ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದಿಗೂ ಇದ್ದ ಭ್ರಷ್ಟರು

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ನಾವು ಈಗ ಭ್ರಷ್ಟಾಚಾರದ ಬಗ್ಗೆ ಬಹಳಷ್ಟು ಮಾತು ಬರುತ್ತಿರುವುದನ್ನು ಕೇಳುತ್ತೇವೆ. ಎಲ್ಲಿ ನೋಡಿದಲ್ಲಿ ಅದರದೇ ಚರ್ಚೆ. ಹಿಂದೆಯೂ ಭ್ರಷ್ಟಾಚಾರವಿತ್ತೇ ಎಂದು ಕೇಳಿದರೆ ಇತ್ತು ಎಂದೇ ಹೇಳಬೇಕಾಗುತ್ತದೆ. ರಾಮಾಯಣ ಕಾಲದಲ್ಲಿ ಒಬ್ಬ ಭ್ರಷ್ಟಾಚಾರಿಯ ಬಗ್ಗೆ ಒಂದು ನಾಯಿ ಕೂಡ ಫಿರ್ಯಾದು ನೀಡುತ್ತದೆ.

ಮಹಾಭಾರತದ ಶಾಂತಿಪರ್ವದಲ್ಲಿ ಒಂದು ಪುಟ್ಟ ಕಥೆ ಬರುತ್ತದೆ. ಕೋಸಲ ದೇಶದ ರಾಜ ಕ್ಷೇಮದರ್ಶಿ. ಆತ ಒಳ್ಳೆಯವನು. ಆದರೆ ಸುತ್ತಲಿದ್ದ ಜನ ಅವನ ಒಳ್ಳೆಯತನದ ದುರುಪಯೋಗ ಪಡೆದು ಅನಾಚಾರಿಗಳಾಗಿದ್ದರು. ಅವನಿಗೆ ವಸ್ತುಸ್ಥಿತಿ ತಿಳಿಯದ ಹಾಗೆ ನೋಡಿಕೊಳ್ಳುತ್ತಿದ್ದರು.
 
ಅವರು ಹೇಳಿದ್ದೇ ಸತ್ಯವೆಂದು ತಿಳಿದು ಆತ ನಿಶ್ಚಿಂತನಾಗಿದ್ದ.
ಕ್ಷೇಮದರ್ಶಿಯ ಮಾರ್ಗದರ್ಶಕನೊಬ್ಬನಿದ್ದ. ಅವನ ಹೆಸರು ಕಾಲಕವೃಕ್ಷೀಯ. ಅವನೊಬ್ಬ ಋಷಿ. ಆತ ಸದಾ ಸಂಚಾರಿ. ದೇವೇಂದ್ರನ ಆಸ್ಥಾನದಲ್ಲೂ ಇದ್ದನಂತೆ.

ಅವನು ಕ್ಷೇಮದರ್ಶಿಯನ್ನು ಕಂಡ. ದೇಶವನ್ನು ಸುತ್ತಿದ. ಅಲ್ಲಿದ್ದ ಅವ್ಯವಸ್ಥೆ ಕಣ್ಣಿಗೆ ಬಿತ್ತು. ರಾಜನಿಗೆ ಯಾವುದೂ ತಿಳಿಯದು. ಇದನ್ನು ಸರಿಮಾಡಲು ಕಾಲಕವೃಕ್ಷೀಯ ಒಂದು ಹಾದಿ ಹುಡುಕಿದ.

ಒಂದು ಕಾಗೆಯನ್ನು ಹಿಡಿದು ತರಿಸಿ ಬಂಗಾರದ ಪಂಜರದಲ್ಲಿಟ್ಟ. ಅದಕ್ಕೆ ಚೆನ್ನಾಗಿ ಅಲಂಕಾರ ಮಾಡಿಸಿದ. ಅದನ್ನು ತಾನೇ ಕೈಯಲ್ಲಿ ಹಿಡಿದುಕೊಂಡು ತಿರುಗಾಡಿದ. ಜನಕ್ಕೆ, ಅಧಿಕಾರಿ ವರ್ಗದವರಿಗೆ ಆಶ್ಚರ್ಯ. ಜ್ಞಾನಿಗಳಾದ ಋಷಿಗಳು ಕಾಗೆಯನ್ನೇಕೆ ಪಂಜರದೊಳಿಟ್ಟು ಕಾಪಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿಯಲಿಲ್ಲ.

ಮರುದಿನ ಒಂದು ಸುದ್ದಿ ಹಬ್ಬಿತು. ಆ ಕಾಗೆ ಇಂದ್ರ ಲೋಕದ ಕಾಗೆ. ಅದಕ್ಕೊಂದು ವಿಶೇಷ ಜ್ಞಾನವಿದೆ. ಅದು ಹಿಂದೆ ಆದದ್ದನ್ನು, ಈಗ ಆಗುತ್ತಿರುವುದನ್ನು, ಮುಂದೆ ಆಗುವುದನ್ನು ಸ್ಪಷ್ಟವಾಗಿ ತಿಳಿದು ಹೇಳಬಲ್ಲದು. ರಾಜ್ಯದಲ್ಲಿ ನಡೆಯುವುದೆಲ್ಲವನ್ನೂ ಅರಮನೆಯಲ್ಲಿದ್ದೇ ತಿಳಿಯಬಲ್ಲದು. ಈ ವಿಷಯ ಬಾಯಿಯಿಂದ ಬಾಯಿಗೆ ಬಲುವೇಗದಿಂದ ಹರಿಯಿತು.

ಈ ಸುದ್ದಿಯನ್ನು ಹರಡಿದ್ದೇ ಕಾಲಕವೃಕ್ಷೀಯ. ರಾಜ್ಯದ ಹಿರಿಯ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಭಯವಾಗತೊಡಗಿತು. ಈ ಕಾಗೆ ತಾವು ಮಾಡುತ್ತಿರುವ ಭ್ರಷ್ಟಾಚಾರವನ್ನು ರಾಜನಿಗೆ ಹೇಳಿದರೆ ಏನು ಗತಿ?
ಕಾಲಕವೃಕ್ಷೀಯ, ರಾಜನನ್ನು ಕರೆದು ಮುಂದೆ ಕುಳ್ಳಿರಿಸಿಕೊಂಡ.
 
ತಾನು ರಾಜ್ಯದಲ್ಲೆಲ್ಲ ಅಡ್ಡಾಡಿ ಬಂದಾಗ ಕಂಡ ಅವ್ಯವಸ್ಥೆಯನ್ನು ವಿವರಿಸಿದ. ಮಂತ್ರಿಗಳು, ಅಧಿಕಾರಿಗಳು ಶಾಮೀಲಾಗಿ ಮಾಡುತ್ತಿರುವ ಭ್ರಷ್ಟಾಚಾರಗಳನ್ನು ಉದಾಹರಣೆಗಳ ಸಹಿತ ಹೇಳಿದ. ಪ್ರತಿದಿನವೂ ಒಂದು ವಿಷಯವನ್ನು ತೆಗೆದುಕೊಂಡು, ಖಚಿತವಾದ ದಾಖಲೆಗಳನ್ನು ಸಂಗ್ರಹಿಸಿ ರಾಜನ ಮುಂದಿಡುತ್ತಿದ್ದ.

ರಾಜ ಆ ಅಧಿಕಾರಿಗಳನ್ನು, ಮಂತ್ರಿಗಳನ್ನು ಕರೆದು ತನಿಖೆ ಮಾಡಿದಾಗ ಸತ್ಯಸಂಗತಿ ಹೊರಬೀಳುತ್ತಿತ್ತು. ಅವರನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕಿ ಜೈಲಿಗೆ ಸೇರಿಸುತ್ತಿದ್ದರು. ಹೀಗೆಯೇ ಮುಂದುವರೆದರೆ ತಮಗೆ ಉಳಿಗಾಲವಿಲ್ಲವೆಂದು ಉಳಿದ ಮಂತ್ರಿಗಳು, ಅಧಿಕಾರಿಗಳು ಚಿಂತಿಸಿದರು.

ಮರುದಿನ ಸಂಜೆ ಅವರೆಲ್ಲ ಸೇರಿ ರಾಜನಿಲ್ಲದಾಗ ಆ ಕಾಗೆಯನ್ನು ಕೊಂದು ಹಾಕಿದರು. ಆಗ ಕಾಲಕವೃಕ್ಷೀಯ ಋಷಿ ರಾಜನಿಗೆ ಎಚ್ಚರಿಕೆ ಕೊಡುತ್ತಾನೆ,  ಈ ಭ್ರಷ್ಟರು ಮುಂದೆ ಅರಮನೆಯ ಕೆಲಸದವರನ್ನೆಲ್ಲ ಸೇರಿಸಿಕೊಂಡು ನಿನಗೂ ದ್ರೋಹ ಮಾಡುತ್ತಾರೆ . ರಾಜ ಎಚ್ಚೆತ್ತುಕೊಂಡು ಆಡಳಿತವನ್ನು ಬಿಗಿ ಮಾಡಿ, ಭ್ರಷ್ಟರನ್ನು ಶಿಕ್ಷಿಸಿ ವ್ಯವಸ್ಥೆಯನ್ನು ಸರಿಮಾಡಿದ.

ಇದನ್ನು ನೋಡಿದಾಗ ನಮ್ಮಲ್ಲೂ ಒಬ್ಬರಲ್ಲ, ನೂರಾರು ಕಾಲಕವೃಕ್ಷೀಯ ಋಷಿಗಳು ಬೇಕಿತ್ತು ಎನ್ನಿಸುವುದಿಲ್ಲವೇ? ಅಥವಾ ನಾವೇ ಸಾವಿರಾರು ಜನ ಕಾಲಕವೃಕ್ಷೀಯರಂತಾಗಿ ಭ್ರಷ್ಟರನ್ನು ಬಯಲು ಮಾಡಿ ರಾಷ್ಟ್ರ ರಕ್ಷಣೆ ಮಾಡಬೇಕು ಎನ್ನಿಸುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT