ಶನಿವಾರ, ಆಗಸ್ಟ್ 20, 2022
21 °C
ಸಂಪ್ರದಾಯಬದ್ಧ ಮುಸ್ಲಿಂ ಕುಟುಂಬದ ರೂಫಾ ಅವರ ದಿಟ್ಟ ಹೆಜ್ಜೆ

PV Web Exclusive: ಧಾಕಿ ಕುಗ್ರಾಮದಲ್ಲಿ ಅರಳಿದ ಸ್ವಾತಂತ್ರ್ಯದ ಕುಸುಮ

ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

ರೂಫಾ (ಎಡದಿಂದ ಮೊದಲನೇಯವರು) ಚಿತ್ರಕೃಪೆ: ಗ್ಲೋಬಲ್‌ ಫಂಡ್‌ ಫಾರ್ ವುಮನ್‌ ವೆಬ್‌ಸೈಟ್

’ಸ್ತ್ರೀಕುಲಕ್ಕೆ ಯಾವ ಜಾತಿ, ಧರ್ಮವೂ ಇಲ್ಲ. ಎಲ್ಲ ಧರ್ಮಗಳಲ್ಲಿಯೂ  ಸ್ತ್ರೀಯರ ಸ್ವಾತಂತ್ರ್ಯಹರಣವಾಗಿರುವುದನ್ನು ನೋಡಬಹುದು. ಹಾಗಾಗಿ 21ನೇ ಶತಮಾನದಲ್ಲಿಯೂ ಎಲ್ಲ ಹೆಣ್ಣುಮಕ್ಕಳ ಬದುಕನ್ನು ಗೌರವಿಸುವ ಕೆಲಸ ಆಗಬೇಕು‘ ಎನ್ನುವ ಮಾತು ರೂಫಾ ಅವರದ್ದು. 

ಉತ್ತರಖಾಂಡ ಡೆಹಾಡ್ರೂನ್‌ ಜಿಲ್ಲೆಯ ಧಾಕಿ ಎನ್ನುವ ಕುಗ್ರಾಮವೊಂದರಲ್ಲಿ ಹೆಣ್ಣುಮಕ್ಕಳ ಹಕ್ಕುಗಳಿಗಾಗಿಯೇ ಹೋರಾಟ ನಡೆಸುತ್ತಿರುವ ರೂಫಾ ಅವರ ಬದುಕು ಕಲ್ಲುಮುಳ್ಳಿನ ಹಾದಿ. 

ಧಾಕಿ ಗ್ರಾಮದ ಮಹಿಳಾ ಸಮಿತಿಯ ಮುಖ್ಯಸ್ಥೆಯಾಗಿ, ಪಂಚಾಯಿತಿ ಚುನಾವಣೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿರುವ ಅವರು ಸ್ಥಳೀಯ ಆಡಳಿತದಲ್ಲಿಯೂ ಸಕ್ರಿಯವಾಗಿದ್ದಾರೆ.  ಪ್ರಸ್ತುತ ಅವರ ಬದುಕು ಸ್ಫೂರ್ತಿಯ ಚಿಲುಮೆ ಅನಿಸಿದರೂ, ಅದರ ಹಿಂದಿರುವ ಪರಿಶ್ರಮ, ಸಂಕಷ್ಟಗಳು ಹಾಗೂ ಅವುಗಳ ನಡುವೆ ಸಾರ್ಥಕ ಬದುಕಿನ ಆಲೋಚನೆಯು ಅವರನ್ನು ಈ ಹಂತಕ್ಕೆ ತಲುಪುವಂತೆ ಮಾಡಿವೆ. 

 ಸಂಪ್ರದಾಯಬದ್ಧ ಮುಸ್ಲಿಂ ಕುಟುಂಬದಲ್ಲಿ ಬೆಳೆದ ರೂಫಾ ಬಾಲ್ಯದಲ್ಲಿ ಎಂದಿಗೂ ಶಾಲೆಯ ಮೆಟ್ಟಿಲು ಹತ್ತಲಿಲ್ಲ. ಅಕ್ಷರ ಜ್ಞಾನದಿಂದ ಬಹುದೂರ ಉಳಿದಿದ್ದ ಅವರಿಗೆ ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾತ್ರ ಇದಾವೂದು ತೊಡಕಾಗಲಿಲ್ಲ. 

 ’ಶಾಲೆ ಹೇಗಿದೆ ಅಂತನೂ ನೋಡದೇ ಇರೊ ನತದೃಷ್ಟಳು ನಾನು. ಹೊರಗಿನ ಪ್ರಪಂಚ ಹೇಗಿರುತ್ತೆ ಅಂತನೂ ಗೊತ್ತಿರಲಿಲ್ಲ. ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಅವಕಾಶಗಳಿರಲಿಲ್ಲ‘  ಎನ್ನುವ ರೂಫಾ, ’ಬದುಕಿನ ಈ ದೊಡ್ಡ ಕ್ಯಾನ್‌ವಾಸ್‌ ಬಗ್ಗೆ ಬಹಳ ಹೆದರಿಕೊಂಡಿದ್ರಂತೆ.  ಅನಕ್ಷರಸ್ಥೆಯಾಗಿದ್ದರಿಂದ ಮುಗ್ಧತೆ ಹಾಗೂ ಪೆದ್ದುತನಗಳೆರಡೂ ಅವರ ವ್ಯಕ್ತಿತ್ವದ ಭಾಗವಾಗಿತ್ತಂತೆ. ’ಹೊರಗಿನ ಜನರೊಂದಿಗೆ ಮಾತನಾಡಲು ಹೆದರಿಕೊಳ್ಳುತ್ತಿದ್ದೆ. ಸದಾ ಯಾವೊದು ಅವ್ಯಕ್ತವಾದ ಭಯ ಕಾಡ್ತ ಇತ್ತು‘ ಎಂದು 45 ವರ್ಷದ ರೂಫಾ ತಮ್ಮ ಮುಂಚಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. 

ಗ್ಲೋಬಲ್‌ ಫಂಡ್‌ ಫಾರ್‌ ವುಮನ್‌ ಸಂಸ್ಥೆಯ ಸಹಯೋಗದೊಂದಿಗೆ ಉತ್ತರಖಾಂಡದ ’ದಿಶಾ‘ ಸಾಮಾಜಿಕ ಸಂಘಟನೆ ನಡೆಸಿದ ಹಲವು ತರಬೇತಿಗಳನ್ನು ಅವರು ಪಡೆದುಕೊಂಡಿದ್ದಾರೆ. ನಿರಂತರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹೆಣ್ಣುಮಕ್ಕಳ ವಿರುದ್ಧ ದೌರ್ಜನ್ಯ, ಹೆಣ್ಣುಮಕ್ಕಳ ಶಿಕ್ಷಣ, ರಾಜಕೀಯ ಹಕ್ಕುಗಳ ಬಗ್ಗೆ ಅರಿವು ಬಂದಿರುವುದಾಗಿ ಹೇಳಿಕೊಂಡಿರುವ ಅವರು ಈ ಸಂಘಟನೆ ಹಾಗೂ ತನ್ನ ಪತಿಯ ಸಹಕಾರದಿಂದ ಸದ್ಯಕ್ಕೆ ಓದು ಮತ್ತು ಬರೆಯಲು ಕಲಿತಿದ್ದಾರೆ. ಅವರಿಗೆ 5ನೇ ತರಗತಿಯವರೆಗೆ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. 

ಅಕ್ಷರ  ಜ್ಞಾನ ಪಡೆದುಕೊಂಡ ಮೇಲೆ ಸತತವಾಗಿ ನಾಯಕತ್ವ ಶಿಬಿರಗಳಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಮಹಿಳಾ ಹಕ್ಕುಗಳ ಪ್ರತಿಪಾದನಾ ಕಾರ್ಯದಲ್ಲಿ ಮುನ್ನುಗಲು ಸಾಧ್ಯವಾಯಿತು. 

’ಈ ಭೂಮಿಯಲ್ಲಿರುವ  ಪ್ರತಿ ಜೀವಿಯೂ ಸ್ವಾತಂತ್ರ್ಯಕ್ಕೆ ಅರ್ಹವಾಗಿದ್ದು, ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ‘ ಎಂದು ದಿಟ್ಟವಾಗಿ ಹೇಳುವ ಅವರು,  ಹೆಣ್ಣುಮಕ್ಕಳ ಅದರಲ್ಲೂ ಮುಸ್ಲಿಂ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತ ಬಂದಿದ್ದಾರೆ.

ಉದ್ಯೋಗಖಾತ್ರಿ ಯೋಜನೆಯಡಿ 100 ಮಂದಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ನೆರವಾಗಿದ್ದಾರೆ. ಜತೆಗೆ 50 ಬಡ ಮಹಿಳೆಯರ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಮಹಿಳೆಯರಿಗೆ ಸ್ವಾತಂತ್ರ್ಯದ ಬಾಗಿಲು ತೆರೆಯಬೇಕಾದರೆ ಆರ್ಥಿಕ ಸಬಲೀಕರಣವೂ ಒಂದು ಕೀಲಿಕೈ ಎಂದು ನಂಬಿಕೊಂಡಿರುವ ಅವರು ಹಲವು ಮಹಿಳೆಯರಿಗೆ ಬ್ಯಾಂಕ್‌ ಅಕೌಂಟ್‌ ತೆರೆಯುವ ಬಗ್ಗೆ ಅರಿವು ಮೂಡಿಸಿದ್ದಾರೆ. ಜತೆಗೆ ಕೌಟುಂಬಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಲು ತನ್ನ ಹಳ್ಳಿಯಲ್ಲಿಯೇ ಸ್ವಸಹಾಯ ಮಹಿಳಾ ಗುಂಪುಗಳನ್ನು ರಚಿಸಿದ್ದಾರೆ. 

ತಾನು ಸಬಲೀಕರಣದತ್ತ ಹೆಜ್ಜೆ ಇಡುತ್ತಾ, ಇತರರಿಗೂ ಸಹಾಯ ಮಾಡುತ್ತ ಇರುವುದಕ್ಕೆ ಖುಷಿ ಎಂದಿರುವ ಅವರು, ಸಾರ್ಥಕ ಬದುಕನ್ನು ಬದುಕುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ. ’ಮಹಿಳೆಯರು ಎಂತಹುದೇ ಸಂದರ್ಭದಲ್ಲಿಯೂ ತಮ್ಮ ಹೃದಯದ ಮಾತನ್ನು ಕೇಳಿ, ನಿರ್ಧಾರ ತಳೆಯಬೇಕು ಹೊರತು, ಬಾಹ್ಯ ಶಕ್ತಿಗಳ ಒತ್ತಡದಿಂದಲ್ಲ‘ ಎಂದು ಪ್ರತಿಪಾದಿಸುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು