ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜಿಕಲ್ ದಾಳಿ ದುಸ್ಸಾಹಸ: ಉಕ್ರೇನಿನ ಪರಮಾಣು ಸ್ಥಾವರ ಕೂದಲೆಳೆಯಲ್ಲಿ ಬಚಾವಾದ ಕಥನ

ನಾಗೇಶ ಹೆಗಡೆ ಲೇಖನ
Last Updated 10 ಮಾರ್ಚ್ 2022, 1:04 IST
ಅಕ್ಷರ ಗಾತ್ರ

ಪ್ರಶ್ನೆ: ಮನುಷ್ಯನಿಂದಾಗಿ ಈ ಭೂಮಿಗೆ ಬರಬಹುದಾದ ಅತ್ಯಂತ ಭೀಕರ ದುರಂತ ಯಾವುದಾಗಬಹುದು?

ಉತ್ತರ: ಅತಿ ದೊಡ್ಡ ಪರಮಾಣು ಸ್ಥಾವರದ ಮೇಲೆ ಮೆಗಾಟನ್‌ ಸಾಮರ್ಥ್ಯದ ಪರಮಾಣು ಬಾಂಬ್‌ ಬೀಳುವುದು.

ಅಂಥ ದುರಂತ ಆಗಲಾರದೆಂಬ ವಿಶ್ವಾಸ ನಮಗಿದೆ ಅನ್ನಿ. ಆದರೂ ಕಳೆದ ವಾರ ರಷ್ಯಾದ ಬಾಂಬರ್‌ ವಿಮಾನವೊಂದು ಉಕ್ರೇನ್‌ನ (ಯುರೋಪ್‌ನ) ಅತಿ ದೊಡ್ಡ ಪರಮಾಣು ಸ್ಥಾವರದ ಮೇಲೆ ಶೆಲ್‌ ದಾಳಿ ನಡೆಸಿತು. ಸ್ಥಾವರದ ಮೇಲೆ ನೇರವಾಗಿ ಶೆಲ್‌ ಬಿದ್ದಿಲ್ಲ. ಅಲ್ಲಿಂದ 300 ಮೀಟರ್‌ ದೂರದ ತರಬೇತಿ ಕೇಂದ್ರದ ಮೇಲೆ ಬಿದ್ದು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಅಗ್ನಿಶಾಮಕ ದಳ ಅದರ ಸಮೀಪ ಕೂಡ ಹೋಗದಂತೆ ಸುತ್ತೆಲ್ಲ ಬೆಂಕಿ ಬಾಣಗಳ ಸುರಿಮಳೆ ಆಗತೊಡಗಿತ್ತು. ‘ದೇವರು ದೊಡ್ಡವನು! ನಿನ್ನೆ ರಾತ್ರಿ ಮಹಾ ಪರಮಾಣು ದುರಂತವೊಂದರಿಂದ ಭೂಮಿ ಬಚಾವಾಯಿತು’ ಎಂದು ವಿಶ್ವಸಂಸ್ಥೆಯ ಅಮೆರಿಕನ್‌ ರಾಯಭಾರಿ ನಿಟ್ಟುಸಿರೆಳೆದರು.

‘ನಾನು ನಿಜಕ್ಕೂ ಕಂಗಾಲಾದೆ’ ಎಂದು ಬ್ರಿಟನ್ನಿನ ಶೆಫೀಲ್ಡ್‌ ವಿಶ್ವವಿದ್ಯಾಲಯದ ಪರಮಾಣು ದ್ರವ್ಯತಜ್ಞರೊಬ್ಬರು ಉದ್ಗರಿಸಿದ್ದನ್ನು ಬಿಬಿಸಿ ವರದಿ ಮಾಡಿತು. ‘ಪರಮಾಣು ಸ್ಥಾವರವೇನಾದರೂ ಸ್ಫೋಟಗೊಂಡಿದ್ದರೆ ಅದು ಚೆರ್ನೊಬಿಲ್‌ಗಿಂತ ಹತ್ತು ಪಟ್ಟು ಭೀಕರ ದುರಂತ ಆಗಬಹುದಿತ್ತು’ ಎಂದರು, ಉಕ್ರೇನಿನ ವಿದೇಶಾಂಗ ಸಚಿವ ಡಿಮಿತ್ರಿ ಕುಲೇಬಾ.

ಶೆಲ್‌ ದಾಳಿಯ ಆ ಸುದ್ದಿಯಿಂದ ಹೊಮ್ಮಿದ ಆಘಾತದ ಅಲೆಗಳು ಪ್ರಪಂಚದ ಎಲ್ಲ ಪರಮಾಣು ತಜ್ಞರನ್ನು, ಚಿಂತಕರನ್ನು ಕಂಗೆಡಿಸಿದವು. ಎಲ್ಲ ದೇಶಗಳ ಪರಮಾಣು ಸ್ಥಾವರಗಳ ಮೇಲೆ ಕಣ್ಣಿಟ್ಟಿರುವ ‘ಅಂತಾರಾಷ್ಟ್ರೀಯ ಪರಮಾಣು ಶಕ್ತಿ ನಿಗಮ’ ಯುರೋಪಿನ ತನ್ನೆಲ್ಲ ತುರ್ತು ವೀಕ್ಷಣಾ ಕೇಂದ್ರಗಳಿಗೆ ಕಟ್ಟೆಚ್ಚರದ ಆದೇಶ ನೀಡಿತು. ಪರಮಾಣು ಸ್ಥಾವರಗಳ ಮೇಲೆ ದಾಳಿ ಮಾಡಿದರೆ ಏನೆಲ್ಲ ಭೀಕರ ಪರಿಣಾಮ ಆದೀತೆಂದು ರಷ್ಯಾಕ್ಕೆ ಸಂದೇಶ ಕಳಿಸಿ, ದಾಳಿ ನಿಲ್ಲಿಸುವಂತೆ ಕೋರಿತು.

ಪರಮಾಣು ಸ್ಥಾವರಗಳನ್ನು ತುಂಬ ಭದ್ರವಾಗಿ ಕಟ್ಟಿರುತ್ತಾರೆ. ಸಾಮಾನ್ಯ ಶೆಲ್‌ ದಾಳಿಗೆ ಅವು ಸುಲಭಕ್ಕೆ ಕುಸಿಯುವುದಿಲ್ಲ (ನಮ್ಮ ಕೈಗಾದಲ್ಲಿ ನಿರ್ಮಾಣ ಹಂತದಲ್ಲೇ ಗುಮ್ಮಟದ ಒಳಭಾಗದ ಕಾಂಕ್ರೀಟ್‌ ಕವಚ ಕುಸಿದು ಬಿದ್ದಿತ್ತು, ಆ ಮಾತು ಬೇರೆ). ಅದರಲ್ಲೂ ಈಗ ದಾಳಿಗೊಳಗಾದ ಉಕ್ರೇನಿನ ಝಪ್ಪೊರ್‍ರೀಷಾ ಪರಮಾಣು ಸ್ಥಾವರ ಯುರೋಪ್‌ ಖಂಡದ ಅತಿ ದೊಡ್ಡ ಪರಮಾಣು ಸಂಕೀರ್ಣ ಎನ್ನಿಸಿದ್ದು ಅದರಲ್ಲಿನ ಆರೂ ಘಟಕಗಳು (ಒಂದೊಂದೂ 950 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಘಟಕ) ಸಾಕಷ್ಟು ಗಟ್ಟಿಮುಟ್ಟಾಗಿವೆ ಎಂದು ಹೇಳಲಾಗಿದೆ. ವಿಮಾನವೇ ಬಂದಪ್ಪಳಿಸಿದರೂ ಜಪ್ಪೆನ್ನದ ಉಕ್ಕಿನ ಬಿಗಿಬಲದ ಕಾಂಕ್ರೀಟ್‌ ಸೂರು ಅವಕ್ಕಿದೆ. ಅದರ ಕೆಳಗಿನ ಕುಲುಮೆಯಂತೂ 20 ಸೆಂಟಿಮೀಟರ್‌ ದಪ್ಪದ ಉಕ್ಕಿನ ಕವಚದ ಗರ್ಭಗುಡಿ. ಅದರೊಳಗಿನ ಅಗ್ನಿಯೇ ನಿಯಂತ್ರಣ ತಪ್ಪಿ ಸಿಡಿದರೆ ಮಾತ್ರ ಅದು ಮತ್ತೊಂದು ಚೆರ್ನೊಬಿಲ್‌.

ಆದರೆ ಸಾಮಾನ್ಯ ಶೆಲ್‌ ದಾಳಿಯಿಂದ ಆ ಗರ್ಭಗುಡಿಯೂ ಒಳಗಿಂದಲೇ ಸ್ಫೋಟಿಸುವ ಸಾಧ್ಯತೆ ಇತ್ತು. ಹೇಗೆ ಗೊತ್ತೆ? ದಾಳಿಯ ಮುನ್ಸೂಚನೆ ಸಿಕ್ಕಾಕ್ಷಣ ಐದು ರಿಯಾಕ್ಟರ್‌ಗಳನ್ನು ಉಕ್ರೇನಿ ಪರಮಾಣು ಸುರಕ್ಷಾ ಅಧಿಕಾರಿಗಳು ಸ್ವಿಚಾಫ್‌ ಮಾಡಿದ್ದರು. ಸ್ವಿಚಾಫ್‌ ಎಂದರೆ ಸ್ಟವ್‌ ಆರಿಸಿದ ಹಾಗಲ್ಲ. ಅದರ ಕಾವು ತಂಪಾಗಲು ಕನಿಷ್ಠ 30 ಗಂಟೆ ಬೇಕು. ಆ ಅವಧಿಯಲ್ಲಿ ಹೊರಗಿನಿಂದ ನಿರಂತರ ವಿದ್ಯುತ್‌ ಪೂರೈಕೆ ಆಗುತ್ತಿರಲೇಬೇಕು. ಆಗಮಾತ್ರ ಒಳಗಿನ ನಿಗಿನಿಗಿ ಯುರೇನಿಯಂ ಸೌದೆಗಳನ್ನು ಮೆಲ್ಲಗೆ ಹಿಂದಕ್ಕೆಳೆದು, ಜ್ವಾಲೆಯನ್ನು ನಿಯಂತ್ರಿಸಿ ತಂಪು ಮಾಡಲು ಸಾಧ್ಯ. ಆ ಅವಧಿಯಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡರೆ ಒಳಗಿನ ಜ್ವಾಲೆ ಅನಿಯಂತ್ರಿತವಾಗಿ ಉರಿಯುತ್ತ ಹೋಗುತ್ತದೆ. ಜಪಾನಿನ ಫುಕುಶಿಮಾದಲ್ಲಿ 2011ರಲ್ಲಿ ಸುನಾಮಿಯಿಂದಾಗಿ ಹಾಗೇ ಆಗಿತ್ತು. ಇಲ್ಲಿ, ಶೆಲ್‌ ದಾಳಿಯಿಂದಾಗಿ ಕರೆಂಟ್‌ ಹೋಗಿದ್ದಿದ್ದರೆ ಐದೂ ಘಟಕಗಳು ಒಳಗಿನಿಂದಲೇ ಸ್ಫೋಟಗೊಳ್ಳುವ ಸಾಧ್ಯತೆಯಿತ್ತು.

ಶೆಲ್‌ ದಾಳಿಯಿಂದಾಗಿ ಇನ್ನೊಂದು ರೀತಿಯಿಂದ ಚೆರ್ನೊಬಿಲ್‌ ಮಾದರಿಯ ಅವಘಡ ಸಾಧ್ಯವಿತ್ತು. ಹೇಗೆಂದರೆ, ಬಾಂಬರ್‌ ವಿಮಾನದ ಪೈಲಟ್‌ ತುಂಬ ನಾಜೂಕಾಗಿ ಬೇಕಂತಲೇ ಪರಮಾಣು ಕುಲುಮೆಯಿಂದ ತುಸು ದೂರ ಶೆಲ್‌ ಬೀಳಿಸಿದ ಎಂತಲೇ ಇಟ್ಟುಕೊಳ್ಳೋಣ. ಜಗತ್ತಿನ ಎಲ್ಲ ಸ್ಥಾವರಗಳ ಸಮೀಪದಲ್ಲೂ ಈಜುಗೊಳದಂಥ ತೊಟ್ಟಿಗಳಲ್ಲಿ ಪರಮಾಣು ತ್ಯಾಜ್ಯಗಳನ್ನು ತಂಪುಗೊಳಿಸಲೆಂದು ಆಸಿಡ್‌ನಲ್ಲಿ ಮುಳುಗಿಸಿ ಇಟ್ಟಿರುತ್ತಾರೆ. ಅವೆಲ್ಲವೂ ಪ್ರಖರ ವಿಕಿರಣವನ್ನು ಬೀರುತ್ತಿರುವ ಯುರೇನಿಯಂ ಮತ್ತು ಪ್ಲುಟೋನಿಯಂ ಇಂಧನ ಸರಳುಗಳು. ಅಂದು ಬಿಬಿಸಿ ಬಿತ್ತರಿಸಿದ ವಿಡಿಯೊ ಮತ್ತು ಉಪಗ್ರಹ ನಕ್ಷೆಗಳಲ್ಲಿ ಅಂಥ ತೊಟ್ಟಿಗಳಿರುವ ತಾಣ ಕಾಣುತ್ತಿದೆ. ರಷ್ಯಾದ ಯೋಧರು ಬೀಳಿಸಿದ ಶೆಲ್‌ ತನ್ನ ಗುರಿಗಿಂತ ತುಸುವೇ ಆಚೀಚೆ ಅಪ್ಪಳಿಸಿ ತೊಟ್ಟಿಯ ದ್ರವ್ಯಗಳನ್ನು ಸಿಡಿಸಿದ್ದರೂ ತುರ್ತಾಗಿ ಇಡೀ ಸಂಕೀರ್ಣವನ್ನು ಮತ್ತು ಪಕ್ಕದ ನೀಪಾ ನದಿಯ ದಡದ ಎನರ್ಗೊಡಾರ್‌ ಪಟ್ಟಣವನ್ನು ಖಾಲಿ ಮಾಡಬೇಕಾಗುತ್ತಿತ್ತು.

‘ಪರಮಾಣು ಸ್ಥಾವರದ ಮೇಲೆ ನೇರ ದಾಳಿಯೇನಾದರೂ ನಡೆದರೆ ಇಡೀ ಯುರೋಪ್‌ ಖಾಲಿಯಾಗುತ್ತದೆ; ಎಲ್ಲರ ಅಂತ್ಯವಾಗುತ್ತದೆ’ ಎಂಬರ್ಥದಲ್ಲಿ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್‌ಕಿ ಮಾರ್ಚ್‌ 4ರ ಶೆಲ್‌ ದಾಳಿಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ ಹಾಗೆ ಸುಲಭದಲ್ಲಿ ಎಲ್ಲರ ಅಂತ್ಯವಾಗುವುದಿಲ್ಲ.

ಪರಮಾಣು ಬಾಂಬನ್ನೇ ಬೀಳಿಸಿ ಇಡೀ ಸ್ಥಾವರ ಸಂಕೀರ್ಣವನ್ನೇ (ಚೆರ್ನೊಬಿಲ್‌ ಅಥವಾ ಫುಕುಶಿಮಾ ಥರಾ) ಸ್ಫೋಟಿಸಿದರೂ ಅಷ್ಟು ಸುಲಭದಲ್ಲಿ ಎಲ್ಲ ಕತೆ ಮುಗಿಯುವುದಿಲ್ಲ. ಅದಕ್ಕಿಂತ ಗಂಭೀರ ಸಾಧ್ಯತೆಗಳೂ ಇವೆ. ಸಿಡಿತದ ಮೊದಲ ಕ್ಷಣಗಳಲ್ಲಿ ಸುತ್ತಲಿನ ನೂರಾರು ಚದರ ಕಿ.ಮೀ. ವ್ಯಾಪ್ತಿಯ ಎಲ್ಲವೂ ಧ್ವಂಸವಾಗುತ್ತವೆ.

ಆಘಾತದ ಅಲೆಗಳು ಶರವೇಗದಲ್ಲಿ ಸಾಗಿ ದೂರದ ರೈಲು, ಹಡಗುಗಳನ್ನೂ ಪಲ್ಟಿ ಹೊಡೆಸುತ್ತವೆ. ಅಲ್ಲೆಲ್ಲ ಹೊಮ್ಮುವ ಬೆಂಕಿ, ಅಲ್ಲಲ್ಲಿನ ಪೆಟ್ರೋಲ್‌, ಡೀಸೆಲ್‌, ಪ್ಲಾಸ್ಟಿಕ್‌ ಗೋದಾಮುಗಳನ್ನೂ ಶಸ್ತ್ರಾಗಾರಗಳನ್ನೂ ಸಿಡಿಸುತ್ತ ಹೋಗುತ್ತದೆ. 2020ರ ಆಗಸ್ಟ್‌ನಲ್ಲಿ ಬೀರೂತ್‌ ಬಂದರಿನಲ್ಲಿ ಯಃಕಶ್ಚಿತ ರಸಗೊಬ್ಬರ ಗೋದಾಮು ಸ್ಫೋಟಿಸಿದಾಗ ಹೀಗೇ ಆಗಿತ್ತು. 270 ಜನರನ್ನು ಬಲಿ ಪಡೆದ ಆ ದುರಂತದಲ್ಲಿ ಏಳು ಸಾವಿರ ಜನರು ಗಾಯಗೊಂಡು ಮೂರು ಲಕ್ಷ ಜನರು ನಿರಾಶ್ರಿತರಾದರು.

ಪರಮಾಣು ಸ್ಥಾವರ ಸ್ಫೋಟಿಸಿದರೆ ವಿಕಿರಣಪೂರಿತ ಬಿಸಿಮಳೆ, ಮಸಿಮಳೆ ಸುರಿಯುತ್ತ ಸೂರ್ಯ ರಶ್ಮಿಯೇ ಮಾಯವಾಗಿ ಅಣುಚಳಿಗಾಲ ಆವರಿಸುತ್ತದೆ. ಬದುಕಿ ಉಳಿದ ಗಾಯಾಳುಗಳ ಪಾಲಿಗೆ ನೀರು, ಹಾಲು, ಆಹಾರ ಎಲ್ಲವೂ ವಿಷಮಯವಾಗಿ, ಸಾವಿಗಾಗಿ ಜನಸ್ತೋಮ ಮೊರೆ ಇಡುವಂತಾಗುತ್ತದೆ. ಅದಕ್ಕಿಂತ ವಿಶೇಷ ಸಾಧ್ಯತೆ ಇನ್ನೊಂದಿದೆ: ಪರಮಾಣು ಬಾಂಬ್‌ ಸ್ಫೋಟವಾಗುತ್ತಲೆ

ವಿಕಿರಣ ಮೇಘದಿಂದ ಚಿಮ್ಮಿದ ಗ್ಯಾಮಾ ಕಿರಣಗಳು ಭೂಮಿಯ ಅಯಸ್ಕಾಂತ ಕ್ಷೇತ್ರಕ್ಕೆ ತಗುಲಿದರೆ ಅದರಿಂದ ನ್ಯೂಕ್ಲಿಯರ್‌ ಇಲೆಕ್ಟ್ರೊ ಮೆಗ್ನೆಟಿಕ್‌ ತರಂಗ ಮಿಂಚಿನಂತೆ ಸುತ್ತೆಲ್ಲ ವ್ಯಾಪಿಸಿ ಎಲ್ಲ ಲೋಹದ ತಂತಿ-ಕಂಬಿಗಳಲ್ಲೂ
ಹೈವೋಲ್ಟೇಜ್‌ ಹೊಮ್ಮಿಸುತ್ತದೆ. ರಡಾರ್‌ಗಳು, ವಿಮಾನಗಳು ಮತ್ತು ಎಲ್ಲ ಸಂಪರ್ಕ ಸಾಧನಗಳೂ ಆ ಆಘಾತಕ್ಕೆ ನಿಷ್ಕ್ರಿಯ ಆಗುತ್ತವೆ. ಜಗತ್ತಿಗೆಲ್ಲ ವಾರ್ತಾಕತ್ತಲೆ ಆವರಿಸುತ್ತದೆ. ಅದರ ದೂರಗಾಮಿ ಪರಿಣಾಮಗಳನ್ನು ಯಾರೂ ಊಹಿಸಬಹುದು.

ವಿಜ್ಞಾನದ ವರದಾನ ಪಡೆದ ಮನುಷ್ಯ ತನಗೆ ತಾನೇ ಹೀಗೆ ಭಸ್ಮಾಸುರ ಆಗದ ಹಾಗೆ ತಡೆಯಬೇಕು ಹೇಗೆ? ಪರಮಾಣು ಸ್ಥಾವರದ ಅಂಚಿನಲ್ಲಿ ತುಂಬ ನಾಜೂಕಾಗಿ ಸರ್ಜಿಕಲ್‌ ಶೆಲ್‌ ದಾಳಿ ಮಾಡಿದ ಯೋಧನಿಗೆ ಧನ್ಯವಾದ ಹೇಳೋಣವೆ? ಪೃಥ್ವಿಯನ್ನೇ ಪ್ರಪಾತದ ಅಂಚಿಗೆ ತಂದು ನಿಲ್ಲಿಸಿ ಪಾಠ ಹೇಳಿದ್ದಕ್ಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT