ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಗಮಯ ಕರ್ನಾಟಕ’ದ ಸಂಕಲ್ಪ

ಪತಂಜಲಿ ಯೋಗ ಪೀಠದ ಕರ್ನಾಟಕ ಉಸ್ತುವಾರಿ ಭವರಲಾಲ್ ಆರ್ಯ ಮನದಾಳ
Last Updated 22 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ವಿಜಯಪುರ:ಪತಂಜಲಿ ಯೋಗ ಪೀಠದ ಕರ್ನಾಟಕ ಉಸ್ತುವಾರಿ ಭವರಲಾಲ್ ಆರ್ಯ ರಾಜಸ್ತಾನ ಮೂಲದವರು. ರಾಜಸ್ತಾನಿಯಾದರೂ ಕನ್ನಡ ಭಾಷಾಭಿಮಾನಿ. ಶುದ್ಧ ಬರವಣಿಗೆ, ಸ್ವಚ್ಛವಾಗಿ ಕನ್ನಡ ಮಾತನಾಡುವ ಮೂಲಕ ಕನ್ನಡಿಗರೇ ಆಗಿದ್ದಾರೆ.

2001ರಲ್ಲಿ ಸ್ವದೇಶಿ ಹರಿಕಾರ ರಾಜೀವ್ ದೀಕ್ಷಿತ್‌ರ ಒಡನಾಟಕ್ಕೆ ಬಂದ ಆರ್ಯ, ಸ್ವದೇಶಿ ಆಂದೋಲನದಲ್ಲಿ ಸಕ್ರಿಯರಾದರು. 2005ರಲ್ಲಿ ಬಾಬಾ ರಾಮದೇವ್‌ ಸಂಪರ್ಕ. ಹರಿದ್ವಾರದಲ್ಲಿ ಯೋಗ ಶಿಕ್ಷಕರಾಗಿ ತರಬೇತಿ ಪಡೆದು, ರಾಜ್ಯದ ರಾಯಚೂರು ಜಿಲ್ಲೆಯ ಯೋಗ ಪ್ರಚಾರಕರಾದರು. ಇದೀಗ ಪತಂಜಲಿ ಯೋಗ ಪೀಠದ ಕರ್ನಾಟಕ ಉಸ್ತುವಾರಿ.

ಕರ್ನಾಟಕದ ಪ್ರತಿ ನಗರ, ಪಟ್ಟಣದ ಬಡಾವಣೆ, ವಾರ್ಡ್‌, ಹಳ್ಳಿಯ ಗಲ್ಲಿ ಗಲ್ಲಿಯಲ್ಲೂ ನಿರಂತರ ಉಚಿತ ಯೋಗ ಕೇಂದ್ರ ಸ್ಥಾಪಿಸುವ ಮೂಲಕ, ಯೋಗಮಯ ಕರ್ನಾಟಕ ರೂಪಿಸುವ ಸಂಕಲ್ಪ ಹೊಂದಿದವರು. ವಿಜಯಪುರದ ಎಸ್‌.ಎಸ್‌.ಪ್ರೌಢಶಾಲೆ ಮೈದಾನದಲ್ಲಿ ಮೂರು ದಿನದ ವಿರಾಟ ಯೋಗ ಶಿಬಿರ ನಡೆಸುತ್ತಿರುವ ಭವರಲಾಲ್‌ ‘ಯೋಗ’ದ ಕುರಿತಂತೆ ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

* ಯೋಗದ ಮಹತ್ವ ?

ಯೋಗ ಆರೋಗ್ಯಕರ ಜೀವನ ಪದ್ಧತಿ. ರೋಗಿಗಳಿಗೆ ಚಿಕಿತ್ಸಾ ಪದ್ಧತಿ. ಆಧ್ಯಾತ್ಮಿಕ ಸಾಧನೆಗೆ ಮೆಟ್ಟಿಲು. ಇದು ಧರ್ಮಾತೀತ. ಜಾತ್ಯತೀತ. ದೈಹಿಕ–ಮಾನಸಿಕ ವ್ಯಾಯಾಮದ ವೈಜ್ಞಾನಿಕ ಶಾರೀರಿಕ ಪದ್ಧತಿಯಿದು.

ದೈನಂದಿನ ಚಟುವಟಿಕೆಗಳಲ್ಲಿ ಎಷ್ಟೇ ಸಕ್ರಿಯರಾದರೂ; ಅದೇನಿದ್ದರೂ ಶಾರೀರಿಕ ವ್ಯಾಯಾಮವಾಗಲಿದೆಯಷ್ಟೇ. ಮಾನಸಿಕವಾಗಿ ಕಿಂಚಿತ್ ಪರಿಣಾಮ ಬೀರಲ್ಲ. ಮಾನಸಿಕ ವ್ಯಾಯಾಮ ಎಂಬುದು ಪ್ರಾಣಾಯಾಮ, ಧ್ಯಾನದಿಂದ ಮಾತ್ರ ಸಾಧ್ಯ. ದೇಹದ ಕಾರ್ಯಕ್ಷಮತೆ ಹೆಚ್ಚಲು ಯೋಗ ತುಂಬಾ ಉಪಕಾರಿ.

* ಇಂದಿನ ಆಧುನಿಕ ಓಘದ ಜೀವನಶೈಲಿಗೆ ಯೋಗ ಎಷ್ಟು ಪರಿಣಾಮಕಾರಿ ?

ಈ ಹಿಂದೆ ನೈಸರ್ಗಿಕ ಆಹಾರ ಸಿಗ್ತಿತ್ತು. ಅದರಲ್ಲೇ ಎಲ್ಲವೂ ಇತ್ತು. ಈಗಿನ ವಿಷಯುಕ್ತ ಆಹಾರ ನಮ್ಮ ದೇಹವನ್ನು ಇಂಚಿಂಚು ಕೊಲ್ಲಲಿದೆ. ಇದನ್ನು ತಡೆಯಲು, ಅನಾರೋಗ್ಯಕ್ಕೀಡಾಗುವುದನ್ನು ತಪ್ಪಿಸಿಕೊಳ್ಳಲು, ಮಾರಣಾಂತಿಕ ರೋಗಗಳಿಂದ ಪಾರಾಗಲು ಯೋಗ ಅತ್ಯಗತ್ಯವಾಗಿದೆ.

ಇಂದಿನ ಬಹುತೇಕರ ದಿನಚರಿ ಅಸ್ತವ್ಯಸ್ತ. ಸ್ಪರ್ಧೆಯ ಜಗತ್ತಿನಲ್ಲಿ ಬದುಕೇ ಕಳೆದು ಹೋಗಿದೆ. ದಿನದ 24 ತಾಸಿನಲ್ಲಿ ಒಂದು ತಾಸು ಯೋಗಕ್ಕೆ ಮೀಸಲಿಟ್ಟರೆ, ದಿನವಿಡಿ ದೇಹದ ಎಲ್ಲ ಅಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತವೆ.

* ಪತಂಜಲಿ ಯೋಗ ಪೀಠದ ಕುರಿತು ?

ಯೋಗ ಪಿತಾಮಹನ ಹೆಸರಿನ ಸಂಸ್ಥೆಯಿದು. ಸಾಧು–ಸಂತರಿಗೆ ಸೀಮಿತ ಎಂಬಂತಿದ್ದ ಯೋಗವನ್ನು ಸಾಮಾನ್ಯರ ಬಳಿಗೂ ಕೊಂಡೊಯ್ಯುವ ಸಂಕಲ್ಪ ಹೊಂದಿದೆ. ದೇಶದ ಪರಂಪರೆ ಮುಂದುವರೆಸುವ ಯತ್ನವನ್ನು ನಡೆಸಿದೆ.

* ಕರ್ನಾಟಕದಲ್ಲಿ ನಿಮ್ಮ ಭವಿಷ್ಯದ ಯೋಜನೆ ?

‘ಯೋಗಮಯ ಕರ್ನಾಟಕ’ ರೂಪಿಸುವಿಕೆ. 2019ರ ಜೂನ್‌ 21ರಂದು 6ನೇ ವಿಶ್ವ ಯೋಗ ದಿನ ನಡೆಯಲಿದ್ದು, ಈ ವೇಳೆಗೆ ಕರ್ನಾಟಕದಲ್ಲಿ 21000 ಯೋಗ ಶಿಕ್ಷಕರಿರಬೇಕು. ಎಲ್ಲೆಡೆ ನಿರಂತರವಾಗಿ ಉಚಿತ ಯೋಗ ಶಿಬಿರ ನಡೆಸಬೇಕು ಎಂಬ ಕನಸಿದೆ. ಈ ಕನಸಿನ ಸಾಕಾರಕ್ಕೆ ಹೆಜ್ಜೆ ಹಾಕುತ್ತಿದ್ದೇವೆ.

* ಪತಂಜಲಿ ಯೋಗ ಪೀಠದ ಆಶಯ ಏನು ?

ಭಾರತೀಯ ಪರಂಪರೆಯ ಕೊಡುಗೆಯಾದ ಯೋಗ, ಆಯುರ್ವೇದವನ್ನು ಎಲ್ಲೆಡೆ ಪಸರಿಸುವುದು. ಸ್ವದೇಶಿ ಜಾಗೃತಿ ಮೂಡಿಸುವುದು. ಮುಂದಿನ ಹತ್ತು ವರ್ಷಗಳಲ್ಲಿ ಭಾರತೀಯ ಗುರುಕುಲ ಪದ್ಧತಿಯಡಿ ದೇಶದ 650 ಜಿಲ್ಲೆಗಳಲ್ಲೂ ಗುರುಕುಲ ಸ್ಥಾಪಿಸುವುದು. ಇಲ್ಲಿ ಸಿಬಿಎಸ್‌ಇ ಪಠ್ಯಾಧಾರಿತ ಶಿಕ್ಷಣದ ಜತೆಗೆ, ನಮ್ಮ ಸಂಸ್ಕೃತಿ, ಸಂಸ್ಕೃತ, ಯೋಗದ ಬಗ್ಗೆಯೂ ಬೋಧನೆ ಮಾಡುವ ಯೋಜನೆಯಿದು.

* ಉಚಿತ ಶಿಬಿರ ಆಯೋಜನೆಯ ಉದ್ದೇಶ ಏನು ?

ಯೋಗ ಪ್ರಾಚೀನ ಪರಂಪರೆಯ ಕೊಂಡಿ. ವಿದ್ಯಾ ದಾನದಂತೆ ಯೋಗ ದಾನವೂ ನಮ್ಮ ಕನಸು. ಇದಕ್ಕಾಗಿ ದುಡಿಯುತ್ತಿದ್ದೇವೆ. ವ್ಯಾಪಾರವಾದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪುವುದಿಲ್ಲ. ಎಲ್ಲರಿಗೂ ಯೋಗ ತಲುಪಬೇಕು. ಜನರು ಆರೋಗ್ಯವಂತರಾಗಬೇಕು ಎಂಬ ಆಶಯದಿಂದಲೇ ಎಲ್ಲೆಡೆ ಉಚಿತ ಶಿಬಿರ ಆಯೋಜಿಸುತ್ತಿದ್ದೇವೆ.

ಮಧುಮೇಹ–ರಕ್ತದೊತ್ತಡದ ನಿಯಂತ್ರಣ

ಯೋಗ ವಾಸಿಯಾಗದ ಕಾಯಿಲೆಗಳಿಗೂ ಮದ್ದು. ಜಗತ್ತಿನ ಹೆಚ್ಚಿನ ಜನರನ್ನು ಕಾಡುತ್ತಿರುವ ಮಧುಮೇಹ–ರಕ್ತದೊತ್ತಡಕ್ಕೆ ರಾಮಬಾಣವಿದ್ದಂತೆ.

ಮಂಡೂಕಾಸನ, ಸೂರ್ಯ ನಮಸ್ಕಾರ, ಗೋಮುಖ ಆಸನ, ಕಪಾಲಬಾತಿ ಪ್ರಾಣಾಯಾಮವನ್ನು ನಿತ್ಯ ಮಾಡುವ ಜತೆಯಲ್ಲೇ, ಹಾಗಲಕಾಯಿ, ಟೊಮೆಟೊ, ಸೌತೆಕಾಯಿ ಮಿಶ್ರಣದ ಕಷಾಯ ಸೇವಿಸಿದರೆ ಮಧುಮೇಹವನ್ನು ನಿಯಂತ್ರಿಸಿಕೊಳ್ಳಬಹುದು.

ಅನುಲೋಮ–ವಿಲೋಮ, ಬ್ರಾಹ್ಮರಿ, ಉದ್ಗೀತ್‌ ಪ್ರಾಣಾಯಾಮವನ್ನು ನಿತ್ಯ ಅರ್ಧ ತಾಸು ಮಾಡಿದರೆ, ರಕ್ತದೊತ್ತಡ ನಿವಾರಿಸಿಕೊಳ್ಳಬಹುದು ಎಂದು ಭವರಲಾಲ್‌ ಆರ್ಯ ತಿಳಿಸಿದರು.

ಸಂಪರ್ಕ ಸಂಖ್ಯೆ: 9008100882/9008100879

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT