ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ವಿಮಾನ ಯಾನ ರಂಗಕ್ಕೆ ಬೇಕು ಕಾಯಕಲ್ಪ

Last Updated 5 ಜೂನ್ 2012, 19:30 IST
ಅಕ್ಷರ ಗಾತ್ರ

ಉದ್ದಿಮೆ - ವಹಿವಾಟು ಮತ್ತಿತರ ಕಾರಣಗಳಿಗಾಗಿ ನನಗೆ ಮೇಲಿಂದ ಮೇಲೆ ವಿದೇಶಗಳಿಗೆ ಭೇಟಿ ನೀಡುವ ಸಂದರ್ಭಗಳು ಎದುರಾಗುತ್ತವೆ. ಇತ್ತೀಚೆಗಿನ ಎರಡು ತಿಂಗಳ ಅವಧಿಯಲ್ಲಂತೂ ಹಲವಾರು ದೇಶಗಳಿಗೆ ಭೇಟಿ ನೀಡಬೇಕಾಗಿ ಬಂದಿತ್ತು.

ವಿದೇಶಗಳಿಗೆ ಪ್ರಯಾಣ ಬೆಳೆಸುವಾಗೊಮ್ಮೆ ನಾನು ತಲುಪಬೇಕಾದ ದೇಶಕ್ಕೆ, ತಡೆರಹಿತ ವಿಮಾನ ಯಾನ ಕೈಗೊಳ್ಳಲು ಸಾಧ್ಯವೇ ಆಗಲಿಲ್ಲ.
ದೂರದ ದೇಶಗಳಿಗೆ ಪ್ರಯಾಣ ಮಾಡುವವರೆಲ್ಲ ಕ್ವಾಲಾಲಂಪುರ, ದುಬೈ, ಹಾಂಕಾಂಗ್  ಅಂತರರಾಷ್ಟ್ರೀಯ ನಿಲ್ದಾಣಗಳಲ್ಲಿ ವಿಮಾನ ಬದಲಿಸುವ ಅನಿವಾರ್ಯತೆ ಇದೆ.
 
ಈ ವಿಮಾನ ನಿಲ್ದಾಣಗಳಲ್ಲಿ ಮುಂದಿನ ವಿಮಾನ ಏರಲು ದೀರ್ಘ ಸಮಯದವರೆಗೂ ಕಾಯಬೇಕಾಗುತ್ತದೆ. ಹೀಗಾಗಿ ಸೇರಬೇಕಾದ ತಾಣ ತಲುಪುವ ಮೊದಲೇ  ನಾನು ಸಾಕಷ್ಟು ಬಸವಳಿದು ಹೋಗುತ್ತಿದ್ದೆ. ಇದು ನನ್ನ ಅನುಭವವಷ್ಟೇ ಅಲ್ಲ. ಇತರ ಪ್ರಯಾಣಿಕರೂ ಇದೇ ಬಗೆಯ ಬವಣೆ ಅನುಭವಿಸುತ್ತಾರೆ.

ಇಂತಹ ಅಸಹನೀಯ ಪ್ರಯಾಣ ಎಂದು ಕೊನೆಗೊಳ್ಳುತ್ತದೆ. ಭಾರತದಿಂದ   ವಿದೇಶಗಳಲ್ಲಿನ ಹಲವಾರು ಪ್ರಮುಖ ನಗರಗಳಿಗೆ ತಡೆರಹಿತ ವಿಮಾನ ಹಾರಾಟ ಕನಸು ಯಾವಾಗ ನನಸಾಗಲಿದೆ  ಎಂದು ನನ್ನಷ್ಟಕ್ಕೆ ನಾನು ಪ್ರಶ್ನಿಸಿಕೊಳ್ಳುತ್ತಲೇ ಇರುತ್ತೇನೆ. ಇದು ನನ್ನ ಒಬ್ಬನ ನಿರೀಕ್ಷೆಯಲ್ಲ. ಅನೇಕ ಭಾರತೀಯರು ಕೂಡ ಹೀಗೆಯೇ ಭಾವಿಸುತ್ತಾರೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ವಿದೇಶಕ್ಕೆ ತೆರಳುವವರ  ಪ್ರಯಾಣ ಪ್ರಯಾಸ ಕೆಲಮಟ್ಟಿಗೆ ಕಡಿಮೆಯಾಗಿದೆ ಎಂದೂ ಹೇಳಬಹುದು.

ಭಾರತದಿಂದ ಪೂರ್ವದ ದೇಶಗಳಿಗೆ ಪ್ರಯಾಣ ಮಾಡುವವರು, ಬ್ಯಾಂಕಾಕ್, ಸಿಂಗಪುರ ಅಥವಾ ಕ್ವಾಲಾಲಂಪುರ ವಿಮಾನ ನಿಲ್ದಾಣಗಳಲ್ಲಿ ವಿಮಾನ ಬದಲಿಸುವುದು ಅನಿವಾರ್ಯ. ಪಶ್ಚಿಮದ ದೇಶಗಳಿಗೆ ಪ್ರಯಾಣ ಮಾಡುವವರು ಲಂಡನ್, ಪ್ಯಾರಿಸ್ ಅಥವಾ ಫ್ರ್ಯಾಂಕ್‌ಫರ್ಟ್ ಮತ್ತಿತರ ತಾಣಗಳನ್ನು ನೆಚ್ಚಿಕೊಳ್ಳಬೇಕಾಗುತ್ತದೆ.
 
ಪಶ್ಚಿಮದ ದೇಶಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಚಾರ ವಿಷಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಕೊಲ್ಲಿ ದೇಶಗಳ ಹಲವು ವಿಮಾನ ಯಾನ ಸಂಸ್ಥೆಗಳು ಹೊಸ ಪಾತ್ರ ನಿರ್ವಹಿಸಲು ಸಜ್ಜಾಗಿವೆ. ದುಬೈ ಅಥವಾ ದೋಹಾ ವಿಮಾನ ನಿಲ್ದಾಣಗಳು ಪಶ್ಚಿಮದತ್ತ ಪ್ರಯಾಣ ಬೆಳೆಸುವವರಿಗೆ ವಿಮಾನ ಬದಲಿಸುವ ಹೊಸ ತಾಣಗಳಾಗಿ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿವೆ.

ವಿದೇಶಗಳಿಗೆ ತೆರಳುವ ಪ್ರಯಾಣಿಕರು, ಈ ವಿಮಾನ ನಿಲ್ದಾಣಗಳನ್ನು ಅನಿವಾರ್ಯವಾಗಿ ಬಳಸಬೇಕಾಗಿದೆ.   ದುಬೈ, ಬ್ಯಾಂಕಾಕ್, ಕ್ವಾಲಾಲಂಪುರ, ಸಿಂಗಪುರ ಮತ್ತಿತರ ವಿಮಾನ ನಿಲ್ದಾಣಗಳಲ್ಲಿ ತಿರುಗುವಾಗ, ಸ್ವದೇಶದಲ್ಲಿಯೇ ಇರುವಂತಹ ಅನುಭವವಾಗುತ್ತದೆ ಎನ್ನುವುದೂ ನಿಜ.
 
ಈ ನಿಲ್ದಾಣಗಳಲ್ಲಿ ಭಾರತೀಯ ಮೂಲದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಪಶ್ಚಿಮ ಅಥವಾ ಪೂರ್ವದ ದೇಶಗಳಿಗೆ ಪ್ರಯಾಣ ಬೆಳೆಸುವವರಲ್ಲಿ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಇರುವುದೂ ಇದಕ್ಕೆ ಮುಖ್ಯ ಕಾರಣ. ಈ ನಿಲ್ದಾಣಗಳಲ್ಲಿ ಇರುವ ತೆರಿಗೆ ಮುಕ್ತ ಮಳಿಗೆಗಳಲ್ಲಿನ ಸಿಬ್ಬಂದಿ, ಭಾರತೀಯರನ್ನು ಕಾಣುತ್ತಲೇ ನಮಸ್ಕಾರ ಎಂದು ವಂದಿಸಿ ಗಮನವನ್ನೂ ಸೆಳೆಯುತ್ತಾರೆ.

ಇದನ್ನೆಲ್ಲ ಕಂಡಾಗ, ಅನುಭವಿಸಿದಾಗ, ವಿದೇಶಗಳಲ್ಲಿ ರೂಪುಗೊಂಡಿರುವ ಈ ಬಗೆಯ ಅಂತರರಾಷ್ಟ್ರೀಯ `ವಿಮಾನ ಯಾನ ಸಂಪರ್ಕ ಕೊಂಡಿ~ ಪರಿಕಲ್ಪನೆಯು     (`ಕೇಂದ್ರ ಬಿಂದು ವಿಮಾನ ನಿಲ್ದಾಣ~ ಮಾದರಿ) ಭಾರತದಲ್ಲಿ ಏಕೆ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತದೆ.

ಭಾರತದಿಂದ ವಿದೇಶಗಳಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇರುವಾಗ,  `ಅಂತರರಾಷ್ಟ್ರೀಯ ವಿಮಾನ ಯಾನ ಸಂಪರ್ಕ ಕೊಂಡಿ ನಿಲ್ದಾಣ~ಗಳನ್ನು ಅಭಿವೃದ್ಧಿಪಡಿಸಿ, ವಿದೇಶಿ ವಿಮಾನ ಯಾನದ ಎಲ್ಲ ಪ್ರಯೋಜನಗಳನ್ನು ಪಡೆಯಲು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವ ಸಂದೇಹವೂ ನನ್ನ ಮನದಲ್ಲಿ ಮೂಡುತ್ತದೆ.

ಭಾರತದಲ್ಲಿಯೂ ಈ ಬಗೆಯ ಸೌಲಭ್ಯವನ್ನೂ ಖಂಡಿತವಾಗಿಯೂ ಅಭಿವೃದ್ಧಿಪಡಿಸಲು ಸಾಧ್ಯವಿದೆ ಎಂದು ನಾನು ಯಾವುದೇ ಹಿಂಜರಿಕೆ ಇಲ್ಲದೇ ಹೇಳಲು ಇಷ್ಟಪಡುವೆ.    ವಿಮಾನ ಯಾನ ರಂಗದಲ್ಲಿ ವಹಿವಾಟು ವಿಸ್ತರಿಸುವ ಅತ್ಯುತ್ತಮ ಅವಕಾಶವೊಂದನ್ನು ಭಾರತ ಈಗಾಗಲೇ ಕಳೆದುಕೊಂಡಿದೆ.

ಇತರ      ಸಣ್ಣ ಪುಟ್ಟ ದೇಶಗಳು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡಿವೆ ಎಂದೇ ನನಗೆ ಭಾಸವಾಗುತ್ತದೆ. ಕತಾರ್, ಸಿಂಗಪುರ, ಹಾಂಕಾಂಗ್‌ನಂತಹ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿನ ಪ್ರಯಾಣಿಕರ ನಿರ್ವಹಣೆ ಮಟ್ಟಕ್ಕೆ   ಹೋಲಿಸಿದರೆ ದೇಶಿ ವಿಮಾನ ಪ್ರಯಾಣಿಕರ ಒಟ್ಟು ಸಂಖ್ಯೆಯೂ ಗಣನೀಯ      ಪ್ರಮಾಣದಲ್ಲಿಯೇ ಇದೆ.

ಅಂತರರಾಷ್ಟ್ರೀಯ ವಿಮಾನ ಯಾನ ರಂಗದಲ್ಲಿ ಗಮನ ಸೆಳೆದಿರುವ, ತಮ್ಮದೇ ಆದ ಛಾಪು ಮೂಡಿಸಿರುವ ಈ ವಿಮಾನ ನಿಲ್ದಾಣಗಳು,  ವಿಶ್ವದ ದಶ ದಿಕ್ಕುಗಳಿಗೆ ವಿಮಾನ ಯಾನ ಸಂಪರ್ಕ ಕಲ್ಪಿಸುವ  ಮಾದರಿ ಅಳವಡಿಸಿಕೊಂಡು ತಮ್ಮ ಅನಿವಾರ್ಯತೆ ಸಾಬೀತುಪಡಿಸಿವೆ.  `ಚಕ್ರದ ಮಧ್ಯಭಾಗದಿಂದ ಹೊರ ಸುತ್ತಿನವರೆಗೆ ಹಬ್ಬಿದ ಕಂಬಿ~ಗಳಂತೆ (ಹಬ್ ಆಂಡ್ ಸ್ಪೋಕ್ ಮಾದರಿ) ಈ ನಿಲ್ದಾಣಗಳಿಂದ ವಿಶ್ವದ ಎಲ್ಲ ಭಾಗಗಳಿಗೆ ತಡೆರಹಿತ      ವಿಮಾನ ಯಾನ ಸಂಪರ್ಕ ಸೌಲಭ್ಯ ಇದೆ.

ಭಾರತದಲ್ಲಿ ನಾಗರಿಕ ವಿಮಾನ     ಯಾನ ರಂಗಕ್ಕೆ ಪ್ರತ್ಯೇಕ ಸಚಿವರೇ  ಇದ್ದರೂ, ಪೂರ್ವ ಮತ್ತು ಪಶ್ಚಿಮದ ದೂರದ ವಿದೇಶಗಳಿಗೆ ತೆರಳಲು ಪ್ರಯಾಣಿಕರು ಕೆಲ ನಿರ್ದಿಷ್ಟ ನಗರಗಳಿಗೆ ಹೋಗಿಯೇ ವಿಮಾನ ಬದಲಿಸಿ ತಮ್ಮ ಪ್ರಯಾಣ ಮುಂದುವರೆಸಬೇಕಾದ ಅನಿವಾರ್ಯತೆ ಈಗಲೂ ಇದೆ.

ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಕೋನದಿಂದ ನೋಡಿದರೆ, ನಾವು ನಮ್ಮ ದೇಶಿ ವಿಮಾನ ಯಾನ ರಂಗವನ್ನು ಅವನತಿಯತ್ತ ಕೊಂಡೊಯ್ಯುತ್ತಿದ್ದರೆ, ಇನ್ನೊಂದೆಡೆ ವಿದೇಶಿ ವಿಮಾನ ಯಾನ ಸಂಸ್ಥೆಗಳು ತಮ್ಮ  ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದೇವೆ.

ಹಲವಾರು ವಿದೇಶಿ ವಿಮಾನ ಯಾನ ಸಂಸ್ಥೆಗಳು ಗಣನೀಯ ಪ್ರಮಾಣದಲ್ಲಿ ಭಾರತೀಯ ಪ್ರಯಾಣಿಕರನ್ನು ವಿದೇಶಗಳಿಗೆ ಸಾಗಿಸುತ್ತಿವೆ. ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾಕ್ಕಿಂತ,    `ಎಮಿರೇಟ್ಸ್~ ವಿಮಾನ ಯಾನ ಸಂಸ್ಥೆಯು ಹೆಚ್ಚು ಸಂಖ್ಯೆಯ ಭಾರತೀಯರನ್ನು ವಿದೇಶಗಳಿಗೆ ಸಾಗಿಸುತ್ತಿದೆ. ವಿದೇಶಗಳಿಗೆ ತೆರಳುವ ಭಾರತೀಯರಲ್ಲಿ ಶೇ 20ರಷ್ಟು ಪ್ರಯಾಣಿಕರು `ಎಮಿರೇಟ್ಸ್~ ವಿಮಾನ ಯಾನ ಸಂಸ್ಥೆಯನ್ನೇ ನೆಚ್ಚಿಕೊಂಡಿದ್ದಾರೆ.
 
ವಾರವೊಂದರಲ್ಲಿ ಈ        ವಿಮಾನ ಯಾನ ಸಂಸ್ಥೆಯ 185 ವಿಮಾನಗಳು ಭಾರತದಿಂದ ವಿದೇಶಗಳಿಗೆ ತೆರಳುತ್ತವೆ.  ಹೀಗಾಗಿ `ಎಮಿರೇಟ್ಸ್~ನ ವಹಿವಾಟಿನಲ್ಲಿ ಭಾರತ ಅತಿದೊಡ್ಡ ಪಾಲು ಹೊಂದಿದೆ.

ಭಾರತೀಯರ ಅಂತರರಾಷ್ಟ್ರೀಯ     ವಿಮಾನ ಸಂಚಾರವು ದಿನೇ ದಿನೇ ಹೆಚ್ಚುತ್ತಿದೆ. ಅದರ ಲಾಭವನ್ನು ವಿದೇಶಿ ವಿಮಾನ ಯಾನ ಸಂಸ್ಥೆಗಳೇ ಹೆಚ್ಚಾಗಿ ಪಡೆದುಕೊಳ್ಳುತ್ತಿವೆ. ಇಂತಹ ಪರಿಸ್ಥಿತಿ ಉದ್ಭವವಾಗಲು ನಮ್ಮಷ್ಟಕ್ಕೆ ನಾವೇ ದೂಷಿಸಿಕೊಳ್ಳಬೇಕೆ ಹೊರತು ಯಾರನ್ನೂ ಅಲ್ಲ.

 ದೇಶಿ ವಿಮಾನ ಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಕಿಂಗ್‌ಫಿಷರ್‌ನಿಂದ ಸಾಧ್ಯವಾಗದಿರುವುದನ್ನು ವಿದೇಶಿ ವಿಮಾನ ಯಾನ ಸಂಸ್ಥೆಗಳು ಸದುಪಯೋಗ ಮಾಡಿಕೊಳ್ಳುತ್ತಿವೆ.

ನಮ್ಮ ವಿಮಾನ ಯಾನ ಸಂಸ್ಥೆಗಳೂ ಸ್ಪರ್ಧಾತ್ಮಕವಾಗಿ ಈ ಪರಿಸ್ಥಿತಿಯ ಗರಿಷ್ಠ ಪ್ರಯೋಜನ ಪಡೆಯಬಹುದಾಗಿದ್ದರೂ ಅದಕ್ಕೆ ಸೂಕ್ತ ವಾತಾವರಣ ಇಲ್ಲದಿರುವುದು ಶೋಚನೀಯ.

ಪೂರ್ವ ಮತ್ತು ಪಶ್ಚಿಮದ ದೂರದ ದೇಶಗಳಿಗೆ ನೇರ ವಿಮಾನ ಯಾನ     ಸಂಪರ್ಕ ಕಲ್ಪಿಸಲು ಸ್ಥಳೀಯ ವಿಮಾನ ಯಾನ ಸಂಸ್ಥೆಗಳಿಗೆ ಇದುವರೆಗೂ ಸಾಧ್ಯವಾಗದಿರಲು, ಸೂಕ್ತ ಮತ್ತು ಜಾಗತಿಕ ಗುಣಮಟ್ಟದ ವಿಮಾನ ನಿಲ್ದಾಣ ಇಲ್ಲದಿರುವುದೇ ಮುಖ್ಯ ಕಾರಣ. ಇತ್ತೀಚೆಗಷ್ಟೇ ಈ ಕೊರತೆಯನ್ನು ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ದೂರ ಮಾಡಿದೆ.

ಸರ್ಕಾರಿ ಮತ್ತು ಖಾಸಗಿ    ಪಾಲುದಾರಿಕೆಯಡಿ ಅಪಾರ ವೆಚ್ಚದಲ್ಲಿ ಈ ನಿಲ್ದಾಣದ `ಟರ್ಮಿನಲ್ 3~ ನಿರ್ಮಿಸಲಾಗಿದೆ. ಈ ಟರ್ಮಿನಲ್‌ನ ಗರಿಷ್ಠ     ಬಳಕೆಗೆ ಅವಕಾಶ ಮಾಡಿಕೊಟ್ಟರೆ ಅದರಿಂದ ದೇಶಿ ಎಲ್ಲ ವಿಮಾನ ಯಾನ ಸಂಸ್ಥೆಗಳಿಗೆ ಪ್ರಯೋಜನ ಆಗಲಿದೆ.

 ಈ ಟರ್ಮಿನಲ್, ರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳು  ಅಂತರರಾಷ್ಟ್ರೀಯ ದೂರ ಪ್ರಯಾಣ ಸೇವೆ ಆರಂಭಿಸಲು ನೆರವಾಗುವುದರ ಜತೆಗೆ, ವಿಶ್ವದ ವಿವಿಧ ಭಾಗಗಳಿಗೆ ಸಂಪರ್ಕ ಕೊಂಡಿಯಾಗಿ ರೂಪುಗೊಳ್ಳಲೂ ವಿಪುಲ ಅವಕಾಶಗಳಿವೆ. ಈ ವಿಮಾನ ನಿಲ್ದಾಣದಲ್ಲಿನ ಮೂಲ   ಸೌಕರ್ಯಗಳನ್ನು ಒಂದಕ್ಕಿಂತ ಹೆಚ್ಚು     ವಿಮಾನ ಯಾನ ಸಂಸ್ಥೆಗಳು ಬಳಸಿಕೊಳ್ಳಬಹುದಾಗಿದೆ.

ಹೊಸ ತಲೆಮಾರಿನ ದೂರ ಪ್ರಯಾಣದ ವಿಮಾನಗಳ ಹಾರಾಟ ಆರಂಭಿಸಿ, ಉತ್ತರ ಅಮೆರಿಕ, ಯೂರೋಪ್      ಮತ್ತು ಏಷ್ಯಾದ ಇತರ ಪ್ರಮುಖ ನಗರಗಳಿಗೆ ತಡೆರಹಿತ ವಿಮಾನ ಸಂಪರ್ಕ ಕಲ್ಪಿಸಲೂ ಈಗ ಸಾಧ್ಯವಿದೆ.

 ಈ ಅವಕಾಶ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಚಿಂತಿಸುತ್ತಿದೆಯೇ ಎನ್ನುವುದು ನನ್ನ ಅನುಮಾನ. ಇದೊಂದು ಸುವರ್ಣ ಅವಕಾಶವಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ.

ಭಾರತದ ಪ್ರಯಾಣಿಕರು ಯಾವಾಗಲೂ ದೇಶಿ ವಿಮಾನ ಯಾನ ಸಂಸ್ಥೆಗೆ      ಹೆಚ್ಚು ಆದ್ಯತೆ ನೀಡುತ್ತಾರೆ. ಸೇವಾ     ಗುಣಮಟ್ಟದ ಹೋಲಿಕೆ ಮತ್ತು ಸ್ಪರ್ಧಾತ್ಮಕ ಪ್ರಯಾಣ ದರದ ಜೊತೆಗೆ ಭಾಷೆ, ಆಹಾರ ಮತ್ತಿತರ ಸಂಗತಿಗಳೂ  ಪ್ರಯಾಣಿಕರು ದೇಶಿ ವಿಮಾನ ಯಾನ ಸಂಸ್ಥೆಗಳನ್ನೇ ಅವಲಂಬಿಸಲು ಪುಷ್ಟಿ ನೀಡುತ್ತವೆ.

ವಿದೇಶಿ ವಿಮಾನ ಯಾನ ಸಂಸ್ಥೆಗಳು `ಬಿಸಿನೆಸ್ ಕ್ಲಾಸ್~ನ ಪ್ರಯಾಣಿಕರಿಗೂ ಸೂಕ್ತ ಆಹಾರದ ಆಯ್ಕೆ ಅವಕಾಶ       ನೀಡುವುದಿಲ್ಲ. ಇದೊಂದು ತುಂಬ  ಕ್ಷುಲ್ಲಕ ವಿಷಯ ಎನಿಸಿದರೂ, ವಿಶ್ವದಲ್ಲಿ ಕೆಲವೇ ಕೆಲ ವಿದೇಶಿ ವಿಮಾನ ಯಾನ ಸಂಸ್ಥೆಗಳು ಭಾರತದ ಆಹಾರ ಆಯ್ಕೆ ಮಾಡಿಕೊಳ್ಳುವ ಅವಕಾಶ ಒದಗಿಸುತ್ತವೆ.    ಹೀಗಾಗಿ ಅನೇಕ ಪ್ರಯಾಣಿಕರು ದೇಶಿ        ವಿಮಾನ ಯಾನ ಸಂಸ್ಥೆಗಿಂತ ವಿದೇಶಿ ವಿಮಾನ ಯಾನ ಸಂಸ್ಥೆ ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ.

ದೂರದ ದೇಶಗಳಿಗೆ ತಡೆರಹಿತ       ವಿಮಾನ ಸೌಲಭ್ಯ ಇಲ್ಲದಿರುವುದರಿಂದ ದೇಶಿ ಪ್ರಯಾಣಿಕರು, ವಿದೇಶಿ ಸಂಪರ್ಕ ನಿಲ್ದಾಣಗಳ ಅನುಕೂಲಕ್ಕೆ ತಕ್ಕಂತೆ ತಮ್ಮ ಪ್ರಯಾಣದ ಸಮಯ ನಿಗದಿಪಡಿಸಿಕೊಳ್ಳಬೇಕಾಗುತ್ತದೆ.  ಈ  `ಸಂಪರ್ಕ ನಿಲ್ದಾಣ~ಗಳನ್ನು ತಲುಪಲು ಭಾರತೀಯರು ಮಧ್ಯರಾತ್ರಿಯೇ ಪ್ರಯಾಣ ಆರಂಭಿಸಬೇಕಾಗುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಸೀಮಿತವಾಗಿದೆ.

 ದೇಶಿ ವಿಮಾನ ಯಾನ ಸಂಸ್ಥೆಗಳು ಸ್ಥಳೀಯ ಪ್ರಯಾಣಿಕರ ಅನನುಕೂಲದ ಸಮಯದಲ್ಲಿ ದೂರ ಪಯಣದ ಯಾನ ಆರಂಭಿಸುವಂತಾದರೆ ಅದರಿಂದ ಅವುಗಳಿಗೂ ಸಾಕಷ್ಟು ಪ್ರಯೋಜನ ಲಭಿಸಲಿದೆ.

 ದೇಶದ ಬಹುತೇಕ ಎಲ್ಲ ಸೇವಾ ವಲಯಗಳು ಈಗಾಗಲೇ ಜಾಗತಿಕ ಗುಣಮಟ್ಟ ತಲುಪಿವೆ. ಈ ವಿಷಯದಲ್ಲಿ ಹಿಂದೆ   ಬಿದ್ದಿರುವ ನಾಗರಿಕ ವಿಮಾನ ಯಾನ ರಂಗವು ಕೂಡ ಆದಷ್ಟು ಬೇಗ ಈ ಕೊರತೆ ತುಂಬಿಕೊಳ್ಳುವಂತಾಗಲಿ.

(ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT