ಕರೀ ಬಾನಲ್ಲಿ ಚೀನೀ ಚಂದ್ರ

7

ಕರೀ ಬಾನಲ್ಲಿ ಚೀನೀ ಚಂದ್ರ

ನಾಗೇಶ ಹೆಗಡೆ
Published:
Updated:

ಅವಕಾಶ ಸಿಕ್ಕರೆ ನಾಳೆ, ನಾಡಿದ್ದು ಸರಿರಾತ್ರಿಯ ಕಗ್ಗತ್ತಲಲ್ಲಿಮಕ್ಕಳಿಗೆ ಆಕಾಶವನ್ನು ತೋರಿಸಿ. ಬಾಹ್ಯಾಕಾಶದಿಂದ ಬೀಸಿ ಬರುವ ಬಾಣ ಬಿರುಸು ಕಾಣಬಹುದು. ಪ್ರತಿವರ್ಷ ಈ ದಿನಗಳಲ್ಲಿ (ನವೆಂಬರ್ 16, 17, 18) ಹಗಲೂ ರಾತ್ರಿ ‘ಲಿಯೊನಿಡ್’ ಹೆಸರಿನ ಉಲ್ಕಾ ಸುರಿಮಳೆಯಾಗುತ್ತದೆ. ಹಗಲಿನದು ನಮಗೆ ಕಾಣುವುದಿಲ್ಲ. ನಸೀಬಿದ್ದರೆ ರಾತ್ರಿಯಲ್ಲಿ ಅಲ್ಲೊಂದು ಇಲ್ಲೊಂದು ಕಾಣಬಹುದು. ಅದು ಬಾಹ್ಯಲೋಕದ ದೀಪಾವಳಿ.

ರಾತ್ರಿಯ ಆಕಾಶದಲ್ಲಿ ಈಗ ಹೊಸದೊಂದು ಕೃತಕ ಅಚ್ಚರಿಯನ್ನು ಚೀನಾದ ತಂತ್ರಜ್ಞರು ಸೃಷ್ಟಿ ಮಾಡಲು ಹೊರಟಿದ್ದಾರೆ. ಸುಮಾರು ಒಂದೂವರೆ ಕೋಟಿ ಜನಸಂಖ್ಯೆ ಇರುವ ಚೆಂಗ್‍ಡೂ ನಗರದ ಆಕಾಶದಲ್ಲಿ ಕೃತಕ ಚಂದ್ರನನ್ನು ನಿಲ್ಲಿಸುತ್ತಾರಂತೆ. ಅದು ನಮ್ಮ ಮಾಮೂಲು ಚಂದ್ರನಿಗಿಂತ ಎಂಟು ಪಟ್ಟು ಪ್ರಖರ ಬೆಳಕನ್ನು ಬೀರಲಿದ್ದು ನಗರದ ರಸ್ತೆಗಳಿಗೆ ಬೀದಿ ದೀಪಗಳೇ ಬೇಕಾಗುವುದಿಲ್ಲ ಎಂದು ಚೆಂಗ್‍ಡೂ ಏರೊಸ್ಪೇಸ್ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನ ರಂಗದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣರಾಗಿದ್ದಾರೆ.

ಮೋಜಿಗೆಂದು, ಪ್ರಚಾರಕ್ಕೆಂದು, ಸ್ವಪ್ರತಿಷ್ಠೆಗೆಂದು ಬಾಹ್ಯಾಕಾಶಕ್ಕೆ ತರಾವರಿ ಸಾಧನಗಳನ್ನು ಹಾರಿ ಬಿಡುವ ತೆವಲು ಈಚೆಗೆ ಜಾಸ್ತಿಯಾಗುತ್ತಿದೆ. ಕಳೆದ ಜನವರಿಯಲ್ಲಿ ‘ಹ್ಯುಮಾನಿಟಿ ಸ್ಟಾರ್’ (ಮನುಕುಲ ತಿಲಕ) ಹೆಸರಿನ ಕನ್ನಡಿಯಂಥ ಚಂಡೊಂದನ್ನು ನ್ಯೂಝಿಲ್ಯಾಂಡ್ ರಾಕೆಟ್ ಲ್ಯಾಬ್‍ನವರು ಹಾರಿ ಬಿಟ್ಟಿದ್ದರು. ಚೆಂಡು ಅಂದರೆ ಪೂರ್ತಿಗೋಲಾಕಾರ ಇರಲಿಲ್ಲ; ಒಂದು ಮೀಟರ್ ವ್ಯಾಸದ ಗೋಲಕ್ಕೆ ತ್ರಿಕೋನಾಕೃತಿಯ 76 ಕನ್ನಡಿಗಳನ್ನು ಜೋಡಿಸಲಾಗಿತ್ತು. ದಕ್ಷಿಣೋತ್ತರವಾಗಿ ಚಲಿಸುವ ಚುಕ್ಕಿಯಂತೆ ಪ್ರತಿ 92 ನಿಮಿಷಗಳಿಗೊಮ್ಮೆ ಭೂಮಿಯನ್ನು ಸುತ್ತುತ್ತಿದ್ದ ಈ ಚಂಡನ್ನು ಯಾರು ಬೇಕಾದರೂ ಕತ್ತಲೆಯಲ್ಲಿ ನೋಡಬಹುದಿತ್ತು. ಅದು ಯಾರ‍್ಯಾರಿಗೆ ಮುದ ಕೊಟ್ಟಿತೊ ಗೊತ್ತಿಲ್ಲಆದರೆ ಖಗೋಳ ವಿಜ್ಞಾನಿಗಳು ಸಿಟ್ಟಾದರು. ಆಕಾಶ ವೀಕ್ಷಣೆಗೆ ಇದು ಅನಗತ್ಯ ಕಿರಿಕಿರಿಯೆಂದರು. ಗಗನಕ್ಕೇ
ರಿದ ಗಿಮ್ಮಿಕ್ಕೆಂದೂ ಕಕ್ಷೆಗೆ ಎಸೆದ ಪಳಪಳ ಕಸವೆಂದೂ ಇನ್ನು ಕೆಲವರು ಹೇಳಿದರು. ಅಂತೂ ಮೂರು ತಿಂಗಳುಗಳ ಕಾಲ ನಾನಾ ಬಗೆಯ ಟೀಕೆ ಎದುರಿಸುತ್ತ, ಆ ಕಾರಣದಿಂದಾಗಿಯೇ ಮಾಧ್ಯಮಗಳಲ್ಲೂ ಬೇಕಷ್ಟು ಸಂಚಲನ ಮೂಡಿಸಿ, ಸಾಕಷ್ಟು ವೀಕ್ಷಕರ ಕೈಗೆ ದುರ್ಬೀನು ಕೊಟ್ಟು ಕೊನೆಗೆ ನಿಗದಿತ ಸಮಯಕ್ಕೆ ಮೊದಲೇ ಅದು ಉರಿದು ಬೂದಿಯಾಗಿ ವಾಯುಮಂಡಲದಲ್ಲಿ ಲೀನವಾಯಿತು.

ಚೆಂಡಿನ ಮಾತು ಹಾಗಿರಲಿ, ಒಂದಿಡೀ ಕಾರನ್ನೇ ಕಕ್ಷೆಗೆ ಏರಿಸಿದ್ದು ಗೊತ್ತೆ? ಅದೂ ಈ ವರ್ಷವೇ ನಡೆದಿದೆ. ಹೆಸರಾಂತ ಟೆಕ್ಕುದ್ಯಮಿ ಈಲಾನ್ ಮಸ್ಕ್ ಈ ವಿಲಕ್ಷಣ ದಾಖಲೆಯ ವಾರಸುದಾರ. ವಿದ್ಯುತ್ ಚಾಲಿತ ಟೆಸ್ಲಾ ಕಾರುಗಳ ಮೂಲಕ ಸಂಚಾರ ರಂಗದಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ವ್ಯಕ್ತಿ ತನ್ನ ಒಂದು ಇಡೀ ಹೊಸ ಕಾರನ್ನೇ ಬಾಹ್ಯಾಕಾಶದಲ್ಲಿ ಸುತ್ತಿಸುತ್ತಿದ್ದಾನೆ. ಕತೆ ಏನೆಂದರೆ, ಇವ
ನದೇ ಸ್ಪೇಸ್‍ಎಕ್ಸ್ ಹೆಸರಿನ ಕಂಪನಿ ಇದೆ. ಉಪಗ್ರಹ ಉಡಾವಣೆ, ಮರುಬಳಕೆಯ ರಾಕೆಟ್ ತಯಾರಿಕೆ, ನೆಲಕ್ಕೇ ಹಿಂದಿರುಗಬಲ್ಲ ಬಾಹ್ಯಾಕಾಶ ನೌಕೆಗಳ ತಯಾರಿಕೆ ಹೀಗೆ ನಾನಾ ಬಗೆಯ ಸಾಹಸ ಎಸಗುವ ಖಾಸಗಿ ಕಂಪನಿ ಇದು. ತನ್ನ ಫಾಲ್ಕನ್ ರಾಕೆಟ್ ಅದೆಷ್ಟು ಬಲಶಾಲಿ ಮತ್ತು ವಿಶ್ವಾಸಾರ್ಹ ಎಂದು ಜಗತ್ತಿಗೆ ಮಸ್ಕ್ ತೋರಿಸಬೇಕಾಗಿತ್ತು. ಕಳೆದ ಜನವರಿಯಲ್ಲಿ ಫಾಲ್ಕನ್ ರಾಕೆಟ್ ಮೇಲೆ ಈತನದೇ ಇನ್ನೊಂದು ಕಂಪನಿಯ ‘ರೋಡ್‍ಸ್ಟರ್’ ಕಾರನ್ನು ಇಟ್ಟು ಉಡಾಯಿಸಲಾಯಿತು. ಅದು ಈಗ ಭೂಮಿಯ ಕಕ್ಷೆಯನ್ನೂ ದಾಟಿ ಸೂರ್ಯನ ಸುತ್ತ ಸುತ್ತುತ್ತಿದೆ. ಈ ದಟ್ಟ ಕೆಂಪು ಬಣ್ಣದ ಕಾರಿನಲ್ಲಿ ಸ್ಪೇಸ್ ಸೂಟ್ ಧರಿಸಿದ ‘ಸ್ಟಾರ್ ಮ್ಯಾನ್’ ಹೆಸರಿನ ಒಂದು ಬೊಂಬೆಯನ್ನು ಕೂರಿಸಲಾಗಿದೆ. ಈ ಬೊಂಬೆ ತನ್ನ ಕಾರನ್ನು ಗಂಟೆಗೆ ಒಂದು ಲಕ್ಷ ಕಿಲೊಮೀಟರ್ ವೇಗದಲ್ಲಿ ಓಡಿಸುತ್ತಿದೆ.

ಬಾಹ್ಯಾಕಾಶ ಯುಗದ ಈ 61 ವರ್ಷಗಳಲ್ಲಿ ಸುಮಾರು 7900 ವಸ್ತುಗಳನ್ನು ನಾವು ಕಕ್ಷೆಗೆ ತಳ್ಳಿದ್ದೇವೆ. ನಿಗದಿತ ಕಕ್ಷೆಗೆ ಏರಲಾರದ ತ್ರಿಶಂಕು ಉಪಗ್ರಹಗಳು, ಕಳಚಿಕೊಂಡ ಬಿಡಿಭಾಗಗಳು, ಕಿತ್ತೆದ್ದು ಚೆಲ್ಲಾಡಿದ ಸಲಕರಣೆಗಳು ಸಾವಿರಾರು ಇವೆ. ಸಿಡಿದು ಚದುರಿದ ತುಣುಕುಗಳಂತೂ ಲೆಕ್ಕವಿಲ್ಲದಷ್ಟು ತೇಲಾಡುತ್ತಿವೆ. ಈಗಂತೂ ತನ್ನ ಕಳೇವರವನ್ನು ಕಕ್ಷೆಯಲ್ಲಿ ಶಾಶ್ವತ ತೇಲಿಬಿಡಬೇಕೆನ್ನುವವರಿಗೆ ನೋಂದಣಿ ಸೌಲಭ್ಯಗಳೂ ಆರಂಭವಾಗಿವೆ. ‘ಬೇಡ್ರಪ್ಪಾ, ಕಕ್ಷೆಗೆ ಕಸ ಚೆಲ್ಲಬೇಡಿ’ ಎಂದು ಗೋಗರೆದರೆ ಕೇಳುವವರಾರು? ರಷ್ಯ, ಅಮೆರಿಕದ ದೊಡ್ಡಣಗಳದ್ದೇ ಕಾರುಬಾರು. ಆದರೆ ಈಲಾನ್ ಮಸ್ಕ್‌ನ ಕಾರು ಮಾತ್ರ ಈ ಯಾವ ಅಪಸ್ವರಕ್ಕೂ ಈಡಾಗಲಿಲ್ಲ ಏಕೆಂದರೆ ಅದು ಯಾವ ಗ್ರಹಗಳ ಕಕ್ಷೆಗೂ ಅಡ್ಡ ಬಾರದೆ ಸೂರ್ಯನ ಸುತ್ತ ಸುತ್ತುತ್ತಿದೆ.

ಈಗ ಬಾಹ್ಯಾಕಾಶದಲ್ಲಿ ನಿಂತಲ್ಲೇ ನಿಲ್ಲುವ ಚೀನೀ ಚಂದ್ರನತ್ತ ಬರೋಣ. ಇದು ಚಂದ್ರನಷ್ಟು ದೊಡ್ಡದಿರುವುದಿಲ್ಲ; ಪ್ರಖರ ಚುಕ್ಕಿಯಾಗಿ ಚೆಂಗ್‍ಡೂ ನಗರದ ಕೆಲವು ಭಾಗಕ್ಕಷ್ಟೇ ಬೆಳಕು ಬೀರಲಿದೆ. 2020ರ ಮೊದಲ ಪ್ರಯೋಗ ಯಶಸ್ವಿಯಾದರೆ ಇನ್ನೆರಡು ವರ್ಷಗಳಲ್ಲಿ ಇನ್ನೆರಡು ಚಂದ್ರಗಳನ್ನು ಅಲ್ಲೇ ಅಕ್ಕಪಕ್ಕ ಇಡುತ್ತಾರಂತೆ. ಆಗ ಇಡೀ ನಗರದ ಬೀದಿ ಬೆಳಕಿಗೆ ಪ್ರತಿವರ್ಷ ವ್ಯಯಿಸುವ 120 ಕೋಟಿ ಯುವಾನ್ ಹಣ ಉಳಿಯುತ್ತದಂತೆ. ಬೆಳಕು ಬೇಡವಾದಾಗ ಸ್ವಿಚಾಫ್ ಮಾಡಬಹುದು; ಬೇಕೆಂದಾಗ ಕೇವಲ ಕ್ರೀಡಾಂಗಣಕ್ಕೋ ದುರಂತದ ತಾಣಕ್ಕೋ ಹೊನಲು ಬೆಳಕನ್ನು ಹರಿಸಬಹುದು- ಇತ್ಯಾದಿ ಕನಸುಗಳನ್ನು ಬಿತ್ತಲಾಗುತ್ತಿದೆ. ಆದರೆ ಇಡೀ ಯೋಜನೆಯೇ ವಿಫಲ ಆಗಲಿದೆ ಎಂದು ಬಾಹ್ಯಾಕಾಶ ತಜ್ಞರು ಹೇಳುತ್ತಿದ್ದಾರೆ.

ಆಕಾಶದಲ್ಲಿ ಯಾವುದೇ ವಸ್ತು ನಿಶ್ಚಲ ನಿಂತಂತೆ ಕಾಣಬೇಕೆಂದರೆ ಅದು ಭೂಮಿಯಿಂದ 22 ಸಾವಿರ ಕಿ.ಮೀ. ಆಚಿನ ‘ಭೂಸ್ಥಿರ ಕಕ್ಷೆ’ಯಲ್ಲಿರಬೇಕು. ಸಮೀಪ ಇದ್ದರೆ ಅದು ನಿಂತಲ್ಲಿ ನಿಂತಿರಲಾರದು. ನೆಲದಿಂದ 400 ಕಿ.ಮೀ. ಎತ್ತರದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತನ್ನ ಸ್ಥಾನದಿಂದ ಆಗಾಗ ಸರಿಯುತ್ತಿರುತ್ತದೆ. ಆಗಾಗ ರಾಕೆಟ್ ಉರಿಸಿ ಅದನ್ನು ಸ್ವಸ್ಥಾನಕ್ಕೆ ತರುತ್ತಲೇ ಇರಬೇಕಾಗುತ್ತದೆ. ಚೀನೀಯರ ಈ ಚಂದ್ರನೂ ಹಾಗೆ ಸರಿಯುತ್ತ ಹೋದರೆ? ನಗರದಾಚೆ ಕಾಡುಮೇಡನ್ನು ಬೆಳಗಿಸುತ್ತ ನಿಶಾಚರಿಗಳ ಜೀವಿಗಳ ಬದುಕನ್ನು ಅಸ್ತವ್ಯಸ್ತಗೊಳಿಸುತ್ತ ಹೋಗಬಹುದು. ಹಾಗೆ ಹೋಗದಂತೆ ಆಗಾಗ ಬೂಸ್ಟರ್ ರಾಕೆಟ್ ಉರಿಸುವುದು ಭಾರೀ ವೆಚ್ಚದ ಕೆಲಸ. ರಷ್ಯನ್ನರು 1994ಲ್ಲಿ ಮಿರ್ ಬಾಹ್ಯಾಕಾಶ ನಿಲ್ದಾಣದಿಂದ 65 ಅಡಿ ವ್ಯಾಸದ ಕನ್ನಡಿಯಂಥ ಗಾಳಿಪಟವನ್ನು ತೇಲಿಬಿಟ್ಟಿದ್ದರು. ಹತ್ತು ನಿಮಿಷವೂ ಅದು ನಿಲ್ಲದೆ ಬರೀ ನಿರಾಸೆಯ ಬೆಳಕನ್ನು ಗೀರಿ ಮಾಯವಾಯಿತು. ಹಾಗಿದ್ದರೆ ಚೀನೀಯರ ಈ ಚೆಂಗ್‍ಡೂ ಚೆಂಡು ಬರೀ ಬುರುಡೆಯೆ? ಅದೇನೋ ಗೊತ್ತಿಲ್ಲ. ಕೃತಕ ಚಂದ್ರನನ್ನು ತೋರಿಸುವ ಬದಲು ಆ ನಗರದ ದಟ್ಟ ಹೊಗೆಯನ್ನು ಕ್ಲಿಯರ್ ಮಾಡಿದ್ದರೆ ಸಾಕಿತ್ತು. ಅಸಲೀ ಚಂದ್ರನನ್ನಾದರೂ ತೋರಿಸಬಹುದಿತ್ತು.

ಇನ್ನು ಕೆಲವೇ ದಿನಗಳಲ್ಲಿ (ಪ್ರಾಯಶಃ ನವೆಂಬರ್ 19ರಂದು) ‘ಕಕ್ಷಾ ಕನ್ನಡಿ’ ಹೆಸರಿನ ಕಲಾಕೃತಿಯೊಂದು ಮೇಲಕ್ಕೆ ಏರಲಿದೆ. ಅಮೆರಿಕದ ಕಲಾವಿದ ಟ್ರೆವರ್ ಪೇಗ್ಲೆನ್ ಎಂಬಾತನ ಕಲ್ಪನೆಯೊಂದು ಅಲ್ಲಿನ ನೆವಾಡಾ ಕಲಾ ಮ್ಯೂಸಿಯಂ ಮೂಲಕ 575 ಕಿ.ಮೀ. ಎತ್ತರದಲ್ಲಿ ಸಾಕಾರಗೊಳ್ಳಲಿದೆ. ಕಾರನ್ನು ಕಕ್ಷೆಗೇರಿಸಿದ ‘ಫಾಲ್ಕನ್’ ರಾಕೆಟ್ ಮೂಲಕವೇ ಗಡಿಯಾರದ ಮುಳ್ಳಿನಂಥ ಈ ಬಲೂನು ಅಲ್ಲಿ ಹೋಗಿ ತೆರೆದುಕೊಂಡು ಬರಿಗಣ್ಣಿಗೂ ಕಾಣಿಸಲಿದೆ. ಕಾಣದಿದ್ದರೂ ಚಿಂತೆಯಿಲ್ಲ. ಆರ್ಬಿಟಲ್ ರಿಫ್ಲೆಕ್ಟರ್ ಹೆಸರಿನ ಆಪ್ ಮೂಲಕ ಮೊಬೈಲ್‍ನಲ್ಲಿ ಎಂದು ಬೇಕಾದರೂ ನೋಡಬಹುದು.

‘ಆಕಾಶ ನೋಡಲು ಕನ್ನಡಿ ಬೇಕೆ?’ ಎಂದು ಇನ್ನು ಕೇಳುವಂತಿಲ್ಲ. ಮೊಬೈಲ್ ಇದ್ದರೆ ಸಾಕು.

ಬರಹ ಇಷ್ಟವಾಯಿತೆ?

 • 19

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !