ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಳವರ ಹೆಗಲೇರಿ ಬಲಾಢ್ಯ ತಂತ್ರಜ್ಞಾನ

ಪ್ರಜ್ಞಾಶೂನ್ಯರತ್ತ ಬರುವ ನೆರವಿನ ಹಸ್ತವೇ ಕಬಂಧಬಾಹುವಾಗಿ ಮನುಕುಲವನ್ನು ಆವರಿಸೀತೆ?
Last Updated 7 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ನಮ್ಮ ಯೋಚನೆಗಳು ನೇರವಾಗಿ ಅಕ್ಷರಗಳಾಗಿ ಕಂಪ್ಯೂಟರ್ ಪರದೆಯ ಮೇಲೆ ಮೂಡುವಂತಾದರೆ ಹೇಗಿರುತ್ತದೆ? ತಲೆಯ ಮೇಲೆ ಪುಟ್ಟ ಜುಟ್ಟಿನಂಥ ಸಾಧನ ಇರಬೇಕು. ಅದು ಮಿದುಳಿನಲ್ಲಿ ಮೂಡುವ ಯೋಚನೆಗಳನ್ನು ಹೊರಕ್ಕೆ ಬಿತ್ತರಿಸಬೇಕು. ಹಾಗೆ ಬಿತ್ತರಿಸಿದ್ದು ಸಮೀಪದ ಮೊಬೈಲ್ ಫೋನ್‍ನಲ್ಲೊ ಲ್ಯಾಪ್‍ಟಾಪ್‍ನಲ್ಲೋ ಮೂಡಬೇಕು. ಜುಟ್ಟಿನಂಥ ಆ ಅಂಟೆನಾ ತನ್ನ ಲ್ಯಾಬಿನಲ್ಲಿ ರೂಪುಗೊಳ್ಳುತ್ತಿದೆ ಎಂದು ಟೆಕ್ ಉದ್ಯಮಿ ಈಲಾನ್ ಮಸ್ಕ್ ಇತ್ತೀಚೆಗೆ ಹೇಳಿದ್ದಾನೆ.

ಆತ ಹೇಳಿದನೆಂದರೆ ಅದು ಸುಲಭದಲ್ಲಿ ಕಿತ್ತು ಹಾಕಬಲ್ಲ ಮಾತೇನಲ್ಲ. ತಂತ್ರವಿದ್ಯಾ ಜಗತ್ತು ಅವನ ಮಾತನ್ನು ಕಿವಿ ನಿಮಿರಿಸಿ ಕೇಳುತ್ತದೆ. ಅಷ್ಟರಮಟ್ಟಿಗೆ ಅವನ ಖ್ಯಾತಿ ಉತ್ತುಂಗದಲ್ಲಿದೆ. ಸ್ವತಃ ವಿಜ್ಞಾನಿ ಅಲ್ಲದಿದ್ದರೂ ವಿಜ್ಞಾನಿಗಳ ಕನಸುಗಳನ್ನು ನನಸಾಗಿ ಮಾಡಲೆಂದು ಬಂಡವಾಳ ಹೂಡುತ್ತಾನೆ. ಬ್ಯಾಟರಿ ಚಾಲಿತ ಟೆಸ್ಲಾ ಕಾರುಗಳು ತಿಂಗಳಿಗೆ 40 ಸಾವಿರದಷ್ಟು ದೊಡ್ಡ ಸಂಖ್ಯೆಯಲ್ಲಿ ರಸ್ತೆಗೆ ಇಳಿಯುತ್ತಿವೆ. ಅವನ ‘ಸ್ಪೇಸ್ ಎಕ್ಸ್’ ಕಂಪನಿಯ ರಾಕೆಟ್‍ಗಳು ಮಂಗಳ ಲೋಕಕ್ಕೆ ಹೊರಡಲು ಸಜ್ಜಾಗಿವೆ. ಅವನ ಕಂಪನಿ ಹಾರಿಬಿಟ್ಟ ಇಡೀ ಒಂದು ಕಾರು ಈಗ ಸೂರ್ಯನ ಸುತ್ತ ತನ್ನದೇ ಕಕ್ಷೆಯಲ್ಲಿ ತಿರುಗುತ್ತಿದೆ. ಕೊಳವೆಯ ಮೂಲಕ ಬಾಣದಂತೆ ಸಾಗಬಲ್ಲ ‘ಹೈಪರ್ ಲೂಪ್ 1’ ಹೆಸರಿನ ವಾಹನವೂ ಈತನದೇ ಐಡಿಯಾ. ನಗರಗಳ ಅಡಿಯಲ್ಲಿ ಸುರಂಗದಂಥ ರಸ್ತೆಗಳ ನಿರ್ಮಾಣಕ್ಕೆ ಅವನ ‘ದಿ ಬೋರಿಂಗ್ ಕಂಪನಿ’ ಪ್ರಯೋಗಗಳನ್ನು ನಡೆಸುತ್ತಿದೆ. ಅವೆಲ್ಲಕ್ಕಿಂತ ಹೆಚ್ಚಾಗಿ ಮನುಷ್ಯರ ತಲೆಗೆ ಜುಟ್ಟು ಸಿಕ್ಕಿಸಹೊರಟ ಅವನ ‘ನ್ಯೂರಾಲಿಂಕ್’ ಕಂಪನಿ ಈಗ ಸುದ್ದಿಯಲ್ಲಿದೆ.

ಮಿದುಳಿನ ನರತಂತುಗಳ ಜಾಲಕ್ಕೆ ಗಾಳ ಸಿಕ್ಕಿಸುವ ಯೋಜನೆ ಈಗಿನದೇನಲ್ಲ. ಪ್ರಜ್ಞಾಶೂನ್ಯ (ಕೋಮಾ) ಸ್ಥಿತಿಯಲ್ಲಿ ಮಲಗಿರುವ ವ್ಯಕ್ತಿಗಳ ಮಿದುಳಿಗೆ ಸಪೂರ ತಂತುಗಳನ್ನು ಇಳಿಬಿಟ್ಟು ನೋಡುವ ಅನೇಕ ಯತ್ನಗಳು ಈಗಾಗಲೇ ಜಾರಿಯಲ್ಲಿವೆ. ಸ್ಟೀಫನ್ ಹಾಕಿಂಗ್ ಥರಾ ಕುತ್ತಿಗೆಯ ಕೆಳಗಿನ ಭಾಗವೆಲ್ಲ ಮರಗಟ್ಟಿರುವ ರೋಗಿಗಳ ಮಿದುಳಿನ ನರತಂತುಗಳಿಗೂ ಸಂಪರ್ಕ ಕಲ್ಪಿಸಲಾಗುತ್ತಿದೆ. ಅವೆಲ್ಲ ತೀರ ಪ್ರಾಥಮಿಕ ಹಂತದ ಪ್ರಯೋಗಗಳು ಅಷ್ಟೆ. ಮನುಷ್ಯರ ತಲೆ ಎಂದರೆ ಅದು ಭೂಮಿಯ ಮೇಲಿನ ಅತ್ಯಂತ ಕ್ಲಿಷ್ಟ ಸೂಪರ್ ಕಂಪ್ಯೂಟರ್. ಅಲ್ಲಿ ನೂರು ಶತಕೋಟಿಗಿಂತ ಹೆಚ್ಚು ನರಕೋಶಗಳ ನೇಯ್ಗೆ ಇದೆ. ನಮ್ಮ ಕ್ಷಣಕ್ಷಣದ ಅನುಭವಗಳ ಶೇಖರಣೆಗೆ ಹೊಸ ಹೊಸ ಜಾಲಗಳು ಅಲ್ಲಿ ಸೃಷ್ಟಿಯಾಗುತ್ತಲೇ ಇರುತ್ತವೆ. ಕಣ್ಣಿನ ಮೂಲಕ ಬರುವ ಮಾಹಿತಿಗಳೆಲ್ಲ ‘ದೃಶ್ಯ ತೊಗಟೆ’ (ವಿಶ್ಯುವಲ್ ಕಾರ್ಟೆಕ್ಸ್) ಎಂಬ ಸರ್ವರ್‌ನಲ್ಲಿ, ಕಿವಿಯ ಮೂಲಕ ಬರುವ ಮಾಹಿತಿಗಳೆಲ್ಲ ‘ಶ್ರವಣ ತೊಗಟೆ’ (ಆಡಿಟರಿ ಕಾರ್ಟೆಕ್ಸ್) ಎಂಬ ಸರ್ವರ್‌ನಲ್ಲಿ ಶೇಖರಣೆ ಆಗುತ್ತವೆ. ವಿವಿಧ ಇಂದ್ರಿಯಗಳಿಂದ ಬರುವ ಅಂಥ ಡೇಟಾಗಳೆಲ್ಲ ವಿದ್ಯುತ್ ವೇಗದಲ್ಲಿ ಇಲ್ಲಿಂದಲ್ಲಿಗೆ ಓಡಾಡಿ, ಸಂಸ್ಕರಣೆಗೊಂಡು ಆಜ್ಞಾಧಾರಕ ನರಗಳ ಮೂಲಕ ಅಭಿವ್ಯಕ್ತಿ ಪಡೆಯುತ್ತವೆ.

ಅಂಗಾಂಗಗಳೆಲ್ಲ ನಿಷ್ಕ್ರಿಯವಾಗಿದ್ದು, ಕಣ್ಣಿನ ಮೂಲಕ ಮಾತ್ರ ಸಂಜ್ಞೆ ಮಾಡಬಲ್ಲವರ ಮಿದುಳಿಗೆ ನಾಲ್ಕಾರು ಸಪೂರ ತಂತಿ ತೂರಿಸಿ ಸಂಭಾಷಣೆ ಮಾಡುವುದು ಈಗ ಸಾಧ್ಯವಾಗಿದೆ. ಅಂಥ ವ್ಯಕ್ತಿಯ ಎದುರಿಗೆ ಎ-ಬಿ-ಸಿ-ಡಿ ಅಕ್ಷರಪಟವನ್ನು ಇಡಬೇಕು. ಆ ವ್ಯಕ್ತಿ CO-L-D ಈ ನಾಲ್ಕು ಅಕ್ಷರಗಳ ಮೇಲೆ ಕ್ರಮವಾಗಿ ಕಣ್ಣು ಕೀಲಿಸುತ್ತ ಹೋದರೆ ಮಿದುಳಿನ ದೃಶ್ಯನರಗಳ ಮೂಲಕ ಹೊರಟ ಸಂವೇದನೆಯು ಕೃತಕ ತಂತಿಗಳ ಮೂಲಕ ಹೊರಕ್ಕೆ ಬಂದು ಕಂಪ್ಯೂಟರ್ ಮೇಲೆ COLD ಎಂಬ ಪದ ಮುದ್ರಿತವಾಗುತ್ತದೆ. ವಿಜ್ಞಾನಿಗಳು ಮೂರು ವರ್ಷಗಳ ಹಿಂದೆಯೇ ಇದನ್ನು ಸಾಧಿಸಿದ್ದಾರೆ.

ಅಂಬೆಗಾಲಿನ ಈ ತಂತ್ರಜ್ಞಾನಕ್ಕೆ ರಾಕೆಟ್ ವೇಗದ ಚಾಲನೆ ಕೊಡಲು ಈಲಾನ್ ಮಸ್ಕ್‌ನ ನ್ಯೂರಾಲಿಂಕ್ ಕಂಪನಿ ಹೊರಟಿದೆ. ಕೂದಲೆಳೆಗಿಂತ ಸಪೂರವಾದ ಸಾವಿರಾರು ತಂತುಗಳನ್ನು ಮಿದುಳಿನ ಒಳಕ್ಕೆ ತೂರಿಸಬಲ್ಲ ಹೊಲಿಗೆ ಯಂತ್ರವನ್ನು ಅದು ತಯಾರಿಸಿದೆ. ಕೋತಿಯ ತಲೆಬುರುಡೆಗೆ ಅವಲಕ್ಕಿಯಷ್ಟೇ ಅಗಲದ ಒಂದು ರಂಧ್ರ ಮಾಡಿ, ನರಕೋಶಗಳಿಗೆ ತಂತುಗಳನ್ನು ಜೋಡಿಸಿ, ಈ
ತುದಿಯಲ್ಲಿ ಪುಟ್ಟ ಅಂಟೆನಾ ಇಟ್ಟಿದೆ. ಕೋತಿ ತನ್ನ ಯೋಚನೆಗಳನ್ನು ನೇರವಾಗಿ ಕಂಪ್ಯೂಟರಿಗೆ ತಿಳಿಸುತ್ತದೆಂದು ಮಸ್ಕ್ ಮೂರು ವಾರಗಳ ಹಿಂದೆ ಘೋಷಿಸಿದ್ದಾನೆ. ಮನುಷ್ಯನ ತಲೆಗೂ ಅಂಥ ಜುಟ್ಟು ಕಟ್ಟಿದರೆ ಮುಂದಿನ ಕೆಲಸಗಳು ಸುಲಭ. ಕಿರುಬೆರಳನ್ನು ಕೂಡ ಎತ್ತದೇ ತನಗನಿಸಿದ ವಿಚಾರಗಳನ್ನು ಮನೋವೇಗದಲ್ಲಿ ಅಕ್ಷರ ರೂಪಕ್ಕೆ ಇಳಿಸಬಹುದು. ಮಿದುಳಿಗೆ ರಂಧ್ರ ಕೊರೆಯುವ ಬದಲು, ಲೇಸರ್ ಕಿರಣಗಳನ್ನು ಹಾಯಿಸಿ ಮಿದುಳನ್ನು ಜಾಲಾಡಬಲ್ಲ ಹೆಲ್ಮೆಟ್‍ಗಳನ್ನು ಸೃಷ್ಟಿಸುವುದು ಈಲಾನ್ ಮಸ್ಕ್‌ನ ಮುಂದಿನ ಯೋಜನೆ.

ಅಂಗಾಂಗ ವೈಫಲ್ಯಕ್ಕೆ ತುತ್ತಾದವರ ನೆರವಿಗೆ ಇದು ಮಾಹಿತಿ ತಂತ್ರಜ್ಞಾನ (ಐಟಿ) ರಂಗದಿಂದ ಬರುತ್ತಿರುವ ಅಮೋಘ ಕೊಡುಗೆ ಎಂದೇ ಮೇಲ್ನೋಟಕ್ಕೆ ಕಂಡೀತು ನಿಜ. ವಂಶವಾಹಿ ದೌರ್ಬಲ್ಯಕ್ಕೆ ತುತ್ತಾದವರ ನೆರವಿಗೆ ಜೈವಿಕ ತಂತ್ರಜ್ಞಾನ (ಬಿಟಿ) ರಂಗದಿಂದ ಅಂಥದೇ ಅಮೋಘ ಕ್ರಿಸ್ಪ್-ಆರ್ ತಂತ್ರ ಕಾರ್ಯರೂಪಕ್ಕೆ ಬರುತ್ತಿದೆ. ಮನುಷ್ಯನ ಜೀನ್‍ಗಳನ್ನೇ ತಿದ್ದುವ ತಂತ್ರಜ್ಞಾನ ಅದು. ಮಿದುಳನ್ನು ಕಂಪ್ಯೂಟರಿಗೆ ಜೋಡಿಸುವ ಈ ಸಾಹಸ ಮುಂದಿನ ಮಹಾನ್ ಲಂಘನದ ಆರಂಭಿಕ ಓಟ ಎಂದೇ ಹೇಳಬೇಕು. ರೈಟ್ ಸಹೋದರರು 1903ರಲ್ಲಿ ಮೊದಲ ಬಾರಿ ಮರದ ಹಲಗೆಯ ವಿಮಾನವನ್ನು ಹಾರಿಸಿದ ಹಾಗೆ. ಇನ್ನೇನು, ಮಿದುಳು ನೇರವಾಗಿ ಕಂಪ್ಯೂಟರ್ ಜೊತೆ ಸಂಪರ್ಕ ಪಡೆದರೆ ಅದು ಏಕಮುಖ ಸಂಪರ್ಕ ಆಗಿರುವುದಿಲ್ಲ. ಮನುಷ್ಯನಿಗೇ ಆದೇಶ ನೀಡುವ, ಅವನ ಯೋಚನೆಗಳನ್ನು ಬದಲಿಸುವ (ಹ್ಯಾಕ್ ಮಾಡುವ) ಬಲ ಕಂಪ್ಯೂಟರಿಗೆ ಬಂದಂತಾಗುತ್ತದೆ. ಆರಂಭದಲ್ಲಿ ಈ ತಂತ್ರಜ್ಞಾನ ದುರ್ಬಲರ ನೆರವಿಗೆ ಬರುತ್ತದೆ. ಕ್ರಮೇಣ ಅದು ಕ್ರೀಡಾಳುಗಳಿಗೆ, ಸೈನಿಕರಿಗೆ, ಕಾರ್ಪೊರೇಟ್ ಶಕ್ತಿಗಳಿಗೆ, ಆತಂಕವಾದಿಗಳಿಗೆ ಸಿಕ್ಕು, ಆಳುವವರ ಕೈಗೂ ಬರುತ್ತದೆ. ಅಲ್ಲಿಗೆ ಮನುಷ್ಯ ನಿರ್ಮಿತ ಎಲ್ಲ ತಡೆಗೋಡೆಗಳೂ ಸಡಿಲವಾಗುತ್ತ ಹೋಗುತ್ತವೆ. ವೈಯಕ್ತಿಕ ಸ್ವಾತಂತ್ರ್ಯ, ನೈತಿಕ ಗಡಿಮಿತಿ, ಕಾನೂನಿನ ಪರಿಮಿತಿ, ಮತದಾನದ ಹಕ್ಕು, ರಕ್ತ ಸಂಬಂಧ, ದೇಶ-ಕಾಲ ಪ್ರಜ್ಞೆ ಎಲ್ಲವೂ ಬದಲಾಗುತ್ತವೆ.

ಇದನ್ನೇ ಸ್ಟೀಫನ್ ಹಾಕಿಂಗ್ ತನ್ನ ಸಾವಿನ ಮುಂಚಿನ ಪ್ರಬಂಧದಲ್ಲಿ ‘ಮನುಕುಲದ ಮಹಾನ್ ದುಃಸ್ವಪ್ನ’ ಎಂದು ಕರೆದಿದ್ದು. ಮನುಷ್ಯನ ತಳಿಗುಣವನ್ನೇ ತಿದ್ದುವುದು ಮೊದಲ ಅಪಾಯ; ಆ ಸಾಮರ್ಥ್ಯವನ್ನು ಕಂಪ್ಯೂಟರಿಗೆ ಕೊಡುವುದು ಎರಡನೆಯ ಅಪಾಯ. ಅಂಥ ಸಂಶೋಧನೆ ನಮಗೆ ಬೇಡ ಎನ್ನುವಂತೆಯೂ ಇಲ್ಲ. ಏಕೆಂದರೆ ‘ನಾವು ಮಾಡದಿದ್ದರೆ ಚೀನಾ ಮಾಡುತ್ತದೆ; ನಾವು ಹಿಂದೆ ಬೀಳುತ್ತೇವೆ’ ಎಂಬ ಧೋರಣೆ ಎಲ್ಲ ಸಮರ್ಥ ದೇಶಗಳಲ್ಲೂ ಇದೆ. ಅದು ನಿಜವೂ ಹೌದು. ಚೀನಾದಲ್ಲಿ ಆಗಲೇ ಮನುಷ್ಯನ ತಳಿಗುಣ ಬದಲಿಸುವ ಪ್ರಯೋಗ ನಡೆದಿದೆ. ಪ್ರಜೆಗಳ ಗುಣನಡತೆಗಳನ್ನು ಅಳೆಯುವ ಅಲ್ಗೊರಿದಮ್ ಜಾರಿಯಲ್ಲಿದೆ. ‘ಉತ್ತಮ ನಡತೆ’ಯುಳ್ಳ ಪ್ರಜೆಗಳಿಗೆ ಉತ್ತಮ ನಾಗರಿಕ ಸೌಲಭ್ಯಗಳನ್ನು ನೀಡುವ ಪ್ರಯೋಗವೂ ಜಾರಿಗೆ ಬಂದಿದೆ. ನಮ್ಮ ದೇಶದಲ್ಲಿ ಅಮೆಝಾನ್, ಫೇಸ್‍ಬುಕ್ ಎರಡೂ ನಮ್ಮ ಇಷ್ಟಾನಿಷ್ಟಗಳನ್ನು ಅಳೆಯುವ ಮತ್ತು ಮರು ರೂಪಿಸುವ ಕೆಲಸವನ್ನು ಮೆಲ್ಲಗೆ ಕೈಗೊಂಡಿವೆ. ಈ ಎರಡೂ ಕಂಪನಿಗಳು ಮನುಷ್ಯರ ಮಿದುಳಿನಲ್ಲಿ ಇಣುಕಿ ನೋಡುವ ಸಂಶೋಧನೆಗೆ ಭಾರೀ ಹಣವನ್ನು ಸುರಿಯುತ್ತಿವೆ. ಅಧಿಕ ಸಾಮರ್ಥ್ಯವುಳ್ಳ ಮನುಷ್ಯನನ್ನು ಸೃಷ್ಟಿಸುವತ್ತ ಪೈಪೋಟಿ ಜೋರಾಗಿದೆ. ಈ ಪೈಪೋಟಿಯಲ್ಲಿ ಈಲಾನ್ ಮಸ್ಕ್ ಕಂಪನಿ ಸದ್ಯ ಮುಂದಿದೆ ಅಷ್ಟೆ.

ಅಮಾಯಕರ ಕಿವಿಗೆ ಅಂಟೆನಾ ಮಾದರಿಯ ಹೂವಿಡುವ ಕೆಲಸ ಅದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT