ಪ್ರೋತ್ಸಾಹದ ನುಡಿ

7

ಪ್ರೋತ್ಸಾಹದ ನುಡಿ

ಗುರುರಾಜ ಕರಜಗಿ
Published:
Updated:

ಗಾಂಧಾರದೇಶದ ತಕ್ಷಶಿಲೆಯಲ್ಲಿ ಬೋಧಿಸತ್ವ ಎತ್ತಿನ ಜನ್ಮವನ್ನು ಪಡೆದಿದ್ದ. ಕರುವಾಗಿದ್ದಾಗಲೇ ಅವನನ್ನು ಒಬ್ಬ ಬ್ರಾಹ್ಮಣನಿಗೆ ದಾನವಾಗಿ ನೀಡಲಾಗಿತ್ತು. ಬ್ರಾಹ್ಮಣ ಕರುವಿಗೆ ಅತ್ಯುತ್ತಮ ಆಹಾರವನ್ನು ನೀಡುತ್ತ, ಅದನ್ನು ಶುದ್ಧವಾಗಿಡುತ್ತ ತನ್ನ ಸ್ವಂತ ಮಗನಂತೆಯೇ ಪ್ರೀತಿಯಿಂದ ಬೆಳೆಸಿದ್ದ. ವರ್ಷಗಳು ಕಳೆದಂತೆ ಎತ್ತು ಪ್ರಚಂಡವಾಗಿ ಬೆಳೆದು ನಂದಿವಿಸಾಲ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.

ಒಂದು ದಿನ ನಂದಿವಿಸಾಲ ಎತ್ತು ಯೋಚಿಸಿತು, ಈ ಬ್ರಾಹ್ಮಣ ನನ್ನನ್ನು ಇಷ್ಟು ಪ್ರೀತಿಯಿಂದ ಆರೈಕೆಮಾಡಿ ಬೆಳೆಸಿದ್ದಾನೆ. ಇಷ್ಟು ಶಕ್ತಿಶಾಲಿಯಾದ ನಾನು ಹೇಗಾದರೂ ಮಾಡಿ ಯಜಮಾನನಿಗೆ ಹಣ ಸಂಪಾದಿಸಿಕೊಟ್ಟು ಸಹಕಾರಿಯಾ
ಗಬೇಕು. ಬ್ರಾಹ್ಮಣನನ್ನು ಕರೆದು ಹೇಳಿತು, ಯಜಮಾನ ಈ ಊರಿನಲ್ಲಿ ಅಪಾರ ಧನಸಂಪತ್ತು ಹೊಂದಿದ ಶ್ರೇಷ್ಠಿಯ ಬಳಿ ಹೋಗು ಆತನಿಗೆ ಪಂದ್ಯ ಕಟ್ಟುವುದರಲ್ಲಿ ಬಹಳ ಉತ್ಸಾಹ. ನನ್ನ ಎತ್ತು, ಕಟ್ಟಿರುವ ನೂರು ಬಂಡಿಗಳನ್ನು ಒಂದೇ ಬಾರಿಗೆ ಎಳೆದುಬಿಡುತ್ತದೆ ಎಂದು ಹೇಳಿ ಸಾವಿರ ಮುದ್ರೆಗಳ ಪಂದ್ಯ ಕಟ್ಟು.

ಬ್ರಾಹ್ಮಣ ಶ್ರೇಷ್ಠಿಯ ಬಳಿಗೆ ಹೋಗಿ ಎತ್ತುಗಳ ಶಕ್ತಿಯ ಬಗ್ಗೆ ಮಾತನಾಡುತ್ತ ತನ್ನ ಎತ್ತು ನಂದಿವಿಸಾಲ ನೂರು ಬಂಡಿಗಳನ್ನು ಎಳೆದುಬಿಡುತ್ತದೆ ಎಂದ. ಅದು ಸಾಧ್ಯವಿಲ್ಲವೆಂದ ಶ್ರೇಷ್ಠಿ ಸಾವಿರ ಮುದ್ರೆಗಳ ಪಂದ್ಯ ಕಟ್ಟಿದ. ಮರುವಾರ ಶ್ರೇಷ್ಠಿ ನೂರು ಬಂಡಿಗಳಲ್ಲಿ ಜಲ್ಲಿ, ಮರಳು, ಕಲ್ಲುಗಳನ್ನು ತುಂಬಿ ಅವುಗಳನ್ನು ಒಂದರಹಿಂದೊಂದರಂತೆ ಬಿಗಿಯಾಗಿ ಕಟ್ಟಿದ. ಬ್ರಾಹ್ಮಣ ತನ್ನ ಎತ್ತಿಗೆ ಅಲಂಕಾರ ಮಾಡಿ ಮುಂದಿನ ಬಂಡಿಗೆ ಗಟ್ಟಿಯಾಗಿ ಕಟ್ಟಿದ. ತಾನು ಬಂಡಿಯ ಮೂಕಿಯನ್ನೇರಿ ನಿಂತು, ನಡೆಯೋ ದುಷ್ಟ! ನಡೆ ಎಳೆದುಬಿಡು ಈ ನೂರು ಬಂಡಿಗಳನ್ನು, ದುಷ್ಟಕೂಟ ಎಂದ. ನಂದಿವಿಸಾಲ ಎತ್ತು ಅಲುಗಾಡದೇ ನಿಂತುಬಿಟ್ಟಿತು. ಬ್ರಾಹ್ಮಣ ಎಷ್ಟು ಹೊಡೆದರೂ ಮುಂದೆ ಹೆಜ್ಜೆ ಇಡಲಿಲ್ಲ. ಶ್ರೇಷ್ಠಿ ಪಂಥ
ವನ್ನು ಗೆದ್ದಿದ್ದಕ್ಕೆ ಬ್ರಾಹ್ಮಣನಿಂದ ಸಾವಿರ ಮುದ್ರೆಗಳನ್ನು ಪಡೆದು ಸಂತೋಷವಾಗಿ ಹೋದ.

ಬ್ರಾಹ್ಮಣ ಅಪಮಾನದಿಂದ, ಸಾವಿರ ಮುದ್ರೆಗಳನ್ನು ಕಳೆದುಕೊಂಡ ದು:ಖದಿಂದ ಮನೆಗೆ ನಡೆದ. ದಾರಿಯಲ್ಲಿ ಎತ್ತು ಕೇಳಿತು, ಯಜಮಾನ, ನಾನು ಇಷ್ಟು ವರ್ಷಗಳಲ್ಲಿ ನಿನಗೆ ಏನಾದರೂ ಅನ್ಯಾಯ ಮಾಡಿದ್ದೇನೆಯೇ? ಯಾರನ್ನಾದರೂ ತುಳಿದು, ಅನುಚಿತವಾದ ಸ್ಥಳಗಳಲ್ಲಿ ಗಂಜಲವನ್ನು, ಸೆಗಣಿಯನ್ನು ಹಾಕಿದ್ದೇನೆಯೇ? ಬ್ರಾಹ್ಮಣ ಹೇಳಿದ, ಇಲ್ಲ, ನಿನ್ನ ನಡತೆ ಯಾವಾಗಲೂ ಸರಿಯಾಗಿಯೇ ಇತ್ತು. ಹಾಗಾದರೆ ನನ್ನನ್ನು ದುಷ್ಟ, ದುಷ್ಟಕೂಟ ಎಂದು ಏಕೆ ಕರೆದೆ? ಅದಕ್ಕಾಗಿಯೇ ನಾನು ಬಂಡಿಗಳನ್ನು ಎಳೆಯಲಿಲ್ಲ. ಅದು ನಿನ್ನ ತಪ್ಪು. ಈಗ ಮತ್ತೆ ಶ್ರೇಷ್ಠಿಯ ಕಡೆಗೆ ಹೋಗು. ಅವನು ಗೆದ್ದ ಮತ್ತಿನಲ್ಲಿದ್ದಾನೆ. ಮತ್ತೊಮ್ಮೆ ಎರಡು ಸಾವಿರ ಮುದ್ರೆಗಳಿಗೆ ಪಂದ್ಯ ಕಟ್ಟಿ ಬಾ. ನಾನು ಎಳೆದು ಹಾಕುತ್ತೇನೆ ಎಂದಿತು ನಂದಿವಿಸಾಲ ಎತ್ತು.

ಬ್ರಾಹ್ಮಣ ಮಾತನಾಡಿದಾಗ ಶ್ರೇಷ್ಠಿ ಸಂತೋಷದಿಂದ ಎರಡು ಸಾವಿರ ಮುದ್ರೆಗಳಿಗೆ ಪಂಥ ಒಪ್ಪಿದ. ಅದೇ ತಾನೇ ಒಂದು ಪಂಥ ಗೆದ್ದಿದ್ದನಲ್ಲ. ಮರುದಿನವೇ ಎಲ್ಲ ಸಿದ್ಧತೆಯಾಯಿತು. ಬ್ರಾಹ್ಮಣ ಈ ಬಾರಿ ಮೂಕಿಯನ್ನೇರಿ, ಪ್ರೀತಿಯಿಂದ ಎತ್ತಿನ ಮೈದಡವಿ, ನನ್ನ ಬಲಭದ್ರ, ನನ್ನಾನೆ, ಎಳೆ ಎಂದ. ಕ್ಷಣಾರ್ಧದಲ್ಲಿ ನಂದಿವಿಸಾಲ ನೂರೂ ಬಂಡಿಗಳನ್ನು ಸರಸರನೇ ಎಳೆದು ಹಾಕಿತು. ಬ್ರಾಹ್ಮಣ ಪಂಥ ಗೆದ್ದು ಎರಡು ಸಾವಿರ ಮುದ್ರೆ ಪಡೆದ. ಇದನ್ನು ನೋಡುತ್ತಿದ್ದ ಪೌರಜನ ಹೆಮ್ಮೆಯಿಂದ ಸಂತೋಷದಿಂದ ಸಹಸ್ರಾರು ಮುದ್ರೆಗಳನ್ನು ಬಹುಮಾನವಾಗಿ ಕೊಟ್ಟರು. ಬ್ರಾಹ್ಮಣನ ಜೀವನ ನಿಶ್ಚಿಂತೆಯಾಯಿತು.

ಕಠಿಣವಾದ ಒರಟುಮಾತು ಯಾರಿಗೂ ಹಿತವನ್ನುಂಟು ಮಾಡದು. ಪ್ರೀತಿಯ, ಪ್ರೋತ್ಸಾಹದ, ಮೆಚ್ಚುಗೆಯ ನುಡಿಗಳು ಎಂಥವರಿಂದಲೂ ದೊಡ್ಡ ಕೆಲಸಗಳನ್ನು ಮಾಡಿಸುತ್ತವೆ.

ಬರಹ ಇಷ್ಟವಾಯಿತೆ?

 • 27

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !