ಶನಿವಾರ, ಮೇ 28, 2022
31 °C

ವಿಜ್ಞಾನ ವಿಶೇಷ: ಗಡ್ಕರಿ ಏರಿದ ಹೈಡ್ರೊಜನ್‌ ಕಾರು

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಕ್ರಿಸ್‌ಮಸ್‌/ ಹೊಸವರ್ಷ ಹತ್ತಿರ ಬಂದಂತೆಲ್ಲ ಗೋವಾ ಎಲ್ಲರನ್ನೂ ತನ್ನೆಡೆ ಕರೆಯುತ್ತದೆ. ಈ ಬಾರಿ ವಿಜ್ಞಾನಿ
ಗಳನ್ನೂ ಅದು ಕರೆದಿದೆ. ನಾಳೆಯಿಂದ ನಾಲ್ಕು ದಿನಗಳ ಕಾಲ ಅಲ್ಲಿ ‘ಇಂಡಿಯಾ ಇಂಟರ್‌ನ್ಯಾಶನಲ್‌ ಸೈನ್ಸ್‌ ಫೆಸ್ಟಿವಲ್‌’ ನಡೆಯಬೇಕು. ಸೈನ್ಸ್‌ ಚಿತ್ರೋತ್ಸವ, ಪ್ರಯೋಗ ಪ್ರದರ್ಶನ, ಸ್ವದೇಶೀ ಸೈನ್ಸ್‌, ಗ್ರಾಮೀಣ ವಿಜ್ಞಾನ ಇತ್ಯಾದಿಗಳ ಆ ಮೇಳವನ್ನು ಕೇಂದ್ರ ಸರ್ಕಾರವೇ ವ್ಯವಸ್ಥೆ ಮಾಡಿದೆ. ಆದರೆ ವಿಜ್ಞಾನವೇ ಅದಕ್ಕೆ ಅಡ್ಡಗಾಲು ಹಾಕಿದೆ. ಏಕೆಂದರೆ ದೇಶದ ನಾನಾ ಭಾಗಗಳಿಂದ ಬರುವ ವಿಜ್ಞಾನಿಗಳ ಜೊತೆ ಓಮೈಕ್ರಾನ್‌ ಕೂಡ ಪಣಜಿಗೆ ವಕ್ಕರಿಸಿದರೆ?

ದೊಡ್ಡ ದೊಡ್ಡ ಕನಸುಗಳನ್ನು ಬಿತ್ತುತ್ತ ಓಡಾಡುವ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರು ಇದೀಗ ತಮ್ಮ ಓಡಾಟಕ್ಕೆಂದು ಜಲಜನಕದ ಎಂಜಿನ್‌ ಇರುವ ಹೊಸ ಕಾರನ್ನು ಖರೀದಿಸಿದ್ದಾರೆ. ‘ದಿಲ್ಲಿಯ ಎಲ್ಲ ಕಡೆ ಅದರಲ್ಲೇ ಓಡಾಡುತ್ತೇನೆ; ಪೆಟ್ರೋಲ್‌ ಬದಲು ನೀರಿನಿಂದಲೇ ಕಾರನ್ನು ಓಡಿಸಲು ಸಾಧ್ಯವೆಂದು ಜನರಿಗೆ ಗೊತ್ತಾಗಲಿ’ ಎಂದು ಅವರು ಹೇಳಿದ್ದಾರೆ. ಭಾರೀ ಮಳೆಯಿಂದ ಲಕ್ಷಾಂತರ ಕಾರುಗಳು ದಿಲ್ಲಿಯಲ್ಲೂ ನೀರಲ್ಲೇ ಚಲಿಸಬೇಕಾಗಿ ಬಂದಿತ್ತಲ್ಲ? ಆ ನೀರಲ್ಲ, ಗಡ್ಕರಿಯವರು ಹೇಳಿದ್ದು. ಮಳೆಯಿಲ್ಲದ ದಿನಗಳಲ್ಲಿ ಚರಂಡಿ ನೀರಿನ ಶಕ್ತಿಯಿಂದಲೂ ಹೈಡ್ರೊಜನ್‌ ಪಡೆದು ಅದರಿಂದ ವಾಹನಗಳನ್ನು ಓಡಿಸುವ ಸಾಧ್ಯತೆಯ ಬಗ್ಗೆ ಹೇಳಿದ್ದಾರೆ. ಭಾರತದಲ್ಲಿ ಜಲಜನಕ ಉತ್ಪಾದನೆಗೆ ಬೇಕಾದ ಎಲ್ಲ ಕಚ್ಚಾಮಾಲುಗಳೂ- ಅಂದರೆ ಕೊಳಕು ಚರಂಡಿ, ಗೋತ್ಯಾಜ್ಯ, ಕಸಕಡ್ಡಿ ಹೇರಳ ಇವೆ ಎಂದಿದ್ದಾರೆ. ನಾಗಪುರದ ನಗರಪಾಲಿಕೆಯು ಚರಂಡಿ ನೀರನ್ನು ‘ಸರ್ಕಾರಿ ವಿದ್ಯುತ್‌ ನಾಗೇಶ ಹೆಗಡೆಉತ್ಪಾದನಾ ಘಟಕಕ್ಕೆ ಮಾರಿ ಪ್ರತಿವರ್ಷ 325 ಕೋಟಿ ರೂಪಾಯಿಗಳನ್ನು ಗಳಿಸುತ್ತಿದೆ’ ಎಂದಿದ್ದಾರೆ. ಶಾಭಾಸ್‌!

ನೀರಿನ ಶಕ್ತಿಯಿಂದಲೇ ವಾಹನಗಳನ್ನು ಓಡಿಸುವ ವಿಚಾರವನ್ನು ಈಗಲ್ಲ, 1875ರಲ್ಲೇ ವಿಜ್ಞಾನ ಕತೆಗಾರ ಜೂಲ್ಸ್‌ ವರ್ನ್‌ ತನ್ನ ‘ದ ಮಿಸ್ಟೀರಿಯಸ್‌ ಐಲ್ಯಾಂಡ್‌’ (ರಹಸ್ಯ ದ್ವೀಪ) ಹೆಸರಿನ ಕಾದಂಬರಿಯಲ್ಲಿ ಬರೆದಿದ್ದ. ಆಗಿನ್ನೂ ಪೆಟ್ರೋಲ್‌ ಕಾರೂ ಬಂದಿರಲಿಲ್ಲ; ಕಲ್ಲಿದ್ದಲನ್ನು ಉರಿಸಿದಾಗ ಸಿಗುವ ಉಗಿಶಕ್ತಿಯ ಬಗೆಗಷ್ಟೇ ಗೊತ್ತಿತ್ತು. ‘ನೀರನ್ನು ವಿಭಜಿಸಿದರೆ ಶಾಖಕ್ಕೂ ಬೆಳಕಿಗೂ ಬೇಕಾದ ಶಕ್ತಿಯನ್ನು ನಿರಂತರ ಪಡೆಯಬಹುದು’ ಎಂದು ಪಾತ್ರವೊಂದರ ಮೂಲಕ ಹೇಳಿಸಿದ್ದ. ನೀರನ್ನು ವಿಭಜಿಸಿ ವಿದ್ಯುತ್‌ ಉತ್ಪಾದಿಸುವ ದುಬಾರಿ ‘ಫ್ಯುಯೆಲ್‌ ಸೆಲ್‌’ ತಂತ್ರ 1932ರಲ್ಲೇ ಗೊತ್ತಾಗಿತ್ತು. ಅದನ್ನು ಈಗಲೂ ನಾಸಾದವರು ಉಪಗ್ರಹಗಳಲ್ಲಿ ಬಳಸುತ್ತಿದ್ದಾರೆ.
1970ರಲ್ಲಿ ಇಡೀ ಜಗತ್ತು ತೈಲಸಂಕಟಕ್ಕೆ ತುತ್ತಾದಾಗ ಜಲಜನಕವನ್ನು ಅಗ್ಗದಲ್ಲಿ ಉತ್ಪಾದಿಸುವ ಚರ್ಚೆ ಆರಂಭವಾಗಿತ್ತು. ಮತ್ತೆ ಯಾಕೊ ಹಿಂದಕ್ಕೆ ಸರಿಯಿತು. ಆಮೇಲೆ ಇಡೀ ಜಗತ್ತು ಶಾಖಸಂಕಟಕ್ಕೆ ಸಿಲುಕಿದಾಗ ‘ಮುಂದಿನ ಪೀಳಿಗೆಯ ಉಳಿವಿಗೆ ಜಲಜನಕ ಶಕ್ತಿಯೇ ಏಕೈಕ ಪರಿಹಾರ’ ಎಂದು 2003ರಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್‌ ಬುಷ್‌ ಹೇಳಿದ್ದೂ ಉಂಟು. ಆದರೂ ಆ ತಂತ್ರಜ್ಞಾನಕ್ಕೆ ಅಗತ್ಯ ಚಾಲನಶಕ್ತಿಯೇ ಸಿಕ್ಕಿರಲಿಲ್ಲ. ಈಗ ಸಿಗುತ್ತಿದೆ.

ಜಗತ್ತಿನ ಎಲ್ಲೆಲ್ಲೂ ಇರುವ ಜಲಜನಕವನ್ನು ಬಳಕೆಗೆ ಸಿಗುವಂತೆ ಮಾಡಲು ಮೂರು ವಿಧಾನಗಳಿವೆ: ಪೆಟ್ರೋಲ್‌ ಅಥವಾ ನೈಸರ್ಗಿಕ ಅನಿಲದ ಜೊತೆ ಉಗಿಯನ್ನು ಹಾಯಿಸಿ ಜಲಜನಕವನ್ನು ಪ್ರತ್ಯೇಕಿಸಬಹುದು. ಜಾತ್ರೆಯಲ್ಲಿ ಬಲೂನಿನಲ್ಲಿ ತುಂಬುವ ಹೈಡ್ರೊಜನ್‌ ಅನಿಲವನ್ನು ಈ ವಿಧಾನದಲ್ಲೇ ಉತ್ಪಾದಿಸುತ್ತಾರೆ. ಆದರೆ ಭೂತಾಪವನ್ನು ಹೆಚ್ಚಿಸುವ ಕಾರ್ಬನ್‌ ಡೈಆಕ್ಸೈಡ್‌ ಹೊಮ್ಮುವುದರಿಂದ ಇದಕ್ಕೆ ಗ್ರೇ-ಹೈಡ್ರೊಜನ್‌ ಎನ್ನುತ್ತಾರೆ. ಎರಡನೆಯ ವಿಧಾನದಲ್ಲಿ ಕಲ್ಲಿದ್ದಲನ್ನು ಉರಿಸಿಯೂ ಹೀಗೆ ಜಲಜನಕ
ವನ್ನು ಪಡೆಯಬಹುದು. ಆಗ ಜಾಸ್ತಿ ಹೊಮ್ಮುವ ಕಾರ್ಬನ್ನನ್ನು ಗಟ್ಟಿಮುದ್ದೆ ಮಾಡಿ ಭೂಮಿಯ ಒಳಕ್ಕೇ ಸೇರಿಸಬೇಕು. ಹಾಗೆ ಉತ್ಪಾದಿಸುವ ಜಲಜನಕಕ್ಕೆ ಬ್ಲೂ- ಹೈಡ್ರೊಜನ್‌ ಎನ್ನುತ್ತಾರೆ. ಮೂರನೆಯ ಅತ್ಯಂತ ಸುರಕ್ಷಿತ ವಿಧಾನದಲ್ಲಿ ಜಲಜನಕವನ್ನು ಪಡೆಯುವುದೆಂದರೆ ಸೌರಶಕ್ತಿ, ಗಾಳಿಶಕ್ತಿ ಅಥವಾ ಗಡ್ಕರಿಯವರು ಹೇಳುವಂತೆ (ಬಿಲ್‌ ಗೇಟ್ಸ್‌ ತೋರಿಸಿದಂತೆ) ಚರಂಡಿ ನೀರಿನಿಂದಲೂ ವಿದ್ಯುತ್‌ ಉತ್ಪಾದಿಸಿ ಆ ವಿದ್ಯುತ್‌ ಶಕ್ತಿಯಿಂದ ನೀರನ್ನು ವಿಭಜಿಸಿ ಜಲಜನಕವನ್ನು ಪಡೆಯುವುದು. ಇದಕ್ಕೆ ಗ್ರೀನ್‌ ಹೈಡ್ರೊಜನ್‌ ಎನ್ನುತ್ತಾರೆ. ಅದು ಅತ್ಯುತ್ತಮ.

ಸೌರಫಲಕಗಳಿಂದ ವಿದ್ಯುತ್‌ ಶಕ್ತಿ ಸಿಕ್ಕರೆ ಅದನ್ನೇ ಬ್ಯಾಟರಿಯಲ್ಲಿ ತುಂಬಿ ಕಾರು, ಬೈಕ್‌ ಓಡಿಸಬಹುದಲ್ಲ?
ಜಲಜನಕ ಯಾಕೆ ಬೇಕು? ಪ್ರಶ್ನೆ ಸಹಜ; ಆದರೆ ಬ್ಯಾಟರಿಯ ತೂಕ ಜಾಸ್ತಿ; ಲಾರಿಗೆ ಮಣಭಾರದ ಬ್ಯಾಟರಿ ಬೇಕಾಗುತ್ತದೆ. ಅದನ್ನು ಆಗಾಗ ಬದಲಿಸಬೇಕಾಗುತ್ತದೆ. ಜೊತೆಗೆ ಅದಕ್ಕೆ ಅಮೂಲ್ಯ ಲೀಥಿಯಂನಂಥ ಲೋಹ ಕೂಡ ಬೇಕು. ಇದರ ಹೋಲಿಕೆಯಲ್ಲಿ ಜಲಜನಕದ ಫ್ಯುಯೆಲ್‌ ಸೆಲ್‌ ಚಿಕ್ಕದು; ಪದೇಪದೇ ಬದಲಿಸ
ಬೇಕಾಗಿಲ್ಲ (ಅದಕ್ಕೂ ವೇಗವರ್ಧಕವಾಗಿ ಪ್ಲಾಟಿನಮ್‌ ಬೇಕು ಅನ್ನಿ. ಆದರೆ ಈಗ ಪ್ಲಾಟಿನಮ್‌ ಇಲ್ಲದ ಅಗ್ಗದ್ದು ಬರುತ್ತಿವೆ). ಇದು ವಾಹನಕ್ಕೂ ಭಾರವಲ್ಲ; ಭೂಮಿಗೂ.

ಅಂತೂ ನೀರಿನಿಂದ ಕಾರು ಓಡುತ್ತದೆ; ಹೊಗೆ ಕೊಳವೆಯಿಂದ ಬರೀ ನೀರಿನ ಉಗಿ ಹೊಮ್ಮುತ್ತದೆ. ಹಾಗೆಂದು ಕಾರಿನ ಟ್ಯಾಂಕರಿನಲ್ಲಿ ನೀರು ಇರುವುದಿಲ್ಲ; ಬದಲಿಗೆ ಬೇರೆಲ್ಲೋ ಉತ್ಪಾದಿಸಿದ ಜಲಜನಕವನ್ನು ಸಿಲಿಂಡರಿಗೆ ತುಂಬಿಸಿ ಕಾರಿನಲ್ಲಿ ಇಟ್ಟಿರುತ್ತಾರೆ. ಅನಿಲ ಖಾಲಿಯಾಗುತ್ತ ಬಂದ ಹಾಗೆ ಹೈಡ್ರೊಜನ್‌ ಬಂಕ್‌ಗಳಲ್ಲಿ ಅದನ್ನು ಮತ್ತೆ ತುಂಬಿಸಿಕೊಳ್ಳಬಹುದು. ದಿಲ್ಲಿಯ ಹೊರವಲಯದಲ್ಲಿ ಅಂಥ ಎರಡು ಬಂಕ್‌ಗಳು ಬಂದಿವೆ. ಸಮಸ್ಯೆ ಏನೆಂದರೆ, ಅದು ಪೆಟ್ರೋಲಿಗಿಂತ ದುಬಾರಿ. ಸದ್ಯಕ್ಕಂತೂ ಪರಿಸರ ಕಾಳಜಿ ಇರುವ ಅತಿಶ್ರೀಮಂತರು ಮತ್ತು ಸಾರಿಗೆ ಸಚಿವರು ಮಾತ್ರ ಬಳಸಬಹುದು.

ಆದರೂ ಯಾಕೆ ಅಂಥ ಕಾರನ್ನು ದಿಲ್ಲಿಯಲ್ಲಿ ಸುತ್ತಾಡಿಸಿ ಗ್ರೀನ್‌ ಹೈಡ್ರೊಜನ್‌ ಅನ್ನು ಜನಪ್ರಿಯ ಮಾಡಲು ಗಡ್ಕರಿಯವರು ಹೊರಟಿದ್ದಾರೆ? ಅದಕ್ಕೊಂದು ಹಿನ್ನೆಲೆ ಇದೆ: ‘ರಾಷ್ಟ್ರೀಯ ಹೈಡ್ರೊಜನ್‌ ಮಿಶನ್‌’ ಆರಂಭಿಸಿ 4,000 ಮೆಗಾವಾಟ್‌ ಶಕ್ತಿಯನ್ನು ಜಲಜನಕ
ದಿಂದಲೇ ಉತ್ಪಾದಿಸುತ್ತೇವೆಂದು ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷ ಕೆಂಪುಕೋಟೆಯ ಭಾಷಣದಲ್ಲಿ ಹೇಳಿದ್ದರು. ಅದಕ್ಕೂ ಒಂದು ಹಿನ್ನೆಲೆ ಇದೆ: ಗುಜರಾತಿನ ಜಾಮನಗರದ ಬಳಿ ‘ಧೀರೂಭಾಯಿ ಅಂಬಾನಿ ಗ್ರೀನ್‌ ಎನರ್ಜಿ ಗಿಗಾ ಕಾಂಪ್ಲೆಕ್ಸ್‌’ ಎಂಬ ಬೃಹತ್‌ ಶಕ್ತಿಸಂಕೀರ್ಣ ತಲೆ ಎತ್ತಿದೆ. ಅಲ್ಲಿ ಬಿಸಿಲಿನಿಂದ ವಿದ್ಯುತ್‌ ಉತ್ಪಾದಿಸಿ ಅದರಿಂದ ಜಲಜನಕ ಅನಿಲವನ್ನು
ಪಡೆಯಲಾಗುತ್ತಿದೆ. ‘ಇನ್ನು ಹತ್ತು ವರ್ಷಗಳಲ್ಲಿ ಜಲಜನಕ ಅನಿಲದ ಉತ್ಪಾದನಾ ವೆಚ್ಚವನ್ನು ಕಿಲೊಕ್ಕೆ 360 ರೂಪಾಯಿಯಿಂದ ಅರ್ಧಕ್ಕೆ ಇಳಿಸುತ್ತೇನೆ’ ಎಂದು ಮುಕೇಶ್‌ ಅಂಬಾನಿ ಈಚೆಗೆ ಹೇಳಿದ್ದಾರೆ. ಅದಾನಿಯವರಂತೂ ಜಗತ್ತಿನ ಅತಿ
ದೊಡ್ಡ ಸೌರವಿದ್ಯುತ್‌ ಉತ್ಪಾದಕರಾಗಿದ್ದು, ‘ಹೈಡ್ರೊಜನ್‌ ಕ್ರಾಂತಿಗೆ ನಾವು ಸಜ್ಜಾಗಿದ್ದೇವೆ’ ಎಂದಿದ್ದಾರೆ.

ಇವರೆಲ್ಲ ಕೈಜೋಡಿಸಿದರೆ ಶಕ್ತಿಯ ಹೊಸಧಾರೆ ನುಗ್ಗಿ ಹೊಮ್ಮೀತು ನಿಜ. ಆದರೆ ಅದು ಹಿಂದಿದ್ದವರನ್ನು
ಹಿಂದೆಯೇ ಬಿಟ್ಟು ಹೋಗಬಾರದು ತಾನೆ? ಗಡ್ಕರಿ ಹೇಳಿದಂತೆ ಭಾರತದಲ್ಲಿ ಎಲ್ಲ ಕಚ್ಚಾಪದಾರ್ಥಗಳೂ ಇವೆ. ಸೆಗಣಿ, ಗಂಜಳ, ಕಸತ್ಯಾಜ್ಯ ಮತ್ತು ಚರಂಡಿಗಳಿಂದ ಹೊಮ್ಮುವ ತ್ಯಾಜ್ಯ ಅನಿಲಗಳೆಲ್ಲ ಭೂಮಿಯನ್ನು ಬಿಸಿ ಮಾಡುತ್ತಿವೆ. ಅವುಗಳನ್ನು ಬಳಸಿ ಹೈಡ್ರೊಜನ್‌ ಉತ್ಪಾದಿಸಿದರೆ ಗ್ರಾಮಗಳಲ್ಲಿ ಉದ್ಯೋಗವೂ ಸೃಷ್ಟಿಯಾ
ಗುತ್ತದೆ. ಸೆಗಣಿಯಿಂದ ನೇರವಾಗಿ ಜಲಜನಕ ಅನಿಲ ಉತ್ಪಾದನೆ ಸಾಧ್ಯವೆಂದು 15 ವರ್ಷಗಳ ಹಿಂದೆ ಕೆನಡಾದಲ್ಲಿ ಭಾರತೀಯ ಮೂಲದ ಎಂಜಿನಿಯರ್‌ ನಿರ್ಮಲಾ ಖಂಡನ್‌ ತೋರಿಸಿದ್ದರು. ಅಂಥ ನೆಲಮೂಲದ ತಂತ್ರಜ್ಞಾನಕ್ಕೆ ಗೋವಾದ ಸೈನ್ಸ್‌ ಮೇಳದಲ್ಲಿ ಈಗಲೂ ಸ್ಥಾನ
ಇಲ್ಲ. ಸೆಗಣಿಯ ಹೆಸರು ಹೇಳಿ ಬರೀ ಗೆದ್ದೆತ್ತಿನ ಬಾಲ ಹಿಡಿದು ಓಡಬಾರದಲ್ವಾ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು