ಸಾಲಮನ್ನಾ ಬೆನ್ನಲ್ಲೇಕೆ ಸಾಲು ಸಾಲು ಸಾವು?

7
ರೈತರ ಸಂಕಷ್ಟಗಳನ್ನು ಸದನದಲ್ಲಿ, ಮಾಧ್ಯಮಗಳಲ್ಲಿ ಚರ್ಚಿಸಿದ್ದೇ ರೈತರ ಸಂಕಷ್ಟಗಳನ್ನು ಹೆಚ್ಚಿಸಿದೆ!

ಸಾಲಮನ್ನಾ ಬೆನ್ನಲ್ಲೇಕೆ ಸಾಲು ಸಾಲು ಸಾವು?

ನಾಗೇಶ ಹೆಗಡೆ
Published:
Updated:

‘ಸಾಲಬಾಧೆಯೊಂದೇ ರೈತರ ಆತ್ಮಹತ್ಯೆಗೆ ಕಾರಣವಲ್ಲ. ಬೇರೆ ಕಾರಣಗಳೂ ಇರುತ್ತವೆ. ಎಲ್ಲ ಅಪಘಾತಗಳೂ ಚಾಲಕನ ತಪ್ಪಿನಿಂದಲೇ ಆಗಿರುವುದಿಲ್ಲ; ಬೇರೆ ವಾಹನದ್ದೂ ಕೆಲವೊಮ್ಮೆ ತಪ್ಪಿರುತ್ತದೆ...

‘ಮಾಧ್ಯಮಗಳು ರೈತರ ಆತ್ಮಹತ್ಯೆಯ ಸುದ್ದಿಗಳನ್ನು ವರದಿ ಮಾಡಲೇಬಾರದು. ಅದರಿಂದ ಇನ್ನಷ್ಟು ರೈತರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಹಾಗಾಗುತ್ತದೆ...’ -ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಎರಡು ವಾರಗಳ ಹಿಂದೆ ಈ ಜೋಡಿ ಹೇಳಿಕೆಗಳನ್ನು ನೀಡಿದ್ದೇ ತಡ, ಪ್ರತಿಪಕ್ಷಗಳು ಇವರ ವಿರುದ್ಧ ಹರಿಹಾಯ್ದವು. ‘ರೈತರ ಹಿತಾಸಕ್ತಿಯನ್ನು ಕಾಯಬೇಕಿದ್ದ ಸಚಿವರೇ ಇಷ್ಟೊಂದು ಒರಟು ಹೇಳಿಕೆ ನೀಡಬಾರದಿತ್ತು' ಎಂದು ರೈತ ಸಂಘಟನೆಗಳೂ ಟೀಕಿಸಿದವು.

ಸತ್ಯವನ್ನು ಹೇಳುವುದಿದ್ದರೆ ಕಿವಿಗೆ ಇಂಪಾಗುವಂತೆ ಹೇಳು; ‘ಅಪ್ರಿಯ ಸತ್ಯವನ್ನು ಹೇಳಲೇಬೇಡ' ಎಂದು ನಮ್ಮ ಹಿಂದಿನವರು ಹೇಳಿದ್ದರು. ಆದರೆ ಸತ್ಯ-ಮಿಥ್ಯಗಳ ನಡುವಣ ವ್ಯತ್ಯಾಸವೇ ಗೊತ್ತಾಗದ ಯುಗದಲ್ಲಿ ನಾವಿದ್ದೇವೆ. ರಾಜಕಾರಣಿಗಳಿಗೆ ಅಧಿಕಾರದಲ್ಲಿದ್ದಾಗ ಸತ್ಯ ಒಂದು ರೀತಿ ಕಾಣುತ್ತದೆ. ಅಧಿಕಾರ ಇಲ್ಲದಿದ್ದಾಗ ಸತ್ಯ ಬೇರೆ ರೀತಿ ಕಾಣುತ್ತದೆ. ಇಂದು ಡಿಕೆಶಿ ಹೇಳಿದ್ದನ್ನೇ ವಿಜ್ಞಾನಿಗಳು 2003ರಲ್ಲಿ ಹೇಳಿದ್ದರು: ‘ರೈತರ ಸಮಸ್ಯೆಗೆ ಸಾಮಾಜಿಕ ಕಾರಣಗಳು ಮುಖ್ಯವೇ ವಿನಾ ಸಾಲದ ಸಮಸ್ಯೆ ಮುಖ್ಯವಲ್ಲ’ ಎಂದು ಗಾಂಧೀ ಕೃಷಿ ವಿವಿಯ ಕುಲಪತಿ ಪ್ರೊ. ವೀರೇಶ್ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ಹೇಳಿತ್ತು. ಆ ವರದಿಯ ವಿರುದ್ಧ ಅಂದು ಜೆಡಿಎಸ್ ಮುಖಂಡರಾಗಿದ್ದ ಸಿದ್ದರಾಮಯ್ಯ ಸಿಡಿಮಿಡಿ ಆಗಿದ್ದರು. ಎಸ್ಸೆಮ್ ಕೃಷ್ಣ ನೇತೃತ್ವದ ಸರ್ಕಾರ, ವಿಜ್ಞಾನಿಗಳ ಆ ವರದಿಯನ್ನು ಸಾರಾಸಗಟು ತಿರಸ್ಕರಿಸಬೇಕು ಎಂತಲೂ ಒತ್ತಾಯಿಸಿದ್ದರು. ಈಗ ಅಧಿಕಾರದಲ್ಲಿರುವವರು ‘ರೈತರ ಆತ್ಮಹತ್ಯೆಗೆ ಸಾಲಬಾಧೆಯೊಂದೇ ಕಾರಣವಲ್ಲ’ ಎನ್ನುತ್ತಿದ್ದಾರೆ. ಹಾಗೆ ಹೇಳಲು ಕಾರಣವೂ ಇದೆ. ಈಗಿನ ಸಮ್ಮಿಶ್ರ ಸರ್ಕಾರ ಅಧಿಕಾರ ಗ್ರಹಣ ಮಾಡಿದ ಒಂದೇ ತಿಂಗಳಲ್ಲಿ, ಸಾಲ ಮನ್ನಾ ಚರ್ಚೆಯ ಸಂದರ್ಭದಲ್ಲೇ 96 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಮನ್ನಾ ಘೋಷಣೆಯ ನಂತರವೇ 30 ಘಟನೆಗಳು ವರದಿಯಾಗಿವೆ.

ಸಾಲಮನ್ನಾ ಕುರಿತಂತೆ ಸದನದಲ್ಲಿ, ಮಾಧ್ಯಮಗಳಲ್ಲಿ ಸರಣಿ ಚರ್ಚೆ ನಡೆಯುತ್ತಿದ್ದಂತೆಯೇ ಸಾಲುಸಾಲು ಆತ್ಮಹತ್ಯೆ ನಡೆಯಲು ಕಾರಣವೇನು? ಸರಣಿ ಚರ್ಚೆಗಳೇ ರೈತರ ಸರಣಿ ಸಾವಿಗೆ ಕಾರಣವಾಗಿರಬಹುದೆ? ಮೇಲ್ನೋಟಕ್ಕೆ ಇದು ಕಾಕತಾಳೀಯ ಎನ್ನಿಸುತ್ತದಾದರೂ ರೈತರ ಸಂಕಷ್ಟಗಳ ಅತೀವ ಚರ್ಚೆಯೇ ರೈತರ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತವೆ ಎನ್ನಲು ಬಲವಾದ ಮನೋ ವೈಜ್ಞಾನಿಕ ಕಾರಣಗಳಿವೆ. ಮಾಧ್ಯಮಗಳಲ್ಲಿ ಆತ್ಮಹತ್ಯೆ ಕುರಿತ ವರದಿ ಹಾಗೂ ಚರ್ಚೆಗಳು ಹೆಚ್ಚಾದಷ್ಟೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವುದು ಅನೇಕ ದೇಶಗಳಲ್ಲಿ ವ್ಯಕ್ತವಾಗಿದೆ. ಎರಡಕ್ಕೂ ನೇರ ಸಂಬಂಧ ಇದೆಯೆಂಬುದರ ಬಗ್ಗೆ 40ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಮನೋವಿಜ್ಞಾನಿಗಳ ಸಂಘಟನೆಗಳು ಪ್ರಕಟಿಸಿವೆ. ‘ಆತ್ಮಹತ್ಯೆಯ ಪ್ರಕರಣಗಳಿಗೆ ಹೆಚ್ಚಿಗೆ ಪ್ರಚಾರ ಕೊಡಬೇಡಿ; ಬಹಿರಂಗ ಚರ್ಚೆ ಮಾಡಬೇಡಿ’ ಎಂದು ಮನೋವೈದ್ಯಕೀಯ ಸಂಸ್ಥೆಗಳು ಆಸ್ಟ್ರಿಯಾ, ಸ್ವಿತ್ಸರ್ಲೆಂಡ್ ದೇಶಗಳಲ್ಲಿ ಟಿವಿ ಚಾನೆಲ್‍ಗಳಿಗೆ ಹಾಗೂ ಮುದ್ರಣ ಮಾಧ್ಯಮಗಳಿಗೆ ತಾಕೀತು ಮಾಡಿ ಮಾಡಿ, ಕೊನೆಗೂ ಅಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಸುದ್ದಿ ಬಿತ್ತರಣೆ ಕಡಿಮೆ ಆಗುತ್ತ ಬಂತು; ಆತ್ಮಹತ್ಯೆ ಪ್ರಕರಣಗಳೂ ಕಡಿಮೆಯಾದವು ಎಂಬುದು ಸಾಬೀತಾಗಿದೆ.

ವಿದೇಶಗಳ ವಿಷಯ ಇಲ್ಲಿ ಯಾಕೆ ಮಹತ್ವದ್ದು ಅಂದರೆ, ರೈತರ ಆತ್ಮಹತ್ಯೆ ಜಗತ್ತಿನ ಎಲ್ಲ ದೇಶಗಳಲ್ಲೂ ಜಾಸ್ತಿ ಆಗುತ್ತಿದೆ. ಅಮೆರಿಕ, ಫ್ರಾನ್ಸ್, ಚೀನಾ, ಕೆನಡಾ, ಆಸ್ಟ್ರೇಲಿಯಾ ದೇಶಗಳಲ್ಲಿ 30 ವರ್ಷಗಳಿಂದ ಇದು ಹೆಚ್ಚುತ್ತಿದೆ. ಕೃಷಿ ಕೆಲಸ ಎಂದರೆ ಇತರ ಎಲ್ಲ ವೃತ್ತಿಗಳಿಗಿಂತ ಹೆಚ್ಚು ಒತ್ತಡದ್ದಾಗಿದ್ದು, ಕೆಲಮಟ್ಟಿಗೆ ಜೂಜಾಟವೇ ಆಗಿರುತ್ತದೆ. ಅಂಥ ಒತ್ತಡಗಳನ್ನು ಸರಿದೂಗಿಸಲೆಂದು ಹಾಡು, ಹಸೆ, ಹಬ್ಬ, ಕುಣಿತಗಳ ಮಧ್ಯೆ ಊರಿನವರ ಜೊತೆ ಅನ್ಯೋನ್ಯ ಇದ್ದ ರೈತರ ಮೇಲೆ ಜಾಗತೀಕರಣದ, ವಾಣಿಜ್ಯದ ಒತ್ತಡ ಬಂತು. ಜಾಸ್ತಿ ಇಳುವರಿ ಬಂದರೆ ಬೆಲೆ ಕುಸಿತದ ಸಂಕಷ್ಟ ಬಂತು. ಅದರ ಮೇಲೆ ಮಾಹಿತಿ ಮಹಾಪೂರ ಬಂತು. ಐಷಾರಾಮಿ ಬದುಕಿನ ಕನಸುಗಳು, ಆಸೆಗಳು ತೆರೆದುಕೊಂಡವು. ಸುಲಭ ಕೃಷಿಯ ತಾಂತ್ರಿಕತೆಯ ಆಮಿಷ, ಸುಲಭ ಸಾಲದ ಆಮಿಷ ಎಲ್ಲ ಬಂದವು. ಊರಿನ ಒಗ್ಗಟ್ಟು, ಸಾಮಾಜಿಕ ಭದ್ರತೆಗಳು ಸಡಿಲವಾದವು. ಹೊಸ ಬದುಕಿನ ಜೂಜಾಟ- ಮೇಲಾಟದಿಂದಾಗಿ ಕಷ್ಟಕ್ಕೆ ಸಿಲುಕಿದರೆ, ಊರಿನ ಎಲ್ಲೆಡೆ ಟಾಂಟಾಂ ಜಾಸ್ತಿ, ನೆರವು ಕಮ್ಮಿ ಎಂಬಂತಾಯಿತು. ನಗರದಲ್ಲಿ ಅವಮಾನವಾದರೆ ನೆರೆಮನೆಯವರಿಗೆ ಗೊತ್ತೇ ಇರುವುದಿಲ್ಲ. ಹಳ್ಳಿಯಲ್ಲಿ ಹಾಗಲ್ಲವಲ್ಲ. ಅಮೆರಿಕದಲ್ಲಿ ನಗರವಾಸಿಗಳ ಆತ್ಮಹತ್ಯೆಗಿಂತ ಕೃಷಿಕರ ಆತ್ಮಹತ್ಯೆ ಐದುಪಟ್ಟು ಹೆಚ್ಚಿಗೆ ಇದೆ. ಕರ್ನಾಟಕದಲ್ಲಿ (ಈಗ) ತಿಂಗಳಿಗೆ 18, ಆಸ್ಟ್ರೇಲಿಯಾದಲ್ಲಿ 15, ಫ್ರಾನ್ಸ್‌ನಲ್ಲಿ 16 ಆತ್ಮಹತ್ಯೆ ಸಂಭವಿಸುತ್ತಿವೆ.

ದುರ್ಬಲ ಮನಸ್ಸಿನವರು ಸಣ್ಣಪುಟ್ಟ ಕಾರಣಗಳಿಗೂ ಖಿನ್ನರಾಗುತ್ತಾರೆ. ಕಾರಣ ಇಂಥದ್ದೇ ಇರಬೇಕೆಂದಿಲ್ಲ. ಸಾಲದ ಬಾಧೆ ಇರಬಹುದು; ಕೌಟುಂಬಿಕ ಕಲಹ ಇರಬಹುದು ಅಥವಾ ಪ್ರೇಮ ಪ್ರಕರಣ ಇರಬಹುದು; ಆತ್ಮಗೌರವಕ್ಕೆ ಧಕ್ಕೆ ಬಂದಿರಬಹುದು. ಅವೆಲ್ಲ ಒಂದೊಂದಾಗಿ ಇಲ್ಲವೆ ಒಟ್ಟೊಟ್ಟಾಗಿ ಬಾಧಿಸಿ ‘ಬದುಕು ಇನ್ನು ಸಾಕು’ ಎಂದು ಅವರಿಗೆ ಆಗಾಗ ಅನ್ನಿಸುತ್ತಿರುತ್ತದೆ. ಆದರೆ ಆತ್ಮಹತ್ಯೆಗೆ ಧೈರ್ಯ ಸಾಲದೆ, ಅಥವಾ ಸೂಕ್ತ ವಿಧಾನ ಕೈಗೆಟುಕದೆ ಹಿಂದೇಟು ಹಾಕುತ್ತಾರೆ. ಮತ್ತೆ ಸರಿಹೋಗುತ್ತಾರೆ. ಆದರೆ ‘ಇನ್ನಿಬ್ಬರ ಆತ್ಮಹತ್ಯೆ’ ಎಂಬ ವರದಿ ಬಂದಾಗ ಖಿನ್ನತೆ ಜಾಗೃತವಾಗುತ್ತದೆ. ಮತ್ತೆ ಮತ್ತೆ ಅದೇ ಸುದ್ದಿಯನ್ನು ನೋಡುತ್ತಾರೆ, ಓದುತ್ತಾರೆ ಇಲ್ಲವೇ ಅಕ್ಕಪಕ್ಕದವರ ಚರ್ಚೆಯನ್ನು ಆಲಿಸುತ್ತಾರೆ. ಮತ್ತೆ ಸಾವಿಗೆ ದಾರಿ ಹುಡುಕುತ್ತಾರೆ.

ಸಾವಿನ ದಾರಿಯೂ ಅದೆಷ್ಟೊ ಬಾರಿ ಮಾಧ್ಯಮಗಳ ಮೂಲಕವೇ ಗೋಚರಿಸುತ್ತವೆ. ನಾವು ಪ್ರಕಟಿಸುವ ವರದಿಗಳಲ್ಲಿ ‘ರೈಲಿಗೆ ತಲೆಕೊಟ್ಟು...’ ‘ನೇಣಿನ ಕುಣಿಕೆಗೆ... ‘ಕೀಟನಾಶಕ ಸೇವಿಸಿ...’ ಇಂಥ ವಿವರಣೆಗಳಿದ್ದರೆ ಈ ನತದೃಷ್ಟರಿಗೆ ಅದೇ ಮಾರ್ಗಸೂಚಿಯಾಗುತ್ತದೆ. ಹಾಂಗ್‍ಕಾಂಗ್‍ನಲ್ಲಿ 1998ರಲ್ಲಿ ಹೊಗೆಗೂಡಿನಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಾಗ ಮಾಧ್ಯಮಗಳು ವಿವಿಧ ಕೋನಗಳಲ್ಲಿ ಆಕೆಯ ಚಿತ್ರವನ್ನು ಪ್ರಸಾರ ಮಾಡಿದಾಗ ಅದೇ ವಿಧಾನದ ಸರಣಿ ಆತ್ಮಹತ್ಯೆಗಳು ಅದೆಷ್ಟು ನಡೆದುವೆಂದರೆ- ಹಾಗೆ ಸತ್ತವರ ಸಂಖ್ಯೆ 100 ತಲುಪಿದಾಗ ಮನೋವಿಜ್ಞಾನಿಗಳು ಮಾಧ್ಯಮಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳಬೇಕಾಯಿತು. ಆತ್ಮಹತ್ಯಾ ಅಧ್ಯಯನ ಮಾಡುವವರು ಇದಕ್ಕೆ ‘ಕಾಪಿಕ್ಯಾಟ್’ ವಿಧಾನ ಎಂದೇ ಹೇಳುತ್ತಾರೆ. ವೃದ್ಧಾಪ್ಯ, ಒಂಟಿತನ ಅಥವಾ ವಾಸಿಯಾಗದ ಕಾಯಿಲೆಯಿಂದ ನರಳುವವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸರಳ ವಿಧಾನಗಳ ಬಗ್ಗೆ 1991ರಲ್ಲಿ ಪತ್ರಕರ್ತ ಡೆರೆಕ್ ಹಂಫ್ರಿ ಎಂಬಾತ ‘ಫೈನಲ್ ಎಕ್ಸಿಟ್’ ಹೆಸರಿನ ಪುಸ್ತಕವೊಂದನ್ನು ಬರೆದ. ಆತ ಹೇಳಿದ ವಿಧಾನದಲ್ಲೇ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಮೂರು ಪಟ್ಟು ಹೆಚ್ಚಾಯಿತು.

ಕೆಲವರ ಕಳೇವರದ ಬಳಿ ಆ ಪುಸ್ತಕವೂ ಇತ್ತು. 1999ರಲ್ಲಿ ಕೆನಡಾದ ಕೆಬೆಕ್ ನಗರದ ಜನಪ್ರಿಯ ಯುವ ಟಿವಿ ವರದಿಗಾರ ಗೈಟೆನ್ ಗೆರಾರ್ಡ್ ಸಾವಿಗೆ ಶರಣಾಗಿದ್ದು ವಿವರವಾಗಿ ಮಾಧ್ಯಮಗಳಲ್ಲಿ ಸುದ್ದಿಯಾದಾಗ ಅದೇ ವಿಧಾನವನ್ನು ಅನುಸರಿಸಿ ಅದೇ ತಿಂಗಳಲ್ಲಿ ಆರು ಮಂದಿ ಸಾವಿಗೆ ತಲೆಕೊಟ್ಟರು. ಕಾಪಿಕ್ಯಾಟ್ ವಿಧಾನದ ಅತ್ಯಂತ ಕುಪ್ರಸಿದ್ಧ ಪ್ರಕರಣ ಯಾವುದು ಗೊತ್ತೆ? 1774ರಲ್ಲಿ ಜರ್ಮನಿಯ ಖ್ಯಾತ ಸಾಹಿತಿ ಗ್ಯಟ (Goethe) ಒಂದು ಕಾದಂಬರಿಯನ್ನು ಬರೆದ: ‘ಯುವಕ ವರ್ತರ್‍ನ ತಲ್ಲಣಗಳು’ ಹೆಸರಿನ ಆ ಕೃತಿಯ ಭಗ್ನಪ್ರೇಮಿ ನಾಯಕ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅದನ್ನು ಓದಿ ಯುರೋಪಿನ ಅನೇಕ ಪ್ರಾಂತಗಳಲ್ಲಿ ಅದೇ ವಿಧಾನದಲ್ಲಿ ಸಾವಿನ ಸಂಖ್ಯೆ ತೀರ ಹೆಚ್ಚುತ್ತ ಹೋಗಿ ಆಮೇಲೆ ಕಾದಂಬರಿಯನ್ನೇ ನಿಷೇಧಿಸಲಾಯಿತು. 1983ರಿಂದ 1986ರವರೆಗೆ ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ಭೂಗತ ರೈಲುಮಾರ್ಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿ ಆಗುತ್ತ ಆಗುತ್ತ ಕೊನೆಗೆ ಆಸ್ಟ್ರಿಯಾದ ಮನೋವಿಜ್ಞಾನಿಗಳ ಸಂಘವೇ ಮಾಧ್ಯಮಗಳಿಗೆ ಅಂಥ ಸುದ್ದಿಗಳನ್ನು ಹೇಗೆ ವರದಿ ಮಾಡಬಾರದು ಎಂದು ಪಾಠ ಹೇಳಬೇಕಾಯಿತು.

ವರ್ಷದ ಕೆಲವು ದಿನಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ಸಹಜವಾಗಿ ಹೆಚ್ಚಾಗಿರುತ್ತವೆ. ಪರೀಕ್ಷೆಯ ಫಲಿತಾಂಶ ಪ್ರಕಟವಾಗುವಾಗ, ಮಾರುಕಟ್ಟೆಯಲ್ಲಿ ಕೃಷಿ ಫಸಲುಗಳ ಬೆಲೆ ಕುಸಿದಾಗ, ಬೆಳೆ ಅಥವಾ ಮಳೆ ಕೈಕೊಟ್ಟಾಗ ಖಿನ್ನರಾಗುವವರ ಸಂಖ್ಯೆ ಹೆಚ್ಚಿಗೆ ಇರುತ್ತದೆ. ಆ ದಿನಗಳಲ್ಲಂತೂ ಆತ್ಮಹತ್ಯೆಯ ಸುದ್ದಿಗಳನ್ನು ಪ್ರಕಟಿಸಲೇಬೇಡಿ ಎಂದು ಮನೋವೈದ್ಯರು ಮಾಧ್ಯಮಗಳನ್ನು ಒತ್ತಾಯಿಸುತ್ತಾರೆ. ಸುದ್ದಿಯನ್ನು ಪ್ರಕಟಿಸುವುದೆಂದರೆ ಸಾಯಲು ತುದಿಗಾಲಲ್ಲಿ ನಿಂತವನನ್ನು ಮುಂದಕ್ಕೆ ತಳ್ಳಿದಂತಾಗುತ್ತದೆ. ಮೇಲಾಗಿ ಅಂಥ ಸುದ್ದಿಯನ್ನು ಪ್ರಕಟಿಸುವಾಗ ‘ವಿಷ ಸೇವಿಸಿ ರೈತನ ಆತ್ಮಹತ್ಯೆ’ ಎಂದು ಆತ್ಮಹತ್ಯಾ ವಿಧಾನದ ಬಗ್ಗೆ ಬರೆಯಬೇಡಿ. ‘ಸಾಲಬಾಧೆ ತಾಳಲಾರದೆ...’ ಎಂದೆಲ್ಲ ಕಾರಣವನ್ನು ಬರೆಯಬೇಡಿ (ಬಹುತೇಕ ಪ್ರಸಂಗಗಳಲ್ಲಿ ಅನೇಕ ಕಾರಣಗಳು ಒಟ್ಟಾಗಿರುತ್ತವೆ); ಆತನ ಊರಿನ ಹೆಸರನ್ನು ಬರೆಯಬೇಡಿ. ಅದು ಹಳ್ಳಿಯ ಸುದ್ದಿ ಎಂದ ಮಾತ್ರಕ್ಕೇ ‘ಮತ್ತೊಬ್ಬ ರೈತನ ಆತ್ಮಹತ್ಯೆ’ ಎಂದೆಲ್ಲ ಬರೆಯಬೇಡಿ. ಆತ ರೈತ ಅಲ್ಲದಿರಬಹುದು. ಸುದ್ದಿಯನ್ನು ರೋಚಕ ಶೈಲಿಯಲ್ಲಿ ದೊಡ್ಡ ಹೆಡ್‍ಲೈನಲ್ಲಿ ಪ್ರಕಟಿಸಬೇಡಿ. ದೊಡ್ಡ ಮನಸ್ಸು ಮಾಡಿ ಆ ಸುದ್ದಿಯ ಪ್ರಕಟನೆಯನ್ನೇ ಕೈಬಿಡಿ. ಕೈಬಿಟ್ಟರೆ ಯಾರಿಗೇನೂ ನಷ್ಟವಿಲ್ಲ. ಸಚಿವ ಡಿಕೆಶಿ ಹೇಳಿದರೆಂದ ಮಾತ್ರಕ್ಕೇ ನಕ್ಕು ಸುಮ್ಮನಾಗಬೇಡಿ. ಅವರು ಸತ್ಯವನ್ನೇ ಹೇಳಿದ್ದಾರೆ. ಮಾಧ್ಯಮ ವರದಿಗಾರರಿಗೆಂದೇ ವಿಶ್ವ ಆರೋಗ್ಯ ಸಂಸ್ಥೆ ಕಳೆದ ವರ್ಷ ‘ಆತ್ಮಹತ್ಯೆ ಪ್ರತಿಬಂಧನಾ ಮಾರ್ಗಸೂಚಿ’ಯನ್ನು ಪ್ರಕಟಿಸಿದೆ. ಡೌನ್‍ಲೋಡ್ ಮಾಡಿಕೊಳ್ಳಿ. ಕೇವಲ 12 ಮುಖ್ಯಾಂಶಗಳ ಚಿಕ್ಕ ಪಟ್ಟಿಯೂ ಇದೆ.

ಪಾಶ್ಚಿಮಾತ್ಯ ಮನೋವಿಜ್ಞಾನಿಗಳ ಪ್ರಕಾರ, ಆತ್ಮಹತ್ಯೆ ಕುರಿತು ಟಿವಿ ಅಥವಾ ರೇಡಿಯೊದಲ್ಲಿ ಬರುವ ಕ್ಷಣಿಕ ವಾರ್ತೆಗಳಿಗಿಂತ ಮುದ್ರಣ ಮಾಧ್ಯಮದಲ್ಲಿ ಬರುವ ಸುದ್ದಿಗಳೇ ಹೆಚ್ಚು ಅಪಾಯಕಾರಿ. ಏಕೆಂದರೆ, ದುರ್ಬಲ ಮನಸ್ಸಿನ ವ್ಯಕ್ತಿಗಳು ಪತ್ರಿಕೆಯನ್ನು ಅಥವಾ ಆ ಸುದ್ದಿಯ ತುಣುಕನ್ನು ಪದೇ ಪದೇ ನೋಡುತ್ತಿರುತ್ತಾರೆ. ಟಿವಿಯಲ್ಲಿ ಅಂಥದ್ದು ಸಾಧ್ಯವಿಲ್ಲ ಎಂದು ಅಲ್ಲಿನ ತಜ್ಞರು ಹೇಳುತ್ತಾರೆ. ನಮ್ಮಲ್ಲಿನ ವಾಸ್ತವ ಅದರ ತದ್ವಿರುದ್ಧ ಇದ್ದೀತು: ಇಲ್ಲಿ ಪತ್ರಿಕೆಗಳು ಹಳ್ಳಿಗಳಲ್ಲಿ ಮನೆಮನೆಗಳಲ್ಲಿ ಸಿಗುವುದು ಅಪರೂಪ. ಆದರೆ ಎಲ್ಲರ ಮನೆಯ ಟಿವಿಯಲ್ಲೂ ಹಗಲಿಡೀ ಅದೇ ಬ್ರೆಕಿಂಗ್ ನ್ಯೂಸ್ ಪದೇ ಪದೇ ಬರುತ್ತಿರುತ್ತದೆ. ಮೇಲಾಗಿ ಈಗೀಗ ಎಲ್ಲರ ಕೈಯಲ್ಲೂ ಸ್ಮಾರ್ಟ್‍ಫೋನ್ ಇರುವುದರಿಂದ ಊರಿನ ಒಬ್ಬನ ಆತ್ಮಹತ್ಯೆಯ ಸುದ್ದಿ ಆ ಸುತ್ತಲಿನ ಇನ್ನೆಷ್ಟು ವಾಟ್ಸಾಪ್‍ಗಳಲ್ಲಿ ಎದ್ದೆದ್ದು ಕುಣಿಯುತ್ತದೊ, ಪರಿಹಾರ ಮೊತ್ತದ ಬಗ್ಗೆ ಏನೇನು ಚರ್ಚೆಯಾಗುತ್ತದೊ ಹೇಳುವಂತಿಲ್ಲ.

ಬದುಕು ಸಾಕೆಂದು ಅನ್ನಿಸಿದವರನ್ನು ಸಾಮಾಜಿಕ ಮಾಧ್ಯಮಗಳು ಆತ್ಮಹತ್ಯೆಗೆ ತಳ್ಳಲೂಬಹುದು; ಸುರಕ್ಷಿತವಾಗಿ ಬಚಾವು ಮಾಡಲೂಬಹುದು. 08025497777 ಈ ಉಚಿತ ಸಂಖ್ಯೆಗೆ ಫೋನ್ ಮಾಡಿದರೆ ಸಾವಿನಂಚಲ್ಲಿ ನಿಂತವರ ಸಂಕಷ್ಟಗಳನ್ನು ಆಲಿಸುವ, ಸಾಂತ್ವನ ಹೇಳುವ, ಮನಸ್ಸನ್ನು ಬದಲಿಸಬಲ್ಲ ಸಲಹೆಗಳು ಸಿಗುತ್ತವೆ. ಸರ್ಕಾರದ ನೆರವನ್ನು ಪಡೆಯದೇ ಕೆಲವು ಸ್ವಯಂಪ್ರೇರಿತ ನಾಗರಿಕರು ‘ಸಹಾಯ್' ಹೆಸರಿನಲ್ಲಿ ಸಲ್ಲಿಸುವ ಈ ನಿಃಶುಲ್ಕ ಸೇವೆ ರಾತ್ರಿ 8ರಿಂದ ಬೆಳಿಗ್ಗೆ 10ರವರೆಗೆ ಸಿಗುವುದಿಲ್ಲ. ಆ ಅವಧಿಯಲ್ಲೇ ಜಾಸ್ತಿ ಸಹಾಯ ಬೇಕಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಅವೇಳೆಯಲ್ಲೂ ಹೆಲಿಕಾಪ್ಟರ್ ಮೂಲಕ ಆಪ್ತ ಸಲಹಾ ತಜ್ಞರನ್ನೊ ಮನೋವಿಜ್ಞಾನಿಗಳನ್ನೊ ರೈತನಿದ್ದಲ್ಲಿಗೆ ಕಳುಹಿಸುವ ವ್ಯವಸ್ಥೆ ಇದೆ. ಕರ್ನಾಟಕದಲ್ಲಿ ಕೃಷಿಕರ ಕ್ಷೇಮದ ಹೊಣೆ ಹೊತ್ತ `ಶಿವ-ಶಿವ' ಹೆಸರಿನ ಸಚಿವರಿಬ್ಬರು ಮನಸ್ಸು ಮಾಡಿದರೆ 24 ಗಂಟೆಗಳ ಆಪತ್ಕಾಲದ ಸಲಹಾ ಸೇವೆ ಒದಗಿಸುವುದು ಕಷ್ಟವೇನಲ್ಲ.

ಆತ್ಮಹತ್ಯೆಗಳ ವರದಿ ಮಾಡಬಾರದೆಂದು ಸಚಿವರು ಪತ್ರಕರ್ತರಿಗೆ ಸಲಹೆ ನೀಡುವ ಹಾಗೆ, ಅವು ಘಟಿಸದಂತೆ ತಡೆಯಬೇಕೆಂದು ಸಚಿವರಿಗೆ ನಾವು ಪತ್ರಕರ್ತರು ಸಲಹೆ ನೀಡೋಣವೆ?

[26 ಜುಲೈ 2018ರಂದು ಪ್ರಕಟವಾದ ‘ಬಾನಲ್ಲಿ ಕೆಂಪು ಚಂದ್ರ...’ ಹೆಸರಿನ ಅಂಕಣ ಬರಹದಲ್ಲಿ ಒಂದು ತಪ್ಪು ನುಸುಳಿತ್ತು: ಚಂದ್ರನ ಕಕ್ಷೆ ತುಸು ದೀರ್ಘ ವೃತ್ತಾಕಾರ ಇರುವುದರಿಂದ ‘ಆತ ದಿನಕ್ಕೆರಡು ಬಾರಿ ಭೂಮಿಗೆ ತುಸು ಸಮೀಪ ಬರುತ್ತಾನೆ’ ಎಂದು ಪ್ರಕಟವಾಗಿತ್ತು. ಅದು ದಿನಕ್ಕೆರಡು ಬಾರಿ ಅಲ್ಲ, `ತಿಂಗಳಿಗೆ ಎರಡು ಬಾರಿ' ಎಂದಿರಬೇಕಿತ್ತು. ತಪ್ಪಿಗಾಗಿ ಲೇಖಕರು ವಿಷಾದಿಸಿದ್ದಾರೆ.]

ಬರಹ ಇಷ್ಟವಾಯಿತೆ?

 • 37

  Happy
 • 2

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !