ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದ ಬಹುರೂಪಿ ಬಿಂಬ

ಮಾನಸಿಕ ಒತ್ತಡದಲ್ಲಿ ಸಿಲುಕಿರುವ ಬಡ ಮಹಿಳೆಯರ ಮೊಗದಲ್ಲಿ ನಗು ಕಾಣುವುದೆಂದು?
Last Updated 4 ಮಾರ್ಚ್ 2019, 19:21 IST
ಅಕ್ಷರ ಗಾತ್ರ

ದಾದ್ರಿ ಈಗ ಎಲ್ಲರಿಗೂ ಪರಿಚಿತ. ಉತ್ತರಪ್ರದೇಶದ ಈ ಸಣ್ಣ ಪಟ್ಟಣಕ್ಕೆ ಹೋಗುವ ಬಸ್ಸಿಗೆ ಕೂಲಿಕಾರ್ಮಿಕ ಮಹಿಳೆಯೊಬ್ಬಳು ಹತ್ತಿದಳು. ನಿಲ್ಲಲೂ ತ್ರಾಣವಿರದೆ ಬಾಗಿಲ ಪಕ್ಕದ ಸೀಟಿನಲ್ಲಿ ಕುಸಿದಳು. ಮಣ್ಣು ಮುಕುರಿದ ಒರಟು ಕೈಗಳು, ಜಡೆಗಟ್ಟಿಹೋದ ತಲೆಗೂದಲನ್ನು ಸೆರಗು ಮುಚ್ಚಿತ್ತು. ಕೃಶ ಶರೀರ, ಮಂಕಾದ ಮುಖ– ಎಷ್ಟೋ ದಿನಗಳಿಂದ ಆಹಾರವಿರದೆ ಕಳೆದಿದ್ದಾಳೇನೊ ಎನ್ನುವಂತಿತ್ತು. ಅವಳತ್ತ ದೃಷ್ಟಿ ಹರಿದಿದ್ದಕ್ಕೋ ಏನೋ ಆಕೆ ಅಲ್ಲಿಂದ ಎದ್ದು ಪಕ್ಕದಲ್ಲಿ ಬಂದು ಕೂತು- ತನ್ನ ನಾದಿನಿಯ ಗಂಡ ತೀರಿಹೋಗಿದ್ದಾನೆಂದೂ, ಮಣ್ಣುಹೊರುವ ಬುಟ್ಟಿಯನ್ನು ಅಲ್ಲೇ ಬಿಟ್ಟು ಬಸ್ಸು ಹತ್ತಿದೆನೆಂದೂ ಹೇಳತೊಡಗಿದಳು. ಹೆಂಡದ ವಾಸನೆ ರಪ್ಪನೆ ಮೂಗಿಗೆ ಬಡಿಯಿತು.

‘ಕ್ಯಾ ಶರಾಬ್ ಪಿಯೇ ಹೋ?’ ಅಂದದ್ದೇ ಆಕೆ, ‘ಸುಳ್ಳು ಹೇಳಿದರೆ ಭಗವಂತ ಮೆಚ್ಚಲ್ಲ, ಮೋಕ್ಷ ಹೇಗೆ ಸಿಗೋದು? ಬೀಬೀ ಜಿ… ನಾನು ಕುಡಿದಿಲ್ಲ. ಇಕಾ ಈ ಗುಟಕಾ ತಿನ್ನುತ್ತೇನೆ’ ಎಂದು ತನ್ನ ಜಂಪರಿನೊಳಗೆ ಕೈತೂರಿಸಿ, ಮಡಿಚಿಟ್ಟ ಗುಟಕಾದ ಪುಡಿಕೆಯನ್ನು ತೋರಿಸಿದಳು.

ನಿತ್ಯವೂ ಬಸ್ಸು, ಆಟೊಗಳಲ್ಲಿ ಯಾವ ಎಗ್ಗೂ ಇಲ್ಲದೆ ಗುಟಕಾ ಅಂಗೈಯಲ್ಲಿಟ್ಟು ಸುಣ್ಣ ತಂಬಾಕು ಮತ್ತೇನನ್ನೋ ಬೆರೆಸಿ ಉಜ್ಜಿ ಕಟವಾಯಿಗೆ ತುಂಬಿಕೊಳ್ಳುವ ಅನೇಕ ಮಹಿಳೆಯರು ಸಿಗುತ್ತಾರೆ. ಕಾರ್ಖಾನೆಗಳಲ್ಲಿ ಗುಟಕಾ ಪಾನ್ ವರ್ಜ್ಯವಿದ್ದರೂ ಬಚ್ಚಿಟ್ಟುಕೊಂಡು ಗುಟಕಾ ಪುಡಿಕೆಗಳನ್ನು ಒಯ್ಯುತ್ತಾರೆ. ಫ್ಯಾಕ್ಟರಿಗಳಲ್ಲಿ ದುಡಿವ ಬಹುತೇಕ ಕಾರ್ಮಿಕ ಮಹಿಳೆಯರ ಕಥೆಯಿದು.

ಯಾಕೆ ತಿನ್ನುತ್ತೀರಿ ಅಂದರೆ– ‘ಚಟ ಬಿದ್ದಿದೆ ಮೇಡಂ, ಏನು ಮಾಡೋಣ’ ಅನ್ನುತ್ತಾರೆ. ಗುಟಕಾ ಸೇವನೆಯಿಂದ ಎಷ್ಟೇ ದೈಹಿಕ ಶ್ರಮವಾದರೂ ಗೊತ್ತಾಗುವುದಿಲ್ಲ, ನಶೆ ಮಾಡದೇ ಇಷ್ಟೊಂದು ತಾಸುಗಳು ನಿರಂತರವಾಗಿ ಕೆಲಸ ಮಾಡಲಾಗದು ಅನ್ನುತ್ತಾರೆ. ವಾರದ ಏಳು ದಿನಗಳೂ ಅವರಿಗೆ ಕೆಲಸದ ದಿನಗಳು. ಗುತ್ತಿಗೆದಾರನ ಇಶಾರೆಗಳಿಗೆ ಅನುಗುಣವಾಗಿ ನಡೆಯದಿದ್ದರೆ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯದಲ್ಲಿ ಲೈಂಗಿಕ ಶೋಷಣೆಯನ್ನೂ ಹಲ್ಲುಮುಡಿ ಕಚ್ಚಿ ಸಹಿಸುವ ಈ ಕಾರ್ಮಿಕ ಮಹಿಳೆಯರು ಗುಟಕಾ, ಖೈನಿ, ಜರ್ದಾ, ಮಾವಾ, ಕಡ್ಡಿಪುಡಿ, ಮಿಶ್ರಿ, ಗುಲ್ ಮುಂತಾದ ಹೆಸರಿನಿಂದ ಮಾರಲಾಗುವ ಮಾದಕ ಪದಾರ್ಥಗಳ ವ್ಯಸನಕ್ಕೆ ಬಲಿಯಾಗುತ್ತಾರೆ. ಕೆಲ ತಿಂಗಳ ಹಿಂದೆ ಸುದ್ದಿ ಮಾಡಿದ ತಮಿಳುನಾಡಿನ ಗುಟಕಾ ಹಗರಣ ಮತ್ತೊಮ್ಮೆ ಯೋಚಿಸುವಂತೆ ಮಾಡಿತು. ಇದ್ದವ ಹಣ ಬಾಚುತ್ತಿದ್ದರೆ, ಇಲ್ಲದವ ಇಷ್ಟಿಷ್ಟಾಗಿ ಸಾಯುತ್ತಾನೆ!

ಕಾರ್ಮಿಕರ ಅನುಪಾತಕ್ಕೆ ಸಂಬಂಧಿಸಿದ ಸಮೀಕ್ಷೆಗಳ ಪ್ರಕಾರ, ದೇಶದ ಸಣ್ಣಪುಟ್ಟ ಲಘು ಉದ್ದಿಮೆ, ಕಾರ್ಖಾನೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿವ ಸುಮಾರು ಮೂರೂವರೆ ಕೋಟಿ ಮಹಿಳೆಯರು ಮಾದಕ ಪದಾರ್ಥಗಳ ವ್ಯಸನಿಗಳಾಗಿದ್ದಾರೆ. ಬಡತನದ ರೇಖೆಗಿಂತಲೂ ಕೆಳಮಟ್ಟದಲ್ಲಿ ಬದುಕುವವರು, ಅನಕ್ಷರಸ್ಥರು, ತಂಬಾಕು, ಗುಟಕಾ, ಬೀಡಿಗಳ ಮಾರಣಾಂತಿಕ ಅಪಾಯದ ಬಗ್ಗೆ ಅರಿವಿಲ್ಲದವರು, ಗೊತ್ತಾದರೂ ಗಂಭೀರವಾಗಿ ಪರಿಗಣಿಸದೇ ಇರುವವರು, ಕುಡುಕ ಗಂಡನ ಹಿಂಸೆ, ಆರ್ಥಿಕ ಅಭದ್ರತೆ, ಸಾಮಾಜಿಕ ಅಸುರಕ್ಷೆ, ಅತಿಯಾದ ಸಂತಾನ, ಉದ್ಯೋಗಹೀನತೆ, ಅನಾರೋಗ್ಯ, ಮಕ್ಕಳನ್ನು ಹಾಗೂ ಹಿರಿಯ ವೃದ್ಧ ತಂದೆ ತಾಯಿಯನ್ನು ಸಾಕುವ ಜವಾಬ್ದಾರಿ, ದುಡಿಯಲೇಬೇಕಾದ ಅನಿವಾರ್ಯ... ಇವೆಲ್ಲ ಮಾನಸಿಕ ಒತ್ತಡಗಳ ಬೀಸುಕಲ್ಲಿನ ಪಾಳಿಯಲ್ಲಿ ಸಿಲುಕಿ ನರಳುವ ಹೆಂಗಸರು ದೇಶದಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ. ಬೇಜವಾಬ್ದಾರಿ ಪುರುಷನ ಗೈರುಹಾಜರಿಯಲ್ಲಿ ಕುಟುಂಬ ನಿರ್ವಹಣೆಯ ಹೊಣೆ ಹೊತ್ತ ಈ ಮಹಿಳೆಯರ ಪಾಡು ತೇಪೆ ಹಾಕಿದ ಸೀರೆಯಂತೆ ಜರ್ಜರ!

‘ತಂಬಾಕು ಸೇವನೆಯಿಂದ ಆರೋಗ್ಯ ಚೆನ್ನಾಗಿರುತ್ತದೆ, ಮಲಬದ್ಧತೆ, ಕಿಬ್ಬೊಟ್ಟೆಯ ಸಮಸ್ಯೆ ದೂರಾಗುವುದು’ ಎಂಬ ಕುರುಡು ನಂಬಿಕೆ ಕೆಲವು ಮಹಿಳೆಯರಲ್ಲಿದೆ. ಕೆಲವರಿಗೆ ದೈಹಿಕ ಶ್ರಮದ ದಣಿವು– ಆಯಾಸ ಶಮನ ನೆಪವಾದರೆ, ಇನ್ನು ಕೆಲವರಿಗೆ ತಂಬಾಕು ಸೇವನೆಯಿಂದ ಹಸಿವು ಪೀಡಿಸುವುದಿಲ್ಲ. ‘ಟೆನ್ಶನ್ ನೀಗುತ್ತದೆ’ ಎನ್ನುತ್ತಾರೆ.

ರಾಜಸ್ಥಾನವೊಂದರಲ್ಲೇ ಅತಿ ಹೆಚ್ಚಿನ ತಂಬಾಕು ಬಳಕೆಯಾಗುತ್ತದೆಂದು ಗ್ಲೋಬಲ್‌ ಅಡಲ್ಟ್‌ ಟೊಬ್ಯಾಕೊ ಸರ್ವೆಯ 2016-17ರ ವರದಿ ಉಲ್ಲೇಖಿಸಿದೆ. ದೇಶದಾದ್ಯಂತ 74,037 ಜನರನ್ನು ಸಂದರ್ಶಿಸಿದಾಗ, ರಾಜಸ್ಥಾನವೊಂದರಲ್ಲೇ ತಂಬಾಕು ವ್ಯಸನಕ್ಕೆ ಬಲಿಯಾದವರಲ್ಲಿ 1,499 ಪುರುಷರು, 1,534 ಮಹಿಳೆಯರಿದ್ದುದನ್ನು ಸರ್ವೆ ದಾಖಲಿಸಿದೆ. ದೇಶದಲ್ಲಿ ಅತಿ ಹೆಚ್ಚಿನ ಧೂಮ್ರರಹಿತ/ ಧೂಮ್ರಸಹಿತ ತಂಬಾಕು ಈಶಾನ್ಯ ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದು ತಿಳಿದುಬರುತ್ತದೆ. ಗುಟಕಾ (ಧೂಮ ಹಾಗೂ ಧೂಮರಹಿತ ತಂಬಾಕು ಮತ್ತು ಅಡಿಕೆ) ಬಳಕೆಯನ್ನುಸುಪ್ರೀಂ ಕೋರ್ಟ್ ರಾಷ್ಟ್ರವ್ಯಾಪಿ ನಿಷೇಧಿಸಿದೆ. ಹಲವು ರಾಜ್ಯಗಳಲ್ಲಿ ಗುಟಕಾ, ತಂಬಾಕು ಮಾರಾಟಕ್ಕೆ ಈಗಾಗಲೇ ನಿಷೇಧವಿದೆ.

ಸಣ್ಣಪುಟ್ಟ ಗೂಡಂಗಡಿಗಳಲ್ಲಿ ಗುಟಕಾ ಪುಡಿಕೆಗಳ ಸರಮಾಲೆಯನ್ನೇ ನೇತಾಡಿಸಿರುತ್ತಾರೆ. ಹಾದಿಹೋಕರು, ವಾಹನ ಚಾಲಕರು ಗಾಡಿ ನಿಲ್ಲಿಸಿ, ಬೇಕಾದ ಬ್ರ್ಯಾಂಡಿನ ಗುಟಕಾ ಖರೀದಿಸುವುದನ್ನು ಕಾಣುತ್ತೇವೆ. ಗುಟಕಾ ಖರೀದಿಸುವ ಮಹಿಳೆ ಎಲ್ಲೂ ಕಾಣುವುದಿಲ್ಲ. ಈ ಮಹಿಳೆಯರು ತಮ್ಮ ಮಕ್ಕಳಿಂದ ಇಲ್ಲವೇ ಗಂಡಂದಿರಿಂದ ತರಿಸಿಕೊಳ್ಳುತ್ತಾರೆ. ಕೈಗೂಸುಗಳಿಗೆ ಅಫೀಮು ತಿನ್ನಿಸಿ ರೈಲು, ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುವ ಅಲೆಮಾರಿ ಮಹಿಳೆಯರನ್ನು ನೋಡುತ್ತಲೇ ಇದ್ದೇವೆ.

ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಮಹಿಳೆಯರೇ ಪ್ರಮುಖ ಉತ್ಪಾದಕ ಕಾರ್ಮಿಕಶಕ್ತಿ ಆಗಿದ್ದರೂ ಲಿಂಗತಾರತಮ್ಯದಿಂದಾಗಿ ಹೆಚ್ಚಿನ ಶ್ರಮಕ್ಕೆ ಕಡಿಮೆ ವೇತನ ಪಡೆಯುವ ಮಹಿಳೆಯರನ್ನು ಎಲ್ಲಾ ಉದ್ಯಮ, ಕಚೇರಿ, ವರ್ಗ ವಲಯಗಳಲ್ಲೂ ಕಾಣಬಹುದು. ಕೂಲಿಕಾರ್ಮಿಕ ಮಹಿಳೆ ಯಾವ ಲೆಕ್ಕದಲ್ಲಿಯೂ ಇಲ್ಲ. ದಾಖಲಾತಿಯಲ್ಲಿ ಸಿಗದೇ ಕಳೆದುಹೋದ ಮಹಿಳೆಯರ ಬಗ್ಗೆ ಅಧ್ಯಯನ ಕಾರರು ಬರೆದಿದ್ದಾರೆ. ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್‌ ಫಂಡ್ ಫಾರ್ ವಿಮೆನ್ ಪ್ರಕಾರ, ಪ್ರಪಂಚದಲ್ಲಿ ಬಡ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಯಾವುದೇ ಒಂದು ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಮಹಿಳೆಯರ ಏಳ್ಗೆಯನ್ನು ಪರಿಗಣಿಸಬೇಕು ಎಂದಿದ್ದರು ಡಾ. ಅಂಬೇಡ್ಕರ್. ಅತ್ಯಂತ ಶೋಷಿತರಾಗಿದ್ದ ಮಹಿಳೆಯರಿಗೂ ಧಾರ್ಮಿಕ- ಸಾಮಾಜಿಕ– ರಾಜಕೀಯ ಹಕ್ಕುಗಳನ್ನು ಸಂವಿಧಾನದತ್ತವಾಗಿ ನೀಡಲು ಶ್ರಮಿಸಿದ್ದರು. ಸುಡು ಬಿಸಿಲಿನಲ್ಲಿ ಕಲ್ಲು ಒಡೆಯುತ್ತಿದ್ದ ಮಹಿಳೆಗೆ ಡಾ. ಲೋಹಿಯಾ ಟಿಕೆಟ್ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿದ್ದು ಇತಿಹಾಸ! ಟ್ರಾಫಿಕ್ ಸಿಗ್ನಲ್‌ನಲ್ಲಿ ಹೂವು, ಪುಸ್ತಕ ಮಾರುವ ಬೇಟಿಯರು ವರ್ತಮಾನ!

ಮಹಾನಗರದ ನಕ್ಷೆಯಿಂದ ಹೊರಬಂದು ದೆಹಲಿ ಮತ್ತು ಸುತ್ತಲಿನ ನ್ಯಾಷನಲ್‌ ಕ್ಯಾಪಿಟಲ್‌ ರೀಜನ್‌ ಪ್ರದೇಶದಲ್ಲಿ ಕಣ್ಣುಹಾಯಿಸಿದರೆ ಸೇತುವೆಗಳ ಅಡಿಯಲ್ಲಿ ಬದುಕು ಕಟ್ಟಿಕೊಂಡ ಲಕ್ಷಾಂತರ ವಲಸಿಗ ನಿರಾಶ್ರಿತರಿದ್ದಾರೆ. ಇವು ಮಾದಕ ಪದಾರ್ಥಗಳ ಅಡ್ಡಾಗಳಾಗಿದ್ದು ಬೀದಿ ಮಕ್ಕಳು, ಮಹಿಳೆಯರಾದಿಯಾಗಿ ಮಾದಕ ಪದಾರ್ಥಗಳ ವ್ಯಸನ, ಅಪರಾಧ ಕೃತ್ಯಗಳ ಭಾಗಿದಾರರಾಗುವ ಬಡತನವು ಮಹಾನಗರದ ಬೀದಿಯಲ್ಲಿದೆ.

ಉದ್ಯೋಗವಿರದ, ಅನಕ್ಷರಸ್ಥ ಬಡವ ಬೀದಿ ಬದಿ ಕುಳಿತು ಪಾನ್, ಬೀಡಿ, ಗುಟಕಾ ಮಾರುವುದೇ ಸುಲಭದ ಕೆಲಸ ಅಂದುಕೊಳ್ಳುತ್ತಾನೆ. ಮಹಾನಗರದ ಬದುಕು ದುಬಾರಿಯಾಗಿದ್ದರೂ ದುಡಿಮೆಗಾಗಿ ಹಳ್ಳಿಗಳಿಂದ ವಲಸೆ ಬರುವ ಬಡವರ್ಗ, ಕೆಳವರ್ಗದ ಜನರಿಗೆ ಸೂಕ್ತ ಉದ್ಯೋಗ, ಹೆಚ್ಚಿನ ದಿನಗೂಲಿ, ಸಮಾನ ವೇತನ ಸಿಗುವಂತಾಗಬೇಕು. ಹಸಿದಲ್ಲಿ ಕಡಿಮೆ ಬೆಲೆಗೆ ಊಟ ಸಿಗುವಂತಾಗಬೇಕು. ಸರ್ಕಾರದ ಯೋಜನೆಗಳು ಯಾವತ್ತು ಬಡವನ ಹಸಿವನ್ನು ತಣಿಸುತ್ತವೆಯೋ, ಕುಟುಂಬದ ನೊಗ ಹೊತ್ತ ಮಹಿಳೆಯರ ಮೊಗದಲ್ಲಿ ಅಂದು ಸೂರ್ಯ ಹುಟ್ಟಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT