ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ದಶಕಕ್ಕೆ ವಿಜ್ಞಾನದ ರಾಶಿಭವಿಷ್ಯ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವಿಜ್ಞಾನ– ತಂತ್ರಜ್ಞಾನದ ನಾಗಾಲೋಟ ಪ್ರದರ್ಶಿಸಲು ಸಿದ್ಧತೆ ನಡೆದಿದೆ
Last Updated 9 ಜನವರಿ 2020, 3:43 IST
ಅಕ್ಷರ ಗಾತ್ರ

‘ಹಿಂದಿ ಯಾ ಇಂಗ್ಲಿಷ್?’- ದಿಲ್ಲಿಯಿಂದ ಬಂದ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರು ಮೈಕ್ ಎದುರು ಬಂದು ರೈತರಿಗೆ ಮೊದಲ ಪ್ರಶ್ನೆ ಹಾಕಿದರು. ದೇಶದಲ್ಲೇ ಮೊದಲ ‘ರೈತ ವಿಜ್ಞಾನ ಕಾಂಗ್ರೆಸ್’ ಅಧಿವೇಶನದ ಉದ್ಘಾಟನೆಯ ಸಂದರ್ಭ ಅದಾಗಿತ್ತು. ಅವರ ಪ್ರಶ್ನೆಗೆ ‘ಕನ್ನಡ!’ ಎಂದು ಕುವೆಂಪು ಸಭಾಂಗಣದ ಮೂಲೆಮೂಲೆಗಳಿಂದ ಧ್ವನಿಗಳು ಕೇಳಬಂದವು. ಮಧ್ಯೆಮಧ್ಯೆ ‘ಮರಾಠಿ’, ‘ಟಾಮಿಲ್’, ‘ಉಡಿಯಾ’, ‘ಬಾಂಗ್ಲಾ’ ಇತ್ಯಾದಿ ಸ್ವರ ಹೊರಟಿರಬೇಕು, ಆದರೆ ಕನ್ನಡದ ಗಟ್ಟಿಮೇಳದಲ್ಲಿ ಅವು ಕೇಳಿಸಲೇ ಇಲ್ಲ. ಮಾತಾಡಲು ನಿಂತ ಡಾ. ತ್ರಿಲೋಚನ್ ಮಹಾಪಾತ್ರ ತಬ್ಬಿಬ್ಬಾದರು.

ರೈತರ ಏನೆಲ್ಲ ಸಮಸ್ಯೆಗಳಿಗೆ ಸಮಾಧಾನ ನೀಡಲೆಂದು ಬಂದ ವಿಜ್ಞಾನಿಗಳ ಬಳಿ ಈ ‘ಭಾಷಾ ಸಮಸ್ಯೆ’ಗೆ ಉತ್ತರ ಇರಲಿಲ್ಲ. ವಿಜ್ಞಾನಿಗಳು ಹೇಳುವುದು ರೈತರಿಗೆ ಅರ್ಥವಾಗುತ್ತಿಲ್ಲ, ರೈತರು ಹೇಳುತ್ತಿರುವುದು ವಿಜ್ಞಾನಿಗಳ ಗ್ರಹಿಕೆಗೆ ಸಿಗುತ್ತಿಲ್ಲ. ವಿಪರ್ಯಾಸವೆಂದರೆ, ರೈತ ವಿಜ್ಞಾನ ಕಾಂಗ್ರೆಸ್ ಸಭಾಂಗಣದ ಪಕ್ಕದಲ್ಲೇ ಏಕಕಾಲಕ್ಕೆ ‘ವಿಜ್ಞಾನ ಸಂವಹನ ಸಮ್ಮೇಳನ’ ನಡೆಯುತ್ತಿತ್ತು. ವಿಜ್ಞಾನದ ಫಲಶ್ರುತಿಯನ್ನು ಜನಸಾಮಾನ್ಯರಿಗೆ ತಿಳಿಸುವುದು ಹೇಗೆ ಎಂಬ ಬಗ್ಗೆ ಅಲ್ಲಿ ಗೋಷ್ಠಿಗಳ ಮೇಲೆ ಗೋಷ್ಠಿಗಳು ನಡೆದರೂ ಭಾಷಾ ಸಮಸ್ಯೆ ಕುರಿತು ವಿಶೇಷ ಚರ್ಚೆ ನಡೆಯಲಿಲ್ಲ. ಅಂತೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) ಕ್ಯಾಂಪಸ್ಸಿನಲ್ಲಿ ನಡೆದ ಐದು ದಿನಗಳ ಸೈನ್ಸ್ ಕಾಂಗ್ರೆಸ್ ಸಮಾವೇಶದಲ್ಲಿ ಎಲ್ಲೆಲ್ಲೂ ವಿಜ್ಞಾನ ‘ದ್ವೀಪ’ಗಳು ಕಂಡುಬಂದುವೇ ವಿನಾ ಕುವೆಂಪು ಹೇಳಿದ ‘ವಿಜ್ಞಾನ ದೀವಿಗೆ’ ಮಿನುಗಲಿಲ್ಲ.

2020ನೇ ಇಸವಿಯಲ್ಲಿ ವಿಜ್ಞಾನ- ತಂತ್ರಜ್ಞಾನದಲ್ಲಿ ಹೊಸದೇನೇನು ಬರಲಿವೆ ಎಂಬುದನ್ನು ನೋಡಲು ಟೋಕಿಯೊ ಕಡೆ ದೃಷ್ಟಿ ನೆಡಬೇಕು. ಭಾಷಾ ಸಂವಹನಕ್ಕೆ ಅಲ್ಲಿ ಆದ್ಯತೆ ಸಿಗಲಿದೆ. ಪ್ರಪಂಚದ ಪ್ರಮುಖ 27 ಭಾಷೆಗಳ ಪೈಕಿ ನೀವು ಯಾವುದೇ ಭಾಷೆಯವರಾಗಿರಿ, ಜಪಾನಿಯಲ್ಲಿ ಹೇಳಿದ್ದೆಲ್ಲ ನಿಮ್ಮ ಭಾಷೆಗೆ ನೇರವಾಗಿ ತರ್ಜುಮೆ ಆಗಿ ನಿಮ್ಮ ಕಿವಿಗೆ ಬೀಳುವಂಥ ಅಥವಾ ಲಿಪಿಯಾಗಿ ನಿಮ್ಮ ಕೈಪರದೆಯ ಮೇಲೆ ಕಾಣುವಂಥ ತಂತ್ರಜ್ಞಾನ ಬರುತ್ತಿದೆ.

ಒಲಿಂಪಿಕ್ಸ್ ಎಂದರೆ ಮನುಷ್ಯನ ಸಾಮರ್ಥ್ಯದ ಪರಾಕಾಷ್ಠೆಯ ಪ್ರದರ್ಶನ ತಾನೆ? ಇನ್ನೂ ವೇಗ, ಇನ್ನೂ ದೂರ, ಇನ್ನೂ ಎತ್ತರ, ಇನ್ನೂ ನಿಖರ, ಇನ್ನೂ ಚುರುಕು ಹೀಗೆ ಅಸಂಖ್ಯ ಇನ್ನೂಗಳ ಮಹಾಮೇಳ ಅದು. ಸ್ವಂತ ಶಕ್ತಿ, ಸಾಂಘಿಕ ಶಕ್ತಿ, ಬುದ್ಧಿಶಕ್ತಿ ಮತ್ತು ಸಂಘಟನಾ ಶಕ್ತಿಯ ಜಾಗತಿಕ ಪೈಪೋಟಿ ಅಲ್ಲಿ ನಡೆಯುತ್ತದೆ. ಜುಲೈ ತಿಂಗಳಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈ ಸ್ಪರ್ಧೆಗಳಿಗೆ ಹೊಸ ಆಯಾಮ ಸಿಗುತ್ತಿದೆ. ಅಲ್ಲಿ ರೋಬಾಟ್‍ಗಳೂ ತಂತಮ್ಮಲ್ಲಿ ಪೈಪೋಟಿ ನಡೆಸಲಿವೆ. ಕಳೆದ ನಾಲ್ಕು ವರ್ಷಗಳಿಂದ ವಿವಿಧ ದೇಶಗಳ ಕ್ರೀಡಾಳುಗಳು ನಡೆಸುತ್ತಿರುವ ಸಿದ್ಧತೆಗಳಿಗಿಂತ ಜಗತ್ತಿನ ವಿವಿಧ ಟೆಕ್ ಕಂಪನಿಗಳು ಒಲಿಂಪಿಕ್ಸ್ ಪ್ರದರ್ಶನಕ್ಕೆಂದೇ ನಡೆಸುತ್ತಿರುವ ಸಿದ್ಧತೆಗಳು ಇನ್ನಿಲ್ಲದ ಕುತೂಹಲ ಮೂಡಿಸತೊಡಗಿವೆ.

ನಿಜ, ಹಿಂದೆಯೂ ತಾಂತ್ರಿಕ ಸಾಧನೆಯನ್ನು ಜಗತ್ತಿಗೆ ಪರಿಚಯಿಸಲು ಅನೇಕ ಬಾರಿ ಒಲಿಂಪಿಕ್ಸ್ ಕ್ರೀಡಾಂಗಣ ವನ್ನೇ ಮೊದಲ ವೇದಿಕೆಯಾಗಿ ಬಳಸಿಕೊಳ್ಳಲಾಗಿತ್ತು. 1912ರ ಸ್ಟಾಕ್‍ಹೋಮ್ ಮೇಳದಲ್ಲಿ ಮೊದಲ ಬಾರಿಗೆ ಓಟದ ಸಮಯ ನಿಷ್ಕರ್ಷೆಗೆಂದು ಇಲೆಕ್ಟ್ರಾನಿಕ್ ಸ್ಟಾಪ್‍ವಾಚ್ ಬಳಕೆಗೆ ಬಂತು. 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ವಿವಿಧ ಕ್ರೀಡೆಗಳ ನೇರ ಪ್ರಸಾರ ಟಿ.ವಿ.ಗಳಲ್ಲಿ ಮೂಡಿಬಂತು. 1964ರ ಟೋಕಿಯೊ ಸ್ಪರ್ಧೆಯಲ್ಲಿ ‘ಶಿಂಕಾನ್ಸೆನ್’ (ಬುಲೆಟ್ ಟ್ರೇನ್) ಬಳಕೆಗೆ ಬಂತು. ಕ್ರೀಡೆಗಳ ಆಯಾಕ್ಷಣದ ಚಲನಚಿತ್ರಗಳನ್ನು ಜಗತ್ತಿಗೆಲ್ಲ ಪ್ರಸಾರ ಮಾಡಿದ ಕೀರ್ತಿಯೂ ಅದೇ ಕ್ರೀಡಾಕೂಟಕ್ಕೆ ಬಂತು. 1984ರ ಲಾಸ್‍ಏಂಜಲೀಸ್ ಒಲಿಂಪಿಕ್ಸ್ ಉದ್ಘಾಟನೆಗೆಂದು ಬೆನ್ನಿಗೆ ಜೆಟ್‍ಪ್ಯಾಕ್ (ರಾಕೆಟ್) ಕಟ್ಟಿಕೊಂಡ ಧೀರನೊಬ್ಬ ಆಕಾಶದಿಂದ ಇಳಿದು ಬಂದ. ಇನ್ನು ಕ್ರೀಡಾಳುಗಳ ಹಾಗೂ ಕ್ರೀಡಾ ಸಲಕರಣೆಗಳ ದಕ್ಷತೆಯನ್ನು ಹೆಚ್ಚಿಸಲೆಂದೇ ನಡೆದ ಪೈಪೋಟಿಯಿಂದಾಗಿ ಅದೆಷ್ಟೋ ಬಗೆಯ ತಾಂತ್ರಿಕ ಸಾಧನಗಳು ಜನಬಳಕೆಗೂ ಲಭಿಸಿವೆ.

ನಾಗೇಶ ಹೆಗಡೆ

ಇನ್ನೇನು, ನಾಳಿನ ಜಗತ್ತಿಗೆ ಮನುಷ್ಯರೇ ಅಗತ್ಯವಿಲ್ಲವೇನೊ ಎಂಬಷ್ಟರಮಟ್ಟಿಗೆ ಈಗ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರೋಬಾಟ್‍ಗಳ ಜಮಾವಣೆ ಆಗುತ್ತಿದೆ. ನಾನಾ ದೇಶಗಳ ಅತಿಥಿಗಳಿಗೆ ಮಾರ್ಗದರ್ಶನ, ಕರೆನ್ಸಿ ವಿನಿಮಯ, ಭಾಷಾಂತರ ನೆರವು ಮತ್ತು ಮನರಂಜನೆ ನೀಡುವ ಕೆಲಸಗಳನ್ನು ಅವಕ್ಕೆ ಒಪ್ಪಿಸಲಾಗುತ್ತಿದೆ. ಗಾಲಿಕುರ್ಚಿಯನ್ನು ತಳ್ಳುವ ಸಹಾಯಕ ರೋಬಾಟ್‍ಗಳಿಂದ ಹಿಡಿದು ನಿಮ್ಮ ಇಷ್ಟದ ತಿಂಡಿಪೇಯವನ್ನು ತರುವ ಸರಕು ಸಾಗಣೆ ರೋಬಾಟ್‍ಗಳವರೆಗೆ- ‘ಅವುಗಳಿಗಾಗಿ ಪ್ರತ್ಯೇಕ ಗ್ರಾಮವೇ ರೂಪುಗೊಳ್ಳಲಿದೆ’ ಎಂಬ ಮಾತು ಕೇಳಬರುತ್ತಿದೆ. ಮತ್ತೆ ಅವು ಮನುಷ್ಯರಂತೆ ಕಾಣಬೇಕೆಂದೇನೂ ಇಲ್ಲ. ಚಾಲಕರಿಲ್ಲದ ಕಾರುಗಳು ಈಗಾಗಲೇ ಪ್ರಾಯೋಗಿಕವಾಗಿ ಅಲ್ಲಿ ಓಡಾಡಲಾರಂಭಿಸಿವೆ. ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸ್ಪರ್ಧಿಗಳನ್ನು ಕ್ರೀಡಾಂಗಣಕ್ಕೆ ಕರೆತರುವ ಮತ್ತು ನಿವಾಸಕ್ಕೆ ಹಿಂದಿರುಗಿಸುವ ಕೆಲಸಗಳನ್ನು ಸ್ವಯಂಚಲಿ ಕಾರುಗಳೇ ಮಾಡಲಿವೆ. 2025ರ ವೇಳೆಗೆ ಜಪಾನಿನ ಎಲ್ಲೆಡೆ ಇಂಥ ವಾಹನಗಳು ರಸ್ತೆಗೆ ಬರಲಿವೆ.

ಮತ್ತೆ, ಈ ವಾಹನಗಳು ಪೆಟ್ರೋಲ್ ಅಥವಾ ಡೀಸೆಲ್ ಉರಿಸುವುದಿಲ್ಲ. ಇಡೀ ಒಲಿಂಪಿಕ್ಸ್ ಸಂಕೀರ್ಣದ ಎಲ್ಲೆಡೆ ಜಲಜನಕವನ್ನೇ ಇಂಧನವಾಗಿ ಬಳಸಲಾಗುತ್ತದೆ. ಟೋಕಿಯೊ ಬಳಿ ‘ಹರೂಮಿ’ ಹೆಸರಿನ ಕೃತಕ ದ್ವೀಪವನ್ನೇ ಕ್ರೀಡಾಗ್ರಾಮವನ್ನಾಗಿ ಪರಿವರ್ತಿಸಲಾಗಿದ್ದು ಅಲ್ಲಿ ಈಗಾಗಲೇ ಜಲಜನಕದ ಕೊಳವೆಗಳನ್ನು ಜೋಡಿಸಲಾಗಿದೆ. ಅಡುಗೆಗೆ, ದೀಪಕ್ಕೆ, ಇಸ್ತ್ರಿಗೆ, ಟಿ.ವಿಗೆ ಎಲ್ಲದಕ್ಕೂ ಜಲಜನಕದ ಇಂಧನಕೋಶದಿಂದಲೇ ಶಕ್ತಿಯ ಪೂರೈಕೆಯಾಗುತ್ತದೆ. ವಾಹನಗಳಲ್ಲಿ ಅದನ್ನು ಉರಿಸಿದರೆ ಹೊಗೆ ಕೊಳವೆಯಲ್ಲಿ ಇಂಗಾಲದ ಬದಲು ನೀರಾವಿಯೇ ಸೂಸುತ್ತದೆ. ಫುಕುಶಿಮಾ ಪರಮಾಣು ದುರಂತದ ನಂತರ ಹೊಸ, ಮಾಲಿನ್ಯರಹಿತ ಶಕ್ತಿಮೂಲವನ್ನು ರೂಢಿಸುವಲ್ಲಿ ಜಪಾನ್ ತಾನೆಷ್ಟು ಮುಂದಿದ್ದೇನೆಂದು ಈ ಕ್ರೀಡಾಕೂಟದ ಮೂಲಕ ಜಗತ್ತಿಗೆ ತೋರಿಸಲಿದೆ. ಪಾಚಿಯಿಂದ ಲಭಿಸುವ ಜೈವಿಕ ಇಂಧನವನ್ನು ಬಳಸಿ ವಿಮಾನಗಳನ್ನು ಆಕಾಶಕ್ಕೇರಿಸುವ, 400 ಕಿ.ಮೀ. ಎತ್ತರದಲ್ಲಿರುವ ಕಿರು ಉಪಗ್ರಹದಿಂದ ಕೃತಕ ಉಲ್ಕಾವೃಷ್ಟಿ ಸುರಿಸುವ ಯೋಜನೆಯೂ ಆಗಲೇ ಸಾಕಾರಗೊಳ್ಳಲಿದೆ. ನಮಗೆ ಊಹಿಸಿಕೊಳ್ಳಲೂ ಕಷ್ಟವೆನ್ನಿಸಬಹುದಾದ 8ಕೆ ಟಿ.ವಿ. (ಈಗಿನ ಟಿ.ವಿ.ಗಳಿಗಿಂತ 16 ಪಟ್ಟು ಹೆಚ್ಚು ಸ್ಪಷ್ಟ ಚಿತ್ರಗಳನ್ನು ಮೂಡಿಸುವ ಪರದೆ), ಪ್ರತಿ ಸೆಕೆಂಡ್‍ಗೆ 2ಜಿಬಿ ಡಾಟಾ ಒದಗಿಸುವ 5ಜಿ ಸಂಪರ್ಕ ಜಾಲ, ಗಂಟೆಗೆ 601 ಕಿ.ಮೀ. ವೇಗದಲ್ಲಿ ಚಲಿಸುವ ಮ್ಯಾಗ್ಲೆವ್ ರೈಲು ಎಲ್ಲವನ್ನೂ ಅಲ್ಲಿ ಅನುಭವಿಸಬಹುದು.

ಸಂಚಾರ, ಸಾರಿಗೆ, ಸಂವಹನದ ಈ ಆಯಾಮಗಳ ಹೊರತಾಗಿ ಜಪಾನ್ ದೇಶ ಇತರ ಅನೇಕ ರಂಗಗಳಲ್ಲೂ ಹೊಸ ದಶಕಕ್ಕೆ ಮುಂಬೆಳಕನ್ನು ತೋರಿಸಲಿದೆ. ಮುಪ್ಪನ್ನು ಮುಂದೂಡಬಲ್ಲ ಸಂಶೋಧನೆ ಎನ್ನಿ, ಭೂಕಂಪನಸುನಾಮಿಗಳ ಮುನ್ಸೂಚನೆಯ ವಿಜ್ಞಾನ ಎನ್ನಿ, ಕೃಷಿ ತಂತ್ರಜ್ಞಾನ ಎನ್ನಿ- ಎಷ್ಟೊಂದು ರಂಗಗಳಲ್ಲಿ ಇಡೀ ದೇಶವೇ ಒಲಿಂಪಿಕ್ ಸ್ಪರ್ಧಾಳುವಿನಂತೆ ಧಾವಿಸುತ್ತಿದೆ. ದುರಂತ ಏನೆಂದರೆ, ಇಡೀ ದೇಶವೇ ವೃದ್ಧಾಪ್ಯದತ್ತ ಚಲಿಸುತ್ತಿದೆ. 2030ರ ವೇಳೆಗೆ ಪ್ರತಿ ಮೂರರಲ್ಲೊಬ್ಬ ಪ್ರಜೆಗೆ 65ಕ್ಕಿಂತ ಹೆಚ್ಚು ವಯಸ್ಸಾಗಿರುತ್ತದೆ. ಶಿಶುಜನನ ಪ್ರಮಾಣ ತಗ್ಗುತ್ತಿದೆ. ನಿವೃತ್ತಿಯ ವಯಸ್ಸನ್ನು 75ಕ್ಕೆ ಏರಿಸಬೇಕಾದ ಅನಿವಾರ್ಯ ಬರಲಿದೆ. ಅದಕ್ಕೇ ಕೃಷಿರಂಗದಲ್ಲೂ ರೋಬಾಟಿಕ್ ಟ್ರ್ಯಾಕ್ಟರ್‌ಗಳು, ಕೊಯ್ಲುಯಂತ್ರಗಳು ಬರುತ್ತಿವೆ. ಸಸ್ಯಗಳ ಪರೀಕ್ಷೆಗೆ, ಸಿಂಪಡನೆಗೆ ಡ್ರೋನ್‍ಗಳು ಬರುತ್ತಿವೆ.

ಅಲ್ಲಿ ರೂಪುಗೊಳ್ಳುತ್ತಿರುವ ತರಾವರಿ ತಂತ್ರಜ್ಞಾನಗಳು ಮುಂದೆ ನಮ್ಮಲ್ಲಿಗೂ ಬಂದೇ ಬರುತ್ತವೆ. ಸಮಸ್ಯೆ ಏನೆಂದರೆ, ಜಪಾನ್‍ಗೆ ಹೋಲಿಸಿದರೆ ನಮ್ಮ ಸಮಸ್ಯೆ ತದ್ವಿರುದ್ಧವಾದುದು! 2027ರ ಹೊತ್ತಿಗೆ ನಾವು ಜನಸಂಖ್ಯೆಯಲ್ಲಿ ಚೀನಾವನ್ನೂ ಮೀರಿಸಿ ಮೊದಲ ಸ್ಥಾನಕ್ಕೆ ಏರಲಿದ್ದೇವೆ. ದುಡಿಮೆಗೆ ಸಿದ್ಧರಾದ ಅತಿ ಹೆಚ್ಚು ಯುವಜನರಿರುವ ದೇಶ ನಮ್ಮದಾಗಲಿದೆ. ಅವರೆದುರು ಆಗ ‘ಹಿಂದಿ ಯಾ ಇಂಗ್ಲಿಷ್?’ ಎಂದು ಕೇಳುವ ಬದಲು ‘ಇಂಗ್ಲಿಷ್ ಯಾ ಜಪಾನೀಸ್?’ ಎಂದು ಕೇಳೋಣವೆ? ಸಭಾಸದರು ಬರೀ ರೋಬಾಟ್‍ಗಳೇ ಆಗಿದ್ದರಂತೂ ಕೇಳುವುದೇ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT