋಗಿಯ ಸಂಬಂಧಿಕರು ನ್ಯಾಯಾಲಯದ ಮೂಲಕ ಕಕ್ಕಿಸಿದ ದಂಡದ ಮೊತ್ತವೇ 223 ಕೋಟಿ ಪೌಂಡ್, ಅಂದರೆ ಅಂದಾಜು ₹ 20 ಸಾವಿರ ಕೋಟಿಗಳಷ್ಟಾಗಿದೆ. ವಕೀಲರ ನೆರವಿನಿಂದ ನುಣುಚಿಕೊಂಡಿದ್ದರ ಲೆಕ್ಕ ಇನ್ನೆಷ್ಟೊ? ಹಾಗೆಂದು ನಾವು ವಕೀಲರನ್ನು ದೂಷಿಸುವಂತಿಲ್ಲ. ಏಕೆಂದರೆ ಆಸ್ಪತ್ರೆಗಳಿಂದ ಅಷ್ಟೊಂದು ಹಣವನ್ನು ಪರಿಹಾರ ರೂಪದಲ್ಲಿ ರೋಗಿಗೆ ಕೊಡಿಸಿದ್ದೂ ವಕೀಲರೇ ತಾನೆ? ವೈದ್ಯರು ನೀತಿವಂತರಾಗಿದ್ದರೆ, ಪ್ರಾಮಾಣಿಕರಾಗಿದ್ದರೆ ವಕೀಲರಿಗೆ ಕೆಲಸವೇ ಇರುತ್ತಿರಲಿಲ್ಲ.

ಈಗಿನ ವ್ಯವಸ್ಥೆಯಲ್ಲಿ ವೈದರನ್ನೂ ದೂಷಿಸುವಂತಿಲ್ಲ. ಜಾಗತೀಕರಣದ ನಂತರ ಜಗತ್ತಿನ ಎಲ್ಲೆಡೆ ಆರೋಗ್ಯ ವ್ಯವಸ್ಥೆ ಎಂಬುದು ಕಾರ್ಪೊರೇಟ್ ಕುಳಗಳ ಬಿಗಿಮುಷ್ಟಿಯಲ್ಲಿ ಸಿಲುಕಿದೆ. ಡಾಕ್ಟರ್‌ಗಳೆಂದರೆ ಈಗ ಸಂಬಳಕ್ಕಾಗಿ ದುಡಿಯುವ ಅಡಿಯಾಳುಗಳು ಅಷ್ಟೆ. ಅವರ ಮೇಲೊಬ್ಬ ಸಿಇಓ ಇರುತ್ತಾನೆ. ಆಡಳಿತ ವ್ಯವಸ್ಥೆ ಇರುತ್ತದೆ. ಅಂಬುಲೆನ್ಸ್ ಚಾಲಕನಿಗೆ ಆಮಿಷ ಒಡ್ಡಿ, ರೋಗಿಯನ್ನು ಬೇಟೆಯಾಡಿ ತಂದು, ಜೇಬುಗಳನ್ನು ತಡಕಾಡಿ, ಬಟ್ಟೆ ಕಳಚಿ ಮಲಗಿಸುವವರೆಗಿನ ಕೆಲಸದಲ್ಲಿ ಡಾಕ್ಟರ್‌ಗಳ ಪಾತ್ರ ಇರುವುದೇ ಇಲ್ಲ. ಬಾಲಕಿ ಆದ್ಯಳ ಕೃಶ ದೇಹಕ್ಕೆ ದಿನಕ್ಕೆ 40 ಸಿರಿಂಜ್ ಔಷಧಗಳನ್ನು ತುಂಬಿದೆವೆಂದು ಬಿಲ್ ತಯಾರಿಸುವ ಕೆಲಸದಲ್ಲೂ ಡಾಕ್ಟರ್‍ಗಳ ಪಾತ್ರ ಇರಲಿಕ್ಕಿಲ್ಲ.

ಆಡಳಿತ ವಿಶಾರದರು, ಎಂಜಿನಿಯರ್‌ಗಳು, ರೋಬಾಟ್‍ಗಳು, ಸಾಫ್ಟ್‌ವೇರ್ ತಜ್ಞರು, ರೇಡಿಯಾಲಜಿ ತಜ್ಞರು, ಅವೆಲ್ಲಕ್ಕಿಂತ ಮಿಗಿಲಾಗಿ ಔಷಧ ತಯಾರಕರು, ಔಷಧಗಳ ಬೆಲೆ ನಿರ್ಧರಿಸುವ ಸಮಿತಿಗಳು- ಈ ಸಂತೆಯಲ್ಲಿ ಡಾಕ್ಟರ್ ಪಾತ್ರ ಏನೆಂಬುದನ್ನು ಗುರುತಿಸುವುದೂ ಕಷ್ಟದ್ದಾಗಿದೆ. ವೈದ್ಯರಂಗದ ನೈತಿಕತೆಯ ಕುರಿತು ಮುಂದಿನ ವಾರ ಜರುಗುವ ಜಾಗತಿಕ ಸಮಾವೇಶದಲ್ಲೂ ಡಾಕ್ಟರ್‌ಗಳನ್ನು ಗುರುತಿಸುವುದು ಕಷ್ಟವಾಗುತ್ತದೇನೊ.

ವ್ಯವಸ್ಥೆಯ ಎಲ್ಲ ಜಂಜಾಟಗಳೊಂದಿಗೆ ಏಗುತ್ತ, ರೋಗಿಗೆ ಒಳ್ಳೆಯದನ್ನೇ ಮಾಡಬೇಕು ಎಂದು ಹಂಬಲಿಸುವ ಡಾಕ್ಟರ್‌ಗಳ ಕತೆಗಳೂ ನಮಗೆ ಗೊತ್ತಿವೆ. ಪಾಟ್ನಾದ ಹುಡುಗಿಯೊಬ್ಬಳು ಕ್ಷಯದಿಂದ ಹಾಸಿಗೆ ಹಿಡಿದಾಗ ಆಕೆಗೆ ಬೆಡಾಕ್ವಿಲಿನ್ ಎಂಬ ಔಷಧ ಕೊಡಲೇಬೇಕು ಎಂದು ಮುಂಬೈಯ ಡಾ. ಝರೀರ್ ಉದ್ವಾಡಿಯಾ ಎಂಬವರು ದಿಲ್ಲಿಯ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿದರು.ಹೂಡಬೇಕಾಯಿತು, ಏಕೆಂದರೆ ಸರ್ಕಾರದ ಹೊಸ ನಿಯಮಗಳ ಪ್ರಕಾರ ಈ ಔಷಧವನ್ನು ದಿಲ್ಲಿ, ಚೆನ್ನೈ, ಅಹ್ಮದಾಬಾದ್ ಮತ್ತು ಗುವಾಹಟಿಯಲ್ಲಿ ವಾಸಿಸುವ ರೋಗಿಗಳಿಗೆ ಮಾತ್ರ, ಅದೂ ಸರ್ಕಾರಿ ಡಾಕ್ಟರ್‌ಗಳು ಮಾತ್ರ ಕೊಡಬೇಕಿತ್ತು.

ಪಟ್ನಾದ ರೋಗಿಗೆ ಕೊಡುವ ಹಾಗಿಲ್ಲ. ಕೊಟ್ಟ ವಿನಾ ಈ ಹುಡುಗಿ ಬದುಕುವುದಿಲ್ಲ ಎಂದು ಸಾಬೀತುಪಡಿಸಲು ಈ ಡಾಕ್ಟರ್ ಸತತ ಹೋರಾಡಿ ಕೊನೆಗೂ ಕಳೆದ ವರ್ಷ ಹೈಕೋರ್ಟ್ ಆದೇಶ ಹೊರಡಿಸುವಂತೆ ಮಾಡಿಯೇಬಿಟ್ಟರು.

ವೈದ್ಯರಂಗದ ನೈತಿಕತೆಯ ಪ್ರಶ್ನೆಯನ್ನು ಎತ್ತುವುದೆಂದರೆ ಅದರೊಟ್ಟಿಗೆ ಸಮಾಜದ ಬಹುತೇಕ ಎಲ್ಲ ರಂಗಗಳ ಪಾಪ-ಪುಣ್ಯಗಳ ಪ್ರಜ್ಞೆಗಳೂ ತಳಕು ಹಾಕಿಕೊಂಡಿವೆ. ಹೆಣ್ಣು ಭ್ರೂಣದ ಅಬಾರ್ಶನ್ ಮಾಡಿಸುವಂತೆ ಗರ್ಭಿಣಿಯ ಅತ್ತೆ-ಮಾವ-ಗಂಡ ಒತ್ತಾಯಿಸುತ್ತಾರೆ. ಮೂವತ್ತು ರೂಪಾಯಿ ಮೌಲ್ಯದ ಔಷಧವನ್ನು ಮೂರು ಸಾವಿರ ರೂಪಾಯಿಗೆ ಮಾರುವ ಕಂಪನಿಯ ಶೇರು ಖರೀದಿಸಲು ಜನ ಮುಗಿಬೀಳುತ್ತಾರೆ. ಹಳ್ಳಿಯವರ ವೋಟ್ ಪಡೆದು ಗೆದ್ದ ರಾಜಕಾರಣಿಯೇ ಹಳ್ಳಿಯ ಆಸ್ಪತೆಯ ಡಾಕ್ಟರನ್ನು ನಗರಕ್ಕೆ ವರ್ಗ ಮಾಡಿಸಿ ತನ್ನ ಜೇಬು ತುಂಬಿಸಿಕೊಳ್ಳುತ್ತಾನೆ. ಮೆಡಿಕಲ್ ಸೀಟುಗಳ ಹರಾಜು, ಕಳಪೆ ಯಂತ್ರಗಳ ಖರೀದಿ, ಔಷಧಗಳ ಕಲಬೆರಕೆ- ಇಷ್ಟೆಲ್ಲದರ ಮಧ್ಯೆ ಡಾಕ್ಟರೇ ಡ್ರಾಕುಲಾ.

ಆದರೂ ನೋಡಬೇಕು. ವೈದ್ಯರಂಗಕ್ಕೆ ತಗುಲಿದ ನಾನಾ ಬಗೆಯ ರೋಗಗಳ ಬಗ್ಗೆ ಯಾರ‍್ಯಾರು ಏನೇನು ಔಷಧ, ಚುಚ್ಚುಮದ್ದು, ಭರ್ಜರಿ ಸರ್ಜರಿ ಸೂಚಿಸುತ್ತಾರೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT