ನೀರಿಗಾಗಿ ಹಿಮಖಂಡಕ್ಕೆ ಹಗ್ಗ

ಭಾನುವಾರ, ಜೂಲೈ 21, 2019
28 °C
ಅಂಟಾರ್ಕ್ಟಿಕಾದ ಹಿಮಗಡ್ಡೆಯನ್ನು ಎಳೆದು ತರಲು ಕಾರ್ಪೊರೇಟ್ ಸಾಹಸಿಗರು ಸಜ್ಜಾಗಿದ್ದಾರೆ

ನೀರಿಗಾಗಿ ಹಿಮಖಂಡಕ್ಕೆ ಹಗ್ಗ

ನಾಗೇಶ ಹೆಗಡೆ
Published:
Updated:
Prajavani

ನೀರು ಎಲ್ಲೆಲ್ಲೂ ಸಿಗದಿದ್ದಾಗ ಜೀವಿಗಳು ಏನು ಮಾಡುತ್ತವೆ? ಮಂಗಳಗ್ರಹ ಪೂರ್ತಿ ಒಣಗುವ ಮುನ್ನ ಅಲ್ಲಿನ ಜೀವಿಗಳ ಹತಾಶ ಸಾಹಸ ಹೇಗಿತ್ತು ಎಂಬುದನ್ನು ಎಳೆಎಳೆಯಾಗಿ ಚಿತ್ರಿಸಿದ ಪುಸ್ತಕವೊಂದು 111 ವರ್ಷಗಳ ಹಿಂದೆ ಅಮೆರಿಕದಲ್ಲಿ ಪ್ರಕಟವಾಯಿತು. ಅಲ್ಲಿನ ಖಗೋಲ ವಿಜ್ಞಾನಿ ಪರ್ಸೀವಲ್ ಲೊವೆಲ್ ಎಂಬಾತ ಮಂಗಳಗ್ರಹವನ್ನು ದುರ್ಬೀನಿನಲ್ಲಿ 15 ವರ್ಷ ಅಧ್ಯಯನ ಮಾಡಿ ಬರೆದ ಗ್ರಂಥ ಅದು. ಮಂಗಳದ ನೆಲದಲ್ಲಿ ಅಸಂಖ್ಯ ಗೀರುಗಳನ್ನು ಗುರುತಿಸಿ ಆತ ನಕಾಶೆಯನ್ನು ಸಿದ್ಧಪಡಿಸಿದ್ದ. ಅಲ್ಲಿನ ಬುದ್ಧಿವಂತ ಜೀವಿಗಳು ನೀರಿಗಾಗಿ ಕೊನೆಯ ಪ್ರಯತ್ನವೆಂದು ಧ್ರುವಪ್ರದೇಶಗಳ ಹಿಮದ ಪರ್ವತಗಳಿಂದ ಕಾಲುವೆ ತೋಡಿದ್ದಾರೆ ಎಂದು ವಿವರಿಸಿದ. ಒಂದು ಕುಡ್ತೆ ನೀರಿಗಾಗಿ ಬಡಿದಾಡಬೇಕಿದ್ದ ಜೀವಿಗಳು ಕೊನೆಯ ಯತ್ನವಾಗಿ, ಒಗ್ಗಟ್ಟಾಗಿ, ಶಿಸ್ತಾಗಿ ಶ್ರಮಿಸಲು ನಿರ್ಧರಿಸಿದ್ದು ಹೇಗೆ? ಕೆಲವು ಕಾಲುವೆಗಳು 2,500 ಮೈಲು ಉದ್ದದ್ದಿವೆ. ಅಂಥ ಮಹಾನ್ ಸಾಹಸವನ್ನು ಮೆರೆದ ‘ಅಲ್ಲಿನ ಜೀವಿಗಳ ದೇಹ ಹೇಗಿತ್ತು ಅನ್ನುವುದನ್ನಂತೂ ನಾವು ಊಹಿಸುವಂತಿಲ್ಲ. ಆದರೆ ಅವರ ಮನಃಸ್ಥಿತಿಯನ್ನು ಊಹಿಸಬಹುದು...’ ಎಂದು ಬರೆದ.

ನಾವು, ಮನುಷ್ಯಜೀವಿಗಳು ಮೆಲ್ಲಗೆ ಅದೇ ಸ್ಥಿತಿಯತ್ತ ಹೊರಳುತ್ತಿದ್ದೇವೆಯೆ? ಜಗತ್ತಿನಾದ್ಯಂತ ಈಗಾಗಲೇ 650ಕ್ಕೂ ಹೆಚ್ಚು ಸಂಘ ಸಂಸ್ಥೆಗಳು, ಸ್ಥಳೀಯ ಆಡಳಿತಗಳು ‘ಹವಾಗುಣ ತುರ್ತುಸ್ಥಿತಿ’ಯನ್ನು ಘೋಷಿಸಿವೆ. ಬ್ರಿಟಿಷ್ ಸಂಸತ್ತು ಕಳೆದ ಮೇ 1ರಂದು ಇಂಥದ್ದೇ ‘ಕ್ಲೈಮೇಟ್ ಎಮರ್ಜನ್ಸಿ’ಯನ್ನು ಘೋಷಿಸಿದೆ. ಐರ್ಲೆಂಡ್ ಮೇ 10ರಂದು, ನ್ಯೂಯಾರ್ಕ್ ನಗರ ಜೂನ್ 26ರಂದು ಹಾಗೂ ಮೊನ್ನೆ ಜುಲೈ 9ರಂದು ಪ್ಯಾರಿಸ್ ನಗರವೂ ‘ಕ್ಲೈಮೇಟ್ ಎಮರ್ಜನ್ಸಿ’ಯನ್ನು ಘೋಷಿಸಿವೆ. ನಾಲ್ಕು ವರ್ಷಗಳ ಹಿಂದೆ ಇದೇ ನಗರದಲ್ಲಿ ಜಗತ್ತಿನ ಮುತ್ಸದ್ದಿಗಳೆಲ್ಲ ಸೇರಿ ‘ಪ್ಯಾರಿಸ್ ಒಪ್ಪಂದ’ಕ್ಕೆ ಸಹಿ ಹಾಕಿದ್ದರು. ಭೂಮಂಡಲದ ತಾಪಮಾನ ಈಗಿಗಿಂತ 1.5 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಾಗಲು ಬಿಡುವುದಿಲ್ಲ ಎಂದು ವಾಗ್ದಾನ ಮಾಡಿದ್ದರು. ಬಹುತೇಕ ಮರೆತಿದ್ದರು.

ಆದರೆ ಭೂಮಿ ಕಾಯುತ್ತಲೇ ಇದೆ- ಎಲ್ಲರೂ ಸೇರಿ ಕ್ರಮ ಕೈಗೊಂಡಾರೆಂದು! ಎಲ್ಲೋ ಅತಿತೀವ್ರ ಚಳಿ, ಇನ್ನೆಲ್ಲೋ ಅತಿಜಾಸ್ತಿ ಸೆಕೆ, ಮತ್ತೆಲ್ಲೆಲ್ಲೋ ದೂಳು ಮಾರುತ, ಚಂಡಮಾರುತ, ಅತಿವೃಷ್ಟಿ ಇವೆಲ್ಲ ಅಲ್ಲಲ್ಲಿನ ಸ್ಥಳೀಯ ಸುದ್ದಿಗಳಾಗುತ್ತಿವೆಯೇ ವಿನಾ ಜಾಗತಿಕ ಜಾಗೃತಿಯನ್ನು ಮೂಡಿಸುತ್ತಿಲ್ಲ. ನಮ್ಮ ದೇಶದಲ್ಲೇ ಈ ವರ್ಷ 23 ರಾಜ್ಯಗಳಲ್ಲಿ (ಕೇರಳದಲ್ಲೂ) ಸೆಕೆ ಅಲೆ ಕಾಣಿಸಿಕೊಂಡಿತ್ತು. ಚುನಾವಣೆಯ ಅಲೆಯಲ್ಲಿ ಅದೂ ಮುಚ್ಚಿಹೋಯಿತು. ಇನ್ನು ನೀರಿಗಾಗಿ ಬಡಿದಾಟ, ಚಳವಳಿ, ಕಾನೂನು ಸಮರ, ಆತ್ಮಾರ್ಪಣೆ ಎಲ್ಲವುಗಳ ಮಧ್ಯೆ ಕಾಲುವೆ, ಸುರಂಗ, ನದಿಜೋಡಣೆಯಂಥ ಮಹಾನ್ ಕೆಲಸಗಳಂತೂ ದಿನದಿನಕ್ಕೆ ಚುರುಕಾಗುತ್ತಿವೆ. ಮತ ಹಾಕಿದ, ಹಾಕಲಾರದ ಅಲ್ಪಜೀವಿಗಳನ್ನು ಬಗ್ಗು ಬಡಿದಾದರೂ ನೀರನ್ನು ತರಲು ಭಗೀರಥರು ಸಜ್ಜಾಗುತ್ತಿದ್ದಾರೆ. ಅವರಿಗಾಗಿ ವಿಧವಿಧದ ಬೃಹದ್ಯಂತ್ರಗಳು ಸೃಷ್ಟಿಯಾಗುತ್ತಿವೆ. ಮುಂದಿನ ಹಂತ ಏನಿದ್ದೀತು?

ಅಂಟಾರ್ಕ್ಟಿಕಾದಿಂದ ಹಿಮದ ತುಂಡುಖಂಡವನ್ನೇ ಎಳೆದು ದಕ್ಷಿಣ ಆಫ್ರಿಕಾಕ್ಕೆ ತರಲು ಸಾಹಸಿಗಳು ಸನ್ನದ್ಧರಾಗಿದ್ದಾರೆ. ಮುಳುಗಿದ ಹಡಗನ್ನೊ, ತೈಲದ ಅಟ್ಟಣಿಗೆಯನ್ನೊ, ಪಲ್ಟಿಹೊಡೆದ ಕ್ರೇನನ್ನೊ ಮೇಲೆತ್ತಿ ನಿಲ್ಲಿಸುವ ತಾಂತ್ರಿಕ ಸಾಹಸಗಳಲ್ಲಿ ತೊಡಗಿಕೊಂಡಿರುವ ಎಂಜಿನಿಯರಿಂಗ್ ಕಂಪನಿಯೊಂದರ ಮುಖ್ಯಸ್ಥ ನಿಕ್ ಸ್ಲೋನ್ ಎಂಬಾತ ಈ ಯೋಜನೆಯ ನೇತಾರಿಕೆಯನ್ನು ಹೊತ್ತಿದ್ದಾನೆ. ಆತನ ಬೆಂಬಲಕ್ಕೆ ಹೆಸರಾಂತ ಸಾಗರ ವಿಜ್ಞಾನಿಗಳು, ಹಿಮತಜ್ಞರು, ಬ್ಯಾಂಕರ್‌ಗಳು ನಿಂತಿದ್ದಾರೆ. ದಕ್ಷಿಣ ಆಫ್ರಿಕಾದ ಕೇಪ್‍ಟೌನ್‍ನಲ್ಲಿ ನೀರಿಗಾಗಿ ಹಾಹಾಕಾರ ಗಗನಕ್ಕೇರಿತ್ತು. ಎಲ್ಲೂ ನೀರಿಲ್ಲ. ಸಮುದ್ರದ ಉಪ್ಪುನೀರನ್ನೇ ಕುದಿಸಿ ಬಟ್ಟಿ ಇಳಿಸಿ ಸಿಹಿನೀರನ್ನು ಉತ್ಪಾದಿಸಲು ಭಾರೀ ವಿದ್ಯುತ್ ಶಕ್ತಿ ಬೇಕು. ಮೇಲಾಗಿ, ಆನಂತರ ಉಳಿಯುವ ಘೋರಕ್ಷಾರದ ಗಸಿಯನ್ನು ಸಮುದ್ರಕ್ಕೇ ಚೆಲ್ಲಿದರೆ ಜಲಚರಗಳು ಸಾಯುತ್ತವೆ. ನೆಲದ ಮೇಲೆ ಗುಡ್ಡೆ ಹಾಕಿದರೂ ಹೂತರೂ ಅಪಾಯ. ಇನ್ನು, ಮೋಡಬಿತ್ತನೆಯ ಕಣ್ಕಟ್ಟು ಮಾಡೋಣವೆಂದರೆ ಮೋಡಗಳೇ ಕಾಣುತ್ತಿಲ್ಲ. ನೀರಿನ ಮಿತಬಳಕೆ, ಮರುಬಳಕೆಗಳೆಲ್ಲ ದುರ್ಬಲರಿಗಷ್ಟೇ ಸರಿ. ದೊಡ್ಡವರಿಗೆ ದೊಡ್ಡ ದೊಡ್ಡ ಯೋಜನೆಗಳೇ ಬೇಕು.

ದಕ್ಷಿಣ ಧ್ರುವದ ಹಿಮಖಂಡ ತೀರ ದೂರವೇನಿಲ್ಲ. 2,600 ಕಿ.ಮೀ. ಅಷ್ಟೆ. ಭೂಮಿಯ ತಾಪಮಾನ ಏರುತ್ತಿರುವುದರಿಂದ ಅಲ್ಲಿನ ಹಿಮಹಾಸಿನ ಅಂಚು ಆಗಲೇ ಹೋಳು ಹೋಳಾಗಿ ತೇಲುತ್ತಿದೆ. ಅವೆಲ್ಲವೂ ಶುದ್ಧ ನೀರಿನ ತುಂಡುಬೆಟ್ಟಗಳು. ನೋಡಲು ನೂರು ಮೀಟರ್ ಎತ್ತರವಿದ್ದರೂ, ತಳದಲ್ಲಿ 400 ಮೀಟರ್ ಆಳದ ಗಡ್ಡೆ. ಈಗಿನ ಯೋಜನೆಯ ಪ್ರಕಾರ ಅಂಥದ್ದೊಂದು ಮಧ್ಯಮ ಗಾತ್ರದ, 10 ಕೋಟಿ ಟನ್ ತೂಕದ, ಮೂರು ಕಿ.ಮೀ. ಸುತ್ತಳತೆಯ ಹಿಮಬಂಡೆಗೆ ಹಗ್ಗದ ಜಾಲವನ್ನು ಸುತ್ತಿ, ಭಾರೀ ಶಕ್ತಿಯ ಎರಡು ಸೂಪರ್ ಟ್ಯಾಂಕರ್‌ಗಳಿಗೆ, ಆರೆಂಟು ಜಗ್ಗುದೋಣಿಗಳಿಗೆ ಕಟ್ಟಿ ಹೊರಡಿಸಬೇಕು. ಉಪಗ್ರಹಗಳ ಸಿಗ್ನಲ್ ಆಧರಿಸಿ, ತಂಪು ಪ್ರವಾಹದಗುಂಟ ಗಂಟೆಗೆ ಒಂದೂವರೆ ಕಿಲೊ ಮೀಟರ್ ವೇಗದಲ್ಲಿ ಆ ಮಂಜಿನ ಗಡ್ಡೆ ತನ್ನ 141 ದಿನಗಳ ಪಯಣದಲ್ಲಿ ಕರಗದ ಹಾಗೆ ಅದಕ್ಕೆ ಶಾಖ ನಿರೋಧಕ ಸ್ಕರ್ಟ್ ತೊಡಿಸಬೇಕು. ಕೇಪ್‍ಟೌನ್‍ನಿಂದ 110 ಕಿ.ಮೀ. ದೂರದಲ್ಲಿ ನಿಲ್ಲಿಸಬೇಕು. ಹಿಮ ಕರಗಿದ ಸಿಹಿನೀರು ಸಮುದ್ರಕ್ಕೆ ಸೇರದಂತೆ ಗಡ್ಡೆಯ ಮೇಲೆ ಕೆರೆ ಕೊರೆದು, ಅಲ್ಲಿಂದ ನೀರನ್ನು ಪಂಪ್ ಮಾಡಿ ಟ್ಯಾಂಕರ್‌ಗಳಿಗೆ ತುಂಬಿಸಿ ಕೇಪ್‍ಟೌನ್‍ಗೆ ಒಯ್ಯಬೇಕು (ಹೆಚ್ಚಿನ ವಿವರಗಳಿಗೆ Nick Sloane Iceberg ಎಂದು ಗೂಗಲಿಸಿ ನೋಡಬಹುದು). ಈ ನೀರು ಕೇಪ್‍ಟೌನ್‍ನ ಶೇ 20ರಷ್ಟು ಬೇಡಿಕೆಯನ್ನು ಪೂರೈಸಲಿದೆ.

ಇಂಥ ಸಾಹಸದ ಚಿಂತನೆ ಹಿಂದೆಯೇ ಇತ್ತು, ಇದೀಗ ವೇಗ ಪಡೆಯುತ್ತಿದೆ. ಹಿಮಖಂಡಗಳ ಸಿಹಿ ನೀರಿಗಾಗಿ ದಕ್ಷಿಣ ಆಫ್ರಿಕಾ ಅಷ್ಟೇ ಅಲ್ಲ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಯುಎಇ, ಇನ್ನೂ ಕೆಲವು ಕೊಲ್ಲಿ ರಾಷ್ಟ್ರಗಳು ಆಸಕ್ತಿ ತೋರಿಸುತ್ತಿವೆ. ಎಮಿರೇಟ್ಸ್‌ನ ಕೋಟ್ಯಧೀಶ ಅಬ್ದುಲ್ಲಾ ಅಲ್ಷೇಹಿ ಎಂಬಾತ ಮೊನ್ನೆ ಮಂಗಳವಾರ ತಾನೂ ಒಂದು (ತುಸು ಚಿಕ್ಕ) ಹಿಮಗಡ್ಡೆಯನ್ನು ಎಳೆದು ತರಲು ಬಂಡವಾಳ ಹೂಡುವುದಾಗಿ ಘೋಷಿಸಿದ್ದು, ಮೊದಲ ಯತ್ನವಾಗಿ ಆಸ್ಟ್ರೇಲಿಯಾಕ್ಕೆ ಚಿಕ್ಕ ಹಿಮಗಡ್ಡೆಯನ್ನು ಈ ವರ್ಷವೇ ಸಾಗಿಸುವುದಾಗಿ ಬಿಬಿಸಿಗೆ ಹೇಳಿದ್ದಾನೆ. ಹಿಮಖಂಡವನ್ನು ಎಳೆದು ತರುವಾಗ ಬಿರುಕು ಬಿಟ್ಟೀತೆಂಬ ಆತಂಕ ಬಿಟ್ಟರೆ ಇಂದಿನ ಪರಿಸರಕ್ಕೆ ದೊಡ್ಡ ಅಪಾಯಗಳಿಲ್ಲ. ಹೆಚ್ಚೆಂದರೆ ಸಿಹಿತಂಪನ್ನು ಸಹಿಸಲಾರದ ಬಲಿಷ್ಠ ಜಲಚರಗಳು ದೂರ ಓಡಬಹುದು. ಓಡಲಾಗದೆ ನೆಲಕಚ್ಚಿ ನಿಂತ ತಳಜೀವಿಗಳು ಸಾಯಬಹುದು. ಬಿಸಿಪ್ರಳಯದ ತೀವ್ರತೆ ಜೋರಾದರೆ ಮನುಷ್ಯ ಸಮಾಜದ ಸ್ಥಿತಿಯೂ ಅದೇ ತಾನೆ?

ಆದರೂ ಒಂದು ಹಿಮಗಡ್ಡೆಯನ್ನು ತರಲು ಎರಡು ಕೋಟಿ ಟನ್ ಇಂಧನ ಬೇಕು. ತೈಲವನ್ನು ಬೇಕಾಬಿಟ್ಟಿ ಉರಿಸಿದ್ದರಿಂದಲೇ ಹಿಮದ ಹಾಸು ಚಿಂದಿಯಾಗಿದೆ; ಭೂಮಿಗೆ ಈ ಸ್ಥಿತಿ ಬಂದಿದೆ. ಉತ್ತರ ಧ್ರುವದ ಬಳಿ ಸದಾ ಹಿಮಾವೃತವಾಗಿದ್ದ ಅಲಾಸ್ಕಾ, ಸ್ವಾಲ್‍ಬಾರ್ಡ್ ಪಟ್ಟಣಗಳಲ್ಲೇ ತಾಪಮಾನ 32 ಡಿಗ್ರಿಗೆ ಏರಿದೆ. ತೈಲವನ್ನು ಇನ್ನಷ್ಟು ಉರಿಸುತ್ತ ಹೋದರೆ ಮಾತ್ರ ಕಾರ್ಪೊರೇಟ್ ಶಕ್ತಿಗಳು ಉಳಿಯುವಂತಾಗಿದೆ. ಕೊಳ್ಳುಬಾಕರ ದುಂದುಗಾರಿಕೆಯನ್ನೂ ವಾಯುಮಂಡಲದ ಇಂಗಾಲವನ್ನೂ ತಗ್ಗಿಸುವ ಯೋಚನೆಯೇ ಬಾರದಷ್ಟು ಮಬ್ಬು ಇಂದಿನ ಶಕ್ತರನ್ನು ಆವರಿಸಿದೆ.

ಮಂಗಳಗ್ರಹದ ಕಾಲುವೆಗಳ ಬಗ್ಗೆ ಪರ್ಸೀವಲ್ ಲೊವೆಲ್ ಊಹಿಸಿದ್ದು ತಪ್ಪೆಂದೂ ಆ ಕೆಂಪುಲೋಕದಲ್ಲಿ ಜೀವಿಗಳು ಅವತರಿಸುವ ಮುನ್ನವೇ ನೀರು ಆರಿಹೋಗಿದೆ ಎಂದೂ ಆಮೇಲೆ ಗೊತ್ತಾಗಿದೆ. ಅದು ಗೊತ್ತಾಗಿದ್ದು ಒಳ್ಳೆಯದೇ ಆಯಿತು. ಇಲ್ಲಾಂದರೆ ನಮ್ಮ ಸಾಹಸಿಗಳು ಹಗ್ಗ-ಕೊಡ ಹಿಡಿದು ಅಲ್ಲಿಗೂ ಲಗ್ಗೆ ಹಾಕುತ್ತಿದ್ದರೇನೊ.

ಬರಹ ಇಷ್ಟವಾಯಿತೆ?

 • 31

  Happy
 • 4

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !