ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಬಂಧನ: ಪತನದಂಚಿಗೆ ಮತ್ತೊಂದು ‘ಸಾಮ್ರಾಜ್ಯ’?

ಸಜ್ಜನ ಜಾತ್ಯಸ್ಥರು ಭ್ರಷ್ಟರ ಜಾತಿಯನ್ನೇ ಪ್ರತ್ಯೇಕಿಸುವುದು ಒಳಿತು
Last Updated 25 ಸೆಪ್ಟೆಂಬರ್ 2019, 11:16 IST
ಅಕ್ಷರ ಗಾತ್ರ

‘ಸಾಮ್ರಾಜ್ಯ’ ವಿಸ್ತರಣೆಯ ಮಹತ್ವಾಕಾಂಕ್ಷೆ ಹಾಗೂ ಮುಖ್ಯಮಂತ್ರಿ ಗಾದಿಗೇರುವ ತವಕದಿಂದ ಮುನ್ನುಗ್ಗುತ್ತಿದ್ದ ಇಬ್ಬರು ನಾಯಕರ ಕನಸು ಭಗ್ನವಾದ ಕತೆಯಿದು. ಹಣ ಬಲದಿಂದ ಸರ್ವಸ್ವವನ್ನೂ ಸೂರೆಗೊಳ್ಳಬಹುದೆಂಬ ತಪ್ಪು ಲೆಕ್ಕಾಚಾರಗಳು, ಅಧಿಕಾರವಿದ್ದರೆ ಎಂತಹವರ ಸದ್ದನ್ನೂ ಅಡಗಿಸಬಹುದೆಂಬ ಹುಂಬ ಠೇಂಕಾರಗಳನ್ನು ಸಿಬಿಐ, ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ತಣ್ಣಗಾಗಿಸಿವೆ.

ಇದರ ಹಿಂದೆ ದ್ವೇಷದ ರಾಜಕಾರಣ, ಸಡ್ಡು ಹೊಡೆದವರನ್ನು ಮಟ್ಟಹಾಕುವ ದಿಲ್ಲಿಯ ಅಧಿನಾಯಕತ್ವದ ರಾಜಕಾರಣವೂ ಕೆಲಸ ಮಾಡಿದೆ.ದಶಕದ ಈಚೆಗಿನ ನಾಡಿನ ರಾಜಕೀಯ ಗಮನಿಸಿದರೆ ‘ಸಾಮ್ರಾಜ್ಯ’ ಕಟ್ಟಲು ಹೋದ ಇಬ್ಬರು ನಾಯಕರು ತಾವೇ ಕಟ್ಟಿದ ಕೋಟೆಯೊಳಗೆ ಸಿಲುಕಿ ನಲುಗಿಬಿಟ್ಟಿದ್ದಾರೆ. ಧನ–ಅಧಿಕಾರದಾಹ, ದರ್ಪದಲ್ಲಿ ಇಬ್ಬರ ಮಧ್ಯೆಯೂ ಸಾಮ್ಯತೆ ಇದೆ. ವ್ಯವಹಾರವೂ ಸರಿಸುಮಾರು ಒಂದೇ ತೆರನಾಗಿದೆ.

ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರ ಮಗನಾದ ಗಾಲಿ ಜನಾರ್ದನ ರೆಡ್ಡಿ, ಸಾಮ್ರಾಜ್ಯದ ಕನಸು ಕಂಡಿದ್ದರು. ವಿಜಯನಗರದ ಅರಸ ಕೃಷ್ಣದೇವರಾಯರ ಅಪರಾವತಾರ ತಾನು ಎಂದು ಹೇಳಿಕೊಳ್ಳುತ್ತಿದ್ದರು. ಅಕ್ರಮ ಗಣಿಗಾರಿಕೆ, ಅದಿರು ರಫ್ತು, ಕೋಟಿಗಟ್ಟಲೆ ಬೇನಾಮಿ ಆಸ್ತಿ... ಇವೆಲ್ಲದರ ಬೆನ್ನು ಬಿದ್ದ ಸಿಬಿಐ, ಅವರನ್ನು ಜೈಲಿಗಟ್ಟಿತ್ತು. ದೇಶದಲ್ಲಿ ರೆಡ್ಡಿ ನಡೆಸಿದ ಅವ್ಯವಹಾರಕ್ಕಷ್ಟೇ ತನಿಖೆಯನ್ನು ಸೀಮಿತಗೊಳಿಸಿದ ಸಿಬಿಐ, ವಿದೇಶಿ ವಹಿವಾಟಿನ ಬಗ್ಗೆ, ಗಣಿಗಾರಿಕೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಷ್ಟರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಕೋರ್ಟ್‌ನಲ್ಲಿ ಆಕ್ಷೇಪ ಸಲ್ಲಿಸಲು ಸಿಬಿಐ ವಿಳಂಬ ಮಾಡಿದ್ದರಿಂದಾಗಿ ರೆಡ್ಡಿ ಬಚಾವಾದರು. ಜೈಲಿನಿಂದ ಬಿಡುಗಡೆಯೂ ಆದರು. ಬಳ್ಳಾರಿಯಲ್ಲಿ ಸಾಮ್ರಾಜ್ಯ ಕಟ್ಟಿದ್ದ ರೆಡ್ಡಿ, ತಮ್ಮ ಇಬ್ಬರು ಸೋದರರನ್ನು ಸಂಸದ, ಶಾಸಕರನ್ನಾಗಿ ಮಾಡಿದ್ದರು. ತಮ್ಮ ಆಪ್ತ ಬಿ.ಶ್ರೀರಾಮುಲು ಕುಟುಂಬದ ನಾಲ್ವರನ್ನು ರಾಜಕೀಯಕ್ಕೆ ತಂದಿದ್ದರು.

ಡಿ.ಕೆ.ಶಿವಕುಮಾರ್ ಕಟ್ಟಲು ಹೊರಟಿದ್ದ ಸಾಮ್ರಾಜ್ಯ ಕೂಡ ಅದೇ ಮಾದರಿಯಂತಿತ್ತು. ಅವರು ರಾಜಕೀಯದಲ್ಲಿ ಬೆಳೆದ ಮೇಲೆ ಗ್ರಾನೈಟ್ ಗಣಿಗಾರಿಕೆ, ಅದಿರು ಸಾಗಣೆಯೇ ಪ್ರಮುಖ ಉದ್ಯಮವಾಗಿತ್ತು. ತಮ್ಮ ಸೋದರನನ್ನು ಸಂಸದರನ್ನಾಗಿ ಮಾಡಿದರು. ಭಾವ ರಂಗನಾಥ್‌, ದಾಯಾದಿ ರವಿ ಅವರನ್ನು ಶಾಸಕರನ್ನಾಗಿ ಮಾಡಿದರು. ಮಾತುಮಾತಿಗೆ ‘ನಾನು ಕೆಂಪೇಗೌಡರ ಮಗ’ (ಅವರ ತಂದೆಯ ಹೆಸರು) ಎನ್ನುವ ಮೂಲಕ ನಾಡಪ್ರಭು ಹಾಗೂ ಒಕ್ಕಲಿಗರ ಅಸ್ಮಿತೆಯಂತಿರುವ ಮಾಗಡಿ ಕೆಂಪೇಗೌಡರ ಹೆಸರನ್ನು ಪುನರುಚ್ಚರಿಸುತ್ತಿದ್ದರು. ಐತಿಹಾಸಿಕ ವ್ಯಕ್ತಿಗಳನ್ನು ತಮಗೆ ಹೋಲಿಸಿಕೊಳ್ಳುವ ಮೂಲಕ ಸಾಮ್ರಾಜ್ಯದ ನೆನಪನ್ನು ಮಾಡಿಕೊಡುತ್ತಿದ್ದರು.

ಶಿವಕುಮಾರ್‌ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವುದಕ್ಕಿಂತ ಮೊದಲಿನ ಪೂರ್ವಾಶ್ರಮದ ಕತೆ ಅರಿಭಯಂಕರ. ಅದರಾಚೆಗೆ ನೋಡುವುದಾದರೆ ಶಿವಕುಮಾರ್ ಕೂಡ ಸಾಮಾನ್ಯ ರೈತ ಕುಟುಂಬದವರು. ಅಲ್ಪಾವಧಿಯಲ್ಲಿ ಆಗರ್ಭ ಶ್ರೀಮಂತರಾಗುವುದಕ್ಕೆ ಅವರ ಮನೆಯ ಮೇಲೆ, ಮೇಲಿಂದ ವಜ್ರ ವೈಢೂರ್ಯಗಳು, ನಗನಾಣ್ಯಗಳು ಸುರಿಯಲಿಲ್ಲ. ಅವರ ವಿರುದ್ಧವೂ ಅಕ್ರಮದ ಆರೋಪಗಳು, ಕಾನೂನನ್ನು ತಲೆಕೆಳಗು ಮಾಡಿದ ದೂರುಗಳು ಇವೆ.

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಶಿವಕುಮಾರ್‌ ಹಾಗೂ ಅವರ ಕುಟುಂಬಕ್ಕೆ ಸೇರಿದ್ದೆನ್ನಲಾದ ಆರಕ್ಕೂ ಹೆಚ್ಚು ಕಂಪನಿಗಳ ಹೆಸರುಗಳು ಇವೆ. ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ಲಿಮಿಟೆಡ್‌ನ (ಎಂಎಂಎಲ್‌) ಉಸ್ತುವಾರಿಯಲ್ಲಿದ್ದ ಅದಿರನ್ನು ಈ ಕಂಪನಿಗಳ ಮೂಲಕ ಖರೀದಿಸಿ ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಇದರ ಒಟ್ಟಾರೆ ಲಾಭಾಂಶವೇ ₹250 ಕೋಟಿ ದಾಟಿದೆ ಎಂಬ ಆಪಾದನೆ ಇತ್ತು.

ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆ ಅನುಷ್ಠಾನಕ್ಕೆ ಬಂದಾಗ ಶಿವಕುಮಾರ್, ನಗರಾಭಿವೃದ್ಧಿ ಸಚಿವ ಹಾಗೂ ಬಿಎಂಐಸಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲ್ಲಿ ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಅವರು ಮಂಡಿಸಿದ್ದ ‘ನೈಸ್’ ಅಕ್ರಮ ಕುರಿತ ಸದನ ಸಮಿತಿ ವರದಿ ‘ನೈಸ್‌ಗೆ ಹೆಚ್ಚುವರಿ ಭೂಮಿ ಕೊಡುವಲ್ಲಿ ಅಂದಿನ ನಗರಾ ಭಿವೃದ್ಧಿ ಸಚಿವರ ಪಾತ್ರವೂ ಇತ್ತು’ ಎಂದು ಉಲ್ಲೇಖಿಸಿದೆ.

ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು, ‘ಬಿಎಂಐಸಿ ಯೋಜನೆಯ ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದ ಶಿವಕುಮಾರ್ ಅಕ್ರಮ ಎಸಗಿದ್ದಾರೆ. ಸೋನಿಯಾ ಗಾಂಧಿ ಈ ಬಗ್ಗೆ ತನಿಖೆ ನಡೆಸಿದರೆ ದಾಖಲೆ ಕೊಡುವೆ’ ಎಂದು 2014ರಲ್ಲಿ ಸವಾಲು ಎಸೆದಿದ್ದರು.

2008–11ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಬಿ.ಕೆ. ಶ್ರೀನಿವಾಸ್ ಅವರಿಂದ ಶಿವಕುಮಾರ್ ಖರೀದಿಸಿದ್ದ ಕೆ.ಆರ್. ಪುರ ಹೋಬಳಿಯ ಬೆನ್ನಿಗಾನಹಳ್ಳಿಯ 4.20 ಎಕರೆ ಜಾಗವನ್ನು ಡಿನೋಟಿಫೈ ಮಾಡಿಕೊಟ್ಟಿದ್ದರು. ಶ್ರೀನಿವಾಸ್ ನಿಧನರಾಗಿದ್ದರೂ ಅವರ ಹೆಸರಿನಲ್ಲೇ ಡಿನೋಟಿಫೈಗೆ ಅರ್ಜಿ ಸಲ್ಲಿಸಲಾಗಿತ್ತು. ಸತ್ತವರ ಹೆಸರಿನಲ್ಲಿ ಡಿನೋಟಿಫೈ ಮಾಡಿಕೊಟ್ಟ ಪ್ರಮಾದವೂ ನಡೆದಿತ್ತು. ಆಗಿನ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್‌, ಖಡಕ್ ಐಎಫ್‌ಎಸ್ ಅಧಿಕಾರಿಯನ್ನು ರಾಮನಗರ ಎಸಿಎಫ್‌ ಹುದ್ದೆಗೆ ಹಾಕಿಸಿಕೊಂಡಿದ್ದರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿದ್ದ ಪ್ರದೇಶದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ಕಡಿವಾಣ ಹಾಕುವುದು, ತಮ್ಮ ರಾಜಕೀಯ ಶತ್ರು ಶಿವಕುಮಾರ್ ಅವರನ್ನು ಸಿಲುಕಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ರಾಜಕೀಯ ಉಸಾಬರಿಗಳ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿ, ಈಗ ಸಂಸದರಾಗಿರುವ ಡಿ.ಕೆ. ಸುರೇಶ್, ಶಿವಕುಮಾರ್ ಪತ್ನಿ ಉಷಾ ಅವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಅದು ಇನ್ನೂ ಹೈಕೋರ್ಟ್‌ನಲ್ಲಿದೆ.

ಒಕ್ಕಲಿಗ ಸಮುದಾಯದ ಏಕಮೇವಾದ್ವೀತಿಯ ನಾಯಕರಂತಿರುವ ದೇವೇಗೌಡರ ವಿರುದ್ಧ ಸೆಣಸುತ್ತಲೇ ರಾಜಕೀಯ ಮುನ್ನೆಲೆಗೆ ಬಂದ ಶಿವಕುಮಾರ್, ಕನಕಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೌಡರಿಗೆ ಸೋಲಿನ ರುಚಿ ತೋರಿಸಿದ್ದರು. ಈಗ ಮಿತ್ರರಂತೆ ಇರುವ ಎಚ್.ಡಿ.ಕುಮಾರಸ್ವಾಮಿ– ಶಿವಕುಮಾರ್ ಒಂದು ಕಾಲದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು.

ಶಿವಕುಮಾರ್ ಒಬ್ಬರೇ ಹೀಗೆಲ್ಲ ಆಸ್ತಿ ಮಾಡಿ ದ್ದಾರೆಯೇ? ಉಳಿದೆಲ್ಲ ರಾಜಕಾರಣಿಗಳು ಚಿನ್ನದ ತೊಟ್ಟಿಲಿನಲ್ಲೇ ನಿದ್ರಿಸಿ, ಚಿನ್ನದ ಚಮಚೆಯನ್ನೇ ಬಾಯ ಲ್ಲಿಟ್ಟು ಬೆಳೆದವರೇನಲ್ಲ. ಯಡಿಯೂರಪ್ಪ, ಈಶ್ವರಪ್ಪ, ಸಿ.ಟಿ.ರವಿ, ಆರ್.ಅಶೋಕ್‌, ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ ಇವರೆಲ್ಲರೂ ಕಡುಕಷ್ಟ ಅನುಭವಿಸಿಯೇ ಬೆಳೆದವರು. ಇವರು ಯಾರಿಗೂ ಇರದ ಐಟಿ– ಇ.ಡಿಯ ಇರಿತ ಶಿವಕುಮಾರ್‌ಗೆ ಗಾಯ ಮಾಡಿದ್ದು ಯಾಕೆ?

ವಿಧಾನಸೌಧದ ಆವರಣದಲ್ಲಿ ಕಾರೊಂದರಲ್ಲಿದ್ದ ₹2 ಕೋಟಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇವತ್ತು ರಾಜ್ಯವಾಳುತ್ತಿರುವ ಪ್ರಭಾವಿ ನಾಯಕರೊಬ್ಬರ ಪುತ್ರನಿಗೆ ಸೇರಿದ ಹಣ ಅದು ಎಂಬುದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಗೊತ್ತಾಗಿತ್ತು. ಆದರೆ, ಅದರ ಬಗ್ಗೆ ತನಿಖೆಯೇ ನಡೆಯಲಿಲ್ಲ.

‘ಆಪರೇಷನ್ ಕಮಲ’ದ ವೇಳೆ ಶಾಸಕರಿಗೆ ₹20 ಕೋಟಿಯಿಂದ ₹30 ಕೋಟಿವರೆಗೆ ಆಮಿಷ ಒಡ್ಡಲಾಗಿದೆ ಎಂಬ ಮಾತುಗಳೂ ಇದ್ದವು. ಈ ಹಣದ ಮೂಲ ಪತ್ತೆಗೆ ಐಟಿ–ಇ.ಡಿ ಮುಂದಾಗದೇ ಇರುವುದು ಕೇಂದ್ರದ ನಡೆಯ ಬಗ್ಗೆಯೇ ಸಂಶಯ ಹುಟ್ಟಿಸುತ್ತದೆ. ಹೀಗೆಲ್ಲ ನಡೆದ ಬಳಿಕ, ಶಿವಕುಮಾರ್ ಅವರನ್ನು ಬಂಧಿಸಿದಾಗ ‘ಒಕ್ಕಲಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ’ ಎಂದು ಪ್ರತಿಭಟನೆಗೆ ಇಳಿದಿದ್ದು ಮಾತ್ರ ಅರ್ಥಹೀನ.

ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಾಗ ಲಿಂಗಾಯತರು ಬೀದಿಗೆ ಇಳಿದಿದ್ದರು. ಯಡಿಯೂರಪ್ಪ ಜೈಲಿಗೆ ಹೋದಾಗ, ಸಮುದಾಯದ ಪ್ರತಿಷ್ಠಿತ ಮಠಾಧೀಶರು ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಭ್ರಷ್ಟಾಚಾರದ ಆಪಾದನೆ ಎದುರಾದಾಗಲೆಲ್ಲ ಪ್ರಬಲ ನಾಯಕರು ತಮ್ಮ ಜಾತಿಯನ್ನು ಗುರಾಣಿಯಾಗಿ ಬಳಸಿ, ರಕ್ಷಣೆ ಪಡೆದುಕೊಳ್ಳುವುದು ನಡೆದಿದೆ. ಈ ಚಾಳಿ ಬೆಳೆಯುತ್ತಾ ಹೋದರೆ, ಪ್ರಬಲ ಜಾತಿಯವರು ಭ್ರಷ್ಟಾಚಾರ ಮಾಡುವುದನ್ನು ಮುಂದುವರಿಸಲು ಸಲೀಸಾಗಬಹುದು. ಭ್ರಷ್ಟರದ್ದೇ ಒಂದು ಜಾತಿಯೆಂದು ಪ್ರತ್ಯೇಕಿಸಿ, ಅವರನ್ನು ದೂರ ಇಡುವ ಕೆಲಸವನ್ನುಸಜ್ಜನ ಜಾತ್ಯಸ್ಥರು ಮಾಡಿದರೆ ಜಾತಿಗೂ, ಸಮಾಜಕ್ಕೂ ಒಳಿತಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT