ಬಾನೆತ್ತರಕ್ಕೆ ಬಲೂನುಗಳನ್ನು ಏರಿಸುವವರ, ಬೀಳಿಸುವವರ ಕತೆ ಇದು: ನಾಗೇಶ ಹೆಗಡೆ ಲೇಖನ

ಜಗತ್ತಿನ ಖಗೋಲ ವೀಕ್ಷಕರೆಲ್ಲ ಕಳೆದ ವಾರವಿಡೀ ಹಸಿರು ಧೂಮಕೇತುವನ್ನು ನೋಡುತ್ತಿದ್ದರೆ ಪಾಶ್ಚಿಮಾತ್ಯ ಮಾಧ್ಯಮಗಳು ಅಮೆರಿಕದ ಆಕಾಶದಲ್ಲಿನ ಬಿಳೀ ಬಲೂನನ್ನು ನೋಡುತ್ತಿದ್ದವು. ಹುಣ್ಣಿಮೆಯ ಚಂದದ ಚಂದ್ರನಂತೆ ಆ ಬಲೂನು ಅಮೆರಿಕದ ನೀಲಾಕಾಶದಲ್ಲಿ, 30 ಕಿ.ಮೀ. ಎತ್ತರದಲ್ಲಿ ಮೆಲ್ಲಗೆ ತೇಲುತ್ತ ಸಾಗುತ್ತಿತ್ತು. ದುರ್ಬೀನಲ್ಲಿ ಸ್ಪಷ್ಟ ಕಾಣುತ್ತಿದ್ದ ಅದು ಚೀನಾದ ಬಲೂನು ಎಂಬುದಂತೂ ಖಾತರಿಯಾಯಿತು. ಅದರ ತಳದಲ್ಲಿ ಸೋಲಾರ್ ಫಲಕಗಳನ್ನು ಜೋಡಿಸಲಾಗಿತ್ತು. ಜೊತೆಗೆ ಪೆಟ್ಟಿಗೆಯಂಥ ಇನ್ನೇನೋ ಅಲ್ಲಿ ಜೋತಾಡುತ್ತಿತ್ತು.
ಅದು ಬೇಹುಗಾರ ಬಲೂನ್ ಇದ್ದೀತೆ? ಇರಲಿಕ್ಕಿಲ್ಲ. ಚೀನಾದ ಅದೆಷ್ಟೊ ಉಪಗ್ರಹಗಳು ಬಾಹ್ಯಾಕಾಶ ದಲ್ಲಿ ಕಣ್ಣಿಗೆ ಕಾಣದಂತೆ ಸುತ್ತುತ್ತಿದ್ದು ನೆಲದ ಮೇಲಿನ ಎಲ್ಲವನ್ನೂ ಗಮನಿಸುತ್ತಿವೆ. ಹಾಗಿರುವಾಗ ಎಲ್ಲರ ಕಣ್ಣಿಗೂ ಕಾಣುವಂಥ ಈ ಬಲೂನು ಗುಪ್ತ ಕೆಲಸಕ್ಕೆ ಬಂದೀತೆ? ಚೀನೀಯರೇನೊ, ಅದು ಬರೀ ವಾಯುಮಾಪನ ಬಲೂನೆಂದೂ ದಾರಿ ತಪ್ಪಿ ಆ ಕಡೆ ಬಂತೆಂದೂ ಹೇಳುತ್ತಿದ್ದಾರೆ. ಹಾಗಿದ್ದರೆ ಅದು ಅಮೆರಿಕದ ಮೊಂಟಾನಾ ಪ್ರಾಂತದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಚ್ಚಿಟ್ಟ
ಗೂಡುಗಳಿದ್ದಲ್ಲೇ ಠಳಾಯಿಸುತ್ತಿದೆ ಏಕೆ? ಬೇಹುಗಾರ ಬಲೂನೇ ಇರಬೇಕು. ಅದನ್ನು ಹೊಡೆದು ಉರುಳಿಸೋಣವೆ? ಛೆ, ಹಾಗೆ ಮಾಡಿದರೆ ಅದರ ತುಣುಕುಗಳೆಲ್ಲ ಯಾರ ತಲೆಯ ಮೇಲೋ ಬಿದ್ದೀತು. ಮೇಲಾಗಿ, ಅದರಲ್ಲಿ ಇನ್ನೇನೇನು ಶಸ್ತ್ರಾಸ್ತ್ರ, ವಿಷಾನಿಲ ಇವೆಯೊ? ಹೊಡೆಯದೆ ಹಾಗೇ ಬಿಡೋಣವೆ? ಬಿಟ್ಟರೆ ಅದು ಸ್ವದೇಶಕ್ಕೆ ಪರಾರಿಯಾದೀತು.
ಇದೇನೊ ಮಹಾ ಅಪಾಯ ಬಂತೆಂಬಂತೆ ಅಮೆರಿಕದ ಮಿಲಿಟರಿ ವಿಮಾನಗಳು ಬಲೂನಿನ ಸುತ್ತ ಹಾರಾಟ ನಡೆಸಿದ್ದೇನು, ಅವುಗಳ ಕುರಿತು ಮಾಧ್ಯಮಗಳು ವಾರವಿಡೀ ರೋಚಕವಾಗಿ ಬಣ್ಣಿಸಿದ್ದೇನು- ಅಂತೂ ಬಲೂನು ಸಮುದ್ರ ತಟಕ್ಕೆ ಬಂದಿದ್ದೇ ತಡ, ಫೆಬ್ರುವರಿ 4ರಂದು ಅಮೆರಿಕದ ಅಧ್ಯಕ್ಷ ಬೈಡನ್ ಅದನ್ನು ಹೊಡೆದುರುಳಿಸಲು ಆದೇಶ ಕೊಟ್ಟೇಬಿಟ್ಟರು. ತಟದ ಮೂರು ನಗರಗಳ ವಿಮಾನ ಹಾರಾಟವನ್ನು ತಡೆಹಿಡಿದು, ಎಫ್-22 ವಿಮಾನ ಮೇಲಕ್ಕೇರಿತು. ಅದರ ನೆತ್ತಿಯಿಂದ ಸೈಡ್‌ವೈಂಡರ್ ಕ್ಷಿಪಣಿ ಹಾರಿತು. ಅದು ಅಡ್ಡತಿಡ್ಡ ಸುತ್ತುತ್ತ ಶಾಖಮೂಲವನ್ನು ಮೂಸುತ್ತ ಬಲೂನನ್ನು ಪತ್ತೆ ಮಾಡಿ ಚಿಂದಿ ಮಾಡಿ ಬೀಳಿಸಿತು. ಸಮುದ್ರಕ್ಕೆ ಬಿದ್ದ ಅದರ ತುಣುಕುಗಳನ್ನು ಹೆಕ್ಕಲು ಅಮೆರಿಕದ ಚದುರಂಗ ಬಲವೇ ಧಾವಿಸಿತು. ಏಕೆಂದರೆ ಚೀನೀಯರು ತಮ್ಮದಕ್ಕಿಂತ ಸುಧಾರಿತ ಟೆಕ್ನಾಲಜಿಯನ್ನು ಬಳಸುತ್ತಿದ್ದರೆ
ಗೊತ್ತಾಗಬೇಕಲ್ಲ?
ಅತ್ತ ಬಿಬಿಸಿ, ಸಿಎನ್‌ಎನ್‌ಗಳಲ್ಲಿ ಅಹೋರಾತ್ರಿ ಈ ಕುರಿತು ಚರ್ಚೆ ನಡೆಯುತ್ತಿದ್ದಾಗ ಇತ್ತ ಚೀನಾ ದೇಶ ತನ್ನದೇ ಸಂಭ್ರಮದಲ್ಲಿತ್ತು. ಅಲ್ಲಿನ ಪ್ರಜೆಗಳಿಗೆ ಈಗ ಚಾಂದ್ರಮಾನ ಪಂಚಾಂಗದ ಹೊಸ ವರ್ಷ. ಅದು ಅವರಿಗೆ ದೀಪಾವಳಿ ಹಬ್ಬ (ಲ್ಯಾಂಟರ್ನ್ ಫೆಸ್ಟಿವಲ್). ಆಕಾಶದಲ್ಲಿನ ಪೂರ್ಣಚಂದ್ರನನ್ನು ಕಣ್ತುಂಬಿಕೊಳ್ಳುತ್ತ ಕೋಟಿಗಟ್ಟಲೆ ದೀಪದ ಬಲೂನ್‌ಗಳನ್ನು ಆಕಾಶಕ್ಕೆ ಹಾರಿಸುತ್ತಿತ್ತು. ಅವರ ಸಂಭ್ರಮಕ್ಕೆ ವಿಶೇಷ ಕಾರಣವೂ ಇತ್ತು. ಚಂದ್ರನತ್ತ ಅವರು ಹಾರಿಬಿಟ್ಟಿದ್ದ ‘ಚಾಂಗಿ-4’ ಹೆಸರಿನ ನೌಕೆ ಚಂದ್ರನ ಬೆನ್ನಿನ ಕತ್ತಲ ಭಾಗದಲ್ಲಿ ಸುರಕ್ಷಿತವಾಗಿ ಇಳಿದು ಇದೀಗ ನಾಲ್ಕನೆಯ ವರ್ಷಕ್ಕೆ ಪದಾರ್ಪಣೆ ಮಾಡಿತ್ತು. ಅಂಥ ಸಾಧನೆ ಮಾಡಿದ ಏಕೈಕ ರಾಷ್ಟ್ರ ಇದು. ಆ ನೌಕೆಯಿಂದ ಹೊರಬಿದ್ದ ಯುಟು-2 ಹೆಸರಿನ ಪುಟ್ಟ ಗಾಡಿಯೊಂದು ಈಗಲೂ ಅಲ್ಲಿ ಓಡಾಡುತ್ತಲೇ ಇದೆ.
1970ರ ದಶಕದಲ್ಲಿ ಸೋವಿಯತ್ ರಷ್ಯಾ ಮತ್ತು ಅಮೆರಿಕ ಎರಡೂ ರಾಷ್ಟ್ರಗಳು ಚಂದ್ರನ ಮೇಲೆ ಅಲ್ಪಾವಧಿಯ ಗಾಡಿ ಓಡಿಸಿದ್ದು ಬಿಟ್ಟರೆ ಈ 75 ವರ್ಷಗಳಲ್ಲಿ ಇಂಥ ಸಾಹಸ ಮಾಡಿದ್ದು ಚೀನಾ ಮಾತ್ರ. ಅದೆಲ್ಲ ಗೊತ್ತಿರುವ ಅಮೆರಿಕ ಈಗ ಯಃಕಶ್ಚಿತ ಚೀನೀ ಬಲೂನೊಂದನ್ನು ಹೊಡೆದುರುಳಿಸಿ ಅದರ ಚಿಂದಿಯಲ್ಲಿ ಚೀನಾದ ತಂತ್ರಜ್ಞಾನದ ರಹಸ್ಯವೇನೆಂದು ಹುಡುಕುವುದೆ? ಟರ್ಕಿ- ಸಿರಿಯಾ ಭೂಕಂಪ ಆಗಿರದಿದ್ದರೆ ಪಾಶ್ಚಾತ್ಯ ಮಾಧ್ಯಮಗಳು ಇನ್ನೂ ಒಂದು ವಾರ ಆ ಬಲೂನನ್ನೇ ಹಿಂಜುತ್ತಿರುತ್ತಿದ್ದವು.
ಈ ಮಧ್ಯೆ ಮೆಕ್ಸಿಕೊದ ‘ಮೇಕ್ ಸನ್‌ಸೆಟ್’ ಸಂಸ್ಥೆಯ ಒಂದು ಬಲೂನ್ ಸಾಹಸಕ್ಕೆ ಅಲ್ಲಿನ ಸರ್ಕಾರವೇ ಸೂಜಿ ಚುಚ್ಚಿದೆ. ಭೂಮಿ ಬಿಸಿಯೇರುವುದನ್ನು ತಡೆಯಲೆಂದು ಸನ್‌ಸೆಟ್ ಸಂಸ್ಥೆ ಹೊಸ ಪ್ರಯೋಗಕ್ಕೆ ಕೈಹಾಕಿತ್ತು. ವಾಯುಮಂಡಲದ ಅತಿ ಎತ್ತರದಲ್ಲಿ ಸಲ್ಫರ್ ಡೈಆಕ್ಸೈಡ್ (ಗಂಧಕದ ಭಸ್ಮ- SO2) ಅನಿಲಕಣಗಳನ್ನು ಎರಚಿದರೆ ಸೂರ್ಯನ ಕಿರಣಗಳು ಭೂಮಿಗೆ ಬರುವ ಬದಲು ಪ್ರತಿಫಲನಗೊಂಡು ಆಚೆ ಹೊರಟುಹೋಗುತ್ತವೆ
ಎಂದು ವಿಜ್ಞಾನ ಹೇಳುತ್ತದೆ. ಅದರ ಪರೀಕ್ಷೆಗೆಂದು ಬಲೂನಿನಲ್ಲಿ ಹೀಲಿಯಂ ಅನಿಲವನ್ನೂ ಗಂಧಕದ ಭಸ್ಮವನ್ನೂ ತುಂಬಿ ಹಾರಿಸಲು ಮೆಕ್ಸಿಕೊದ ಟೆಕಿಗಳು ಹೊರಟಿದ್ದರು. ತೀರ ಮೇಲಕ್ಕೆ ಹೋದಾಗ ಬಲೂನ್ ತಂತಾನೇ ಹಿಗ್ಗಿ ಒಡೆದು ಗಂಧಕದ ಭಸ್ಮವೂ ಹೊರಬಿದ್ದು ಭೂಮಿ ತಂಪಾಗುತ್ತದೆ ಎಂದು ಅವರು ಎಣಿಸಿದ್ದರು. ಅಂಥ ಜಿಯೊ ಎಂಜಿನಿಯರಿಂಗ್ ಪ್ರಯೋಗಕ್ಕೆ ಅಂತರ ರಾಷ್ಟ್ರೀಯ ಮಾನ್ಯತೆ ಸಿಕ್ಕಿಲ್ಲ. ಏಕೆಂದರೆ, ಅದರ ಅಡ್ಡ ಪರಿಣಾಮ ಎಲ್ಲೆಲ್ಲಿ ಹೇಗೆ ಆದೀತು ಎಂಬುದು ಯಾರಿಗೂ ಗೊತ್ತಿಲ್ಲ.
ವಾಯುಮಂಡಲ ಎಲ್ಲರ ಸಾಮೂಹಿಕ ಆಸ್ತಿ ಆಗಿರುವುದರಿಂದ ಅದರಲ್ಲಿ ಬೇಕಾಬಿಟ್ಟಿ ಹಸ್ತಕ್ಷೇಪ ಮಾಡುವಂತಿಲ್ಲ. ದೊಡ್ಡ ಪ್ರಮಾಣದಲ್ಲಿ ಇಂಥ ಪ್ರಯೋಗಗಳು ನಡೆದರೆ ಯಾವುದೋ ದೇಶದಲ್ಲಿ ಆಸಿಡ್ ಮಳೆ ಸುರಿದೀತು, ಫಸಲು ಇಳುವರಿ ಕುಸಿದೀತು ಎಂಬೆಲ್ಲ ಶಂಕೆಗಳಿವೆ. ಅದಕ್ಕಿಂತ ದೊಡ್ಡ ಆಕ್ಷೇಪಣೆ ಏನೆಂದರೆ, ಇಂಥ ಸರಳ ಉಪಾಯ ಗೊತ್ತಾದರೆ, ಉದ್ಯಮಿಗಳು ಎಂದಿನಂತೆ ಫಾಸಿಲ್ ಇಂಧನಗಳನ್ನು ಎಗ್ಗಿಲ್ಲದೆ ಸುಡುತ್ತ, ವಾಯುಮಂಡಲಕ್ಕೆ ಕೊಳೆಯನ್ನು ಕಕ್ಕುತ್ತಲೇ ಹೋಗುತ್ತಾರೆ. ಅವುಗಳನ್ನು ಸರಿದಾರಿಗೆ ತರುವ ಯತ್ನ ನಡೆಯಬೇಕೇ ವಿನಾ, ಸೂರ್ಯಕಿರಣವನ್ನು ಅಡ್ಡದಾರಿಗೆ ಕಳಿಸುವುದು ಒಳ್ಳೆಯದಲ್ಲ ತಾನೆ?
ಈಗ ಕೊನೆಯ ಬಲೂನಿಗೆ ಬರೋಣ. ಅದು ನಮಗೆಲ್ಲ ಈಗ ಸುಪರಿಚಿತವಾದ ‘ಹಿಂಡೆನ್‌ಬರ್ಗ್’ಗೆ ಸಂಬಂಧಿಸಿದ್ದು. ಬಲೂನಿನಲ್ಲಿ ಹೈಡ್ರೊಜನ್ ಅನಿಲವನ್ನು ತುಂಬಿ, ಅದರ ಮೇಲೆ ಸವಾರಿ ಮಾಡುವ ತಂತ್ರ 1910ರ ದಶಕದಲ್ಲಿ ಯುರೋಪ್‌ನಲ್ಲಿ ಜಾರಿಗೆ ಬಂದಿತ್ತು. ಸಣ್ಣ ಕಿಡಿ ಹೊತ್ತಿದರೂ ಹೈಡ್ರೊಜನ್ ಅನಿಲ ಸ್ಫೋಟಿಸುವ ಅಪಾಯವಿದ್ದರೂ ಅಂಥ ಏರ್ ಬಲೂನ್‌ಗಳಲ್ಲಿ ಯುರೋಪ್‌ನಿಂದ ಅಮೆರಿಕಕ್ಕೆ ಜನರು ಪ್ರಯಾಣ ಮಾಡುತ್ತಿದ್ದರು. ‘ಹಿಂಡೆನ್‌ಬರ್ಗ್’ ಹೆಸರಿನ ಕಂಪನಿಯ ಬಲೂನ್ ವಿಮಾನವೊಂದು (ಏರ್‌ಶಿಪ್) ಜರ್ಮನಿಯ ಫ್ರಾಂಕ್‌ಫರ್ಟ್ ನಗರದಿಂದ ಅಟ್ಲಾಂಟಿಕ್ ಸಾಗರವನ್ನು ದಾಟಿ, ಮೂರು ದಿನಗಳ ನಂತರ ಅಮೆರಿಕದ ನ್ಯೂಜೆರ್ಸಿಗೆ ಹೋಗಿ, ಅಲ್ಲಿ ಇನ್ನೇನು ಇಳಿಯಬೇಕೆನ್ನುವಾಗ ಇಡೀ ಬಲೂನು ಸ್ಫೋಟಿಸಿತು. ಪ್ರಯಾಣಿಕರು ಬೆಂಕಿಯ ಚೆಂಡುಗಳಂತೆ ಉದುರಿದರು. 1937ರ ಮೇ 7ರಂದು ಸಂಭವಿಸಿದ ಈ ದುರಂತಕ್ಕೆ ಮನುಷ್ಯನ ನಿರ್ಲಕ್ಷ್ಯವೇ ಕಾರಣ ತಾನೆ? ಅಂಥ ಈಗಿನ ದುಸ್ಸಾಹಸಗಳ ಮೇಲೆ ಕಣ್ಣಿಡಲೆಂದೇ ಅಮೆರಿಕದಲ್ಲಿ ಷೇರು ವ್ಯವಹಾರದ ಕಂಪನಿಯೊಂದು ಅದೇ ‘ಹಿಂಡೆನ್‌ಬರ್ಗ್’ ಹೆಸರಿನಲ್ಲಿ 2017ರಲ್ಲಿ ಅಸ್ತಿತ್ವಕ್ಕೆ ಬಂತು. ಬಲೂನಿನಂತೆ ಷೇರುಪೇಟೆಯಲ್ಲಿ ಉಬ್ಬುತ್ತ ಹೊರಟ ಕಂಪನಿಗಳ ಮೇಲೆ ಕಣ್ಣಿಡುವುದು, ಬೀಳಿಸುವುದು ಅದರ ಕೆಲಸ. ಅದು ಅದಾನಿ ಕಂಪನಿಯ ಬಲೂನಿಗೆ ಹೊತ್ತಿಸಿದ ಕಿಡಿ ಎಲ್ಲೆಲ್ಲೊ ಸ್ಫೋಟಿಸುತ್ತ ರಾಷ್ಟ್ರವ್ಯಾಪಿ ಸುದ್ದಿಯಾಗಿ, ನಮ್ಮ ಸಂಸತ್ತಿನಲ್ಲೂ ಮೊಳಗುತ್ತಿದೆ.
ವಿಜ್ಞಾನದ ಈ ಅಂಕಣದಲ್ಲಿ ಷೇರುಪೇಟೆಯನ್ನು ಪ್ರಸ್ತಾಪಿಸಲು ಒಂದು ವಿಶೇಷ ನೆಪವಿದೆ: ಹಿಂಡೆನ್‌ಬರ್ಗ್ ದುರಂತಕ್ಕೆ ಹೈಡ್ರೊಜನ್ ಅನಿಲ ಕಾರಣವಾಗಿದ್ದಂತೆ,
ಅದಾನಿ ಸಮೂಹದ ‘ಟೋಟಲ್ ಗ್ಯಾಸ್’ ಮತ್ತು ಹೈಡ್ರೊಜನ್ ಉತ್ಪಾದನೆಗೆ ಹೊರಟಿದ್ದ ‘ಗ್ರೀನ್ ಎನರ್ಜಿ’ ಕಂಪನಿಗಳೇ ಷೇರ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಕುಸಿತ ಕಂಡಿವೆ. ಫ್ರಾನ್ಸ್ ಜೊತೆ ಸೇರಿ ಹೈಡ್ರೊಜನ್ ಉತ್ಪಾದನೆಗೆಂದು ಅದಾನಿ ಸಮೂಹ ಜಗತ್ತಿನ ಅತಿ ದೊಡ್ಡ ಯೋಜನೆಯನ್ನು ಪ್ರಾರಂಭಿಸಿದ್ದು ಅದಕ್ಕೆ ಅನಿಲ್ (ಅದಾನಿ ನ್ಯೂ ಇಂಡಸ್ಟ್ರೀಸ್ ಲಿಮಿಟೆಡ್) ಎಂತಲೇ ಹೆಸರಿಡಲಾಗಿದೆ.
ಎಲ್ಲರಿಗೂ ಕಾಣುವಂತೆ ಚೀನೀ ಬಲೂನಿನ ಚಿಂದಿ ಉಡಾಯಿಸಿದ ಅಮೆರಿಕ, ಇನ್ನೇನೇನನ್ನು ಯಾರಿಗೂ ಗೊತ್ತಾಗದ ಹಾಗೆ ಬೀಳಿಸುತ್ತಿದೆಯೊ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.