ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯಬಾರದು ಸೈನ್ಯದ ಬದುಕು

Last Updated 27 ಫೆಬ್ರುವರಿ 2019, 9:44 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಇನ್‍ಫಾಂಟರಿ ಬೆಟಾಲಿಯನ್ ಕಮಾಂಡರ್ ಹುದ್ದೆ ಅವಧಿ ಹೆಚ್ಚೆಂದರೆ ಮೂರು ವರ್ಷಗಳು. ನನ್ನ ಈ ಅವಧಿ ಮುಕ್ತಾಯದ ಹಂತವಿದು. ಸೈನಿಕ
ಬದುಕಿನ ಅನೇಕ ದಾಖಲೆಗಳಿಗೆ ಕಾರಣವಾಗಿದ್ದ ಅತ್ಯಂತ ಯಶಸ್ವಿ ಅವಧಿ ಇದೆಂದೇ ಹೇಳಬಹುದು. ಆ ಬಗ್ಗೆ ನನಗೆ ಹೆಮ್ಮೆ, ಸಂತೃಪ್ತಿಗಳೆರಡೂ ಇದ್ದವು. ಆದರೂ, ಅವಧಿ ಮುಕ್ತಾಯ ಅತ್ಯಂತ ಬೇಸರದ ಹಂತಕ್ಕೆ ತಂದು ನಿಲ್ಲಿಸಿತ್ತು. ಇದಕ್ಕೆ ಕಾರಣವೆಂದರೆ ಈ ಅವಧಿ ನಂತರ ಮುಂದಿನ ಯಾವುದೇ ಜವಾಬ್ದಾರಿಗಳಿಂದ ನಮಗೆ ಸೈನಿಕರ ಜತೆಗಿನ ನೇರ ಸಂಪರ್ಕ ಇರುವುದಿಲ್ಲ. ಇದು ನನಗೆ ಬೇಸರ, ಮೂಲತಃ ಪ್ರತೀ ಸೈನಿಕನೊಂದಿಗಿನ ನೇರ ಸಂಪರ್ಕ ನನಗೆ ಅತ್ಯಂತ ಸಂತಸ ನೀಡುವ ಜವಾಬ್ದಾರಿ ಮತ್ತು ಇಲ್ಲಿಯ ತನಕದ ಇಡೀ ಸೈನಿಕ ಬದುಕು ಹೀಗೆಯೇ ಸಾಗಿತ್ತು.

ಸೈನಿಕರ ಕಷ್ಟ ಸುಖಗಳನ್ನು ಸದಾ ಕಾಲ ವಿಚಾರಿಸಿಕೊಳ್ಳುತ್ತಾ ಅವರ ನೋವು ನಲಿವಿನಲ್ಲಿ ಒಂದಾಗಿ ಸ್ಪಂದಿಸುತ್ತಾ ಇರುವುದು ಒಂದು ಕೂಡು ಕುಟುಂಬದಲ್ಲಿದ್ದ ಅನುಭವ ನೀಡುತ್ತದೆ. ಇದರಿಂದ ವಂಚಿತನಾಗುವ ನೋವು ನನ್ನನ್ನಾವರಿಸಿತ್ತು. ಹತ್ತಿರದ ಬಂಧುಗಳನ್ನು ಬಿಟ್ಟು ಹೊರಡಬೇಕಾದಾಗ ಆಗುವ ವೇದನೆಯ ಭಾವ ನನ್ನದಾಗಿತ್ತು. ಆದರೆ, ಇಲ್ಲೂ ನನಗೊಂದು ಅತ್ಯಪೂರ್ವ ಅವಕಾಶ ದೊರೆಯಿತು!. ನನ್ನ ಸಿಖ್ ಲೈಟ್ ಇನ್‍ಫಾಂಟರಿ ನನ್ನ ಸೇವೆಯನ್ನು ಉಳಿಸಿಕೊಳ್ಳಲು ಬಯಸಿತ್ತು. ಹೀಗಾಗಿ ಅದರ ಆದೇಶದಂತೆ ನಾನು ಉತ್ತರ ಪ್ರದೇಶದ ಫತೇರ್‌ನ ರೆಜಿಮೆಂಟಲ್ ಕೇಂದ್ರಕ್ಕೆ ವರ್ಗಾವಣೆ ಆಗಿ ಹೋದೆ.

ಈ ಕೇಂದ್ರದಲ್ಲಿ ಮತ್ತೊಂದು ರೀತಿ ವಿನೂತನ ಜವಾಬ್ದಾರಿ ನನಗಿತ್ತು. ಈಗಾಗಲೇ ನಮ್ಮ ರೆಜಿಮೆಂಟ್ ಒಟ್ಟೂ 20 ಬೆಟಾಲಿಯನ್‍ಗೆ ವಿಸ್ತರಣೆಗೊಂಡಿತ್ತು. ಎಲ್ಲಾ ದರ್ಜೆ ಒಟ್ಟೂ 18000 ಸೈನಿಕರು ಸೇವೆಯಲ್ಲಿದ್ದರೆ, ಸುಮಾರು 30000 ಸೈನಿಕರು ನಿವೃತ್ತರಾಗಿದ್ದರು. ಯುದ್ಧ ಸಂದರ್ಭದಲ್ಲಿ ಅಥವಾ ಇನ್ನಿತರ ಸಂದರ್ಭಗಳಲ್ಲಿ ಹುತಾತ್ಮರಾದ 200 ರಷ್ಟು ಯೋಧರ ವಿಧವೆಯರೂ ಅಲ್ಲಿದ್ದರು. ಈ ಎಲ್ಲರ ಕಾಳಜಿಯನ್ನು ಮತ್ತು ಅವರಿಗೆ ಅವಶ್ಯವಿರುವ ಕಾನೂನು ನೆರವನ್ನು ನೀಡುವುದು ನಮ್ಮ ಕೇಂದ್ರದ ಪ್ರಧಾನ ಕರ್ತವ್ಯವಾಗಿತ್ತು. ಅವರಿಗೆ ಬರುವ ಸಂಬಳ ಅಥವಾ ಇನ್ನಿತರ ಸವಲತ್ತುಗಳು, ಸಿಪಾಯಿಗಳನ್ನು ಸುಬೇದಾರ್ ಹುದ್ದೆಗೆ ಪ್ರಮೋಶನ್ ನೀಡುವುದು, ವಿಧವೆಯರಿಗೆ ಅಗತ್ಯ ಸವಲತ್ತುಗಳನ್ನು ಸಿಗುವಂತೆ ನೋಡಿಕೊಳ್ಳುವುದು, ಹುತಾತ್ಮರ ಮಕ್ಕಳಿರುವ ಹಾಸ್ಟೆಲ್‍ಗಳ ವ್ಯವಸ್ಥೆಯನ್ನು ಮಾಡುವುದು, ಅವರ ಶಿಕ್ಷಣಗಳೆಡೆಗೆ ಕಾಳಜಿ ವಹಿಸುವುದು, ರೆಜಿಮೆಂಟ್‍ ಇತಿಹಾಸ ಸಾರುವ ವಸ್ತು ಸಂಗ್ರಹಾಲಯದ ನಿರ್ವಹಣೆ. ಹೀಗೆ ಒಂದು ರೀತಿಯ ವಿಭಿನ್ನ ಆಡಳಿತಾತ್ಮಕ ಜವಾಬ್ದಾರಿ ಇಲ್ಲಿತ್ತು.

ಇದರೊಂದಿಗೆ ಪ್ರತೀ ತಿಂಗಳೂ ಸುಮಾರು 80 ರಿಂದ 100 ಜನ ವಿವಿಧ ದರ್ಜೆಯ ಸೈನಿಕರು ನಿವೃತ್ತರಾಗುತ್ತಿದ್ದರು. ಹೀಗೆ ಇಡೀ ವರ್ಷದಲ್ಲಿ ಸುಮಾರು 900-1200ಜನ ನಿವೃತ್ತರಾಗುತ್ತಿದ್ದರು. ಒಟ್ಟೂ 20 ಬೆಟಾಲಿಯನ್‍ಗೆ ಈ ಸಂಖ್ಯೆಯ 18-19ವರ್ಷದ ಯುವಕರನ್ನು ನೇಮಕ ಮಾಡಿಕೊಳ್ಳಬೇಕಾಗಿತ್ತು. ಅದೂ ಹರಿಯಾಣ, ಪಂಜಾಬ್, ಜಮ್ಮು, ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಯುವಕರ ಆಯ್ಕೆ ನಮ್ಮ ಜವಾಬ್ದಾರಿಯಾಗಿತ್ತು. ಹೀಗೆ ಆಯ್ಕೆಯ ನಂತರ ಮತ್ತೆ ಅವರನ್ನು ತರಬೇತಿಗೊಳಿಸಬೇಕಿತ್ತು. ಇದರೊಂದಿಗೆ ಅವರಲ್ಲಿಯೂ ಕ್ರೀಡಾಪಟುಗಳನ್ನು, ಮಾರ್ಕ್ಸ್‌ ಮ್ಯಾನ್‍ಗಳನ್ನು ನೋಡಿ, ಅವರ ಸಾಮರ್ಥ್ಯಾನುಸಾರ ಒಂದು ವರ್ಷದೊಳಗೆ ಅಣಿಗೊಳಿಸಬೇಕಾಗಿತ್ತು ಮತ್ತು ಇದು ನಮ್ಮ ನಿರಂತರ ಪ್ರಕ್ರಿಯೆಯಾಗಿತ್ತು. ಇದೆಲ್ಲದರ ಜೊತೆಗೆ ಸೈನಿಕ ಶಾಲೆಯಲ್ಲಿರುವ ವಿದ್ಯಾರ್ಥಿಗಳನ್ನು ಸರಿಯಾದ ದಾರಿಯಲ್ಲಿ ಬೆಳೆಯುವಂತೆ ಮಾಡುವ ಸಾಮಾಜಕ ಕಾಳಜಿಯೂ ನಮ್ಮದು. ಪೋಷಕರಿಲ್ಲದ ಕಆರಣ ಅವರು ದಾರಿ ತಪ್ಪುವ ಸಂಭವ ಇರುವ ಕಾರಣ ಅವರನ್ನು ನಮ್ಮ ಮಕ್ಕಳಂತೇ ನೋಡಿಕೊಳ್ಳಬೇಕಾಗಿತ್ತು.

ಹೀಗೆ ಈ ಎಲ್ಲಾ ರೀತಿಯಲ್ಲೂ ನೇಮಕ ಯುವಕರನ್ನು ಸಮರ್ಥ ಸೈನಿಕರಾಗಿ ರೂಪಿಸಿ, ಬೇರೆ ಬೇರೆ ಬೆಟಾಲಿಯನ್‍ಗಳಿಗೆ ಕಳಿಸುವ ಹೊಣೆ ನಮ್ಮದಾಗಿತ್ತು. ಇದೊಂದು ಅತ್ಯಪೂರ್ವ ಅವಕಾಶ. 18-20ವಯಸ್ಸಿನ, ಅತೀ ಉತ್ಸಾಹದ, ಆದರೆ ನಿರ್ಧಿಷ್ಟ ಗುರಿ ಇಲ್ಲದ ಯುವಕರನ್ನು ಆಯ್ಕೆ ಮಾಡಿ, ಅವರನ್ನು ಸೈನ್ಯದ ವಾತಾವರಣಕ್ಕೆ ಒಗ್ಗಿಸಿ, ಹದ ಮಾಡಿ, ದೇಶಕ್ಕಾಗಿ ಜೀವವನ್ನೂ ತ್ಯಾಗ ಮಾಡುವ ಹಂತಕ್ಕೆ ಅಣಿಗೊಳಿಸುವುದು ಬಹು ದೊಡ್ಡ ಸವಾಲೇ ಸರಿ. ಕೇವಲ 12ನೇ ತರಗತಿ ಮುಗಿಸಿ ಬಂದಿರುವ ‘ಮಕ್ಕಳ’ನ್ನು ದೇಶಕ್ಕಾಗಿ ಸಮಸ್ತವನ್ನೂ ತ್ಯಾಗ ಮಾಡಿಸುವ ಮನಃಸ್ಥಿತಿ ಬೆಳೆಸಿಕೊಳ್ಳುವ ಮಟ್ಟಕ್ಕೆ ಅಣಿಗೊಳಿಸಲು ಸಿಕ್ಕ ಅಪರೂಪದ ಮತ್ತು ಹೆಮ್ಮೆಯ ಕೆಲಸವೆಂದೇ ನಾನಿದನ್ನು ನಿರ್ವಹಿಸಿದೆ. ಇದಕ್ಕೆ ಧೈರ್ಯ, ಸಹನೆ ಮತ್ತು ಚಾಣಾಕ್ಷತೆಯೂ ಬೇಕಾಗುತ್ತಿತ್ತು. ಇದು ಒಂದು ರೀತಿಯಲ್ಲಿ ಬೀಜವನ್ನು ಬಿತ್ತಿ, ಅದು ಮೊಳಕೆಯೊಡೆದು ದೊಡ್ಡದಾಗಿ ಮತ್ತೆ ಫಲ ನೀಡುವ ಹಂತಕ್ಕೆ ಬೆಳೆದ ಅನುಭಾವಕ್ಕೆ ಕಾರಣವಾಗುವ ನನ್ನ ಇಷ್ಟದ ಕೆಲಸವೂ ಆಗಿತ್ತೆಂಬುದು ವಿಶೇಷ-ಆ ಸಂತಸ ನನ್ನದಾಗಿತ್ತು.

ಹೀಗೆ ಅತ್ಯಂತ ಸಮಾಧಾನದ, ಸಂತ್ರಪ್ತವಾದ ಮೂರು ವರ್ಷಗಳನ್ನು ಪೂರೈಸುವ ಮೂರು ತಿಂಗಳ ಮೊದಲು, ನಮ್ಮ ಗರೇಝ್ ಪ್ರಾಂತ್ಯದಲ್ಲಿನ ನಮ್ಮ 1993ರ ಕಾರ್ಯಾಚರಣೆಯ ದಕ್ಷತೆಗಾಗಿ ನಮ್ಮ ಯೂನಿಟ್‍ಗೆ ಪಾರಿತೋಷಕ ಬಂತು. ಇದು ನಮ್ಮ ಇಡೀ ಬೆಟಾಲಿಯನ್‍ಗೆ ಸಂದ ಅತ್ಯಂತ ದೊಡ್ಡ ಸಮ್ಮಾನ.

ಅದು 1998ರ ಒಂದು ದಿನ. ನನಗೊಂದು ಕರೆ ಬಂತು. ಅದು ನನ್ನ ಸೈನಿಕ ಜೀವನದ ಮಹೋನ್ನತ ಮೈಲುಗಲ್ಲಿನ ಸಂದೇಶದ ಕರೆ. ನನಗೆ ಬ್ರಿಗೇಡಿಯರ್ ಆಗಿ ಪದೋನ್ನತಿ ಹೊಂದಲು ‘ಅನುಮೋದನೆ’ ದೊರೆತಿತ್ತು! ಆದರೆ, ಇದು ಇರುವ ಹುದ್ದೆ ಖಾಲಿಯಾದರೆ ಮಾತ್ರ ಸಿಗುವ ಹುದ್ದೆ ಆದ್ದರಿಂದ, ಬ್ರಿಗೇಡಿಯರ್ ಆಗಿ ಪದೋನ್ನತಿಗೆ ನನಗೆ ಅನುಮೋದನೆ ಮಾತ್ರ ಆಗಿದ್ದು, ಕನಿಷ್ಠ 12ರಿಂದ 14ತಿಂಗಳು ನಾನು ಕಾಯಲೇಬೇಕಿತ್ತು. ಆದರೆ, ನಾನು ಈ ರೆಜಿಮೆಂಟ್‍ನಲ್ಲೂ ಇರುವ ಹಾಗಿರಲಿಲ್ಲ. ಈಗಾಗಲೇ ನಾನಿಲ್ಲಿ ಮೂರು ವರ್ಷ ಕಳೆದಿರುವ ಕಾರಣ ನಾನಿಲ್ಲಿಂದ ಹೊರಡಲೇ ಬೇಕಿತ್ತು. ಕರ್ನಾಟಕದ ಯಾವುದಾದರೂ ಪ್ರದೇಶಕ್ಕೆ ವರ್ಗ ಕೇಳಿದೆ. ಬೆಂಗಳೂರು ಕೊಟ್ಟರು. ಆದರೆ, ನನಗೆ ಬೆಂಗಳೂರು ಬೇಡವಾಗಿತ್ತು. ಬದಲಿಸಲು ಕೋರಿದಾಗ ಬಳ್ಳಾರಿ ಎನ್‍ಸಿಸಿ ಘಟಕಕ್ಕೆ ವರ್ಗಾಯಿಸಿದರು. ಇಲ್ಲಿ ಮತ್ತೊಂದು ಸವಾಲು ಸ್ವೀಕರಿಸಲು ನಾನು ಸಿದ್ದನಾದೆ. ದಾವಣಗೆರೆ, ಬಳ್ಳಾರಿ, ರಾಯಚೂರು, ಕಲಬುರ್ಗಿ, ಬೀದರ್, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಕೊಪ್ಪಳಗಳನ್ನೊಳಗೊಂಡ ಅತ್ಯಂತ ದೊಡ್ಡ ಘಟಕವಾಗಿತ್ತದು. ಪ್ರತೀ ವರ್ಷ ರಾಜ್ಯಪಾಲರ ಪದಕ ಗಳಿಕೆಯ ಸ್ಪರ್ಧೆಯಲ್ಲಿ ಬಳ್ಳಾರಿ ಘಟಕ 6ನೆಯ ಸ್ಥಾನಕ್ಕೇ ತೃಪ್ತಿ ಪಟ್ಟುಕೊಳ್ಳುತ್ತಿತ್ತು!. ಇಲ್ಲಿನ ತಮಾಷೆಯ ವಿಷಯವೆಂದರೆ ಕರ್ನಾಟಕದಲ್ಲಿದ್ದ ಒಟ್ಟೂ ಆರು ಘಟಕಗಳು!. ಅಂದರೆ ಈ ಘಟಕ ಇದ್ದ ಪರಿಸ್ಥಿತಿಯ ಗಂಭೀರತೆ ಅರಿತ ನಾನು ಆ ಆರರಿಂದ ಮೇಲೆ ನೆಗೆಯುವ ಸವಾಲಿನೊಂದಿಗೆ ಕಾರ್ಯರೂಪಕ್ಕಿಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT