ಉತ್ತರ ಧ್ರುವದಲ್ಲಿ ಚುಂಬಕ ಗಾಳಿ

7
ಪೃಥ್ವಿಯ ನೆತ್ತಿಯ ಬಿಸಿಗಾಳಿಗೆ ಉತ್ತರ ಗೋಲಾರ್ಧ ತತ್ತರಿಸಿದೆ

ಉತ್ತರ ಧ್ರುವದಲ್ಲಿ ಚುಂಬಕ ಗಾಳಿ

ನಾಗೇಶ ಹೆಗಡೆ
Published:
Updated:

ಚಳಿಗಾಲ ಎಂದರೆ ವೈರಸ್‍ಗಳ ಕಾಲ. ಅತ್ತ ರಾಜಸ್ಥಾನದಲ್ಲಿ ಹಂದಿಜ್ವರದ ಹಾವಳಿಯಿಂದಾಗಿ ಜನರು ಮನೆಯಿಂದ ಹೊರಕ್ಕೆ ಬರಲು ಹೆದರುತ್ತಿದ್ದಾರೆ. ಇತ್ತ ಪಶ್ಚಿಮ ಘಟ್ಟಗಳ ಎಂಟು ತಾಲ್ಲೂಕುಗಳಲ್ಲಿ ಮಂಗನ ಕಾಯಿಲೆ ಹಾವಳಿಯಿಂದಾಗಿ ಕಾಡಿನ ಒಳಕ್ಕೆ ಹೋಗಲು ಹೆದರುತ್ತಿದ್ದಾರೆ.

ಈ ಕಾಯಿಲೆಗೆ ಔಷಧವನ್ನು ಸೃಷ್ಟಿ ಮಾಡಬೇಕಿದ್ದ ಪುಣೆಯ ವೈರಾಲಜಿ ಸಂಸ್ಥೆಯ ವಿಜ್ಞಾನಿಗಳು ಜನರನ್ನು ಎದುರಿಸಲು ಹೆದರುತ್ತಿದ್ದಾರೆ. ಇವೆಲ್ಲಕ್ಕಿಂತ ಭಿನ್ನವಾದ ವಿದ್ಯಮಾನ ಪೃಥ್ವಿಯ ಆಚೆ ಮಗ್ಗುಲಲ್ಲಿ ನಡೆಯುತ್ತಿದೆ. ಅದೇನೆಂದರೆ, ಈ ಭೂಮಿಯ ಮೇಲಿನ ಎಲ್ಲರನ್ನೂ ನಡುಗಿಸಬಲ್ಲ ಬಲಾಢ್ಯ ಅಮೆರಿಕ ದೇಶ ಕಳೆದ ಎರಡು ವಾರಗಳಿಂದ ನಿಸರ್ಗದ ಛಳಿಯೇಟಿಗೆ ತತ್ತರಿಸುತ್ತಿದೆ.

‘ಭೂಮಿ ಬಿಸಿಯಾಗುತ್ತಿದೆ’ ಎಂದು ವಿಜ್ಞಾನಲೋಕ ಪದೇಪದೇ ಎಚ್ಚರಿಕೆಯ ಗಂಟೆ ಬಾರಿಸುತ್ತಿರುವಾಗ ಉತ್ತರ ಅಮೆರಿಕದ ಬಹಳಷ್ಟು ಭಾಗ ಹಿಂದೆಂದೂ ಕಾಣದಷ್ಟು ಗಾಢ ಚಳಿಯಲ್ಲಿ ಅದ್ದಿ ಕೂತಿದೆ. ‘ಧ್ರುವಸುಳಿ’ (ಪೋಲಾರ್ ವೊರ್ಟೆಕ್ಸ್) ಹೆಸರಿನ ಈ ವೈಚಿತ್ರ್ಯಕ್ಕೆ ವಿಜ್ಞಾನಿ
ಗಳು ಕೊಡುವ ಕಾರಣವೂ ಅಷ್ಟೇ ವಿಲಕ್ಷಣವಾಗಿದೆ: ಭೂಮಿಯ ನೆತ್ತಿಯ ಭಾಗದಲ್ಲಿ ಹಠಾತ್ತಾಗಿ ಬಿಸಿಗಾಳಿ ಎದ್ದಿದ್ದರಿಂದ ಅಲ್ಲಿ ಇಷ್ಟುದಿನ ಸುತ್ತುತ್ತಿದ್ದ ಹಿಮಶೀತಲ ವಾಯುಮಂಡಲಕ್ಕೆ ದಿಕ್ಕುತಪ್ಪಿದಂತಾಗಿದೆ. ಬೋರಲು ಬಟ್ಟಲಿನ ಹಾಗೆ ಧ್ರುವದ ಸುತ್ತ ಚಕ್ರಾಕಾರ ಸುತ್ತುತ್ತಿದ್ದ ಅದರ ಒಂದು ತುಂಡು ಬೇರ್ಪಟ್ಟು ಅಮೆರಿಕದ ಮೇಲೆ ಅಮರಿಕೊಂಡಿದೆ. ಅದರಿಂದಾಗಿ ಅಮೆರಿಕದ ಮಿಡ್‍ವೆಸ್ಟ್ ರಾಜ್ಯಗಳಲ್ಲಿ ಘೋರಾಕಾರ ಚಳಿ ಆವರಿಸಿದೆ.

ಚಳಿ ಎಂದರೆ ಎಂಥ ಚಳಿ? ಶೂನ್ಯದ ಕೆಳಗೆ (ಮೈನಸ್) 40 ಡಿಗ್ರಿಯಿಂದ 60 ಡಿಗ್ರಿ ಸೆಲ್ಸಿಯಸ್- ಅಂದರೆ ಥೇಟ್ ಅಂಟಾರ್ಕ್ಟಿಕಾದ ಹಾಗೆ. ಕುದಿನೀರನ್ನೂ ಹೊರಕ್ಕೆಸೆದರೆ ಹಿಮದ ಪಕಳೆಗಳಾಗಿ ನೆಲಕ್ಕೆ ಬೀಳುವಷ್ಟು ಚಳಿ. ನೆಲದ ಕೆಳಪದರದ ಅಂತರ್ಜಲದ ಪಸೆಯೂ ಹೆಪ್ಪುಗಟ್ಟಿ ಹಿಗ್ಗಿದಾಗ ಅಲ್ಲಲ್ಲಿ ಹಿಮಕಂಪನಗಳಾಗಿ ಸ್ಫೋಟದ ಸದ್ದು. ಬೆಟ್ಟ, ಗುಡ್ಡ, ರಸ್ತೆಗಳೆಲ್ಲ ಬೆಳಗಾಗುವುದರೊಳಗೆ ಬೆಳ್ಳಗಾಗಿ ಸಂಚಾರ ಸ್ಥಗಿತ. ನಗರಗಳೇ ಸ್ತಬ್ಧ. ಕೆಲವು ರಾಜ್ಯಗಳಲ್ಲಿ ತುರ್ತುಸ್ಥಿತಿ ಘೋಷಣೆ. ಅಂದಾಜು 2300ಕ್ಕೂ ವಿಮಾನ ಹಾರಾಟ ರದ್ದಾಗಿ, ಅದೆಷ್ಟೊ ಸಾವಿರ ಯಾನ ತಡವಾಗಿ, ಬಿಡಿ- ಅನೇಕ ನಗರಗಳಲ್ಲಿ ಜನಜೀವನವೇ ರದ್ದಾಗಿದೆ. ಅಂಗಡಿ, ಉದ್ಯಮ, ಮನರಂಜನೆ, ಶಾಲೆ-ಕಾಲೇಜು ಎಲ್ಲಕ್ಕೂ ರಜೆ. ಕಳೆದ ವರ್ಷ ಬೀಜಿಂಗ್‍ನಲ್ಲಿ, ದಿಲ್ಲಿಯಲ್ಲಿ ದಟ್ಟ ಹೊಂಜು ಮುಸುಕಿದಾಗಿನ ಸ್ಥಿತಿಯೇ ಈಗ ಇಲ್ಲಿ ಮಂಜು ಮುಸುಕಿದಾಗಿನ ಸ್ಥಿತಿಯಾಗಿದೆ.

‘ಹೊರಕ್ಕೆ ಹೋಗಬೇಡಿ; ದೇಹದ ಯಾವ ಅಂಗವನ್ನೂ ಹಿಮಕ್ಕೆ ಒಡ್ಡಬೇಡಿ, ಒಡ್ಡಿದರೆ ಫ್ರಾಸ್ಟ್‌ಬೈಟ್ ಆಗುತ್ತದೆ’ ಎಂಬ ಎಚ್ಚರಿಕೆ ಪದೇ ಪದೇ ಟಿವಿ/ರೇಡಿಯೊಗಳಲ್ಲಿ ಬರುತ್ತಿದೆ. ಫ್ರಾಸ್ಟ್‌ಬೈಟ್ ಅಂದರೆ ಕೈಕಾಲಿನ ಬೆರಳು, ಮೂಗಿನ ಹೊರಳೆಯ ರಕ್ತನಾಳಗಳೂ ಹೆಪ್ಪುಗಟ್ಟಿ, ಜೀವಕೋಶಗಳು ಒಡೆಯುತ್ತವೆ. ಅಲಕ್ಷ್ಯ ಮಾಡಿದರೆ ಆ ಅಂಗವನ್ನೇ ಕತ್ತರಿಸಬೇಕಾಗುತ್ತದೆ.

ಅನುಕೂಲಸ್ಥ ಜನರೇನೊ ವಾರದ ಮುಂಚೆಯೇ ಅಗತ್ಯ ಸಾಮಗ್ರಿಗಳನ್ನೆಲ್ಲ ಪೇರಿಸಿಕೊಂಡು ಮನೆಯೊಳಕ್ಕೆ ಬೆಚ್ಚಗೆ ಕೂತು ಟಿವಿಯಲ್ಲಿ ಆಸ್ಟ್ರೇಲಿಯಾದ ಅಗ್ನಿಪ್ರಕೋಪಗಳನ್ನು ನೋಡುತ್ತಿದ್ದಾರೆ (ಅಲ್ಲಿ ಇನ್ನೊಂದು ಅವಾಂತರ: ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿ ಅಲ್ಲಿ ಸೆಕೆ ಹೆಚ್ಚಾಗಿದೆ. ಕೆಲವೆಡೆ ಕನಿಷ್ಠ ತಾಪಮಾನವೇ ನಮ್ಮ ಬಳ್ಳಾರಿಯನ್ನು ಹೋಲುವ 37 ಡಿಗ್ರಿ ಸೆ.ನಷ್ಟಿದೆ. ಹರಿಯುವ ನದಿಗಳಲ್ಲೇ ಮೀನುಗಳು ಸಾಯುತ್ತಿವೆ.

ಕಾಡಿನ ಬೆಂಕಿಯ ವ್ಯಾಪ್ತಿ ಕೂಡ ಹಿಂದಿನ ದಾಖಲೆಗಳನ್ನು ಮೀರಿದೆ). ಅತ್ತ ಅಮೆರಿಕದ ಚಳಿರಾಜ್ಯಗಳ ಲಕ್ಷಾಂತರ ಬಡ ಹೋಮ್ಲೆಸ್ ಜನರಿಗೆ ಟಿವಿ ನೋಡುವ ಭಾಗ್ಯವೂ ಇಲ್ಲ. ಕ್ಲೀವ್ಲಾಂಡ್, ಮಿಲ್ವಾಕೀ, ಷಿಕ್ಯಾಗೊ, ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಮನೆಮಠ ಇಲ್ಲದ ಐದೂವರೆ ಲಕ್ಷ ಜನರು ಬೀದಿ ಬದಿಯಲ್ಲಿ, ಖಾಲಿಸೈಟುಗಳಲ್ಲಿ ವರ್ಷಗಳಿಂದ ವಾಸಿಸುತ್ತಿದ್ದಾರೆ. ಷಿಕ್ಯಾಗೊ ಪ್ರಾಂತವೊಂದರಲ್ಲೇ 80 ಸಾವಿರ ಅಂಥ ‘ಹೋಮ್ಲೆಸ್’ ಜನರಿದ್ದಾರೆ. ತೀವ್ರ ಚಳಿಯಿಂದ ಮರಗಟ್ಟಿ ಕಂಗೆಟ್ಟಿರುವ ಅವರಿಗಾಗಿ ಆಸ್ಪತ್ರೆ, ಪೊಲೀಸ್ ಠಾಣೆ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ‘ಕಾವುಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ; ಅಶಕ್ತರಿಗೆ ಅವರಿದ್ದಲ್ಲೇ ತಾತ್ಕಾಲಿಕ ‘ಆಶ್ರಯ ಹಾಸಿಗೆ’ಗಳನ್ನು ಒದಗಿಸಲಾಗುತ್ತಿದೆ. ನೆರವಿಗೆ ಬನ್ನಿರೆಂದು ಅಂತರ್ಜಾಲದಲ್ಲಿ ಆರ್ತನಾದಗಳು ಹರಿದಾಡುತ್ತಿವೆ. ಕೆಲವು ದಯಾಳುಗಳು ತಮ್ಮ ವೆಚ್ಚದಲ್ಲೇ ಹೋಟೆಲ್ ರೂಮ್ ಹಿಡಿದು ಅವುಗಳಲ್ಲಿ ಬೀದಿವಾಸಿಗಳನ್ನು ತುಂಬುತ್ತಿದ್ದಾರೆ.

ಈ ಮಧ್ಯೆ ಇಂಥ ದುರ್ಭರ ಸಂಗತಿಗಳನ್ನೇ ರಂಜನೀಯವಾಗಿಸುವ ಯತ್ನಗಳೂ ನಡೆದಿವೆ. ಪ್ಯಾಂಟನ್ನು ಸ್ಕರ್ಟನ್ನು ನೀರಲ್ಲಿ ಅದ್ದಿ ಎತ್ತಿದರೆ ಅವು ತಗಡಿನಂತೆ, ಪೀಪಾಯಿಯಂತೆ ಸೆಟೆಯುತ್ತವೆ. ರಸ್ತೆಗಳಲ್ಲಿ ಅವುಗಳನ್ನು ಅರಳಿಸಿ ಅಲ್ಲಲ್ಲಿ ಬೆರ್ಚಪ್ಪನಂತೆ, ರುಂಡವಿಲ್ಲದ ದೇಹಗಳಂತೆ ನಿಲ್ಲಿಸುವ ‘ಫ್ರೋಜನ್ ಪ್ಯಾಂಟ್ ಚಾಲೆಂಜ್’ ಹೆಸರಿನ ಪೈಪೋಟಿಯೇ ನಡೆದಿದೆ. ಹಿಂದೆ, ಟೆಕ್ಸಸ್ ರಾಜ್ಯದಲ್ಲಿ ಸೆಕೆ +50 ಡಿಗ್ರಿ ಸೆ. ತಲುಪಿದಾಗ ‘ದನಗಳ ಕೆಚ್ಚಲನ್ನು ಹಿಂಡಿದರೆ ಹಾಲಿನ ಪುಡಿಯೇ ಉದುರುತ್ತಿದೆ’ ಎಂಬ ಫೇಕ್‍ನ್ಯೂಸ್ ಹಬ್ಬಿತ್ತು. ಈ ಬಾರಿ -50 ತಲುಪಿದಾಗ ಬೆರ್ಚಪ್ಪಗಳ ಸತ್ಯಸಂತೆ ನಡೆಯುತ್ತಿದೆ.

ಧ್ರುವಸುಳಿ (ಪೋಲಾರ್ ವೋರ್ಟೆಕ್ಸ್) ಎಂಬುದು ಈಚಿನ ವಿದ್ಯಮಾನವೇನಲ್ಲ. ಸದಾಕಾಲ ಪೃಥ್ವಿಯ ಎರಡೂ ಧ್ರುವಗಳಲ್ಲಿ ಭಾರವಾದ ತಂಪುಗಾಳಿ ಚಕ್ರಾಕಾರ ಸುತ್ತುತ್ತಲೇ ಇರುತ್ತದೆ. ಭೂಮಿಯ ಮೇಲಷ್ಟೇ ಅಲ್ಲ, ಮಂಗಳ, ಗುರು, ಶನಿ ಮತ್ತು ಶನಿಯ ಉಪಗ್ರಹ ಟೈಟಾನ್‍ನಲ್ಲೂ ಇಂಥ ಸುಳಿಗಳು ಇರುತ್ತವೆ. ಶುಕ್ರಗ್ರಹದ ನೆತ್ತಿಯ ಮೇಲೆ ಜೋಡುಸುಳಿಗಳು ಕಾಣುತ್ತವೆ. ನಮ್ಮಲ್ಲೂ ಅದು ಅಲ್ಲೇ ಸುತ್ತುತ್ತಿದ್ದರೆ ಸುದ್ದಿಯಾಗುತ್ತಿರಲಿಲ್ಲ.

ಈ ಬಾರಿ ಉತ್ತರ ಧ್ರುವದ ಮೇಲೆ ಬೀಸಿದ ಬಿಸಿಗಾಳಿ ಅಲ್ಲಿನ ಎಂದಿನ ಶೀತಲ ಚಕ್ರಸುಳಿಯನ್ನು ಚಿಂದಿ ಮಾಡಿ ದೂರ ತಳ್ಳಿದೆ. ಪೃಥ್ವಿಯ ನೆತ್ತಿಯ ಈ ಬಿಸಿಗಾಳಿಗೆ ಅತ್ತ ರಷ್ಯದ ಅನೇಕ ಹಿಮದ್ವೀಪಗಳು ಬೆದರಿ ಬೆವತಿವೆ. ಏಕೆಂದರೆ, ನೆಲೆ ತಪ್ಪಿದ ಹಿಮಕರಡಿಗಳು ಆಹಾರ ಹುಡುಕುತ್ತ ದ್ವೀಪವಾಸಿಗಳ ಮನೆಗಳಿಗೆ ದಾಳಿ ಮಾಡತೊಡಗಿವೆ. ಅವು ಸಂರಕ್ಷಿತ ಜೀವಿಗಳಾಗಿದ್ದರಿಂದ ಕೊಲ್ಲುವಂತಿಲ್ಲ.

ಹಾಗಾಗಿ ಪೊಲೀಸರ ಬೆದರುಬಾಂಬ್‍ಗಳಿಗೆ ಕ್ಯಾರೇ ಎನ್ನದೆ ಮನೆಗಳಿಗೆ ಅವು ನಿರ್ಭೀತವಾಗಿ ನುಗ್ಗುತ್ತಿವೆ ಎಂದು ಬಿಬಿಸಿ ವರದಿ ಮಾಡಿದೆ. ಜನರು ಬೆದರಿ ವಾರಗಟ್ಟಲೆ ಬಾಗಿಲುಮುಚ್ಚಿ ಕೂತಿದ್ದಾರೆ. ನೊವಾಯಾ ಝೆಮ್ಲಿಯಾ ದ್ವೀಪಗಳಲ್ಲಿ ರಷ್ಯ ಸರ್ಕಾರ ತುರ್ತುಪರಿಸ್ಥಿತಿ ಘೋಷಿಸಿದೆ. ಇತ್ತ ಚೀನಾದ ವಾಯವ್ಯ ದಿಕ್ಕಿನ ಶಿಂಜ್ಯಾಂಗ್ ಪ್ರಾಂತದಲ್ಲಿ ದಾಖಲೆ ಮೀರಿದ ಚಳಿಯಿಂದಾಗಿ ಜನಜೀವನ ಹೆಪ್ಪುಗಟ್ಟಿದೆ. ಈಚೆಗಷ್ಟೇ ಅಲ್ಲಿ ಕೆಂದೂಳಿನ ಚಂಡಮಾರುತ ಬೀಸಿದ್ದರಿಂದ ಅಲ್ಲೆಲ್ಲ ವಿಲಕ್ಷಣ ಹಳದಿ ಹಿಮ ಸುರಿಯುತ್ತಿದೆ.

ನಾಲ್ಕು ರಾಷ್ಟ್ರಗಳ ಬಿಸಿ-ಚಳಿಯ ಈ ಕಥನದಲ್ಲಿ ಎಂಥ ವ್ಯಂಗ್ಯವಿದೆ ನೋಡಿ: ಹವಾಗುಣ ಬದಲಾವಣೆಯನ್ನು ತಡೆಗಟ್ಟಬೇಕಿದ್ದ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕಲು ಅಮೆರಿಕ ಮತ್ತು ಆಸ್ಟ್ರೇಲಿಯಾ ಎರಡೂ ನಿರಾಕರಿಸುತ್ತ ಬಂದಿವೆ. ರಷ್ಯ ಮತ್ತು ಚೀನಾ ಎರಡೂ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದರೂ ಕಲ್ಲಿದ್ದಲು ಮತ್ತು ಪೆಟ್ರೋಲ್ ಬಳಕೆಯನ್ನು ಹೆಚ್ಚಿಸುತ್ತಲೇ ಇವೆ. ಈ ನಾಲ್ಕೂ ರಾಷ್ಟ್ರಗಳ ಸಾಮಾನ್ಯ ಪ್ರಜೆಗಳು, ಜೀವಜಂತುಗಳು ಪದೇಪದೇ ಅಪಾರ ಕಷ್ಟನಷ್ಟ ಎದುರಿಸಬೇಕಾಗಿ ಬರುತ್ತಿದೆ.

ಇದೇ ವೇಳೆಗೆ ಅಯಸ್ಕಾಂತೀಯ ಉತ್ತರ ಧ್ರುವವೂ ತ್ವರಿತವಾಗಿ ಚಲಿಸತೊಡಗಿದೆ; ವರ್ಷಕ್ಕೆ ಹೆಚ್ಚೆಂದರೆ 15 ಕಿ.ಮೀ. ಚಲಿಸಬೇಕಿದ್ದ ಅದು ವರ್ಷಕ್ಕೆ 55 ಕಿ.ಮೀ. ವೇಗದಲ್ಲಿ ಸೈಬೀರಿಯಾ ಕಡೆ ಓಟಕಿತ್ತು ವಿಜ್ಞಾನಿಗಳನ್ನು ವಿಚಲಿತಗೊಳಿಸಿದೆ. ದಿಕ್ಸೂಚಿಯನ್ನು ಬಳಸುವ ಹಡಗು, ವಿಮಾನ, ಸ್ಲೆಡ್ ಮತ್ತು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ದಾರಿ ತಪ್ಪುವ ಭೀತಿ. ಎಲ್ಲಕ್ಕಿಂತ ಮಿಗಿಲಾಗಿ ಜಲಚರಗಳಿಗೆ, ವಲಸೆ ಪಕ್ಷಿಗಳಿಗೆ ದಿಕ್ಕು ತೋಚದ ಪರಿಸ್ಥಿತಿ. ಉತ್ತರ ಎಲ್ಲಿದೆ ಎಂಬ ಪ್ರಶ್ನೆಗೆ ತಪ್ಪು ಉತ್ತರ ಸಿಕ್ಕರೆ ಏನೆಲ್ಲ ಫಜೀತಿ.

ಬರಹ ಇಷ್ಟವಾಯಿತೆ?

 • 32

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !